ಎಸ್ಸಿ/ಎಸ್ಟಿ/ಒಬಿಸಿ ಅಧ್ಯಾಪಕಾಕಾಂಕ್ಷಿಗಳಿಗೆ ವಿವಿಗಳ ಬಾಗಿಲುಗಳು ಶಾಶ್ವತವಾಗಿ ಮುಚ್ಚಲಿವೆಯೇ?
2007 ಅಲಹಾಬಾದ್ ಹೈಕೋರ್ಟ್ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದಂತೆ ಒಂದು ತೀರ್ಪು ನೀಡಿತ್ತು. ಅದೆಂದರೆ ಎಸ್ಸಿ/ಎಸ್ಟಿ/ಒಬಿಸಿಗಳ ಹುದ್ದೆ ಮೀಸಲಾತಿಗಾಗಿ ಇಡೀ ವಿಶ್ವವಿದ್ಯಾನಿಲಯವನ್ನು ಒಂದು ಘಟಕವಾಗಿ ಪರಿಗಣಿಸದೆ ಆ ವಿವಿಗಳ ಸಂಬಂಧಿಸಿದ ವಿವಿಧ ಡಿಪಾರ್ಟ್‌ಮೆಂಟ್‌ಗಳನ್ನು ಒಂದು ಘಟಕವಾಗಿ ಪರಿಗಣಿಸಬೇಕು, ಹುದ್ದೆಗಳನ್ನು ಡಿಪಾರ್ಟ್‌ಮೆಂಟ್‌ವಾರು ಆಧರಿಸಿ ಮೀಸಲಿಡಬೇಕು ಎಂಬುದೇ ಆ ತೀರ್ಪು. ಹಾಗೆಯೇ ಮೊನ್ನೆ ಜನವರಿ 2ರಂದು ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟಿನ ಆ ತೀರ್ಪನ್ನು ಎತ್ತಿಹಿಡಿದಿದೆ. ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ‘‘ಹುದ್ದೆಗಳಿಗಾಗಿ ಇಡೀ ವಿವಿಯನ್ನು ಒಂದು ಘಟಕವಾಗಿ ಪರಿಗಣಿಸುವ ಬದಲು ಆ ವಿವಿಗಳ ಒಂದೊಂದೂ ಡಿಪಾರ್ಟ್‌ಮೆಂಟ್ ಅನ್ನು ಒಂದೊಂದು ಘಟಕವಾಗಿ ಪರಿಗಣಿಸಿ ಡಿಪಾರ್ಟ್‌ಮೆಂಟ್‌ವಾರು ಆಧಾರದ ಮೇಲೆ ಹುದ್ದೆಗಳನ್ನು ಮೀಸಲಿಡಿ, ಅಲಹಾಬಾದ್ ಹೈಕೋರ್ಟ್‌ನ ಆದೇಶದ ಅನುಸಾರ ಮುಂದುವರಿಯಿರಿ’’ ಎಂದು ಕೇಂದ್ರಕ್ಕೆ ಸೂಚಿಸಿದೆ.
ಮೇಲ್ನೋಟಕ್ಕೆ ಡಿಪಾರ್ಟ್‌ಮೆಂಟ್‌ವಾರು ಹುದ್ದೆಗಳನ್ನು ಮೀಸಲಿರಿಸಿ ಎಂದರೆ ತಪ್ಪೇನು? ಇದರಲ್ಲಿ ಸಮಸ್ಯೆಯಾಗುವಂತಹದ್ದೇನಿದೆ? ಎಂದು ಯಾರಿಗಾದರೂ ಅನಿಸದಿರದು. ಆದರೆ... ವಾಸ್ತವವೆಂದರೆ 02-02-19ರ ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯೊಂದರ ಪ್ರಕಾರ ಅಲಹಾಬಾದ್ ಹೈಕೋರ್ಟಿನ ಈ ತೀರ್ಪು ವಿವಿಗಳಲ್ಲಿ ಎಸ್ಸಿ/ಎಸ್ಟಿ/ಒಬಿಸಿಗಳ ಒಟ್ಟಾರೆ ಮೀಸಲಾತಿ ಹುದ್ದೆಗಳ ಪ್ರಮಾಣವನ್ನು ಶೇ.25ರಿಂದ ಶೇ.100ರವರೆಗೆ ಕಡಿತಗೊಳಿಸಲಿದೆ ಎಂಬುದು!
ಇದು ಹೇಗೆ? ಎಂದು ಯಾರಿಗಾದರೂ ಅನಿಸದಿರದು. ಆದರೆ ಅಲಹಾಬಾದ್ ಹೈಕೋರ್ಟ್ ಸೂಚಿಸಿರುವ ನೂತನ ಮಾರ್ಗದರ್ಶಿಯ ಅನುಸಾರ ಡಿಪಾರ್ಟ್‌ಮೆಂಟ್‌ಗಳನ್ನು ಘಟಕಗಳಾಗಿ ಪರಿಗಣಿಸಿ ಯಾವುದಾ ದರೂ ಒಂದು ವಿವಿಯ ಯಾವುದಾದರೂ ಒಂದು ಡಿಪಾರ್ಟ್‌ಮೆಂಟ್‌ನಲ್ಲಿನ ಹುದ್ದೆಗಳನ್ನು ಭರ್ತಿಮಾಡಲು ಹೋದರೆ ಮತ್ತು ಆ ಡಿಪಾರ್ಟ್‌ಮೆಂಟ್‌ನಲ್ಲಿ ಹುದ್ದೆಗಳ ಸಂಖ್ಯೆ 6 ಅಥವಾ 6ಕ್ಕಿಂತ ಕಡಿಮೆ ಇದ್ದರೆ ಅಲ್ಲಿ ಮೀಸಲಾತಿ ನೀತಿಯೇ ಅನ್ವಯವಾಗುವುದಿಲ್ಲ! ಹೇಗೆಂಬ ಪ್ರಶ್ನೆಗೆ ಉತ್ತರಿಸುವುದಾದರೆ, ಉದಾಹರಣೆಗೆ ಕೇಂದ್ರ ಸರಕಾರದ ಹುದ್ದೆ ಮೀಸಲಾತಿ ನೀತಿ ಅಡಿಯಲ್ಲಿ ಎಸ್ಸಿಗಳಿಗೆ ಶೇ.15, ಎಸ್ಟಿಗಳಿಗೆ ಶೇ.7.5, ಒಬಿಸಿಗಳಿಗೆ ಶೇ.27 ಮೀಸಲಾತಿ ನೀಡಬೇಕು. ಉಳಿದ ಶೇ.50 ಸಾಮಾನ್ಯ ವರ್ಗಕ್ಕೆ (ಅರ್ಹತೆ ಇದ್ದರೆ ಅಲ್ಲಿಯೂ ಎಸ್ಸಿ/ಎಸ್ಟಿ/ಒಬಿಸಿಗಳು ಬರಬಹುದು) ಮೀಸಲಾಗುತ್ತದೆ. ಈ ನಿಟ್ಟಿನಲ್ಲಿ ಯಾವುದಾದರೂ ಒಂದು ವಿವಿಯ ಯಾವುದೋ ಒಂದು ಡಿಪಾರ್ಟ್‌ಮೆಂಟ್‌ನಲ್ಲಿ ಅತ್ಯಂತ ಕಡಿಮೆ, ಉದಾಹರಣೆಗೆ 3 ಹುದ್ದೆಗಳಿವೆ ಎಂದಿಟ್ಟುಕೊಳ್ಳಿ. ಪ್ರಶ್ನೆಯೇನೆಂದರೆ ಆ ಮೂರು ಹುದ್ದೆಗಳಲ್ಲಿ ಅದು ಹೇಗೆ ಎಸ್ಸಿಗಳಿಗೆ ಶೇ.15, ಎಸ್ಟಿಗಳಿಗೆ ಶೇ.7.5, ಒಬಿಸಿಗಳಿಗೆ ಶೇ.27 ಮತ್ತು ಸಾಮಾನ್ಯ ವರ್ಗಕ್ಕೆ ಶೇ.50 ಮೀಸಲಿಡಲು ಸಾಧ್ಯ? ಖಂಡಿತ ಸಾಧ್ಯವಿಲ್ಲ. ಅರ್ಥಾತ್ ಅಲ್ಲಿ ಮೀಸಲಾತಿ ನೀತಿಯೇ ಅನ್ವಯವಾಗುವುದಿಲ್ಲ! ಪರಿಣಾಮ ಅದಷ್ಟೂ ಅಂದರೆ ಮೂರೂ ಹುದ್ದೆಗಳು ಸಾಮಾನ್ಯ ವರ್ಗದ ಹುದ್ದೆಗಳಾಗಿ ಪರಿಗಣಿಸಲ್ಪಡುತ್ತವೆ. ಇದಕ್ಕೇ ಹೇಳಿದ್ದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವ ಅಲಹಾಬಾದ್ ಹೈಕೋರ್ಟಿನ ಈ ತೀರ್ಪು ವಿವಿಗಳಲ್ಲಿ ಎಸ್ಸಿ/ಎಸ್ಟಿ/ಒಬಿಸಿಗಳ ಹುದ್ದೆ ಪ್ರಾತಿನಿಧ್ಯವನ್ನು ಶೇ.25ರಿಂದ ಶೇ.100ರಷ್ಟು ಕಡಿಮೆಗೊಳಿಸಲಿದೆ ಎಂದು.
ಯಾಕೆ ಹೀಗೆ? ಈ ನಿಟ್ಟಿನಲ್ಲಿ ಹಾಲಿ ಅಸ್ತಿತ್ವದಲ್ಲಿ ಇರುವ ವಿವಿಯನ್ನು ಒಂದು ಘಟಕವಾಗಿ ಪರಿಗಣಿಸುವ ನೀತಿ ಮುಂದುವರಿಸಿದರೆ, ಉದಾಹರಣೆಗೆ ವಿವಿಯೊಂದರಲ್ಲಿ 100 ಪ್ರೊಫೆಸರ್ ಹುದ್ದೆಗಳಿವೆ ಎಂದಿಟ್ಟುಕೊಂಡರೆ ಖಂಡಿತ ಎಸ್ಸಿ/ಎಸ್ಟಿ/ಒಬಿಸಿಗಳ ಆ ಶೇಕಡಾವಾರು ಪ್ರಾತಿನಿಧ್ಯವನ್ನು ಅಕ್ಷರಶಃ ಪಾಲಿಸಬಹುದು. ಆದರೆ ಈಗ ಅಲಹಾಬಾದ್ ಹೈಕೋರ್ಟ್ ಹೇಳಿರುವ ಡಿಪಾರ್ಟ್‌ಮೆಂಟ್ ವಾರು ಘಟಕ ಆಧಾರ ತೆಗೆದುಕೊಂಡರೆ ಸದರಿ ವಿವಿಯಲ್ಲಿ 100 ಪ್ರೊಫೆಸರ್ ಹುದ್ದೆಗಳಿದ್ದರೂ ಅಂತಹ ವಿವಿಗಳಲ್ಲಿ ಸಾಮಾನ್ಯವಾಗಿ 30 ಅಥವಾ 40ಕ್ಕೂ ಹೆಚ್ಚು ವಿವಿಧ ಡಿಪಾರ್ಟ್‌ಮೆಂಟ್‌ಗಳಿರುವ ಸಾಧ್ಯತೆ ಇರುವುದರಿಂದ ಒಂದೊಂದು ಡಿಪಾರ್ಟ್ ಮೆಂಟ್‌ಗೂ ಹೆಚ್ಚೆಂದರೆ 3 ಅಥವಾ 4 ಅಥವಾ 5 ಹುದ್ದೆಗಳು ಬರಬಹುದು. ಈ ದಿಸೆಯಲ್ಲಿ ಹುದ್ದೆಗಳ ಸಂಖ್ಯೆ 6ನ್ನು ಮೀರದಿದ್ದರೆ ಮೀಸಲಾತಿ ನೀತಿ ಅನ್ವಯ ಸಾಧ್ಯವಿಲ್ಲದ್ದರಿಂದ ಪ್ರೊಫೆಸರ್ ಹುದ್ದೆಗಳು ಎಸ್ಸಿ/ಎಸ್ಟಿ/ಒಬಿಸಿ ಅಭ್ಯರ್ಥಿಗಳಿಗೆ ಖಂಡಿತ ದಕ್ಕುವುದಿಲ್ಲ. ಅರ್ಥಾತ್ ವಿವಿಗಳ ಬಾಗಿಲುಗಳು ಎಸ್ಸಿ/ಎಸ್ಟಿ/ಒಬಿಸಿ ಅಭ್ಯರ್ಥಿಗಳಿಗೆ ಶಾಶ್ವತವಾಗಿ ಮುಚ್ಚಲ್ಪಡಲಿವೆ! ಅಂದಹಾಗೆ ಇದನ್ನು ಸುಮ್ಮನೆ ಹೇಳುತ್ತಿಲ್ಲ.
ಅಲಹಾಬಾದ್ ಹೈಕೋರ್ಟಿನ ಈ ತೀರ್ಪಿನ ಸಂಬಂಧ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯೊಂದರಲ್ಲಿ ವಿವಿಧ 20 ಕೇಂದ್ರೀಯ ವಿವಿಗಳಿಂದ ಸಂಗ್ರಹಿಸಿರುವ ಮಾಹಿತಿ ಆಧರಿಸಿಯೇ ಹೇಳುವುದಾದರೆ, ಪ್ರೊಫೆಸರ್ ಮಟ್ಟದ ಹುದ್ದೆಗಳಲ್ಲಿ 20 ವಿವಿಗಳಲ್ಲಿ ಒಟ್ಟು 936 ಹುದ್ದೆಗಳಿವೆ. ಈಗಿನ ನೀತಿಯ (ವಿವಿಯನ್ನು ಒಂದು ಘಟಕವಾಗಿ ಪರಿಗಣಿಸುವ) ಅನುಸಾರ ಈ ಹುದ್ದೆಗಳಲ್ಲಿ ಎಸ್ಸಿಗಳಿಗೆ 134, ಎಸ್ಟಿಗಳಿಗೆ 59, ಒಬಿಸಿಗಳಿಗೆ 11 ಮತ್ತು ಸಾಮಾನ್ಯ ವರ್ಗಕ್ಕೆ 732 ಹುದ್ದೆಗಳು ಸಿಕ್ಕಿವೆ. ಅಂದಹಾಗೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹೊಸ ನೀತಿ (ಡಿಪಾರ್ಟ್‌ಮೆಂಟ್ ಅನ್ನು ಒಂದು ಘಟಕವಾಗಿ ಪರಿಗಣಿಸುವ ನೀತಿ) ಅನುಸರಿಸಿ ಮಾನವ ಸಂಪನ್ಮೂಲ ಇಲಾಖೆ ಲೆಕ್ಕ ಹಾಕಿರುವಂತೆ ಎಸ್ಸಿಗಳಿಗೆ ಸಿಗುವ ಹುದ್ದೆಗಳು ಕೇವಲ 4! ಎಸ್ಟಿಗಳಿಗೆ 0, ಒಬಿಸಿಗಳಿಗೆ 0 ಮತ್ತು ಸಾಮಾನ್ಯ ವರ್ಗಕ್ಕೆ ಬರೋಬ್ಬರಿ 932 ಪ್ರೊಫೆಸರ್ ಹುದ್ದೆಗಳು ಸಿಗಲಿವೆ! ಅಂದರೆ ಎಸ್ಸಿಗಳಿಗೆ 134 ರಿಂದ 4 ಅಂದರೆ ಶೇ.97ರಷ್ಟು ಹುದ್ದೆ ಕಡಿತವಾದರೆ, ಎಸ್ಟಿಗಳಿಗೆ 59ರಿಂದ 0 ಅಂದರೆ ಶೇ.100ರಷ್ಟು ಕಡಿತ, ಒಬಿಸಿಗಳಿಗೆ 11 ರಿಂದ 0 ಅಂದರೆ ಶೇ.100 ರಷ್ಟು ಕಡಿತ, ಆದರೆ ಸಾಮಾನ್ಯ ವರ್ಗಕ್ಕೆ 732ರಿಂದ 932ಕ್ಕೆ ಹುದ್ದೆಗಳ ಸಂಖ್ಯೆ ಏರಿಕೆ ಅಂದರೆ ಶೇ.27ರಷ್ಟು ಹುದ್ದೆಗಳು ಹೆಚ್ಚಳ!
ಇದು ಪ್ರೊಫೆಸರ್(ಪ್ರಾಧ್ಯಾಪಕ) ಮಟ್ಟದ ಹುದ್ದೆಯ ಕತೆಯಾಯಿತು. ಈ ನಿಟ್ಟಿನಲ್ಲಿ ಸಹ ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ತೆಗೆದುಕೊಂಡರೆ ಅಲ್ಲಿಯೂ ಅಷ್ಟೇ. ಅಂದರೆ ಸಹ ಪ್ರಾಧ್ಯಾಪಕ ಹುದ್ದೆಗಳಲ್ಲಿ ಎಸ್ಸಿಗಳಿಗೆ ಶೇ.82ರಷ್ಟು, ಎಸ್ಟಿಗಳಿಗೆ ಶೇ.95ರಷ್ಟು ಮತ್ತು ಒಬಿಸಿಗಳಿಗೆ ಶೇ.52 ರಷ್ಟು ಹುದ್ದೆ ಕಡಿತವಾದರೆ, ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲಿ ಕ್ರಮವಾಗಿ ಎಸ್ಸಿಗಳಿಗೆ ಶೇ.58, ಎಸ್ಟಿಗಳಿಗೆ ಶೇ.78 ಮತ್ತು ಒಬಿಸಿಗಳಿಗೆ ಶೇ.25 ರಷ್ಟು ಹುದ್ದೆಗಳು ಕಡಿಮೆಯಾಗಲಿವೆ ಮತ್ತು ಈ ಎರಡೂ ಹುದ್ದೆಗಳಲ್ಲೂ ಯಥಾಪ್ರಕಾರ ಸಾಮಾನ್ಯ ವರ್ಗಕ್ಕೆ ಕ್ರಮವಾಗಿ ಶೇ.25 ಮತ್ತು ಶೇ.40ರಷ್ಟು ಹುದ್ದೆಗಳು ಹೆಚ್ಚಲಿವೆ. ಈ ನಿಟ್ಟಿನಲ್ಲಿ ಇದರ ಒಟ್ಟಾರೆ ಅರ್ಥ ಎಸ್ಸಿ/ಎಸ್ಟಿ/ಒಬಿಸಿ ಪ್ರತಿಭಾವಂತರಿಗೆ ವಿಶ್ವವಿದ್ಯಾನಿಲಯಗಳ ಹುದ್ದೆಗಳ ಬಾಗಿಲುಗಳು ಶಾಶ್ವತವಾಗಿ ಮುಚ್ಚಲಿವೆ ಎಂಬುದು. ಈ ಸಂದರ್ಭದಲ್ಲಿ ಈ ನೀತಿ ಬರೀ ಕೇಂದ್ರೀಯ ವಿವಿಗಳಿಗೆ ತಾನೇ ಎಂದು ಕೆಲವರು ಉದಾಸೀನತೆ ತೋರಬಹುದು. ಆದರೆ ಒಮ್ಮೆ ಕೇಂದ್ರೀಯ ವಿವಿಗಳಿಗೆ ಈ ನೀತಿ ಅನ್ವಯವಾದರೆ ರಾಜ್ಯ ಸರಕಾರಗಳ ವಿವಿಗಳಿಗೂ ಆ ನೀತಿ ಅನ್ವಯವಾಗುತ್ತದೆ ಎಂಬುದನ್ನು ಸಂಬಂಧಿಸಿದವರು ತಿಳಿಯುವ ಅಗತ್ಯವಿದೆ.
ಹಾಗಿದ್ದರೆ ಎಸ್ಸಿ/ಎಸ್ಟಿ/ಒಬಿಸಿಗಳ ಹುದ್ದೆ ಪ್ರಾತಿನಿಧ್ಯವನ್ನು ವಿವಿಗಳಲ್ಲಿ ರಕ್ಷಿಸಲು ತಕ್ಷಣ ಆಗಬೇಕಾದ್ದು? ಈ ಸಂಬಂಧ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕಾದ ಅಥವಾ ನೂತನ ಮಸೂದೆ ರೂಪಿಸಿ ಎಸ್ಸಿ/ಎಸ್ಟಿ/ಒಬಿಸಿಗಳ ಹುದ್ದೆ ಕೋಟಾ ರಕ್ಷಿಸಬೇಕಿದೆ ಎಂಬುದು. ಖಂಡಿತ, ಈ ನಿಟ್ಟಿನಲ್ಲಿ ವಿವಿಗಳ ಅಕಾಡಮಿಕ್ ವಲಯ ಎಚ್ಚೆತ್ತುಕೊಳ್ಳಬೇಕಿದೆ. ಹಾಗೆಯೇ ಸಾರ್ವಜನಿಕರೂ ಅಷ್ಟೇ ವಿಶೇಷವಾಗಿ ಎಸ್ಸಿ/ಎಸ್ಟಿ/ಒಬಿಸಿಗಳು ತಮ್ಮ ಹಕ್ಕುಗಳಿಗೆ ಪಟ್ಟಭದ್ರ ವ್ಯವಸ್ಥೆ ಯಾವ ಯಾವ ರೂಪದಲ್ಲಿ ಸಂಚಕಾರ ತಂದೊಡ್ಡು ತ್ತದೆ, ಅದನ್ನು ಹೇಗೆ ಮೈಯೆಲ್ಲ ಕಣ್ಣಾಗಿ ರಕ್ಷಿಸಿಕೊಳ್ಳಬೇಕು ಎಂಬುದರ ಕಡೆ ಗಮನಹರಿಸುವ ಅಗತ್ಯವಿದೆ. ಇಲ್ಲದಿದ್ದರೆ ವಿಶ್ವವಿದ್ಯಾನಿಲಯಗಳ ಎಸ್ಸಿ/ಎಸ್ಟಿ/ಒಬಿಸಿಗಳ ಹುದ್ದೆ ಮೀಸಲಿನ ಹಕ್ಕು ಸದಾ ಕಾಲಕ್ಕೆ ನಾಶವಾಗಲಿದೆಯಷ್ಟೆ.