ನಗ್ನ ಸಂದೇಶ
ಶಿವಕುಮಾರ್ ಮಾವಲಿ
► ದೃಶ್ಯ 1
ಫುಟ್‌ಪಾತ್ ಮೇಲೆ ಮಲಗಿ ಒದ್ದಾಡುತ್ತಿದ್ದ ವ್ಯಕ್ತಿಯ ಸುತ್ತ ಜನರ ಗುಂಪು ಸೇರಿತ್ತು. ಮನಸೋಯಿಚ್ಛೆ ಮಾತನಾಡುತ್ತಿದ್ದವರ ಪೈಕಿ, ದಿನಾಲು ಆ ಹಾದಿಯಲ್ಲಿ ನಡೆದು ಹೋಗುವ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಸರಕಾರಿ ಕಚೆೇರಿಗಳ ನೌಕರರು, ಆ ರಸ್ತೆಯ ತುದಿಯಲ್ಲಿರುವ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಇನ್ನು ಕೆಲವರಿದ್ದಿರಬಹುದು. ಅವರೆಲ್ಲರಿಗೂ ಆ ಇಳಿವಯಸ್ಕನ ಪರಿಚಯ ಇದ್ದೇ ಇತ್ತು. ಅದೆಷ್ಟೋ ವರ್ಷಗಳಿಂದ ಆ ಫುಟ್ಪಾತ್ ಮೇಲೆ ಅರೆನಗ್ನಾವಸ್ಥೆಯಲ್ಲಿ ಕೂತಿರುತ್ತಿದ್ದ ಅವನ ಬಗ್ಗೆ ಅವರೆಷ್ಟು ಬಾರಿ ಕನಿಕರ ತೋರಿಲ್ಲ? ತಮ್ಮ ಕಿಸೆಯಲ್ಲಿದ್ದ ಚಿಲ್ಲರೆ ನಾಣ್ಯಗಳನ್ನು ಅವನತ್ತ ಎಸೆದು ತಮ್ಮ ಕಾರುಣ್ಯದ ತುಣುಕು ಪ್ರದರ್ಶನ ಮಾಡಿಕೊಂಡಿಲ್ಲ? ಅಥವಾ ನಿದ್ರಾವಸ್ಥೆಯಲ್ಲಿದ್ದ ಅವನ ಬಳಿ ಕಲ್ಲೆಸೆದು ಅವನು ಎಚ್ಚರಗೊಂಡು ಬೆನ್ನಟ್ಟಿ ಬಂದಾಗ ಅಲ್ಲಿಂದ ಕಾಲ್ಕಿತ್ತಿಲ್ಲ ? ಹಾಗಾಗಿ ಅಲ್ಲಿ ನೆರೆದಿದ್ದವರಿಗೆಲ್ಲ ಅವನ ಪರಿಚಯ ಚೆನ್ನಾಗಿಯೇ ಇತ್ತು. ಆದರೆ ಆ ದಿನದ ಪ್ರಸಂಗ ಅತಿರೇಕಕ್ಕೆ ಹೋಗಿತ್ತು ಎನ್ನಬಹುದು. ಒಂದು ಶಿಷ್ಟ ಸಮಾಜ ಇಂಥದ್ದನ್ನೆಲ್ಲ ಸಹಿಸುವುದಾದರೂ ಹೇಗೆ ? ಫುಟ್ ಪಾತ್ ನಲ್ಲಿ ಮಲಗಿದ್ದ ಆ ವೃದ್ಧನನ್ನು ಪಡ್ಡೆ ಹುಡುಗರು ಎಂದು ಕರೆಯಬಹುದಾದ ಗುಂಪೊಂದು ಕೆಣಕಿತ್ತು. ಗೇಲಿ ಮಾಡಿತ್ತು. ಅವನ ಮೈಮೇಲಿದ್ದ ತಲೆತಲಾಂತರದ ಆ ಬಟ್ಟೆಯು ‘ವಿಕಾಸ’ದ ಕೊನೆಯ ಹಂತ ತಲುಪಿಯಾಗಿತ್ತು. ಮುಚ್ಚಲೆತ್ನಿಸಿದಷ್ಟೂ ಬಿಚ್ಚಿಡುತ್ತಿದ್ದುದೇ ಹೆಚ್ಚು. ತಿರಿದು ತಿಂದರೂ ಮರ್ಯಾದೆಗೆ ಬದುಕುತ್ತಿದ್ದೇನೇನೋ ಎಂಬಂತಿದ್ದವನ ಗುಪ್ತಾಂಗಗಳು ಇಣುಕಲಾರಂಭಿಸಿದವು. ಇದನ್ನು ನೋಡಿ ಮಕ್ಕಳು ಗೇಲಿ ಮಾಡತೊಡಗಿದ್ದರು. ಮುಸುಮುಸು ನಗತೊಡಗಿದ್ದರು. ಬೀದಿ ನಾಯಿಗಳು ಅವನ ಮೈಮೇಲೆರಗತೊಡಗಿದ್ದವು ಕೂಡ. ಇಂತಹ ಸಮಯದಲ್ಲಿ ಅವನನ್ನು ಕಿಚಾಯಿಸಿದ ಆ ಪಡ್ಡೆ ಹುಡುಗರ ಗುಂಪಿಗೆ ಪ್ರತಿಕ್ರಿಯೆಯಾಗಿ ಆ ವೃದ್ಧ ನಡೆದುಕೊಂಡ ರೀತಿಯಿಂದಾಗಿ ಅಲ್ಲಿ ಜನ ಜಂಗುಳಿಯೇ ಸೇರಿತ್ತು. ಸಾವಿರಾರು ಜನ ಓಡಾಡುವ ರಸ್ತೆಯ ಫುಟ್‌ಪಾತ್ ಮೇಲೆ ಆ ವೃದ್ಧ ಮಾಡಿದ್ದೇನೆಂದರೆ: ತನ್ನನ್ನು ಆ ಹುಡುಗರ ಗುಂಪೊಂದು ಅರೆಬಟ್ಟೆಯಲ್ಲಿ ನೋಡಿ ನಕ್ಕು, ಗೇಲಿ ಮಾಡಿದ್ದಕ್ಕೆ ಕ್ರುದ್ಧನಾಗಿ ತನ್ನ ಮೈಮೇಲಿದ್ದ ಅರೆಬಟ್ಟೆ ಯನ್ನೂ ಬಿಚ್ಚಿ ಬಿಸಾಕಿದ್ದಾನೆ. ತನ್ನನ್ನು ನೋಡಿ ಅಣಕಿಸುವ ಬಣ್ಣಬಣ್ಣದ ಸಮಾಜದ ಮುಂದೆ ಬೆತ್ತಲಾಗಿ ನಿಂತಿದ್ದಾನೆ. ಅವನ ಈ ಸ್ಥಿತಿಯನ್ನು ನೋಡಿ ಮೊದಮೊದಲು ನಕ್ಕು , ಕೂಗಾಡಿ ದವರೆಲ್ಲ ಕ್ರಮೇಣ ಅಸಹ್ಯಪಟ್ಟುಕೊಳ್ಳತೊಡಗಿದರು. ‘ಹೇ ನೋಡ್ರೋ ಶ್ರವಣಬೆಳಗೊಳಕ್ಕೆ ಹೋಗ್ದಿರೋರೆಲ್ಲ ಇಲ್ಲೇ ದರ್ಶನ ಮಾಡ್ಕೋಬೋದು’ ಎಂದವನನ್ನು ಅಲ್ಯಾರೋ ‘ಮ್ಯಾನರ್ಸ್ ಇಲ್ದಿರೋ ನಾನ್ಸೆನ್ಸ್ ಗಳು’ ಎಂದು ಬೈದುಕೊಂಡರು.
ಅದೇ ಮಾರ್ಗವಾಗಿ ಹೋಗುತ್ತಿದ್ದ ಜಿಲ್ಲಾಧಿಕಾರಿಯ ಕಾರು ಅವರ ಸೂಚನೆಯ ಮೇರೆಗೆ ಆ ಸ್ಥಳದಲ್ಲಿ ನಿಂತಿತು. ಕಾರಿಳಿದು ಬಂದ ಜಿಲ್ಲಾಧಿಕಾರಿ ಜನರನ್ನು ಬದಿಗೆ ಸರಿಸುತ್ತ ಆ ವೃದ್ಧನ ಬಳಿ ಬಂದರು. ಬೆತ್ತಲಾಗಿ ನಿಂತಿದ್ದ ಅವನನ್ನು ನೋಡಿ ಆಶ್ಚರ್ಯ ಮತ್ತು ಅಸಹ್ಯದ ಮುಖಭಾವ ತಾಳಿದರು. ಆದರೆ ತಾವೊಬ್ಬ ಉನ್ನತ ಅಧಿಕಾರಿ ಎಂಬುದನ್ನು ಮರೆಯದೇ ಯಾವ ಭಾವನೆಗಳನ್ನೂ ವ್ಯಕ್ತಪಡಿಸದ ಅವರು, ಆ ನಿಕೃಷ್ಠ ವರ್ತನೆಯ ವ್ಯಕ್ತಿಯೊಂದಿಗೆ ಮಾತಾಡುವುದೇ ತಪ್ಪು ಎಂಬಂತೆ ಅತ್ತಿತ್ತ ನೋಡುತ್ತಿದ್ದರು ಜಿಲ್ಲಾಧಿಕಾರಿ. ಅಷ್ಟರಲ್ಲಿ ಅವರು ಅಲ್ಲಿಗೆ ಬಂದ ಸುದ್ದಿ ತಿಳಿದು ಸ್ಥಳೀಯ ಪೊಲೀಸ್ ಸ್ಟೇಷನ್‌ನ ಇನ್‌ಸ್ಪೆಕ್ಟರ್ ಅಲ್ಲಿಗೆ ದೌಡಾಯಿಸಿದರು. ಓಡಿ ಬಂದವರೇ, ‘ಸರ್, ನೀವು ಹೊರಡಿ. ಈ ಭಿಕ್ಷುಕನಿಗೆ ಸಾಕಷ್ಟು ಸಾರಿ ವಾರ್ನ್ ಮಾಡಿದ್ವಿ. ಆದ್ರೂ ಇಲ್ಲಿಂದ ಹೋಗಿಲ್ಲ. I will address this issue ಎಂದು ಅನಗತ್ಯ ವಿನಯದಿಂದ ನುಡಿದರು. ಅದಕ್ಕೆ ಜಿಲ್ಲಾಧಿಕಾರಿ, ‘ಹೌದಲ್ಲವೇನ್ರಿ ? ಶಾಲಾ-ಕಾಲೇಜುಗಳ ಮಕ್ಕಳು ಓಡಾಡೋ ಜಾಗ. ಮೇಲಾಗಿ ಈ ರಸ್ತೆಯ ತುದಿಗೆ ಒಂದು ದೇವಸ್ಥಾನ ಕೂಡ ಇದೆ. ಇಂತಹ ಸ್ಥಳದಲ್ಲಿ ಹೀಗೆ ಅಸಹ್ಯವಾಗಿ ವರ್ತಿಸೋದು ಅಂದರೆ ಏನು ? ಇವರೆಲ್ಲ ಒಂದು ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಕುಲಗೆಡಿಸುವಂಥವರು.Take some legal action ಎಂದು ಸಬ್‌ಇನ್‌ಸ್ಪೆಕ್ಟರ್‌ರನ್ನು ನೋಡಿದರು. ಅದಕ್ಕವರು ‘ಯೆಸ್ ಸರ್. ಇವನ ಮೇಲೆ ಕೇಸ್ ಹಾಕ್ತೀನಿ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಆಧಾರದಲ್ಲಿ ಕೇಸ್ ಹಾಕಿ ತಳ್ತೀನಿ ಜೈಲಿಗೆ’ ಎಂದು ಭರವಸೆ ಕೊಟ್ಟ ಮೇಲೆಯೇ ಜಿಲ್ಲಾಧಿಕಾರಿ ಅಲ್ಲಿಂದ ಹೊರಟಿದ್ದು...
ಇತ್ತ ಬಟ್ಟೆಗಾಗಿ ದೇವರಲ್ಲಿ ಮೊರೆದು ಮೊರೆದು ಬೇಸತ್ತಿದ್ದವ ಬಟ್ಟೆ ಕಳಚಿ ಬೆತ್ತಲಾಗಿದ್ದ ಮತ್ತು ಆ ಮೂಲಕ ನಾನೇ ದೇವರಾದೆ ಎಂಬ ಭ್ರಮೆಯಲ್ಲಿದ್ದ... ಅಲ್ಲಿ ನೆರೆದಿದ್ದ ಜನರೆಲ್ಲ ನಿರ್ಭಾವುಕರಾಗಿ , ನಿರ್ವಿಣ್ಣರಾಗಿ ತಮ್ಮ ಕೆಲಸಕಾರ್ಯಗಳಿಗೆ ಹಿಂದಿರುಗಿದರು ಹಾಗೂ ಆತ ನಗ್ನನಾಗಿ ಅಸಭ್ಯ ವರ್ತನೆ ತೋರಿದ್ದರ ಬಗ್ಗೆ ವಿಚಾರಣೆಗಾಗಿ ಸಬ್ ಇನ್‌ಸ್ಪೆಕ್ಟರ್ ಅವನನ್ನು ಲಾಕಪ್‌ನಲ್ಲಿ ಹಾಕಲು ಎಳೆದೊಯ್ದರು...
►ದೃಶ್ಯ 2
ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ತಮ್ಮ ಹೆಂಡತಿ ಚಿಂತಾಕ್ರಾಂತಳಾಗಿ ಕೂತಿದ್ದನ್ನು ಕಂಡ ಜಿಲ್ಲಾಧಿಕಾರಿ ಕೊಂಚ ಗಲಿಬಿಲಿಗೊಂಡರು. ಸಾವಧಾನವಾಗಿ ವಿವರಣೆ ಪಡೆದಾಗ ತಿಳಿದದ್ದೇನೆಂದರೆ ಅವರ ಹೆಂಡತಿಯ ಮೊಬೈಲ್ ಗೆ ಕಳೆದ ಕೆಲ ದಿನಗಳಿಂದ ಯಾರೋ ಒಬ್ಬ ನಗ್ನ ಚಿತ್ರಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶಗಳಾಗಿ ಕಳುಹಿಸುತ್ತಿದ್ದು , ಅದರ ಬಗ್ಗೆ ಅವರು ಪ್ರಾರಂಭದಲ್ಲಿ ತಲೆಕೆಡಿಸಿಕೊಂಡಿರಲಿಲ್ಲವಂತೆ . ಇದು ನಿಲ್ಲಬಹುದು, ಒಬ್ಬ ಅಧಿಕಾರಿಯ ಪತ್ನಿಯಾಗಿ ಜವಾಬ್ದಾರಿಯಿಂದ ವರ್ತಿಸಬೇಕು. ಅನವಶ್ಯಕವಾಗಿ ಸುದ್ದಿಗೀಡಾಗುವುದು ಬೇಡ ಎಂದು ಅಸಡ್ಡೆ ಮಾಡಿದ್ದಾರೆ . ಆದರೆ ಅದು ನಿಲ್ಲದೆ ಆತ ದಿನದಿಂದ ದಿನಕ್ಕೆ ಹೆಚ್ಚು ನಗ್ನ ಚಿತ್ರಗಳನ್ನು ಕಳಿಸಲಾರಂಭಿಸಿದ್ದಾನೆ. ಇವರು ತಾನು ಜಿಲ್ಲಾಧಿಕಾರಿಗಳ ಪತ್ನಿ ಎಂದು ತಿಳಿಸಿದಾಗ್ಯೂ ಆತ ನಗ್ನ ಸಂದೇಶಗಳನ್ನು ಕಳುಹಿಸುವುದನ್ನು ನಿಲ್ಲಿಸದೇ ಇದ್ದಾಗ ಇವರು ಚಿಂತಿತರಾಗಿ ತಮ್ಮ ಪತಿಗೆ ತಿಳಿಸುವ ನಿರ್ಧಾರ ಮಾಡಿ ಕಾಯುತ್ತಾ ಕೂತಿದ್ದರು. ಈ ವಿಷಯ ತಿಳಿದ ಜಿಲ್ಲಾಧಿಕಾರಿಗೆ ತಮ್ಮ ಸಂದರ್ಶನ ವೇಳೆಯಲ್ಲಿ ತಯಾರಾದ ಎಥಿಕ್ಸೃ್ ಆ್ಯಂಡ್ ಇಂಟೆಗ್ರಿಟಿ ಪ್ರಶ್ನೆ ಪತ್ರಿಕೆಯ ಯಾವ ವಿಷಯಗಳೂ ಉಪಯೋಗಕ್ಕೆ ಬಾರದೆ ಕೇವಲ ಓರ್ವ ಸಭ್ಯ ಪತಿಯಾಗಿ ಮಾತ್ರ ಯೋಚಿಸಲು ಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಪತಿಗೆ ಬರಬಹುದಾದ ರೋಷ ಮತ್ತು ಆವೇಶ ಅವರಿಗೂ ಬಂದಿದೆ. ಇದರ ಜೊತೆಯಲ್ಲಿ ಅವರ ಬಳಿ ಅಧಿಕಾರವೂ ಇತ್ತಲ್ಲವೇ? ಅದನ್ನು ಬಳಸಿ ತಕ್ಷಣ ಸೈಬರ್ ಕ್ರೈಮ್ ಪೊಲೀಸರ ಮೂಲಕ ಆ ಕಿಡಿಗೇಡಿಯ ಪತ್ತೆ ಮಾಡಲಾಗಿದೆ . ‘ಸರ್, ಅವನನ್ನು ಬಂಧಿಸಿಯಾಗಿದೆ .ನೀವು ಬಯಸಿದರೆ ನಿಮ್ಮ ಮನೆಗೆ ಕರೆದುಕೊಂಡು ಬರ್ತೀವಿ’ ಎಂದು ಕಾಲ್ ಮಾಡಿದ ಪೊಲೀಸ್ ಅಧಿಕಾರಿಗೆ ಜಿಲ್ಲಾಧಿಕಾರಿಯವರು , ‘ಬೇಡ, ಅವನನ್ನು ಕರೆದುಕೊಂಡು ಬರುವುದು ಬೇಡ. ನಾನೇ ಸ್ಟೇಷನ್‌ಗೆೆ ಬರುತ್ತೇನೆ ’ ಎಂದು ಹೇಳಿ ಸ್ಟೇಷನ್‌ಗೆ ಹೋಗಿದ್ದಾರೆ. ಸ್ಟೇಷನ್‌ನಲ್ಲಿ ಅವರಿಗೆ ಎದುರಾದ ವಿಚಿತ್ರ ಸನ್ನಿವೇಶ ಹೀಗಿತ್ತು:
ಆ ದಿನ ರಸ್ತೆಯ ಮೇಲೆ ಬೆತ್ತಲಾಗಿ ಮಲಗಿದ್ದವನನ್ನು ಅರೆಸ್ಟ್ ಮಾಡಿಸಿ ತಂದು ಹಾಕಿದ್ದ ಲಾಕಪ್‌ನ ಪಕ್ಕದಲ್ಲೇ ಈ ನಗ್ನ ಸಂದೇಶ ಕಳಿಸಿದ ವ್ಯಕ್ತಿಯನ್ನು ಇರಿಸಲಾಗಿತ್ತು. ಇಬ್ಬರನ್ನೂ ಅಕ್ಕಪಕ್ಕದ ಸೆಲ್‌ಗಳಲ್ಲಿ ನೋಡಿದ ಜಿಲ್ಲಾಧಿಕಾರಿಗಳಿಗೆ ಅದೇನನ್ನಿಸಿತೋ ಏನೋ ಠಾಣೆಯಲ್ಲಿದ್ದ ಎಲ್ಲರನ್ನೂ ಕೆಲ ನಿಮಿಷ ಹೊರ ಹೋಗುವಂತೆ ಸೂಚಿಸಿದರು. ಆನಂತರ ಆ ಯುವಕನನ್ನು ವೃದ್ಧನ ಸೆಲ್ ನೊಳಗೆ ಕರೆದೊಯ್ದರು. ಬೆತ್ತಲನ್ನು ದಿಟ್ಟಿಸುವಂತೆ ತಾಕೀತು ಮಾಡಿದರು. ಆ ವೃದ್ಧನ ಬಳಿ ಆತ ಬೆತ್ತಲಾಗುವುದರ ಹಿಂದಿನ ಕಾರಣವನ್ನು ಕೇಳಿದರು. ಆ ಯುವಕನ ಬಳಿ ‘ಬೆತ್ತಲಿನ ಬಗ್ಗೆ’ ‘ನಗ್ನತೆಯ ಬಗ್ಗೆ’ ಆತನಿಗೇಕೆ ಅಷ್ಟು ವ್ಯಾಮೋಹ ಎಂಬುದನ್ನೂ ಕೇಳಿದರು. ಒಬ್ಬನ ಮೈ ನಗ್ನವಾಗಿದ್ದರೆ ಮತ್ತೊಬ್ಬನ ಮನಸ್ಸು ನಗ್ನವಾಗಿತ್ತು. ಅವರಿಬ್ಬರನ್ನೂ ಠಾಣೆಯಿಂದ ಹೊರಗೆ ಕರೆತಂದು ಅಲ್ಲಿರುವ ಅಧಿಕಾರಿಗಳನ್ನು ಕುರಿತು; ಈ ಯುವಕನ ಮೇಲಿನ ಕೇಸನ್ನು ನಾನು ಹಿಂಪಡೆಯುತ್ತೇನೆ. ಅವನಿಗೆ ಇಂದು ನಗ್ನತೆಯ ಪರಿಚಯವಾಗಿದೆ. ಹಾಗೆಯೇ ನೀವು ಆ ವೃದ್ಧನ ಮೇಲಿನ ಕೇಸನ್ನು ಖುಲಾಸೆಗೊಳಿಸುವುದು ಒಳ್ಳೆಯದು ಎಂದನ್ನಿಸುತ್ತೆ. ಆತ ಇನ್ನೂ ಸಾಕಷ್ಟು ಜನರಿಗೆ ನಗ್ನತೆಯನ್ನು ಪರಿಚಯಿಸಬೇಕಿದೆ ಎನ್ನುತ್ತಾ ಕಾರು ಹತ್ತಿದರು...
► ದೃಶ್ಯ 3
ಮರುದಿನ ಬೆಳಗ್ಗೆ ಜಿಲ್ಲಾಧಿಕಾರಿಗಳು ಸುದ್ದಿ ಪತ್ರಿಕೆ ಓದುತ್ತಾ ಕುಳಿತಿದ್ದರು. ಅದರಲ್ಲಿಯ ಒಂದು ಸುದ್ದಿ ಹೀಗಿತ್ತು;
ಹೆಂಡತಿಗೆ ನಗ್ನ ಸಂದೇಶಗಳನ್ನು ಕಳಿಸುತ್ತಿದ್ದ ಆರೋಪಿಯನ್ನು ಮಾನವೀಯತೆಯ ಆಧಾರದಲ್ಲಿ ಕ್ಷಮಿಸಿದ ಜಿಲ್ಲಾಧಿಕಾರಿ; ಬೆತ್ತಲಾಗಿ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಭಿಕ್ಷುಕನಿಗೂ ದೊರಕಿತು ಬಿಡುಗಡೆ ಭಾಗ್ಯ.
ಇದನ್ನು ಓದಿದ ಅವರು ಘಟನೆಯೊಂದು ಸುದ್ದಿಯಾಗುವಾಗ ಕಳೆದುಕೊಳ್ಳುವ ಸೂಕ್ಷ್ಮತೆಯ ಬಗ್ಗೆ ತಮ್ಮ ಹೆಂಡತಿಗೆ ವಿವರಿಸುತ್ತಾ ಮುಗುಳ್ನಕ್ಕರು...