ಮೇರಾ ❤ 13 7: ನಾವು ಗುರುತಿಸದ ಸೃಜನಶೀಲರು 'ಆಟೋ ಚಾಲಕರು'

Update: 2019-01-28 17:37 GMT

ಸೃಜನಶೀಲ ಬರವಣಿಗೆಯೆಂದರೆ ಸಾಹಿತಿಗಳು ಬರೆಯುವ ಕತೆ, ಕವನ, ಲಲಿತಪ್ರಬಂಧ ನಾಟಕಗಳು ಇತ್ಯಾದಿ ಮಾತ್ರವಲ್ಲ. ಸೃಜನಶೀಲ ಬರವಣಿಗೆ ಮಾಡುವವರೆಲ್ಲಾ ಸಾಹಿತಿಗಳಾಗಬೇಕೆಂದೇನೂ ಇಲ್ಲ. ನನ್ನ ಪ್ರಕಾರ ಸಾಹಿತಿಗಳ ಹೊರತಾಗಿ ಅತೀ ಹೆಚ್ಚು ಸೃಜನಶೀಲತೆಯಿರುವ ಬರಹಗಾರರು ಆಟೋ ಡ್ರೈವರ್ ಗಳು. ಸುಮ್ಮನೇ ನೀವು ನಗರದ ಮುಖ್ಯ ಬಸ್ ನಿಲ್ದಾಣದಲ್ಲೋ, ರೈಲ್ವೆ ನಿಲ್ದಾಣದಲ್ಲೋ ಒಂದರ್ಧ ಗಂಟೆ ಗಮನಿಸಿದರೆ ಅವರ ಸೃಜನಶೀಲತೆ ನಿಮ್ಮ ಅರಿವಿಗೆ ಬರಬಹುದು.

ಕೆಲವು ಆಟೋಗಳಲ್ಲಿ ಖ್ಯಾತನಾಮರ ನುಡಿಮುತ್ತುಗಳಿರುತ್ತವೆಯಾದರೆ ಮತ್ತೆ ಕೆಲವು ಆಟೋಗಳಲ್ಲಿ ಅಪಘಾತಕ್ಕೆ ಸಂಬಂಧಿಸಿದಂತಹ ಎಚ್ಚರಿಕೆ ನೀಡಬಲ್ಲ ಸೃಜನಶೀಲ ವಾಕ್ಯಗಳಿರುತ್ತವೆ. ಯುವ ಆಟೋ ಡ್ರೈವರ್ ಗಳ ಆಟೋಗಳಲ್ಲಿ ಪ್ರೇಮ, ವಿರಹ, ನೋವು ಮುಂತಾದ ವಿಷಯದ ಮೇಲೆ ಬರೆಯಲಾದ ಸೃಜನಶೀಲ ಬರಹಗಳಿರುತ್ತವೆ. ಕೆಲವು ಆಟೋ ಡ್ರೈವರ್ ಗಳಂತೂ ಕಾಲ ಕಾಲಕ್ಕೆ ಅಪ್ಡೇಟ್ ಆಗುತ್ತಿರುತ್ತಾರೆ. ಕಾಲಕಾಲಕ್ಕೆ ತಮ್ಮ ವಾಹನಗಳ ಮೇಲೆ ಬರೆದ ಸೃಜನ ಶೀಲ ವಾಕ್ಯಗಳನ್ನು ಬದಲಾಯಿಸುತ್ತಿರುತ್ತಾರೆ. ಹಿಂದೆಲ್ಲಾ ಅನೇಕ ಆಟೋ ಡ್ರೈವರ್ ಗಳು ಉತ್ತಮ ಓದುಗರೂ ಆಗಿದ್ದರು. ಸಾಮಾನ್ಯವಾಗಿ ಅವರು ವೈಟಿಂಗ್ ಲೈನಲ್ಲಿರುವಾಗ ಪತ್ರಿಕೆಗಳನ್ನು, ಮ್ಯಾಗಝಿನ್ ಗಳನ್ನು ಓದುತ್ತಿದ್ದರು.‌ ನಾನು ಗಮನಿಸಿದಂತೆ ಅನೇಕ ಆಟೋ ಡ್ರೈವರ್ ಗಳಿಗೆ ಪತ್ರಿಕೆಗಳಲ್ಲಿ ಬರುತ್ತಿದ್ದ "ಪದಬಂಧ" ಭರ್ತಿ ಮಾಡುವ ವಿಪರೀತ ಅಭ್ಯಾಸವಿತ್ತು. ಕೆಲವರು ‘ಸುಡೋಕು’ ಎಂಬ ಗಣಿತದ ಕಾಲಂ ಭರ್ತಿ ಮಾಡುತ್ತಿದ್ದರು.

ಪದಬಂಧಗಳಿಂದ ನಮ್ಮ ಮೆದುಳಿಗೆ ಮೇವು ಮಾತ್ರವಲ್ಲದೇ ನಮ್ಮಲ್ಲಿನ ಶಬ್ಧ ಸಂಪತ್ತು ಅಭಿವೃಧಿಯಾಗುತ್ತದೆ. ಸುಡೋಕು ಕೂಡಾ ಮೆದುಳಿಗೆ ಒಳ್ಳೆಯ ಕೆಲಸ ನೀಡುತ್ತದೆ. ಈಗೀಗ ಎಲ್ಲರ ಕೈಯಲ್ಲೂ ದೊಡ್ಡ ದೊಡ್ಡ ಮೊಬೈಲ್ ಫೋನ್ ಗಳು ಬಂದು ಪತ್ರಿಕೆ ಓದುವ ಅಭ್ಯಾಸ ಕಡಿಮೆಯಾಗಿ ವಾಟ್ಸಾಪ್, ಫೇಸ್ ಬುಕ್ ನಲ್ಲಿ‌ ಮುಳುಗಿಹೋಗಿದ್ದಾರೆ.‌

ಅದಾಗ್ಯೂ ಆಟೋ ಡ್ರೈವರ್ ಗಳಲ್ಲಿ ಓದುವ ಹವ್ಯಾಸ ತೀರಾ ಕ್ಷೀಣಿಸಿದೆ ಎನ್ನಲಾಗದು. ಆಟೋ ಡ್ರೈವರ್ ಗಳ ಸೃಜನಶೀಲ ಪದಗಳ, ಬರಹಗಳ, ವಾಕ್ಯಗಳ ಕೆಲವು ಉದಾಹರಣೆ ನೋಡೋಣ.

ಬಾಡಿಗೆಗಾಗಿ ಬರೆಯುವ ಬದಲಾಗಿ ನಿಮಗಾಗಿ ಎಂಬ ಪದವನ್ನು ಕಾಣಬಹುದು.

ತನ್ನ ಆಟೋದ ಬಗ್ಗೆ ಡ್ರೈವರ್ ‘ಬಡವರ ಬೆಂಝ್’ ಎಂದು ಬರೆದುದನ್ನು ನೀವು ನೋಡಿರಬಹುದು.

‘ನಾವಿರುವುದೇ ನಿಮಗಾಗಿ’ ಎನ್ನುವುದನ್ನು ಇಂಗ್ಲಿಷ್ ನಲ್ಲಿ ವ್ಯಾಕರಣ ರಹಿತವಾಗಿ ಬರೆದುದನ್ನು ನೀವು ನೋಡಿರಬಹುದು. ಇದರಲ್ಲಿ ಅವನ್ನು ಸ್ವಲ್ಪ ಡಿಫರೆಂಟಾಗಿ ಹೇಗೆ ಬರೆಯಬಹುದೆಂದು ಆಟೋ ಡ್ರೈವರ್ ಗಳು ಹೀಗೆ ತೋರಿಸಿಕೊಡುತ್ತಾರೆ.

V R 4 U-ವಿ ಆರ್ ಫಾರ್ ಯೂ...., ಮೇರಾ ❤ 13  7 (ಮೇರಾ ದಿಲ್ ತೇರಾ ಸಾಥ್) ಇವನ್ನೆಲ್ಲಾ ನೀವು ನೋಡಿರಬಹುದು.

ಇನ್ನು ಕೆಲವು‌ ಆಟೋಗಳ ಹಿಂದೆ ಅಂತರ ಕಾಯ್ದುಕೊಳ್ಳಿ ಎನ್ನುವುದನ್ನು Don't kiss me ಎಂದು ಸೃಜನಶೀಲವಾಗಿ ಬರೆದಿರುತ್ತದೆ. ಅತೀ ವೇಗದ ಚಲಾವಣೆಯನ್ನು ವಿರೋಧಿಸುವ ಕೆಲವು ಕೋಟ್ ಗಳನ್ನು ನೀವು ಗಮನಿಸಿರಬಹುದು.  ‘ನಿಮ್ಮ ಮನೆಯವರು ನಿಮಗಾಗಿ ಕಾಯುತ್ತಿದ್ದಾರೆ’…

ಇವುಗಳನ್ನೆಲ್ಲಾ ಬೇರೆ ವಾಹನಗಳಲ್ಲಿ ಕಾಣಬಹುದಾದರೂ ಇಂತಹ ಸೃಜನಶೀಲತೆಯಲ್ಲಿ ಆಟೋ ಡ್ರೈವರ್ ಗಳದ್ದು ಎತ್ತಿದ ಕೈ.

ಇನ್ನು ಇತರ ವೃತ್ತಿಯವರ ಸೃಜನಶೀಲ ನಾಮಫಲಕಗಳ ಒಂದೆರಡು ಉದಾಹರಣೆ ನೋಡೋಣ. ನನ್ನ ಪಾಲಿಕ್ಲಿನಿಕ್ ನ ಪಕ್ಕ ಒಂದು ಬುರ್ಖಾ ಅಂಗಡಿಯಿದೆ. ಅದರ ಹೆಸರು ‘ಪುದಿಯೊ ಬುರ್ಖಾ’ ಅರ್ಥಾತ್ ‘ಹೊಸ ಬುರ್ಖಾ’…… ಕೆಲವು ಮುಸ್ಲಿಂ ಮಹಿಳೆಯರಲ್ಲಿ ಬುರ್ಖಾ ಕ್ರೇಝ್ ತುಂಬಾ ಜೋರಾಗಿದೆ. ಬುರ್ಖಾ ವಾಸ್ತವದಲ್ಲಿ ದೇಹ ಮುಚ್ಚಲಿರುವ ಒಂದು ಉಡುಗೆಯಾದರೂ ಅವುಗಳಲ್ಲಿ ತಿಂಗಳಿಗೊಂದರಂತೆ ನವನವೀನ ಫ್ಯಾಶನ್ ಗಳು ಬರುತ್ತಿರುತ್ತವೆ. ಮಹಿಳೆಯರ ಈ ಮನೋಸ್ಥಿತಿಯನ್ನರಿತ ಬುದ್ಧಿವಂತ ವ್ಯಾಪಾರಿ ತನ್ನ ಅಂಗಡಿಗೆ ‘ಪುದಿಯೊ ಬುರ್ಖಾ’ ಎಂದೇ ಹೆಸರಿಟ್ಟ. ಇಂತಹದ್ದೊಂದು ಹೆಸರಿಟ್ಟರೆ ಎರಡು ಲಾಭವಿದೆ. ಒಂದನೆಯದಾಗಿ ಈ ಸೃಜನಶೀಲ ಹೆಸರೇ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ. ಎರಡನೆಯದಾಗಿ ಮತ್ತೆ ಆತ ತನ್ನಲ್ಲಿ ವಿನೂತನ ಮಾದರಿಯ ಬುರ್ಖಾಗಳಿವೆ ಎಂದು ವಿವರಿಸಬೇಕಾಗಿಲ್ಲ.

ನಮ್ಮ ಬ್ಯಾರಿ ಯುವಕರು ಗೆಳೆಯರನ್ನು ‘ಅಲಿಯಾ’ ಎಂದು ಕರೆಯುವುದು ಸರ್ವೇ ಸಾಮಾನ್ಯ. ‘ಅಲಿಯಾ’ ಎಂದರೆ ಬ್ಯಾರಿ ಮತ್ತು ಮಲಯಾಳಂ ಭಾಷೆಯಲ್ಲಿ ಬಾವ ಎಂದರ್ಥ. ಸಾಮಾನ್ಯವಾಗಿ ಪಡ್ಡೆಹುಡುಗರು ಸಂಜೆ ಹೊತ್ತು ಪಟ್ಟಾಂಗ ಹೊಡೆಯಲು ಯಾವುದಾದರೂ ಗೂಡಂಗಡಿಗಳನ್ನು ಆಶ್ರಯಿಸುತ್ತಾರೆ. ಅದು ಗೆಳೆಯನ ಗೂಡಂಗಡಿಯೋ ತಟ್ಟಿ ಹೋಟೆಲೋ ಆದರೆ ಅದು ಪಡ್ಡೆಗಳಿಗೆ ತಮ್ಮ ಸ್ವಂತ ಅಂಗಡಿಯಂತೆ. ಇಂತಹ ಪಡ್ಡೆ ಗಿರಾಕಿಗಳನ್ನು ಆಕರ್ಷಿಸಲು ನಮ್ಮ ಕರ್ನಾಟಕ ಕೇರಳದ ಗಡಿನಾಡಾದ ಕಾಸರಗೋಡು ಜಿಲ್ಲೆಯಲ್ಲಿ ಪ್ರಾರಂಭವಾದ ಹೆಸರು ‘ಅಲಿಯಂಡೆ ತಟ್ಟುಕಡೆ’.

ಅದು ಈಗ ಮಂಗಳೂರಿನ ಸುತ್ತ ಮುತ್ತಲ ಬ್ಯಾರಿ ಬಾಹುಳ್ಯದ ಪ್ರದೇಶಗಳಲ್ಲಿ ಒಂದು ಬ್ರ್ಯಾಂಡ್ ಆಗಿ ಬಿಟ್ಟಿದೆ. ಆಮ್ಲೆಟ್ ಚರ್ಮುರಿ ಅಂಗಡಿ, ಬೀಡಾ ಬೀಡಿ ಅಂಗಡಿ, ಸಣ್ಣ ಮಟ್ಟದ ಹೋಟೆಲ್ ಗಳಿಗೆ ಇಂತಹ ಹೆಸರಿರುವುದು ಕಾಣಬಹುದು.

ಸುಮಾರು ಎರಡ್ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರಿಗೆ ಹೋಗುವ ದಾರಿಯಲ್ಲಿ ಬಹುಶಃ ಬಂಟ್ವಾಳ, ಬೆಳ್ತಂಗಡಿಯ ಮಧ್ಯೆ ನೋಡಿದ ಒಂದು ಪುಟ್ಟ ಕ್ಯಾಂಟೀನಿನ ಹೆಸರು ‘ಮಾಮಿಡಪ್ಪ ಕ್ಯಾಂಟೀನ್’ (ಬ್ಯಾರಿ ಭಾಷೆ) ಇದರ ಅರ್ಥ ಅತ್ತೆಯ ತಿಂಡಿ ಕ್ಯಾಂಟೀನ್. ಬ್ಯಾರಿಗಳಲ್ಲಿ‌ ಅತ್ತೆಯ ತಿಂಡಿ ಎಂಬುವುದೊಂದು ವಿಶೇಷ. ಮದುವೆಯ ಮೊದಲ ರಾತ್ರಿ ಮದುಮಗ ಮದುಮಗಳ ಮನೆಗೆ ತನ್ನ ಗೆಳೆಯರ ದಂಡಿನ ಜೊತೆ ಹೋಗುತ್ತಾನೆ. ಆ ದಿನದ ಸತ್ಕಾರ ಕೂಟದ ಹೆಸರು ‘ತಾಲ’. ಈ ತಾಲಕ್ಕೆ ಬರುವ ಹೊಸ ಅಳಿಯ ಮತ್ತು ಆತನ ಗೆಳೆಯರಿಗೆ ಅತ್ತೆ ಮನೆಯಲ್ಲಿ ಹತ್ತಾರು ವಿಧದ ವಿಶೇಷ ತಿಂಡಿಗಳನ್ನು ಮಾಡಿ ಅತ್ತೆಯ ಮನೆಯವರು ಬಡಿಸುತ್ತಾರೆ. ತಾಲಕ್ಕೆ ಮಾಡುವ ರುಚಿ ರುಚಿಯಾದ ತಿಂಡಿಗಳವು. ಅದೇ ಪರಿಕಲ್ಪನೆಯಿಟ್ಟುಕೊಂಡು ಬುದ್ಧಿವಂತ ಮಾಲಕನೊಬ್ಬ ತನ್ನ ಕ್ಯಾಂಟೀನಿಗೆ ‘ಮಾಮಿಡಪ್ಪ ಕ್ಯಾಂಟೀನ್’ ಎಂಬ ಹೆಸರಿಟ್ಟಿದ್ದಾನೆ. ವಿಶೇಷ ತಿಂಡಿಗಳಿವೆ ಎಂಬ ಜಾಹೀರಾತನ್ನು ಈ ವಿಶಿಷ್ಟ ಹೆಸರೇ ಮಾಡುತ್ತದೆ. ಈ ಹೆಸರು ಸೃಜನಶೀಲ ಮನಸ್ಸಿಗೆ ಮಾತ್ರ ಹೊಳೆಯಲು ಸಾಧ್ಯ.

ಕುಸಾಲ್ ಟೀ ಸ್ಟಾಲ್ ಎಂಬ ಗೂಡಂಗಡಿಯನ್ನೂ ನಾನು ಕಂಡಿದ್ದೆ. ಕುಸಾಲ್ ಎಂದರೆ ತಮಾಷೆ ಎಂದರ್ಥ. ‌ಚಹಾ,ಚರ್ಮುರಿ, ಆಮ್ಲೆಟ್ ಮಾರುವ ಆ ಅಂಗಡಿಯ ಹೆಸರೇ ಅಲ್ಲಿನ ಮಾದರಿಯನ್ನು ಸಾರಿ ಹೇಳುತ್ತದೆ. ಹಳ್ಳಿಗಳಲ್ಲಿರುವ ಇಂತಹ ಆಮ್ಲೆಟ್, ಚರ್ಮುರಿ, ಟೀ ಅಂಗಡಿಗಳು ಸಾಮಾನ್ಯವಾಗಿ ಸಂಜೆಯ ಬಳಿಕವೇ ತೆರೆಯುತ್ತದೆ. ತಂತಮ್ಮ ಕಸುಬು ಮುಗಿಸಿ ಬಂದ ಯುವಕರು ಕತ್ತಲೆ ಹೊತ್ತು ಇಂತಹ ಅಂಗಡಿಗಳಲ್ಲಿ ತಮಾಷೆಯಾಗಿ ಹರಟುತ್ತಾ, ಚರ್ಮುರಿ ತಿನ್ನುತ್ತಾ, ಚಹಾ ಸೇವಿಸುತ್ತಾ ಹೊತ್ತು ಕಳೆಯುವುದೊಂದು ರೂಢಿ. ಇದನ್ನು ಅರ್ಥೈಸಿದ ಬುದ್ಧಿವಂತ ವ್ಯಾಪಾರಿ ತನ್ನ ಅಂಗಡಿಗೆ ಕುಸಾಲ್‌ ಟೀ ಸ್ಟಾಲ್ ಎಂದು ಹೆಸರಿಟ್ಟು ಸೃಜನಶೀಲತೆ ಮೆರೆದಿದ್ದಾನೆ.

ಇತ್ತೀಚೆಗೆ ವಾಟ್ಸಾಪಿನಲ್ಲಿ ಗೆಳೆಯನೊಬ್ಬ ಸರಳವಾದರೂ ಅದ್ಭುತ ಸೃಜನಶೀಲ ಹೆಸರಿರುವ ಹೋಟೆಲ್ ಒಂದರ ನಾಮಫಲಕದ ಚಿತ್ರ ಕಳುಹಿಸಿದ.

‘ಹೋಟೆಲ್ ಎಂದಾವು - ಕಡ ಕೊಡ್ತೆಂಗ್ ಬಂದಾವು’ (ಹೋಟೆಲ್ ಏನಾಗಬಹುದು - ಸಾಲ ಕೊಟ್ರೆ ಬಂದಾಗಬಹುದು)  ನಾವೆಲ್ಲಾ ಹಿಂದಿನಿಂದಲೂ ಅಂಗಡಿ ಹೋಟೆಲ್ ಗಳ ಗಲ್ಲಾದ ಬಳಿ ‘ಸಾಲ ಸ್ನೇಹದ ಕತ್ತರಿ’ ಅಥವಾ ‘ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಎಂಬ ವಾಕ್ಯಗಳನ್ನು ಬರೆದಿರುವುದನ್ನು ನೋಡುತ್ತಿರುತ್ತೇವೆ. ಈ ಹೋಟೆಲ್ ನ ಪುಣ್ಯಾತ್ಮನಂತೂ ಅತ್ಯಂತ ತಮಾಷೆಯಾಗಿ ತನ್ನ ಹೋಟೆಲಿನ ಹೆಸರಲ್ಲೇ ಎಲ್ಲವನ್ನೂ ಹೇಳುತ್ತಾನೆ. ಈ ವಿಶಿಷ್ಟ ಸೃಜನಶೀಲತೆಯು ಜನರನ್ನು ಆಕರ್ಷಿಸುವುದರಿಂದ ಮೊದಲ ದಿನಗಳಿಂದಲೇ ಒಳ್ಳೆಯ ವ್ಯಾಪಾರವಾಗಲೂಬಹುದು.‌

ಆತ  ರುಚಿ ಶುಚಿಯಲ್ಲಿ ಗುಣಮಟ್ಟ ಮತ್ತು ದರದಲ್ಲಿ ನ್ಯಾಯ ಕಾಯ್ದುಕೊಂಡರೆ ಈ ಹೆಸರೇ ಒಳ್ಳೆಯ ವ್ಯಾಪಾರಕ್ಕೆ ರಹದಾರಿಯಾಗಬಹುದು. ಹೆಸರಲ್ಲೇನಿದೆ ಎಂದು ಅನೇಕರು ಹೇಳುತ್ತಿರುತ್ತಾರೆ. ಆದರೆ ನಮ್ಮ ಜನ ತಮ್ಮ ವಿಶಿಷ್ಟ ಸೃಜನಶೀಲತೆಯಿಂದ ಹೆಸರಲ್ಲಿ ಎಲ್ಲವೂ ಇದೆ ಎಂದು ಸಾಬೀತು ಮಾಡುತ್ತಿರುತ್ತಾರೆ.

ಒಟ್ಟಿನಲ್ಲಿ ಸೃಜನಶೀಲತೆ ಕೇವಲ ಸಾಹಿತಿ, ಕಲಾವಿದರ ಸ್ವತ್ತಲ್ಲ.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News