ಭಾರತವೆನ್ನುವ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡನಾಡು

Update: 2019-01-26 15:37 GMT

ಸ್ವಾತಂತ್ರ ಸಿಕ್ಕ ನಂತರ ಭಾರತವು ಒಪ್ಪಿ ಘೋಷಿಸಿರುವ ಸ್ವರೂಪ ಪ್ರಜಾಪ್ರಭುತ್ವ, ಜಾತ್ಯತೀತ ರಾಷ್ಟ್ರ ಎಂಬುದಾಗಿ. (ನಂತರದ ದಿನಗಳಲ್ಲಿ ಈ ಪಟ್ಟಿಗೆ ಸಮಾಜವಾದಿ ಎಂಬುದನ್ನೂ ಸೇರಿಸಲಾಯಿತು.) ದೇಶದ ಸ್ವರೂಪ ಹೇಗಿರಬೇಕೆಂದು ಚರ್ಚಿಸುವಾಗ ದೇಶಕ್ಕೊಂದು ರಾಷ್ಟ್ರಭಾಷೆ, ಭಾಷಾವಾರು ಪ್ರಾಂತರಚನೆ, ರಾಜ್ಯಗಳಿಗೆ ಇರಬೇಕಾದ ಒಳಸ್ವಾತಂತ್ರ, ಕೇಂದ್ರ-ರಾಜ್ಯಗಳ ಸಂಬಂಧ ಇತ್ಯಾದಿಗಳನ್ನೆಲ್ಲಾ ಗಮನಿಸಿ, ಚರ್ಚಿಸಿ ಈಗಿರುವ ವ್ಯವಸ್ಥೆಯನ್ನು ರೂಪಿಸಲಾಯಿತು. ಭಾರತದ ಎಲ್ಲಾ ರಾಜ್ಯಗಳಿಗೆ ಹೆಚ್ಚು ಹೆಚ್ಚು ಸ್ವಯಮಾಧಿಕಾರದ ಅವಕಾಶ ಕೊಡುವ ಆಶಯವನ್ನು ಅಲ್ಲಲ್ಲಿ ವ್ಯಕ್ತಪಡಿಸಲಾಯಿತು. ಭಾರತವನ್ನು ಒಂದು ಭಾಷಾವಾರು ರಾಜ್ಯಗಳ ಸಂಪೂರ್ಣ ಒಪ್ಪುಕೂಟವನ್ನಾಗಿಸುವ ಧೈರ್ಯದ ಕ್ರಮಕ್ಕೆ ಮುಂದಾಗದಿದ್ದರೂ ರಾಜ್ಯಗಳಿಗೆ ತಕ್ಕಮಟ್ಟಿಗೆ ಸ್ವಯಮಾಧಿಕಾರ ನೀಡುವ ದಿಕ್ಕಿನಲ್ಲಿ ರಾಜ್ಯಸಭೆಯನ್ನು ರೂಪಿಸುವಂತಹ ಹಲವು ಕ್ರಮಗಳನ್ನೂ, ರಾಜ್ಯಗಳಿಗೆ ಕೆಲವು ಅಧಿಕಾರಗಳನ್ನು ವಹಿಸುವುದನ್ನೂ ಮಾಡಲಾಯಿತು. ಭಾರತೀಯ ಪ್ರಜಾಪ್ರಭುತ್ವದಲ್ಲಿ ರಾಜರುಗಳ ಬದಲಿಗೆ ಜನರಿಂದ ಆಯ್ಕೆಯಾದವರು ಅಧಿಕಾರ ನಡೆಸಲು ಶುರುಮಾಡಿದರು. ಆದರೆ ಇದು ಎಂತಹ ಅಧಿಕಾರ?. ಇದು ಕೇವಲ ಭಾರತದ ಕೇಂದ್ರ ಸರಕಾರವು ರಾಜ್ಯಗಳಿಗೆ ಬಿಟ್ಟುಕೊಟ್ಟ ಅಧಿಕಾರ ಮಾತ್ರ. ಇದು ಎಷ್ಟರಮಟ್ಟಿಗೆ ಸರಿ?

► ಪ್ರಜಾಪ್ರಭುತ್ವವೆನ್ನುವುದೇ ಒಪ್ಪುಕೂಟದೆಡೆಗಿನ ಹೆಜ್ಜೆ!

ಪ್ರಜಾಪ್ರಭುತ್ವ ಎಂಬುದರ ಅರ್ಥವೇ ನಮ್ಮನ್ನು ನಾವು ಆಳಿಕೊಳ್ಳುವುದು, ಹಾಗಾಗಿ ಮೂಲಭೂತವಾಗಿ ಪ್ರಜೆಯೊಬ್ಬನ ಬದುಕಿನ ಪ್ರತಿಯೊಂದನ್ನೂ ನಿರ್ಮಿಸುವ, ನಿರ್ಣಯಿಸುವ ಹಕ್ಕು ಆ ಪ್ರಜೆಯದೇ ಆಗಿದೆ. ಆದರೆ ಬದುಕು ಒಬ್ಬರಿಗೆ ಸೀಮಿತವಾಗದೇ ಸಮಾಜದಲ್ಲಿ ಹಾಸುಹೊಕ್ಕಿರುವುದರಿಂದ ಸಮಾಜದ ವ್ಯವಸ್ಥೆಗಳನ್ನು ಒಬ್ಬ ಕಟ್ಟಿಕೊಳ್ಳಲು ಆಗದ್ದರಿಂದ ಆ ಹಕ್ಕನ್ನು ಹೆಚ್ಚಿನ ಘಟಕವೊಂದಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಹಾಗೇ ನಗರಪಾಲಿಕೆಗೆ ಮೀರಿದ್ದು ರಾಜ್ಯಕ್ಕೆ, ರಾಜ್ಯಕ್ಕೆ ಮೀರಿದ್ದು ಕೇಂದ್ರಕ್ಕೆ ಬಿಟ್ಟುಕೊಡುವುದು ಸರಿಯಾಗಿದೆ. ಹೀಗೆ ಅಧಿಕಾರ, ಹಕ್ಕು ನಮ್ಮಿಂದ ದೂರ ಹೋಗುವುದು, ಪ್ರಜಾಪ್ರಭುತ್ವವನ್ನು ಆ ಮಟ್ಟಿಗೆ ಬಲಹೀನಗೊಳಿಸುವಂತಹುದ್ದೇ ಆಗಿರುತ್ತದೆ ಎನ್ನುವುದೇ ಸತ್ಯ. ಇದು ಗಮನದಲ್ಲಿದ್ದರೆ ಯಾವ ಹಂತದವರೆಗೆ ನಮ್ಮ ಹಕ್ಕು ಮತ್ತು ಅಧಿಕಾರಗಳನ್ನು ಕೇಂದ್ರಕ್ಕೆ ಬಿಟ್ಟುಕೊಡಬೇಕು ಎಂಬುದು ಅರಿವಾಗುತ್ತದೆ. ಹಾಗೆಯೇ ಯಾವ ಮಟ್ಟಿಗೆ ಅಧಿಕಾರ ವಿಕೇಂದ್ರೀಕರಣ ಆಗಬೇಕಾಗಿದೆ ಎಂಬುದೂ ಅರಿವಾಗುತ್ತದೆ. ನಿಜಕ್ಕೂ ವಿಕೇಂದ್ರೀಕರಣ ಆಗಬೇಕೆನ್ನುವ ಮಾತಿನ ಅರ್ಥವೇ ಈಗ ಅಧಿಕಾರ ಕೇಂದ್ರೀಕೃತವಾಗಿದೆ ಎಂಬುದಾಗಿದೆ. ಭಾರತದಲ್ಲಿ ಹಕ್ಕುಗಳ ಈ ಹರಿವು ರಾಜ್ಯಗಳು ಕೇಂದ್ರಕ್ಕೆ ಒಪ್ಪಿಸಿದ್ದಾಗಿಲ್ಲದೆ ಕೇಂದ್ರವು ರಾಜ್ಯಗಳಿಗೆ ‘ಅಯ್ಯೋ ಪಾಪಾ’ ಎಂದು ಬಿಟ್ಟುಕೊಟ್ಟಿರುವಂತೆ ಇದೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವವು ನಿಜವಾದ ತೆರನಾಗಿ ಜಾರಿಯಾಗುವುದೇ ಭಾರತವು ರಾಜ್ಯಗಳ ಒಪ್ಪುಕೂಟವಾದಾಗ.

► ಅತಿಯಾದ ಕೇಂದ್ರದ ಹಿಡಿತ!ಸೊರಗುತ್ತಿರುವ ರಾಜ್ಯಗಳು

ಭಾರತದಲ್ಲಿ ಸಂವಿಧಾನದ ಆಧಾರದ ಮೇಲೆ ಆಡಳಿತದ ಅನುಕೂಲಕ್ಕಾಗಿ ಮೂರು ಪಟ್ಟಿಗಳನ್ನು ಮಾಡಲಾಗಿದೆ. ಮೊದಲ ಪಟ್ಟಿ ಕೇಂದ್ರದ ಪಟ್ಟಿ. ಇದರಲ್ಲಿ 101 ವಿಷಯಗಳಿದ್ದರೆ, ಎರಡನೆಯದಾದ ರಾಜ್ಯಪಟ್ಟಿಯಲ್ಲಿ 66 ವಿಷಯಗಳು ಇವೆ. ಇನ್ನೊಂದು ಸಮಾನಾಧಿಕಾರ (ಕಾನ್‌ಕರೆಂಟ್) ಪಟ್ಟಿ ಎಂದು ಇದೆ. ಅದರಡಿಯಲ್ಲಿ ರಾಜ್ಯ ಕಾನೂನು ಮಾಡಬಹುದಾದರೂ ಕೇಂದ್ರಕ್ಕೆ ಪರಮಾಧಿಕಾರವಿದೆ. ಈ ಪಟ್ಟಿಯಲ್ಲಿ 47 ವಿಷಯಗಳಿವೆ. ಅಂದರೆ ಒಟ್ಟು ಇರುವ 214 ವಿಷಯಗಳಲ್ಲಿ 66 ಮಾತ್ರ ನಮ್ಮ ಕೈಯಲ್ಲಿ. ಉಳಿದ 148 ಕೇಂದ್ರದ ಕೈಯಲ್ಲಿ. ಕೇಂದ್ರದ ಹಿಡಿತದಲ್ಲಿ ರಕ್ಷಣೆ, ವಿದೇಶಿ ಸಂಬಂಧಗಳ ತರಹದ ವಿಷಯಗಳು ಇರುವುದೇನೋ ಸರಿಯಾಗಿದೆ. ಆದರೆ ಈಗಿನ ವ್ಯವಸ್ಥೆಯಲ್ಲಿ ಹೆಚ್ಚಿನ ಎಲ್ಲ ವಿಷಯಗಳಲ್ಲೂ ನಾವು ಕೇಂದ್ರದ ಅಧೀನವೇ ಆಗಿದ್ದೇವೆ. ಇತ್ತೀಚಿನ ಎರಡು ಘಟನೆಗಳನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಕೇಂದ್ರವು, ರಾಜ್ಯಗಳ ಸ್ವಯಮಾಡಳಿತವನ್ನು ಕಸಿದುಕೊಳ್ಳುವತ್ತಲೇ ಸಾಗುತ್ತಿದೆ ಎಂಬುದು ಕಾಣುತ್ತಿದೆ. ಈ ಹಿಂದೆ ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣ ಈಗ ಕೇಂದ್ರದ ಪರಮಾಧಿಕಾರ ಇರುವ ಸಮಾನಾಧಿಕಾರ ಪಟ್ಟಿಯಲ್ಲಿದೆ. ಇದೇ ರೀತಿ ಈಗ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಪ್ರಮಾಣ ನಿಶ್ಚಯಿಸುವ ಬಗ್ಗೆಯೂ ರಾಜ್ಯದ ಅಧಿಕಾರ ಮೊಟಕು ಮಾಡುವ ಉದ್ದೇಶ ಕಾಣುತ್ತಿದೆ. ಹೀಗೆ ಅಧಿಕಾರ ಮತ್ತು ಹಕ್ಕುಗಳು ಜನರಿಂದ ದೂರವಾಗುತ್ತಾ ಇರುವುದು ಮುಂದೊಮ್ಮೆ ಪ್ರಜಾಪ್ರಭುತ್ವಕ್ಕೆ ಮಾರಕವಾದೀತು.

► ಒಪ್ಪುಕೂಟ ವಿರೋಧಿ ಭಾಷಾನೀತಿ!

ಕರ್ನಾಟಕವೆಂಬುದು ಕನ್ನಡದ ನುಡಿಗುಡಿಯಾಗಿದ್ದು ಕನ್ನಡವೇ ಇಲ್ಲಿನ ಸಾರ್ವಭೌಮ ಭಾಷೆಯಾಗಿರಬೇಕಾದದ್ದು ಸರಿಯಾಗಿದೆ. ಆದರೆ ಹಿಂದಿ ಹೇರಿಕೆ ಮಾಡುವುದನ್ನು ಕೇಂದ್ರ ಸರಕಾರವೇ ಪೋಷಿಸಿ ನಡೆಸುತ್ತಿರುವುದನ್ನು ಹೇಗೆ ಒಪ್ಪಲಾಗುತ್ತದೆ. ಪ್ರತಿಯೊಂದು ಪ್ರದೇಶವೂ ತನ್ನ ತಾಯ್ನುಡಿಯಲ್ಲಿ ತನ್ನ ಜನರ ಕಲಿಕೆ, ದುಡಿಮೆ, ಬದುಕು ಕಟ್ಟಿಕೊಳ್ಳಲು ಸಹಾಯಕವಾಗಬೇಕಾದ ವ್ಯವಸ್ಥೆಯ ಬದಲಾಗಿ, ಇಲ್ಲಿರುವುದು ಹಿಂದಿ ಭಾಷೆಯನ್ನು ಎಲ್ಲರ ಮೇಲೆ ಹೇರಬೇಕೆನ್ನುವ ತುಡಿತ ಮಾತ್ರ. ಭಾರತದ ಒಗ್ಗಟ್ಟಿಗೆ ಸಹಾಯಕ, ದೇಶಪ್ರೇಮದ ಸಂಕೇತ ಇತ್ಯಾದಿ ಸಿಹಿಸುಳ್ಳುಗಳನ್ನು ಬಳಸಿ ನಿಧಾನವಾಗಿ ಹಿಂದಿಯನ್ನು ಎಲ್ಲಾ ಭಾರತೀಯರ ಮನೆ ಹೊಕ್ಕಿಸಲಾಗುತ್ತಿದೆ. ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವೆಂದರೆ ಹಿಂದಿ ಎಂಬ ಒಂದೇ ಗುರುತನ್ನು ನೀಡುವ ಪ್ರಯತ್ನಗಳಾಗುತ್ತಿವೆ. ಇವೆಲ್ಲಾ ಕ್ರಮಗಳು ದೇಶದ ಇತರೆಲ್ಲಾ ನುಡಿಗಳನ್ನೂ ಅವುಗಳದೇ ತವರಿನಲ್ಲೂ ಕೆಲಸಕ್ಕೆ ಬಾರದವನ್ನಾಗಿಸುವಂತೆ ಭಾರತದ ವ್ಯವಸ್ಥೆ ಮಾಡುತ್ತಿರುವುದಕ್ಕೆ ಸಾಕ್ಷಿಯಂತಿವೆ. ಭಾರತದ ಕೇಂದ್ರಸರಕಾರವು ಪ್ರತಿಯೊಂದು ಪ್ರದೇಶದಲ್ಲಿಯೂ ಆಯಾ ಪ್ರದೇಶದ ಭಾಷೆಯಲ್ಲೇ ಕಲಿಕೆ, ದುಡಿಮೆ, ಆಡಳಿತ ನಡೆಯಲು ಪೂರಕವಾದ ಕ್ರಮ ಕೈಗೊಳ್ಳಬೇಕಾದ್ದು ನಿಜವಾದ ಒಪ್ಪುಕೂಟ ಧರ್ಮವಾಗಿದೆ. ಭಾರತ ಸರಕಾರದ ಅಧಿಕೃತ ಭಾಷೆಯ ಪಟ್ಟ ಅಲಂಕರಿಸಿರುವ ಹಿಂದಿ, ಇಂಗ್ಲಿಷ್‌ಗಳ ಜೊತೆಯಲ್ಲಿ ಎಲ್ಲಾ ರಾಜ್ಯಭಾಷೆಗಳನ್ನೂ ಸೇರಿಸಬೇಕಾಗಿದೆ.

► ಸ್ಪಷ್ಟವಾಗಿಲ್ಲದ ನೀತಿ ನಿಯಮಗಳಿಂದ ಹದಗೆಡುತ್ತಿರುವ ರಾಜ್ಯ ರಾಜ್ಯಗಳ ಸಂಬಂಧ

ಭಾರತದಲ್ಲಿರುವ ಸ್ಪಷ್ಟವಾಗಿಲ್ಲದ ನೀತಿನಿಯಮಗಳು ಇಂದಿನ ಅಂತರ್‌ರಾಜ್ಯ ಬಿಕ್ಕಟ್ಟುಗಳಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಯಾವ ರಾಜ್ಯಕ್ಕೆ ಕೇಂದ್ರದಲ್ಲಿ ಲಾಬಿ ಮಾಡುವ ಶಕ್ತಿಯಿದೆಯೋ ಅಂತಹ ರಾಜ್ಯದ ಕಡೆಗೆ ನ್ಯಾಯ ಎನ್ನುವ ಪರಿಸ್ಥಿತಿಯಿದ್ದಂತಿದೆ. ಯಾವುದೇ ಅಂತರ್‌ರಾಜ್ಯ ವಿವಾದವನ್ನೂ ಒಂದು ಸರಿಯಾದ ಮಾನದಂಡದ ರೀತಿಯಲ್ಲಿ ಬಗೆಹರಿಸುವ ವ್ಯವಸ್ಥೆ ಇಲ್ಲಿರುವಂತೆ ತೋರುತ್ತಿಲ್ಲ. ಅಂತರ್‌ರಾಜ್ಯ ನದಿನೀರು ಹಂಚಿಕೆಗೆ ಬೇಕಾದ ಸರಿಯಾದ ಒಂದು ರಾಷ್ಟ್ರೀಯ ಜಲನೀತಿ ಇಲ್ಲ. ‘‘ಬ್ರಿಟಿಷ್ ಕಾಲದ ಒಪ್ಪಂದವು ಬ್ರಿಟಿಷರು ತೊಲಗಿದ ಕೂಡಲೇ ಅಸಿಂಧುವಾಗುತ್ತದೆ’’ ಎಂದು ಕಾವೇರಿ ನೀರುಹಂಚಿಕೆಯ ಸಂದರ್ಭದಲ್ಲಿ ಹೇಳುವ ಸ್ಪಷ್ಟವಾದ ನಿಯಮವೂ ಭಾರತದಲ್ಲಿಲ್ಲ. ಕೇಂದ್ರಸರಕಾರವೇ ರಚಿಸಿದ ಮಹಾಜನ್ ವರದಿಯನ್ನು ಇಂತಿಷ್ಟು ಕಾಲಮಿತಿಯಲ್ಲಿ ಜಾರಿ ಮಾಡಲು ಕೇಂದ್ರವನ್ನು ಕಟ್ಟಿಹಾಕುವ ವ್ಯವಸ್ಥೆಯೂ ಇದ್ದಂತಿಲ್ಲ. ಹೊಗೇನಕಲ್ ಬಳಿ ತಮಿಳುನಾಡು ಕರ್ನಾಟಕದ ನೆಲ ಕಬಳಿಸುತ್ತಿದೆ ಎಂಬ ಕೂಗಿಗೆ ಕೇಂದ್ರದ ಗಟ್ಟಿ ಪ್ರತಿಕ್ರಿಯೆಯೇ ಇಲ್ಲ. ಹೊಗೇನಕಲ್ ಗಡಿಯ ಜಂಟಿ ಸಮೀಕ್ಷೆ ನಡೆಸಿ ಎಂದು ಅದು ಹೇಳುತ್ತಲೂ ಇಲ್ಲ. ಇಂತಹ ಅಸ್ಪಷ್ಟತೆಗಳೇ ರಾಜ್ಯ ರಾಜ್ಯಗಳ ನಡುವೆ ವೈಷಮ್ಯಗಳಿಗೆ ಪ್ರಮುಖ ಕಾರಣವಾದಂತಿದೆ.

► ಬಹುಜನ ಹಿತಾಯವೆನ್ನುವ ಮುಳುಗುನೀರು!

ಭಾರತದ ಇಂದಿನ ವ್ಯವಸ್ಥೆಯಲ್ಲಿ ನಿಜಕ್ಕೂ ಪ್ರಜಾಪ್ರಭುತ್ವ ಎಂದರೆ ಅರ್ಥ ಬಹುಸಂಖ್ಯೆಗೆ ಮಾನ್ಯತೆ ಎನ್ನುವುದು ಮಾತ್ರವೇ? ಭಾರತದಲ್ಲಿ ಬಹುಜನ ಸುಖಾಯ ತತ್ವ ಪಾಲನೆಯಾದರೆ ಎಂಥಾ ಸಮಸ್ಯೆ ಹುಟ್ಟಿಕೊಳ್ಳುತ್ತದೆ ನೋಡಿ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು. ಒಟ್ಟು ನೂರಿಪ್ಪತ್ತು ಕೋಟಿಯಲ್ಲಿ ಕನ್ನಡಿಗರ ಎಣಿಕೆ ಬರೀ ಆರು ಕೋಟಿ. ಅಂದರೆ ನಮ್ಮ ಲೆಕ್ಕ ಬರೀ ಶೇ.5. ಈ ದೇಶದ ಬಹುಸಂಖ್ಯಾತರು ಹಿಂದೀ ಮಾತಾಡುತ್ತಾರೆ ಎನ್ನುವ ಕಾರಣ ಕೊಟ್ಟು ಭಾರತ ದೇಶದ ಆಡಳಿತ ಭಾಷೆ ಹಿಂದಿ ಎಂದು ಈ ದೇಶದ ಸಂವಿಧಾನದಲ್ಲಿ ಸೇರಿಸಿಬಿಡಲಾಗಿದೆ. ಜನರು ಆಳ್ವಿಕೆಯಲ್ಲಿ ತೊಡಗಬೇಕೆಂದರೆ ಅವರ ನುಡಿಯಲ್ಲೇ ಎಲ್ಲಾ ಸೇವೆಗಳೂ, ಅವಕಾಶಗಳೂ ಆಗಬೇಕೆನ್ನುತ್ತಾ ಆ ಕಾರಣಕ್ಕಾಗಿ ಹಿಂದಿಯನ್ನು ರಾಷ್ಟ್ರದ ಆಡಳಿತ ಭಾಷೆಯನ್ನಾಗಿ ಮಾಡಲಾಗಿದೆ ಎನ್ನುತ್ತಾರೆ. ವಾಸ್ತವವಾಗಿ ಒಟ್ಟು ಹಿಂದಿಯೇತರರ ಸಂಖ್ಯೆ ಈ ದೇಶದ ಸುಮಾರು ಶೇ.70ದಷ್ಟಿದೆ. ಇವರಿಗೆಲ್ಲಾ ಯಾವ ಭಾಷೆಯಲ್ಲಿ ಸೇವೆ ಸವಲತ್ತು ಕೊಡಬೇಕು ಎಂದು ಯಾರಾದರೂ ಭಾರತ ಸರಕಾರವನ್ನು ಕೇಳಿದರೆ ಎಲ್ಲರಿಗೂ ಶಾಲಾಹಂತದಿಂದಲೇ ಹಿಂದಿಯನ್ನು ಕಡ್ಡಾಯವಾಗಿ ಕಲಿಸಲಾಗುತ್ತದೆ. ರಾಷ್ಟ್ರೀಯ ಭಾವೈಕ್ಯಕ್ಕಾಗಿ, ದೇಶಪ್ರೇಮದ ಸಂಕೇತವಾಗಿ, ರಾಷ್ಟ್ರೀಯ ಏಕತೆಗಾಗಿ ಹಿಂದಿಯನ್ನು ಕಲಿಯಿರಿ. ಹಿಂದಿಯನ್ನು ಬಳಸಿರಿ ಎನ್ನುತ್ತದೆ ಭಾರತದ ಕೇಂದ್ರ ಸರಕಾರ! ಅಂದರೆ ಈ ದೇಶದಲ್ಲಿ ಬಹುಸಂಖ್ಯಾತರ ಹಿತವನ್ನು ಕಾಪಾಡುವುದೇ ಧರ್ಮ ಎನ್ನುವುದಾದರೆ ನಾಳೆ ಕನ್ನಡಿಗರ ಪಾಡೇನಾದೀತು?

ಕಾವೇರಿ ನದಿ ನೀರನ್ನು ಹರಿಸುವುದರಿಂದ ಕಡಿಮೆ ಜನರಿರುವ ಕರ್ನಾಟಕಕ್ಕೆ ಹಾನಿಯಾದರೂ ಹೆಚ್ಚು ಜನರಿರುವ ತಮಿಳುನಾಡಿಗೆ ಲಾಭವಾಗುತ್ತದೆ ಎನ್ನುವುದನ್ನು ಈ ತತ್ವ ಬೋಧಿಸುತ್ತದೆಯಲ್ಲವೇ? ಇಲ್ಲಿ ನನ್ನ ಮಾತುಗಳು ಸ್ವಲ್ಪ ಉತ್ಪ್ರೇಕ್ಷೆಯದ್ದಾಗಿದೆ ಎನ್ನಿಸಿದರೂ ಕೂಡಾ ಭಾರತದಲ್ಲಿನ ವಾಸ್ತವ ಪರಿಸ್ಥಿತಿ ಇದೇ ಆಗಿದೆ. ಭಾರತ ಸರಕಾರವಾಗಲಿ ಭಾರತೀಯ ಸಂವಿಧಾನವಾಗಲಿ ಎಲ್ಲೂ ನೇರವಾಗಿ ಹೀಗೆ ಬಹುಸಂಖ್ಯಾತರ ಹಿತಕ್ಕಾಗಿ ಅಲ್ಪಸಂಖ್ಯಾತರ ಹಿತವನ್ನು ಬಲಿ ಕೊಡುತ್ತೇವೆ ಎಂದಿಲ್ಲವೆನ್ನುವುದು ದಿಟವೇ ಆಗಿದ್ದರೂ ಭಾರತದ ಸಂವಿಧಾನವೇ ಇಂಥ ಅರ್ಥ ಬರುವಂತಹ ಅನೇಕ ಕಲಮುಗಳನ್ನು ಹೊಂದಿದೆ. ಇದು ಬದಲಾಗದೆ ಈ ದೇಶದ ಭಾಷಾ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ ಮತ್ತು ಅವರು ಈ ದೇಶದ ಎರಡನೇ ದರ್ಜೆಯ ನಾಗರಿಕರಾಗಿ ಬಾಳಬೇಕಾಗುತ್ತದೆ.

► ಬದಲಾವಣೆಯ ಅಗತ್ಯ

ಇದು ಸರಿ ಹೋಗಬೇಕೆಂದರೆ ಸಂವಿಧಾನಕ್ಕೆ ತಿದ್ದುಪಡಿಯಾಗಬೇಕು. ಸಂವಿಧಾನದಲ್ಲಿರುವ ಕೆಲವು ಪ್ರಮುಖ ಹುಳುಕುಗಳತ್ತ ಕಣ್ಣುಹಾಯಿಸೋಣ. ಹಿಂದಿಯನ್ನು ಮಾತ್ರವೇ ದೇಶದ ಆಡಳಿತ ಭಾಷೆಯನ್ನಾಗಿಸಿ ಒತ್ತಾಯ, ಆಮಿಷ ಮತ್ತು ವಿಶ್ವಾಸಗಳಿಂದ ಇಡೀ ದೇಶದ ಮೇಲೆ ಹೇರಲಾಗುತ್ತಿರುವ ಹುಳುಕಿನ ಭಾಷಾನೀತಿ ನಮ್ಮದು. ಭಾರತದ ನಾಗರಿಕರಿಗೆ ಕೊಡಮಾಡಲಾಗಿರುವ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ‘ಭಾರತದಲ್ಲಿರುವ ಯಾರು ಎಲ್ಲಿಗೆ ಬೇಕಾದರೂ ಹೋಗಿ ನೆಲೆಸಬಹುದು’ ಎನ್ನುತ್ತಿರುವ ಸಂವಿಧಾನದ 19ನೇ ಅನುಚ್ಛೇದದ ಸಾಲುಗಳು, ಅನಿಯಂತ್ರಿತ ಅಂತರ್‌ರಾಜ್ಯ ವಲಸೆಗೆ ಕಾರಣವಾಗಿದೆ. ಭಾರತ ಸಂವಿಧಾನದ 15ನೇ ಕಲಂಮ್‌ನಲ್ಲಿ ಒಂದೆಡೆ ಹೀಗೆ ಬರೆದಿದೆ: ಪ್ರಭುತ್ವವು ಜಾತಿ, ಮತ, ಧರ್ಮ, ಹುಟ್ಟಿದ ಪ್ರದೇಶ, ಭಾಷೆಗಳ ಆಧಾರದಲ್ಲಿ ಭಾರತದ ನಾಗರಿಕರಿಗೆ ತಾರತಮ್ಯ ಮಾಡುವಂತಿಲ್ಲ ಎಂದಿದೆ. ಇದರ ಉದ್ದೇಶ ಸಮಾನತೆಯೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಒಂದು ಭಾಷಿಕ ಪ್ರದೇಶದ ಜನಲಕ್ಷಣವನ್ನೇ ಬದಲಿಸಿಬಿಡುವ ಅಪಾಯ ಇದರಲ್ಲಿದೆ. ಈ ಕಾರಣದಿಂದಾಗಿಯೇ ರಾಜ್ಯವೊಂದರಲ್ಲಿ ಆಯಾಪ್ರದೇಶದ ಜನರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಲು ಸಾಧ್ಯವಿಲ್ಲವಾಗಿದೆ.

► ಅಸಮಾನ ಪ್ರಾತಿನಿಧ್ಯ: ಒಪ್ಪುಕೂಟಕ್ಕೆ ಕಳಂಕ

ಭಾರತ ಒಪ್ಪುಕೂಟವೆಂಬುದು ಎಲ್ಲರನ್ನೂ ಸಮಾನವಾಗಿ ನೋಡಬೇಕಾಗಿದೆ. ಎಂಬತ್ತು ಸಂಸದರ ಉತ್ತರಪ್ರದೇಶದ ರಾಜಕೀಯ ಬಲದ ಮುಂದೆ ಇಪ್ಪತ್ತೆಂಟರ ಕರ್ನಾಟಕ ಸದಾ ಮೂಲೆಗುಂಪು. ಇರುವ ಇಪ್ಪತ್ತೆಂಟು ಸಂಸದರು ಒಟ್ಟಾಗಿ ದನಿಯೆತ್ತಿದರೂ ಮೂವತ್ತೊಂಬತ್ತರ ತಮಿಳುನಾಡಿನ ಮುಂದೆ, ನಲವತ್ತೆಂಟರ ಮಹಾರಾಷ್ಟ್ರದ ಮುಂದೆ, ನಲವತ್ತೆರಡರ ಆಂಧ್ರಪ್ರದೇಶದ ಸಂಸದರ ಸಂಖ್ಯೆಯ ಮುಂದೆ ನಮ್ಮ ದನಿಯೇನೂ ಕೇಳಿಸದು ಎಂಬಂತಿರುವ ಸಂಸತ್ತು. ಹೀಗೆ ಸಂಖ್ಯಾಬಲವಿದ್ದವರ ಸ್ವರ್ಗವಿದ್ದಂತಿರುವ ವ್ಯವಸ್ಥೆ ನಮ್ಮ ದೇಶದಲ್ಲಿರುವಂತಿದೆ. ಇದೀಗ ಮತ್ತೊಮ್ಮೆ ಲೋಕಸಭಾ ಸದಸ್ಯರ ಸಂಖ್ಯೆಯನ್ನು ಜನಸಂಖ್ಯೆಯ ಆಧಾರದ ಮೇಲೆ ಮತ್ತೆ ಹೆಚ್ಚಿಸುವ ಮಾತುಗಳು ಕೇಳಿ ಬರುತ್ತಿದೆ. ಇದರೊಳಗಿನ ಅನ್ಯಾಯ ನೋಡಿ. ಕರ್ನಾಟಕ, ಕೇರಳ, ತಮಿಳುನಾಡಿನಂತಹ ರಾಜ್ಯಗಳು ಭಾರತದ ಕುಟುಂಬ ಯೋಜನೆ ನೀತಿಯನ್ನು ಕಣ್ಣಿಗೊತ್ತಿಕೊಂಡು ನಿಯತ್ತಾಗಿ ಜಾರಿ ಮಾಡಿ ತಮ್ಮ ಜನಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಂತಹ ನಾಡುಗಳಲ್ಲಿ ಎಗ್ಗುಸಿಗ್ಗಿಲ್ಲದೆ ಜನಸಂಖ್ಯೆ ಸ್ಫೋಟಗೊಳ್ಳುತ್ತಲೇ ಇದೆ. ಈಗ ಜನಸಂಖ್ಯೆ ಆಧಾರದ ಮೇಲೆ ಮತ್ತೆ ಲೋಕಸಭೆಯ ಸ್ಥಾನಗಳನ್ನು ನಿಗದಿ ಮಾಡುವುದಾದರೆ 545 ಸದಸ್ಯರ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಸಂಸದರ ಸಂಖ್ಯೆ ಈಗಿನ 80ರಿಂದ 90-95ಕ್ಕೆಏರಲಿದೆ. ಕನ್ನಡನಾಡಿನದ್ದು 28ರಲ್ಲೇ ನಿಲ್ಲಬಹುದು. ಸಂಸದರ ಸಂಖ್ಯೆ,ರಾಜ್ಯಗಳ ಹಣೆಬರಹವನ್ನು ನಿರ್ಧರಿಸುವ ವ್ಯವಸ್ಥೆ ಸರಿಹೋಗದೆ, ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯ ಕೊಡದೆ ಹೋದರೆ ನಾಳೆ ನಮ್ಮ ಗತಿ ಏನಾದೀತು? ಇದರೊಟ್ಟಿಗೆ ಭಾರತದ ಸಂವಿಧಾನದ ವ್ಯವಸ್ಥೆಯಲ್ಲಿ ಆಗಬೇಕಾದ ಮತ್ತೊಂದು ಮುಖ್ಯವಾದ ಬದಲಾವಣೆ ಒಂದು ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯವನ್ನು ಸಂಸತ್ತು ತೆಗೆದುಕೊಂಡರೂ ಅದಕ್ಕೆ ಮಾನ್ಯತೆ ಸದರಿ ರಾಜ್ಯದ ವಿಧಾನಸಭೆ ಒಪ್ಪಿದ ನಂತರವೇ ಸಿಗಬೇಕಾಗಿದೆ.

► ಸಮಾನತೆಯೇ ಜೀವಾಳವಾದ ಒಪ್ಪುಕೂಟವಾಗಲಿ ಭಾರತ!

ವೈವಿಧ್ಯಮಯ ಪ್ರದೇಶಗಳನ್ನು ಒಗ್ಗೂಡಿಸಿ ಒಂದು ದೇಶ ಮಾಡುವಾಗ ಅನುಸರಿಸಬೇಕಾಗಿದ್ದ ಮೂಲಭೂತ ನಿಯಮವೇ ಸಮಾನತೆ. ಪ್ರತಿಪ್ರದೇಶಕ್ಕೂ ಸಮಾನ ಗೌರವ, ಪ್ರತಿಪ್ರದೇಶದ ಅನನ್ಯತೆಯನ್ನೂ ಕಾಪಾಡಿಕೊಳ್ಳುವ ಭರವಸೆ, ಪ್ರತಿಪ್ರದೇಶಕ್ಕೂ ಸಮಾನ ಪ್ರಾತಿನಿಧ್ಯ ಮತ್ತು ಮಹತ್ವ, ಪ್ರತಿಪ್ರದೇಶಕ್ಕೂ ತನ್ನನ್ನು ತಾನು ಆಳಿಕೊಳ್ಳುವ ಅಧಿಕಾರ ವಿಕೇಂದ್ರೀಕರಣ, ಪ್ರತಿಪ್ರದೇಶಕ್ಕೂ ತನ್ನ ಏಳಿಗೆಗೆ ಪೂರಕವಾಗಲು ಅವಕಾಶ ಇರಬೇಕಾದದ್ದು ಸರಿಯಾಗಿದೆ. ಸರಿಯಾದ ಒಪ್ಪುಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸಂಸದರ ಸಂಖ್ಯೆ ನಮ್ಮ ಹಣೆಬರಹ ಬರೆಯುವುದಿಲ್ಲ. ನದಿ ನೀರು ಹಂಚಿಕೆಯಲ್ಲಿ ಕೃಷ್ಣೆಯ ವಿಷಯಕ್ಕೆ ಒಂದು, ಕಾವೇರಿ ವಿಷಯಕ್ಕೆ ಒಂದು ನಿಯಮ, ಹೋಗೆನಕಲ್‌ಗೆ ಒಂದು ಕಳಸಾ ಬಂಡೂರಿಗೆ ಒಂದು ನಿಯಮ, ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ತಮಿಳಿಗೊಂದು ನಿಯಮ, ಕನ್ನಡಕ್ಕೆ ಒಂದು ನಿಯಮ ಅನುಸರಿಸಿದ ಧೋರಣೆಗಳು ಇರುವುದಿಲ್ಲ. ಕನ್ನಡಿಗರಿಗೆ ಕೆಲಸ ಬೇಕೆಂದರೆ ರೈಲ್ವೆಯಲ್ಲಿ, ಬ್ಯಾಂಕಿನಲ್ಲಿ ಹಿಂದಿ ಕಲಿತಿರಲೇಬೇಕೆಂಬ ಒತ್ತಾಯದ ಹೇರಿಕೆ ಇರುವುದಿಲ್ಲ. ಕನ್ನಡನಾಡಿನ ಶಾಲೆಗಳಲ್ಲಿ ಏನನ್ನು ಕಲಿಸಬೇಕೆಂದು ನಿರ್ಧಾರ ದಿಲ್ಲಿಯಲ್ಲಾಗುವುದಿಲ್ಲ. ಕನ್ನಡನಾಡಿನಲ್ಲಿ ಆರಂಭವಾಗುವ ಉದ್ದಿಮೆಗಳ ಮೇಲೆ ಕನ್ನಡಿಗರಿಗೆ ಕೆಲಸ ನೀಡಬೇಕೆಂಬ ನಿಯಮ ಸಾಧ್ಯವಾಗುತ್ತದೆ. ನಮ್ಮ ನಾಡಿಗೆ ಯಾರನ್ನು ವಲಸೆ ಮಾಡಿಕೊಳ್ಳಬೇಕು ಯಾರನ್ನು ಮಾಡಿಕೊಳ್ಳಬಾರದು ಎಂದು ನಿರ್ಧರಿಸುವ ಸ್ವಾತಂತ್ರ ನಮಗಿರುತ್ತದೆ. ಇಂತಹ ಒಂದು ಸ್ವಾತಂತ್ರ ಹಾಗೂ ಸಮಾನತೆಗಳು ಭಾರತ ಒಪ್ಪುಕೂಟದಲ್ಲಿರುವ ಪ್ರತೀ ಪ್ರದೇಶಕ್ಕೂ ಸಿಗಬೇಕು.

Writer - ಆನಂದ್, ಬನವಾಸಿ ಬಳಗ

contributor

Editor - ಆನಂದ್, ಬನವಾಸಿ ಬಳಗ

contributor

Similar News