ಜಾರ್ಜ್ ಫರ್ನಾಂಡಿಸ್- ಕಣ್ಮರೆಯಾದ ಕಾರ್ಮಿಕರ ಕಣ್ಮಣಿ

Update: 2019-01-30 06:07 GMT

ರಾಮಮನೋಹರ ಲೋಹಿಯಾ ಅವರ ಸಮಾಜವಾದ, ಸಂಘಟನೆ ಮತ್ತು ಹೋರಾಟ- ಈ ಮೂಲ ಮಂತ್ರಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದವರಲ್ಲಿ ಜಾರ್ಜ್ ಫರ್ನಾಂಡಿಸ್ ಅಗ್ರಗಣ್ಯರು. ಶೋಷಿತರು, ಶ್ರಮಿಕರ ಪರವಾಗಿ ದಶಕಗಟ್ಟಲೆ ಹೋರಾಡಿದ, ಹೋರಾಟದ ಹಾದಿಯ ಮೂಲಕವೇ ರಾಜಕಾರಣಕ್ಕಿಳಿದ, ಅಧಿಕಾರಕ್ಕೇರಿದ, ಆ ಮೂಲಕ ರಾಜಕಾರಣ ಉಳ್ಳವರ ಸ್ವತ್ತಲ್ಲ, ಬಲಾಢ್ಯರ ಆಡುಂಬೊಲವಲ್ಲ ಎಂಬುದನ್ನು ತೋರಿದವರು. ಪ್ರಜಾಪ್ರಭುತ್ವಕ್ಕೆ ಘನತೆ-ಗೌರವ ತಂದವರು. ಹೋರಾಟ, ಸಂಘಟನೆ, ಸರಳತೆಗಳ ಮೂಲಕ ದೇಶವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದವರು.

ಇಂತಹ ಜಾರ್ಜ್ ಫರ್ನಾಂಡಿಸ್ ದೀರ್ಘಕಾಲದ ಅನಾರೋಗ್ಯದಿಂದಾಗಿ ಇಂದು ನಮ್ಮನ್ನಗಲಿದ್ದಾರೆ. ಮೂಲತಃ ಮಂಗಳೂರಿನವರಾದ, 1930 ಜೂನ್ 3 ರಂದು ಬಡ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ, ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಜಾರ್ಜ್ ಫರ್ನಾಂಡಿಸ್ ಬೆಂಗಳೂರಿಗೆ ಬಂದು ಫಾದರ್ ತರಬೇತಿ ಪಡೆದು ಸಂತನಾಗಲು ಸಿದ್ಧತೆ ನಡೆಸಿದ್ದರು. ಆದರೆ ಅಚಾನಕ್ಕಾಗಿ 1949ರಲ್ಲಿ ಬಾಂಬೆಗೆ ತೆರಳಿ, ಕಮ್ಯುನಿಸ್ಟ್ ಪಕ್ಷ ಸೇರಿ ಕಾರ್ಮಿಕ ಹೋರಾಟಕ್ಕಿಳಿದರು. ಕಾರ್ಮಿಕರ ಕಷ್ಟಗಳಿಗೆ ಕರಗಿ, ಅವರ ನ್ಯಾಯಯುತ ಹಕ್ಕುಗಳಿಗಾಗಿ ಹತ್ತು ಹಲವು ಹೋರಾಟಗಳನ್ನು ಸಂಘಟಿಸಿ ಕಾರ್ಮಿಕ ನಾಯಕನಾಗಿ ಹೊರಹೊಮ್ಮಿದರು. ರೇಲ್ವೆಯಲ್ಲಿ ಕೆಲಸಕ್ಕೆ ಸೇರಿ ಕಾರ್ಮಿಕರನ್ನು ಸಂಘಟಿಸುವ ಮೂಲಕ ಜನಾನುರಾಗಿ ನಾಯಕನಾಗಿ ಬೆಳೆದರು. ಕಾರ್ಮಿಕರ ಕಣ್ಮಣಿಯಾದರು. 1967 ರಲ್ಲಿ, ಹೋರಾಟದ ಮೂಲಕವೇ ರಾಜಕಾರಣಕ್ಕೆ ದುಮುಕಿ, ಅಂದಿನ ಕಾಂಗ್ರೆಸ್ ನಾಯಕ ಎಸ್.ಕೆ.ಪಾಟೀಲರ ವಿರುದ್ಧ ಅಭ್ಯರ್ಥಿಯಾಗಿ, ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 1974ರಲ್ಲಿ ಆಲ್ ಇಂಡಿಯಾ ರೇಲ್ವೆ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ, ಕಾರ್ಮಿಕರನ್ನು ಹೋರಾಟಕ್ಕೆ ಸಜ್ಜುಗೊಳಿಸಿ, ಭಾರತ್ ಬಂದ್‌ಗೆ ಕರೆ ಕೊಟ್ಟು ಇಡೀ ದೇಶದ ಗಮನ ಸೆಳೆದರು.

ಕಾರ್ಮಿಕರ ಹೋರಾಟಗಳಿಗಷ್ಟೆ ಸೀಮಿತವಾಗಿದ್ದ ಜಾರ್ಜ್ ಫರ್ನಾಂಡಿಸ್, 1975ರಲ್ಲಿ, ಇಂದಿರಾಗಾಂಧಿಯವರು ದೇಶದ ಮೇಲೆ ದಿಢೀರೆಂದು ತುರ್ತು ಪರಿಸ್ಥಿತಿ ಹೇರಿದಾಗ, ಇಂದಿರಾ ಗಾಂಧಿಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸಿಡಿದೆದ್ದು ಹೀರೋ ಆದರು. ಕಂಡಕಂಡಲ್ಲಿ ಇಂದಿರಾ ಗಾಂಧಿಯವರನ್ನು ಖಂಡಿಸುವ, ಅವರ ವಿರುದ್ಧ ಸಮರ ಸಾರಿ ಭೂಗತ ಉಗ್ರಗಾಮಿಯ ಪಟ್ಟ ಅಲಂಕರಿಸಿದರು. 1976 ರಲ್ಲಿ ಬರೋಡ ಡೈನಮೇಟ್ ಕೇಸಲ್ಲಿ ಬಂಧಿಸಲ್ಪಟ್ಟು ಜೈಲು ಪಾಲಾದರು. ಆಗಿನ ಸಂದರ್ಭ ಹೇಗಿತ್ತೆಂದರೆ, ಜಾರ್ಜ್ ಫರ್ನಾಂಡಿಸ್ ಮಾಡಿದ್ದನ್ನು ಅವರ ಗೆಳೆಯರು, ಅಭಿಮಾನಿಗಳು, ಹಿಂಬಾಲಕರು ಮಾಡುತ್ತಿದ್ದರು. ಅಷ್ಟರಮಟ್ಟಿಗೆ ಜಾರ್ಜ್ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದರು. ಈ ಬಗ್ಗೆ ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆಯವರು, ‘‘ಜಾರ್ಜ್ ಫರ್ನಾಂಡಿಸ್ ಬರೋಡಾದಲ್ಲಿ ಡೈನಮೇಟ್ ಇಟ್ಟು ಸುದ್ದಿಯಾದರೆ, ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಸಿಟ್ಟು ತೋರಿದರೆ, ನಮ್ಮ ಸಮಾಜವಾದಿ ನಾಯಕ ಜೆ.ಎಚ್.ಪಟೇಲರು ಕಡೂರಿನ ಬಳಿಯ ರೇಲ್ವೆ ಸೇತುವೆಗೆ ಡೈನಮೇಟ್ ಇಟ್ಟುಧ್ವಂಸಗೊಳಿಸಿದ್ದರು. ರೈಲು ಹೋದ ನಂತರ ಸ್ಫೋಟಿಸಿದ್ದರಿಂದ ಯಾವುದೇ ಸಾವು ನೋವು ಸಂಭವಿಸಲಿಲ್ಲ’’ ಎನ್ನುತ್ತಾರೆ. ಆ ಮಟ್ಟಿಗೆ ಆವತ್ತಿನ ದಿನಗಳಲ್ಲಿ ಜಾರ್ಜ್ ಪ್ರಭಾವಿ ನಾಯಕರಾಗಿದ್ದರು. ಯಂಗ್ ಟರ್ಕ್‌ಗಳ ಆರಾದ್ಯದೈವವಾಗಿದ್ದರು.

1977ರಲ್ಲಿ ತುರ್ತು ಪರಿಸ್ಥಿತಿ ತೆರವುಗೊಳಿಸಿದ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗಿ, ಜನತಾ ಪಕ್ಷ ಜಯಭೇರಿ ಬಾರಿಸಿತ್ತು. ಜಾರ್ಜ್ ಫರ್ನಾಂಡಿಸ್‌ರಿಗೆ ದೇಶದಾದ್ಯಂತ ಅಭಿಮಾನಿಗಳಿದ್ದರು. ಕಾಮ್ರೇಡ್‌ಗಳಿದ್ದರು. ಅವರ ಹೋರಾಟಕ್ಕೆ ತಾತ್ವಿಕ ಬೆಂಬಲ ನೀಡುವ ಬುದ್ಧಿಜೀವಿಗಳ ವಲಯವೂ ಇತ್ತು. ಆ ಕಾರಣದಿಂದಾಗಿ, ಆ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡಿಸ್ ಬಿಹಾರಕ್ಕೆ ತೆರಳಿ, ಮುಜಾಫರ್‌ನಗರ ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸತ್ ಪ್ರವೇಶಿಸಿದ್ದರು. ಮೊರಾರ್ಜಿ ದೇಸಾಯಿಯವರ ಕ್ಯಾಬಿನೆಟ್‌ನಲ್ಲಿ ಕೈಗಾರಿಕಾ ಮಂತ್ರಿಯಾಗಿ ಅಧಿಕಾರದ ಸ್ಥಾನಕ್ಕೇರಿದ್ದರು. ಬಂಡವಾಳ ಹೂಡಿಕೆಯ ವಿಷಯದಲ್ಲಿ ಅಮೆರಿಕಾದ ಪ್ರಭಾವಿ ಕೊಕಕೋಲಾ ಕಂಪನಿಯ ವಿರುದ್ಧ ಸಮರ ಸಾರಿ, ದೇಶಕ್ಕೆ ಬರದಂತೆ ತಡೆದಿದ್ದರು. ಅಧಿಕಾರ ಇರಲಿ, ಇಲ್ಲದಿರಲಿ ಬಂಡವಾಳಶಾಹಿಗಳ ವಿರುದ್ಧದ ತಮ್ಮ ಹೋರಾಟ ನಿರಂತರ ಎನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದರು.

ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿ ಸೋತು ಮನೆಯಲ್ಲಿ ಕೂತಿದ್ದಾಗ, ಕರ್ನಾಟಕದಲ್ಲಿ ದೇವರಾಜ ಅರಸರ ಸರಕಾರವಿದ್ದಾಗ, ಇಂದಿರಾ ಗಾಂಧಿಯವರನ್ನು ಮತ್ತೆ ರಾಜಕಾರಣಕ್ಕೆ ಕರೆತರಲು ಅರಸು, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ ಡಿ.ಬಿ.ಚಂದ್ರೇಗೌಡರಿಂದ ರಾಜೀನಾಮೆ ಕೊಡಿಸಿ, ತೆರವಾದ ಸ್ಥಾನದಿಂದ ಇಂದಿರಾ ಗಾಂಧಿಯವರು ಸ್ಪರ್ಧಿಸುವಂತೆ ಮಾಡಿದ್ದರು. ಆಗ ಇಡೀ ದೇಶದ ಕಣ್ಣು, ಕಿವಿ 1978ರ ಚಿಕ್ಕಮಗಳೂರಿನ ಉಪಚುನಾವಣೆಯ ಕದನದತ್ತ ನೆಟ್ಟಿತ್ತು. ಅದಕ್ಕಿಂತಲೂ ಮುಖ್ಯವಾಗಿ ಆ ಕದನ ಇಂದಿರಾಗಾಂಧಿ ವರ್ಸಸ್ ಜಾರ್ಜ್ ಫರ್ನಾಂಡಿಸ್ ಎಂಬಂತಾಗಿತ್ತು.

ಆ ಚುನಾವಣಾ ಸಂದರ್ಭದಲ್ಲಿ ನಡೆದ ಕೆಲವು ಕುತೂಹಲಕರ ಘಟನೆಗಳನ್ನು ಹಿರಿಯ ರಾಜಕಾರಣಿ ಮಾರ್ಗರೆಟ್ ಆಳ್ವ ಅವರು ನೆನಪು ಮಾಡಿಕೊಂಡಿದ್ದು ಹೀಗಿದೆ: ‘‘1978, ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ. ದೇವರಾಜ ಅರಸರು ನನ್ನನ್ನು ಕರೆದು, ಡೆಲ್ಲಿಯಿಂದ ಮೇಡಂ ಬರ್ತರೆ, ಫುಲ್ ಇನ್‌ಚಾರ್ಜ್ ನಿಮ್ಮದು. ಮೇಡಂ ಎಲ್ಲಿ ವಾಸ್ತವ್ಯ ಹೂಡಬೇಕು, ಎಲ್ಲಿ ಭಾಷಣ ಮಾಡಬೇಕು, ಆ ಪ್ರದೇಶದ ಹಿನ್ನೆಲೆ ಏನು, ಯಾರ್ಯಾರನ್ನು ಸಂಘಟಿಸಬೇಕು ಎಂಬುದೆಲ್ಲವನ್ನು ನೀವೇ ಮುಂದೆ ನಿಂತು ಮಾಡಬೇಕು ಎಂದಿದ್ದರು. ಹಾಗಾಗಿ ನಾವು ಒಂದಷ್ಟು ಮಹಿಳಾ ಕಾರ್ಯಕರ್ತರು ಮೇಡಂ ಜೊತೆಯಲ್ಲಿಯೇ ಇರುತ್ತಿದ್ದೆವು. ಚಿಕ್ಕಮಗಳೂರು ಕ್ಷೇತ್ರದ ಯಾವ ಮೂಲೆಗೆ ಹೋದರು, ಮೇಡಂ ನೋಡಲು ಜನ ಮುಗಿ ಬೀಳುತ್ತಿದ್ದರು. ಇಂದಿರಾ ಗಾಂಧಿ ಎದುರು ವೀರೇಂದ್ರ ಪಾಟೀಲ್ ಸ್ಪರ್ಧಿಸಿದ್ದರು. ಅವರಿಗೆ ಬೆಂಬಲವಾಗಿ ಕೇಂದ್ರದ ಜನತಾ ಸರಕಾರವೇ ಚಿಕ್ಕಮಗಳೂರಿನಲ್ಲಿತ್ತು. ಅವರೆಲ್ಲರ ಭಾಷಣದಲ್ಲಿ ಇಂದಿರಾ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯೇ ಮುಖ್ಯ ಅಸ್ತ್ರವಾಗಿತ್ತು. ಆಗಿನ ಯಂಗ್ ಟರ್ಕ್ ಜಾರ್ಜ್ ಫರ್ನಾಂಡಿಸ್ ಆ ಚುನಾವಣೆಯ ಉಸ್ತುವಾರಿ ಹೊತ್ತಿದ್ದರು.

‘’ಈ ಜಾರ್ಜ್ ಫರ್ನಾಂಡಿಸ್ ಇದಾರಲ್ಲ... ಇವರು ಏನು ಮಾಡೋರು ಅಂದರೆ, ನಾವು ಮೇಡಂ ಭಾಷಣ ಎಲ್ಲಿ ಮಾಡಬೇಕು ಎಂಬುದನ್ನು ಮೊದಲೇ ಫಿಕ್ಸ್ ಮಾಡುತ್ತಿದ್ದೆವು. ಸ್ಥಳೀಯ ನಾಯಕರ ಬೆಂಬಲದಿಂದ ಜನರನ್ನು ಕರೆತಂದು ದೊಡ್ಡ ಮಟ್ಟದ ಜಮಾವಣೆ ಮಾಡುತ್ತಿದ್ದೆವು. ಅಲ್ಲಿ ಇಂದಿರಾ ಗಾಂಧಿಯವರ ಭಾಷಣವಿರುತ್ತಿತ್ತು. ನಮ್ಮ ಪಕ್ಷದ ಚುನಾವಣಾ ಪ್ರಚಾರ ಭಾಷಣ ನಡೆಯುತ್ತಿದ್ದಾಗ, ದೂರದ ಪೆಟ್ಟಿಗೆ ಅಂಗಡಿಯ ಮುಂದೆ ಜಾರ್ಜ್ ಒಬ್ಬರೆ ಕೂತು ಟೀ ಕುಡಿಯುತ್ತ್ತಿದ್ದರು. ನಾವು ಭಾಷಣ ಮುಗಿಸಿ ಹೊರಟ ತಕ್ಷಣ, ನಮ್ಮದೇ ಜಾಗದಲ್ಲಿ, ನಮ್ಮದೇ ವೇದಿಕೆಯಲ್ಲಿ, ನಾವು ಕರೆತಂದ ನಮ್ಮದೇ ಜನಕ್ಕೆ, ನಮ್ಮ ವಿರುದ್ಧವೇ ಭಾಷಣ ಮಾಡುತ್ತಿದ್ದರು. ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿ ಮತ್ತು ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ಮುಖ್ಯವಾಗಿಟ್ಟುಕೊಂಡು ತುಳು, ಕೊಂಕಣಿ, ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್.. ಹೀಗೆ ಎಲ್ಲ ಭಾಷೆಗಳಲ್ಲಿ ಭಾಷಣ ಬಿಗಿದು ನಮ್ಮ ಮತದಾರರನ್ನು ಮರುಳು ಮಾಡುತ್ತಿದ್ದರು. ನಮ್ಮನ್ನು ಕಕ್ಕಾಬಿಕ್ಕಿಗೊಳಿಸುತ್ತಿದ್ದರು.

‘’ಇದಾದ ಮೇಲೆ ಮತ್ತೊಂದು ಶಾಕ್, ನಾವು ಮೇಡಂ ಜೊತೆ ಊರೂರು ಸುತ್ತುವಾಗ ಹೆಚ್ಚಿಗೆ ಜನ, ಅದರಲ್ಲೂ ಕಾಂಗ್ರೆಸ್ ಭಾವುಟಗಳನ್ನು ಹಿಡಿದು ನಿಂತ ಗುಂಪು ಕಂಡರೆ, ನಮ್ಮ ಕಾರುಗಳನ್ನು ನಿಲ್ಲಿಸಿ, ಮೇಡಂ ಭಾಷಣ ಮಾಡುತ್ತಿದ್ದರು. ಇದಕ್ಕೂ ಜಾರ್ಜ್ ಬೇರೆಯದೇ ಪ್ಲಾನ್ ಮಾಡಿದ್ದರು. ಭಾವುಟ ಹಿಡಿದು ನಿಂತ ಗುಂಪು ಕಂಡ ತಕ್ಷಣ ನಮ್ಮ ಕಾರುಗಳು ನಿಲ್ಲುತ್ತಿದ್ದಂತೆ, ಭಾವುಟಗಳನ್ನು ಕಳಚಿ, ದೊಣ್ಣೆಯಿಂದ ನಮ್ಮ ಕಾರುಗಳ ಮೇಲೆ ಪ್ರಹಾರ ಮಾಡಿ, ಕಾರಿನ ಗ್ಲಾಸ್‌ಗಳನ್ನು ಪುಡಿ ಪುಡಿ ಮಾಡಿ ನಮ್ಮನ್ನು ದಿಗ್ಭ್ರಾಂತರನ್ನಾಗಿಸುತ್ತಿದ್ದರು. ಆ ಭಾವುಟ ಹಿಡಿದು ನಿಂತಿದ್ದವರು ಅವರೇ ಆಗಿದ್ದರು. ಎರಡು ಮೂರು ಸಲ ಹೀಗೆ ಆದಮೇಲೆ ಎಚ್ಚೆತ್ತುಕೊಂಡ ನಾವು ಇಂದಿರಾ ಮೇಡಂರನ್ನು ಸಣ್ಣ ಕಾರಿನಲ್ಲಿ ಕೂರಿಸಿ, ಹಿಂದೆ ಬರುವಂತೆ ಮಾಡಿ, ದೊಡ್ಡ ಕಾರನ್ನು ಮುಂದೆ ಬಿಡುತ್ತಿದ್ದೆವು. ದೊಡ್ಡ ಕಾರಿನ ಗಾಜು ಪುಡಿಯಾಗುತ್ತಿದ್ದಂತೆ, ಇಂದಿರಾ ಮೇಡಂ ಇದ್ದ ಕಾರನ್ನು ತಕ್ಷಣ ಹಿಂತಿರುಗಿಸಿಕೊಂಡು ಹೋಗಿಬಿಡುತ್ತಿದ್ದೆವು. ಇದೆಲ್ಲದರ ಮುಂಚೂಣಿಯಲ್ಲಿದ್ದವರು ಜಾರ್ಜ್ ಫರ್ನಾಂಡಿಸ್’’ ಎಂದರು. 

ಆ ಚುನಾವಣೆ ಭಾರೀ ಕದನವಾಗಿ ದೇಶದ ಜನರ ಕುತೂಹಲ ಕೆರಳಿಸಿತ್ತು. ವೀರೇಂದ್ರ ಪಾಟೀಲ್ ನೆಪಮಾತ್ರಕ್ಕೆ ಅಭ್ಯರ್ಥಿಯಾಗಿ ಜಾರ್ಜ್‌ರನ್ನು ಮುಂಚೂಣಿಗೆ ತಂದು ನಿಲ್ಲಿಸಿತ್ತು ಎನ್ನುವುದು ದೇಶದ ರಾಜಕೀಯ ಇತಿಹಾಸ ಬಲ್ಲವರಿಗೆಲ್ಲ ಗೊತ್ತಿರುವಂತಹ ವಿಷಯವೇ. ಇಂತಹ ಹಲವು ಘಟನೆಗಳನ್ನು ಮೆಲುಕು ಹಾಕುವ ಮಾರ್ಗರೆಟ್ ಆಳ್ವಾ ಅವರು, ‘‘78ರ ಚಿಕ್ಕಮಗಳೂರು ಚುನಾವಣೆಯಲ್ಲಿ ನಮ್ಮನ್ನೆಲ್ಲ ಬೆಚ್ಚಿಬೀಳಿಸಿದ ಜಾರ್ಜ್, 80 ರಲ್ಲಿ ದೇವರಾಜ ಅರಸು ಅಧಿಕಾರದಿಂದ ಕೆಳಗಿಳಿದಿದ್ದಾಗ, ಮತ್ತೊಮ್ಮೆ ನನ್ನನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಾಗ, ಜಾರ್ಜ್ ತೆಗೆದುಕೊಂಡ ಜಾತ್ಯತೀತ ನಿಲುವು, ಅವರನ್ನು ಮೆಚ್ಚುವಂತೆ ಮಾಡಿತ್ತು. ಅರಸು ಅವರು, ನೀವು ರಾಜ್ಯಸಭೆಗೆ ಯುನೈಟೆಡ್ ಅಪೊಸಿಷನ್ ಕ್ಯಾಂಡಿಡೇಟ್ ಆಗಿ ನಾಮಿನೇಷನ್ ಫೈಲ್ ಮಾಡಿ ಎಂದರು. ನಾನು ಗೆಲ್ಲುವುದು ಯಾವ ರಾಜಕೀಯ ಲೆಕ್ಕಾಚಾರದಿಂದಲೂ ಸಾಧ್ಯವಿಲ್ಲ ಎನ್ನುವುದು ನನಗೆ ಗೊತ್ತಿತ್ತು. ಆದರೆ ಅರಸರ ಆತ್ಮವಿಶ್ವಾಸದ ಮುಂದೆ ನನ್ನದೇನೂ ನಡೆಯುವಂತಿರಲಿಲ್ಲ. ಅವರ ಆ ಖಡಕ್ ಮಾತಿಗೆ ಕಟ್ಟುಬಿದ್ದು ಅನ್ಯಮನಸ್ಕಳಾಗಿಯೇ ನಾಮಿನೇಷನ್ ಫೈಲ್ ಮಾಡಿದೆ. ನನ್ನನ್ನು ಸೋಲಿಸಲು ಮುಖ್ಯಮಂತ್ರಿ ಗುಂಡೂರಾವ್ ಮತ್ತೊಬ್ಬ ಮಹಿಳೆ, ಸರೋಜಿನಿ ಮಹಿಷಿಯನ್ನು ಫೀಲ್ಡ್ ಮಾಡಿದ್ದರು- ಓಟ್ ಡಿವೈಡ್ ಮಾಡಲಿಕ್ಕೆ. ಆದರೆ ಅರಸು ಲೆಕ್ಕಾಚಾರವೇ ಬೇರೆ ಇತ್ತು. ಆಡಳಿತ ಪಕ್ಷ ಕಾಂಗ್ರೆಸ್ಸನ್ನು ಬಿಟ್ಟು ಮಿಕ್ಕೆಲ್ಲ ವಿರೋಧ ಪಕ್ಷಗಳ ನಾಯಕರೊಂದಿಗೆ ಒನ್ ಟು ಒನ್ ಮಾತನಾಡಿ, ಮನವಿ ಮಾಡಿಕೊಂಡರು. ದೆಹಲಿಯಿಂದ ಸಮತಾ ಪಕ್ಷದ ನಾಯಕ ಜಾರ್ಜ್ ಫರ್ನಾಂಡಿಸ್ ನನ್ನ ಬೆಂಬಲಿಸಿ, ‘10 ಜನ ಮಹಿಷಿಗಿಂತ ಒಬ್ಬ ಮಾರ್ಗರೆಟ್ ಆಳ್ವ ಮುಖ್ಯ’·ಎಂದು ದೇವೇಗೌಡರಿಗೆ ಟೆಲಿಗ್ರಾಂ ಕೊಟ್ಟು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದರು. ನಾನು ಗೆದ್ದಿದ್ದೆ. ಅದಕ್ಕೆ ಕಾರಣ ಅರಸು, ಜಾರ್ಜ್ ಮತ್ತು ದೇವೇಗೌಡರಂತಹ ನಾಯಕರ ಜಾತ್ಯತೀತ ನಿಲುವು’’·ಎಂದು ನೆನಪು ಮಾಡಿಕೊಳ್ಳುತ್ತಾರೆ.

ಜಾರ್ಜ್‌ರದ್ದು ಬರೀ ಸೈದ್ಧಾಂತಿಕ ಹೋರಾಟವಷ್ಟೇ ಅಲ್ಲ, ಜನಪರ ನಿಲುವುಗಳತ್ತಲೂ ಗಮನ ಹರಿಸುತ್ತಿದ್ದರು. 1989-90ರಲ್ಲಿ, ವಿ.ವಿ.ಸಿಂಗ್ ಸರಕಾರದಲ್ಲಿ ಜಾರ್ಜ್ ರೇಲ್ವೆ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಾಗ, ಮಂಗಳೂರಿನ ತೊಕ್ಕೊಟ್ಟುವಿನಿಂದ ಮಹಾರಾಷ್ಟ್ರದ ರತ್ನಗಿರಿವರೆಗೆ ರೇಲ್ವೆ ಮಾರ್ಗ ನಿರ್ಮಾಣದಂತಹ ಮಹತ್ವದ ಕಾರ್ಯಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದರು. ಇದರಿಂದ ಮಂಗಳೂರು-ಮುಂಬೈ ನಡುವಿನ ಸಂಪರ್ಕ ಸುಲಭವಾಗಿಸಿದ್ದರು. ಮಂಗಳೂರಿನ ಜನರ ಮನದಲ್ಲಿ ಜಾರ್ಜ್ ಶಾಶ್ವತವಾಗಿ ನೆಲೆಯೂರಿದ್ದರು.

ಸಮಾಜವಾದ, ಹೋರಾಟ, ಸೈದ್ಧಾಂತಿಕ ರಾಜಕಾರಣಗಳಿಂದ 70 ಮತ್ತು 80ರ ದಶಕದಲ್ಲಿ ಭಾರೀ ಚರ್ಚೆಯ ವಸ್ತುವಾಗಿದ್ದ, ದೇಶದ ಭವಿಷ್ಯದ ಭಾರೀ ನಾಯಕನಂತೆ ಕಂಗೊಳಿಸುತ್ತಿದ್ದ ಜಾರ್ಜ್ ಫನಾಂಡಿಸ್‌ಗೆ ದೇಶದಾದ್ಯಂತ ಬುದ್ಧಿಜೀವಿಗಳ, ಚಿಂತಕರ, ಪತ್ರಕರ್ತರ ಬಹಳ ದೊಡ್ಡ ಬಳಗವೇ ಇತ್ತು. ಇಂತಹ ಜಾರ್ಜ್ ಬೆಂಗಳೂರಿಗೆ ಬರುತ್ತಾರೆಂದರೆ, ಅವರನ್ನು ಕಾಣಲು, ಅವರ ವಿಚಾರಧಾರೆಯನ್ನು ಹಂಚಿಕೊಳ್ಳಲು ಸಮಾನಮನಸ್ಕರ ತಂಡ ಸಿದ್ಧವಿರುತ್ತಿತ್ತು. ಈ ಬಗ್ಗೆ ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆಯವರು, ‘‘ಬೆಂಗಳೂರಿನ ಜಾನ್‌ಸನ್ ಮಾರ್ಕೆಟ್ ಬಳಿ ಜಾರ್ಜ್ ಮನೆ ಇತ್ತು. ಅಲ್ಲಿಗೆ ಆಗಾಗ ಬರುತ್ತಿದ್ದರು. ಪುಟ್ಟ ಮನೆ. ಗದ್ದಲ ಗೌಜುಗಳಿಲ್ಲದ ಪ್ರದೇಶ. ಹೋರಾಟಗಾರನಾಗಿ, ಮಂತ್ರಿಯಾಗಿ, ಜನಪ್ರಿಯ ವ್ಯಕ್ತಿಯಾಗಿದ್ದರು ಮನೆಯಲ್ಲಿ ಯಾವ ಆಡಂಬರವಿರಲಿಲ್ಲ. ಬಂದ ಅತಿಥಿಗಳಿಗೆ ಅನ್ನ, ಪೋರ್ಕ್ ಕರಿ ಕೊಡುತ್ತಿದ್ದರು. ಎಲ್ಲರೊಂದಿಗೂ ಬೆರೆತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಸರಳಜೀವಿ. ಲಂಕೇಶರೊಂದಿಗೆ ನಾನು ಅವರ ಮನೆಗೆ ನಾಲ್ಕಾರು ಬಾರಿ ಹೋಗಿದ್ದಿದೆ’’ಸಎನ್ನುತ್ತಾರೆ.

ಇಂತಹ ಕೆಚ್ಚಿನ, ಸಿಟ್ಟಿನ, ಉಗ್ರ ಪ್ರಾಮಾಣಿಕ ಹೋರಾಟಗಾರ 2000ದ ನಂತರ ದಾರಿ ತಪ್ಪಿದರು. ತಾವು ಪಾಲಿಸಿಕೊಂಡು ಬಂದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಭಾರತೀಯ ಜನತಾ ಪಕ್ಷ ಸೇರಿ, ವಾಜಪೇಯಿ ಕ್ಯಾಬಿನೆಟ್ನಲ್ಲಿ ರಕ್ಷಣಾ ಸಚಿವರಾದರು. ಸಾಲದು ಎಂಬಂತೆ ಬರಾಕ್ ಮಿಸೈಲ್, ತೆಹಲ್ಕಾ, ಶವಪೆಟ್ಟಿಗೆ ಹಗರಣಗಳಲ್ಲಿ ಭಾಗಿಯಾಗಿ ಆರೋಪಿ ಸ್ಥಾನದಲ್ಲಿ ನಿಂತರು. ರಾಜೀನಾಮೆ ಕೊಟ್ಟು ಹೊರಬಂದರು. ವಿಚಾರಣೆಯ ನಂತರ ಆರೋಪಮುಕ್ತರೂ ಆದರು. ಹಾಗೆಯೇ ಹೇಗಿದ್ದ ಹೋರಾಟಗಾರ ಹೇಗಾದ ಎಂಬುದಕ್ಕೆ ಮಾದರಿಯೂ ಆದರು.

1998ರಲ್ಲಿ ಕೆ.ಸಿ. ಕಾಲೇಜಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ಜಾರ್ಜ್ ಫೆರ್ನಾಂಡಿಸ್

1997ರ ನವೆಂಬರ್ 30ರಂದು ಅಂದಿನ ರಾಷ್ಟ್ರಪತಿ ಕೆ.ಆರ್ ನಾರಾಯಣನ್ ಜೊತೆ ಮಾತುಕತೆ ನಡೆಸಿ ರಾಷ್ಟ್ರಪತಿ ಭವನದಿಂದ ಹೊರಬರುತ್ತಿರುವ ಬಿಜೆಪಿ ನಾಯಕರಾದ ಎ.ಬಿ ವಾಜಪೇಯಿ, ಜಸ್ವಂತ್ ಸಿನ್ಹಾ, ಜಾರ್ಜ್ ಫೆರ್ನಾಂಡಿಸ್, ಎಲ್.ಕೆ ಅಡ್ವಾಣಿ ಹಾಗೂ ಇತರ ನಾಯಕರು.

1978ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಉಪಚುನಾವಣೆಯ ಸಮಯದಲ್ಲಿ ಕಂಡುಬಂದ ಜಾರ್ಜ್ ಫೆರ್ನಾಂಡಿಸ್

ಮುಂಬೈಯಲ್ಲಿ ಕಾರ್ಮಿಕ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸುತ್ತಿರುವ ಜಾರ್ಜ್ ಫೆರ್ನಾಡಿಸ್

ರಾಜಸ್ಥಾನದ ಪೋಖ್ರಾನ್‌ನಲ್ಲಿ ನಡೆದ ಭಾರತದ ಎರಡನೇ ಪರಮಾಣು ಪರೀಕ್ಷೆ ನಡೆದ ಸ್ಥಳದಲ್ಲಿ ಎ.ಬಿ ವಾಜಪೇಯಿ, ಜಾರ್ಜ್ ಫೆರ್ನಾಂಡಿಸ್, ಅಬ್ದುಲ್ ಕಲಾಂ, ಪ್ರಮೋದ್ ಮಹಾಜನ್, ಬೈರೋನ್ ಸಿಂಗ್ ಶೇಖಾವತ್ ಹಾಗೂ ಇತರ ಹಿರಿಯ ವಿಜ್ಞಾನಿಗಳು ಮತ್ತು ಸೇನಾ ಅಧಿಕಾರಿಗಳು ವೀಕ್ಷಿಸುತ್ತಿರುವುದು.

 

 

 

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News

ಜಗದಗಲ
ಜಗ ದಗಲ