ಮಾನವ ಹಕ್ಕು ಹೋರಾಟಗಾರನಿಂದ ಗುಜರಾತ್ ಗಲಭೆಯ ಸಮರ್ಥಕನವರೆಗೆ
ಜನತಾ ಪಾರ್ಟಿ ಇಬ್ಭಾಗವಾಗುವುದರೊಂದಿಗೆ ಜಾರ್ಜ್ ಫೆರ್ನಾಂಡಿಸ್ ರ ರಾಜಕೀಯ ಅಧಃಪತನ ಆರಂಭವಾಯಿತು. ಅವರು ಮೊರಾರ್ಜಿ ದೇಸಾಯಿ ಸರಕಾರವನ್ನು ಬೆಂಬಲಿಸಿದ ಮರುದಿನವೇ ಬಂಡಾಯ ಗುಂಪಿಗೆ ನಿಷ್ಠೆ ಬದಲಾಯಿಸುವ ಮೂಲಕ ದಶಕಗಳಿಂದ ಕಷ್ಟಪಟ್ಟು ಸಂಪಾದಿಸಿದ್ದ ರಾಜಕೀಯ ವಿಶ್ವಾಸಾರ್ಹತೆಯನ್ನೇ ಕಳಕೊಂಡು ಬಿಟ್ಟರು. ಮಂಡಲ್ ಚಳವಳಿಯ ಬಳಿಕ ಅವರಿಗೆ ಭಾರತೀಯ ರಾಜಕೀಯದಲ್ಲಿ ಬೆಳವಣಿಗೆಗೆ ಸೂಕ್ತ ವಾತಾವರಣ ಸಿಗಲಿಲ್ಲ. ಅವರಿಗೆ ಲಾಲು ಯಾದವ್ ರಂತಹ ನಾಯಕರಂತೆ ಕಟ್ಟಿಟ್ಟ ವೋಟ್ ಬ್ಯಾಂಕ್ ಇರಲಿಲ್ಲ. ಮೊದಲು ಮುಂಬೈ ಯಲ್ಲಿ , ಬಳಿಕ ಬಿಹಾರದಲ್ಲಿ ತಮ್ಮ ಜನಪ್ರಿಯತೆಯನ್ನೇ ಅವರು ನೆಚ್ಚಿಕೊಂಡಿದ್ದರು. ಕ್ರೈಸ್ತರಾಗಿದ್ದರೂ ಅವರು ರಾಜಕೀಯಕ್ಕೆ ಅಲ್ಪಸಂಖ್ಯಾತ ಕಾರ್ಡ್ ಬಳಸಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಏಳು ಭಾಷೆಗಳನ್ನು ಮಾತಾಡುತ್ತಿದ್ದ ಜಾರ್ಜ್ ಬಹುತ್ವ ಭಾರತದ ನಿಜವಾದ ಸಂಕೇತದಂತಿದ್ದರು.
ನಿತೀಶ್ ಅಥವಾ ಲಾಲು ಅವರಿಗೆ ಜಾರ್ಜ್ ರಂತಹ ನಾಯಕರು ತಮಗಿಂತ ಹೆಚ್ಚು ಬಿಹಾರದಲ್ಲಿ ಬೆಳೆಯುವುದು ಬೇಕಿರಲಿಲ್ಲ. ಆಗಲೇ ರಾಷ್ಟ್ರೀಯ ರಾಜಕಾರಣದಲ್ಲಿ ತಮ್ಮ ಮಹತ್ವ ಉಳಿಸಿಕೊಳ್ಳಲು ಜಾರ್ಜ್ ಬಿಜೆಪಿಯತ್ತ ವಾಲಿದರು. ಅಟಲ್, ಅಡ್ವಾಣಿ ಜೊತೆ ಅವರಿಗೆ ಅತ್ಯುತ್ತಮ ಬಾಂಧವ್ಯವಿತ್ತು. ಆದರೆ ಬಿಜೆಪಿ ಜೊತೆಗಿನ ಸಖ್ಯ ಅವರ ರಾಜಕೀಯ ವಿಶ್ವಾಸಾರ್ಹತೆಯ ಶವ ಪೆಟ್ಟಿಗೆ ಮೇಲಿನ ಕೊನೆಯ ಮೊಳೆಯಾಗಿ ಪರಿವರ್ತನೆಯಾಯಿತು.
2002 ರ ಗುಜರಾತ್ ಗಲಭೆಯ ಬಳಿಕ ನರೇಂದ್ರ ಮೋದಿಯನ್ನು ಸಮರ್ಥಿಸಿಕೊಳ್ಳುವ ಹಂತಕ್ಕೆ ತಲುಪಿದರು ಜಾರ್ಜ್ . ಅದು ಅವರ ರಾಜಕೀಯ ಬದುಕಿನ ದುರಂತಗಳಲ್ಲೇ ಅತ್ಯಂತ ದಯನೀಯವಾದ ಹಂತವಾಗಿತ್ತು. ಭಾರತದಲ್ಲಿ ಅಂತರ್ ರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳನ್ನು ಪ್ರತಿನಿಧಿಸುತ್ತಿದ್ದ ಧೀಮಂತ ನಾಯಕ ಜಾರ್ಜ್ ಅವರ ಇಡೀ ಬದುಕಿನ ಅತಿದೊಡ್ಡ ದುರಂತವಾಗಿ ಅದು ದಾಖಲಾಯಿತು.
ಅವರ ರೋಮಾಂಚಕಾರಿ ರಾಜಕೀಯ ಬದುಕು ಹಾಗು ಸ್ವಾತಂತ್ರ್ಯದ ಬಳಿಕ ಜನಕೇಂದ್ರಿತ ರಾಜಕಾರಣದಲ್ಲಿ ಅವರ ಮಹತ್ತರ ಪಾತ್ರ ಅವರ ಕೊನೆಯ ವರ್ಷಗಳ ರಾಜಕೀಯ ಹರಾಕಿರಿ ಗಳಿಂದ ಮಬ್ಬಾಗಿ ಹೋಯಿತು. ಅದಕ್ಕೆ ಹೇಳುತ್ತೇನೆ , ಫೆರ್ನಾಂಡಿಸ್ ರ ಕತೆ ಭಾರತದ ದುರಂತ ಕತೆ. ಏನೇ ಆಗಲಿ , ಅವರದ್ದೊಂದು ವಸ್ತುನಿಷ್ಠ ಜೀವನಕತೆ ಅಥವಾ ಚಲನಚಿತ್ರ ಬರಲೇಬೇಕು. ಏಕೆಂದರೆ ಕೆಟ್ಟವರ ನಡುವೆ ಇದ್ದು ಎದ್ದು ಹೋದ ಒಳ್ಳೆಯವರು ವಾಜಪೇಯಿ ಒಬ್ಬರೇ ಅಲ್ಲ !
ಕೃಪೆ: www.dailyo.in