ಮತ್ತೆ ಮತ್ತೆ ಗಾಂಧಿ ಹತ್ಯೆ

Update: 2019-02-10 18:37 GMT

ಇತಿಹಾಸದಲ್ಲಿ ಎಲ್ಲಿಯೂ ಕೂಡ ಒಂದು ದೇಶವಾಗಲಿ ಪ್ರಭುತ್ವವಾಗಲಿ, ನಾಗರಿಕ ಸಮಾಜವಾಗಲಿ ತಾನು ಹತ್ಯೆಗೈದ ಮಹಾತ್ಮನನ್ನು ಕೊಂದ ದಿನವನ್ನು ಸಂಭ್ರಮಿಸುವುದು, ಆತನ ಪ್ರತಿಕೃತಿಗೆ ಬೆಂಕಿ ಹಚ್ಚಿ ಸುಟ್ಟು ಸುಖಿಸುವುದು ಕಾಣಿಸುವುದಿಲ್ಲ. ಯಾವುದೇ ನಾಗರಿಕ ದೇಶ, ಸಿವಿಲ್ ಸೊಸೈಟಿ ಆ ದಿನವನ್ನು ನೆನಪಿಸಿಕೊಳ್ಳುವುದಿದ್ದರೆ, ದುಃಖದಿಂದ ಅದನ್ನು ರಾಷ್ಟ್ರೀಯ ಅವಮಾನದ ಒಂದು ದಿನವಾಗಿ ನೆನಪಿಸಿಕೊಳ್ಳುತ್ತದೆಯೇ ಹೊರತು ರಾಷ್ಟ್ರೀಯ ಹೆಮ್ಮೆಯಾಗಿ ಅಲ್ಲ.

ದಾಸ್ಯ, ದಬ್ಬಾಳಿಕೆ, ಶೋಷಣೆ ಮತ್ತು ಯಥಾಸ್ಥಿತಿಯ ವಿರುದ್ಧ ಹೋರಾಡುವುದು ದೇಶದ್ರೋಹ, ಅಪರಾಧ ಎನ್ನುವುದಾದಲ್ಲಿ ಮನುಕುಲದ ಅಪರಾಧಿಗಳ ಮೊದಲ ಸಾಲಿನಲ್ಲಿ ಸಾಕ್ರಟಿಸ್, ಬುದ್ಧ, ಯೇಸು ಕ್ರಿಸ್ತ, ಬಸವಣ್ಣ, ಅಬ್ರಹಂ ಲಿಂಕನ್, ಮಾರ್ಕ್ಸ್, ಗಾಂಧಿ, ಅಂಬೇಡ್ಕರ್, ಮಾರ್ಟಿನ್ ಲೂಥರ್ ಕಿಂಗ್ ಹಾಗೂ ನೆಲ್ಸನ್ ಮಂಡೇಲಾ ನಿಲ್ಲುತ್ತಾರೆ ಮತ್ತು ಇವರನ್ನು ವಿರೋಧಿಸಿದವರೆಲ್ಲರೂ ಕೊಲೆಗಡುಕರೇ ಆಗುತ್ತಾರೆ. ಯಾಕೆಂದರೆ ವಿಶ್ವದ ಇತಿಹಾಸದಲ್ಲಿ ಹುಟ್ಟಿಕೊಂಡ ಎಲ್ಲ ತತ್ವಜ್ಞಾನಗಳು, ಚಿಂತನೆಗಳು ಮೂಲತಃ ಎರಡೇ ಎರಡು ಸಿದ್ಧಾಂತಗಳ ನಡೆವೆ ನಡೆದ ಸಂಘರ್ಷಗಳ ಫಲಶ್ರುತಿಯಾಗಿವೆ. ಒಂದು: ಜಗತ್ತು, ಸಮಾಜ ಇದ್ದ ಹಾಗೆಯೇ ಇರಲಿ; ನಾವು ಅದನ್ನು ನಮ್ಮ ಲಾಭಕ್ಕೆ, ಹಿತಾಸಕ್ತಿಗಳಿಗೆ ಅನುಗುಣವಾಗಿ ಅರ್ಥೈಸುತ್ತ ಉಳಿಸಿಕೊಳ್ಳುತ್ತ ಹೋಗೋಣ. ಎರಡು: ನಾವು ಬದುಕುತ್ತಿರುವ ಜಗತ್ತಿನಲ್ಲಿ ಎಲ್ಲವೂ ಸರಿ ಇಲ್ಲ; ಎಲ್ಲರಿಗೂ ಸಮಾನವಾದ ಸಮಪಾಲಿನ ಬದುಕು ಸಿಗುತ್ತಿಲ್ಲ; ಆದ್ದರಿಂದ ಅದನ್ನು ಬದಲಾಯಿಸೋಣ; ಬದಲಾಯಿಸಲೇ ಬೇಕು. ಸಾಕ್ರಟಿಸ್‌ನಿಗೆ ವಿಷ (ಹೆಮ್ಲಕ್) ನೀಡಿ ಅವನನ್ನು ಕೊಂದ ಪ್ರಾಚೀನ ಅಥೆನ್ಸ್; ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ಸಮಾಜ; ಅಬ್ರಹಂ ಲಿಂಕನ್, ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್‌ಗೆಡಿ ಗುಂಡು ಹಾರಿಸಿ ಕೊಂದವರು ಮೊದಲನೆಯ ವರ್ಗಕ್ಕೆ ಸೇರಿದರೆ, ಇವರನ್ನು ಹತ್ಯೆಗೈದ ವ್ಯಕ್ತಿಗಳು ಮತ್ತು ಅದರ ಹಿಂದೆ ಇದ್ದ ಶಕ್ತಿಗಳು ಎರಡನೆಯ ವರ್ಗಕ್ಕೆ ಸೇರುತ್ತಾರೆ.

ಆದರೆ ಇತಿಹಾಸದಲ್ಲಿ ಎಲ್ಲಿಯೂ ಕೂಡ ಒಂದು ದೇಶವಾಗಲಿ ಪ್ರಭುತ್ವವಾಗಲಿ, ನಾಗರಿಕ ಸಮಾಜವಾಗಲಿ ತಾನು ಹತ್ಯೆಗೈದ ಮಹಾತ್ಮನನ್ನು ಕೊಂದ ದಿನವನ್ನು ಸಂಭ್ರಮಿಸುವುದು, ಆತನ ಪ್ರತಿಕೃತಿಗೆ ಬೆಂಕಿ ಹಚ್ಚಿ ಸುಟ್ಟು ಸುಖಿಸುವುದು ಕಾಣಿಸುವುದಿಲ್ಲ. ಯಾವುದೇ ನಾಗರಿಕ ದೇಶ, ಸಿವಿಲ್ ಸೊಸೈಟಿ ಆ ದಿನವನ್ನು ನೆನಪಿಸಿಕೊಳ್ಳುವುದಿದ್ದರೆ, ದುಃಖದಿಂದ ಅದನ್ನು ರಾಷ್ಟ್ರೀಯ ಅವಮಾನದ ಒಂದು ದಿನವಾಗಿ ನೆನಪಿಸಿಕೊಳ್ಳುತ್ತದೆಯೇ ಹೊರತು ರಾಷ್ಟ್ರೀಯ ಹೆಮ್ಮೆಯಾಗಿ ಅಲ್ಲ. ಒಂದು ವೇಳೆ ಮಹಾತ್ಮನೊಬ್ಬನ ಮರಣ ದಿನವನ್ನು ಹಾಗೇನಾದರೂ ಸಂಭ್ರಮಾಚರಣೆಯ ದಿನವನ್ನಾಗಿ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಆಚರಿಸಿದಲ್ಲಿ ಅಂಥವರನ್ನು ದೇಶದ್ರೋಹದ ಆಪಾದನೆಯ ಮೇರೆಗೆ ಬಂಧಿಸಿ ಜೈಲಿಗೆ ಅಟ್ಟುವುದು ಯಾವುದೇ ಪ್ರಜಾಸತ್ತಾತ್ಮಕ ಸರಕಾರದ ಆದ್ಯ ಕರ್ತವ್ಯವಾಗಬೇಕು.
 
ಜನವರಿ 30ರಂದು ಹುತಾತ್ಮರ ದಿನಾಚರಣೆಯ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರತಿಕೃತಿಗೆ ಗುಂಡುಹಾರಿಸಿ ಗಾಂಧಿ ಹತ್ಯೆಯ ಅಣಕು ಪ್ರದರ್ಶನದ ಸಂಭ್ರಮಾಚರಣೆ ನಡೆಸಿ, ರಾಷ್ಟ್ರಪಿತನ ಹಂತಕ ನಾಥೂರಾಮ್ ಗೋಡ್ಸೆಗೆ ಜೈಕಾರ ಹಾಕಿದವರು ಈ ದೇಶದ ಆರ್ಷೇಯ ಪರಂಪರೆಗೇ ಮಸಿ ಬಳಿದಿದ್ದಾರೆ. ‘ಓಂ ಸಹನಾ ವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ (ನಮ್ಮನ್ನು ರಕ್ಷಿಸು, ನಮ್ಮನ್ನು ಪೋಷಿಸು, ನಾವು ಜತೆಯಾಗಿ ದುಡಿಯೋಣ, ನಮ್ಮ ಅಧ್ಯಯನವು ತೇಜೋಮಯವಾಗಿರಲಿ, ನಾವು ಪರಸ್ಪರ ದ್ವೇಷಿಸದೆ ಇರೋಣ) ಎಂಬ ಸಾಲುಗಳನ್ನು ಅವಕಾಶ ಸಿಕ್ಕಾಗಲೆಲ್ಲ ಪಠಿಸುವ ಈ ದೇಶದ ತಥಾಕಥಿತ ಧಾರ್ಮಿಕ ನಾಯಕರು, ಅಧ್ಯಾತ್ಮವಾದಿಗಳು ಗಾಂಧಿಯಂತಹ ಒಬ್ಬ ‘ಸಂತ ರಾಜಕಾರಣಿ’ಯ ಸಾವಿನ ಸಂಭ್ರಮಾಚರಣೆಯನ್ನು ಬೇಷರತ್ತಾಗಿ ಖಂಡಿಸಬೇಕಾಗಿತ್ತು. ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ‘ನಾವು ನಮ್ಮ ಪ್ರಾಚೀನ ಕಟ್ಟಳೆಗಳನ್ನು, ಪರಂಪರೆಯನ್ನು ಗೌರವಿಸಬೇಕು’ ಎಂದು ಎಡಬಿಡಂಗಿತನದ ಹೇಳಿಕೆಯನ್ನು ದೇಶದ ಮುಖ್ಯವಾಹಿನಿ ಪತ್ರಿಕೆಗಳ ಮುಖಪುಟದಲ್ಲಿ ನೀಡಿದವರು ಮತಾಂಧ ಹಂತಕನಿಗೆ ಜೈಕಾರ ಹಾಕಿದವರ ವಿರುದ್ಧ ತುಟಿಪಿಟಕ್ಕೆನ್ನದೆ ಜಾಣ ವೌನ ತಾಳಿದರು. ‘‘ಮಾವಿದ್ವಿ ಪಾವಹೈ’’ ಎಂಬ ಮಾತು, ದ್ವೇಷವನ್ನು ಹರಡುವವರ ವಿರುದ್ಧ ನಾವು ಜನರನ್ನು ಎಚ್ಚರಗೊಳಿಸಬೇಕೆಂಬ ವಿವೇಕದ ಮಾತು ಈ ಯಾವುದೇ ಒಬ್ಬ ಧಾರ್ಮಿಕ ನಾಯಕರ ಬಾಯಿಯಿಂದ ಹೊರಡಲಿಲ್ಲ. ಇದು ಈ ದೇಶದ ಇನ್ನೊಂದು ದುರಂತ. ಧರ್ಮದ ಮುಖವಾಡ ಹೊತ್ತು ದಲಿತರ ಉದ್ಧಾರದ, ಬಡವರ ಏಳಿಗೆಯ ಬಗ್ಗೆ ಮಾತಾಡುವ, ಜನತಾ ಸೇವೆಯೇ ಜನಾರ್ದನ ಸೇವೆ ಎಂದು ಭಾಷಣ ಬಿಗಿಯುವ ಧಾರ್ಮಿಕ ನೇತಾರರ ನಿಜವಾದ ಬಣ್ಣ, ವಿವೇಕ ಈಗ ಬಯಲಾದಂತಾಗಿದೆ.


ನಿಜ, ಗಾಂಧಿ ತಪ್ಪೇ ಮಾಡದ ಅಸಾಮಾನ್ಯರಲ್ಲ. ಅವರು ತಪ್ಪುಗಳನ್ನೆಸಗಿ ತನ್ನ ತಪ್ಪುಗಳನ್ನು ಒಪ್ಪಿಕೊಂಡು ಸತ್ಯದೊಂದಿಗೆ ಪ್ರಯೋಗಗಳನ್ನು ನಡೆಸುತ್ತ, ಮಾನವತ್ವದ ಮೇರು ಶಿಖರ ತಲುಪಿದ ಅಸಾಮಾನ್ಯ ಮನುಷ್ಯ. ಅಸಾಮಾನ್ಯ ಸಂತ. ಆದರೆ ಅವರು ಮಾಡದ ತಪ್ಪುಗಳಿಗೆ ಅವರನ್ನು ಹೊಣೆಗಾರನನ್ನಾಗಿಸಿ, ‘ಭಾರತದ ವಿಭಜನೆಯಾಗುವುದಿದ್ದರೆ ಅದು ನನ್ನ ಶವದ ಮೇಲಾಗಲಿ’ ಎಂದು ಕಟುವಾಗಿ ದೇಶ ವಿಭಜನೆಯನ್ನು ವಿರೋಧಿಸಿದ್ದ ಅವರನ್ನು ಪಾಕಿಸ್ತಾನದ ಸೃಷ್ಟಿಗೆ ಕಾರಣ ಎನ್ನುತ್ತ ಅವರ ವಿರುದ್ಧ ದ್ವೇಷ ಹರಡುವ ಅಭಿಯಾನ ನಡೆಸುತ್ತಿರುವ ಮಂದಿ ಈ ದೇಶದ ರಾಷ್ಟ್ರೀಯ ಭಾವಪುಂಜದ ಮೂಲಕ್ಕೆ ಕೊಡಲಿ ಏಟು ಹಾಕುತ್ತಿದ್ದಾರೆ. ಇಂತಹ ಮತಾಂಧರ ತಪ್ಪು ಸಿದ್ಧಾಂತಗಳಿಂದ ಮಿದುಳು ತೊಳೆತಕ್ಕೊಳಗಾಗಿರುವವರ ಪ್ರಭಾವಕ್ಕೆ ದೇಶದ ಭಾವೀ ಜನಾಂಗ ಒಳಗಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲ ಭಾರತೀಯರ ಮೇಲಿದೆ. ಮಿಥ್ಯೆಗಳನ್ನು ಸತತವಾಗಿ ಪ್ರಚಾರ ಮಾಡುತ್ತ ಯುವ ಜನತೆಯನ್ನು ಹಾದಿ ತಪ್ಪಿಸುವ ಪ್ರಯತ್ನಗಳಿಗೆ ಪ್ರಜ್ಞಾವಂತ ಜನರು ಕಡಿವಾಣ ಹಾಕಬೇಕಾಗಿದೆ.
 ಮಿಥ್ಯೆಗಳ ಸರಮಾಲೆಯಲ್ಲಿ ಕೇವಲ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಈ ದೇಶದ ಮೇಲೆ ದಾಳಿ ನಡೆಸಿದ ಮುಸ್ಲಿಂ ದೊರೆಗಳು ದೇಶದ ದೇವಾಲಯಗಳನ್ನು ಲೂಟಿಗೈದು ದೇಶದ ಸಂಪತ್ತನ್ನೆಲ್ಲ ಸೂರೆಗೈದರೆಂದು ಪುನಃ ಪುನಃ ಹೇಳಲಾಗುತ್ತದೆ. ಆದರೆ ಅಂತಹ ದಾಳಿಗಳು ಸಂಪತ್ತಿಗಾಗಿ ನಡೆದಿದ್ದವು, ಧಾರ್ಮಿಕ ಕಾರಣಕ್ಕಾಗಿ ಅಲ್ಲ ಎಂಬ ಸತ್ಯಸಂಗತಿಯನ್ನು ಮುಚ್ಚಲಾಗುತ್ತಿದೆ. ಅಂದಿನ ಕಾಲಘಟ್ಟದಲ್ಲಿ ರಾಜರುಗಳು ಯಾವುದೇ ಧರ್ಮಕ್ಕೆ ಸೇರಿದವರಿರಲಿ, ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸಿ ರಾಜನನ್ನು ಯುದ್ಧದಲ್ಲಿ ಸೋಲಿಸಿ ಆ ರಾಜ್ಯದ ಸಂಪತ್ತನ್ನು, ದೇವಾಲಯಗಳಲ್ಲಿದ್ದ ಸಕಲವನ್ನು ತನ್ನ ರಾಜಧಾನಿಗೆ ಒಯ್ಯವುದು ರಾಜ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುವ, ದೇಶದ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಒಂದು ವಿಧಾನವಾಗಿತ್ತು. ಎರಡನೆಯದಾಗಿ, ಮೊಗಲರ ದೀರ್ಘ ಕಾಲದ ಆಳ್ವಿಕೆಗಳಿಗೆ ಹೋಲಿಸಿದರೆ, ಕೇವಲ ಸುಮಾರು ಇನ್ನೂರು ವರ್ಷಗಳ ಕಾಲ ಈ ದೇಶವನ್ನಾಳಿದ ಬ್ರಿಟಿಷರು ಈ ದೇಶದಿಂದ ಲೂಟಿಗೈದ ಸಂಪತ್ತು ಊಹನಾತೀತ. ‘ದಿ ರಿಪಬ್ಲಿಕ್ ಆಫ್ ಹಂಗರ್ ಆ್ಯಂಡ್ ಅದರ್ ಎಸ್ಸೇಸ್’ ಖ್ಯಾತಿಯ ಅರ್ಥಶಾಸ್ತ್ರಜ್ಞೆ ಉತ್ಸಾ ಪಟ್ನಾಯಕ್‌ರ ಅಂದಾಜಿನ ಪ್ರಕಾರ ಬ್ರಿಟಿಷರು ಭಾರತದಿಂದ ತಮ್ಮ ದೇಶಕ್ಕೆ ಸಾಗಿಸಿಕೊಂಡು ಹೋದ ಸಂಪತ್ತಿನ ಒಟ್ಟು ವೌಲ್ಯ ಕನಿಷ್ಠ 9.2 ಟ್ರಿಲಿಯನ್ ಪೌಂಡ್‌ಗಳು. ಅಥವಾ 44.6 ಟ್ರಿಲಿಯನ್ ಡಾಲರ್‌ಗಳು. ಅಂದರೆ 1,000,000,000,000X44.6 ಬಿಲಿಯ ಅಥವಾ ಒಂದು ಮಿಲಿಯ ಮಿಲಿಯ ಮಿಲಿಯ (1ರ ಮುಂದೆ 18 ಸೊನ್ನೆಗಳು ಗುಣಿಸು 44.6)
  ಆದರೆ ಬ್ರಿಟಿಷರ ಬಗ್ಗೆ ನಮ್ಮ ದ್ವೇಷವ್ಯಾಪಾರಿಗಳು ಮೃದು ನಿಲುವು ತಾಳುತ್ತಾರೆ! ಮುಸ್ಲಿಮ್ ದೊರೆಗಳ ವಿರುದ್ಧ ಇರುವ ಐತಿಹಾಸಿಕ ದ್ವೇಷ ಯಾಕೆ ಬ್ರಿಟಿಷರ ವಿರುದ್ಧ ಇಲ್ಲ? ಎಂಬ ಪ್ರಶ್ನೆಗೆ ಇವರ ಬಳಿ ಉತ್ತರವಿಲ್ಲ. ಭಾರತದ ಸಂಪತ್ತನ್ನು ಬರಿದು ಮಾಡಿದ ಕೀರ್ತಿ ಮತ್ತು 1942-45ರ ಬಂಗಾಲದ ಕ್ಷಾಮದಲ್ಲಿ ಹಿಂದೂ ಮುಸ್ಲಿಮರೆನ್ನದೆ ಎಲ್ಲರನ್ನೂ ಒಳಗೊಂಡು ಸುಮಾರು ಎಪ್ಪತ್ತು ಲಕ್ಷ ಭಾರತೀಯರ ಸಾವಿಗೆ ಕಾರಣವಾದ ಆಳ್ವಿಕೆಯ ‘ಹೆಗ್ಗಳಿಕೆ’ ಬ್ರಿಟಿಷರಿಗೆ ಸಲ್ಲಬೇಕೇ ಹೊರತು ಮುಸ್ಲಿಮ್ ದೊರೆಗಳ ಆಳ್ವಿಕೆಗೆ ಅಲ್ಲ. ಆದ್ದರಿಂದ, ಒಂದೆಡೆ ಸರಕಾರದ ಅಧಿಕೃತ ಮಾಧ್ಯಮಗಳಲ್ಲಿ ಗಾಂಧಿಯನ್ನು ಗೌರವಿಸುವ ರಿಚುವಲ್ ನಡೆಸುತ್ತ, ಇನ್ನೊಂದೆಡೆ ಗಾಂಧಿಯ ಹಂತಕರನ್ನು ವೈಭವೀಕರಿಸುತ್ತ ಸಾಗುವ ಶಕ್ತಿಗಳ ಬಗ್ಗೆ ಮೃದು ಧೋರಣೆ ತೆಳೆಯುವ ಪ್ರವೃತ್ತಿ ಈ ದೇಶದ ಭವಿಷ್ಯಕ್ಕೆ ಮಾರಕವಾಗಬಲ್ಲದು.
ಸ್ವಾತಂತ್ರ ದೊರಕಿದಂದಿನಿಂದ ನಾವು ನಮ್ಮ ಶಾಲೆ ಕಾಲೇಜುಗಳಲ್ಲಿ ಗಾಂಧಿಯನ್ನು ‘ರಾಷ್ಟ್ರಪಿತ’ ನೆಂದು ಹೇಳುತ್ತ, ಕಲಿಸುತ್ತ ಬಂದಿದ್ದೇವೆ. ಕೈಯಲ್ಲಿ ಸ್ಮಾರ್ಟ್‌ಫೋನ್ ಹಿಡಿದಿರುವ ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿಯ ಪ್ರತಿಕೃತಿಗೆ ಗುಂಡು ಹಾರಿಸುವ, ಗಾಂಧಿಯ ಫೋಟೊವನ್ನು ಪೆಟ್ರೋಲ್ ಸುರಿದು ಸುಡುವ ಫೋಟೊಗಳನ್ನು ನೋಡಿ ‘‘ದೇಶದ ಡ್ಯಾಡ್‌ಅನ್ನು ಯಾಕೆ ಸುಡುವುದು ಮಮ್ಮಿ? ಎಂದು ಕೇಳಿದರೆ ಆ ಮಕ್ಕಳ ತಾಯಂದಿರು ಇನ್ನು ಮುಂದೆ ಏನು ಉತ್ತರ ಹೇಳಬೇಕು? ‘‘ಗಾಂಧಿ ರಾಷ್ಟ್ರಪಿತ ಅಲ್ಲ; ಗಾಂಧಿಯನ್ನು ಕೊಂದವನೇ ‘ ನೇಶನ್ಸ್ ಡ್ಯಾಡಿ’ ’’ ಎನ್ನಬೇಕೆ? ತರಗತಿಗಳಲ್ಲಿ ಇಂತಹ ಮಕ್ಕಳ ಪ್ರಶ್ನೆಗಳನ್ನು ಎದುರಿಸುವ ಶಿಕ್ಷಕರ ಪಾಡು ಏನು? ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗೋಡ್ಸೆಗಳಿಗೆ ಕಟ್ಟುವ ಗುಡಿಗಳಿಗೂ ನಮ್ಮ ಪುರೋಹಿತರುಗಳು ಬ್ರಹ್ಮಕಲಶೋತ್ಸವ ನಡೆಸುವ ದಿನಗಳು ಬರಲಾರವೇ? ಯಾಕೆಂದರೆ
ಗಾಂಧಿಯನ್ನೇ ಕೊಂದವರೂ ಇನ್ಯಾರನ್ನು ಬಿಟ್ಟಾರು?
ಎಲ್ಲ ಸಜ್ಜನರನ್ನು ಜೀವಂತ ಸುಟ್ಟಾರು
ಮತಾಂಧನಿಗೆ ಮಂದಿರ ಕಟ್ಟುವವರು
ದೇವರನ್ನು ಮುಗಿಸಿಯೇ ಹೋದಾರು.

ಗಾಂಧಿಯನ್ನು ಒಮ್ಮೆ ಕೊಂದ ದೇಶದಲ್ಲಿ ಅವರ ತತ್ವಗಳನ್ನು, ಆದರ್ಶಗಳನ್ನು ಮತ್ತೆ ಮತ್ತೆ ಹತ್ಯೆಗೆಯ್ಯುವ ಮೂಲಕ ರಾಷ್ಟ್ರೀಯ ನೈತಿಕತೆಯನ್ನೇ ಕೊಲ್ಲುವ ಪ್ರಯತ್ನ ನಡೆಯುತ್ತಿರುವುದು, ದೇಶದ ಭಾವೀ ಜನಾಂಗವನ್ನು ಭಾರೀ ಗೊಂದಲಕ್ಕೆ ತಳ್ಳಲಾರದೇ?

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News

ಜಗದಗಲ
ಜಗ ದಗಲ