ಇತರ ಸರಕಾರಿ ಹುದ್ದೆಗಳಿಗೆ ಐಎಎಸ್ ಅಭ್ಯರ್ಥಿಗಳ ನೇಮಕ: ಯುಪಿಎಸ್ಸಿ ಪ್ರಸ್ತಾವದಿಂದ ಸಾವಿರಾರು ಮಂದಿಗೆ ಲಾಭ?

Update: 2019-02-12 07:17 GMT

ನಾಗರಿಕ ಸೇವೆಗಳಾದ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಭಾರತೀಯ ವಿದೇಶ ಸೇವೆ (ಐಎಫ್‌ಎಸ್) ಸೇರಲು ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ನೇಮಕಾತಿ ಪರೀಕ್ಷೆಗೆ ಹಾಜರಾಗಿ ವಿಫಲವಾದವರಿಗೆ ಸಿಹಿಸುದ್ದಿಯೊಂದು ಬಂದಿದೆ.
ನೇಮಕಾತಿ ಪರೀಕ್ಷೆಯಲ್ಲಿ ಸಂದರ್ಶನ ಹಂತವನ್ನು ಮೀರಲಾಗದ ಅಭ್ಯರ್ಥಿಗಳನ್ನು ಇತರ ಸರಕಾರಿ ಹುದ್ದೆಗಳಿಗೆ ನೇಮಕ ಮಾಡುವಂತೆ ಯುಪಿಎಸ್ಸಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ನಾಗರಿಕ ಸೇವೆ ಮತ್ತು ಇತರ ಪರೀಕ್ಷೆಗಳಲ್ಲಿ ಸಂದರ್ಶನದ ಹಂತವನ್ನು ತಲುಪಿ ವಿಫಲವಾಗುವ ಅಭ್ಯರ್ಥಿಗಳನ್ನು ಇತರ ಸರಕಾರಿ ಹುದ್ದೆಗಳಿಗೆ ನೇಮಕ ಮಾಡು ವಂತೆ ನಾವು ಕೇಂದ್ರ ಸರಕಾರ ಮತ್ತು ಸಚಿವಾಲಯಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಎಂದು ಭೋಪಾಲ್‌ನಲ್ಲಿ ನಡೆದ ರಾಜ್ಯ ಸಾರ್ವಜನಿಕ ಆಯೋಗಗಳ ಮುಖ್ಯಸ್ಥರ 21ನೇ ರಾಷ್ಟ್ರೀಯ ಸಮ್ಮೇಳನದ ಹಿನ್ನೆಲೆಯಲ್ಲಿ ಯುಪಿಎಸ್ಸಿ ಮುಖ್ಯಸ್ಥ ಅರವಿಂದ್ ಸಕ್ಸೇನಾ ತಿಳಿಸಿದ್ದಾರೆ.
ಸರಾಸರಿ ಪ್ರತಿವರ್ಷ ಸುಮಾರು 10 ಲಕ್ಷ ಅಭ್ಯರ್ಥಿಗಳು ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗುತ್ತಾರೆ. ಈ ಪೈಕಿ ಸುಮಾರು 10ರಿಂದ 12 ಸಾವಿರ ಮಂದಿ ಪ್ರಾಥಮಿಕ ಪರೀಕ್ಷಾ ಹಂತಕ್ಕೆ ತಲುಪುತ್ತಾರೆ ಮತ್ತು ಅವರಲ್ಲಿ 3,000 ಅಭ್ಯರ್ಥಿಗಳು ಸಂದರ್ಶನ ಹಂತಕ್ಕೇರು ತ್ತಾರೆ. ಅಂತಿಮವಾಗಿ, ಇವರಲ್ಲಿ 600 ಮಂದಿಯನ್ನು ಸರಕಾರ ನಾಗರಿಕ ಸೇವೆಗಳಿಗೆ ನೇಮಕ ಮಾಡುತ್ತದೆ.
ಸಂದರ್ಶನದ ಹಂತದವರೆಗೆ ತಲುಪಿದ ಅಭ್ಯರ್ಥಿಗಳು ಆಗಲೇ ಎರಡು ಹಂತಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದರಿಂದ ಅವರನ್ನು ನಾಗರಿಕ ಸೇವೆಗಳ ಹೊರತಾಗಿ ಇತರ ಸರಕಾರಿ ಹುದ್ದೆಗಳಿಗೆ ನೇಮಕ ಮಾಡಬಹುದಾಗಿದೆ ಎಂದು ಸಕ್ಸೇನಾ ಅಭಿಪ್ರಾಯಿಸುತ್ತಾರೆ.
ಈ ಪ್ರಸ್ತಾವಕ್ಕೆ ಅನುಮೋದನೆ ದೊರೆತರೆ ಭಾರತದಲ್ಲಿ ಅತ್ಯುನ್ನತ ಮತ್ತು ಪ್ರತಿಷ್ಠಿತ ಸರಕಾರಿ ಉದ್ಯೋಗವನ್ನು ಒದಗಿಸುವ ನಾಗರಿಕ ಸೇವೆಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ಅಭ್ಯರ್ಥಿಗಳ ಒತ್ತಡವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರವಹಿಸಲಿದೆ.


ಯುಪಿಎಸ್ಸಿಯ ನೋಡಲ್ ಸಚಿವಾಲಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿ ಈ ಸಲಹೆಯನ್ನು ಸ್ವಾಗತಾರ್ಹ ಎಂದು ಶ್ಲಾಘಿಸಿದ್ದಾರೆ.

ಎಸ್‌ಎಸ್‌ಸಿ (ಸಿಬ್ಬಂದಿ ಆಯ್ಕೆ ಆಯೋಗ) ಮತ್ತು ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಮುಂತಾದ ನೇಮಕಾತಿ ಸಂಸ್ಥೆಗಳಲ್ಲಿ ಈಗಾಗಲೇ ಈ ನಿಬಂಧನೆ ಜಾರಿಯಲ್ಲಿದೆ ಎಂದು ಅವರು ತಿಳಿಸುತ್ತಾರೆ. ಈ ಪ್ರಸ್ತಾವ ಹೊಸದೇನೂ ಅಲ್ಲ. 2016ರಲ್ಲೇ ಯುಪಿಎಸ್ಸಿ ಈ ಸಲಹೆಯನ್ನು ಸರಕಾರಕ್ಕೆ ನೀಡಿತ್ತು ಮತ್ತು ಅದೇ ವರ್ಷ ಸಂಪುಟದಲ್ಲೂ ಈ ಪ್ರಸ್ತಾವಕ್ಕೆ ಅನುಮೋದನೆ ದೊರಕಿತ್ತು. ಆದರೆ ಯುಪಿಎಸ್ಸಿ ಸದ್ಯ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿ ತಿಳಿಸುತ್ತಾರೆ.
ಇದರ ಹಿಂದಿರುವ ಯೋಚನೆಯೆಂದರೆ, ಈ ಅಭ್ಯರ್ಥಿಗಳ ಬಳಿ ಯುಪಿಎಸ್ಸಿ ಅಂಕಗಳು ಮತ್ತು ರ್ಯಾಂಕಿಂಗ್ ಇರುವುದರಿಂದ ಬಹಳಷ್ಟು ಸರಕಾರಿ ಹುದ್ದೆಗಳಿಗೆ ಇವರನ್ನು ಪರಿಗಣಿಸಬಹುದಾಗಿದೆ. ಇದರಿಂದ ಇತರ ನೇಮಕಾತಿ ಸಂಸ್ಥೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಅಂತಿಮ ಹಂತದವರೆಗೆ ತಲುಪಿಯೂ ನಾಗರಿಕ ಸೇವೆಗೆ ಆಯ್ಕೆಯಾಗದ ವ್ಯಕ್ತಿಗಳಿಗೆ ಸೂಕ್ತ ಹುದ್ದೆಯನ್ನು ನೀಡಿದಂತಾಗುತ್ತದೆ.
ಒಮ್ಮೆ ಆಯ್ಕೆ ಮಾಡಿದ ನಂತರ ಸಂಬಂಧಿತ ಉದ್ಯೋಗದಾತರು ಅಥವಾ ಸರಕಾರಿ ವಿಭಾಗ ಅಭ್ಯರ್ಥಿಗಳಿಗೆ ಸಣ್ಣ ಪರೀಕ್ಷೆ ಅಥವಾ ಸಂದರ್ಶನವನ್ನು ಆಯೋಜಿಸಲು ಬಯಸಿದರೆ ಅದನ್ನೂ ಮಾಡಬಹುದು ಎಂದು ಅಧಿಕಾರಿ ತಿಳಿಸುತ್ತಾರೆ.
ಆಯ್ಕೆಯ ಅಂತಿಮ ಹಂತದಲ್ಲಿ ಸ್ಪರ್ಧೆ ಅತ್ಯಂತ ಕಠಿಣವಿರುವುದರಿಂದ ಅಭ್ಯರ್ಥಿಗಳು ಸಂದರ್ಶನ ಹಂತದಲ್ಲಿ ಒಂದೆರಡು ಅಂಕಗಳಿಂದ ವಿಫಲವಾಗುತ್ತಾರೆ, ಹಾಗಾಗಿ ಯುಪಿಎಸ್ಸಿಯ ಪ್ರಸ್ತಾವ ಒಂದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವನ್ ವಿವರಿಸುತ್ತಾರೆ.
ಸಂದರ್ಶನ ಹಂತದವರೆಗೆ ಬಂದಿರುವ ಅಭ್ಯರ್ಥಿಗಳು ಖಂಡಿತವಾಗಿಯೂ ಪ್ರತಿಭಾವಂತರಾಗಿರುತ್ತಾರೆ. ಹಾಗಾಗಿ, ಈ ಹಂತಕ್ಕೆ ತಲುಪುವ ವೇಳೆ ಅವರಿಗೆ ಆಡಳಿತದ ಬಗ್ಗೆ ಸಾಕಷ್ಟು ಜ್ಞಾನ ಪ್ರಾಪ್ತಿಯಾಗುವುದರಿಂದ ಈ ಅಭ್ಯರ್ಥಿಗಳನ್ನು ಸರಕಾರಿ ಹುದ್ದೆಗಳಿಗೆ ಬಳಸಿಕೊಳ್ಳುವುದು ಉತ್ತಮ ಯೋಚನೆಯಾಗಿದೆ ಎಂದು ಕಸ್ವನ್ ಅಭಿಪ್ರಾಯಿಸುತ್ತಾರೆ.
ಇದೊಂಥರ ಅರ್ಹ ಅಭ್ಯರ್ಥಿಗೆ ಸುಭದ್ರ ಉದ್ಯೋಗವನ್ನು ಪಡೆಯಲು ಇನ್ನೊಂದು ಅವಕಾಶ ನೀಡಿದಂತೆ. ಇದರಿಂದ ಸರಕಾರಿ ಸಂಸ್ಥೆಗಳಿಗೂ ಲಾಭವಾಗಲಿದೆ ಎಂದು ಕಸ್ವನ್ ಅಭಿಪ್ರಾಯಿಸುತ್ತಾರೆ.
ಯುಪಿಎಸ್ಸಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿರುವುದರಿಂದ ಅದರ ಬಳಿಯಿರುವ ಅರ್ಹ ಅಭ್ಯರ್ಥಿಗಳ ದತ್ತಾಂಶವನ್ನು ಬಳಸಿಕೊಳ್ಳುವುದು ಉತ್ತಮ ಯೋಚನೆ ಎಂದು ಅವರು ತಿಳಿಸುತ್ತಾರೆ.
ಹೆಸರು ಹೇಳಲು ಇಚ್ಛಿಸದ ನಾಗರಿಕ ಸೇವಾ ಅಧಿಕಾರಿ ಹೇಳುವಂತೆ ಈ ಪ್ರಸ್ತಾವನೆಯಲ್ಲಿ ಸಣ್ಣದೊಂದು ಲೋಪವಿದೆ. ಒಂದು ವೇಳೆ ಅಭ್ಯರ್ಥಿ ಬೇರೆ ಹುದ್ದೆಯನ್ನು ಸ್ವೀಕರಿಸಿದರೂ ಯುಪಿಎಸ್ಸಿ ಕನಸನ್ನು ಬಿಡದಿದ್ದರೆ ಆಗ ಕಷ್ಟವಾಗುತ್ತದೆ ಎನ್ನುತ್ತಾರೆ ಈ ಅಧಿಕಾರಿ.
ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಒಂದು ಹವ್ಯಾಸವೆಂದರೆ ತಮ್ಮ ಆಯ್ಕೆಯ ಸೇವೆಗೆ ಪ್ರವೇಶ ದೊರೆಯುವವರೆಗೂ ಅವರು ಈ ಪರೀಕ್ಷೆಗೆ ಹಾಜರಾಗುತ್ತಲೇ ಇರುತ್ತಾರೆ. ಹೀಗಾದಲ್ಲಿ ಅಂಥ ಅಭ್ಯರ್ಥಿಯು ತಮಗೆ ಸಿಕ್ಕ ಹುದ್ದೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಳ್ಳಲು ವಿಫಲವಾಗುತ್ತಾನೆ ಮತ್ತು ಬೇರೆಬೇರೆ ಹುದ್ದೆಗಳಿಗೆ ಪ್ರಯತ್ನಿಸುತ್ತಿರುತ್ತಾನೆ ಎಂದು ಅವರು ಅಭಿಪ್ರಾಯಿಸುತ್ತಾರೆ.
 ಕೃಪೆ: ದಿ ಪ್ರಿಂಟ್

Writer - ಸಾನ್ಯಾ ಧಿಂಗ್ರಾ

contributor

Editor - ಸಾನ್ಯಾ ಧಿಂಗ್ರಾ

contributor

Similar News

ಜಗದಗಲ
ಜಗ ದಗಲ