ಸೈಬರ್ ವರದಾನ ಆದಾಗ...

Update: 2019-01-26 17:47 GMT

ಯೋಗೇಶ್ ಮಾಸ್ಟರ್

ಅಧ್ಯಯನ ಮತ್ತು ಅರಿವು

ಕಲಿಕೆಯೆಂಬ ಪ್ರಕ್ರಿಯೆ ಭಾಗ-5

ಮಕ್ಕಳು ಸೈಬರ್ ಎಂಬುದು ಸೈತಾನನಾಗುವ ಬದಲು ವರದಾನವಾಗ ಬೇಕೆಂದೇನಾದರೂ ಬಯಸಿದ್ದೇ ಆದರೆ ಮೊದಲು ಮಾಡಬೇಕಿರುವ ಕೆಲಸವೆಂದರೆ, ಅಂತರ್ಜಾಲವನ್ನು ಕೆಲಸಗಳ ಬಳಕೆಗೆ ಮಾತ್ರ ತೆರೆಯುವುದನ್ನು ರೂಢಿ ಮಾಡಿಸುವುದು. ತಮಗೆ ಅಗತ್ಯವಿರುವ ಮಾಹಿತಿಯನ್ನು ಅಥವಾ ವಿಷಯಗಳನ್ನು ತಿಳಿಯಲು ಮಾತ್ರ ಅದನ್ನು ಬಳಸುವುದನ್ನು ರೂಢಿಸುವುದು.

► ಅಂತರ್ಜಾಲವ ಜಾಲಾಡುವಾಗ

ಮಗುವೊಂದನ್ನು ನೀವು ಹೇಗೂ ಅಂತರ್ಜಾಲದ ಜಾಲದಿಂದ ತಪ್ಪಿಸಲು ಸಾಧ್ಯವೇ ಇಲ್ಲ. ಮಗುವು ಬೆಳೆಬೆಳೆಯುತ್ತಾ ಅದನ್ನು ಆಮೂಲಾಗ್ರವಾಗಿ ಜಾಲಾಡುವುದನ್ನೂ ಕೂಡ ನೀವು ತಪ್ಪಿಸಲು ಸಾಧ್ಯವಿಲ್ಲ. ಆದರೆ ಹಾಗೆ ಜಾಲಾಡುವಾಗ ಪುಟಿದೇಳುವ ಹಲವು ಭಿನ್ನ, ವಿಭಿನ್ನ, ಚಿತ್ರ ವಿಚಿತ್ರ ವಿಷಯಗಳನ್ನು, ನವನವೀನ ಮಾಹಿತಿಗಳೂ ಕೂಡಾ ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಮಾಡುವುದೇನು?

ಬಹಳ ಸರಳ ಎಂದು ಹೇಳಿಬಿಡುವಷ್ಟು ಸುಲಭವೇನಲ್ಲ. ಆದರೆ ಸ್ವಶಿಸ್ತು ಎಂಬುದನ್ನು ಕಷ್ಟಪಟ್ಟು ರೂಢಿಸಿದ್ದೇ ಆದರೆ, ಮುಂದಿನ ಕೆಲಸ ಸರಾಗ. ಆತ್ಮಸಂಯಮ ಮತ್ತು ಸ್ವಶಿಸ್ತು ರೂಢಿಸಿದ್ದೇ ಆದ ಪಕ್ಷದಲ್ಲಿ ಮಕ್ಕಳು ತಾವೆಷ್ಟೇ ಬೆಳೆದರೂ, ತಮಗೆ ಎಂತಹುದೇ ವಿಷಯವಸ್ತುಗಳು ಎದುರಾದರೂ ಯಾವುದನ್ನು ತೆಗೆದುಕೊಳ್ಳಬೇಕು ಯಾವುದನ್ನು ಬಿಡಬೇಕು ಎಂಬುದರ ರೂಢಿಯಾಗಿರುತ್ತದೆ. ಇದರಲ್ಲಿ ಕಾಮನೆಗಿಂತ ಅಗತ್ಯಕ್ಕೆ ಒತ್ತುಕೊಡುವುದನ್ನು ಅಭ್ಯಾಸ ಮಾಡುವುದೇ ರೂಢಿಯಾಗಬೇಕಿರುವುದು. ತುಂಬಾ ತಾತ್ವಿಕವಾಗಿ ಅಥವಾ ಆಧ್ಯಾತ್ಮಿಕವಾಗಿ ಆಲೋಚಿಸಬೇಕಿಲ್ಲ. ಇನ್ನು ದೊಡ್ಡ ದೊಡ್ಡ ತತ್ವಗಳನ್ನು ಪ್ರದರ್ಶಿಸುವ ಭಾಷಣವಂತೂ ಬೇಕಾಗಿಯೇ ಇಲ್ಲ. ಹಾಗೂ ಅವು ಸೋಲುತ್ತವೆ.

► ಸೈತಾನ್ ಹೇಗೆ ವರದಾನವಾಗುವುದು?

ಮಕ್ಕಳು ಸೈಬರ್ ಎಂಬುದು ಸೈತಾನನಾಗುವ ಬದಲು ವರದಾನವಾಗ ಬೇಕೆಂದೇನಾದರೂ ಬಯಸಿದ್ದೇ ಆದರೆ ಮೊದಲು ಮಾಡಬೇಕಿರುವ ಕೆಲಸವೆಂದರೆ, ಅಂತರ್ಜಾಲವನ್ನು ಕೆಲಸಗಳ ಬಳಕೆಗೆ ಮಾತ್ರ ತೆರೆಯುವುದನ್ನು ರೂಢಿ ಮಾಡಿಸುವುದು. ತಮಗೆ ಅಗತ್ಯವಿರುವ ಮಾಹಿತಿಯನ್ನು ಅಥವಾ ವಿಷಯಗಳನ್ನು ತಿಳಿಯಲು ಮಾತ್ರ ಅದನ್ನು ಬಳಸುವುದನ್ನು ರೂಢಿಸುವುದು. ಇದನ್ನು ಮಾಡಬೇಕೆಂದರೆ, ಸಣ್ಣ ಮಕ್ಕಳು ಅತ್ತಾಗ ಅಥವಾ ಬೋರ್ ಎಂದಾಗ ಅಂತರ್ಜಾಲವನ್ನು ತೆಗೆಯಲು ಬಿಡಬಾರದು. ಅದರ ಬದಲು ಯಾವಾಗಲೇ ಅಂತರ್ಜಾಲವನ್ನು ತೆಗೆಯುವಾಗಲೂ ಒಂದು ನಿರ್ದಿಷ್ಟ ಉದ್ದೇಶದೊಂದಿಗೇ ಅದನ್ನು ತೆಗೆಯಬೇಕು. ಅದರ ಸಾಲಿನಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತು ಇತರ ಅಪ್ಲಿಕೇಶನ್‌ಗಳೂ ಕೂಡ ಸೇರುತ್ತವೆ. ಉದಾಹರಣೆಗೆ ಮಗುವು ತನ್ನ ಪಾಠದಲ್ಲಿ ಬರುವ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಅಥವಾ ವಿವರಣೆಯನ್ನು ಪಡೆಯಲು ತೆಗೆಯುವುದು, ಸಂಗೀತ ಅಥವಾ ನೃತ್ಯ ಇನ್ನೇನಾದರೂ ಕಲಿಯುತ್ತಿದ್ದರೆ ಅದಕ್ಕೆ ಸಂಬಂಧಪಟ್ಟಂತೆ ಮಾಹಿತಿಗಾಗಿ ತೆಗೆಯುವುದು, ಯಾವುದೋ ಒಂದು ಐತಿಹಾಸಿಕ ಸ್ಮಾರಕವೋ, ಸ್ಥಳವೋ ಎಲ್ಲಿದೆ ಎಂದೋ ಅಥವಾ ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿಯೋ, ವ್ಯಕ್ತಿ ಪರಿಚಯಕ್ಕಾಗಿ, ನೈಸರ್ಗಿಕ ವಿದ್ಯಮಾನಗಳ ಬಗ್ಗೆ, ಇನ್ನೂ ಯಾವುದೇ ವಿಚಾರಗಳ ಬಗ್ಗೆ; ಒಟ್ಟಾರೆ ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡೇ ಅಂತರ್ಜಾಲವನ್ನು ತೆಗೆಯುವ ರೂಢಿಯನ್ನು ಮಾಡಿಸಬೇಕು. ಆ ರೂಢಿಯನ್ನು ದೊಡ್ಡವರಿಟ್ಟುಕೊಂಡಿದ್ದರೆ ಕಿರಿಯರು ತಾವಾಗಿಯೇ ರೂಢಿಸಿಕೊಳ್ಳುತ್ತಾರೆ. ಇನ್ನು ಎರಡನೆಯದಾಗಿ, ಒಮ್ಮೆ ತಮಗೆ ಬೇಕಾದ ಮಾಹಿತಿ ಸಿಕ್ಕಾದ ಮೇಲೆ ಅಂತರ್ಜಾಲದಿಂದ ನಿರ್ಗಮಿಸಬೇಕು. ಪುಟಿದೇಳುವ ವಿಷಯಗಳನ್ನೆಲ್ಲಾ ನೋಡಿಕೊಂಡಿರಬಾರದು. ಹಾಗೆ ನೋಡಲು ಹೋದರೆ ಬೇಕಾದಷ್ಟು ಸಿಗುತ್ತಲೇ ಇರುತ್ತವೆ. ಅವುಗಳ ಹಿಂದೆ ಹಿಂದೆ ಹೋದಂತೆಲ್ಲಾ ಸಮಯ ಸರಿದುಹೋಗುತ್ತದೆ. ನಾವು ಯಾವ ಉದ್ದೇಶಕ್ಕೆ ಅಂತರ್ಜಾಲವನ್ನು ತೆಗೆದಿರುತ್ತೇಮೋ ಅದನ್ನು ಬಳಸುವುದೋ ಅಥವಾ ಕಾರ್ಯರೂಪಕ್ಕೆ ತರುವುದೋ, ಅದೇ ಆಗಿರುವುದಿಲ್ಲ. ಮೊತ್ತಮೊದಲಾಗಿ ಅಂತರ್ಜಾಲದಲ್ಲಿ ಅಲೆದಾಡಿಕೊಂಡಿರುವುದು ಸಮಯ ವ್ಯರ್ಥ ಎಂಬ ಕಟುಸತ್ಯವನ್ನು ಮನವರಿಕೆ ಮಾಡಿಕೊಂಡಿದ್ದೇ ಆದ ಪಕ್ಷದಲ್ಲಿ ತಮ್ಮ ಕೆಲಸ ಆದ ಕೂಡಲೇ ಅಂತರ್ಜಾಲವನ್ನು ಮುಚ್ಚಿ, ತಾವು ಅದರಿಂದ ಯಾವ ಕೆಲಸ ಮಾಡಬೇಕಿತ್ತೋ ಆ ಕೆಲಸಕ್ಕೆ ತೊಡಗುವಂತಹ ಅಭ್ಯಾಸ ಮಾಡಬೇಕು.

► ಸೈಬರ್ ಸೈತಾನನಿಂದ ರಕ್ಷಿಸಿಕೊಳ್ಳುವ ಸೂತ್ರಗಳು

ಪ್ರಾರಂಭದಲ್ಲಿ ಮಕ್ಕಳ ಜೊತೆ ದೊಡ್ಡವರು ಕುಳಿತು ನಿರ್ದೇಶನಗಳನ್ನು ಕೊಡಬೇಕು. ಮಕ್ಕಳು ಬೇರೆ ವಿಷಯಗಳನ್ನು ಹಿಂಬಾಲಿಸುವಂತಹ ಸೂಚನೆಗಳನ್ನು ಕಂಡಕೂಡಲೇ ಅದು ಬೇಡ, ಈಗ ಸಂಗ್ರಹಿಸಿದ ವಿಷಯದ ಕಡೆಗೆ ಗಮನ ಕೊಡೋಣ. ಅದನ್ನು ಮೊದಲು ಮುಗಿಸೋಣ ಎಂದು ಕೆಲಸದ ಕಡೆಗೆ ಹೆಚ್ಚೆಚ್ಚು ಗಮನ ಕೊಡುವ ರೀತಿಯಲ್ಲಿ ರೂಢಿ ಮಾಡಿಸಬೇಕು. ನಿಜ ಹೇಳಬೇಕೆಂದರೆ, ರೂಢಿ ಮಾಡಿಸುವುದೆಂದರೆ ಇದೇ. ಯಾವುದನ್ನು ನೀವು ಪದೇ ಪದೇ ಗಮನವಿಟ್ಟು ಅಭ್ಯಾಸ ಮಾಡಿಸುತ್ತಿರುತ್ತೀರೋ ಆ ಕಡೆಗೆ, ಆ ಬಗೆಗೆ ಅವರು ರೂಢಿ ಮಾಡಿಕೊಳ್ಳುತ್ತಾರೆ.ಒಟ್ಟಾರೆ ಮಕ್ಕಳಿಗೆ ಪ್ರಾರಂಭದಿಂದಲೇ ಅಂತರ್ಜಾಲದ ಕುರಿತಾಗಿ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ರೂಢಿ ಮಾಡಿಸುವ ಕಡೆಗೆ ನಿಗಾ ವಹಿಸಬೇಕು.

1.ಬೇಸರವಾಗುತ್ತಿದೆಯೆಂದೋ, ಮಾಡಕ್ಕೇನೂ ಕೆಲಸವಿಲ್ಲ ಎಂದೋ ಅಂತರ್ಜಾಲವನ್ನು ಬಳಸಬಾರದು.

2.ಕೆಲಸವಿಟ್ಟುಕೊಂಡು, ಉದ್ದೇಶ ಪೂರ್ವಕವಾಗಿ ಅಗತ್ಯವಿರುವ ಮಾಹಿತಿ ಅಥವಾ ವಿವರಗಳನ್ನು ಪಡೆಯಲು ಮಾತ್ರವೇ ಅಂತರ್ಜಾಲವನ್ನು ತೆರೆಯುವ ಅಭ್ಯಾಸ ಮಾಡಿಸಬೇಕು.

3.ತಮಗೆ ಬೇಕಾದ ವಿವರ ಅಥವಾ ಮಾಹಿತಿಗಳನ್ನು ಪಡೆದ ಮೇಲೆ ಅಂತರ್ಜಾಲವನ್ನು ಕಡ್ಡಾಯವಾಗಿ ಕ್ಲೋಸ್ ಮಾಡಬೇಕು.

4.ಪಾಪ್ ಅಪ್ ಆಗುವ ಅಥವಾ ಬರುವ ಜಾಹಿರಾತುಗಳ ಹಿಂದಿಂದೆಯೇ ಓಡದಿರುವ ರೂಢಿ ಮಾಡಿಸಬೇಕು. ಇದು ಆಗುವುದೇ ನಿರ್ದಿಷ್ಟ ಸಮಯದಲ್ಲಿ ಮಾಡಬೇಕಾದ ಕೆಲಸವನ್ನು ಮಾಡಲೇಬೇಕಾದ ಒತ್ತಡ ಅಥವಾ ಅನಿವಾರ್ಯತೆ ಇದ್ದಾಗ. ಕಾಲದ ಗಡಿಯನ್ನು ಇತ್ತು ಮಕ್ಕಳಿಗೆ ಕೆಲಸ ಮಾಡುವುದನ್ನು ರೂಢಿ ಮಾಡಬೇಕು.

5.ಮಕ್ಕಳು ತಾವು ಕಲಿತಿದ್ದನ್ನು ಅಥವಾ ತಿಳಿದಿದ್ದನ್ನು ಯಾವಾಗಲೂ ದೊಡ್ಡವರೊಂದಿಗೆ ಹಂಚಿಕೊಳ್ಳುವ ಅಥವಾ ಅವರ ಮುಂದೆ ಪ್ರದರ್ಶಿಸುವ ಕಾತುರ ಸಾಮಾನ್ಯವಾಗಿರುತ್ತದೆ. ಇದನ್ನು ಪ್ರೋತ್ಸಾಹಿಸ ಬೇಕು. ಮಕ್ಕಳು ಅಂತರ್ಜಾಲದಲ್ಲಿಯೂ ಕೂಡಾ ಯಾವುದೇ ಮಾಹಿತಿ ಮತ್ತು ವಿಷಯಕ್ಕಾಗಿ ತೆರೆದರೂ ಅದನ್ನೂ ತಮ್ಮ ಜೊತೆಗೆ ಹೇಳುವಂತೆ ಅಥವಾ ತಮ್ಮ ನೆರವು ತೆಗೆದುಕೊಳ್ಳುವಂತೆ ಅವಕಾಶವನ್ನು ಕಲ್ಪಿಸಿಕೊಟ್ಟಿರಬೇಕು. ಆಗ ಸಹಜವಾಗಿಯೇ ಮಕ್ಕಳು ಏನನ್ನು ನೋಡುತ್ತಿದ್ದಾರೆ ಎಂಬ ಮಾಹಿತಿ ದೊಡ್ಡವರಿಗೆ ಇರುತ್ತದೆ ಎಂಬ ಪ್ರಜ್ಞೆಯೂ ಮಕ್ಕಳಿಗೆ ಇರುತ್ತದೆ. ಅಂತರ್ಜಾಲವನ್ನು ಮಕ್ಕಳು ಏತಕ್ಕೆ ತೆರೆದಿದ್ದರು ಎಂಬ ಮಾಹಿತಿಯೂ ದೊಡ್ಡವರಿಗೆ ಇರುತ್ತದೆ.

6.ಇಷ್ಟಾದರೂ ಮಕ್ಕಳಿಗೆ ನೀವು ಏನೋ ನೋಡಬಾರದನ್ನು ನೋಡಿಬಿಡುತ್ತೀರ, ಮಾಡಬಾರದನ್ನು ಮಾಡಿಬಿಡುತ್ತೀರಾ ಎನ್ನುವಂತೆ ಅನುಮಾನಿಸುವಂತೆ ಮಕ್ಕಳ ಹಿಂದೆ ಖಂಡಿತ ಬೀಳಬಾರದು. ನೀವೂ ಕೂಡಾ ಸಹಜ ಕುತೂಹಲಿಗಳ ರೀತಿಯಲ್ಲಿ ಓದುವ ವಿಷಯದಲ್ಲಿ, ಇನ್ನಿತರ ವಿಷಯಗಳಲ್ಲಿ ತಿಳಿದುಕೊಳ್ಳುವಂತೆ ಮಕ್ಕಳನ್ನು ಅನುಸರಿಸಬೇಕೇ ಹೊರತು ಅಂತರ್ಜಾಲದ ವಿಷಯಕ್ಕೆ ಮಾತ್ರ ಧುತ್ತೆಂದು ನಿಮ್ಮ ವಿಚಾರಣೆಯನ್ನು ಖಂಡಿತ ಮಾಡಬಾರದು.

7.ಮಕ್ಕಳಿಗೆ ಆಸಕ್ತಿ ಇರುವ ವಿಷಯದಲ್ಲಿಯೇ ವೈವಿಧ್ಯಮಯವಾಗಿರುವಂತಹ ಮಾಹಿತಿಗಳನ್ನು ದೊಡ್ಡವರು ತಾವೇ ಕುಳಿತು ನಿರ್ದೇಶಿಸಿದರೆ, ಅವರು ಅದರ ಬೆಂಬತ್ತಿ ಹೋಗಲು ಪ್ರಾರಂಭಿಸುವರು. ಇದರಿಂದ ಅವರಿಗೂ ತಮ್ಮ ಕುತೂಹಲ ಮತ್ತು ಆಸಕ್ತಿಯ ಕ್ಷೇತ್ರದಲ್ಲಿ ಕಲಿಕೆಯು ವಿಸ್ತಾರಗೊಳ್ಳುವುದು ಸಂತೋಷ ತರುವುದು.

8.ಒಟ್ಟಾರೆ ಮಕ್ಕಳಿಗೆ ಬೋರ್ ಹೊಡೆಯಲು, ವ್ಯರ್ಥ ಕಾಲಕ್ಷೇಪಕ್ಕೆ ಅವಕಾಶ ಕೊಡದೇ ನಾನಾ ರೀತಿಯ ಕ್ಷೇತ್ರದಲ್ಲಿ ತೊಡಗಿಸುವುದರಿಂದ ಅಥವಾ ಸಾಂಸ್ಕೃತಿಕ, ಕಲೆ, ಸಾಹಿತ್ಯ, ನಿಸರ್ಗ, ಸಾಮಾನ್ಯ ಜ್ಞಾನ; ಹೀಗೆ ಇತ್ಯಾದಿ ವಿಷಯಗಳಲ್ಲಿ ಆಸಕ್ತಿ ಮೂಡಿಸುವಂತೆ ಮಾಡಿ ಅವುಗಳಲ್ಲಿ ತೊಡಗುವಂತೆ ಮಾಡುವುದರಿಂದ ತಮ್ಮ ಸಮಯ ವ್ಯರ್ಥವಾಗದೇ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಅವರದಾಗಿರುತ್ತದೆ. ಹಾಗಾಗಿ ಅವರು ಅಂತರ್ಜಾಲವನ್ನು ಅಗತ್ಯಕ್ಕೆ ತಕ್ಕಂತೆ ಬಳಸುವುದನ್ನು ಕಲಿಯುತ್ತಾರೆ. ಇಷ್ಟಾದರೆ ಸೈಬರ್ ಸೈತಾನನಾಗದೇ ವರದಾನವಾಗಲು ಸಾಧ್ಯ.

► ಬಳಸುವುದರ ಬದಲು ಗೀಳಾದರೆ

ಯಾವುದೇ ತಂತ್ರಜ್ಞಾನವು ತನ್ನದೇ ಆದಂತಹ ಇತಿಮಿತಿಗಳನ್ನು ಮತ್ತು ವ್ಯಾಪ್ತಿಗಳನ್ನು ಒಳಗೊಂಡಿರುತ್ತದೆ. ಅಂತರ್ಜಾಲವೂ ಇದಕ್ಕೆ ಹೊರತಲ್ಲ. ಅದರ ಬಳಕೆಯ ವಿಷಯದಲ್ಲಿಯೂ ಕೂಡಾ ಇದನ್ನು ನೋಡಬಹುದು. ಸದ್ಬಳಕೆ ಅಥವಾ ದುರ್ಬಳಕೆ ಆಗುವುದು ಇದ್ದೇ ಇರುತ್ತದೆ. ಮಕ್ಕಳಿಗೆ ಸದ್ಬಳಕೆಯ ರೂಢಿಯನ್ನು ಮಾಡಿಸುವುದರ ಜವಾಬ್ದಾರಿ ಖಂಡಿತ ದೊಡ್ಡವರದೇ. ಅದರಲ್ಲೂ ಅಂತರ್ಜಾಲದ ವ್ಯಾಪಕತೆ ವ್ಯಕ್ತಿಯ ಗುಪ್ತ ತೆವಲುಗಳ, ಸುಪ್ತ ಆಸೆಗಳನ್ನೆಲ್ಲಾ ರಹಸ್ಯವಾಗಿ ಅಥವಾ ಖಾಸಗಿಯಾಗಿ (ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ) ಪೋಷಿಸುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಇದರಿಂದಾಗಿಯೇ ಅಂತರ್ಜಾಲದ ಬಳಕೆಯು ಬರಿಯ ಉದ್ದೇಶ ಮತ್ತು ಅಗತ್ಯಗಳಿಗೆ ಮಾತ್ರ ಸೀಮಿತಗೊಳ್ಳದೇ ಗೀಳಾಗಿಯೂ ಪರಿಣಮಿಸುತ್ತದೆ. ಕೆಲಸವಿರಲಿ ಇಲ್ಲದಿರಲಿ ಅಂತರ್ಜಾಲದ ಮೊರೆ ಹೋಗುತ್ತಿದ್ದಾರೆಂದರೆ, ಅವರು ಗೀಳಿನ ರೋಗಕ್ಕೆ ಬಲಿಯಾಗುತ್ತಿರುವ ಲಕ್ಷಣಗಳನ್ನು ತೋರುತ್ತಿದ್ದಾರೆಂದೇ ಅರ್ಥ. ಸ್ವಲ್ಪ ಬೆಳೆದ ಮಕ್ಕಳಿಗೆ (ಹೈಸ್ಕೂಲ್ ವಿದ್ಯಾರ್ಥಿಗಳಿಗೆ) ದುರ್ಬಳಕೆಯ ಪರಿಣಾಮಗಳನ್ನು ಕೂಡಾ ತಿಳಿಸಬಹುದು. ಇದರ ಜೊತೆಗೆ ಸೈಬರ್ ಕ್ರೈಂ ಬಗ್ಗೆ ಇರುವಂತಹ ಕಟುಸತ್ಯಗಳನ್ನು, ಕಠಿಣ ಕ್ರಮಗಳನ್ನು ತಿಳಿಸಬೇಕು. ಸೈಬರ್ ಅಪರಾಧಗಳಿಂದ ದೊರಕುವ ಶಿಕ್ಷೆ ಮತ್ತು ಅದರ ಗಂಭೀರ ಸ್ವರೂಪವನ್ನು ಕೂಡಾ ಅರಿವಿಗೆ ತರಬೇಕು. ಆದರೆ, ಇಷ್ಟಕ್ಕೆಲ್ಲದರ ಮೊದಲೇ ಮಕ್ಕಳು ಸಣ್ಣವರಿರುವಾಗಲೇ ಅವರಿಗೆ ಅಂತರ್ಜಾಲವನ್ನು ತಮ್ಮ ಉದ್ದೇಶಕ್ಕೆ ಮತ್ತು ಅಗತ್ಯಕ್ಕೆ ತೆಗೆದು ಬೇಕಾದ ಮಾಹಿತಿ ಮತ್ತು ವಿವರಗಳನ್ನು ಪಡೆಯುವುದನ್ನು ಕಲಿಸಿಕೊಟ್ಟರೆ, ಅಂತರ್ಜಾಲದಲ್ಲಿ ಯಾವ ಕೆಲಸವಾಗಬೇಕೋ ಅದನ್ನು ಮಾಡಿದ ಕೂಡಲೇ ಮುಚ್ಚುವ ರೂಢಿಯನ್ನು ಮಾಡಿಸಿದರೆ ಮುಂದಿನ ಕಷ್ಟಗಳೇನೂ ಇರುವುದೇ ಇಲ್ಲ. ಒಟ್ಟಾರೆ ದೊಡ್ಡವರು ಅಂತರ್ಜಾಲದ ವಿಷಯದಲ್ಲಿ ತಾವು ಶಿಸ್ತುಕ್ರಮವನ್ನು ಅಳವಡಿಸಿಕೊಂಡರೆ ಅದೇ ಮಾದರಿಯನ್ನು ಮಕ್ಕಳೂ ಅನುಸರಿಸಬಹುದು. ಅಂತರ್ಜಾಲದಲ್ಲಿ ಆಡಿಕೊಂಡಿರುವುದು, ಸುಮ್ಮನೆ ಹುಡುಕುತ್ತಾ ಮಾಡುವ ಕೆಲಸವನ್ನು ಬಿಟ್ಟು ಅಲೆದಾಡಿಕೊಂಡಿರುವುದು, ಫೇಸ್‌ಬುಕ್, ವಾಟ್ಸ್ ಆ್ಯಪ್ ಇತ್ಯಾದಿಗಳನ್ನು ಪದೇ ಪದೇ ತೆಗೆಯುವುದು, ಗೊತ್ತುಗುರಿ ಇಲ್ಲದೇ ಅಂತರ್ಜಾಲದಲ್ಲಿ ತಡಕಾಡಿಕೊಂಡಿರುವುದೆಲ್ಲವೂ ಕೂಡಾ ಫಿಯರ್ ಆಪ್ ಮಿಸ್ಸಿಂಗ್ ಔಟ್ (ಫೋಮೋ) ರೋಗದ ಲಕ್ಷಣಗಳೇ. ಇದರಿಂದ ಮಾನಸಿಕವಾಗಿ ದುರ್ಬಲರಾಗುವುದರ ಜೊತೆಗೆ ಭಾವನಾತ್ಮಕವಾಗಿ ಖಿನ್ನರೂ ಆಗುತ್ತಾರೆ. ಖಿನ್ನತೆ ಮತ್ತು ಅಂತರ್ಮುಖಿಗಳಾಗುವುದಕ್ಕೆ ಇಂತಹ ರೂಢಿಗಳು ಪ್ರಚೋದಿಸುತ್ತವೆ. ಎಷ್ಟೋ ಸಲ ಹೆಸರಿಸಲಾಗದಂತಹ ಗೀಳುಗಳಿಗೆಲ್ಲಾ ಮಕ್ಕಳು ಮತ್ತು ದೊಡ್ಡವರು ಕೂಡಾ ಬಲಿಯಾಗುವುದು ಉಂಟು. ಒಟ್ಟಾರೆ ಹೇಳುವುದಿಷ್ಟೇ ಸೈತಾನ ವರದಾನವಾಗುವುದು ನಮ್ಮ ರೂಢಿಯ ಅನುಸಾರವಾಗುತ್ತದೆ. ನಮ್ಮ ಉದ್ದೇಶ ಮತ್ತು ಕಾರ್ಯತತ್ಪರತೆಗಳೇ ನಮ್ಮನ್ನು ಅಂತರ್ಜಾಲದಿಂದ ಹುಟ್ಟುವ ಯಾವುದೇ ಬಗೆಯ ಮನೋರೋಗದಿಂದ ಕಾಪಾಡುವುದು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News