ಮೊಬೈಲ್ ಇಲ್ಲದ ಈ ಮಕ್ಕಳ ‘ವಿಶೇಷ ಸೆಲ್ಫಿ’ಗೆ ಬಾಲಿವುಡ್ ನಟರ ಮೆಚ್ಚುಗೆ

Update: 2019-02-04 07:31 GMT

ಮುಂಬೈ, ಫೆ.4: ಐದು ಮಂದಿ ಮುಗ್ಧ ಮಕ್ಕಳು ‘ವಿಶೇಷ ಸೆಲ್ಫಿ’ಗೆ ಪೋಸ್ ನೀಡುತ್ತಿರುವಂತೆ ಕಾಣುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ಐದು ಮಂದಿ ಪುಟ್ಟ ಮಕ್ಕಳ ಪೈಕಿ ಒಬ್ಬಾತನ ಕೈಯ್ಯಲ್ಲಿರುವುದು ಮೊಬೈಲ್ ಅಲ್ಲ, ಸಾಮಾನ್ಯ ಚಪ್ಪಲಿ, ಅದನ್ನು ಆತ ಮೊಬೈಲಿನಂತೆ ಕೈಯ್ಯಲ್ಲಿ ಹಿಡಿದು ಸೆಲ್ಫಿ ತೆಗೆಯುತ್ತಿರುವ ಪೋಸು ನೀಡಿದಂತೆ ಕಾಣುತ್ತಿದೆ.

ಆದರೆ ಆ ಮುಗ್ಧ ಮಕ್ಕಳ ಮುಖದಲ್ಲಿ ಮೂಡಿರುವ ಸಂತಸ ವರ್ಣಾತೀತ. ಬಾಲಿವುಡ್ಡಿನ ಹಲವು ಖ್ಯಾತನಾಮರು ಈ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ.

ಮೊದಲು ಈ ಫೋಟೋ ಪೋಸ್ಟ್ ಮಾಡಿದವರು ಹಿರಿಯ ನಟ ಅನುಪಮ್ ಖೇರ್. ಇದನ್ನು ನಂತರ ಸಾವಿರಾರು ಮಂದಿ ಶೇರ್ ಮಾಡಿದ್ದು ಬಾಲಿವುಡ್ ಸೆಲೆಬ್ರಿಟಿಗಳಾದ ಸುನೀಲ್ ಶೆಟ್ಟಿ, ಬೋಮನ್ ಇರಾನಿ ಮತ್ತು ಅತುಲ್ ಕಸ್ಬೇಕರ್ ಅವರಂತಹವರೂ ಪ್ರತಿಕ್ರಿಯಿಸಿದ್ದಾರೆ.

“ಪ್ರತಿಯೊಂದನ್ನೂ ಅತ್ಯುತ್ತಮವಾಗಿ ಬಳಸಿಕೊಳ್ಳುವವರಿಗೆ ಎಲ್ಲವೂ ಅತ್ಯುತ್ತಮವಾಗಿರುತ್ತದೆ'' (ಥಿಂಗ್ಸ್ ಟರ್ನ್ ಔಟ್ ದಿ ಬೆಸ್ಟ್ ಫಾರ್ ದಿ ಪೀಪಲ್ ಹೂ ಮೇಕ್ ದಿ ಬೆಸ್ಟ್ ಆಫ್ ದಿ ವೇ ಥಿಂಗ್ಸ್ ಟರ್ನ್ ಔಟ್) ಎಂದು ಖೇರ್ ಬರೆದರೆ, ವೈ ಚೀಟ್ ಇಂಡಿಯಾ ನಿರ್ಮಾಪಕ ಅತುಲ್ ಕಸ್ಬೇಕರ್ ಅವರು ಟ್ವೀಟ್ ಮಾಡಿ ``ಯಾರಾದರೂ ಈ ಮಕ್ಕಳು ಎಲ್ಲಿದ್ದಾರೆಂದು ಗುರುತಿಸಿದರೆ ಅವರೆಲ್ಲರಿಗೂ ಏನಾದರೂ ಉಡುಗೊರೆ ನೀಡಲು ಬಯಸುತ್ತೇನೆ'' ಎಂದಿದ್ದಾರೆ.

ಬೋಮನ್ ಇರಾನಿ ಈ ಫೋಟೋ ಶೇರ್ ಮಾಡಿ ತಮ್ಮ ಟ್ವೀಟ್ ನಲ್ಲಿ, “ನಿಮಗೆಷ್ಟು ಸಂತೋಷವಾಗಿರಬೇಕೆಂದು ಇಷ್ಟವೋ ಅಷ್ಟೇ ಸಂತೋಷವಾಗಿರುತ್ತೀರಿ. ಎಲ್ಲರಿಗೂ ಇದು ಅನ್ವಯಿಸುತ್ತದೆ. ಎಲ್ಲಕ್ಕಿಂತಹೂ ಹೆಚ್ಚು ಲೈಕ್ ಗಳು ಈ ಸೆಲ್ಫೀಗೆ ದೊರೆಯಬೇಕಿದೆ'' ಎಂದು ಬರೆದಿದ್ದಾರೆ.

ನಟ ಸುನೀಲ್ ಶೆಟ್ಟಿ ಇನ್‍ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿ, “ಈ ಸುಂದರ ಚಿತ್ರವನ್ನು ಶೇರ್ ಮಾಡುತ್ತಿದ್ದೇನೆ, ಸಂತೋಷವು ಮನಸ್ಸಿನ ಸ್ಥಿತಿ'' ಎಂದು ವರ್ಣಿಸಿದ್ದಾರೆ.

ಆದರೆ ಹಿರಿಯ ನಟ ಅಮಿತಾಬ್ ಬಚ್ಚನ್ ಮಾತ್ರ ಈ ಚಿತ್ರದಲ್ಲಿ ಏನೋ ಕೊರತೆಯನ್ನು ಗಮನಿಸಿದ್ದಾರೆ. “ಎಲ್ಲಾ ಗೌರವಗಳು ಮತ್ತು ಕ್ಷಮೆಯೊಂದಿಗೆ, ನನಗೆ ಇದು ಫೋಟೋಶಾಪ್ ಮಾಡಿದ ಚಿತ್ರವೆಂಬಂತೆ ಕಾಣುತ್ತದೆ. ಚಪ್ಪಲಿ ಹಿಡಿದ ಕೈ ಮತ್ತು ಆ ಬಾಲಕನ ಇನ್ನೊಂದು ಕೈ ಗಮನಿಸಿದಾಗ ಎರಡೂ ಒಂದೇ ಗಾತ್ರದ ಕೈಗಳು ಎಂದು ಅನಿಸುವುದಿಲ್ಲ'' ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News