ಶಾಲೆಗಳಲ್ಲಿ ಕಾರ್ಯಾಗಾರಗಳು
ಯೋಗೇಶ್ ಮಾಸ್ಟರ್
ಕಲಿಕೆಯೆಂಬ ಪ್ರಕ್ರಿಯೆ
ಅಧ್ಯಯನ ಮತ್ತು ಅರಿವು
► ಕಾರ್ಯಾಗಾರಗಳು ಯಾಕಾಗಿ?
ಶಾಲೆಯೊಂದರ ಯಶಸ್ಸು ಅದರ ಶಿಕ್ಷಣ ನೀಡುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿ ರುತ್ತದೆ. ಹಾಗಾಗಿ ಶಾಲೆಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು, ಬಲಹೀನವಾಗದಿರಲು, ಪುನಶ್ಚೇತನಗೊಳಿಸಿಕೊಳ್ಳಲು ಆಗ್ಗಿಂದಾಗ್ಗೆ ಕಾರ್ಯಾಗಾರಗಳನ್ನು ನಡೆಸುತ್ತಿರಬೇಕು. ಈ ಕಾರ್ಯಾ ಗಾರಗಳ ಉದ್ದೇಶವೇ ಈಗಾಗಲೇ ನಮ್ಮಲ್ಲಿ ನಡೆಯುತ್ತಿರುವ ಚಟುವಟಿಕೆಗಳು, ರೀತಿ ನೀತಿಗಳು ಸರಿಯಾಗಿವೆಯೇ? ಎಲ್ಲಾದರೂ ತಪ್ಪಿದ್ದೇವೆಯೇ? ಹಳತರಲ್ಲೇ ಕೊಳೆಯುತ್ತಿದ್ದೇವೆಯೇ? ಹೊಸತನ್ನೇನಾದರೂ ಪಡೆಯಬಹುದೇ? ಈಗಿರುವ ಅರಿವಿಗೆ ಮತ್ತಷ್ಟು ಹೊಳಪು ದಕ್ಕುವುದೇ? ತಿಳಿಯದೇ ಇರುವುದನ್ನು ತಿಳಿಯಬಹುದೇ? ವಿಶೇಷ ಮತ್ತು ನಿರ್ದಿಷ್ಟ ವಿಷಯಗಳ ಬಗ್ಗೆ ಪರಿಚಯ ವನ್ನು ಅಥವಾ ತಿಳಿದಿದ್ದರೆ ಅದನ್ನು ಕಾರ್ಯಗತಗೊಳಿಸಲು ಪ್ರಾಯೋಗಿಕ ಸೂತ್ರಗಳು ದೊರಕುವುದೇ? ನಮ್ಮ ಆಸಕ್ತಿ, ಕುತೂಹಲ ಮತ್ತು ಚಟುವಟಿಕೆಗಳ ಸಾಮರ್ಥ್ಯವನ್ನು ಪುಷ್ಟಿಗೊಳಿಸಿ ಕೊಳ್ಳಲು ದಾರಿ ಸಿಗುವುದೇ?; ಹೀಗೆ ಹತ್ತು ಹಲವು ಉದ್ದೇಶಗಳಿಗೆ ಕಾರ್ಯಾಗಾರಗಳನ್ನು ಮಾಡಬೇಕಾಗುತ್ತದೆ. ಒಟ್ಟಾರೆ ಯಾವುದೇ ಕಾರ್ಯಾಗಾರದ ಉದ್ದೇಶವು ಕೊನೆಯಲ್ಲಿ ಪ್ರಾಯೋಗಿಕವೋ, ತಾತ್ವಿಕವೋ ಒಟ್ಟಾರೆ ಶಿಕ್ಷಣವನ್ನು ನೀಡುವುದಾಗಿರುತ್ತದೆ ಅಥವಾ ತರಬೇತಿ ನೀಡುವುದಾಗಿರುತ್ತದೆ.
► ಕಾರ್ಯಾಗಾರಗಳು ಯಾರಿಗಾಗಿ?
ಇನ್ನು ಶಾಲೆಯಲ್ಲಿ ನಡೆಸುವ ಕಾರ್ಯಾಗಾರಗಳು ಯಾರಿಗಾಗಿ ಎಂಬುದು ಬಹಳ ಮುಖ್ಯವಾದ ಪ್ರಶ್ನೆ. ಶಿಕ್ಷಕರಿಗೆ ಸಾಮಾನ್ಯ ಕಾರ್ಯಾಗಾರಗಳನ್ನು ನಡೆಸುವುದು ಮತ್ತು ನಿರ್ದಿಷ್ಟವಾಗಿ ಕಲಿಸುವ ವಿಷಯಗಳ ಶಿಕ್ಷಕರಿಗೆ ಕಾರ್ಯಾಗಾರಗಳನ್ನು ಶಿಕ್ಷಣ ಇಲಾಖೆ, ಎನ್‌ಸಿಇಆರ್‌ಟಿ ಇತ್ಯಾದಿ ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿರುತ್ತವೆ. ಸಮಾಜ ವಿಜ್ಞಾನ ಅಥವಾ ಗಣಿತ, ಭಾಷೆ ಹೀಗೆ ಹಲವು ವಿಷಯಗಳ ಕುರಿತಾಗಿ ತಜ್ಞರು ಮತ್ತು ವಿಷಯ ಪರಿಣಿತರು ಬಂದು ಕಾರ್ಯಾಗಾರಗಳನ್ನು ನಡೆಸಿ, ಶಿಕ್ಷಕರಲ್ಲಿ ಇರುವ ಗೊಂದಲ, ಸಮಸ್ಯೆ ಅಥವಾ ಕುತೂಹಲಗಳಿಗೆ ಪರಿಹಾರಗಳನ್ನು ನೀಡುತ್ತಾರೆ. ಇದು ಆಡಳಿತ ಮಂಡಳಿಯು ತಮ್ಮ ಶಾಲೆಯ ವಿವಿಧ ವಿಷಯಗಳ ಶಿಕ್ಷಕರನ್ನು ಆಯಾ ವಿಷಯಗಳ ಕಾರ್ಯಾಗಾರಗಳಿಗೆ ಕಳುಹಿಸುವುದರಿಂದ ವಿಷಯ ಪರಿಣಿತರು ಕಲಿಸುವ ಕ್ರಮದಲ್ಲಿ, ಬೋಧನಾ ತಂತ್ರಗಳಲ್ಲಿ ಪ್ರಾಯೋಗಿಕವಾದಂತಹ ಸಮಸ್ಯೆಗಳಿದ್ದರೆ ಪರಿಹಾರವನ್ನು ನೀಡುವರು. ಅದರಂತೆಯೇ ಶಿಕ್ಷಕರಿಗೇ ವಿಷಯದ ಯಾವುದಾದರೊಂದು ಭಾಗದಲ್ಲಿ ಸಮಸ್ಯೆ ಇದ್ದರೆ ಅದನ್ನು ನಿವಾರಿಸಿಕೊಳ್ಳಲು ನೆರವಾಗುವುದು. ಅದರಂತೆಯೇ ತಮ್ಮಂತೆಯೇ ಬೇರೆ ಬೇರೆ ಶಾಲೆಗಳಿಂದ ಬಂದಿರುವ ಶಿಕ್ಷಕರು ಒಂದೆಡೆ ಸೇರಿದಾಗ ಅವರ ವೃತ್ತಿಪರ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಪರಸ್ಪರ ಒಳನೋಟಗಳನ್ನು ಮತ್ತು ಮಾದರಿಗಳನ್ನು ಪಡೆದುಕೊಳ್ಳಬಹುದು. ಒಬ್ಬ ಶಿಕ್ಷಕನು ತನ್ನಂಥದ್ದೇ ಸಮಸ್ಯೆಯನ್ನು ಎದುರಿಸಿದ್ದಾಗ ಅವನು ಅದನ್ನು ಯಶಸ್ವಿಯಾಗಿ ಹೇಗೆ ನಿಭಾಯಿಸಿದನೆಂಬ ಉದಾಹರಣೆಗೆ ಈಗ ಸಮಸ್ಯೆಯನ್ನು ಎದುರಿಸುತ್ತಿರುವ ಶಿಕ್ಷಕರಿಗೆ ಮಾದರಿಯಾಗಬಹುದು. ವೃತ್ತಿಪರರು ಆಗಾಗ ಒಟ್ಟಾಗುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಮಾತ್ರವಲ್ಲದೇ ತಮ್ಮ ವೃತ್ತಿಪರತೆಗೂ ನೈತಿಕ ಮತ್ತು ಸಾಮಾಜಿಕ ಬೆಂಬಲ ಮತ್ತು ಪ್ರೇರಣೆ ಸಿಗುವುದು. ಇದೇ ರೀತಿಯಲ್ಲಿ ಶಿಕ್ಷಕರಿಗೆ ಮಾತ್ರವಲ್ಲದೇ ವಿವಿಧ ಆಡಳಿತ ಮಂಡಳಿಯವರಿಗೂ ಕೂಡಾ ಶಾಲೆಯನ್ನು ನಡೆಸುವ ಕ್ರಮದಲ್ಲಿ, ಇಲಾಖೆಯೊಂದಿಗೆ ನಡೆದುಕೊಳ್ಳುವುದಕ್ಕೆ, ಸಮಸ್ಯೆಗಳನ್ನು ಮಾಡಿಕೊಂಡು ಅದರಿಂದ ಶಾಲೆಯ ಕಚೇರಿಯ ಕೆಲಸಗಳಿಗೆ, ಇಲಾಖೆಯ ತಾಂತ್ರಿಕ ತೊಂದರೆ ಗಳನ್ನು ನಿವಾರಿಸಿಕೊಳ್ಳಲು, ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ನಿಭಾಯಿಸುವು ದಕ್ಕೆ ಪ್ರಾಯೋಗಿಕ ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಮುಖ್ಯೋಪಾಧ್ಯಾಯರಿಗೂ ಕೂಡಾ ಈ ಬಗೆಯ ಕಾರ್ಯಾಗಾರಗಳು ಅಗತ್ಯವಿವೆ. ಏಕೆಂದರೆ, ಅವರು ಎದುರಿಸುವ ಸಮಸ್ಯೆ ಮತ್ತು ಸವಾಲುಗಳು ಸಾಧಾರಣ ವಿಷಯದ ಶಿಕ್ಷಕ ರಿಗಿಂತಲೂ, ಆಡಳಿತ ಮಂಡಳಿಯವರಿಗಿಂತಲೂ ಮತ್ತು ಮಕ್ಕಳು ಅಥವಾ ಪೋಷಕರಿಗಿಂತಲೂ ತೀರವೇ ಭಿನ್ನವಾಗಿರುತ್ತದೆ. ಇನ್ನು ಒಂದೊಂದು ಶಾಲೆಯಲ್ಲಿಯೂ ತನ್ನದೇ ಶಿಕ್ಷಕರಿಗೆ, ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ವಿವಿಧ ರೀತಿಯ ಕಾರ್ಯಾಗಾರಗಳನ್ನು ಏರ್ಪಡಿಸಬೇಕಾಗುತ್ತದೆ. ಏಕೆಂದರೆ, ಆಡಳಿತ ಮಂಡಳಿಯು ಮಕ್ಕಳ ಕಲಿಕೆ ಮತ್ತು ಭವಿಷ್ಯದ ನೇರ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುತ್ತದೆ. ಆ ಕರ್ತವ್ಯವನ್ನು ಸಮರ್ಥವಾಗಿ ಪೂರೈಸಲು ಶಿಕ್ಷಕರು, ಪೋಷಕರು, ಮಕ್ಕಳು ಮತ್ತು ಶಿಕ್ಷಕರಲ್ಲದ ಇತರ ಸಿಬ್ಬಂದಿ; ಹೀಗೆ ಎಲ್ಲರೂ ತಮ್ಮ ತಮ್ಮ ಪರಿಧಿಗಳಲ್ಲಿ ಸಮರ್ಥವಾಗಿಯೇ ಕೆಲಸ ಮಾಡಬೇಕು. ಸರಪಳಿಯ ಯಾವುದೇ ಕೊಂಡಿ ದುರ್ಬಲವಾದರೂ ಇಡೀ ಸಂಸ್ಥೆಯೇ ನರಳಬೇಕಾಗುತ್ತದೆ.
► ಮಕ್ಕಳಿಗೆ ಕಾರ್ಯಾಗಾರಗಳು
ಮಕ್ಕಳಿಗೆ ಅನೇಕಾನೇಕ ವಿಷಯಗಳಲ್ಲಿ ಕಾರ್ಯಗಾರಗಳನ್ನು ನಡೆಸಬೇಕು.
1.ಭಾಷೆ, ಗಣಿತ, ವಿಜ್ಞಾನ, ಸಮಾಜ ಇತ್ಯಾದಿ ವಿಷಯಗಳ ಕುರಿತಾಗಿ ವಿವಿಧ ಹಂತಗಳ ತರಗತಿಗಳಿಗೆ ಪ್ರತ್ಯೇಕವಾಗಿ ಕಾರ್ಯಾಗಾರಗಳನ್ನು ಮಾಡಬೇಕು. ಆ ಕಾರ್ಯಾಗಾರಗಳಲ್ಲಿ ಶಾಲೆಯಲ್ಲಿ ಕಲಿಸುವ ಶಿಕ್ಷಕರೂ ಮತ್ತು ಮಕ್ಕಳೂ ಒಟ್ಟಾಗಿ ಭಾಗವಹಿಸುವುದರಿಂದ ಎಷ್ಟೆಷ್ಟೋ ಸಮಸ್ಯೆಗಳು ಬಗೆ ಹರಿಯುವವು.
2.ವಿವಿಧ ಕ್ರೀಡೆಗಳ ಕುರಿತಾಗಿ ನಡೆಸುವ ಕಾರ್ಯಾಗಾರಗಳು.
3.ಜೀವನ ಕೌಶಲ್ಯಗಳ (ಲೈಪ್ ಸ್ಕಿಲ್) ಅಥವಾ ಬದುಕುವ ಕಲೆಯ ಕುರಿತಾಗಿ ನಡೆಸುವ ಕಾರ್ಯಾಗಾರಗಳು.
4.ಕೆರಿಯರ್ ಅಥವಾ ವೃತ್ತಿ ಅಥವಾ ಪರಿಣಿತರಾಗ ಬಯಸುವ ಕ್ಷೇತ್ರಗಳ ಆಯ್ಕೆಗಳ ಕುರಿತಾದ ಕಾರ್ಯಾಗಾರಗಳು.
5.ಓದುವ ಅಥವಾ ಕಲಿಯುವ ವಿಧಾನಗಳ ಕುರಿತು, ಏಕಾಗ್ರತೆ ಮತ್ತು ಕಲಿಕೆಯ ಸರಳ ತಂತ್ರಗಳ ಕುರಿತಾದ ಕಾರ್ಯಾಗಾರಗಳು.
6.ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸಕಾರಾತ್ಮಕ ಚಿಂತನೆಗೆ ಪೂರಕವಾಗುವ ಕಾರ್ಯಾಗಾರಗಳು ಅಥವಾ ಪ್ರೇರಣಾ ಶಿಬಿರಗಳು.
7.ಸಂಭಾಷಣಾ ಚಾತುರ್ಯ, ಭಾಷಣ ಕಲೆ, ನಿರೂಪಣಾ ವಿಧಾನ ಇತ್ಯಾದಿ ಬಹಿರಂಗವಾಗಿ ಭಾಷೆಯನ್ನು ಬಳಸುವುದರ ಬಗ್ಗೆ ಕಾರ್ಯಾಗಾರ ಅಥವಾ ಶಿಬಿರಗಳನ್ನು ಏರ್ಪಡಿಸುವುದು.
8.ಸಂಗೀತ, ನೃತ್ಯ, ನಾಟಕ, ವರ್ಣಕಲೆ, ಚಿತ್ರಗಳನ್ನು ಬಿಡಿಸುವುದು, ಕಾಗದಗಳಲ್ಲಿ ಅಥವಾ ಇತರೇ ವಸ್ತುಗಳನ್ನು ಬಳಸಿಕೊಂಡು ಕಲಾತ್ಮಕವಾಗಿ ಕರಕುಶಲ ವಸ್ತುಗಳನ್ನು ಮಾಡುವುದು.
9.ಸ್ವಶಿಸ್ತುಗಳನ್ನು ರೂಢಿಸಿಕೊಳ್ಳುವುದರ ಬಗ್ಗೆ ಮತ್ತು ಮನೆಯಲ್ಲಿ ತಮ್ಮ ಕೆಲಸಗಳನ್ನು ತಾವೇ ಶಿಸ್ತುಬದ್ಧವಾಗಿ ಮಾಡಿಕೊಳ್ಳುವುದರ ಬಗ್ಗೆ, ಮನೆಯವರ ಜೊತೆಯಲ್ಲಿ ನಡೆದುಕೊಳ್ಳುವುದರ ಬಗ್ಗೆ, ಆರ್ಥಿಕ ಶಿಸ್ತಿನ ಬಗ್ಗೆ ಕಾರ್ಯಾಗಾರಗಳನ್ನು ನಡೆಸುವುದು.
10.ಕುಂಬಾರಿಕೆ, ತೋಟಗಾರಿಕೆ, ಕಸೂತಿ, ಹೆಣಿಗೆ, ಹೊಲಿಗೆ, ಸಣ್ಣಪುಟ್ಟ ರಿಪೇರಿ ಕೆಲಸಗಳು ಇತ್ಯಾದಿಗಳ ಬಗ್ಗೆ ತರಬೇತಿ ಶಿಬಿರ.
11.ಬೆಂಕಿ, ಮೊನಚಾದ ವಸ್ತುಗಳು, ಎತ್ತರದ ಸ್ಥಳಗಳು, ರಸ್ತೆಗಳಲ್ಲಿ ಸಂಚರಿಸುವುದರ ಬಗ್ಗೆ ಎಚ್ಚರಿಕೆ ವಹಿಸುವ ಅಥವಾ ಜಾಗ್ರತೆ ಹೊಂದಿರುವ ಜಾಗೃತಿ ಶಿಬಿರಗಳು.
12.ಸಾರ್ವಜನಿಕ ಹಕ್ಕು ಮತ್ತು ಕರ್ತವ್ಯಗಳು, ರಸ್ತೆಯ ನಿಯಮ ಪಾಲನೆಗಳು, ಸಂವಿಧಾನದಲ್ಲಿ ವಿಧಿಸಿರುವ ಹಕ್ಕು ಮತ್ತು ಕರ್ತವ್ಯಗಳು, ಕುಟುಂಬದಲ್ಲಿ ಹಕ್ಕು ಮತ್ತು ಕರ್ತವ್ಯಗಳು, ಶಾಲೆಯಲ್ಲಿ ಹಕ್ಕು ಮತ್ತು ಕರ್ತವ್ಯಗಳು; ಇಂತಹ ವಿಷಯಗಳಲ್ಲಿ ಮುಕ್ತವಾದ ಸಂವಾದ ಮತ್ತು ಜಾಗೃತಿ ಶಿಬಿರಗಳನ್ನು ಏರ್ಪಡಿಸುವುದು.
13.ತನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯ ನಿರ್ವಹಣೆಗೆ ಬೇಕಾದಂತಹ ವಿಷಯಗಳ ಅರಿವಿನ ಶಿಬಿರಗಳನ್ನು ವೈದ್ಯಾಧಿಕಾರಿಗಳಿಂದ ಮತ್ತು ಮನಃಶಾಸ್ತ್ರಜ್ಞರಿಂದ ಏರ್ಪಡಿಸುವುದು.
14.ವೈದ್ಯಾಧಿಕಾರಿಗಳು ಅಥವಾ ಸೂಕ್ತ ಲೈಂಗಿಕ ತಜ್ಞರಿಂದ ವಿವಿಧ ಹಂತದ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು.
15.ಪ್ರಥಮ ಚಿಕಿತ್ಸೆ ಮತ್ತು ಸಾಮಾನ್ಯ ಹಾಗೂ ಸರಳ ಚಿಕಿತ್ಸೆಗಳನ್ನು ನೀಡುವುದರ ಬಗ್ಗೆ, ಇತರರಿಗೂ ಅಗತ್ಯವಾದಲ್ಲಿ ನೀಡುವುದರ ಬಗ್ಗೆ ತರಬೇತಿ ಶಿಬಿರಗಳನ್ನು ನಡೆಸಬೇಕು.
16.ಅಂಚೆ ಚೀಟಿ ಸಂಗ್ರಹಣೆ, ನಾಣ್ಯಗಳ ಸಂಗ್ರಹಣೆ, ವಿವಿಧ ಸ್ಮಾರಕಗಳ ಬಗ್ಗೆ ಅಥವಾ ರಾಷ್ಟ್ರಗಳ ಬಗ್ಗೆ ಹಲವು ಆಸಕ್ತಿಕರ ವಿಷಯಗಳನ್ನು ಸಂಗ್ರಹಿಸುವುದು, ಇತರ ವಿಷಯಗಳ ಬಗ್ಗೆ ಅಪರೂಪವಾದ ಮತ್ತು ಕುತೂಹಲಕರವಾದ ವಸ್ತುಗಳನ್ನು ಸಂಗ್ರಹಿಸುವುದು; ಹೀಗೆ ಹಲವು ಹವ್ಯಾಸಗಳನ್ನು ಪರಿಚಯಿಸುವ ಶಿಬಿರಗಳು.
17.ಫೋಟೊಗ್ರಫಿ, ಮೊಬೈಲ್‌ನ್ನು ರಚನಾತ್ಮಕವಾಗಿ ಬಳಸುವುದು, ತಾವು ಗಮನಿಸಿದ ವಿಷಯ ಅಥವಾ ಸಮಸ್ಯೆಯ ಕಿರುಚಿತ್ರ ಮಾಡುವುದು ಇತ್ಯಾದಿಗಳನ್ನು ಕೂಡಾ ಶಿಬಿರಗಳಲ್ಲಿ ಹೇಳಿಕೊಟ್ಟರೆ, ಮೊಬೈಲಿನ ಗೀಳನ್ನು ಅಥವಾ ಕಂಪ್ಯೂಟರ್ ವ್ಯಸನವನ್ನು ರಚನಾತ್ಮಕವಾದ ಚಟುವಟಿಕೆಗಳಿಗೆ ಬದಲಾಯಿಸಿದಂತಾಗುತ್ತದೆ.
18.ಪರಿಸರ ವಿಜ್ಞಾನ, ಪಕ್ಷಿವೀಕ್ಷಣೆ, ಮರ, ಗಿಡ ಮತ್ತು ಹೂಗಳನ್ನು ಗುರುತಿಸುವುದು, ಪರಿಸರ ಪ್ರಜ್ಞೆ, ಪರಿಸರ ಸಂರಕ್ಷಣೆ ಇತ್ಯಾದಿಗಳ ಕುರಿತಾದ ಶಿಬಿರಗಳು. ಹೀಗೆ ಮಕ್ಕಳು ತಮ್ಮ ಸಾಮಾನ್ಯವಾದ ಪಠ್ಯದಿಂದ ಹೊರತಾಗಿ ಹಲವು ರೀತಿಯ ಶಿಕ್ಷಣವನ್ನು ಪಡೆಯಬೇಕಾಗಿರುತ್ತದೆ. ಅದಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕು. ಇವುಗಳೊಂದಿಗೆ ಸ್ಕೌಟ್ (ಗಂಡು ಮಕ್ಕಳಿಗೆ) ಮತ್ತು ಗೈಡ್ (ಹೆಣ್ಣು ಮಕ್ಕಳಿಗೆ) ರೀತಿಯ ಅಥವಾ ರೆಡ್ ಕ್ರಾಸ್ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ಮತ್ತು ಇತರ ವೈದ್ಯಕೀಯ ವಿಷಯಗಳ ಬಗ್ಗೆ ತರಬೇತಿ ನೀಡುವುದು. ಯಾವುದೇ ತರಬೇತಿ ಶಿಬಿರ ಅಥವಾ ಕಾರ್ಯಾಗಾರಗಳನ್ನು ಏರ್ಪಡಿಸಿದರೂ ಒಂದೊಂದು ಮಗುವೂ ತನ್ನೊಂದಿಗೆ ಆ ದಾಖಲೆಗಳನ್ನು ಮತ್ತು ಶಿಬಿರಗಳಲ್ಲಿ ಕೊಟ್ಟಂತಹ ಮಾಹಿತಿಗಳ ಪತ್ರಗಳನ್ನು ಜೋಪಾನ ಮಾಡಿಟ್ಟುಕೊಂಡಿರಬೇಕು. ಮೊತ್ತಮೊದಲಾಗಿ ಮಗುವು ತನ್ನ ಅನುಭವ, ಕಲಿಕೆ ಮತ್ತು ಗಮನಿಸುವುದನ್ನು ತಾನೇ ಸ್ವಯಂಪ್ರೇರಿತವಾಗಿ ದಾಖಲು ಮಾಡುವುದನ್ನು ಮತ್ತು ಹಾಗೆ ದಾಖಲು ಮಾಡಿದ್ದನ್ನು ಜೋಪಾನ ಮಾಡುವುದನ್ನು ಕಲಿಸಬೇಕು. ಜೋಪಾನವಾಗಿಟ್ಟುವ ದಾಖಲೆಗಳನ್ನು ಅಗತ್ಯ ಬಿದ್ದಾಗ ತೆಗೆಯಲಾಗುವಂತೆ ವ್ಯವಸ್ಥಿತವಾಗಿಟ್ಟುಕೊಂಡಿರಬೇಕು. ಶಾಲೆಯಲ್ಲಿ ಶಿಕ್ಷಕರೂ ಕೂಡಾ ಅವುಗಳನ್ನು ಆಗ್ಗಿಂದಾಗ್ಗೆ ಉಲ್ಲೇಖಿಸಿ ಅವುಗಳ ಪ್ರಸ್ತುತತೆ ಮತ್ತು ಅಗತ್ಯಗಳನ್ನು ಮನಗಾಣುವಂತೆ ಮಾಡಬೇಕು.
► ಮಕ್ಕಳಿಗೆ ಕಾರ್ಯಾಗಾರಗಳು ಹೇಗೆ ನೆರವಾಗುತ್ತವೆ?
ವಿವಿಧ ರೀತಿಯ ಆಸಕ್ತಿಗಳನ್ನು, ಸಾಮರ್ಥ್ಯಗಳನ್ನು, ಹಿನ್ನೆಲೆಗಳನ್ನು, ಅಗತ್ಯಗಳನ್ನು ಮತ್ತು ಸಮಸ್ಯೆಗಳನ್ನು ಮಕ್ಕಳು ಹೊಂದಿರುತ್ತಾರೆ. ಈ ಬಗೆಯ ಕಾರ್ಯಾಗಾರಗಳು ಅವರಿಗೆ ಹಲವು ರೀತಿಗಳಲ್ಲಿ ನೆರವಾಗುತ್ತವೆ. ಮುಖ್ಯವಾಗಿ ಅವರಲ್ಲಿ ಸುಪ್ತವಾಗಿರುವ ಅರಿವನ್ನು ಬೆಳಕಿಗೆ ತರುತ್ತದೆ. ಸಮಾಜದಲ್ಲಿ ವ್ಯಕ್ತಿ ಮತ್ತು ಸಮೂಹಗಳು ಹೇಗೆ ಒಟ್ಟೊಟ್ಟಾಗಿ ಕೆಲಸ ಮಾಡಬೇಕು, ಹೇಗೆ ಒಬ್ಬರಿಗೊಬ್ಬರು ನೆರವಾಗಬೇಕು, ಪರಸ್ಪರ ಪೂರಕವಾಗಿ ದುಡಿಯಬೇಕು ಮತ್ತು ನಡೆಯಬೇಕು ಎಂಬುದೆಲ್ಲದರ ತರಬೇತಿಗಳೇ ಇಲ್ಲಾಗುತ್ತಿರುತ್ತವೆ. ಜೊತೆಗೆ ಪಠ್ಯದ ವಿಷಯಗಳಷ್ಟೇ ನಮ್ಮ ಬದುಕನ್ನ ರೂಪಿಸುವುದಲ್ಲ ಎಂಬುದರ ಸ್ಪಷ್ಟವಾದ ತಿಳುವಳಿಕೆ ಉಂಟಾಗುವುದರೊಂದಿಗೆ ಎಂತಹುದೇ ಕ್ಲಿಷ್ಟ ಸಮಯ ಸಂದರ್ಭಗಳಲ್ಲಿ ತಾನು ಸಮರ್ಥವಾಗಿ ತಾನೇ ಅಥವಾ ಇತರರ ನೆರವಿನೊಂದಿಗೆ ನಿಭಾಯಿಸಲಾಗುವ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾನೆ.
ಎಲ್ಲದಕ್ಕಿಂತ ಮುಖ್ಯವಾಗಿ ಮಗುವಿನಲ್ಲಿ ಅಡಕವಾಗಿರುವಂತಹ ಸುಪ್ತ ಪ್ರತಿಭೆ ಅಥವಾ ಸಾಮರ್ಥ್ಯಗಳು ಅನಾವರಣಗೊಳ್ಳುತ್ತವೆ. ಕಲಿಕೆಯ ನ್ಯೂನತೆಗಳಿದ್ದು ಪಠ್ಯಗಳನ್ನು ಕಲಿಯಲಾಗದೇ ಇರುವಂತಹ ಮಕ್ಕಳಿಗೆ ಆತ್ಮವಿಶ್ವಾಸವನ್ನು ನೀಡುತ್ತವೆ. ಇನ್ನೂ ಮುಖ್ಯವಾಗಿ ಮಕ್ಕಳಿಗೆ ಶಾಲೆಯು ಒಂದು ಏಕತಾನತೆಯ ಕೇಂದ್ರವಾಗಿ ಇರುವುದಿಲ್ಲ. ವಿವಿಧ ಚಟುವಟಿಕೆಗಳು ಹಾಗೂ ಎಲ್ಲವೂ ಕಲಿಕೆಗೆ ಪೂರಕವಾಗಿರುವುದರಿಂದ ಅವರ ಕಲಿಕಾ ಸಾಮರ್ಥ್ಯವು ಕೂಡ ಹೆಚ್ಚುತ್ತವೆ. ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮತ್ತು ಸಕಾರಾತ್ಮಕವಾದಂತಹ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಮನಸ್ಸು ಮತ್ತು ದೇಹ ಜಡಗೊಳ್ಳದೇ ಸದಾ ಕ್ರಿಯಾಶೀಲವಾಗಿರುತ್ತದೆ. ತಪ್ಪು ಮಾರ್ಗಗಳನ್ನು ತುಳಿಯದೇ, ವಿವಿಧ ವ್ಯಸನಗಳಿಗೆ ಬಲಿಯಾಗುವ, ಕಾಡುಹರಟೆಗಳಿಂದ ಕಾಲಹರಣ ಮಾಡುವುದನ್ನೆಲ್ಲಾ ತಪ್ಪಿಸುತ್ತದೆ. ಮೊಬೈಲ್, ಸೈಬರ್, ಟಿವಿ ಇತ್ಯಾದಿಗಳಿಗೆ ವ್ಯಸನಿಗಳಾಗುವುದನ್ನು ತಡೆಯುತ್ತದೆ.
ಸಕಾರಾತ್ಮಕವಾದ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಕಾಲಹರಣ ಮಾಡುವುದರ ಸಮಸ್ಯೆ ನೀಗುವುದಲ್ಲದೇ, ವಿನಾಶಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೇ ರಚನಾತ್ಮಕ ವಿಷಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಹಾಗೆಯೇ ಅವರ ಸ್ನೇಹ ವಲಯ, ಸಮಾನ ಮನಸ್ಕರ, ಮತ್ತು ಸಮಾನ ಆಸಕ್ತರ ವಲಯ ವೃದ್ಧಿಸುವುದರಿಂದ ವ್ಯಕ್ತಿಯು ಸಾಮಾಜಿಕವಾಗಿ ಸದೃಢವಾಗುತ್ತಾನೆ.
ಇದೇ ರೀತಿಯಲ್ಲಿ ಮಕ್ಕಳಿಗೆ ಮಾತ್ರವಲ್ಲದೇ ಪೋಷಕರಿಗೂ ಮತ್ತು ಶಿಕ್ಷಕರಿಗೂ ಅತ್ಯಗತ್ಯವಾಗಿ ಶಿಬಿರಗಳನ್ನು ಅಥವಾ ಕಾರ್ಯಾಗಾರಗಳನ್ನು ಮಾಡಬೇಕು. ಅವುಗಳು ಏನೆಂದು ಮತ್ತು ಏಕೆಂದು ಮುಂದೆ ನೋಡೋಣ.