ಲೋಕಸಭೆ ಚುನಾವಣೆ: ಶಿವಮೊಗ್ಗದಲ್ಲಿ ಮತ್ತೆ ಮುಖಾಮುಖಿಯಾಗಲಿದ್ದಾರಾ ಮಾಜಿ ಸಿಎಂ ಪುತ್ರರು ?
ಶಿವಮೊಗ್ಗ, ಫೆ. 10: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದೆ. ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣಾ ಆಯೋಗ ಸಮರೋಪಾದಿ ಸಿದ್ದತೆಯಲ್ಲಿ ತಲ್ಲೀನವಾಗಿದೆ. ಮತ್ತೊಂದೆಡೆ ಪ್ರಮುಖ ರಾಜಕೀಯ ಪಕ್ಷಗಳು 'ಮಹಾಸಮರ'ಕ್ಕೆ ಭರ್ಜರಿ ಪೂರ್ವಭಾವಿ ತಾಲೀಮು ನಡೆಸಲಾರಂಭಿಸಿವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿಯೂ ಕೂಡ ಚುನಾವಣಾ ಕಾವು ಏರಲಾರಂಭಿಸಿದೆ. ರಾಜಕೀಯ ಚಟುವಟಿಕೆಗಳು ಕ್ರಮೇಣ ಗರಿಗೆದರಲಾರಂಭಿಸಿವೆ.
ಕ್ಷೇತ್ರದಲ್ಲಿನ ಸದ್ಯದ ರಾಜಕೀಯ ಚಿತ್ರಣ ಅವಲೋಕಿಸಿದರೆ, ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ತಮ್ಮದೆ ಆದ ಚುನಾವಣಾ ತಯಾರಿಯಲ್ಲಿ ಮಗ್ನವಾಗಿರುವುದು ಕಂಡುಬರುತ್ತದೆ. ಆ ಪಕ್ಷದ ನಾಯಕರು ಕ್ಷೇತ್ರ ಸುತ್ತು ಹಾಕುತ್ತಿದ್ದಾರೆ. ಕಾರ್ಯಕರ್ತರ ಸಭೆ ನಡೆಸಿ, ಚುನಾವಣೆಗೆ ಸಜ್ಜುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.
ಕಣಕ್ಕಿಳಿಯುವ ಅಭ್ಯರ್ಥಿಗಳ ವಿಷಯಕ್ಕೆ ಬಂದರೆ, ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಸ್ಪರ್ಧೆ ಖಚಿತವಾಗಿದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ. ಕಳೆದ ಉಪ ಚುನಾವಣೆ ರೀತಿಯಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ, ಮಧು ಬಂಗಾರಪ್ಪ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಕವಿದಿರುವ ರಾಜಕೀಯ ಅನಿಶ್ಚತೆಯಿಂದ ಮುಂದೇನಾಗಲಿದೆ ಎಂಬುವುದು ಇನ್ನಷ್ಟೆ ಗೊತ್ತಾಗಬೇಕಾಗಿದೆ.
ಕಮಲ ಚುರುಕು: ಬಿಜೆಪಿಯಿಂದ ಕಣಕ್ಕಿಳಿಯುತ್ತಿರುವ ಬಿ.ವೈ.ರಾಘವೇಂದ್ರರವರು ಈಗಾಗಲೇ ಕ್ಷೇತ್ರದಾದ್ಯಂತ ಚುನಾವಣಾ ಪ್ರಚಾರ ಕಾರ್ಯ ನಡೆಸಲಾರಂಭಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಕ್ಷೇತ್ರಕ್ಕೆ ಹಲವು ಯೋಜನೆ ಮಂಜೂರು ಮಾಡಿಸಿಕೊಂಡು ಬರುವ ಮೂಲಕ ಮತದಾರರ ಗಮನ ಸೆಳೆಯುವ ಕಾರ್ಯ ನಡೆಸುತ್ತಿದ್ದಾರೆ. ಇನ್ನೊಂದೆಡೆ ಆ ಪಕ್ಷದ ನಾಯಕರು ಕೂಡ ಕ್ಷೇತ್ರದಾದ್ಯಂತ ಚುನಾವಣಾ ಸಿದ್ದತೆ ಚುರುಕುಗೊಳಿಸಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆ ಬಿಂಬಿಸುವ ವೀಡಿಯೋ ಪ್ರದರ್ಶನದ ವಾಹನ ಜಿಲ್ಲೆಯಾದ್ಯಂತ ಸಂಚರಿಸುತ್ತಿದೆ. ಘಟಕವಾರು ಸಭೆಗಳು ಆಯೋಜನೆಯಾಗುತ್ತಿವೆ. ಚುನಾವಣಾ ಪೂರ್ವಭಾವಿ ಮೇಲುಸ್ತುವಾರಿಗೆಂದೇ ನಾಯಕರನ್ನು ನಿಯೋಜಿಸಲಾಗಿದೆ. ಈ ಮೂಲಕ ಮುಖಂಡರು, ಕಾರ್ಯಕರ್ತರನ್ನು ಚುನಾವಣೆಗೆ ಅಣಿಗೊಳಿಸುವ ಕಾರ್ಯ ಕಮಲ ಪಾಳಯದಲ್ಲಿ ಭರದಿಂದ ನಡೆಯುತ್ತಿದೆ.
ಮೈತ್ರಿ ಪಾಳಯ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕೂಡ ಸದ್ದುಗದ್ದಲವಿಲ್ಲದೆ ಚುನಾವಣಾ ತಯಾರಿ ನಡೆಸಲಾರಂಭಿಸಿವೆ. ಕಾಂಗ್ರೆಸ್ ಪಕ್ಷವು ಈಗಾಗಲೇ 'ಶಕ್ತಿ' ಕಾರ್ಯಕ್ರಮದಡಿ ಸದಸ್ಯತ್ವ ಅಭಿಯಾನ ಪೂರ್ಣಗೊಳಿಸಿದೆ. ಆ ಪಕ್ಷದ ಜಿಲ್ಲಾಧ್ಯಕ್ಷರು ನಿರಂತರವಾಗಿ ತಾಲೂಕು ಪ್ರವಾಸ ನಡೆಸುತ್ತಿದ್ದಾರೆ. ಆ ಪಕ್ಷದ ವಿವಿದ ಘಟಕಗಳು ಹೋರಾಟ, ಸಭೆ-ಸಮಾರಂಭ ಆಯೋಜಿಸುವ ಮೂಲಕ ಮತದಾರರ ವಿಶ್ವಾಸ ಗಳಿಸುವ ಕಸರತ್ತು ನಡೆಸಲಾರಂಭಿಸಿವೆ.
ಉಳಿದಂತೆ ಜೆಡಿಎಸ್ ಪಕ್ಷ ಕೂಡ ಪಕ್ಷ ಸಂಘಟನೆಗೆ ಒತ್ತು ನೀಡಲಾರಂಭಿಸಿದೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತ ಪಡೆ ಸಜ್ಜುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 32 ವಾರ್ಡ್‍ಗಳಲ್ಲಿ ಬೂತ್ ಮಟ್ಟದ ಸಂಘಟನೆ ಪ್ರಕ್ರಿಯೆಯನ್ನು ಆ ಪಕ್ಷದ ನಾಯಕರು ಆರಂಭಿಸಿದ್ದಾರೆ. ಕೆಲ ದಿನಗಳಲ್ಲಿಯೇ ಸ್ಥಳೀಯ ನಾಯಕರು ಜಿಲ್ಲಾ ಪ್ರವಾಸ ನಡೆಸಲು ನಿರ್ಧರಿಸಿದ್ದಾರೆ.
ಮುಖಾಮುಖಿ: ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾಣೆಯು ಮಾಜಿ ಸಿಎಂ ಪುತ್ರರ ಹಣಾಹಣಿಗೆ ವೇದಿಕೆಯಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಹಾಗೂ ಜೆಡಿಯು ಅಭ್ಯರ್ಥಿಯಾಗಿ ಮಾಜಿ ಸಿಎಂ ಜೆ.ಹೆಚ್.ಪಟೇಲ್ ಪುತ್ರ ಮಹೀಮಾ ಪಟೇಲ್ ಕಣಕ್ಕಿಳಿದಿದ್ದರು.
ಬಿ.ವೈ.ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಕ್ಷೇತ್ರವು ಇಡೀ ರಾಷ್ಟ್ರ ಹಾಗೂ ರಾಜ್ಯದ ಗಮನವನ್ನು ತನ್ನತ್ತ ಸೆಳೆದುಕೊಂಡಿತ್ತು. ಎರಡೂ ಪಕ್ಷದ ಘಟಾನುಘಟಿ ರಾಜಕಾರಣಿಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಜಯ ಸಾಧಿಸಿದ್ದರು.
ಸಾರ್ವತ್ರಿಕ ಚುನಾವಣೆಯಲ್ಲಿಯೂ ಮಾಜಿ ಸಿಎಂ ಪುತ್ರರು ಮುಖಾಮುಖಿಯಾಗುವ ಸಾಧ್ಯತೆ ಕಂಡುಬರುತ್ತಿದೆ. ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಕಣಕ್ಕಿಳಿಯುವುದು ಖಚಿತವಾಗಿದೆ. ಉಳಿದಂತೆ ಮಧು ಬಂಗಾರಪ್ಪ ಅಖಾಡಕ್ಕಿಳಿಯಲಿದ್ದಾರಾ? ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಏರ್ಪಡಲಿದೆಯಾ? ಎಂಬುವುದು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಮಧು ಬಂಗಾರಪ್ಪ ಅವರೇ ಕ್ಯಾಂಡಿಡೇಟ್: ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್
ಕಳೆದ ಉಪ ಚುನಾವಣೆಯಲ್ಲಿ ಕಾಲಾವಾಕಾಶ ಹಾಗೂ ಪೂರ್ವ ಸಿದ್ದತೆಯ ಕೊರತೆಯ ನಡುವೆಯೂ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಧು ಬಂಗಾರಪ್ಪರವರು ಭಾರೀ ಪ್ರಮಾಣದ ಮತಗಳಿಕೆ ಮಾಡಿದ್ದರು. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮಧು ಬಂಗಾರಪ್ಪರವರೇ ಅಭ್ಯರ್ಥಿಯಾಗಲಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ಬೆಂಬಲಿಸುವ ವಿಶ್ವಾಸ ತಮ್ಮದಾಗಿದೆ. ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಎದುರಿಸಲು ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ಬೂತ್ ಮಟ್ಟದಿಂದ ಪಕ್ಷದ ಸಂಘಟನೆ ಪುನರ್ ರಚನೆ ಪ್ರಕ್ರಿಯೆ ಆರಂಭಿಸಲಾಗಿದೆ. ಕೆಲ ದಿನಗಳಲ್ಲಿಯೇ ಜಿಲ್ಲೆಯಾದ್ಯಂತ ಪ್ರವಾಸ ನಡೆಸಿ, ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವ ಕಾರ್ಯ ನಡೆಸಲಾಗುವುದು' ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‍ರವರು ತಿಳಿಸಿದ್ದಾರೆ.
ವರಿಷ್ಠರು ನಿರ್ಧರಿಸುತ್ತಾರೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್
ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾ ಕಾಂಗ್ರೆಸ್ ವ್ಯಾಪಕ ಸಿದ್ಧತೆ ನಡೆಲಾರಂಭಿಸಿದೆ. ಈಗಾಗಲೇ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ 'ಶಕ್ತಿ' ಕಾರ್ಯಕ್ರಮ ಯಶಸ್ವಿಯಾಗಿದೆ. ಬೂತ್ ಮಟ್ಟದಿಂದ ಪಕ್ಷದ ಪುನರ್ ಸಂಘಟನೆಗೆ ಕ್ರಮಕೈಗೊಳ್ಳಲಾಗಿದೆ. ತಾನು ಜಿಲ್ಲೆಯಾದ್ಯಂತ ಪ್ರವಾಸ ನಡೆಸುತ್ತಿದ್ದು, ಚುನಾವಣಾ ಪೂರ್ವಭಾವಿ ಸಿದ್ಧತಾ ಸಭೆಗಳನ್ನು ನಡೆಸುತ್ತಿದ್ದೇನೆ. ನಾಯಕರು, ಕಾರ್ಯಕರ್ತರಿಗೆ ಅಗತ್ಯ ಸಲಹೆ-ಸೂಚನೆ ನೀಡುತ್ತಿದ್ದೇನೆ. ಉಳಿದಂತೆ ಅಭ್ಯರ್ಥಿ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದ್ದಾರೆ.