ನಾನು ಬದುಕಿದ್ದು ಫಲವೇನು?

Update: 2019-02-06 08:42 GMT

ಹಿಂದೂ-ಮುಸ್ಲಿಂ-ಸಿಖ್ಖರ ಈ ಮಾನವ ಹತ್ಯಾಕಾಂಡದಿಂದ ಗಾಂಧೀಜಿ ಜರ್ಜರಿತರಾಗಿ ಹೋಗಿದ್ದರು. ಕಳೆದ ವರ್ಷ ಕಲ್ಕತ್ತಾ, ನವಖಾಲಿಯಲ್ಲಿ ಆಗಿದ್ದ ಮಾರಣಹೋಮಕ್ಕಿಂತಲೂ ಘನ ಘೋರವಾದ ದಿಲ್ಲಿಯ ನರಮೇಧದಿಂದ ಖಿನ್ನರಾಗಿ ಹೋಗಿದ್ದರು! ಇದು ನಿಲ್ಲದಿದ್ದರೆ ತಾನು ಬದುಕಿದ್ದು ಏನು ಪ್ರಯೋಜನ? ಈ ಪ್ರಶ್ನೆ ಅವರನ್ನು ಜನವರಿ ಪ್ರಾರಂಭದಿಂದಲೂ ಕೊರೆಯುತ್ತಿತ್ತು.

ಜನವರಿ 12, 1948. ಸುದ್ದಿ ಹಬ್ಬಿಬಿಟ್ಟಿತು: ಗಾಂಧೀಜಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದ್ದಾರಂತೆ. ಆಗ ಈಗಿನಂತೆ ಮಾಹಿತಿ ತಂತ್ರಜ್ಞಾನ, ಶೀಘ್ರಾತಿ ಶೀಘ್ರ ಸುದ್ದಿ ಮಾಧ್ಯಮಗಳಿಲ್ಲದಿದ್ದರೂ ಅದು ಹೇಗೋ ಗಾಂಧೀಜಿಯ ಈ ನಿರ್ಧಾರ ಭಾರತದ ಎಲ್ಲೆಡೆಯಲ್ಲೂ ಕ್ಷಣಾರ್ಧದಲ್ಲಿ ಹಬ್ಬಿಹೋಯಿತು. ತಬ್ಬಿಬ್ಬಾದ ಜನ ಯಾಕೆಂಬುದು ಗೊತ್ತಾಗದೆ ತಲ್ಲಣಿಸಿದರು.
ಪಾಕಿಸ್ತಾನದಿಂದ ಭಾರತಕ್ಕೆ ಓಡಿಬಂದ ಹಿಂದೂ, ಸಿಖ್, ಕ್ರಿಶ್ಚಿಯನ್... ಲಕ್ಷಾಂತರ ಜನ ದಿಲ್ಲಿಯಲ್ಲಿ, ಭಾರತದ ಭಾಗಕ್ಕೆ ಬಂದು ಪಂಜಾಬ್‌ನಲ್ಲಿದ್ದ ಮುಸ್ಲಿಮರನ್ನು ಅವರ ಮನೆಗಳಿಂದ ಹೊರದೂಡಿ, ಖಡ್ಗದಿಂದ ಅವರ ರುಂಡಗಳನ್ನು ಚೆಂಡಾಡಿ, ಹೆಂಗಸರು, ಮಕ್ಕಳು, ಮುದುಕರು, ಬಡವರು, ಬಲ್ಲಿದರು... ಎನ್ನದೆ ಸಾವಿರಾರು ಜನರನ್ನು ಕೊಂದು ಹಾಕಿದರು. ಅವರ ಮನೆಗಳನ್ನು ಆಕ್ರಮಿಸಿಕೊಂಡರು. ದಿಲ್ಲಿಯಲ್ಲಿ 111 ಮಸೀದಿಗಳಲ್ಲಿ ಆಶ್ರಯ ಪಡೆದಿದ್ದ ಮುಸ್ಲಿಮರನ್ನು ಹೊರದೂಡಿ ಪಶ್ಚಿಮ ಪಂಜಾಬ್‌ನಿಂದ ಓಡಿ ಬಂದಿದ್ದ ಹಿಂದೂ ಸಿಖ್ ಜನ ಆಕ್ರಮಿಸಿಕೊಂಡರು. ಜನವರಿ ತಿಂಗಳಲ್ಲಿ ಉತ್ತರ ಭಾರತದ ಸಹಿಸಲಾರದ ಚಳಿಯಲ್ಲಿ ಹೊರದೂಡಲ್ಪಟ್ಟ ಮುಸ್ಲಿಮರು ಬೀದಿ ಪಾಲಾದರು! ಆತ್ಮರಕ್ಷಣೆಗಾಗಿ, ಪ್ರತೀಕಾರಾರ್ಥವಾಗಿ ಮುಸ್ಲಿಮರು ಹಿಂದೂ ನಿರಾಶ್ರಿತರ ಮೇಲೆ ದಾಳಿ ಮಾಡಿದರು! ಎಲ್ಲಿ ನೋಡಿದರಲ್ಲಿ ರಕ್ತದ ಹೊಳೆ! ಹೆಣಗಳ ರಾಶಿ! ಗಾಯಗೊಂಡವರ ಚೀತ್ಕಾರ!
ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲೆಂದು ನೇಮಿಸಿದ್ದ ಆಂಗ್ಲ ಸೈನ್ಯಾಧಿಕಾರಿಯೊಬ್ಬರು ಆ ಮಾನವ ಹತ್ಯೆಯನ್ನು ಕಂಡು:
‘‘ನಾನು ಎರಡು ಮಹಾಯುದ್ಧಗಳಲ್ಲಿ ಯುದ್ಧರಂಗದಲ್ಲಿಯೇ ಇದ್ದು ಹೋರಾಡಿದ್ದೇನೆ. ಜಗತ್ತಿನ ಯುದ್ಧನಿರತ ದೇಶದ ರಣರಂಗದಲ್ಲೆಲ್ಲ ಶತ್ರು ಸಂಹಾರಗಳನ್ನು ಕಣ್ಣಾರೆ ಕಂಡಿದ್ದೇನೆ. ಮುನ್ನುಗ್ಗುವ ಸೈನ್ಯ ವಿರೋಧಿಸಿದ ನಾಗರಿಕರನ್ನು ಬೀದಿಕಾಳಗದಲ್ಲಿ ಎದುರಿಸಿ ಹತ್ಯೆ ಮಾಡಿದ್ದನ್ನು ನೋಡಿದ್ದೇನೆ. ಆದರೆ ಇಲ್ಲಿ ದಿಲ್ಲಿಯಲ್ಲಿ ನಡೆದಂಥ ಮಾರಣಹೋಮವನ್ನು ಕಾಣಲಿಲ್ಲ! ಇದು ಅಘೋಷಿತ ಯುದ್ಧ! ಅದಕ್ಕಿಂತಲೂ ಘೋರ...!’’
ಭಾರತ ಸ್ವಾತಂತ್ರ ಸಂಗ್ರಾಮದ ಇತಿಹಾಸವನ್ನು ಬರೆದ ಆಂಥೋನಿ ಲೀಡ್ಸ್ ಮತ್ತು ಡೇವಿಡ್ ಫಿಷರ್ ಎಂಬ ಗ್ರಂಥಕರ್ತರು ‘The Proudest Day (India's Long Road to Independence)’ ಎಂಬ ಗ್ರಂಥದಲ್ಲಿ:
‘‘ಆಗಸ್ಟ್ 15ರಂದು ಬೆಳಗ್ಗೆ ಅಮೃತಸರದಲ್ಲಿ ಸಿಖ್ಖರು ಸ್ವಾತಂತ್ರೋತ್ಸವವನ್ನು ಆಚರಿಸಿದಾಗ 30 ಮುಸ್ಲಿಂ ಮಹಿಳೆಯರನ್ನು ಮತ್ತು ಹುಡುಗಿಯರನ್ನು ಸುತ್ತುಗಟ್ಟಿ ಅವರನ್ನು ವಿವಸ್ತ್ರಗೊಳಿಸಿ ವೃತ್ತಾಕಾರವಾಗಿ ನೃತ್ಯ ಮಾಡುವಂತೆ ಮಾಡಿದರು. ಅವರಲ್ಲಿದ್ದ ಅತ್ಯಂತ ಚೆಲುವೆಯೊಬ್ಬಳನ್ನು ಸಾಮೂಹಿಕವಾಗಿ ಲೈಂಗಿಕ ಅತ್ಯಾಚಾರ ಮಾಡಿದರು. ಉಳಿದವರನ್ನು ತಮ್ಮ ಕಿರ್‌ಪಾಲ್ (ಖಡ್ಗ)ದಿಂದ ಚಂಡಾಡಿದರು. ಈ ಸುದ್ದಿ ಪಾಕಿಸ್ತಾನದ ಲಾಹೋರಿಗೆ ಮುಟ್ಟಿದಾಗ, ಅಲ್ಲಿದ್ದ ಮುಖ್ಯ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದ ಸಿಖ್ಖರ ಮೇಲೆ ದಾಳಿ ಮಾಡಿ, ಗುರುದ್ವಾರಕ್ಕೆ ಬೆಂಕಿ ಹಚ್ಚಿ ಅಲ್ಲಿದ್ದವರನ್ನೆಲ್ಲ ಸಾಮೂಹಿಕವಾಗಿ ಸುಟ್ಟು ಬೂದಿ ಮಾಡಿದರು. ಅಲ್ಲಿದ್ದ ಮುಸ್ಲಿಂ ಪೊಲೀಸರು ಅವರನ್ನು ತಡೆಯಲು ಏನೂ ಮಾಡದೆ ಸುಮ್ಮನೆ ನಿಂತಿದ್ದರು. ಆದರೆ ಇದು ಮುಂದೆ ನಡೆದ ಮಾನವ ಮಾರಣ ಹೋಮದ ಪ್ರಾರಂಭ’’ (ಪುಟ 496).
ಆಗಸ್ಟ್ 17ರಂದು ಭಾರತ-ಪಾಕಿಸ್ತಾನ ಗಡಿಗೆರೆಗಳನ್ನು ಬಹಿರಂಗಪಡಿಸಿದಾಗ 200 ಮೈಲು ಉದ್ದ 650 ಮೈಲು ಅಗಲ ವಿಸ್ತೀರ್ಣದ ಪಂಜಾಬ್ ಪ್ರಾಂತದಲ್ಲಿ ಪಶ್ಚಿಮ ಪಂಜಾಬ್‌ನಿಂದ 50 ಲಕ್ಷ ಹಿಂದೂ ಸಿಖ್ ಜನರು, ಪೂರ್ವ ಪಂಜಾಬ್ ಕಡೆಗೆ, ಪೂರ್ವ ಪಂಜಾಬ್‌ನಿಂದ 50 ಲಕ್ಷ ಮುಸ್ಲಿಮರು ಪಶ್ಚಿಮ ಪಂಜಾಬ್‌ಗೆ ನಿರಾಶ್ರಿತರಾಗಿ ಓಡಿದರು. 17,000 ಹಳ್ಳಿಗಳಲ್ಲಿಯೂ ಇದೇ ಗೋಳು! ಈ ದುಃಖದ ದಾವಾನಲವನ್ನು ಜಗತ್ತು ತನ್ನ ಇತಿಹಾಸದಲ್ಲಿ ಎಂದೂ ಕಂಡಿರಲಿಲ್ಲ!
ಇದು ನಿಲ್ಲಬೇಕು! ಗಾಂಧೀಜಿಯ ದೃಢಸಂಕಲ್ಪ ಹೇಗೆ? ಸೈನಿಕರಿಂದ ಪೊಲೀಸರಿಂದ ಸಾಧ್ಯವಾಗದ ಆ ಹಿಂದೂ-ಮುಸ್ಲಿಂ ದ್ವೇಷವನ್ನು ನಿಲ್ಲಿಸುವವರು ಯಾರು? ಖಡ್ಗಗಳ ಝಣತ್ಕಾರದ ಮಧ್ಯದಲ್ಲಿ ಪಿಸ್ತೂಲು, ಕಿರ್‌ಪಾಲ್‌ಗಳ ನಿರಾತಂಕ ಪ್ರಯೋಗಗಳ ನಡುವೆ ಗಾಂಧೀಜಿ, ಬರಿಗೈಲಿ, ಬರಿಮೈಯಲ್ಲಿ, ಬರಿಗಾಲಿನಿಂದ ಪಾಣಿಪತ್ ನಗರದಲ್ಲಿ ಮಾಡಿ ತೋರಿಸಿದ್ದರು. ಪಶ್ಚಿಮ ಪಂಜಾಬ್‌ನಿಂದ ಭಾರತಕ್ಕೆ ರೈಲಿನಲ್ಲಿ ಬಂದಿದ್ದ ಸಿಖ್ ನಿರಾಶ್ರಿತರು ಪಾಣಿಪತ್ ರೈಲು ನಿಲ್ದಾಣ ತಲುಪಿದ್ದರು. ಕಣ್ಣಿಗೆ ಬಿದ್ದ ಸಹಾಯಕ ಸ್ಟೇಷನ್ ಮಾಸ್ಟರ್ ಮುಸ್ಲಿಮನನ್ನು ಸಿಖ್ ಜನ ಕಿರ್‌ಪಾಲ್‌ನಿಂದ ಇರಿಯಲು ಕೈ ಎತ್ತಿದರು. ಹಿಂದೂ ಸ್ಟೇಷನ್ ಮಾಸ್ಟರ್ ದೇವಿದತ್ ಅಬ್ಬರಿಸಿ ಕೂಗಿಕೊಂಡ:
‘‘ದಯೆಯಿಟ್ಟು, ದಯೆಯಿಟ್ಟು...’’ ಕೈ ಮುಗಿದು ಬೇಡಿಕೊಂಡ:
‘‘ಇಲ್ಲಿ ನಿಲ್ದಾಣದಲ್ಲಿ ಕೊಲೆ ಮಾಡಬೇಡಿ! ದಯೆಯಿಟ್ಟು... ದಯೆಯಿಟ್ಟು...’’
ಆತನ ಬಾಯಿಂದ ಇನ್ನಾವ ಶಬ್ದಗಳೂ ಬರಲಿಲ್ಲ. ರೊಚ್ಚಿಗೆದ್ದಿದ್ದ ಸಿಖ್ ನಿರಾಶ್ರಿತರು ಆ ಮುಸ್ಲಿಂ ರೈಲ್ವೆ ನೌಕರನನ್ನು ಹೊರಗೆಳೆದುಕೊಂಡು ರುಂಡವನ್ನು ಕತ್ತರಿಸಿ ಪಾಣಿಪತ್ ನಗರದ ಮುಸ್ಲಿಮರತ್ತ ನುಗ್ಗಿದರು!
ಈ ಸುದ್ದಿ ಗಾಂಧೀಜಿಗೆ ತಲುಪಿತು. ತೊಂಬತ್ತು ನಿಮಿಷಗಳಲ್ಲಿ ಗಾಂಧೀಜಿ ಯಾವ ರಕ್ಷಣಾ ಸಿಬ್ಬಂದಿ, ಪೊಲೀಸ್, ಸೈನಿಕರ ಸಹಾಯವಿಲ್ಲದೆ ಪಾಣಿಪತ್‌ಗೆ ಬಂದರು. ಮುಸ್ಲಿಮರನ್ನು ಸುತ್ತುಗಟ್ಟಿದ್ದ ಖಡ್ಗ, ಕೃಪಾಣ್ ಧಾರಿಗಳಾಗಿದ್ದ, ಕ್ರೋಧಾಗ್ನಿಯಿಂದ ಉದ್ವಿಗ್ನರಾಗಿದ್ದ ಸಿಖ್ಖರ ದೊಡ್ಡ ಗುಂಪಿನ ನಡುವೆ ನಡೆದರು. ಕೈ ಜೋಡಿಸಿ ಬೇಡಿಕೊಂಡರು.
‘‘ಹೋಗಿ ಆ ಮುಸ್ಲಿಂ ಬಾಂಧವರನ್ನು ತಬ್ಬಿ ಅಪ್ಪಿಕೊಳ್ಳಿ! ಪಾಕಿಸ್ತಾನಕ್ಕೆ ಹೋಗಬೇಡಿ ಎಂದು ಬೇಡಿಕೊಳ್ಳಿ!’’
ರೊಚ್ಚಿಗೆದ್ದು ಹುಚ್ಚರಾಗಿದ್ದ ಹಿಂದೂ ಜನ ಅಬ್ಬರಿಸಿದರು:
‘‘ಅವರು ನಿನ್ನ ಹೆಂಡತಿಯನ್ನು ಕೆಡಿಸಿದ್ದರೆ? ನಿನ್ನ ಮಕ್ಕಳನ್ನು ಕೊಂದಿದ್ದರೆ?’’
‘‘ಹೌದು! ನನ್ನ ಹೆಂಡತಿಯನ್ನೇ ಕೆಡಿಸಿದ್ದಾರೆ! ನನ್ನ ಮಕ್ಕಳನ್ನೇ ಕೊಂದಿದ್ದಾರೆ. ಇಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಂಗಸರೆಲ್ಲ ನನ್ನವರೇ. ಸತ್ತ ಮಕ್ಕಳೆಲ್ಲ ನನ್ನ ಮಕ್ಕಳೇ!’’

ರಕ್ತಕ್ಕಾಗಿ ಒರೆಗಳಚಿದ ಆ ಕಿರ್‌ಪಾಲ್, ಖಡ್ಗ, ಪಿಸ್ತೂಲ್‌ಗಳ ಸದ್ದಿನ ನಡುವೆ ಗಾಂಧೀಜಿ ಉತ್ತರಿಸಿದರು: ‘‘ಹಿಂಸೆಯ ಈ ಉಪಕರಣಗಳು ದ್ವೇಷದ ಆಯುಧಗಳು ಯಾವ ಸಮಸ್ಯೆಯನ್ನೂ ಬಗೆಹರಿಸವು’’ ಗಾಂಧೀಜಿ ನಿಟ್ಟುಸಿರುಬಿಟ್ಟರು.

ಗಾಂಧೀಜಿ ಬಂದಿದ್ದ ಸುದ್ದಿ ಹಬ್ಬಿತು. ಪಾಣಿಪತ್ ನಗರಸಭೆ ರೈಲು ನಿಲ್ದಾಣದ ಮುಂದೆ ಅವಸರದಲ್ಲಿ ಒಂದು ವೇದಿಕೆ ಸಿದ್ಧಪಡಿಸಿ ಧ್ವನಿವರ್ಧಕ ಯಂತ್ರ ಜೋಡಿಸಿದರು. ಗಾಂಧೀಜಿ ಧ್ವನಿವರ್ಧಕಕ್ಕೆ ಬಾಯಿಟ್ಟು ಮುಖ ಕೊಟ್ಟು ಮಾತನಾಡಲು ಪ್ರಯತ್ನಿಸಿದರು. ಗಂಟಲು ಕಟ್ಟಿ ಮಾತನಾಡಲು ತಡವರಿಸಿದರು. ಒತ್ತರ ಬರುವ ದುಃಖವನ್ನು ಅದುಮಿಡಲು ಗಂಟಲು ಸರಿಪಡಿಸಿಕೊಂಡು ಮಾತನಾಡಿದರು. ಜನ ಅದರಲ್ಲೂ ಮುಸ್ಲಿಮರು ಅವಿತುಕೊಂಡಿದ್ದ ಎಡೆಯಿಂದ ಮೈದಾನಕ್ಕೆ ನುಗ್ಗಿಬಂದರು. ಗಾಂಧೀಜಿ ತಮ್ಮ ಬತ್ತಳಿಕೆಯಲ್ಲಿದ್ದ ಮಾತಿನ ಅಸ್ತ್ರವನ್ನು ಮೆಲ್ಲನೆ ಹರಿಬಿಟ್ಟರು: ‘‘ನಾವೆಲ್ಲರೂ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರೂ ಭಾರತ ಎಂಬ ಒಬ್ಬ ತಾಯಿಯ ಮಕ್ಕಳು. ರೈಲು ನಿಲ್ದಾಣದಲ್ಲಿ ತುಂಬಿರುವ ನಿರಾಶ್ರಿತರ ಬಗ್ಗೆ ಅಪಾರ ಕರುಣೆಯನ್ನು ತೋರಿಸಿ. ನಮ್ಮಲ್ಲಿರುವ ದ್ವೇಷ, ರೋಷ, ಪ್ರತೀಕಾರ ಬುದ್ಧಿ ನಮ್ಮನ್ನು ಅಮಾನುಷರನ್ನಾಗಿ ಮಾಡದಿರಲಿ. ನಿರಾಶ್ರಿತರ ಆ ದುಃಖ ದುಮ್ಮಾನದ ನೋಟದಲ್ಲಿ ಒಂದು ಮಹೋನ್ನತ ವಿಜಯದ ಬೀಜವನ್ನು ಬಿತ್ತಿ...’’


ಆ ಮೆಲುದನಿಯಲ್ಲಿ ಅದೇನು ಮಹಾಮಂತ್ರ ಶಕ್ತಿಯೋ! ಖಡ್ಗವನ್ನೆತ್ತಿದ್ದ ಕೈಯನ್ನು ಕೆಳಗಿಳಿಸಿದ ಓರ್ವ ಸಿಖ್ ಪಕ್ಕದಲ್ಲಿದ್ದ ಮುಸ್ಲಿಮನಿಗೆ ಕೈಕೊಟ್ಟು ಮೇಲಕ್ಕೆಬ್ಬಿಸಿದ! ಅಲ್ಲಿಯೇ ಇದ್ದ ಒಬ್ಬ ಮುಸ್ಲಿಂ ಚಳಿಯಿಂದ ಗಡಗಡ ನಡುಗುತ್ತಿದ್ದ ನಿರಾಶ್ರಿತ ಹಿಂದೂಗೆ ತನ್ನ ಕೋಟನ್ನು ತೊಡಿಸಿದ. ಪಾಣಿಪತ್ ಗ್ರಾಮದ ಮುಸ್ಲಿಮರು ಪಾಕಿಸ್ತಾನದಿಂದ ಓಡಿಬಂದಿದ್ದ ಹಿಂದೂಗಳಿಗೆ ತಮ್ಮ ಮನೆಯಿಂದ ಅನ್ನ ನೀರನ್ನು ಕೊಟ್ಟು ಸಂತೈಸಿದರು! ಮೈತ್ರಿಯ ಮಹಾಪೂರವೇ ಹರಿಯಿತು.
ಬೈಗಳು, ನಿರಾಶ್ರಿತರ ಶಾಪದ ಸುರಿಮಳೆಯನ್ನು ಎದುರಿಸುತ್ತ ಬಂದ ಗಾಂಧಿ ಈಗ: ‘ಮಹಾತ್ಮಾ ಗಾಂಧೀಜೀಕಿ ಜೈ!’ ಎಂಬ ವಿಜಯದ ಘೋಷಣೆ ದುಂದುಭಿಯ ಮಧ್ಯೆ ಹಿಂದಿರುಗಲು ಅನುವಾದರು. ಹಿಂದೂ-ಮುಸ್ಲಿಂ- ಸಿಖ್ಖರೂ ಅವರನ್ನು ಅನಾಮತ್ತಾಗಿ ಎತ್ತಿ ಹೆಗಲ ಮೇಲೆ ಹೊತ್ತು ಕಾರಿನಲ್ಲಿ ಕುಳ್ಳಿರಿಸಿದರು! ಇದು ನಡೆದದ್ದು 1947 ಸೆಪ್ಟಂಬರ್ ತಿಂಗಳಲ್ಲಿ. ಈ ದೃಶ್ಯ ಜನವರಿ 1948ರಲ್ಲಿ ಗಾಂಧೀಜಿಗೆ ನೆನಪಾಯಿತು.
ದಿಲ್ಲಿಯಲ್ಲಿ ನಡೆಯುತ್ತಿದ್ದ ಹಿಂದೂ-ಮುಸ್ಲಿಂ-ಸಿಖ್ಖರ ಈ ಮಾನವ ಹತ್ಯಾಕಾಂಡದಿಂದ ಗಾಂಧೀಜಿ ಜರ್ಜರಿತರಾಗಿ ಹೋಗಿದ್ದರು. ಕಳೆದ ವರ್ಷ ಕಲ್ಕತ್ತಾ, ನವಖಾಲಿಯಲ್ಲಿ ಆಗಿದ್ದ ಮಾರಣಹೋಮಕ್ಕಿಂತಲೂ ಘನ ಘೋರವಾದ ದಿಲ್ಲಿಯ ನರಮೇಧದಿಂದ ಖಿನ್ನರಾಗಿ ಹೋಗಿದ್ದರು! ಇದು ನಿಲ್ಲದಿದ್ದರೆ ತಾನು ಬದುಕಿದ್ದು ಏನು ಪ್ರಯೋಜನ? ಈ ಪ್ರಶ್ನೆ ಅವರನ್ನು ಜನವರಿ ಪ್ರಾರಂಭದಿಂದಲೂ ಕೊರೆಯುತ್ತಿತ್ತು.
ಈ ಮಾನವ ಮಾರಣಹೋಮ ಹಿಂಸಾಚಾರಕ್ಕೆ ಈಗೊಂದು ರಾಜಕೀಯ ಕಾರಣವೂ ಸೇರಿಕೊಂಡಿತ್ತು. ಭಾರತ, ಪಾಕಿಸ್ತಾನ ಇಬ್ಭಾಗ ಮಾಡಿದಾಗ ದೇಶದ ಆಸ್ತಿ ಹಂಚಿಕೊಳ್ಳುವಾಗ, ಯಾರು ಯಾರಿಗೆ ಏನೇನು ಕೊಡಬೇಕು ಎಂಬ ಒಪ್ಪಂದವೂ ಆಗಿತ್ತು. ಆ ಒಪ್ಪಂದದಲ್ಲಿ ಭಾರತ ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿಗಳನ್ನು ಕೊಡಬೇಕೆಂಬ ಷರತ್ತು ಇತ್ತು. ಇಬ್ಭಾಗವಾದ ಮೇಲೆ ಪಾಕಿಸ್ತಾನ ಕಾಶ್ಮೀರದ ಮೇಲೆ ತಮ್ಮ ಸೈನ್ಯವನ್ನು ನುಗ್ಗಿಸಿ ಅದನ್ನು ಬಲಾತ್ಕಾರವಾಗಿ ತಮ್ಮದನ್ನಾಗಿ ಮಾಡಿಕೊಳ್ಳಲು ಅಘೋಷಿತ ಯುದ್ಧ ಹೂಡಿತ್ತು. ಭಾರತ ಕಾಶ್ಮೀರದ ರಕ್ಷಣೆಯ ಒಪ್ಪಂದ ಮಾಡಿಕೊಂಡಿತ್ತು. ಕಾಶ್ಮೀರದ ರಕ್ಷಣೆಗಾಗಿ ನಮ್ಮ ಸೈನಿಕರು ಕಾಶ್ಮೀರದಲ್ಲಿ ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ನಮ್ಮ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಹಣದ ಅಗತ್ಯವಿತ್ತು. ಇಂಡಿಯಾ ದೇಶ ಪಾಕಿಸ್ತಾನಕ್ಕೆ ಕೊಡಬೇಕಾಗಿದ್ದ 55 ಕೋಟಿಯನ್ನು ಕೊಟ್ಟಿದ್ದರೆ ಆ ಹಣದಿಂದಲೇ ಯುದ್ಧಾಸ್ತ್ರಗಳನ್ನು ಕೊಂಡು ಅವುಗಳನ್ನು ನಮ್ಮ ಸೈನಿಕರ ವಿರುದ್ಧ ಪ್ರಯೋಗಿಸುವುದು ನಿಶ್ಚಿತ. ಆಗ ಭಾರತ ಸರಕಾರ ಪಾಕಿಸ್ತಾನದ ಶಕ್ತಿ ಕುಂದಿಸಲು, ಆರ್ಥಿಕ ಮುಗ್ಗಟ್ಟಿನಿಂದ ಉಸಿರುಕಟ್ಟಿ ಸಾಯಿಸಲು ಕೊಡಲೊಪ್ಪಿಕೊಂಡಿದ್ದ 55 ಕೋಟಿಯನ್ನು ಕೊಡಲು ನಿರಾಕರಿಸಿತು! ನಮ್ಮ ಸೈನಿಕರನ್ನು ಕೊಲ್ಲಲು ಬೇಕಾದ ಆಯುಧ ಕೊಳ್ಳಲು ನಾವೇ ಶತ್ರುಗಳಿಗೆ ಹಣವನ್ನು ಒದಗಿಸಿ ಸಹಾಯ ಮಾಡುವುದು ಯಾವ ನ್ಯಾಯ! ಇದು ಕೂಡದು ಎಂದು ಭಾರತ ಸರಕಾರ ನಿರ್ಧರಿಸಿತು. ಆ ನಿರ್ಧಾರ ಎರಡು ದೇಶಗಳ ನಡುವೆ ದ್ವೇಷಕ್ಕೆ ಕಾರಣವಾಯಿತು.
 ಆಗ ಭಾರತದ ಗವರ್ನರ್ ಜನರಲ್ ಆಗಿದ್ದ ಲೂಯಿ ವೌಂಟ್ ಬ್ಯಾಟನ್ ಭಾರತ ಸರಕಾರದ ಈ ನಿಲುಮೆ ಅಂತರ್‌ರಾಷ್ಟ್ರೀಯ ರಾಜ್ಯನೀತಿ ಶಾಸ್ತ್ರಕ್ಕೆ ವಿರುದ್ಧವೂ, ನೈತಿಕವಾಗಿ ಅಸಮರ್ಥನೀಯವೂ ಆಗಿದೆ ಎಂದು ಭಾರತ ಸರಕಾರಕ್ಕೆ ತಿಳಿಸಿದರು! ಎರಡು ಸ್ವತಂತ್ರ ದೇಶಗಳು ಮಾಡಿಕೊಂಡ ಒಪ್ಪಂದವನ್ನು ಮನ್ನಿಸಬೇಕಾದ್ದು ಅಂತರ್‌ರಾಷ್ಟ್ರೀಯ ರಾಜನೀತಿ. ಅದನ್ನು ಉಲ್ಲಂಘಿಸಿದರೆ ಜಗತ್ತಿನ ರಾಷ್ಟ್ರಗಳ ಕಣ್ಣಲ್ಲಿ ಭಾರತ ಸಣ್ಣದಾಗಿ ಕಾಣಿಸುತ್ತದೆ. ಯಾವ ರಾಷ್ಟ್ರವೂ ನಮ್ಮನ್ನು ನಂಬಲಾರದ ಸ್ಥಿತಿಯನ್ನು ನಾವು ಎದುರಿಸಬೇಕಗುತ್ತದೆ. ಪಾಕಿಸ್ತಾನ ಇದನ್ನೇ ನಿಮಿತ್ತವಾಗಿಟ್ಟುಕೊಂಡು ಯುದ್ಧ ಸಾರಿದರೆ ಜಗತ್ತಿನ ಒಲವು ಪಾಕಿಸ್ತಾನದತ್ತ ವಾಲುತ್ತದೆ. ನಾವು ಯುದ್ಧದಲ್ಲಿ ಗೆದ್ದರೂ ವಚನ ಭ್ರಷ್ಟರೆಂಬ ಕಳಂಕ ಶಾಶ್ವತವಾಗಿ ಭಾರತಕ್ಕೆ ತಟ್ಟುತ್ತದೆ.
ಈ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ಗಾಂಧೀಜಿಯ ಗಮನಕ್ಕೆ ತರಲಾಯಿತು. ಗಾಂಧೀಜಿ ಅಂತರ್‌ರಾಷ್ಟ್ರೀಯ ರಾಜ್ಯಶಾಸ್ತ್ರ ಏನೇ ಹೇಳಲಿ ಭಾರತದಂಥ ಬೃಹತ್ ರಾಷ್ಟ್ರ ಮಾತಿಗೆ ತಪ್ಪುವುದು ತಪ್ಪು ಎಂಬ ನಿಲುಮೆಗೆ ಬಂದರು! ಇದು ಭಾರತೀಯರಿಗೆ ನುಂಗಲಾರದ ತುತ್ತಾಯಿತು. ಭಾರತ ಸರಕಾರ ಧರ್ಮಸಂಕಟದಲ್ಲಿ ಸಿಲುಕಿತು. ಅತ್ತ ರಾಜತಾಂತ್ರಿಕ ಕಗ್ಗಂಟು. ಇತ್ತ ದೇಶದ ಹಿತದೃಷ್ಟಿಯಿಂದ ಶತ್ರುಗಳಿಗೇ ಧನಸಹಾಯ ಮಾಡಬೇಕೇ? ನಮ್ಮ ಪ್ರಜೆಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಪಾಕಿಸ್ತಾನಕ್ಕೆ 55 ಕೋಟಿ ಕೊಡಬೇಕೇ? ಕೊಡದಿದ್ದರೆ ಆಗಬಹುದಾದ ಜಾಗತಿಕ ಅಪಖ್ಯಾತಿಗೆ ಗುರಿಯಾಗಬೇಕಾಗುತ್ತದೆ.
ಗಾಂಧೀಜಿ ಯೋಚಿಸಿದರು: ‘‘ನಾನಿದ್ದು ಫಲವೇನು ಈ ಮಾರಣಹೋಮ ನಿಲ್ಲದಿದ್ದರೆ? ಸಾಕು ಈ ಜನ್ಮ! ಜನ್ಮದ ಉದ್ದಕ್ಕೂ ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸತ್ಯಾಗ್ರಹ... ಇವೆಲ್ಲವೂ ಹುಸಿಯೇ? ಅಂದು ದರ್ಬಾನ್‌ನಿಂದ ಜೋಹನ್ಸ್‌ಬರ್ಗ್‌ಗೆ ಪ್ರಯಾಣ ಮಾಡುವಾಗ ಪ್ರಥಮ ದರ್ಜೆ ರೈಲ್ವೆ ಟಿಕೆಟ್ ಹೊಂದಿದ್ದರೂ ‘ಬಿಳಿಯರಿಗೆ ಮಾತ್ರ’ ಮೀಸಲಾಗಿದ್ದ ಡಬ್ಬಿಯಲ್ಲಿ ಕುಳಿತಿದ್ದರಿಂದ ಬಿಳಿಯ ಪ್ರಯಾಣಿಕ ಆಲ್ಲಿವ್ಯಾಂಟ್ ಅವರನ್ನು ಡಬ್ಬಿಯಿಂದ ಹೊರದಬ್ಬಿದಾಗಿನಿಂದ, ಸೆಪ್ಟಂಬರ್ 11, 1906ರಂದು ರಾತ್ರಿ ಜೋಹನ್ಸ್‌ಬರ್ಗ್‌ನ ಇಂಪೀರಿಯಲ್ ಥಿಯೇಟರ್‌ನಲ್ಲಿ ಸೇರಿದ್ದ ಭಾರತೀಯರ ಸಭೆಯಲ್ಲಿ ಮಾತನಾಡಿ ಸತ್ಯಾಗ್ರಹ ಅಸ್ತ್ರವನ್ನು ಕಂಡುಹಿಡಿದಾಗಿನಿಂದ ಇಲ್ಲಿಯವರೆಗೆ ಹತ್ತಿರ ಹತ್ತಿರ ಅರ್ಧ ಶತಮಾನ ತಾನು ನಂಬಿದ್ದ, ನಂಬಿ ಆಚರಿಸಿದ್ದ ತತ್ವ ಸಿದ್ಧಾಂತ ಸತ್ತು ಹೋಯಿತೇ? ಆಗ ತಾನು ಬರೆದಿದ್ದ ಆ ಮಾತು: ‘‘ವಿರೋಧಿಯನ್ನು ತನ್ನ ತಪ್ಪು ತಿದ್ದುಕೊಳ್ಳುವಂತೆ ತಾಳ್ಮೆಯಿಂದ ಸಹನೆಯಿಂದ ಅನುಕಂಪದಿಂದ ಮನಃಪರಿವರ್ತಿಸಬೇಕು; ಸಂಹರಿಸಕೂಡದು, ಮನುಷ್ಯನ ತಲೆ ತೆಗೆದು ತಲೆಯಲ್ಲಿ ಹೊಸ ಅಭಿಪ್ರಾಯ ತುಂಬಲಾಗದು. ಹೃದಯವನ್ನು ಚೂರಿಯಿಂದ ಛಿದ್ರಿಸಿ ಹೊಸ ಭಾವನೆಯನ್ನು ಹೃದಯದಲ್ಲಿ ತುಂಬಲಾಗದು!...’’ ಹುಸಿಯೇ? ಈ ಸೂತ್ರವನ್ನು ಇಷ್ಟು ದೀರ್ಘಕಾಲ ಅನೇಕ ಸಂದರ್ಭಗಳಲ್ಲಿ ಪ್ರಯೋಗಿಸಿ ಬಹುಮಟ್ಟಿಗೆ ಯಶಸ್ವಿಯಾದದ್ದು ಹುಸಿಯೇ? ತಾನು ಜೀವನದುದ್ದಕ್ಕೂ ನಂಬಿದ ಈ ಸತ್ಯ ಹುಸಿಯೇ? ಒಂದು ವೇಳೆ ಹುಸಿಯಾದರೆ ತನ್ನ ಬಾಳೆಲ್ಲ ಹುಸಿ; ಕೇವಲ ವ್ಯರ್ಥ!. ಹುಸಿಯಲ್ಲದಿದ್ದರೆ, ಆ ಸೂತ್ರವನ್ನೇಕೆ ಈ ಸಂದರ್ಭದಲ್ಲಿ ಪ್ರಯೋಗಿಸಬಾರದು?’’ ನಿರ್ಧರಿಸಿಯೇ ಬಿಟ್ಟರು, ಜನವರಿ 13ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವುದಾಗಿ. ಎಲ್ಲಿಯವರೆಗೆ ದಿಲ್ಲಿಯಲ್ಲಿ ಹಿಂದೂ-ಮುಸ್ಲಿಂ ಐಕಮತ್ಯ, ಕೋಮುಸೌಹಾರ್ದ, ಶಾಂತಿ ನೆಲೆಸುವುದಿಲ್ಲವೋ, ಎಲ್ಲಿಯವರೆಗೆ ಭಾರತ ಸರಕಾರ ಪಾಕಿಸ್ತಾನಕ್ಕೆ 55 ಕೋಟಿ ಕೊಡುವುದಿಲ್ಲವೋ ಅಲ್ಲಿಯವರೆಗೆ ನಿರಶನ ವ್ರತ, ಪ್ರಾಣವನ್ನು ಪಣಕ್ಕಿಟ್ಟು ಸಿದ್ಧರಾದರು. ಗೆಲುವು, ಇಲ್ಲವೇ ಸಾವು!
(ಮುಂದುವರಿಯುವುದು)

Writer - ಕೋ. ಚೆನ್ನಬಸಪ್ಪ

contributor

Editor - ಕೋ. ಚೆನ್ನಬಸಪ್ಪ

contributor

Similar News

ಜಗದಗಲ
ಜಗ ದಗಲ