ಗಾಂಧೀಜಿ-ನಾರಾಯಣಗುರು

Update: 2019-02-09 13:14 GMT

ಮಹಾತ್ಮಾ ಗಾಂಧೀಜಿಯವರು ಕೇರಳವನ್ನು ಎರಡನೆ ಬಾರಿ (1925ರ ಮಾರ್ಚ್ 8-19) ಸಂದರ್ಶಿಸಿದ ಸಂದರ್ಭದಲ್ಲಿ ಅವರು ಶ್ರೀನಾರಾಯಣ ಗುರುಗಳನ್ನು ಅವರ ಆಶ್ರಮ (ಶಿವಗಿರಿ ಮಠ)ದಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ನಡೆದ ಐತಿಹಾಸಿಕ ಸಂವಾದವನ್ನು ಇಲ್ಲಿ ನೀಡಲಾಗಿದೆ. ಇಂಗ್ಲಿಷ್‌ನಲ್ಲಿ ಸಂಭಾಷಿಸಬಲ್ಲರೇ ಎಂದು ಗಾಂಧೀಜಿ ಗುರುದೇವ ಅವರಲ್ಲಿ ವಿಚಾರಿಸಿದ್ದರು. ಆಗ ಇಲ್ಲವೆಂದು ಗುರುದೇವ ತಿಳಿಸಿದರು. ಆನಂತರ ಗುರುದೇವ ಅವರು ಸಂಸ್ಕೃತ ಬರುವುದೇ ಎಂದು ಗಾಂಧೀಜಿಯವರನ್ನು ಕೇಳಿದ್ದರು ಹಾಗೂ ಗಾಂಧೀಜಿ ಇಲ್ಲವೆಂದು ತಿಳಿಸಿದರು. ಆಗ ನ್ಯಾಯವಾದಿ ಕುಮಾರನ್ ಎಂಬವರು ದ್ವಿಭಾಷಿಯಾಗಿ ಕಾರ್ಯನಿರ್ವಹಿಸಿದರು. ಗಾಂಧೀಜಿ ಹಾಗೂ ಶ್ರೀನಾರಾಯಣ ಗುರು ಅವರ ಸಂಭಾಷಣೆಯ ವಿವರಗಳು ಹೀಗಿವೆ.

ಗಾಂಧಿ: ಹಿಂದೂ ಧರ್ಮಗ್ರಂಥಗಳಲ್ಲಿ ಅಸ್ಪಶ್ಯತೆಯ ಬಗ್ಗೆ ಯಾವುದೇ ಉಲ್ಲೇಖವಿರುವ ಬಗ್ಗೆ ಪರಮಪೂಜ್ಯರಿಗೆ ತಿಳಿದಿದೆಯೇ?.

ಗುರು: ಇಲ್ಲ.

ಗಾಂಧಿ: ಅಸ್ಪಶತೆಯ ನಿರ್ಮೂಲನಕ್ಕಾಗಿ ವೈಕಂನಲ್ಲಿ ನಡೆಯುತ್ತಿರುವ ಸತ್ಯಾಗ್ರಹದ ಬಗ್ಗೆ ಪರಮಪೂಜ್ಯರಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿದೆಯೇ?.

ಗುರು: ಇಲ್ಲ.

ಗಾಂಧಿ: ಚಳವಳಿಯಲ್ಲಿ ಏನಾದರೂ ಇನ್ನೂ ಹೆಚ್ಚಿನ ಸೇರ್ಪಡೆ ಅಥವಾ ಬದಲಾವಣೆಯ ಅಗತ್ಯವಿದೆಯೆಂದು ಪರಮಪೂಜ್ಯರು ಭಾವಿಸುತ್ತಿದ್ದಾರೆಯೇ?.

ಗಾಂಧಿ: ಅದು ಚೆನ್ನಾಗಿಯೇ ಸಾಗುತ್ತಿದೆಯೆಂಬುದಾಗಿ ನನಗೆ ತಿಳಿದುಬಂದಿದೆ. ಯಾವುದೇ ಬದಲಾವಣೆಯ ಅಗತ್ಯವಿದೆಯೆಂದು ನನಗನಿಸುವುದಿಲ್ಲ.

ಗಾಂಧಿ: ಅಸ್ಪಶ್ಯತೆಯ ನಿರ್ಮೂಲನ ಹೊರತುಪಡಿಸಿ, ಹಿಂದುಳಿದ ವರ್ಗಗಳನ್ನು ಸಂಕಷ್ಟಗಳಿಂದ ವಿಮುಕ್ತಗೊಳಿಸಲು, ಇನ್ನೂ ಹೆಚ್ಚಿನ ಯಾವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆಯೆಂಬ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿದುಕೊಳ್ಳಲು ನಾನು ಬಯಸುತ್ತೇನೆ.

ಗುರು: ಅವರಿಗೆ ಶಿಕ್ಷಣ ಹಾಗೂ ಸಂಪತ್ತಿನ ಅಗತ್ಯವಿದೆ. ಅಂತರ್‌ಜಾತಿ ಸಹಭೋಜನ ಹಾಗೂ ಅಂತರ್‌ಜಾತಿ ವಿವಾಹಗಳ ತುರ್ತು ಅಗತ್ಯವಿದೆಯೆಂದು ನಾನು ಹೇಳಲಾರೆ. ಅವರಿಗೂ ಇತರರಂತೆ ಅಭಿವೃದ್ಧಿ ಹೊಂದಲು ಅವಕಾಶಗಳು ದೊರೆಯಬೇಕಾಗಿದೆ.

ಗಾಂಧಿ: ಅಹಿಂಸಾತ್ಮಕ ಸತ್ಯಾಗ್ರಹ ನಿಷ್ಪ್ರಯೋಜಕವಾದುದು ಹಾಗೂ ನಮ್ಮ ಹಕ್ಕುಗಳನ್ನು ಸ್ಥಾಪಿಸಲು ಬಲಪ್ರಯೋಗದ ಅಗತ್ಯವಿದೆಯೆಂದು ಕೆಲವರು ಹೇಳುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?.

ಗುರು: ಬಲಪ್ರಯೋಗ ಉತ್ತಮವೆಂದು ನಾನು ಭಾವಿಸಲಾರೆ.

ಗಾಂಧಿ: ಹಿಂದೂ ಧರ್ಮಗ್ರಂಥಗಳು ಬಲಪ್ರಯೋಗದ ಬಳಕೆಯನ್ನು ಪ್ರತಿಪಾದಿಸುತ್ತವೆಯೇ?

ಗುರು: ರಾಜರಿಗೆ ಅದು ಅಗತ್ಯವೆಂದು ಪುರಾಣಗಳು ಬಿಂಬಿಸಿವೆ ಹಾಗೂ ಅವರು ಅದನ್ನು ಹಾಗೆಯೇ ಬಳಸಿಕೊಂಡಿದ್ದಾರೆ. ಆದಾಗ್ಯೂ, ಜನಸಾಮಾನ್ಯರ ವಿಷಯದಲ್ಲಿ ಅದು ಸಮರ್ಥನೀಯವಲ್ಲ.

ಗಾಂಧಿ: ನಾವು ಮತಾಂತರಗೊಳ್ಳಬೇಕು ಹಾಗೂ ಸ್ವಾತಂತ್ರವನ್ನು ಪಡೆಯಲು ಅದು ಸರಿಯಾದ ಮಾರ್ಗವೆಂದು ಕೆಲವರು ಹೇಳುತ್ತಾರೆ. ಅದಕ್ಕೆ ಸ್ವಾಮೀಜಿ ಅನುಮತಿ ನೀಡುತ್ತಾರೆಯೇ?

ಗುರು: ಮತಾಂತರಗೊಂಡವರು ಸ್ವಾತಂತ್ರವನ್ನು ಪಡೆದುಕೊಂಡಿದ್ದಾರೆಂಬ ಹಾಗೆ ಕಾಣುತ್ತಿದೆ. ಇದನ್ನು ನೋಡಿದರೆ, ಮತಾಂತರ ಒಳ್ಳೆಯದೆಂದು ಯೋಚಿಸುತ್ತಿರುವುದಕ್ಕಾಗಿ ಜನರನ್ನು ದೂರಲು ಸಾಧ್ಯವಿಲ್ಲ.

ಗಾಂಧಿ: ಆಧ್ಯಾತ್ಮಿಕ ವಿಮೋಚನೆಗಾಗಿ ಹಿಂದೂ ಧರ್ಮ ಸಾಕೆಂದು ಸ್ವಾಮೀಜಿಯವರು ಭಾವಿಸಿದ್ದಾರೆಯೇ?

ಗುರು: ಇತರ ಧರ್ಮಗಳಲ್ಲಿಯೂ ವಿಮೋಚನೆಯ ಮಾರ್ಗಗಳಿವೆ.

ಗಾಂಧಿ: ಇತರ ಧರ್ಮಗಳ ವಿಷಯ ಹಾಗಿರಲಿ. ಆಧ್ಯಾತ್ಮಿಕ ವಿಮೋಚನೆಗೆ ಹಿಂದೂ ಧರ್ಮ ಧಾರಾಳ ಸಾಕೆಂಬ ಅಭಿಪ್ರಾಯವನ್ನು ಸ್ವಾಮೀಜಿ ಹೊಂದಿದ್ದಾರೆಯೇ?.

ಗುರು: ಆಧ್ಯಾತ್ಮಿಕ ವಿಮೋಚನೆಗೆ ಹಿಂದೂ ಧರ್ಮ ಸಾಕು. ಆದರೆ ಜನರು ಹೆಚ್ಚಿನ ಭೌತಿಕ ಸ್ವಾತಂತ್ರಕ್ಕಾಗಿಯೂ ಹಂಬಲಿಸುತ್ತಿದ್ದಾರೆ.

ಗಾಂಧಿ: ಆಧ್ಯಾತ್ಮಿಕ ವಿಮೋಚನೆಗಾಗಿ ಮತಾಂತರವು ಅಗತ್ಯವೆಂಬ ಬಗ್ಗೆ ಸ್ವಾಮೀಜಿಯವರ ಅಭಿಪ್ರಾಯವೇನು?.

ಗುರು: ಇಲ್ಲ. ಆಧ್ಯಾತ್ಮಿಕ ವಿಮೋಚನೆಗೆ ಮತಾಂತರದ ಅಗತ್ಯವಿಲ್ಲ.

ಗಾಂಧಿ: ನಾವು (ಅಸ್ಪಶ್ಯತೆಯಿಂದ) ಭೌತಿಕ ಸ್ವಾತಂತ್ರಕ್ಕೆ ಯತ್ನಿಸುತ್ತಿಲ್ಲವೇ? ಅದು ವ್ಯರ್ಥವಾಗುತ್ತಿದೆಯೇ?.

ಗುರು: ಅದು ವ್ಯರ್ಥವಲ್ಲ. ಅದು(ಅಸ್ಪಶ್ಯತೆ) ಆಳವಾಗಿ ಬೇರೂರಿರುವ ಬಗ್ಗೆ ಯೋಚಿಸುವಾಗ, ಅದರ ನಿರ್ಮೂಲನ ಸಂಪೂರ್ಣವಾಗಿ ಯಶಸ್ವಿಯಾಗಬೇಕಾದರೆ ಗಾಂಧೀಜಿ ಮತ್ತೊಮ್ಮೆ ಪುನರ್‌ಜನ್ಮತಾಳಬೇಕಾಗಬಹುದು.

ಗಾಂಧಿ: (ನಗುತ್ತಾ) ನನ್ನ ಜೀವಿತಾವಧಿಯಲ್ಲೇ ಅದು ಯಶಸ್ವಿಯಾಗಲಿದೆ. ಹಿಂದುಳಿದ ವರ್ಗಗಳಲ್ಲಿ ಕೂಡಾ ಅಸ್ಪಶ್ಯತೆಯಿಲ್ಲವೇ?. ಸ್ವಾಮೀಜಿಯವರ ದೇವಾಲಯಗಳನ್ನು ಪ್ರವೇಶಿಸಲು ಎಲ್ಲರಿಗೂ ಅನುಮತಿಯಿದೆಯೇ?.

ಗುರು: ಎಲ್ಲರಿಗೂ ಅನುಮತಿಯಿದೆ. ಪುಲಯ ಹಾಗೂ ಪರವ ಸಮುದಾಯಗಳಿಗೆ ಸೇರಿದ ಮಕ್ಕಳು ಕೂಡಾ ಇತರರೊಂದಿಗೆ ಶಿವಗಿರಿಯಲ್ಲಿ ವಾಸವಾಗಿದ್ದಾರೆ ಹಾಗೂ ಕಲಿಯುತ್ತಿದ್ದಾರೆ. ಇತರರೊಂದಿಗೆ ಅವರು ಪ್ರಾರ್ಥನೆಯಲ್ಲಿಯೂ ಪಾಲ್ಗೊಳ್ಳುತ್ತಾರೆ.

ಗಾಂಧಿ: ಇದು ಅತ್ಯಂತ ಸಂತಸಕರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News