ದೇಶದ ರಕ್ಷಣೆಯ ಹೊಣೆ ಹೊತ್ತಿದ್ದ ‘ಕುಡ್ಲ’ದ ಕುವರ ಜಾರ್ಜ್ ಫರ್ನಾಂಡಿಸ್

Update: 2019-01-30 07:00 GMT

ಹುಟ್ಟು ಹೋರಾಟಗಾರರಾಗಿ, ದೇಶದ ರಕ್ಷಣೆಯ ಹೊಣೆ ಹೊತ್ತಿದ್ದ ಜಾರ್ಜ್ ಫೆರ್ನಾಂಡಿಸ್ ಕೊಂಕಣಿಗರಿಂದ ಕೊಡಿಯಾಲ ಎಂದು ಕರೆಯಲ್ಪಡುವ ‘ಕುಡ್ಲ’ದ ಹೆಮ್ಮೆಯ ಕುವರ. ನಗರದ ಬಿಜೈ ಕಾಪಿಕಾಡಿನಲ್ಲಿ 1930ರ ಜೂನ್ 3ರಂದು ಜಾನ್ ಜೋಸೆಫ್ ಫೆರ್ನಾಂಡಿಸ್ ಮತ್ತು ಆಲಿಸ್ ಮಾರ್ತಾ ಫೆರ್ನಾಂಡಿಸ್ ದಂಪತಿಯ ಆರು ಮಕ್ಕಳಲ್ಲಿ ಹಿರಿಯವರಾಗಿ ಜನಿಸಿದರು. ತಂದೆ ಖಾಸಗಿ ಇನ್ಶೂರೆನ್ಸ್ ಸಂಸ್ಥೆಯ ಉದ್ಯೋಗಿಯಾಗಿದ್ದರೂ ಮಗ ಮಾತ್ರ ಹುಟ್ಟು ಹೋರಾಟಗಾರ. ತನ್ನ ಹೋರಾಟ ಮನೋಭಾವದ ಮೂಲಕವೇ ರಾಜಕೀಯ ರಂಗ ಪ್ರವೇಶಿಸಿ, ದೇಶದ ರಕ್ಷಣೆಯ ಹೊಣೆಹೊತ್ತವರು. ತನ್ನ ಕುಟುಂಬ ಹಾಗೂ ಆತ್ಮೀಯ ವಲಯದಲ್ಲಿ ಜೆರ್ರಿ ಎಂದೇ ಕರೆಯಲ್ಪಡುತ್ತಿದ್ದ ಜಾರ್ಜ್‌ರವರು ಸಂತ ಅಲೋಶಿಯಸ್ ಹೈಸ್ಕೂಲ್‌ನ ಹಳೆ ವಿದ್ಯಾರ್ಥಿ. ತಮ್ಮ 16ನೆ ವಯಸ್ಸಿನಲ್ಲಿ ಬೆಂಗಳೂರಿನ ಸೈಂಟ್ ಪೀಟರ್ಸ್ ಸೆಮಿನರಿಗೆ ಸೇರಿದರು. ಸುಮಾರು ಎರಡು ವರ್ಷಗಳ ಆಧ್ಮಾತ್ಮಿಕ ಅಧ್ಯಯನದ ಬಳಿಕ ಮೊಟಕುಗೊಳಿಸಿದ ಅವರು, ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠಕ್ಕೆ ಬಿದ್ದರು. ಆ ಸಮಯದಲ್ಲಿ ಸಮಾಜವಾದಿ, ಸ್ವಾತಂತ್ರ್ಯ ಹೋರಾಟಗಾರ ಅಮ್ಮೆಂಬಳ ಬಾಳಪ್ಪ ಅವರ ಸಂಪರ್ಕಕ್ಕೆ ಬಂದರು. ಬಾಳಪ್ಪ ಅವರು ಜಾರ್ಜ್ ಫೆರ್ನಾಂಡಿಸ್ ಅವರನ್ನು ಆಗಿನ ಸಮಾಜವಾದಿ ಪ್ರವೃತ್ತಿಯೊಂದಿಗಿನ ಕಾಂಗ್ರೆಸ್ ಮುಖಂಡ ಡಾ. ಕೆ.ನಾಗಪ್ಪ ಆಳ್ವ ಅವರನ್ನು ಪರಿಚಯಿಸಿದ್ದರು. ಬಳಿಕ ಜಾರ್ಜ್ ಅವರು ಮುಂಬೈಯ ಪ್ರಸಿದ್ಧ ಕಾರ್ಮಿಕ ಮುಖಂಡನಾಗಿ ಗುರುತಿಸಿಕೊಂಡಿದ್ದ ದಕ್ಷಿಣ ಕನ್ನಡ ಮೂಲದ ಪ್ಲೆಸಿಡ್ ಡಿಮೆಲ್ಲೊ ಅವರ ಸಂಪರ್ಕಕ್ಕೆ ಬಂದರು.

 ಪ್ಲೆಸಿಡ್ ಡಿಮೆಲ್ಲೊ ಮತ್ತು ಜಾರ್ಜ್ ಜತೆಯಾಗಿ ಮೊದಲ ಬಾರಿಗೆ ಮಂಗಳೂರಿನ ಕೆನರಾ ಪಬ್ಲಿಕ್ ಕನ್ವಿಯೇನ್ಸ್ ಕಂಪೆನಿ ಎದುರು ಮುಷ್ಕರ ನಡೆಸಿ, ಹೋರಾಟದ ಬದುಕನ್ನು ಆರಂಭಿಸಿದ್ದರು. ಹೋರಾಟ ಮನೋಭಾವದೊಂದಿಗೇ 1949ರಲ್ಲಿ ಕೆಲಸವನ್ನು ಅರಸಿ ಮುಂಬೈನತ್ತ ತೆರಳಿದ ಅವರು ಕ್ರಮೇಣವಾಗಿ ಮುಂಬೈನಲ್ಲಿ ಕಾರ್ಮಿಕ ನಾಯಕನಾಗಿ ಗುರುತಿಸಿಕೊಂಡರು. 1961ರಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಸದಸ್ಯರಾದರು. ಸಂಯುಕ್ತ ಸೋಶಲಿಸ್ಟ್ ಪಕ್ಷವನ್ನು ಸೇರಿದ ಅವರು, 1967ರಲ್ಲಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ, ಕಾಂಗ್ರೆಸ್‌ನ ನಾಯಕ ಎಸ್.ಕೆ. ಪಾಟೀಲ್‌ರನ್ನು ಸೋಲಿಸಿ ರಾಷ್ಟ್ರ ರಾಜಕೀಯದ ಗಮನ ಸೆಳೆದರು. 1971ರ ಜು.21ರಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಹುಮಾಯೂನ್ ಕಬೀರ್ ಅವರ ಪುತ್ರಿ ಲೀಲಾ ಕಬೀರ್ ಅವರೊಂದಿಗೆ ವಿವಾಹವಾಗಿದ್ದರು. ಅಖಿಲ ಭಾರತ ರೈಲ್ವೆ ಪುರುಷರ ಒಕ್ಕೂಟದ ಅಧ್ಯಕ್ಷರಾಗಿದ್ದ ಜಾರ್ಜ್, 1974ರಲ್ಲಿ ಸುಮಾರು 15 ಲಕ್ಷ ಕಾರ್ಮಿಕರನ್ನು ಒಳಗೊಂಡ ರೈಲ್ವೆ ಮುಷ್ಕರಕ್ಕೆ ನೇತೃತ್ವ ನೀಡಿದ್ದರು. ಇದರ ಪರಿಣಾಮವಾಗಿ ಸಾವಿರಾರು ಜನರನ್ನು ಜೈಲಿಗೆ ತಳ್ಳಲಾಗಿತ್ತು.

►ತುರ್ತು ಪರಿಸ್ಥಿತಿ ವಿರುದ್ಧ ಸಿಡಿದೆದ್ದ ನಾಯಕ: ಜೈಲಿನಿಂದಲೇ ಸ್ಪರ್ಧೆ

ರೈಲ್ವೆ ನೌಕರರ ಹೋರಾಟದ ಮುಂಚೂಣಿಯಲ್ಲಿದ್ದ ಜಾರ್ಜ್ 1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಸಿಡಿದೆದ್ದರು. ಬರೋಡಾದಲ್ಲಿ ಡೈನಮೈಟ್ ಬಳಸಿ ಸ್ಪೋಟ ನಡೆಸಲು ಉದ್ದೇಶಿಸಿದ ಆರೋಪದಿಂದಾಗಿ ಭೂಗತರಾದರು. 1976ರಲ್ಲಿ ಕೋಲ್ಕತ್ತಾದಲ್ಲಿ ಜಾರ್ಜ್ ಬಂಧಿತರಾದರು. ಬಿಹಾರದಲ್ಲಿ ಅವರು ಸೆರೆಮನೆ ವಾಸ ಅನುಭವಿಸಿದರು. 1977ರಲ್ಲಿ ಮಹಾ ಚುನಾವಣೆ. ಜಾರ್ಜ್ ಜೈಲಿನಲ್ಲಿಯೇ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಬಿಹಾರದ ಮುಝಪ್ಫರ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದರು.

3 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿ, ಮೊರಾರ್ಜಿ ಸರಕಾರದಲ್ಲಿ ಕೈಗಾರಿಕಾ ಸಚಿವರಾದರು. ಇದಾದ ಕೆಲ ಸಮಯದಲ್ಲಿ ಜನತಾ ಪಾರ್ಟಿಯಲ್ಲಿ ಒಡಕು ಮೂಡಿತು. 80ರ ಚುನಾವಣೆಯಲ್ಲಿ ಮುಝಫ್ಫರ್‌ಪುರ ಕ್ಷೇತ್ರದಲ್ಲಿ ಜನತಾ (ಎಸ್) ಪಕ್ಷದಿಂದ ಸ್ಪರ್ಧಿಸಿ ಗೆದ್ದರು. ಆದರೆ 84ರ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಬಳಿಕ ಬಿಹಾರದತ್ತ ತೆರಳಿ ಜನತಾ ದಳ ಸೇರಿ ಅವರು ವಿ.ಪಿ. ಸಿಂಗ್ ಸರಕಾರದಲ್ಲಿ ರೈಲ್ವೆ ಸಚಿವರಾದರು. 1989-90ರ ಅವಧಿಯಲ್ಲಿ ಜಾರ್ಜ್ ಫೆರ್ನಾಂಡಿಸ್ ರೈಲ್ವೆ ಸಚಿವರಾಗಿದ್ದ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಸ್ವತಂತ್ರ ಭಾರತದ ರೈಲ್ವೆ ಯೋಜನೆಗಳಲ್ಲಿ ಅತ್ಯಂತ ಪ್ರಸಿದ್ಧವಾದ ಕೊಂಕಣ ರೈಲ್ವೆ ಯೋಜನೆಯು ಜಾರ್ಜ್ ಅವರ ಕನಸಿನ ಕೂಸು.

      ಮುಂದೆ, 1994ರಲ್ಲಿ ಜಾರ್ಜ್ ಫೆರ್ನಾಂಡಿಸ್ ತಮ್ಮದೇ ಸಮತಾ ಪಕ್ಷವನ್ನು ಸ್ಥಾಪಿಸಿದ್ದರು. ಸಂವಹನ, ಉದ್ಯಮ, ರೈಲ್ವೆ ಮತ್ತು ರಕ್ಷಣೆ ಸೇರಿದಂತೆ ಹಲವು ಸಚಿವ ಖಾತೆಗಳನ್ನು ನಿರ್ವಹಿಸಿದ್ದರು. 1998ರ ಮಾರ್ಚ್‌ನಲ್ಲಿ ರಕ್ಷಣಾ ಸಚಿವರಾಗಿ ನೇಮಕಗೊಂಡ ನಂತರ, ಪ್ರಾಮಾಣಿಕತೆ, ಆಡಳಿತಾತ್ಮಕ ಯೋಜನೆಗಳ ಮೂಲಕ ಹೊಸ ಪ್ರಯೋಗಗಳನ್ನು ಮಾಡಿದ್ದರು. ಸೈನ್ಯದ ಟ್ರಕ್‌ಗಳ ಮೇಲೆ ಸೈನಿಕರ ಜತೆಯಾಗಿ ಸವಾರಿ ಮಾಡಿದ್ದ, ಅವರು, 6,600 ಮೀಟರ್ ಎತ್ತರದ ಸಿಯಾಚಿನ್ ಗ್ಲೇಸಿಯರ್ ಹಿಮಾವೃತ ಪ್ರದೇಶಕ್ಕೆ 18 ಬಾರಿ ಭೇಟಿ ನೀಡಿದ್ದರು. 2001ರ ತೆಹಲ್ಕಾ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ವಿಚಾರಣೆ ಬಳಿಕ ದೋಷಮುಕ್ತರಾಗಿ ಎಂಟು ತಿಂಗಳ ಬಳಿಕ ಮತ್ತೆ ರಕ್ಷಣಾ ಸಚಿವರಾಗಿ ನೇಮಕಗೊಂಡಿದ್ದರು.

 ಪೋಖ್ರಾನ್ ಅಣು ಬಾಂಬ್ ಪರೀಕ್ಷೆ, ಕಾರ್ಗಿಲ್ ವಿಜಯ ಜಾರ್ಜ್ ಅವರ ಸಾಧನೆಯ ಪಟ್ಟಿಗೆ ಸೇರಿದವು. ಎನ್‌ಡಿಎ ಸರಕಾರ ಪತನಗೊಂಡ ಬಳಿಕ ಸಮತಾ ಪಾರ್ಟಿ ಜೆಡಿಯುನಲ್ಲಿ ವಿಲೀನವಾಯಿತು. ಈ ಸಂದರ್ಭ ಮರೆವು ಕಾಯಿಲೆಯಿಂದಾಗಿ ಜಾರ್ಜ್ ಅವರು ಅನಾರೋಗ್ಯಕ್ಕೀಡಾದರು. 2009ರ ಚುನಾವಣೆಯಲ್ಲಿ ಜೆಡಿಯು ಟಿಕೆಟ್ ನಿರಾಕರಿಸಿದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಕಂಡರು. ಬಳಿಕ ಒಂದು ವರ್ಷ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸುವ ಅವಕಾಶ ಅವರಿಗೆ ದೊರಕಿತ್ತು. ಒಂಬತ್ತು ಬಾರಿ ಸಂಸತ್ತನ್ನು ಪ್ರವೇಶಿಸಿದ ಹೆಗ್ಗಳಿಗೆ ಕರಾವಳಿಯ ಹೆಮ್ಮೆಯ ಕುವರ ಜಾರ್ಜ್ ಫೆರ್ನಾಂಡಿಸ್‌ರದ್ದು. ಹೋರಾಟಗಾರನಾಗಿ ೈರ್ ಬ್ರಾಂಡ್ ಭಾಷಣಕಾರರಾಗಿದ್ದರೂ ಅವರು ಮಿತಭಾಷಿ.

10ಕ್ಕೂ ಅಧಿಕ ಭಾಷಾ ಪ್ರವೀಣರು

 ಜಾರ್ಜ್‌ರವರು ಹಿಂದಿ, ಇಂಗ್ಲಿಷ್, ಕೊಂಕಣಿ ಭಾಷೆಯಲ್ಲದೆ, ಮರಾಠಿ, ಲ್ಯಾಟಿನ್, ಉರ್ದು ಸೇರಿ 10ಕ್ಕೂ ಅಧಿಕ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದರು. ಕೊಂಕಣಿ ಯುವಕ್, ರೈತವಾಣಿ ಪತ್ರಿಕೆಗಳ ಸಂಪಾದಕರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ‘ವಾಟ್ ಏಲ್ಸ್ ದಿ ಸೋಶಿಯಲಿಸ್ಟ್, ‘ರೈಲ್ವೆ ಸ್ಟ್ರೈಕ್ ಆ್ 1974’ ಮತ್ತು ‘ಜಾರ್ಜ್ ಫೆರ್ನಾಂಡಿಸ್’ (ಅವರ ಆತ್ಮಚರಿತ್ರೆ) ಸೇರಿದಂತೆ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಸಂತ ಅಲೋಶಿಯಸ್ ಗ್ರಂಥಾಲಯದಲ್ಲಿ ಜಾರ್ಜ್ ಹೆಸರಿನ ಬ್ಲಾಕ್

ಸಂತ ಅಲೋಶಿಯಸ್‌ನ ಹಳೆ ವಿದ್ಯಾರ್ಥಿಯಾಗಿರುವ ಜಾರ್ಜ್ ಫೆರ್ನಾಂಡಿಸ್, ತಮ್ಮ ಕಾಲೇಜಿಗೆ ತಮ್ಮ ಸಂಗ್ರಹದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕಾಲೇಜಿನ ಮುಖ್ಯ ಗ್ರಂಥಾಲಯದ ಬ್ಲಾಕ್ ಒಂದನ್ನು ಜಾರ್ಜ್ ಫೆರ್ನಾಂಡಿಸ್‌ರ ಹೆಸರಿನಲ್ಲಿ ಅವರ ಪುಸ್ತಕಗಳಿಗೆ ಮೀಸಲಿಡಲಾಗಿದೆ. ‘‘ಜಾರ್ಜ್ ಫೆರ್ನಾಂಡಿಸ್ ಹೆಸರಿನಲ್ಲಿ ಕಾಲೇಜಿನ ಗ್ರಂಥಾಲಯದಲ್ಲಿ ಒಂದ ವಿಭಾಗವಿದೆ. ಅಲ್ಲಿ ಅವರು ಸಂಗ್ರಹಿಸಿದ, ಅವರು ಬರೆದಿರುವ, ಅವರಿಗೆ ಕೊಡುಗೆಯಾಗಿ ದೊರಕಿದ, ಸಂಸತ್ತು ಕಾರ್ಯಕಲಾಪಗಳ ಕುರಿತಂತೆ 3,500ಕ್ಕೂ ಅಧಿಕ ಪುಸ್ತಕಗಳನ್ನು ಅವರು ಕಾಲೇಜಿಗೆ ಕೊಡುಗೆಯಾಗಿ ನೀಡಿದ್ದಾರೆ. 2013ರಲ್ಲಿ ಅವರ ಸ್ನೇಹಿತ ಫೆಡ್ರಿಕ್ ಹಾಗೂ ಕ್ಲಾರೆಂಟ್ ಪಾಯಸ್ ಮೂಲಕ ಜಾರ್ಜ್ ರವರು ಈ ಪುಸ್ತಕಗಳನ್ನು ಹಸ್ತಾಂತರಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನವಾಗುತ್ತಿದೆ.’’

 ಜಾರ್ಜ್ ರಾಡ್ರಿಗಸ್

ಮುಖ್ಯ ಗ್ರಂಥಪಾಲಕರು, ಸಂತ ಅಲೋಶಿಯಸ್ ಕಾಲೇಜು

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News

ಜಗದಗಲ
ಜಗ ದಗಲ