ಫೆ. 13: ದಿಲ್ಲಿ ರಾಜಧಾನಿಯಾದ ದಿನ!

Update: 2019-02-10 06:27 GMT

20 ವರ್ಷಗಳು!

ಶಹಜಹನಾಬಾದ್ (ಹಳೆ ದಿಲ್ಲಿ) ನಿಸ್ಸಂಶಯವಾಗಿ ಮೊಗಲ್ ಆಳ್ವಿಕೆಯ ಕಾಲದಲ್ಲಿ ರಾಜಧಾನಿಯಾಗಿತ್ತು. ಆದರೆ ಬ್ರಿಟಿಷರಿಗೆ ಸಾಕಾಗುವಷ್ಟು ವ್ಯವಸ್ಥೆಗಳು ಅಲ್ಲಿರಲಿಲ್ಲ. ಹಾಗಾಗಿ ಬ್ರಿಟಿಷ್ ಶಿಲ್ಪಕಲೆಗಾರರಾದ ಸರ್ ಎಡ್ವಿನ್ ಲುತ್ಯೆನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ನೂತನ ರಾಜಧಾನಿಯನ್ನು ಮರುವಿನ್ಯಾಸಗೊಳಿಸುವ ಕೆಲಸವನ್ನು ಕೈಗೆತ್ತಿಕೊಂಡರು. ಹೊಸ ರಾಜಧಾನಿಯನ್ನು ಅವಿಭಾಜ್ಯ ಪಂಜಾಬ್ ಪ್ರಾಂತದಿಂದ ಪ್ರತ್ಯೇಕಗೊಳಿಸಲಾಗಿ ಅದಕ್ಕೆ 1927ರಲ್ಲಿ ಹೊಸದಿಲ್ಲಿ ಎಂದು ನಾಮಕರಣ ಮಾಡಲಾಯಿತು. ಆರಂಭದಲ್ಲಿ ಎಲ್ಲರೂ ನೂತನ ರಾಜಧಾನಿ ನಾಲ್ಕು ವರ್ಷಗಳ ಒಳಗೆ ಸಿದ್ಧಗೊಳ್ಳುವುದು ಎಂದು ಭಾವಿಸಿದ್ದರು. ಆದರೆ ಮೊದಲ ಜಾಗತಿಕ ಯುದ್ಧದಂತಹ ತಪ್ಪಿಸಲಾಗದ ಘಟನೆಗಳಿಂದಾಗಿ ಈ ಕಾರ್ಯ ಮುಗಿಯಲು 20 ವರ್ಷಗಳೇ ಬೇಕಾಯಿತು. ಯುದ್ಧದಿಂದಾಗಿ ಹಣದ ಕೊರತೆ ಎದುರಾದ ಕಾರಣ ಬ್ರಿಟಿಷ್ ಇಂಡಿಯಾದ ರಾಜಧಾನಿಯ ನಿರ್ಮಾಣ ಕಾರ್ಯ ತೊಂದರೆ ಅನುಭವಿಸಿತು. ಎಡ್ವಿನ್ ಲುತ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್‌ಗೆ ಹೊಸದಿಲ್ಲಿಯನ್ನು ಸಂಪೂರ್ಣಗೊಳಿಸಲು 20 ವರ್ಷಗಳ ಸಮಯ ಬೇಕಾಯಿತು ಮತ್ತು ಅಂತಿಮವಾಗಿ ಅವಿಭಾಜ್ಯ ಭಾರತದ ನೂತನ ರಾಜಧಾನಿಯನ್ನು 1931ರಲ್ಲಿ ಉದ್ಘಾಟಿಸಲಾಯಿತು.

ಫೆಬ್ರವರಿ 13ರಂದು ಭಾರತದ ರಾಜಧಾನಿ ಕೋಲ್ಕತಾದಿಂದ ಹೊಸದಿಲ್ಲಿಗೆ ವರ್ಗಾವಣೆ ಗೊಂಡಿತು. 86 ವರ್ಷಗಳ ಹಿಂದೆ ಫೆಬ್ರವರಿ 13ರಂದು ಹೊಸದಿಲ್ಲಿ ಅವಿಭಾಜ್ಯ ಭಾರತದ ಆಡಳಿತ ರಾಜಧಾನಿಯಾಗಿ ಸ್ವೀಕರಿಸಲ್ಪಟ್ಟಿತು. ಆಮೂಲಕ 20 ವರ್ಷಗಳ ಕಾಯುವಿಕೆಗೆ ಕೊನೆ ಹಾಡಲಾಯಿತು. ನೂತನ ರಾಜಧಾನಿಗೆ ಶಿಲಾನ್ಯಾಸವನ್ನು ಐದನೇ ಕಿಂಗ್ ಜಾರ್ಜ್ 1911ರ ಡಿಸೆಂಬರ್ 12ರಂದು ಹೊಸದಿಲ್ಲಿ ದರ್ಬಾರ್ (ವೈಭವದ ಕಾರ್ಯಕ್ರಮ)ನಲ್ಲೇ ನಡೆಸಿದ್ದರು. ಆದರೆ, ಇದಾಗಿ 20 ವರ್ಷಗಳ ನಂತರ ಐದನೇ ಕಿಂಗ್ ಜಾರ್ಜ್ ಭಾರತಕ್ಕೆ ಭೇಟಿ ನೀಡಿದ ವೇಳೆ ರಾಜಧಾನಿ ಕೋಲ್ಕತಾ (ಆಗಿನ ಕಲ್ಕತ್ತಾ)ದ ಸ್ಥಾನವನ್ನು ಹೊಸದಿಲ್ಲಿ ಪಡೆ ಯುತ್ತಿರುವುದಾಗಿ ಘೋಷಣೆ ಮಾಡಿದರು. ಕೊನೆಯದಾಗಿ, ಫೆಬ್ರವರಿ 13,1931ರಲ್ಲಿ ಲಾರ್ಡ್ ಇರ್ವಿನ್ ನೂತನ ರಾಜಧಾನಿಯ ಉದ್ಘಾಟನೆ ನೆರವೇರಿಸಿದರು. ಆದರೆ ಯಾಕೆ!

ನೂರು ವರ್ಷಗಳ ಹಿಂದೆ ಆಗಿನ ಭಾರತದ ವೈಸರಾಯ್ ಲಾರ್ಡ್ ಹರ್ಡಿಂಗ್ ತನ್ನ ಪತ್ರದಲ್ಲಿ ಬ್ರಿಟನ್ ಯಾಕಾಗಿ ತನ್ನ ರಾಜಧಾನಿಯನ್ನು ಕಲ್ಕತ್ತಾದಿಂದ ದಿಲ್ಲಿಗೆ ಬದಲಾಯಿಸ ಬೇಕೆಂಬುದನ್ನು ವಿವರಿಸಿ ದ್ದರು. ಅರ್ಲ್ ಆಫ್ ಕ್ರೂ, ಭಾರತದ ಕಾರ್ಯದರ್ಶಿಗೆ ಬರೆಯಲಾಗಿದ್ದ ಈ ಪತ್ರವನ್ನು ಆಗಸ್ಟ್ 25,1911ರಲ್ಲಿ ಶಿಮ್ಲಾದಿಂದ ಲಂಡನ್‌ಗೆ ಕಳುಹಿಸಲಾಯಿತು. ತನ್ನ ಪತ್ರದಲ್ಲಿ ಹರ್ಡಿಂಗ್, ಬ್ರಿಟಿಷ್ ಸರಕಾರ ಭಾರತದ ಆಡಳಿತವನ್ನು ಅದರ ಅತ್ಯಂತ ಪೂರ್ವದಲ್ಲಿರುವ ರಾಜ್ಯದಿಂದ ನಡೆ ಸುತ್ತಿರುವುದನ್ನು ಬೆಟ್ಟು ಮಾಡಿದ್ದರು. ಜೊತೆಗೆ, ಚುನಾಯಿತ ಶಾಸನಬದ್ಧ ಸಂಸ್ಥೆಗಳ ಹೆಚ್ಚುತ್ತಿರುವ ಪ್ರಾಮುಖ್ಯತೆ ಬ್ರಿಟನ್ ಹೆಚ್ಚು ಕೇಂದ್ರೀಕೃತ ಪ್ರದೇಶವನ್ನು ರಾಜಧಾನಿಯಾಗಿ ಮಾಡುವ ಅಗತ್ಯವನ್ನು ಸೂಚಿಸುತ್ತದೆ ಎಂದು ಅವರು ವಾದಿಸಿದ್ದರು.

ಬಂಗಾಳದ ವಿಭಜನೆ

ಕಲ್ಕತ್ತಾ ದೇಶದ ಸಾಹಿತ್ಯ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಆದರೆ ಅಕ್ಟೋಬರ್ 16,1905ರಲ್ಲಿ ಬ್ರಿಟಿಷರು ರಾಜ್ಯವನ್ನು ಮುಸ್ಲಿಂ ಪೂರ್ವ ಪ್ರದೇಶ ಮತ್ತು ಹಿಂದೂ ಪಶ್ಚಿಮ ಪ್ರದೇಶ ಎಂದು ವಿಭಜಿಸಿದರು. ವಿಭಜಿಸಿ ಆಳು ಎಂಬ ನೀತಿಯ ಮೂಲಕ ರಾಜ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಉದ್ದೇಶವನ್ನು ಹೊಂದಿದ್ದ ಈ ವಿಭಜನೆಯು ರಾಷ್ಟ್ರವಾದಿ ಭಾವನೆ ಗಳನ್ನು ಪ್ರಚೋದಿಸಿತು ಮತ್ತು ಪರಿಣಾಮವಾಗಿ ಎಲ್ಲ ವಿದೇಶಿ ವಸ್ತು ಗಳನ್ನು ಬಹಿಷ್ಕರಿಸಲು ಕರೆ ನೀಡಲಾಯಿತು. ಪರಿಣಾಮವಾಗಿ, ಕೋಲ್ಕತ್ತಾದಲ್ಲಿ ಸ್ಫೋಟಗಳು ಮತ್ತು ರಾಜಕೀಯ ಹತ್ಯೆಗಳು ನಡೆದವು. ಸದ್ಯ ಕೋಲ್ಕತ್ತಾ ಬ್ರಿಟಿಷರ ಪಾಲಿಗೆ ಅಷ್ಟೊಂದು ಉತ್ತಮವಲ್ಲದ ತಾಣವಾಗಿ ಬದಲಾದ ಕಾರಣ ಬ್ರಿಟಿಷರು ನಗರವನ್ನು ತೊರೆಯಲು ಆತುರತೆ ಪ್ರದರ್ಶಿಸಿದರು. ಹರ್ಡಿಂಗ್‌ನ ಯೋಜನೆಯನ್ನು ಅಂಗೀಕರಿಸಿದ ಮೊದಲ ಬ್ರಿಟಿಷ್ ರಾಜಪ್ರಭುತ್ವ ಐದನೇ ಕಿಂಗ್ ಜಾರ್ಜ್ ಬಂಗಾಳದ ಮರು ಏಕೀಕರಣವನ್ನು ಘೋಷಿಸಿದರು ಮತ್ತು ತುರ್ತಾಗಿ ರಾಜಧಾನಿಯನ್ನು ತೊರೆಯಲು ನಿರ್ಧರಿಸಿದರು.

ಇನ್ನೂ ಕೆಲವು ಕಾರಣಗಳು

►ಭಾರತವನ್ನು ಆಳಿದ್ದ ಹಿಂದಿನ ಅನೇಕ ಸಾಮ್ರಾಜ್ಯಗಳ ಆರ್ಥಿಕ ಮತ್ತು ರಾಜಕೀಯ ಕೇಂದ್ರ ದಿಲ್ಲಿಯಾಗಿದ್ದಿದ್ದು ಅದನ್ನು ಬ್ರಿಟಿಷರು ರಾಜಧಾನಿ ಎಂದು ಘೋಷಿಸಲು ಇದ್ದ ಕಾರಣಗಳಲ್ಲಿ ಒಂದಾಗಿತ್ತು.

►ಇನ್ನೊಂದು ಮುಖ್ಯ ಕಾರಣವೆಂದರೆ ದಿಲ್ಲಿ ಇರುವ ಸ್ಥಳ. ಕಲ್ಕತ್ತಾ ಭಾರತದ ಪೂರ್ವ ಭಾಗದಲ್ಲಿದ್ದರೆ ದಿಲ್ಲಿ ಉತ್ತರ ಭಾಗದಲ್ಲಿತ್ತು.

►ಕಲ್ಕತ್ತಾಗೆ ಬದಲಾಗಿ ದಿಲ್ಲಿಯಿಂದ ಭಾರತವನ್ನು ಆಳುವುದು ಸುಲಭ ಮತ್ತು ಹೆಚ್ಚು ಪರಿಣಾಮಕಾರಿ ಎಂದು ಬ್ರಿಟಿಷ್ ಸರಕಾರ ಭಾವಿಸಿತ್ತು.

►ನೂತನ ರಾಜಧಾನಿಯ ಘೋಷಣೆಯ ಜೊತೆಗೆ ವೈಸರಾಯ್ ನಿವಾಸವೂ ಆಗಿದ್ದ ಕಿಂಗ್ಸ್‌ವೇ ಶಿಬಿರ, ಪಟ್ಟಾಭಿಷೇಕ ಉದ್ಯಾನಕ್ಕೂ ಶಿಲಾನ್ಯಾಸ ನಡೆಸಲಾಗಿತ್ತು. ಕಲ್ಕತ್ತಾದಿಂದ ದಿಲ್ಲಿಗೆ ಆಡಳಿತವನ್ನು ಬದಲಾಯಿಸಲು ತಗಲಿದ ವೆಚ್ಚ 4 ಮಿಲಿಯನ್ ಬ್ರಿಟಿಷ್ ಪೌಂಡ್‌ಗಳು.

►ಕ್ರಿ.ಪೂ. 3000ದಿಂದ ಕ್ರಿ.ಶ 17ನೇ ಶತಮಾನದವರೆಗೆ ದಿಲ್ಲಿ ಒಟ್ಟಾರೆ ವಿವಿಧ ಏಳು ನಗರಗಳಿಗೆ ತಾಣವಾಗಿದೆ.

►ಆರಂಭದಲ್ಲಿ ನಗರವನ್ನು ರಕ್ಷಿಸಲು ಹದಿನಾಲ್ಕು ಆವರಣದಿಂದ ಕೂಡಿದ ದ್ವಾರಗಳಿದ್ದವು. ಅವುಗಳಲ್ಲಿ ಅಜ್ಮೇರ್ ದ್ವಾರ, ಲಾಹೋರಿ ದ್ವಾರ, ಕಾಶ್ಮೀರಿ ದ್ವಾರ, ದಿಲ್ಲಿ ದ್ವಾರ ಮತ್ತು ತುರ್ಕ್‌ಮನ್ ದ್ವಾರ ಈಗಲೂ ಇದೆ.

►ಕನೌಟ್ ಪ್ಲೇಸನ್ನು ಲುತ್ಯೆನ್ಸ್‌ನ ದಿಲ್ಲಿಯ ಭಾಗವಾಗಿ ವಿನ್ಯಾಸ ಗೊಳಿಸಲಾಗಿದ್ದು ಹಲವು ದಶಕಗಳ ನಂತರವೂ ಆ ಸ್ಥಳ ರಾಜಧಾನಿಯ ಹೆಗ್ಗುರುತಾಗಿ ಉಳಿದಿದೆ.

Writer - ವಿಸ್ಮಯ

contributor

Editor - ವಿಸ್ಮಯ

contributor

Similar News