ಆಗಮನ
ಅದೊಂದು ಪುಟ್ಟ ಊರು. ದುಡಿವ ಜನ ದಿನವಿಡೀ ಬೇಸಿಗೆಯ ಬೇಗೆಯಲ್ಲಿ ಬೆಂದಿದ್ದರು. ಊಟ ಮಾಡಿ ನಿಧಾನಕ್ಕೆ ತಣ್ಣಗಾಗುತ್ತಿದ್ದ ರಾತ್ರಿಯಲ್ಲಿ ಮನೆಗಳಿಂದ ಹೊರಬಂದು ಗಾಳಿಯ ಕರುಣೆಗೆ ಮೈಯ್ಯಿಡ್ಡಿದ್ದರು. ಹುಣ್ಣಿಮೆಯ ಹಿಂದಿನ ದಿನವಾದ ಅಂದು ಊರುತುಂಬ ಚೆಂದದ ಬೆಳಕಿತ್ತು. ಹಂಗಾಡಿ ಹಿಂಗಾಡಿ ನಿದ್ದೆ ಬೆನ್ನತ್ತಿ ಜನ ತೂಕಡಿಸಿ ನೆಲ ಸಿಕ್ಕರೆ ಸಾಕೆಂದು ಮನೆಯ ಒಳಗೆ ಹೊರಗೆ, ಕಟ್ಟೆ ಮೇಲೆ, ಮರದಡಿ, ದೇವಸ್ಥಾನಗಳಲ್ಲಿ, ಎಲ್ಲೆಂದರಲ್ಲಿ ಮಲಗಿದ್ದರು. ನಿದ್ದೆ ಎಲ್ಲರನ್ನೂ ಮೆಲ್ಲಗೆ ಒಳಗೆಳೆದುಕೊಂಡು ದಿನದ ನೋವು, ಸುಸ್ತು, ದುಃಖ ದುಮ್ಮಾನಗಳನ್ನು ಶಮನಗೊಳಿಸತೊಡಗಿತು. ಗಂಡಸು ಹೆಂಗಸು ಮಕ್ಕಳು ಮರಿ ಧರ್ಮ ಜಾತಿ ಬಡವ ಬಲ್ಲಿದ ಮುಂತಾದ ಎಲ್ಲ ಗೆರೆಗಳ ಅಳಿಸಿ ಲೋಕಕ್ಕೇ ಸುರಿವ ಮಳೆಯಂತೆ, ಎಲ್ಲ ಕಡೆ ಸುಳಿವ ಗಾಳಿಯಂತೆ ಎಲ್ಲರ ಅಂತರಂಗದಲ್ಲಿ ಒಂದು ವಾಣಿ ಕೇಳಿಸಿತು. ಆಗ ಮಧ್ಯರಾತ್ರಿಯಾಗಿತ್ತು. ಅದು ಸಂಗೀತದಂತೆ ಮಧುರವಾಗಿತ್ತು. ಎಲ್ಲಿದೆ ವಾಣಿಯ ಉಗಮ, ಅದು ಗಂಡು ಧ್ವನಿಯೋ ಹೆಣ್ಣು ಧ್ವನಿಯೋ ಎಂಬುದು ಗೊತ್ತಾಗದಂತಿತ್ತು. ಆ ಅಶರೀರವಾಣಿಯ ಅರ್ಥ ಹೀಗಿತ್ತು : ಪ್ರತಿ ಕುಟುಂಬವೂ ತಾನು ಕಳೆದುಕೊಂಡಿರುವ ಪ್ರೀತಿಪಾತ್ರರೂ ಕರುಣಾಮಯಿಯೂ ಕುಟುಂಬದ ಬಗ್ಗೆ ಕಾಳಜಿಯಿರುವ ಒಬ್ಬರನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಾಳೆ ರಾತ್ರಿ ಇದೇ ಹೊತ್ತಿಗೆ ಆ ವ್ಯಕ್ತಿ ಪ್ರತ್ಯಕ್ಷರಾಗುವರು ನಿಮ್ಮೆದುರಲ್ಲಿ. ಅವರು ಕೆಲವು ಕ್ಷಣ ನಿಮ್ಮೆಡನಿದ್ದು ಮತ್ತೆ ಮರೆಯಾಗುವರು. ಮರೆಯದಿರಿ ಈ ಅವಕಾಶ ಕೇವಲ ಒಮ್ಮೆ ಮಾತ್ರ.
ಗಾಢ ನಿದ್ದೆಯಲ್ಲಿದ್ದವರು, ಗೊರಕೆ ಹೊಡೆಯುತ್ತಿದ್ದವರು, ಕನವರಿಸುತ್ತಿದ್ದವರು, ಕನಸು ಕಾಣುತ್ತಿದ್ದವರು ತಡಬಡಾಯಿಸಿ ಎದ್ದರು. ದೀಪ ಹಾಕಿ ಮನೆ ಒಳಗೆ ಹೊರಗೆ ಅಡ್ಡಾಡಿ ಬಂದರು. ಕಾಲ್ಮಡಿದು ಬಂದರು. ಬೀಡಿ ಸೇದಿದರು. ಹಾಸಿಗೆಯ ಸುಕ್ಕು ಸರಿಪಡಿಸಿದರು. ಊರ ಕೈಗೂಸುಗಳು ಯಾವುದೋ ಲೋಕದ ಕಚಗುಳಿಯೆಂಬಂತೆ ನಕ್ಕು ಮತ್ತೆ ಜೊಲ್ಲು ಸುರಿಸುತ್ತ ಸಿಹಿ ನಿದ್ದೆಗೆ ಜಾರಿದವು. ಆ ಪಿಳ್ಳೆಗಳೂ ಆಲಿಸಿದ್ದವು ಆ ದಿವ್ಯವಾಣಿಯನ್ನು. ಚಂದ್ರ ಭೂಮಿಯನ್ನು ಗಮನಿಸುತ್ತಾ ಆಕಾಶದಲ್ಲಿ ಚಲಿಸುತ್ತಿದ್ದ. ಎಲ್ಲರೂ ಅಶರೀರವಾಣಿಯನ್ನು ತಮ್ಮ ನಿದ್ದೆಯಲ್ಲಿ ಕೇಳಿದ್ದರೂ ಬೇರೆಯವರೊಡನೆ ಚರ್ಚಿಸಿ ದೃಢಪಡಿಸಿಕೊಳ್ಳಲು ಹಿಂದೇಟು ಹಾಕಿದರು. ಏಕೆಂದರೆ ಜನರಲ್ಲಿ ಭಯವೂ ಮೂಡಿತ್ತು. ಇದೇನು ಕನಸೋ, ನಿಜವೋ, ಭ್ರಮೆಯೋ ಎಂಬುದು ಅವರಿಗೆ ಸಂಪೂರ್ಣವಾಗಿ ಸ್ಪಷ್ಟವಾಗ ಲೊಲ್ಲದು. ಉಳಿದ ರಾತ್ರಿಯನ್ನು ಅವರು ಹಾಸಿಗೆಯಲ್ಲಿ ಅತ್ತಿತ್ತ ಉರುಳುತ್ತ ನಿದ್ದೆಯಿಲ್ಲದೆ ಕಳೆದರು.
ಆ ಊರಿನ ಇತಿಹಾಸದಲ್ಲಿ ಎಂದೂ ಕಂಡು ಕೇಳರಿಯದಂತಹ ದಿನವೊಂದು ಮೆಲ್ಲಗೆ ಹುಟ್ಟಿತು. ಅಂದು ಎಲ್ಲರೂ ಚಡಪಡಿಕೆಯಿಂದ ಕುತೂಹಲದಿಂದ ಮತ್ತು ಸಂಭ್ರಮದಿಂದ ತುಂಬಿದ್ದರು. ಜನರ ನಡವಳಿಕೆ ಎಂದಿನಂತಿರಲಿಲ್ಲ. ಹಲವೊಮ್ಮೆ ಅಸಹಜವಾಗಿ ವರ್ತಿಸುವುದನ್ನು ಸಹ ಗಮನಿಸಬಹುದಿತ್ತು. ಊರಿನ ಬಹಳಷ್ಟು ಜನ ಒಳ್ಳೆಯದೋ ಅಥವಾ ಕೆಟ್ಟದ್ದೋ ಎರಡನ್ನೂ ಎದುರಿಸಲು ಸಿದ್ಧರಿದ್ದರು. ಊರಿಗೆ ಊರೇ ಜೊತೆಯಲ್ಲಿರುವಾಗ ತಾವೊಬ್ಬರೇ ವೈಯಕ್ತಿಕವಾಗಿ ಕಳೆದುಕೊಳ್ಳುವುದೇನಿದೆ ಮುಂತಾಗಿ ಯೋಚಿಸುತ್ತ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳತೊಡಗಿದರು. ಅಂದು ದಿನ ಸಾಗಿದಂತೆ ಎಲ್ಲರೂ ಮೈಚಳಿ ಅಂಜಿಕೆ ಬಿಟ್ಟು ತಮ್ಮ ತಮ್ಮ ಅಂತರಂಗದಲ್ಲಾದ ವಾಣಿಯನ್ನು ಪರಸ್ಪರ ಹೇಳಿಕೊಂಡು ಹಗುರಾಗತೊಡಗಿದರು. ಈ ವಾಣಿ ದೇವರ ವಾಣಿಯೇ ಆಗಿದ್ದರೆ ಗತಿಯೇನು? ಎಂಬುದಾಗಿ ಯೋಚಿಸಿ ತಮ್ಮ ಇದುವರೆಗಿನ ತಪ್ಪುಗಳನ್ನು ಇನ್ನು ಮುಂದೆ ಯಾವತ್ತೂ ಮಾಡುವುದಿಲ್ಲವೆಂದು ಶಪಥಗೈದರು. ಉದಾಹರಣೆಗೆ ಅತ್ತೆಯನ್ನು ವಿಪರೀತ ಸತಾಯಿಸುತ್ತಿದ್ದ ಸೊಸೆಯೊಬ್ಬಳು ಓಡಿ ಹೋಗಿ ಅತ್ತೆಯ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿಕೊಂಡಳು. ಪಾಲಾಗುವಾಗ ಹೆಚ್ಚು ಪಡೆದಿದ್ದ ಅಣ್ಣನೊಬ್ಬ ತನ್ನ ತಮ್ಮನ ಮನೆಗೆ ಹೋಗಿ ಚಿನ್ನದ ಸರ ಮತ್ತು ಹತ್ತು ಸಾವಿರ ರೂಪಾಯಿಗಳನ್ನು ವಾಪಸು ಕೊಟ್ಟು ಕ್ಷಮೆ ಬೇಡಿ ಬಂದ. ಹೀಗೆ ಅನೇಕ ಜನ ಸ್ವಪರೀಕ್ಷೆ ಮಾಡಿಕೊಂಡು ಸ್ವಚ್ಛವಾಗಿ, ದಿವ್ಯವಾಣಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಕಾಯತೊಡಗಿದರು. ಆದರೆ ಗ್ರಾಮದ ಕೆಲವರಿಗಾದರೂ ದಿವ್ಯವಾಣಿಯು ತೀವ್ರತರವಾದ ನಡುಕ ಹುಟ್ಟಿಸಿತ್ತು. ಕೆಲವರು ತಮಗಾಗದವರು ಮಾಡಿಸಿರುವ ಮಾಟ ಮಂತ್ರದ ಫಲವೆಂದು ನಂಬಿದ್ದರು. ಧರ್ಮಶಾಸ್ತ್ರಗಳಲ್ಲಿ ಎಲ್ಲಿಯೂ ಸತ್ತು ಹೋಗಿರುವ ಜನಸಾಮಾನ್ಯರು ಹೀಗೆ ಗುಂಪಾಗಿ ವಾಪಸು ಬರುವ ಉಲ್ಲೇಖಗಳು ಇಲ್ಲವಾದುದರಿಂದ ಇದು ದೆವ್ವದ ಕೆಲಸವೆಂದು ಬಲವಾಗಿ ನಂಬಿದ್ದರು. ಊರಲ್ಲಿದ್ದ ಕಳ್ಳಕಾಕರು, ಪಾಪಿಷ್ಟರಂತೂ ನಡುಗಿ ಹೋಗಿದ್ದರು. ಇಂತಹವರೆಲ್ಲಾ ಊರು ಬಿಟ್ಟು ಹೋಗಲು ಯೋಜನೆ ಹಾಕುತ್ತಿದ್ದರು. ಆಗ ಅಲ್ಲಿದ್ದ ಹಣ್ಣು ಹಣ್ಣು ಮುದುಕಿಯೊಬ್ಬಳು ಯಾರೂ ಭಯ ಬೀಳಬೇಡಿ. ಇದು ದೇವರಾಟ ಇದ್ದಂಗೆ ಕಾಣಿಸ್ತೈತೆ. ನೀವು ಎಲ್ಲಿ ಬಚ್ಚಿಟ್ಟುಕೊಂಡರೂ ದೇವರ ಕಣ್ಣಿಗೆ ಬೀಳುತ್ತೀರಿ. ಯಾರೇ ಆಗಮಿಸಲಿ ಚೆನ್ನಾಗಿ ಮಾತನಾಡಿಸಿ ಸತ್ಕರಿಸಿ ಎಂದಳು. ಆಕೆಯು ಐವತ್ತು ವರ್ಷದ ಕೆಳಗೆ ಸತ್ತಿದ್ದ ತನ್ನ ಗಂಡನನ್ನು ನೆನಪಿಸಿಕೊಳ್ಳತೊಡಗಿದಳು. ಅವಳ ನೆನಪಿನಂಗಳದಲ್ಲಿ ಮಸುಕಾಗಿ ತೇಲಿ ಬಂದ ಗಂಡನ ರೂಪು ಬರುಬರುತ್ತ ನಿಚ್ಚಳವಾಗಿ ಅವಳಿಗೆ ಆಶ್ಚರ್ಯವೂ ಆನಂದವೂ ಆಗತೊಡಗಿತು. ಊರು ಬಿಟ್ಟು ಹೋಗುತ್ತಿದ್ದವರು ಮತ್ತೊಮ್ಮೆ ಆತ್ಮ ಪರೀಕ್ಷೆ ಮಾಡಿಕೊಂಡು ಊರಲ್ಲೇ ಉಳಿಯಲು ನಿರ್ಧರಿಸಿದರು. ಯಾವುದಕ್ಕೂ ಕರುಣಾಮಯಿಗಳಾಗಿದ್ದ ಸತ್ತು ಹೋಗಿದ್ದ ತಮ್ಮ ತಾಯಂದಿರನ್ನು ಮನಸ್ಸಿನಲ್ಲಿಟ್ಟುಕೊಂಡರು. ಎಂಥದೇ ಸನ್ನಿವೇಶದಲ್ಲೂ ತಮ್ಮ ಪರವಾಗಿ ನಿಲ್ಲುವವಳು ತಾಯಿ ಮಾತ್ರ ಎಂಬುದು ಅವರ ನಿಚ್ಚಳವಾದ ನಿರ್ಧಾರವಾಗಿತ್ತು. ಹಾಗೂ ತಾಯಿಯೆದುರು ತಮ್ಮ ಪಾಪಕೃತ್ಯಗಳನ್ನೆಲ್ಲ ಬಿಟ್ಟುಬಿಡುವ ಶಪಥ ಮಾಡಿದರು.
ಬರಲಿರುವ ದಿವ್ಯ ಕ್ಷಣಗಳ ಎದುರಲ್ಲಿ ಜನ ಉದಾರಿಗಳಾಗಿ ಸಹನಶೀಲರಾಗಿ ಸಜ್ಜನಿಕೆಯಿಂದ ವರ್ತಿಸತೊಡಗಿದರು. ಒಬ್ಬ ತಾಯಿಯಂತೂ ಇದುವರೆಗೆ ತಾನು ಉರಿಸುತ್ತಿದ್ದ ಮಲಮಗನನ್ನು ಎತ್ತಿಕೊಂಡು ಕೆಳಗಿಳಿಸದೆಯೇ ಪ್ರೀತಿ ತೋರಿಸತೊಡಗಿದಳು. ಹಂಗೆ ಬಾಳಬೇಕು ನೋಡು ಎಂದು ಸಂತೋಷದಲ್ಲಿ ಕೂಗಿದಳು ಹಣ್ಣು ಹಣ್ಣು ಮುದುಕಿ. ಆಕೆ ಎಂದಿನಂತೆ ಎಲೆಡಿಕೆಯನ್ನು ಕುಟ್ಟಾಣಿಯಲ್ಲಿ ಕುಟ್ಟತೊಡಗಿದಳು. ಕುಟ್ಟುವಿಕೆ ಇಂದು ಎಂದಿಗಿಂತಲೂ ವೇಗ ಪಡೆದಿತ್ತು. ಕುಟ್ಟುವ ಕಣಕಣ ಶಬ್ದ ಓಣಿ ಓಣಿ ದಾಟಿ ಊರಿಗೂರೇ ಕೇಳಿಸತೊಡಗಿತು.
ದಿವ್ಯಕ್ಷಣಗಳ ನಿರೀಕ್ಷೆಯಲ್ಲಿ ಮನೆಯೊಳಗೆ ಹೊರಗೆ ಎಲ್ಲೆಂದರಲ್ಲಿ ಜನ ಕೂತು ನಿಂತು ಸಕಲೆಂಟು ದಿಕ್ಕುಗಳನ್ನು ಗಮನಿಸುತ್ತಿದ್ದರು. ಬಹಳಷ್ಟು ಜನರಿಗೆ ಮೊದಮೊದಲು ಯಾರನ್ನು ಮನದಲ್ಲಿ ನೆನಪಿಸಿಕೊಳ್ಳುವುದು ಎಂಬುದು ಕಗ್ಗಂಟಾಗಿತ್ತು. ಮೃತರಾದ ಅಪ್ಪನನ್ನೋ? ಅಮ್ಮನನ್ನೋ? ಎಳೆಯದರಲ್ಲಿಯೇ ತೀರಿ ಹೋಗಿರುವ ಮಕ್ಕಳನ್ನೋ? ಅಕಾಲ ಮೃತ್ಯುವಿಗೆ ಒಳಗಾಗಿರುವ ಅಳಿಯ ಸೊಸೆಯನ್ನೋ? ಯಾರನ್ನು? ಕೊನೆಗೆ ಕುಟುಂಬದ ಯಜಮಾನರೇ ಎಲ್ಲ ಸದಸ್ಯರ ಜೊತೆ ಚರ್ಚಿಸಿ ಬಹುಮತದ ಆಧಾರದಲ್ಲಿ ಅರ್ಹ ವ್ಯಕ್ತಿಯನ್ನು ಗುರುತಿಸಿದರು. ಅಂತಹ ಪ್ರಕರಣಗಳಲ್ಲಿ ತಮಗೆ ಬೇಕಾದ ವ್ಯಕ್ತಿ ಆಗಮಿಸುತ್ತಿಲ್ಲವೆಂದೂ ಬೇಜಾರು ಸಿಟ್ಟು ಸೆಡೆ ಮಾಡಿಕೊಂಡವರೂ ಇದ್ದರು. ಕನಿಷ್ಠ ಕುಟುಂಬಕ್ಕೆ ಇಬ್ಬರನ್ನಾದರೂ ಕಳಿಸಿಕೊಡದ ವಾಣಿಯ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದವರೂ ಇದ್ದರು. ಆದರೆ ಸಮಯ ಉರುಳಿದಂತೆ ಯೋಗ್ಯರನ್ನು ಮನಸ್ಸಿನಲ್ಲಿಟ್ಟುಕೊಂಡು ಆಸೆಯಿಂದ ಕಾದರು. ಯಾವಾಗಲೂ ದುಃಖದಲ್ಲಿ ಮಲಗಿರುವ 60 ವರ್ಷದ ತೋಟದ ಮನೆಯ ಯಜಮಾನನೊಬ್ಬ ಬೆಳಗ್ಗೆಯಿಂದ ಚಟುವಟಿಕೆಯಿಂದಿದ್ದಾನೆ. ದಿನವೂ ನಡೆದಾಡಲು ಕೋಲೂರುತ್ತಿದ್ದವನು ಇಂದು ಕೋಲಿಲ್ಲದೆ ಅಡ್ಡಾಡುತ್ತಿದ್ದಾನೆ. ಐದು ವರ್ಷದ ಹಿಂದೆ ಸತ್ತಿದ್ದ ತನ್ನ ಹೆಂಡತಿಯನ್ನು ಕ್ಷಣ ಕ್ಷಣವೂ ನೆನೆಯುತ್ತ ಕಾಲ ಕಳೆದಿದ್ದಾನೆ. ದಿವ್ಯವಾಣಿಯ ಪ್ರಕಾರ ತನ್ನ ಪ್ರೀತಿಯ ಪತ್ನಿ ಎದುರು ಬಂದೇಬಿಟ್ಟರೆ! ಎಂದು ರೋಮಾಂಚಿತನಾಗುತ್ತಾನೆ. ಪತ್ನಿ ಸತ್ತಂದಿನಿಂದಲೂ ಖಿನ್ನತೆಗೆ ಒಳಗಾಗಿ ದೈಹಿಕವಾಗಿ ಇಳಿದು ಹೋಗಿರುವ ತನ್ನನ್ನು ಆಕೆ ಕಂಡುಹಿಡಿಯಬಲ್ಲಳೇ? ಉರುಳಿ ಹೋಗಿರುವ ಕಾಲ ಮತ್ತು ಸಾವನ್ನು ಶಪಿಸುತ್ತಾನೆ. ಹೆಂಡತಿಯನ್ನು ಹೇಗೆ ಮಾತನಾಡಿಸುವುದು? ಏನು ಮಾತನಾಡುವುದು? ಖಿನ್ನತೆ ಬಗ್ಗೆ ಏನು ಹೇಳಲಿ? ಮಕ್ಕಳಿಲ್ಲದ ತಮ್ಮ ದಾಂಪತ್ಯದ ಬಗ್ಗೆ ಸಾಂತ್ವನ ಹೇಗೆ? ಯಜಮಾನನಿಗೆ ಕಣ್ಣೀರು ಬರುತ್ತದೆ. ಆದರೆ ಹೆಂಡತಿಯೆದುರು ಅಳಕೂಡದು. ಸಂತೋಷದಿಂದಿರಬೇಕು ಎಂದು ಮನಸ್ಸು ಗಟ್ಟಿ ಮಾಡಿಕೊಳ್ಳುತ್ತಾನೆ. ಕೆಲವರು ಅಂದು ರಾತ್ರಿ ಆಗಮಿಸಲಿರುವ ಸನಿಹದ ಬಂಧುಗಳ ಬಗ್ಗೆ ಗಾಢಾಲೋಚನೆ ಯಲ್ಲಿದ್ದರು. ಬದುಕಿದ್ದಾಗ ಅವರ ಒಡನಾಟದ ಅನೇಕ ಪ್ರೀತಿಯ ಸಂತೋಷದ ಸಂಕಟದ ಗಳಿಗೆಗಳನ್ನು ನೆನಪಿಸಿಕೊಳ್ಳುತ್ತ ನಾನಾ ಬಗೆಯ ಭಾವಗಳ ಬಲೆಯಲ್ಲಿದ್ದರು. ದಿನವೂ ಒಂಬತ್ತು ಗಂಟೆಗೆಲ್ಲ ಮಲಗಿರುತ್ತಿದ್ದ ಊರಿನ ಸೌಕಾರ ಇವತ್ತು ಹೊತ್ತು ಮೀರಿದ್ದರೂ ಒಂದೇ ಒಂದು ಸಲ ಆಕಳಿಸಿರಲಿಲ್ಲ. ಆತನೊಬ್ಬ ಹುಟ್ಟು ಜುಗ್ಗನೂ ದುರಾಸೆಯವನೂ ಆಗಿದ್ದ. ಜೀವನದ ಸೌಂದರ್ಯವೆಲ್ಲ ದುಡ್ಡಿನಲ್ಲಿದೆ ಎಂದು ತಿಳಿದಿದ್ದವನು. ಆದರೆ ದಿವ್ಯವಾಣಿಯು ಅವನನ್ನು ಬದಲಾಯಿಸಿತ್ತು. ಇಂದು ರಸ್ತೆಯಲ್ಲಿ ನಡೆಯುತ್ತ ಎದುರಾದ ಬಡವರನ್ನು ವಯಸ್ಸಾದವರನ್ನು ಕೈ ಹಿಡಿದು ಮಾತನಾಡಿಸಿದ. ನೂರಿನ್ನೂರು ರೂಪಾಯಿಗಳ ಭಕ್ಷೀಸು ಕೊಟ್ಟ. ಮನೆಯಲ್ಲಿದ್ದ ನಿರುಪಯುಕ್ತ ಬಟ್ಟೆ ಬರೆ ಪಾತ್ರೆ ಪಡಗ ದವಸ ಧಾನ್ಯಗಳನ್ನು ಕೊಟ್ಟು ಕಳುಹಿಸಿದ. ದಾನ ಪಡೆದವರು ಸೌಕಾರ್ರೆ ನಾಳೆ ವಾಪಸ್ ಕೇಳಬಾರ್ದು ಎಂಬ ಷರತ್ತಿನ ಮೇಲೆ ಇಸಿದುಕೊಂಡರು. ಸೌಕಾರನ ಕಣ್ಣುಗಳು ಅಲ್ಲೇ ಇದ್ದ ಒಬ್ಬ ಬಡ ಹುಡುಗನ ಮೇಲೆ ನೆಟ್ಟವು. ಅಪಘಾತದಲ್ಲಿ ಆ ಹುಡುಗನ ಅಪ್ಪ ಅಮ್ಮ ಇಬ್ಬರೂ ಮೃತರಾಗಿ ತಬ್ಬಲಿಯಾಗಿದ್ದ. ಸೌಕಾರನ ಮನೆಯಲ್ಲಿದ್ದು ಹೇಳಿದ ಕೆಲಸ ಮಾಡಿಕೊಂಡಿದ್ದ. ಎರಡು ಹೊತ್ತು ಕೊಟ್ಟ ಉಳಿಕೆ ಬಳಿಕೆಯನ್ನು ತಿಂದುಕೊಂಡಿದ್ದ. ಮನೆಯಲ್ಲಿ ಜೂಲು ನಾಯಿ ಕಟ್ಟಿ ಹಾಕುತ್ತಿದ್ದ ರೂಮಿನ ಒಂದು ಮೂಲೆಗೆ ಅವನು ಮಲಗುವ ಸ್ಥಳ, ಗೋಣಿಚೀಲವೇ ಅವನ ಹಾಸಿಗೆ. ಸದಾ ಮಂಕಾಗಿರುತ್ತಿದ್ದ ಅವನು ಈ ದಿನ ಚಟುವಟಿಕೆಯಲ್ಲಿದ್ದ. ಕಣ್ಣುಗಳು ಮಿಂಚುತ್ತಿದ್ದವು. ಸೌಕಾರನು ಹುಡುಗನನ್ನು ಇದುವರೆಗೆ ಕತ್ತೆ ಎಂದೇ ಕರೆಯುತ್ತಿದ್ದ. ಇಂದು ಹಾಗೆ ಕರೆಯಲಿಲ್ಲ. ಬಾರೋ ಇಲ್ಲಿ. ನಿನ್ನ ಹೆಸರೇನು?
ಭದ್ರಿ ಅಪ್ಪಾರೆ
ಸ್ಕೂಲಿಗೋಗ್ತಿದಿಯಾ?
ಇಲ್ರೀ ಅಪ್ಪಾರೆ
ಇವತ್ತು ಯಾರ್ನ ಮನಸ್ಸಲ್ಲಿಟ್ಕಂಡಿದೀಯ ಭದ್ರಿ?
ನಮ್ಮಮ್ಮನ್ನ ಎಂದ ಭದ್ರಿ ಉಮ್ಮಳಿಸಿ ಅಳತೊಡಗಿದ. ಅವನನ್ನು ಅಷ್ಟು ಪ್ರೀತಿಯಿಂದ ಯಾರೂ ಮಾತಾಡಿಸಿರಲಿಲ್ಲ.
ಭದ್ರಿ ಕೇವಲ ಆರು ವರ್ಷದ ಮಗು ಎಂಬುದನ್ನು ಸೌಕಾರ ಇದೇ ಮೊದಲ ಬಾರಿಗೆ ಗಮನಿಸಿದ. ಅಷ್ಟು ದುಃಖದ ಅಳುವನ್ನು ಅವನೆಂದೂ ನೋಡಿರಲಿಲ್ಲ. ಸೌಕಾರನ ಕಣ್ಣುಗಳೂ ತೇವಗೊಂಡವು. ಸೌಕಾರ ಸಣ್ಣವನಿದ್ದಾಗ ಬಿದ್ದು ಅತ್ತಿದ್ದು ಬಿಟ್ಟರೆ ಈಗಲೇ ಕಣ್ಣಲ್ಲಿ ನೀರಾಡಿದ್ದು. ಮುಂದಿನ ವರ್ಷದಿಂದ ಸ್ಕೂಲಿಗೋಗು. ನಾನು ಓದಿಸ್ತೀನಿ. ಈಗ ಮನೆ ಒಳಗೋಗಿ ಸ್ನಾನ ಮಾಡಿ ನನ್ನ ಮೊಮ್ಮಗನ ಬಟ್ಟೆ ಉಟ್ಟು, ಉಂಡು ಬಾ ಎಂದು ಒಳಗೆ ಮನೆ ಮಂದಿಗೆಲ್ಲಾ ಕೇಳುವಂತೆ ಕೂಗಿ ಹೇಳಿದ. ಅರ್ಧ ಗಂಟೆಯಲ್ಲಿ ಸಿದ್ಧನಾಗಿ ಬಂದ ಭದ್ರಿಯ ಕೈಹಿಡಿದುಕೊಂಡು ಸೌಕಾರ ಊರೊಳಗೆ ಹೊರಟ. ಸಮಯ ಹನ್ನೊಂದಾಗಿದ್ದರೂ ಊರಿನಲ್ಲಿ ಒಂದು ನರಪಿಳ್ಳೆಯೂ ಮಲಗಿರಲಿಲ್ಲ. ಊರಿಗೂರನ್ನೇ ರಂಗೋಲಿ ಚಪ್ಪರ ತೋರಣಗಳಿಂದ ಸಿಂಗರಿಸಿದ್ದರು. ಸಣ್ಣ ಪುಟ್ಟ ಮಕ್ಕಳೂ ಸಹ ಎಚ್ಚರವಾಗಿದ್ದರು. ಹೆಣ್ಣುಮಕ್ಕಳೆಲ್ಲ ವಿಶೇಷ ಅಡುಗೆ ಮಾಡಿಟ್ಟು ಹಬ್ಬ ಹರಿದಿನಗಳಿಗಿಂತಲೂ ಶುಭ್ರರಾಗಿ ತಮ್ಮಲ್ಲಿದ್ದ ಒಳ್ಳೆಯ ಬಟ್ಟೆ ಧರಿಸಿ ಮನೆ ಒಳ ಹೊರಗೆ ಓಡಾಡುತ್ತಿದ್ದರು. ಊರಿಗೂರೇ ಗಲಗಲ ಎನ್ನುತ್ತಿತ್ತು. ಎಲ್ಲರ ಮನಸ್ಸಿನಲ್ಲಿ ಹಬ್ಬವೂ ಇತ್ತು, ದಿಗಿಲೂ ಇತ್ತು. ಸೌಕಾರನ ಜೊತೆ ಬಂದಿದ್ದ ಭದ್ರಿಯನ್ನು ಯಾರೂ ಗುರುತಿಸಲಿಲ್ಲ. ಮೊಮ್ಮಗ್ನ ಸೌಕಾರ್ರೆ? ಯಾರೋ ಪ್ರಶ್ನಿಸಿದರು. ಹೌದು ಕಣಪ್ಪ ಎಂದ ಸೌಕಾರ. ಸೌಕಾರನ ಮನಸ್ಸಲ್ಲಿ ಹೊಯ್ದಿಟ ನಡೆದಿತ್ತು. ಕೊಡುಗೈ ದಾನಿಯಾಗಿದ್ದ ತನ್ನ ತಂದೆಯನ್ನು ನೆನೆದ. ತಂದೆಯನ್ನು ಕಂಡು ಆ ಮೂರ್ತಿಯೆದುರು ಪಾಪ ನಿವೇದನೆಯನ್ನು ಮಾಡಿಕೊಳ್ಳಲು ಉತ್ಸುಕನಾಗಿದ್ದ. ತನ್ನ ಸಣ್ಣತನಕ್ಕೆ ಸಾಕ್ಷಿಯಾಗಿ ಉಳಿದಿದ್ದ ಕರುಣಾಳು ಹಡೆದವ್ವನ ರಕ್ಷಣೆಯಲ್ಲಿ ತನ್ನಪ್ಪನ್ನ ಎದುರಿಸಲು ಮಾನಸಿಕವಾಗಿ ಸಿದ್ಧನಾಗಿದ್ದ. ಅಲ್ಲೊಬ್ಬ ಮೂವತ್ತರ ಹರೆಯದವ ತನ್ನ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಹೊತ್ತು ಬೇಗನೆ ಉರುಳದ ಬಗ್ಗೆ ಉದ್ವಿಗ್ನಗೊಂಡಿದ್ದ. ಅವನ ಹೆಂಡತಿ ಹೆರಿಗೆಯಲ್ಲಿ ತೀರಿಕೊಂಡಿದ್ದಳು. ನೆರೆಹೊರೆಯವರೆಲ್ಲ ಸೇರಿ ಕಷ್ಟಪಟ್ಟು ಮಗುವನ್ನು ಬದುಕಿಸಿಕೊಂಡಿದ್ದರು. ಏನು ಸೋಜಿಗ ನೋಡಜ್ಜಿ. ಇವತ್ತು ಮಗು ಅಮ್ಮ ಅನ್ನೋದಕ್ಕೆ ಶುರು ಮಾಡೈತೆ. ಇವತ್ತೇ ಇವಳಮ್ಮನೂ ಬರ್ತಾಳಂತೆ ಏನು ಯೋಗಾಯೋಗ? ಎಂದು ಹೇಳುತ್ತ ಭಾವನೆಗಳ ಬಿರುಗಾಳಿಗೆ ಸಿಕ್ಕವನಂತೆ ನಿಂತಲ್ಲೇ ಕುಳಿತ. ತಾಯಿಯಿಲ್ಲದ ಮಗಳು ಮತ್ತು ತೀರಿಕೊಂಡ ಹೆಂಡತಿಯ ನೆನಪು ಅವನನ್ನು ತೀವ್ರವಾಗಿ ಕಾಡಿಸಿತ್ತು. ಆಗ ಅಲ್ಲಿ ಇದ್ದಕ್ಕಿದ್ದಂತೆ ಸುತ್ತಲ ಗಾಳಿಯಲ್ಲಿದ್ದಳೋ ಎನ್ನುವಂತೆ, ಮಗುವಿನ ತೊಟ್ಟಿಲ ಬಳಿ ಇದ್ದಳೇನೋ ಎನ್ನುವಂತೆ, ನೆರೆದಿದ್ದ ಜನರ ಮಧ್ಯ ನಿಂತಿದ್ದಳೋ ಎನ್ನುವಂತೆ ಆ ಪುಟ್ಟ ಮಗುವಿನ ಅಮ್ಮ ಪ್ರತ್ಯಕ್ಷಳಾದಳು. ಮಗುವನ್ನೆತ್ತಿಕೊಂಡು ತನ್ನ ಗಂಡನಾಗಿದ್ದವನ ಪಕ್ಕದಲ್ಲಿ ಕುಳಿತು ಮಗುವಿಗೆ ಹಾಲೂಡಿದಳು. ಮಗು ಕೈಕಾಲುಗಳನ್ನು ಗಾಳಿಯಲ್ಲಿ ಆಡಿಸುತ್ತ ಮೊದಲ ಬಾರಿಗೆ ತಾಯಿ ಹಾಲು ಹೊಟ್ಟೆ ತುಂಬ ಕುಡಿದು ಅಮ್ಮಮ್ಮಮ್ಮ ಎನ್ನುತ್ತ ಹೂ ನಿದ್ದೆಗೆ ಜಾರಿತು. ಸುತ್ತ ಇದ್ದ ಹೆಂಗಸರು ಅಮ್ಮನನ್ನು ಮುಟ್ಟಿ ನೋಡಿದರು. ತಮ್ಮನ್ನು ಚಿವುಟಿಕೊಂಡು ನೋಡಿದರು. ಕಣ್ಣು ರೆಪ್ಪೆ ಆಡದಂತೆ ನೋಡಿದರು. ಪಾದಗಳನ್ನು ಗಮನಿಸಿ ದೆವ್ವವಲ್ಲವೆಂದು ಖಚಿತಪಡಿಸಿಕೊಂಡರು. ಆಮೇಲೆ ಮುಖವನ್ನು ನೋಡಿದರು. ಅದು ಶಾಂತವಾಗಿತ್ತು, ಗಂಭೀರವಾಗಿತ್ತು. ಆಕೆ ಸಾಯುವ ದಿನಗಳಲ್ಲಿ ಹೇಗಿದ್ದಳೋ ಈಗಲೂ ಹಾಗೆಯೇ ಇದ್ದಳು. ಮುಖದಿಂದ ಕರುಣೆ ಸುರಿಯುತ್ತಿತ್ತು. ತಾಯಿಯನ್ನು ಮಾತನಾಡಿಸಲು ಜನರ ಬಾಯಿ ತುಡಿಯುತ್ತಿತ್ತು. ಆಸೆಯ ಜೊತೆ ಭಯವೂ ಆಗುತ್ತಿತ್ತು. ಅವಳ ಗಂಡ ಮೂಕವಿಸ್ಮಿತನೂ, ಅನಿರ್ವಚನೀಯ ಆನಂದ ತುಂಬಿದವನೂ ಆಗಿ, ಎದುರು ಕೂತಿದ್ದ ಒಂದು ಕಾಲದ ತನ್ನ ಹೆಂಡತಿಯ ಕೈಗಳೆರಡನ್ನೂ ಹಿಡಿಯುತ್ತ ಮುಖ ಸವರಿದ. ದೇವತಾ ಸ್ವರೂಪಿಯಂತೆ ಕಂಡ ಅವಳಿಗೆ ಎರಡೂ ಕೈ ಜೋಡಿಸಿ ಮುಗಿದ. ಬದುಕಿರುವ ಮನುಷ್ಯರೆಷ್ಟು ಕ್ಷುಲ್ಲಕ ಅನ್ನಿಸಿತು. ಏನನ್ನೂ ಮಾತನಾಡಲಾಗದೆ ಮಗಳನ್ನು ಚೆನ್ನಾಗಿ ಸಾಕುತ್ತೇನೆ ಎಂದು ಮಾತ್ರ ಹೇಳಿ ಹೆಂಡತಿಯನ್ನು ಗೌರವಪೂರ್ವಕವಾಗಿ ನೋಡುತ್ತ ಮೌನವಾಗುಳಿದುಬಿಟ್ಟ. ಸ್ವಲ್ಪ ಹೊತ್ತಲ್ಲಿ ಮಗು ಅಪ್ಪನ ತೊಡೆಯ ಮೇಲೆ ನಿದ್ದೆ ಮಾಡಿತು. ಅಪ್ಪ ಭಾವ ಸಮಾಧಿಯಲ್ಲಿದ್ದ. ಅಮ್ಮ ಯಾವ ಮಾಯೆಯಿಂದ ಆಗಮಿಸಿದ್ದಳೋ ಹಾಗೆಯೇ ನೋಡನೋಡುತ್ತಿದ್ದಂತೆ ಮಗುವಿನ ತೊಟ್ಟಿಲ ಬಳಿ ಅಂತರ್ಧಾನವಾದಳು. ತೋಟದ ಮನೆಯಲ್ಲಿ ಖಿನ್ನತೆಗೊಳಗಾಗಿದ್ದ ಯಜಮಾನನ ಹೆಂಡತಿ ತೋಟದ ಮರ ಗಿಡ ಬಳ್ಳಿಯಿಂದಲೇ ಉದ್ಭವಿಸಿದಂತೆ ಪ್ರತ್ಯಕ್ಷಳಾದಳು. ಜರ್ಜರಿತನಾಗಿದ್ದ ಯಜಮಾನನ ಸ್ಥಿತಿಗೆ ಆ ತಾಯಿ ಬೇಸರಗೊಂಡಳು. ಯಜಮಾನ ನಾನು ಮಕ್ಕಳಂತೆ ಸಾಕಿರುವ ತೋಟದಲ್ಲಿಯೇ ನೀನಿದ್ದೀಯಲ್ಲವೇ? ಅದೇ ನನಗೆ ಆತ್ಮವಿಶ್ವಾಸ ಧೈರ್ಯ ತಂದಿದೆ. ಅದೇ ನನ್ನ ಖಿನ್ನತೆಗೂ ಔಷಧಿ.ಇನ್ನು ನನ್ನ ಆರೋಗ್ಯ ಸುಧಾರಿಸುವುದು ಖಂಡಿತ ಎಂದು ನುಡಿದ. ಪರಸ್ಪರ ದಿಟ್ಟಿಸುತ್ತ ದಾಂಪತ್ಯದ ಹಳೆಯ ದಿನಗಳನ್ನೆಲ್ಲ ನೆನಪು ಮಾಡಿಕೊಂಡರು. ನಕ್ಕರು. ಅತ್ತರು. ಸ್ವಂತ ಮಕ್ಕಳಿಲ್ಲದಿದ್ದರೂ ಯಜಮಾನನು ಅಣ್ಣ ತಮ್ಮಂದಿರ ಮಕ್ಕಳು ಮೊಮ್ಮಕ್ಕಳನ್ನೆಲ್ಲ ತನ್ನ ಮನೆಯಲ್ಲಿಯೇ ಸಾಕಿ ಸಲಹಿ ದ್ದನು. ತುಂಬಿದ ಮನೆ ಸಂತಸದಲ್ಲಿ ಓಲಾಡುತ್ತಿತ್ತು. ಅವರದ್ದು ಪ್ರೇಮ ತುಂಬಿದ ದಾಂಪತ್ಯ ವಾಗಿತ್ತು ಮತ್ತು ಕಹಿ ವಿದಾಯವಾಗಿತ್ತು. ಯಜಮಾನನ ಜೀವ ತುಂಬಿದಂತಿರಲು ತೋಟದ ಕಡೆ ನಡೆದ ಆಕೆ ತೋಟದ ಮರ ಗಿಡ ಬಳ್ಳಿಗಳಲ್ಲಿ ಬೆರೆತು ಹೋದಂತೆ ಮಾಯವಾಗಿ ಹೋದಳು.
ಇತ್ತ ಸೌಕಾರನ ಮನೆಯಲ್ಲಿ ಶೂನ್ಯವೇ ಘನವಾದಂತೆ ಸೌಕಾರನ ಅಪ್ಪ ಪ್ರತ್ಯಕ್ಷನಾದನು. ವಿವಿಧ ಚಟುವಟಿಕೆಯಲ್ಲಿದ್ದವರು, ಮಾತುಕತೆಯಾಡುತ್ತಿದ್ದವರು ಸುಮ್ಮನಾಗಿ ಕೈಮುಗಿಯುತ್ತ ಧಾವಿಸಿ ಬಂದರು. ಸೌಕಾರ ನಾಚಿಕೆಯಿಂದಲೂ ಭಯದಿಂದಲೂ ತಲೆ ತಗ್ಗಿಸಿ ದೂರ ನಿಂತಿದ್ದ. ಆದರೆ ಅಪ್ಪನೇ ಬಳಿ ಬಂದು ಮಗನ ಹೆಗಲ ಮೇಲೆ ಕೈ ಹಾಕಿ ಬೆನ್ನು ಸವರಿ ಇವತ್ತು ಸರಿ ದಾರಿಯಲ್ಲಿದ್ದೀಯ. ಮುಂದುವರಿಸು ಎಂದನು. ಸೌಕಾರನಿಗೆ ಕಣ್ಣೀರು ಸುರಿಯತೊಡಗಿತು. ಅವು ಅವನ ಆತ್ಮದ ಪಾಪವನ್ನು ತೊಳೆದು ಹೊರಗೆ ಸುರಿಯುತ್ತಿದ್ದಂತೆ ತೋರಿತು. ಅಪ್ಪನು ಮಗನ ತಲೆ ಮುಖವನ್ನು ಸವರುತ್ತ ತನ್ನ ಹೆಂಡತಿಯ ಬಳಿ ಬಂದ. ಸತ್ತು ಹೋಗಿದ್ದ ಗಂಡನೇ ಬಂದು ಎದುರು ನಿಂತಾಗ ಆಕೆ ದಿಢೀರನೆ ಎದ್ದು ಕೈಮುಗಿದಳು. ಮಂಜಾಗಿದ್ದ ಕಣ್ಣುಗಳನ್ನುಜ್ಜಿಕೊಂಡಳು. ನನ್ನೂ ಕರ್ಕಂಡೋಗು ಸ್ವಾಮಿ, ಬತ್ತೀನಿ ಎಂದಳು. ಇದೇನು ಕನಸೋ ನನಸೋ ಎಂದು ಅಜ್ಜಿ ಕಕ್ಕಾಬಿಕ್ಕಿಯಾಗಿದ್ದಳು. ಗಂಡ ಏನೂ ಮಾತನಾಡಲಿಲ್ಲ. ಸುತ್ತಲೂ ಇದ್ದ ಮಕ್ಕಳು ಮೊಮ್ಮಕ್ಕಳನ್ನು ನೋಡುತ್ತ ಕಣ್ತುಂಬಿಕೊಳ್ಳುತ್ತ ನಿಧಾನವಾಗಿ ಅಂತರ್ಧಾನನಾದ. ಅಷ್ಟರಲ್ಲಿ ಭದ್ರಿಯ ಅಮ್ಮನೂ ತನ್ನ ಮಗ ಭದ್ರಿಯು ಮಲಗುತ್ತಿದ್ದ ಜಾಗದಿಂದ ಪ್ರತ್ಯಕ್ಷಳಾಗಿ ಎದ್ದು ಬಂದಳು. ತನ್ನ ಕಂದನ ಎತ್ತಿ ಅಪ್ಪಿ ಮೇಲಕ್ಕೆ ತೂರಿ ಹಿಡಿದು ಮುಖದ ತುಂಬ ಮುತ್ತಿಕ್ಕಿದಳು. ಅವಳ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು. ಭದ್ರಿಯು ಸಂತೋಷದಿಂದ ಆಶ್ಚರ್ಯ ದಿಂದ ಅಪನಂಬುಗೆಯಿಂದ ಒಡೆದುಹೋಗುವ ಹಾಗಿದ್ದ. ಅಮ್ಮ ಮಗ ತಮ್ಮ ಇರುವಿಕೆಯನ್ನು ಮರೆತು ಹಗುರಾಗಿದ್ದರು. ಎಲ್ಲ ಕಳೆದುಕೊಂಡು ದೇವರಾಗಿದ್ದರು. ಅಮ್ಮ ಮಗನ ಅಂತಹ ಆನಂದದ ಕ್ಷಣ ಲೋಕದಲ್ಲಿ ಈ ಮೊದಲು ಸೃಷ್ಟಿಯಾಗಿತ್ತೋ ಇಲ್ಲವೋ!
ತೆರಳುವ ವೇಳೆ ಅಮ್ಮನು ಭದ್ರಿಯನ್ನು ಕೇಳಿದಳು. ಏನ್ ಬೇಕು ಮಗ? ನಿನ್ನ ಬಾಯಿಯ ಎಲೆಡಿಕೆ ಬೇಕಮ್ಮ. ಮೊದಲು ಮಾಡುತ್ತಿದ್ದೆಯಲ್ಲ ಹಾಗೆ ನನ್ನ ಬಾಯಲ್ಲಿಡು ಅಂದ. ಆಗ ತಾನೆ ಆಗಮಿಸಿದ್ದ ಗಂಡನ್ನ ಬೀಳ್ಕೊಂಡು ಎಲೆಡಿಕೆ ಕುಟ್ಟುತ್ತಿದ್ದ ಹಣ್ಣು ಹಣ್ಣು ಮುದುಕಿ ಕುಟ್ಟಾಣಿ ಯಲ್ಲಿದ್ದ ಅರ್ಧ ನುರಿತ ಎಲೆಡಿಕೆಯನ್ನು ಭದ್ರಿಯ ಅಮ್ಮನ ಬಾಯಲ್ಲಿಟ್ಟಳು. ಅಮ್ಮನು ಒಂದೆರಡು ಸಲ ಬಾಯಾಡಿಸಿ ಎಂಜಲು ಎಲೆಡಿಕೆಯನ್ನು ಭದ್ರಿಯ ಬಾಯಲ್ಲಿಟ್ಟಳು. ಭದ್ರಿಯು ಬಾಯಾಡುವು ದನ್ನು ನೋಡುನೋಡುತ್ತ ತಾಯಿಯು ಹಾಗೆಯೇ ಮಾಯವಾದಳು. ಇತ್ತ ಭದ್ರಿಯ ಬಾಯಿಯು ಕೆಂಪೇರುತ್ತಲೂ ಎಲೆಡಿಕೆಯ ಘಮಲು ಹೆಚ್ಚುತ್ತಲೂ ಮನೆಯೆಲ್ಲ ಹಬ್ಬಿ ನಿಂತಿತು.
ದಿವ್ಯಾನುಭವದ ನಂತರ ಊರಿನ ಜನರೆಲ್ಲ ಮಳೆಯಿಂದ ತೊಯ್ದು ಸ್ವಚ್ಛವಾದ ಗಿಡಮರ