ವಿಚಾರಗೋಷ್ಠಿಯ ಫಲಶ್ರುತಿ
ಅಡುಗೆ ಮನೆಯಲ್ಲಿ ಬೆಳಗ್ಗಿನ ಉಪಾಹಾರದ ತಯಾರಿಕೆಯಲ್ಲಿದ್ದ ಹೆಂಡತಿಯ ಸನಿಹ ರಾಜಣ್ಣರು ಹೋದರು. ‘‘ಸುಧಾ... ನಾಳೆ ದೀಪಾವಳಿ ಹಬ್ಬ. ನನಗೆ ಮತ್ತೆ ಪೇಟೆಯ ಕಡೆಗೆ ಹೋಗಲು ಇದೆ. ಹಬ್ಬದ ಅಡುಗೆಗೆ ಏನೆಲ್ಲಾ ಸಾಮಗ್ರಿಗಳು ಬೇಕೆಂದು ಚೀಟಿ ಬರೆದುಕೊಡು, ಬರುವಾಗ ನಾನು ತರುತ್ತೇನೆ ಎಂದನು. ಹೆಂಡತಿ ಸುಧಾಳು.. ‘‘ರೀ ಹಬ್ಬಕ್ಕೆ ಹೊಸ ಬಟ್ಟೆಗಳನ್ನು ತರಲು ಪೇಟೆಗೆ ನನಗೂ ಹೋಗಲಿಕ್ಕಿದೆ. ಆವಾಗ ನಾನೇ ತರುತ್ತೇನೆ. ನೀವು ದಿನಸಿ ಸಾಮಗ್ರಿ ಖರೀದಿಸಲು ಹೋದರೆ, ಹಾಳಾದವುಗಳನ್ನೆಲ್ಲ ಹೊತ್ತು ತರ್ತೀರಾ..!’’ ಎಂದು ಗಂಡನನ್ನು ಅಣಕಿಸಿದಳು.
‘‘ಮಗನಿಗೆ ಸಿಡಿಸಲು ಪಟಾಕಿಗಳು ಬೇಕಲ್ವ..? ಅವನಿಗೆ ಏನೆಲ್ಲಾ ಬೇಕಂತ ಮೊದಲು ಕೇಳಿ. ಹೋದ ದೀಪಾವಳಿ ಸಮಯದಲ್ಲಿ, ನೀವು ಕಡಿಮೆ ಪ್ರಮಾಣದಲ್ಲಿ ಪಟಾಕಿ ತಂದಿದ್ದಕ್ಕೆ ಸೂರಜ ರಂಪಾಟ ಮಾಡಿದ್ದು, ಊಟ ಮಾಡದೆ ಕೂತದ್ದು ನೆನಪಿದೆ ತಾನೇ..! ಈ ಸಲ ಆತನಿಗೆ ಏನೆಲ್ಲ ಬೇಕೊಂತ ಕೇಳಿ ಬಿಡಿ ಇಲ್ಲದಿದ್ದರೆ ಜೊತೆಯಲ್ಲಿ ಅವನನ್ನು ಕರೆದು ಕೊಂಡು ಹೋಗಿ’’ ಎಂದಳು.
ಮನೆಯ ಮುಂಭಾಗದ ಜಗಲಿಯಲ್ಲಿ ಕೂತು ದಿನ ಪತ್ರಿಕೆ ಓದುತ್ತಿದ್ದ ಮಗ ಸೂರಜನ ಸನಿಹ ರಾಜಣ್ಣ ಹೋದನು. ‘‘ಸೂರು.. ನಾಳೆ ದೀಪಾವಳಿ ಹಬ್ಬ. ನಿನಗೆ ಹೊಸ ಬಟ್ಟೆ ಅಮ್ಮ ತರ್ತಾಳಂತೆ, ಪಟಾಕಿ ನಾನು ತಂದು ಕೋಡುತ್ತೇನೆ. ಯಾವ ಬಗೆಯ ಪಟಾಕಿಗಳು ಬೇಕಂತ ಹೇಳು. ಇಲ್ಲದಿದ್ದರೆ ನನ್ನ ಸಂಗಡ ನೀನು ಪೇಟೆಗೆ ಬಂದುಬಿಡು, ನೀನಾಗಿ ಪಟಾಕಿ ಮಳಿಗೆಯಲ್ಲಿ ಬೇಕಾದ ಪಟಾಕಿ ಆಯ್ಕೆ ಮಾಡಬಹುದು’’ ‘‘ಪಪ್ಪಾ..! ಇನ್ನುಮುಂದೆ ಯಾವ ದೀಪಾವಳಿ ಹಬ್ಬಕ್ಕೂ ಮನೆಗೆ ಪಟಾಕಿ ತರುವುದು ಬೇಡ. ನನಗೆ ಅದರ ಮೇಲೆ ಆಸಕ್ತಿ ಇಲ್ಲ’’ ಎಂದು ಸೂರಜನು ತಂದೆಯಲ್ಲಿ ಹೇಳಿದನು. ರಾಜಣ್ಣರಿಗೆ ಮಗನ ಮಾತು ಕೇಳಿ ಆಶ್ಚರ್ಯವಾಯಿತು. ‘‘ಯಾಕೆ.. ಸೂರಿ ನನ್ನ ಮೇಲೆ ಕೋಪಿಸಿಕೊಂಡೆಯಾ...!’’ ಎಂದು ಮಗನನ್ನು ರಾಜಣ್ಣ ವಿಚಾರಿಸಿದರು.
‘‘ಪಪ್ಪಾ.. ನಾವು ಪಟಾಕಿ ಸಿಡಿಸಿ ಸಂತೋಷ ಅನುಭವಿಸಿ ಸಂಭ್ರಮಿಸಬಹುದು. ನಾವು ಪಡುವ ಸಂತೋಷ ಸಂಭ್ರಮಗಳು ಲೋಕದ ಅಮಾಯಕ ಜೀವ ಜಂತುಗಳಿಗೆ ಹಿಂಸೆ ಆಗುವುದು ಸರಿಯಲ್ಲ..! ಪರಿಸರ ಮಾಲಿನ್ಯಗೊಳ್ಳುವುದು ಸರಿಯಲ್ಲ...! ಪ್ರಾಣಿ ಪಕ್ಷಿಗಳು ಸಿಡಿ ಮದ್ದುಗಳ ಸ್ಫೋಟಗಳಿಗೆ ಭೀತಿ ಪಡುತ್ತವೆ. ಅದೆಷ್ಟೋ ಸಣ್ಣ ಮಕ್ಕಳು ಪಟಾಕಿ ಸಿಡಿಸುವಾಗ ಕೈಗಳನ್ನು ಸುಟ್ಟುಕೊಂಡ, ಕಣ್ಣುಗಳನ್ನು ಕಳೆದು ಕಂಡ ದುರಂತ ಘಟನೆಗಳನ್ನು ಕೇಳಿ ತಿಳಿದಿದ್ದೇನೆ. ಮೊದಲು ನನಗೆ ದೀಪಾವಳಿ ಹಬ್ಬ ಬಂದಾಗ ಪಟಾಕಿಗಳನ್ನು ಸಿಡಿಸುವ ವ್ಯಾಮೋಹ ಇತ್ತು ನಿಜ. ಪಪ್ಪಾ ಮೊನ್ನೆ ನೀವೊಂದು ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋದಿರಲ್ಲ, ಅಂದು ಅಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಪರಿಸರ ಮಾಲಿನ್ಯಕ್ಕೆ ನಾವು ಕಾರಣರಾಗುತ್ತಿದ್ದೇವೆ. ಎನ್ನುವ ವಿಚಾರ ಮಂಡಿಸಿದ ಹಿರಿಯ ವಾಗ್ಮಿಯೋರ್ವರ ಸುಜ್ಞಾನದ ಮಾತುಗಳು ನನ್ನ ಮನಸಿಗೆ ನಾಟಿತು. ಹಾಗಾಗಿ ಪಟಾಕಿಯ ಹುಚ್ಚು ಮೋಹದಿಂದ ಹೊರ ಬಂದಿದ್ದೇನೆ’’ ಎಂದು ಸೂರಜ್ ತಂದೆಯಲ್ಲಿ ಹೇಳಿದ. ಮಗನ ವಿಚಾರಧಾರೆ ಕೇಳಿದ ರಾಜಣ್ಣನು, ಯಾವುದೇ ಕಾರ್ಯಕ್ರಮಗಳು ನಡೆಯಲಿ ಹೆತ್ತವರು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಅಲ್ಲಿಯ ವಾತಾವರಣ ಮಕ್ಕಳ ಮನಸ್ಸನ್ನು ಸುಜ್ಞಾನದಿಂದ ಅರಳಿಸಬಹುದು ಎನ್ನುವುದಕ್ಕೆ ನನ್ನ ಮಗ ಸೂರಜನು ಸಂಪಾದಿಸಿದ ಚಿಂತನೆಯೇ ಸಾಕ್ಷಿ..! ಮಗನಿಂದ ಕಲಿತ ಉತ್ತಮ ಪಾಠದಿಂದ ಮುಂದೆ ರಾಜಣ್ಣ, ಆಮಂತ್ರಣ ಇರುವ ಸಭಾ ಕಾರ್ಯಕ್ರಮಗಳಿಗೆ ಹೋಗುವಾಗ, ಜೊತೆಯಲ್ಲಿ ಮಗ ಸೂರಜನನ್ನು ಕರೆದುಕೊಂಡು ಹೋಗಲಾರಂಭಿಸಿದರು.