ನಿಬ್ಬೆರಗು...

Update: 2019-02-02 16:14 GMT

ಗಿರಿಜಾಶಾಸ್ತ್ರಿ ಮುಂಬೈ

‘ಭಾಯ್ ಸಾಹೇಬ್ ನನಗಾಗಿ ಹಂಸ ಧ್ವನಿಯನ್ನು ಹಾಡುವಿರಾ? ಇದು ನನ್ನ ಆತ್ಮದ ತುರ್ತು. ನಾನು ತಬಲಾ ನುಡಿಸುವೆ ಬೇಕಾದರೆ’ ಪ್ರಸಿದ್ಧ ಸಿತಾರ್ ವಾದಕ ವಿಲಾಯತ್‌ಖಾನ್ ಒಮ್ಮೆ ತನ್ನನ್ನು ನೋಡಲು ಬಂದ, ಅಷ್ಟೇ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಉಸ್ತಾದ್ ಅಮೀರ್‌ಖಾನ್‌ಗೆ ಮಾಡುವ ಕೋರಿಕೆ ಇದು. ನಮಿತಾ ದೇವಿ ದಯಾಳ್ ಬರೆದಿರುವ The Sixth string of Vilayat Khan ಕೃತಿಯಕೊನೆಯ ಭಾಗದಲ್ಲಿ ಬರುವ ಪ್ರಸಂಗವಿದು.

ಅಮೀರ್‌ಖಾನ್ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಪ್ರಭಾವಿಸಿದವರಲ್ಲಿ ಪ್ರಮುಖರು. ಇಂದೋರ್ ಘರಾಣೆ ಸ್ಥಾಪಕ, ಹಾಗೆಯೇ ವಿಲಾಯತ್‌ಖಾನನಾದರೂ ಎಂತಹ ಸಿತಾರ್ ವಾದಕನೆಂದರೆ ರಾಗದ ಪ್ರಸ್ತುತಿಯೊಂದು ಹೇಗಿರಬೇಕೆಂದರೆ ಹಾಡು ಪ್ರಾರಂಭಿಸಿದ ಮರುಕ್ಷಣದಲ್ಲೇ ಹಾಡುವ ಮತ್ತು ಕೇಳುಗರ ಮುಂದೆ ಸಾಕ್ಷಾತ್ತಾಗಿ ಆ ರಾಗ ಬಂದು ನಿಲ್ಲುವಂತಿರಬೇಕು (ಮ್ಯೂಸಿಕ್ ರೂಮ್) ಎನ್ನುತ್ತಾನೆ. ಹತ್ತಾರು ಹೆಣ್ಣುಗಳೊಂದಿಗೆ ವಿಲಾಸಗೈದ ವಿಲಾಯತ್ ಖಾನನಿಗೆ ಅವನ ಆತ್ಯಂತಿಕ ಪ್ರೇಮಿಯೆಂದರೆ ಭೈರವಿಯೇ. ಲೇಖಕಿ ದಾಖಲಿಸುವ ಒಂದು ಸಂದರ್ಶನದಲ್ಲಿ ಅವನು ಭೈರವಿಯ ಅನಂತ ರೂಪವನ್ನು ಅವಳ ಬೆರಗುಗೊಳಿಸುವ ಶಕ್ತಿಯನ್ನು ನನಗೆ ವಿವರಿಸಲು ಸಾಧ್ಯವಾದರೆ!!!ಎಂದು ವಿಷಾದಿಸುತ್ತಾನೆ. ಅವಳ ವ್ಯಕ್ತಿತ್ವದ ಎಷ್ಟು ವಿಭಿನ್ನ ಆಯಾಮಗಳನ್ನು ನಾನು ಕಂಡುಕೊಂಡೆ !ಯಾಅಲ್ಲಾಹ್! ಒಬ್ಬ ಸಾಧಕನ ಮುಂದೆ ಎಷ್ಟು ವಿಭಿನ್ನ ರೂಪಗಳಲ್ಲಿ, ವಿಭಿನ್ನ ನಾಮಗಳಲ್ಲಿ ನೀನು ಮೈದಳೆಯುತ್ತೀ!! ನಮ್ಮ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಭಿನ್ನ ಹೆಸರುಗಳಲ್ಲಿ ಕರೆದು ನಿನ್ನನ್ನು ಹಿಡಿಯಲು ಪ್ರಯತ್ನಿಸುತ್ತೇವೆ. ಆದರೆ ಎಲ್ಲಾ ಹೆಸರುಗಳೂ ನಿನ್ನ ವೈಭವವನ್ನು ಸಾರುವ, ಮೆರೆಸುವ ಹಾಡುಗಳೇ ಆಗಿವೆ. ನೀನೇ ಗಂಡು; ನೀನೇ ಹೆಣ್ಣು; ಪ್ರೇಮಿಯೂ ನೀನೇ, ಪ್ರೇಮಿಸುವವಳೂ ನೀನೇ; ಅರಸಿಯೂ ನೀನೇ; ನೀನೇ ವಿರಾಗಿಯೂ. ಭೈರವಿಯನ್ನು ಹೀಗೆ ಕಣ್ಣಮುಂದೆ ಸಾಕ್ಷಾತ್ತಾಗಿ ನಿಲ್ಲಿಸುವ ಶಕ್ತಿ ಇರುವ ವಿಲಾಯತ್‌ಖಾನ್, ಅಮೀರ್ ಖಾನ್‌ನ ಹಂಸಧ್ವನಿಗಾಗಿ ಮೊರೆ ಹೋಗುತ್ತಾನೆ. ಹಂಸಧ್ವನಿಯ ಆ ಕೀರ್ತನೆ ಅಮೀರ್‌ಖಾನ್‌ನನ್ನು ಅಮರಗೊಳಿಸಿತು ಎನ್ನುತ್ತಾಳೆ ಲೇಖಕಿ. ತಕ್ಷಣ ಪುಸ್ತಕ ಮುಚ್ಚಿ, ವಿಲಾಯತ್‌ಖಾನ್‌ನ ಆತ್ಮವನ್ನು ತೃಪ್ತಗೊಳಿಸಿದ, ಅಮೀರ್‌ಖಾನನ್ನು ಅಮರಗೊಳಿಸಿದ ಹಂಸಧ್ವನಿಯ ಜೈ ಮಾತೆ ವಿಲಂಬೆಗಾಗಿ ಯೂಟ್ಯೂಬ್ ಮೊರೆ ಹೊಕ್ಕೆ. ರಾತ್ರಿ 11ರ ಸಮಯ. ಮಂದ ಮಂದವಾಗಿ ಸಾಗುವ ಹಂಸಧ್ವನಿ ಕೇಳುತ್ತಾ ಕೇಳುತ್ತ ವಿಲಾಯತ್‌ಖಾನ್ ಈ ಹಾಡನ್ನು ತನ್ನ ಆತ್ಮದ ಮೊರೆ ಎಂದು ಯಾಕೆ ಹೇಳಿದ ಎಂದು ಹೊಳೆಯಿತು. ಧ್ಯಾನಸ್ಥ ನೆಲೆಯ ನಿಧಾನಗತಿ. ಇಡೀ ದೇಹ ಹಗುರಾಗಿ ಹಕ್ಕಿಯಂತೆ ಹಾರುವ ಅನುಭವ. ಮರಣದ ಅನುಭವಕೂಡ ಹೀಗೆಯೇ ಇರುವುದಂತೆ! (ಹಾಗೆಂದು ಇತ್ತೀಚಿನ ವೈಜ್ಞಾನಿಕ ಶೋಧಗಳು ಸಾಬೀತುಪಡಿಸಿವೆ). ವಿಲಾಯತ್ ಖಾನ್ ಅಮೀರ ಖಾನನಿಗೆ ತಬಲಾ ಸಾಥ್ ನೀಡುತ್ತ ಇಲ್ಲಿ ನುಡಿಸಿರುವುದು ಮರಣ ಮೃದಂಗವಲ್ಲ. ಬದಲಾಗಿ ಹಂಸ ಹಗುರಾಗಿತೇಲಲು ಹೂಡಿದ ನೌಕೆ. ಆದುದರಿಂದಲೇ ಅದು ಹಂಸಧ್ವನಿ.wanson ಹಂಸ ನಮ್ಮ ಚಿಂತನೆಯಲ್ಲಿ ಆತ್ಮದ ಪ್ರತೀಕವೂ ಹೌದು. ಇಂಗ್ಲಿಷಿನಲ್ಲಿ ಎನ್ನುವ ಮಾತಿದೆ. ಗ್ರೀಕ್ ಪರಿಕಲ್ಪನೆ ಇದರ ಮೂಲ.ಅಲ್ಲಿಕೂಡ ಇದು ಮರಣದ ಮುಂಚಿನ ಅನುಸಂಧಾನ. ಹಂಸವೊಂದು ತನ್ನ ಸಾವಿಗೆ ಮುನ್ನ ಹಾಡುವ ಹಾಡು, ಕೊನೆಯ ಪ್ರಸ್ತುತಿ.

ಕಲೆ, ಕಲಾವಿದ ಮತ್ತು ಶ್ರೋತೃ ಈ ಮೂವರ ಅನುಸಂಧಾನದಲ್ಲಿ ಕಲೆಯ ಸಾರ್ಥಕತೆ ಮಾತ್ರವಲ್ಲ ಕಲಾವಿದ ಹಾಗೂ ಶ್ರೋತೃವಿನ ಸಾರ್ಥತೆಯೂ ಇದೆ. ಖಾನ್‌ಸಾಹೇಬನೇ ಹೇಳುವಂತೆ ಇದು ಆತ್ಮದ ಅನುಸಂಧಾನ. ಆದುದರಿಂದಲೇ ಅದು ಸಾಗುವುದು ಹಂಸ ಹೂಡುವ ನಾವೆಯ ಮೇಲೆ. ಆಗ ಒಳಗೆ ಮಡುಗಟ್ಟಿದ್ದು ಹರಿದು ಹಗುರಾಗುತ್ತದೆ. ಹಗುರಾಗದಿದ್ದರೆ ನಾವೆ ತೇಲುವುದೆಲ್ಲಿ ಬಂತು? ಹಾಗೆ ಅದು ಹಗುರಾಗುವುದು ಕಣ್ಣೀರಿನ ಮೂಲಕವೇ. ಅದಕ್ಕೇ ವಿಲಾಯತ್‌ಖಾನ್ ಹೇಳುತ್ತಾನೆ ‘ಕಣ್ಣೀರು ಮತ್ತು ಸಂಗೀತದ ಮೂಲವೊಂದೇ’. ನಾನು ಸಾಕಷ್ಟು ನೋವನ್ನು ಉಂಡಿದ್ದೇನೆ. ನನ್ನೊಳಗೆ ಹುದುಗಿರುವ ಅದು ಹೊರಬರಲೇ ಬೇಕಾಗಿದೆ.ಅದು ನನ್ನ ಸಂಗೀತದ ಮೂಲಕ ಹೊರ ಬರುತ್ತದೆ. ನಿನ್ನ ಸಂಗೀತದ ಮೂಲಕ ನೀನು ಯಾರನ್ನಾದರೂ ಅಳಿಸುವೆಯೆಂದರೆ (ಅದಕ್ಕೂ ಮೊದಲು) ನೀನೂ ಬಹಳ ಅತ್ತಿರಬೇಕು.

ನಮ್ಮ ಇಡೀ ಭಕ್ತಿ ಸಾಹಿತ್ಯಆತ್ಮಾನು ಸಂಧಾನ ಮಾಡುವುದೇ ಸಂಗೀತದ ಮೂಲಕ.ಅದು ವಚನ ಗಳಾಗಬಹುದು, ದೋಹೆ, ವಾಕ್, ಅಭಂಗ, ಪದ, ಕೀರ್ತನೆಗಳಾಗಬಹುದು, ಮುಕ್ತಿ ಅದರ ಗಂತವ್ಯ. ಹಂಸ ಅದರ ವಾಹಕ! ಆದುದರಿಂದಲೇ ಆರ್ದ್ರ! ಒಳಗಿನ ಆರ್ದ್ರತೆ ಹೊರಗೆ ಬಂದಾಗ ಅದು ಕಣ್ಣೀರು! ಭಕ್ತರು ಲಜ್ಜೆ ಬಿಟ್ಟು ಗೆಜ್ಜೆಕಟ್ಟಿ ಕುಣಿಯತ್ತಾರೆ, ಹಾಡುತ್ತಾರೆ, ಅಳುತ್ತಾರೆ!-ಸಾಮಾಜಿಕ ಉಪಾಧಿಗಳನ್ನೆಲ್ಲಾ ಗಾಳಿಗೆ ಹಾರಿಸಿ.

ವಿಲಾಯತ್‌ಖಾನ್‌ತನ್ನ ನುಡಿಸುವಿಕೆಯಲ್ಲಿ ಮಾತ್ರ ಹೊಸ ಹೊಸ ಆವಿಷ್ಕಾರ ಮಾಡಲಿಲ್ಲ. ಬದಲಿಗೆ ತನ್ನ ಸಿತಾರ್ ವಾದ್ಯದ ಮೇಲೂ ನಿರಂತರವಾಗಿ ಪ್ರಯೋಗ ನಡೆಸುತ್ತಲೇ ಹೋದ. ಪಂಚಮದ ಹಿತ್ತಾಳೆಯ ತಂತಿಯ ಬದಲಿಗೆ ಉಕ್ಕಿನ ತಂತಿಯನ್ನು ಜೋಡಿಸಿದ. ಹಾಗೆ ಹುಟ್ಟಿದ್ದೇ ಆರನೆಯ ತಂತಿ. ಈ ಆರನೆಯ ತಂತಿಯ ಜೋಡಣೆಯಿಂದಾಗಿ ಮನುಷ್ಯಧ್ವನಿ ಹೊರಡಿಸುವ ಎಲ್ಲಾ ತರಂಗಗಳನ್ನೂ ಸಿತಾರ್ ವಾದ್ಯ ಹೊರಡಿಸಲು ಸಾಧ್ಯವಾಯಿತು. ವಿಲಾಯತ್ ಖಾನನ ಕಲ್ಪನೆಯ ರೆಕ್ಕೆಗಳಿಗೆ ಇದು ಗಾಳಿ ಕಡೆಗೋಲಾಯಿತು. ಆದುದರಿಂದಲೇ ಖಾನ್ ಸಾಹೇಬನಿಗೆ ಸಂಗೀತಕ್ಷೇತ್ರದ ತಾರೆಯಾಗಲು ಸಾಧ್ಯವಾಯಿತು.

ವಿಲಾಯತ್‌ಖಾನ್ ಅಮೀರ್‌ಖಾನ್‌ನ ಹಂಸಧ್ವನಿಯನ್ನು ಇನ್ನಿಲ್ಲದಂತೆ ತಬ್ಬಿಕೊಳ್ಳುವ ಕಾಲಕ್ಕೆ ಬದುಕಿನ ಮುಸ್ಸಂಜೆಯಲ್ಲಿರುತ್ತಾನೆ. ಸರಕಾರದ ರಾಜಕಾರಣ, ಸಂಗೀತ ವಲಯದ ಪಿತೂರಿಗಳು, ಕೌಟುಂಬಿಕ ವಿರಸ, ಕಷ್ಟ ಕೋಟಲೆಗಳು, ಎಲ್ಲರಲ್ಲಿಯೂ ವಿಶ್ವಾಸವನ್ನು ಕಳೆದುಕೊಂಡ ಸಿನಿಕತನವನ್ನು ಬೆಳೆಸಿಕೊಳ್ಳಹತ್ತಿದಾಗ ಖಾನ್ ಸಾಹೇಬನ ನೆರವಿಗೆ ಬರುವುದು, ಹೆಚ್ಚಿನ ಎಲ್ಲಾ ಸಂಗೀತಗಾರರನ್ನು ಪೋಷಿಸಿದ ರಾಜನ್ ಮಿಶ್ರಾ, ಸಾಜನ್ ಮಿಶ್ರಾ ಸಹೋದರರನ್ನು ಬೆಳಕಿಗೆ ತಂದ ಸದ್ಗುರು ಜಗಜಿತ್ ಸಿಂಗ್. ಆಗ ಎಲ್ಲ ರೀತಿಯ ಅಬ್ಬರವನ್ನು ಕಳೆದುಕೊಂಡ ಅವನ ಸಂಗೀತ ಸಾಗರವನ್ನು ಸೇರುವ ನದಿಯಂತೆ ನಿಧಾನಗತಿಯನ್ನು ಅಪ್ಪಿಕೊಳ್ಳುತ್ತದೆ-ನಿಶ್ಚಲ ತತ್ವವನ್ನು ಆತ್ಮಸಾತ್ ಮಾಡಿಕೊಳ್ಳುವಂತೆ.

ತಾಂತ್ರಿಕ ಪರಿಣತಿ ಏನಿದ್ದರೂ ಆಟದ ಅರ್ಧ ಯಶಸ್ಸು ಮಾತ್ರ. ನಿಜವಾದ ಪರಿಣತಿಯೆಂದರೆ ವಾದ್ಯವನ್ನು ಮೀರಿ ಅದು ಹೊರಡಿಸುವ ಧ್ವನಿತರಂಗಗಳಾಚೆ ಹಾಯುವುದೇ! ಅದು ಮೆಚ್ಚುಗೆಯ ವಾಹ್‌ನಿಂದ ವಿಸ್ಮಯದ ಆಹಾ ದೆಡೆಗೆ ಚಲಿಸುವ ಸೃಜನಶೀಲತೆಯ ಪರಮ ಗತಿಯೂ ಹೌದು ಎನ್ನುತ್ತಾನೆ ವಿಲಾಯತ್‌ಖಾನ್.

ಹೌದು ಸೃಜನಶೀಲತೆಯ ಪಯಣ ಬೆರಗಿನಲ್ಲೇ ಕೊನೆಗೊಳ್ಳಬೇಕು. ಯಾಕೆಂದರೆ ಬೆರಗಿಗೆ ಬೆರಗೇ ಉತ್ತರ. ಸತ್ಯದ ಸ್ವರೂಪವೂ ವಿಸ್ಮಯವೇ ಎಂದು ಬಲ್ಲವರು ಹೇಳುತ್ತಾರೆ. ಬೇಂದ್ರೆ ಅಜ್ಜ ನುಡಿದದ್ದೂ ಅದೇ; ಇದು ಬರಿ ಬೆಳಗಲ್ಲೋ ಅಣ್ಣಾ!

Writer - ಗಿರಿಜಾಶಾಸ್ತ್ರಿ ಮುಂಬೈ

contributor

Editor - ಗಿರಿಜಾಶಾಸ್ತ್ರಿ ಮುಂಬೈ

contributor

Similar News