ಕೆಲಸದ ಸ್ಥಳದಲ್ಲಿ ಒತ್ತಡದಿಂದ ಪಾರಾಗಲು ಟಿಪ್ಸ್ ಇಲ್ಲಿವೆ
ವಿಶ್ವಾದ್ಯಂತ ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳು ಒತ್ತಡಕ್ಕೆ ಸಿಲುಕುವ ಪ್ರವೃತ್ತಿ ದಿನೇದಿನೇ ಹೆಚ್ಚುತ್ತಿದೆ. ಒತ್ತಡವಿಂದು ನಮ್ಮ ಖಾಸಗಿ ಮತ್ತು ವೃತ್ತಿಪರ ಬದುಕುಗಳ ಅನಿವಾರ್ಯ ಭಾಗವಾಗಿಬಿಟ್ಟಿದೆ. ಇತ್ತೀಚಿನ ಅಧ್ಯಯನವೊಂದರಂತೆ ವಿಶ್ವಾದ್ಯಂತ ಶೇ.50ಕ್ಕೂ ಅಧಿಕ ಉದ್ಯೋಗಿಗಳು ತಮ್ಮ ಕಚೇರಿಗಳಲ್ಲಿ ಹೆಚ್ಚು ಹೊತ್ತು ದುಡಿಯುತ್ತಿದ್ದಾರೆ ಮತ್ತು ಇದು ಅವರ ಒಟ್ಟಾರೆ ಆರೋಗ್ಯ, ಮಾನಸಿಕ ಸ್ಥಿತಿ ಮತ್ತು ಜೀವನಶೈಲಿಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಇದು ದೈಹಿಕ, ಮಾನಸಿಕ ಅಸ್ವಸ್ಥತೆಗೂ ಕಾರಣವಾಗಬಲ್ಲ್ಲದು. ಕೆಲಸದ ಸ್ಥಳಗಳಲ್ಲಿ ಒತ್ತಡಗಳಿಂದ ಪಾರಾಗಲು ಉದ್ಯೋಗ ಸಂಬಂಧಿ ಒತ್ತಡಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಸರಳವಾಗಿ ಹೇಳಬೇಕೆಂದರೆ ಕೆಲಸದ ಸ್ಥಳಗಳಲ್ಲಿಯ ಒತ್ತಡವು ಅನಗತ್ಯ ಮಾನಸಿಕ ಉದ್ವೇಗ ಮತ್ತು ಕೆಲಸದ ಬೇಡಿಕೆಗಳಿಂದಾಗಿ ಉಂಟಾಗುವ ಹಾನಿಕಾರಕ ಪ್ರತಿಕ್ರಿಯೆಯಾಗಿದೆ. ಪ್ರತಿ ಒಂದು ಲಕ್ಷ ಉದ್ಯೋಗಿಗಳಲ್ಲಿ 1,380 ಜನರು ಉದ್ಯೋಗ ಸಂಬಂಧಿ ಒತ್ತಡಗಳಿಂದ ಬಳಲುವುದು ಸಾಮಾನ್ಯವಾಗಿದೆ ಎನ್ನುತ್ತದೆ ಅಧ್ಯಯನ ವರದಿ.
ಅತಿಯಾದ ಕೆಲಸದ ಹೊರೆ,ಸಾಮಾಜಿಕ ಬೆಂಬಲದ ಕೊರತೆ, ಬೆಳೆಯಲು ಕೆಲವೇ ಅವಕಾಶಗಳು,ಕಡಿಮೆ ವೇತನ,ಸಂಘರ್ಷಕ್ಕೆ ಕಾರಣವಾಗುವ ಬೇಡಿಕೆಗಳು,ಯಾವುದೇ ಸವಾಲಿಲ್ಲದ ಜಾಬ್ ಪ್ರೊಫೈಲ್‌ಗಳು ಇತ್ಯಾದಿಗಳು ಒತ್ತಡಕ್ಕೆ ಕಾರಣವಾಗುತ್ತವೆ. ಇದು ದೀರ್ಘಾವಧಿಯಲ್ಲಿ ಉದ್ಯೋಗದಲ್ಲಿ ಅತೃಪ್ತಿ, ಗೈರುಹಾಜರಾತಿ, ಅಪಘಾತಗಳು, ಉದ್ಯೋಗ ನಷ್ಟ,ಅಂತಿಮವಾಗಿ ಜೀವನಮಟ್ಟ ಕುಸಿತಕ್ಕೆ ಕಾರಣವಾಗುತ್ತದೆ.
ಉದ್ಯೋಗದ ಸ್ಥಳಗಳಲ್ಲಿ ಒತ್ತಡ ನಿವಾರಣೆ ಹೇಗೆ?
ನಾವು ನಮ್ಮ ಉದ್ಯೋಗವನ್ನು ಎಷ್ಟೇ ಪ್ರೀತಿಸುತ್ತಿರಬಹುದು,ಆದರೂ ಒಂದಲ್ಲ ಒಂದು ಸಂದರ್ಭದಲ್ಲಿ ಉದ್ಯೋಗ ಸಂಬಂಧಿ ಒತ್ತಡಗಳನ್ನು ಅನುಭವಿಸಿರುತ್ತೇವೆ. ನಿಗದಿತ ಗಡುವಿನಲ್ಲಿ ಕೆಲಸವನ್ನು ಪೂರೈಸಬೇಕಾದಾಗ ಅಥವಾ ಸವಾಲಿನ ಪ್ರಾಜೆಕ್ಟೊಂದನ್ನು ಕೈಗೆತ್ತಿಕೊಂಡಾಗ ನಾವು ಒತ್ತಡಕ್ಕೆ ಗುರಿಯಾಗುವುದು ಸಾಮಾನ್ಯವಾಗಿದೆ. ಆದರೆ ಇದು ಮಾಮೂಲಾದಾಗ,ಅಂದರೆ ಒತ್ತಡವು ದೀರ್ಘಕಾಲಿಕವಾದಾಗ ಅದು ನಮ್ಮ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಪರಿಣಾಮ ಬೀರಲು ಆರಂಭಿಸುತ್ತದೆ. ಇಲ್ಲಿವೆ ಒತ್ತಡದಿಂದ ಪಾರಾಗಲು ಕೆಲವು ಟಿಪ್ಸ್........
ನಿಮ್ಮ ಒತ್ತಡಕ್ಕೆ ಕಾರಣಗಳನ್ನು ತಿಳಿದುಕೊಳ್ಳಿ
ಒತ್ತಡದಿಂದ ಪಾರಾಗುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಬೇಕಿದ್ದರೆ ಅದಕ್ಕೆ ಕಾರಣವೂ ನಿಮಗೆ ಗೊತ್ತಿರಬೇಕಾಗುತ್ತದೆ. ಸಹೋದ್ಯೋಗಿಯ ಹಸ್ತಕ್ಷೇಪದಿಂದ ಹಿಡಿದು ಕಾಲಹರಣದಂತಹ ನಿಮ್ಮ ಸ್ವಂತ ವರ್ತನೆಯವರೆಗೆ ಕೆಲಸದ ಸ್ಥಳಗಳಲ್ಲಿಯ ಒತ್ತಡಕ್ಕೆ ಹಲವಾರು ಕಾರಣಗಳಿರುತ್ತವೆ. ಹೀಗಾಗಿ ಒತ್ತಡವನ್ನು ನಿಭಾಯಿಸಲು ಮತ್ತು ನಿವಾರಿಸಲು ಅದಕ್ಕೆ ಕಾರಣವನ್ನು ತಿಳಿದುಕೊಳ್ಳುವುದು ಮಹತ್ವದ್ದಾಗುತ್ತದೆ.
ಇದಕ್ಕಾಗಿ ಒಂದು ತಿಂಗಳ ಕಾಲ ನೀವು ಒತ್ತಡಕ್ಕೊಳಗಾದ ಸಂದರ್ಭಗಳು ಮತ್ತು ನೀವು ಅದನ್ನು ಹೇಗೆ ಎದುರಿಸಿದ್ದೀರಿ ಎನ್ನುವುದನ್ನು ಒಂದು ಡೈರಿಯಲ್ಲಿ ದಾಖಲಿಸುತ್ತ ಹೋಗಿ. ಉದಾಹರಣೆಗೆ ನಿಮ್ಮ ಸಹೋದ್ಯೋಗಿಯೊಂದಿಗಿನ ತಿಕ್ಕಾಟ,ವಾಕ್ ತೆರಳಿದ್ದು ಅಥವಾ ರಜೆ ಹಾಕಿದ್ದು ಇತ್ಯಾದಿಗಳನ್ನೂ ದಾಖಲಿಸಿಕೊಳ್ಳಿ. ಇಂತಹ ಘಟನೆಗಳಿಗೆ ನಿಮ್ಮ ಪ್ರತಿಕ್ರಿಯೆ ಏನಿತ್ತು ಎನ್ನುವುದನ್ನು ಗಮನಿಸಿ ನಿಮ್ಮ ಒತ್ತಡಕ್ಕೆ ಕಾರಣಗಳನ್ನು ತಿಳಿದುಕೊಂಡರೆ ಭವಿಷ್ಯದಲ್ಲಿ ಇಂತಹ ಸಂದರ್ಭಗಳನ್ನು ಹೇಗೆ ನಿವಾರಿಸಬಹುದು ಎನ್ನುವುದು ನಿಮಗೆ ಹೊಳೆಯುತ್ತದೆ.
ಕಚೇರಿಯಲ್ಲಿ ಆಪ್ತಸ್ನೇಹಿತನೋರ್ವನಿರಲಿ
ಕೆಲವು ಕಚೇರಿಗಳಲ್ಲಿ ಉದ್ಯೋಗಿಗಳ ಆಂತರಿಕ ವೌಲ್ಯಮಾಪನವನ್ನು ನಡೆಸಲಾಗುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಅವರು ಕೇಳುವ ಪ್ರಶ್ನೆಗಳಲ್ಲಿ ಕಚೇರಿಯಲ್ಲಿ ನಿಮ್ಮ ಆಪ್ತಸ್ನೇಹಿತ ಯಾರು ಎಂಬ ಪ್ರಶ್ನೆಯೂ ಸೇರಿರುತ್ತದೆ ಎನ್ನುವುದು ನಿಮಗೆ ಗೊತ್ತೇ? ಇದು ಕೆಲವರಿಗೆ ಅಚ್ಚರಿಯನ್ನುಂಟು ಮಾಡಬಹುದು,ಆದರೆ ಇದು ತಮ್ಮ ಉದ್ಯೋಗಿಗಳು ತಮ್ಮ ಭಾವನೆಗಳು ಮತ್ತು ಚಿಂತನೆಗಳನ್ನು ಹಂಚಿಕೊಳ್ಳಲು ಆಪ್ತಸ್ನೇಹಿತರನ್ನು ಹೊಂದಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳಲು ಸಂಸ್ಥೆಗಳು ಅನುಸರಿಸುವ ಮಾರ್ಗವಾಗಿದೆ. ಹೆಚ್ಚಿನವರು ಮನೆಯಲ್ಲಿ ಮತ್ತು ಕಚೇರಿಗಳಲ್ಲಿ ಬಹಳಷ್ಟು ಒತ್ತಡಗಳಲ್ಲಿರುವ ಇಂದಿನ ದಿನಗಳಲ್ಲಿ ಇದು ಅತ್ಯಂತ ಅಗತ್ಯವಾಗಿದೆ. ನಿಮಗೆ ಕಚೇರಿಯಲ್ಲಿ ಆಪ್ತಸ್ನೇಹಿತನಿದ್ದರೆ ಕೆಲಸದ ವೇಳೆಯಲ್ಲಿ ಮತ್ತು ನಂತರದ ಸಮಯದಲ್ಲಿ ನೀವು ಆತನೊಡನೆ ಒಡನಾಡಬಹುದು ಮತ್ತು ನಿಮ್ಮ ಭಾವನೆಗಳು ಮತ್ತು ಉದ್ಯೋಗ ಸಂಬಂಧಿ ಒತ್ತಡಗಳನ್ನು ಆತನೊಂದಿಗೆ ಹಂಚಿಕೊಳ್ಳಬಹುದು. ಇದು ನಿಮ್ಮ ಆಂತರಿಕ ಭಾವನೆಗಳನ್ನು ಹೊರಹಾಕುವ ಜೊತೆಗೆ ನಿಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸಲು ಮತ್ತು ಒತ್ತಡ ನಿವಾರಣೆಗೆ ನೆರವಾಗುವ ಮಾರ್ಗಗಳನ್ನು ನಿಮಗೆ ತೋರಿಸುತ್ತದೆ.
ನೆನಪಿಡಿ,ಕೆಲಸದ ಸ್ಥಳದಲ್ಲಿ ನಿಮಗೆ ಆಪ್ತ ವ್ಯಕ್ತಿಯಿದ್ದರೆ ಅಲ್ಲಿ ನಿಮ್ಮ ಬದುಕು ಸುಲಭವಾಗುತ್ತದೆ ಮತ್ತು ಪ್ರತಿದಿನ ಕೆಲಸದಲ್ಲಿನ ಸಮಸ್ಯೆಗಳನ್ನು ಎದುರಿಸಲು ನಿಮಗೆ ಸುಲಭವಾಗುತ್ತದೆ. ಒತ್ತಡಕ್ಕೆ ಸಿಲುಕಿದಾಗ ನಿಮ್ಮ ಆಪ್ತಸ್ನೇಹಿತನೊಡನೆ ಒಂದು ಪುಟ್ಟ ವಾಕಿಂಗ್‌ಗೆ ತೆರಳಿ ಅಥವಾ ಚಹಾ/ಕಾಫಿ ಸೇವಿಸುತ್ತ ಆತನೊಡನೆ ಕೆಲ ಹೊತ್ತು ಹರಟೆ ಹೊಡೆದು ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಿ. ಅಲ್ಲದೆ ಕೆಲಸದ ಒತ್ತಡಗಳಿಂದ ನೀವು ಬೇಸತ್ತಿದ್ದರೆ ವೃತ್ತಿಪರ ನೆರವು ಪಡೆದುಕೊಳ್ಳುವುದು ಕೆಟ್ಟದ್ದೇನಲ್ಲ.
ಪುಟ್ಟ ವಿರಾಮಗಳನ್ನು ತೆಗೆದುಕೊಂಡು ಫ್ರೆಷ್ ಆಗಿ
ನೀವು ದಿನವಿಡೀ ಕಚೇರಿಯಲ್ಲಿ ಅಂಟಿಕೊಂಡಿದ್ದರೆ,ಕಂಪ್ಯೂಟರ್‌ನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ ಅದು ನಿಮ್ಮ ಶಕ್ತಿಯನ್ನು ಕುಂದಿಸುತ್ತದೆ. ಹೀಗಾಗಿ ಕೆಲಸದ ವೇಳೆಯಲ್ಲಿ ಆಗಾಗ್ಗೆ ಪುಟ್ಟ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಮನಸ್ಸು ಮತ್ತು ಶರೀರ ತಾಜಾ ಆಗುತ್ತವೆ ಮತ್ತು ನಿಮ್ಮ ಕಾರ್ಯ ನಿರ್ವಹಣೆಯು ಸಹಜ ಮಟ್ಟಕ್ಕೆ ಮರಳಲು ನೆರವಾಗುತ್ತದೆ. ಕೆಲವು ದಿನಗಳ ರಜಾ ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುವಲ್ಲಿ ಅದ್ಭುತ ಪರಿಣಾಮವನ್ನು ಬೀರುತ್ತದೆ.
ಕೆಲಸ ಮತ್ತು ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳಿ
ಆಧುನಿಕ ಯುಗದಲ್ಲಿ ಹೆಚ್ಚುಕಡಿಮೆ ಪ್ರತಿಯೊಬ್ಬರೂ ದಿನವಿಡೀ ಏನಾದರೊಂದು ಒತ್ತಡವನ್ನು ಎದುರಿಸುತ್ತಲೇೆ ಇರುತ್ತಾರೆ. ನಮ್ಮ ಕೆಲಸವನ್ನು ಪರಿಪೂರ್ಣವಾಗಿ ಮಾಡುವ ಪ್ರಯತ್ನದಲ್ಲಿ ನಾವು ನಮ್ಮ ವೈಯಕ್ತಿಕ ಬದುಕನ್ನು ಬಲಿಗೊಡುತ್ತೇವೆ. ಇದು ಕೆಲಸದ ಸ್ಥಳದಲ್ಲಿ ಮತ್ತು ಮನೆಯಲ್ಲಿ ನಮ್ಮನ್ನು ಒತ್ತಡಕ್ಕೊಳಗಾಗಿಸುತ್ತದೆ. ಹೀಗಾಗಿ ಕೆಲಸದ ಸ್ಥಳದಲ್ಲಿ ಮತ್ತು ಮನೆಯಲ್ಲಿ ಒತ್ತಡದಿಂದ ತಪ್ಪಿಸಿಕೊಳ್ಳಿ. ನಮ್ಮ ಉದ್ಯೋಗ ಮತ್ತು ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಕಚೇರಿಯ ಕೆಲಸ ಅಲ್ಲಿಗೇ ಸೀಮಿತವಾಗಿರಲಿ,ಅದನ್ನು ಮನಸ್ಸಿನಲ್ಲಿ ಹೊತ್ತುಕೊಂಡು ಮನೆಗೊಯ್ಯಬೇಡಿ.
ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ
ಇದು ಕಚೇರಿಯಲ್ಲಿ ಒತ್ತಡಗಳಿಂದ ಪಾರಾಗಲು ಕೊನೆಯ,ಆದರೆ ಅತ್ಯಂತ ಮುಖ್ಯವಾದ ಸಲಹೆಯಾಗಿದೆ. ಕೆಲಸದ ಸ್ಥಳದಲ್ಲಿ ಒತ್ತಡದಿಂದ ಪಾರಾಗಲು ಸಂಸ್ಕರಿತ ಆಹಾರಗಳು ಅಥವಾ ಫಾಸ್ಟ್‌ಫುಡ್‌ಗಳ ಮೊರೆ ಹೋಗುವುದು,ಹೊಸ ಐಡಿಯಾಗಳನ್ನು ಕಂಡುಕೊಳ್ಳಲು ಆಗಾಗ್ಗೆ ಚಹಾ ಅಥವಾ ಕಾಫಿ ಸೇವಿಸುವುದು ಇವೂ ಇಂತಹ ಅಭ್ಯಾಸಗಳಲ್ಲಿ ಸೇರಿವೆ. ಶಾಂತಚಿತ್ತದಿಂದ ಇರುವುದನ್ನು ಕಲಿತುಕೊಳ್ಳಿ,ಧ್ಯಾನ ಮತ್ತು ಯೋಗ ನಿಮ್ಮನ್ನು ಒತ್ತಡದಿಂದ ಪಾರಾಗಲು ನೆರವಾಗುತ್ತವೆ. ನಿಮ್ಮ ದಿನಚರಿಯಲ್ಲಿ ಕೆಲವು ಸಮಯವನ್ನು ಗಾರ್ಡನಿಂಗ್,ಓದುವಿಕೆ,ಡ್ಯಾನ್ಸ್ ಮತ್ತು ನಿಮ್ಮ ಮಕ್ಕಳೊಂದಿಗೆ ಆಟದಂತಹ ಹವ್ಯಾಸಗಳಿಗೆ ಮೀಸಲಿಡಿ. ಇದು ನಿಮ್ಮನ್ನು ದೀರ್ಘಕಾಲಿಕ ಒತ್ತಡದಿಂದ ಪಾರಾಗಲು ನೆರವಾಗುತ್ತದೆ. ವಾರಾಂತ್ಯಗಳನ್ನು ನಿಮ್ಮ ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಮನೋರಂಜನೆಗೆ ಮೀಸಲಿಡಿ. ಒತ್ತಡವನ್ನು ನಿವಾರಿಸಿಕೊಳ್ಳಲು ಧೂಮಪಾನ ಅಥವಾ ಮದ್ಯಪಾನ ಸರ್ವಥಾ ಸಲ್ಲದು. ರಾತ್ರಿ ಬಹಳ ಹೊತ್ತು ಎಚ್ಚರವಾಗಿರಲು ಚಹಾ ಅಥವಾ ಕಾಫಿ ಕುಡಿಯುವ ಚಟ ನಿಮಗಿದ್ದರೆ ಅದನ್ನು ಬಿಟ್ಟುಬಿಡಿ. ಆರೋಗ್ಯಕರ ಆಹಾರ ಮತ್ತು ರಾತ್ರಿ ಒಳ್ಳೆಯ ನಿದ್ರೆ ನಿಮ್ಮನ್ನು ದಿನವಿಡೀ ಉತ್ಸಾಹಪೂರ್ಣರನ್ನಾಗಿಸುತ್ತವೆ.