108 ರೂ. ರೀಫಂಡ್ ಪಡೆಯಲು ಹೋಗಿ 82,000 ರೂ. ಕಳೆದುಕೊಂಡ ಯುವತಿ!

Update: 2019-02-09 09:55 GMT

ಪುಣೆ, ಫೆ.9: ಇ-ಕಾಮರ್ಸ್ ವೆಬ್ ತಾಣವೊಂದರ ಕಸ್ಟಮರ್ ಕೇರ್ ಪ್ರತಿನಿಧಿಗಳೆಂದು ಹೇಳಿಕೊಂಡು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಯುವತಿಯೊಬ್ಬರಿಗೆ  82,000 ರೂ. ವಂಚಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಯುವತಿ ಮತ್ತಾಕೆಯ ತಂದೆಯ ಬ್ಯಾಂಕ್ ಖಾತೆಗಳಿಂದ ಈ ಹಣವನ್ನು ಲಪಟಾಯಿಸಿದ್ದರು. ಯುವತಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ಮೂವರನ್ನೂ ಬಂಧಿಸಲಾಗಿದೆ.

ಕಸ್ಬಾ ಪೇತ್ ನಿವಾಸಿಯಾಗಿರುವ ಮಹಿಳೆ ಕಳೆದ ವರ್ಷದ ನವೆಂಬರ್ 3ರಂದು ವೆಬ್ ತಾಣವೊಂದರಿಂದ 107 ರೂ. ಬೆಲೆಯ ಉಂಗುರ ಖರೀದಿಸಿದ್ದರು. ಆದರೆ ಉಂಗುರ ಆಕೆಯ ಬೆರಳಿಗೆ ಹೊಂದುತ್ತಿಲ್ಲವಾದುದರಿಂದ ಅದನ್ನು ಆಕೆ ಮರಳಿಸಿದ್ದರು. ಆದರೆ ಹಣ ರಿಫಂಡ್ ಆಗದೇ ಇದ್ದಾಗ ಆಕೆ ಇ-ಕಾಮರ್ಸ್ ಸಂಸ್ಥೆಯ ಕಸ್ಟಮರ್ ಕೇರ್ ಗೆ ಫೋನ್ ಮಾಡಿದ್ದರು, ಅತ್ತ ಫೋನ್ ಸ್ವೀಕರಿಸಿದ ವ್ಯಕ್ತಿ ಆಕೆಯ ಕಾರ್ಡ್ ಮಾಹಿತಿಯನ್ನು ಕೇಳಿದ್ದನಲ್ಲದೆ, ಆತನಿಗೆ ಒನ್ ಟೈಮ್ ಪಾಸ್ ವರ್ಡ್ ಅನ್ನೂ ನೀಡಿದ್ದಳು. ಇದಾದ ಕೂಡಲೇ ಆಕೆಯ ಖಾತೆಯಿಂದ ಮೂರು ಬಾರಿ ರೂ 1,600 ಹಣ ತೆಗೆಯಲಾಗಿತ್ತು.

ಆಕೆ ಕೂಡಲೇ ಇ-ಕಾಮರ್ಸ್ ಸಂಸ್ಥೆಗೆ ಆನ್‍ ಲೈನ್ ದೂರು ನೀಡಿದಾಗ ಇನ್ನೊಬ್ಬ ಆರೋಪಿ ಕರೆ ಮಾಡಿ ಹಣ ವಾಪಸ್ ನೀಡುವುದಾಗಿ ಹೇಳಿ ಆಕೆಯ ಇನ್ನೊಂದು ಕಾರ್ಡ್ ಸಂಖ್ಯೆ ಪಡೆದಿದ್ದ. ಈ ಬಾರಿ ಆಕೆ ತನ್ನ ತಂದೆಯ ಡೆಬಿಟ್ ಕಾರ್ಡ್ ಸಂಖ್ಯೆ ಮತ್ತು ಒಟಿಪಿ ನೀಡಿದ್ದಳು. ನಂತರ ತಂದೆಯ ಮೊಬೈಲ್ ಸ್ವಲ್ಪ ಹೊತ್ತು ಸ್ವಿಚ್ ಆಫ್ ಮಾಡಲು ಆತ ಹೇಳಿದ್ದ. ಮತ್ತೆ ಮೊಬೈಲ್ ಆನ್ ಮಾಡಿದಾಗ ರೂ 20,000 ಹಣ ಖಾತೆಯಿಂದ ಡೆಬಿಟ್ ಆಗಿತ್ತು. ಈ ರೀತಿ ವಂಚಕರು ಆಕೆಯ ರೂ 82,000 ಹಣ ಲಪಟಾಯಿಸಿದ್ದರು. ತನಿಖೆಯ ವೇಳೆ ಹಣ ಮುಂಬೈ ಮತ್ತು ದಿಲ್ಲಿಯ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿರುವುದು ತಿಳಿದು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News