‘‘ಉಪವಾಸ ನಿಲ್ಲಿಸಿ, ನಮ್ಮನ್ನು ಬದುಕಿಸಿ...’’
ಬೆಳಗ್ಗಿನಿಂದ ಸಂಜೆಯವರೆಗೆ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಪಾರ್ಸಿ, ಬೌದ್ಧ ಧರ್ಮ ಮುಖಂಡರು ಬಿರ್ಲಾ ಭವನದಲ್ಲಿ ಹೊರಸಿನ ಮೇಲೆ ಮಲಗಿದ್ದ ಮುದುಕನ ಮುಂದೆ ಸಾಲಾಗಿ ನಿಂತು ವಂದಿಸಿ, ‘ದಯಮಾಡಿ ಉಪವಾಸ ನಿಲ್ಲಿಸಿ! ನಮ್ಮ ಪ್ರಾಣ ಉಳಿಸಿ!’ ಎಂದು ಬೇಡಿಕೊಂಡರು. ತಲೆಬಾಗಿ ಕೈಮುಗಿದು ಪ್ರಾರ್ಥಿಸಿದರು. ಗಾಂಧೀಜಿ ಅವರಿಗೆ ಪ್ರತಿ ನಮಸ್ಕಾರ ಮಾಡುವಂತೆ ಕೈಜೋಡಿಸಿದರು. ಉಪವಾಸ ಬಿಡುವ ಇಂಗಿತ ತೋರಲಿಲ್ಲ. ಅವರೊಡನೆ ವಾದಿಸುವ ತ್ರಾಣವಾಗಲಿ, ಧೈರ್ಯವಾಗಲಿ, ಬಂದ ಆ ಧಾರ್ಮಿಕ ಮುಖಂಡರಿಗೆ ಇರಲಿಲ್ಲ.
ದಿಲ್ಲಿಯಲ್ಲಿ, ಪಂಜಾಬ್‌ನಲ್ಲಿ ಹುಟ್ಟಿರುವ ದ್ವೇಷ ದಾವಾನಲವನ್ನು ನಂದಿಸಲು ಹಬ್ಬಿರುವ ಪ್ರತೀಕಾರದ ಹುಚ್ಚಿಗೆ ಇದೇ ಮದ್ದು- ಉಪವಾಸ ಸತ್ಯಾಗ್ರಹ!
ಗಾಂಧೀಜಿಯ ಈ ನಿರ್ಧಾರವನ್ನು ಕೇಳಿದ ದೇಶ- ಒಂದರ್ಥದಲ್ಲಿ ಈ ಪ್ರಪಂಚ ತಲ್ಲಣಿಸಿತು! 78 ವರ್ಷದ ಈ ಮುದುಕ ಉಪವಾಸ ಸತ್ಯಾಗ್ರಹದ ಅಗ್ನಿಕುಂಡದಿಂದ ಬದುಕಿ ಬಂದಾನೆಯೇ? ಬದುಕದಿದ್ದರೆ ಏನು ಗತಿ?
ಆದರೆ ಪುಣೆಯಲ್ಲಿದ್ದ ಇಬ್ಬರು ಚಿತ್ಪಾವನ ಬ್ರಾಹ್ಮಣರಿಗೆ ಮಾತ್ರ ಇದರಿಂದ ಚಿಂತೆ ಮಿಶ್ರಿತ ಸಂತೋಷವಾಯಿತು. ಈ ಮುದುಕನಿಗೆ ‘ಹುಚ್ಚು!’ ಭಾರತ ಸರಕಾರ ಈ ‘ಹುಚ್ಚ’ನ ಒತ್ತಡಕ್ಕೆ ಮಣಿದು ಎಲ್ಲಿ 55 ಕೋಟಿ ಕೊಟ್ಟು ಬಿಡುವರೋ ಎಂಬ ಚಿಂತೆ ಅವರಿಗೆ. ಒಂದು ವೇಳೆ ಕೊಡದಿದ್ದರೆ- ಇದು ಕೇವಲ ಅಸಂಭವ-ಮುದುಕ ಉಪವಾಸದಿಂದ ಸತ್ತೇ ಸಾಯುತ್ತಾನೆ! ಒಂದು ವೇಳೆ ಸರಕಾರ ಈ ಹುಚ್ಚಪ್ಪನ ಒತ್ತಡಕ್ಕೆ ಮಣಿದರೆ ನಾವು ಇವನನ್ನು ಮುಗಿಸಲೇಬೇಕು. ಇದು ನಮ್ಮ ‘ಕರ್ತವ್ಯ’ ನಿರ್ವಹಣೆಯ ಸುಸಂಧಿ! ‘ಗುರೂಜಿ’ಗೆ ನಾವು ಸಲ್ಲಿಸುವ ಗುರುಕಾಣಿಕೆ. ನಮ್ಮ ರಾಜಕೀಯ ನಾಯಕ ‘ವೀರ’ನಿಗೆ ಸಲ್ಲಿಸುವ ಆತ್ಮ ನೈವೇದ್ಯ! ನಮ್ಮ ಜೀವನದ ಪರಮಸಿದ್ಧಿಯ ಸಾಕ್ಷಾತ್ಕಾರ! ನಮ್ಮ ಧರ್ಮ-ಪರಮ ಪಾವನ ವೇದ ಋಷಿ ಪ್ರಣೀತ ಹಿಂದೂ ಧರ್ಮ ರಕ್ಷಣೆಗಾಗಿ ಒದಗಿಬಂದ ಮಹಾಸುದಿನ, ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ‘ಹಿಂದೂ ರಾಷ್ಟ್ರ’ ಪತ್ರಿಕೆಯ ಕಚೇರಿಯಲ್ಲಿ ಕುಳಿತು ಮಾಡಿದ ನಿರ್ಧಾರ.
ಇತ್ತ ದಿಲ್ಲಿಯಲ್ಲಿ ಬಿರ್ಲಾ ಭವನಕ್ಕೆ ಗವರ್ನರ್ ಜನರಲ್ ಲೂಯಿ ವೌಂಟ್ ಬ್ಯಾಟನ್, ಎಡ್ವಿನ್ ವೌಂಟ್ ಬ್ಯಾಟನ್, ನೆಹರೂ, ಪಟೇಲ್, ಆಝಾದ್, ರಾಜಕುಮಾರಿ ಅಮೃತ ಕೌರ್... ದೇಶದ ಅಗ್ರ ನಾಯಕರೆಲ್ಲ ಬಂದರು. ದಿಲ್ಲಿಯಲ್ಲಿ ಹಿಂದೂ ಮುಸ್ಲಿಂ ಕೋಮು ಸೌಹಾರ್ದವನ್ನು ಸ್ಥಾಪಿಸುತ್ತೇವೆ. ನೀವು ಉಪವಾಸ ನಿಲ್ಲಿಸಿ ಎಂದು ಪ್ರಾರ್ಥಿಸಿದರು.
ಗಾಂಧೀಜಿ ಹೇಳಿದರು: ‘‘ದಿಲ್ಲಿ ಈಗ ಒಂದು ತೀಕ್ಷ್ಣ ಪರೀಕ್ಷೆಗೆ ಒಳಗಾಗಿದೆ. ಎಲ್ಲ ಕೋಮುಗಳೂ, ಭಾರತೀಯರೆಲ್ಲರೂ ಮತ್ತೆ ನಿಜವಾದ ಭಾರತೀಯರಾಗಬೇಕು. ಪಶುಪ್ರವೃತ್ತಿಗೆ ಬದಲು ಮಾನವತ್ವ ನೆಲೆಸಬೇಕು. ಹಾಗೆ ಆಗದಿದ್ದರೆ ನಾನು ಬದುಕಿದ್ದು ಫಲವೇನು?’’
ಗಾಂಧೀಜಿಯ ಮಗ ದೇವದಾಸ ಗಾಂಧಿ ತಂದೆಗೆ ಪತ್ರ ಬರೆದು ಉಪವಾಸ ಕೈಬಿಡುವಂತೆ ಪ್ರಾರ್ಥಿಸಿದರು:
‘‘ಬದುಕಿದ್ದಾಗ ನೀವು ಸಾಧಿಸಲಾಗದ ಫಲವನ್ನು ಸತ್ತು ಸಾಧಿಸಲಾರಿರಿ?’’
ಅದಕ್ಕೆ ಗಾಂಧೀಜಿ ಉತ್ತರ ಬರೆದರು: ‘‘ನೀನು ಮತ್ತು ಎಲ್ಲರೂ ಒಂದು ಮಾತು ನೆನಪಿಟ್ಟುಕೊಳ್ಳಬೇಕು. ನಾನು ಬದುಕಿ ಉಳಿಯಬೇಕು ಇಲ್ಲವೇ ಸಾಯಬೇಕು ಎಂಬುದು ಮುಖ್ಯವಲ್ಲ. ನಾನು ದೇವರಿಗೆ ಸಲ್ಲಿಸುವ ಪ್ರಾರ್ಥನೆ ಒಂದೇ, ‘ನನ್ನ ಈ ಉಪವಾಸದ ಕಾಲದಲ್ಲಿ ನನ್ನ ನಿರ್ಧಾರ ಅಚಲವಾಗಿರುವಂತೆ ಕರುಣಿಸು. ಜೀವ ಉಳಿಸಿಕೊಳ್ಳುವ ಆಸೆಯಿಂದ ಉಪವಾಸವನ್ನು ಅವಸರದಿಂದ ಬಿಡುವ ಚಾಪಲ್ಯ ನನ್ನಲ್ಲಿ ಉಂಟಾಗದಿರಲಿ’’.
ಬೆಳಗ್ಗಿನಿಂದ ಸಂಜೆಯವರೆಗೆ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಪಾರ್ಸಿ, ಬೌದ್ಧ ಧರ್ಮ ಮುಖಂಡರು ಬಿರ್ಲಾ ಭವನದಲ್ಲಿ ಹೊರಸಿನ ಮೇಲೆ ಮಲಗಿದ್ದ ಮುದುಕನ ಮುಂದೆ ಸಾಲಾಗಿ ನಿಂತು ವಂದಿಸಿ, ‘ದಯಮಾಡಿ ಉಪವಾಸ ನಿಲ್ಲಿಸಿ! ನಮ್ಮ ಪ್ರಾಣ ಉಳಿಸಿ!’ ಎಂದು ಬೇಡಿಕೊಂಡರು. ತಲೆಬಾಗಿ ಕೈಮುಗಿದು ಪ್ರಾರ್ಥಿಸಿದರು. ಗಾಂಧೀಜಿ ಅವರಿಗೆ ಪ್ರತಿ ನಮಸ್ಕಾರ ಮಾಡುವಂತೆ ಕೈಜೋಡಿಸಿದರು. ಉಪವಾಸ ಬಿಡುವ ಇಂಗಿತ ತೋರಲಿಲ್ಲ. ಅವರೊಡನೆ ವಾದಿಸುವ ತ್ರಾಣವಾಗಲಿ, ಧೈರ್ಯವಾಗಲಿ, ಬಂದ ಆ ಧಾರ್ಮಿಕ ಮುಖಂಡರಿಗೆ ಇರಲಿಲ್ಲ. ಸುಮ್ಮನೆ ತಲೆಬಾಗಿ ನೆರಳಿನಂತೆ ಕರಗಿ ಹೋದರು.
ಆ ಸಂಜೆ ಭಾರತ ಸರಕಾರ ಸಚಿವ ಸಂಪುಟ ಅಧಿಕೃತ ಕೊಠಡಿ ಬಿಟ್ಟು ಬಿರ್ಲಾ ಭವನದ ಆ ಕೊಠಡಿಯಲ್ಲಿ ಸಭೆ ಸೇರಿತು. ನೆಹರೂ, ಪಟೇಲರು 55 ಕೋಟಿ ಕೊಡಬಾರದೆಂಬ ನಿರ್ಣಯವನ್ನು ಸಮರ್ಥಿಸಿದರು. ಅವರ ವಾದವನ್ನು ಗಾಂಧೀಜಿ ಕಿವಿಗೊಟ್ಟು ಕೇಳುತ್ತಿದ್ದರು. ಕೊಠಡಿಯ ಮಾಳಿಗೆಯನ್ನು ಶೂನ್ಯ ದೃಷ್ಟಿಯಿಂದ ನೋಡುತ್ತಿದ್ದರು ಮಾತ್ರ! ಪಟೇಲರು ಸಂಪುಟ ಕೈಗೊಂಡಿದ್ದ ನಿರ್ಣಯದ ಔಚಿತ್ಯವನ್ನು ಪ್ರಬಲವಾಗಿ ಸಮರ್ಥಿಸಿಕೊಂಡರು. ಅವರು ಹೇಳುವುದನ್ನೆಲ್ಲಾ ತಾಳ್ಮೆಯಿಂದ ಕೇಳಿ ತಮ್ಮ ಮೊಳಕೈ ಊರಿ ಸ್ವಲ್ಪ ಮೇಲೆದ್ದು, ಇಡೀ ಜೀವಮಾನ ತಮ್ಮ ನೆರಳಿನಂತೆ ಹಿಂಬಾಲಿಸಿದ್ದ, ತಮ್ಮನ್ನು ಬೆಂಬಲಿಸಿದ್ದ ಪಟೇಲರನ್ನು ನೋಡಿ:
‘‘ಹಿಂದೆ ನಾನು ಬಲ್ಲ ಸರ್ದಾರ್ ನೀವಾಗಿಲ್ಲ!’’ ಎಂದು ಮೆಲುದನಿಯಲ್ಲಿ ನುಡಿದು ಮೆಲ್ಲನೆ ಹಾಸುಗೆಯಲ್ಲಿ ಹೊರಳಿದರು.
ಮಂತ್ರಿಮಂಡಲದ ಸಭೆ ಮುಗಿಯಿತು. ಖಿನ್ನ ಮನಸ್ಕರಾಗಿ ಒಬ್ಬೊಬ್ಬರಾಗಿ ನಿರ್ಗಮಿಸಿದರು.
ದಿಲ್ಲಿಯ ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ದೊಡ್ಡ ಬಜಾರ್‌ಗಳಲ್ಲಿ- ಕನ್ನಾಟ್ ಸರ್ಕಸ್, ಚಾಂದ್ನಿ ಚೌಕ್, ಜಾಮಿಯಾ ಮಸೀದಿ, ಕೆಂಪು ಕೋಟೆಯ ಸುತ್ತಮುತ್ತ, ದೇವಾಲಯಗಳಲ್ಲಿ, ಮಸೀದಿಗಳಲ್ಲಿ, ಇಗರ್ಜಿಗಳಲ್ಲಿ, ಗುರುದ್ವಾರಗಳಲ್ಲಿ, ನಿರಾಶ್ರಿತರ ಶಿಬಿರಗಳಲ್ಲಿ ರೈಲು ನಿಲ್ದಾಣದಲ್ಲಿ ಎಲ್ಲೆಲ್ಲಿ ಜನರಿದ್ದರೋ ಅಲ್ಲಲ್ಲಿ ಎಲ್ಲರ ಬಾಯಲ್ಲಿ ಗಾಂಧಿ ಉಪವಾಸದ ಮಾತೇ ಮಾತು!
‘‘ಅವರ ಪ್ರಾಣ ಉಳಿಯಬೇಕು’’
‘‘ಹೇಗಾದರೂ ಅವರನ್ನು ಉಳಿಸಬೇಕು’’
‘‘ಅವರಿದ್ದರೆ ನಮ್ಮ ಜೀವಕ್ಕೆ ರಕ್ಷಣೆ’’ ಇವು ಮುಸ್ಲಿಮರ ಬಾಯಲ್ಲಿ ಬರುತ್ತಿದ್ದ ಆರ್ತನಾದ.
ಜನರ ಪ್ರತಿಕ್ರಿಯೆ ಏನೆಂದು ತಿಳಿಯಲು ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಜಿ.ಎಸ್.ಸಿನ್ಹಾ ಜನಜಂಗುಳಿಯ ಮಧ್ಯೆ ಸೇರಿಕೊಂಡು ಅವರಾಡುತ್ತಿದ್ದ ಮಾತುಗಳನ್ನು ಆಲಿಸುತ್ತಿದ್ದರು. ಕೆಲವರು: ‘‘ಗಾಂಧಿ ಮತ್ತೆ ಮುಸ್ಲಿಮರನ್ನು ಓಲೈಸಲು ಈ ನಾಟಕ ಹೂಡಿದ್ದಾರೆ’’ ಎಂದುಕೊಳ್ಳುತ್ತಿದ್ದರು. ಇನ್ನು ಕೆಲವರಂತೂ ‘‘ಅಲ್ಲಿ ಪಾಕಿಸ್ತಾನದಲ್ಲಿ ಹಿಂದೂ ಸಿಖ್ಖರ ಪ್ರಾಣ, ಮಾನ, ಆಸ್ತಿ ರಕ್ಷಣೆಗಾಗಿ ಈ ಮುದುಕ ಏನು ಮಾಡಿದ್ದಾರೆ?’’ ಎನ್ನುತ್ತಿದ್ದರು.
‘‘ಪಾಕಿಸ್ತಾನಕ್ಕೆ 55 ಕೋಟಿ ಕೊಡದಿರುವುದೇ ಲೇಸು?’’
‘‘ಈ ಮುದುಕನ ಪೀಕಲಾಟ ಯಾವಾಗ ನಿಲ್ಲುತ್ತದೋ?’’
‘‘ಆತ ಕೊನೆ ಉಸಿರು ಎಳೆದಾಗ’’
ಹೀಗೆ ಒಂದೊಂದು ಕಡೆ ಒಂದೊಂದು ಬಗೆಯ ಮಾತು ಜಿ.ಎಸ್.ಸಿನ್ಹಾಗೆ ಪರಮಾಶ್ಚರ್ಯವಾಯಿತು!
ಬಿರ್ಲಾ ಭವನದ ಮುಂದೆ ಕೆಲವರು ನಿರಾಶ್ರಿತರು ಪ್ರದರ್ಶನ ನಡೆಸುತ್ತಿದ್ದರು. ಪ್ರದರ್ಶನಕಾರರು ಘೋಷಣೆ ಕೂಗುತ್ತಿದ್ದರು. ಬ್ಯಾನರ್ ಹಿಡಿದು ಕಿರುಚಿಕೊಳ್ಳುತ್ತಿದ್ದರು. ಆ ಕೂಗು, ಕಿರುಚಾಟ ಬಿರ್ಲಾ ಭವನದ ಮಹಾದ್ವಾರದ ಬಳಿ ಬಂದಾಗ, ಗಾಂಧೀಜಿಯ ಆಪ್ತ ಕಾರ್ಯದರ್ಶಿ ಹೊರಬಂದರು. ಅವರು ಕೂಗುತ್ತಿದ್ದ ಘೋಷಣೆ ಕೇಳಿದರು, ಗಾಂಧೀಜಿ ಕೊಠಡಿಗೆ ಹಿಂದಿರುಗಿದರು.
ಗಾಂಧೀಜಿಗೆ ಮಹಾದ್ವಾರದ ಹೊರಗೆ ಆಗುತ್ತಿದ್ದ ಗದ್ದಲ ಕಿವಿಗೆ ಬಿದ್ದಿತ್ತು. ಪ್ಯಾರೇಲಾಲ್ ಒಳಬಂದದ್ದನ್ನು ಕಂಡು,
‘‘ಅಲ್ಲೇನು ನಡೆಯುತ್ತಿದೆ?’’
‘‘ಪ್ರದರ್ಶನ ನಡೆಸುತ್ತಿದ್ದಾರೆ. ಘೋಷಣೆ ಕೂಗುತ್ತಿದ್ದಾರೆ’’
‘‘ಬಹಳ ಜನರಿದ್ದಾರೆಯೇ?’’
‘‘ಇಲ್ಲ. ಎಲ್ಲೋ ಒಂದಿಷ್ಟು ಜನ’’
‘‘ಏನು ಕೂಗುತ್ತಿದ್ದಾರೆ?’’
ಪ್ಯಾರೇಲಾಲ್ ಕೂಡಲೇ ಉತ್ತರ ಕೊಡಲಾರದೆ ಹೇಳಬೇಕೆಂದಿರುವ ಮಾತನ್ನು ಮನದಲ್ಲಿಯೇ ಹೊಂದಿಸಿಕೊಂಡು ನಿಧಾನವಾಗಿ:
‘‘ಗಾಂಧಿ ಸಾಯಲಿ!’’ ಎಂದು ಕಿರಿಚುತ್ತಿದ್ದಾರೆ.
ಗಾಂಧೀಜಿ ಈ ಮಾತು ಕೇಳಿದರು. ಏನೂ ಕೇಳದವರಂತೆ ಕಣ್ಣು ಮುಚ್ಚಿಕೊಂಡರು.
ಇತ್ತ ದಿಲ್ಲಿ ಬಿರ್ಲಾ ಭವನದ ಮುಂದೆ ಬಹಿರಂಗವಾಗಿ ಕೂಗುತ್ತಿದ್ದ ಮಾತುಗಳನ್ನು ಕೃತಿಗಿಳಿಸಲು ಅಲ್ಲಿ ಮುಂಬೈನಲ್ಲಿ ವೀರ ಸಾವರ್ಕರ್‌ರ ವಾಸದ ಮನೆ ‘ಸಾವರ್ಕರ್ ಸದನ’ದ ಉಪ್ಪರಿಗೆಯಲ್ಲಿ ಪಿತೂರಿ ನಡೆದಿತ್ತು. ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ತಮ್ಮ ವೀರನಾಯಕ ಶಿಖಾಮಣಿಯ ಮುಂದೆ, ಆ ಹಿಂದೆ ಎರಡು ರಾಜಕೀಯ ಕೊಲೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದ ಸಾವರ್ಕರ್‌ರ ಮುಂದೆ ತಾವು ತಂದಿದ್ದ ಒಂದು ತಬಲದ ಮುಚ್ಚಳ ಬಿಚ್ಚಿ ತೋರಿಸಿದರು. ಅದರಲ್ಲಿ ಬಡಗೆ ಎಂಬ ಸಾಧು ವೇಷದ ಡೋಂಗಿ ಚೋರ ಸನ್ಯಾಸಿ ಅಡಗಿಸಿಟ್ಟಿದ್ದ ಹತ್ಯೆಯ ಹತಾರಗಳನ್ನು ಹೊರತೆಗೆದರು. ಚೂರಿ, ಅಬ್ಜಲ್ ಖಾನನ ಹೊಟ್ಟೆ ಸೀಳಲು ಶಿವಾಜಿ ಉಪಯೋಗಿಸಿದ್ದ ಉಕ್ಕಿನ ಹುಲಿ ಉಗುರು, ಕೈ ಬಾಂಬ್‌ಗಳು, ಒಂದು ನಾಡ ಪಿಸ್ತೂಲು... ತಬಲದಿಂದ ಹೊರತೆಗೆದರು. ವೀರ ಸಾವರ್ಕರ್‌ರ ಮುಂದೆ ಹರವಿದರು. ಅದಕ್ಕಿಂತ ಮೊದಲು ಒಂದು ವಾರದ ಹಿಂದೆ ‘ಡೆಕ್ಕನ್ ಗೆಸ್ಟ್ ಹೌಸ್’ ಮಾಲಕ ವಿಷ್ಣು ಕರಕರೆ ಎಂಬ ಇನ್ನೊಬ್ಬ ಚಿತ್ಪಾವನ ಬ್ರಾಹ್ಮಣ, ಪಾಕಿಸ್ತಾನದಿಂದ ಓಡಿಬಂದು ಮುಂಬೈಯಲ್ಲಿ ಅವನ ಸೇವಕನಾಗಿದ್ದ ಮದನಲಾಲ ಪಹ್ವಾ ಎಂಬ ನಾವಿಕ ದಳದಲ್ಲಿದ್ದ 20 ವರ್ಷದ ಯುವಕನನ್ನು ಸಾವರ್ಕರ್‌ರಿಗೆ ಭೇಟಿ ಮಾಡಿಸಿದ್ದ. ಅವನನ್ನು ಪರಿಚಯಿಸುತ್ತಾ:
‘‘ಇವನು ಪಾಕಿಸ್ತಾನದ ಫಿರೋಝ್‌ಪುರದಿಂದ, ಆಸ್ಪತ್ರೆಯಲ್ಲಿದ್ದ ತನ್ನ ತಂದೆಯನ್ನು ಬಿಟ್ಟು ಓಡಿಬಂದಿದ್ದ ನಿರಾಶ್ರಿತ. ಅವನ ತಂದೆಯನ್ನು ಅಲ್ಲಿಯ ಮುಸ್ಲಿಮರು ಕೊಂದರು. ಇವನು ಗಾಂಧೀಜಿಯ ಮೇಲೆ ಸೇಡು ತೀರಿಸಿಕೊಳ್ಳಲು ದೃಢ ಸಂಕಲ್ಪ ಮಾಡಿದ್ದಾನೆ. ಯಾವ ತ್ಯಾಗಕ್ಕೂ ಸಿದ್ಧ! ಪ್ರಾಣಾರ್ಪಣೆ ಮಾಡಲು ನೇಣುಗಂಬಕ್ಕೆ ಶಿರವೊಡ್ಡಲು ಸಿದ್ಧ!’’
ಸಾವರ್ಕರ್ ನೆಟ್ಟ ನೋಟದಿಂದ ನೋಡುತ್ತ, ಅವನ ದೃಢ ಸಂಕಲ್ಪವನ್ನು ಮೆಚ್ಚಿ ತಲೆದೂಗುತ್ತಾ ಆಶೀರ್ವಾದ ದೃಷ್ಟಿ ಬೀರಿದ್ದರು. ಒಂದೇ ಮಾತು ಹೇಳಿದ್ದರು:
‘‘ದೃಢ ನಿರ್ಧಾರ ಬಿಡಬೇಡ! ನಿನ್ನ ಒಳ್ಳೆಯ ಕೆಲಸ ಮುಂದುವರಿಸು!’’
‘‘ಅಪ್ಪಣೆ’’ ಎನ್ನುವಂತೆ ಮದನಲಾಲ ತಲೆಬಾಗಿದ ಸಾವರ್ಕರ್‌ರ ಮುಂದೆ.
ಗಾಂಧೀಜಿಯ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿತು. ಜನವರಿ 15 ಅವರ ನಿತ್ಯ ಆರೋಗ್ಯ ತಪಾಸಣೆ ಮಾಡಿ ದಿನಂಪ್ರತಿ ಆರೋಗ್ಯ ತಪಾಸಣೆಯ ಬುಲೆಟೆನ್ ಹೊರಡಿಸುತ್ತಿದ್ದ ಡಾ.ಸುಶೀಲಾ ನಯ್ಯರ್ ಅಂದು ದೇಹ ಪರೀಕ್ಷೆ ಮಾಡಿ ಗಾಬರಿಗೊಂಡರು. ಗಾಂಧೀಜಿಯ ಮೂತ್ರಕೋಶ ಕೆಲಸ ಮಾಡುತ್ತಿರಲಿಲ್ಲ. ಮೂರು ದಿನ ಕುಡಿದಿದ್ದ ನೀರು ಮೂತ್ರನಾಳದಿಂದ ಹೊರಬಂದಿರಲಿಲ್ಲ. 103 ಡಿಗ್ರಿ ಜ್ವರ! ಬಹಳ ನಿತ್ರಾಣ. ಶೌಚಾಲಯಕ್ಕೆ ಹೋಗಲೆಂದು ಎರಡು ಹೆಜ್ಜೆ ಇಟ್ಟಾಗ ತಲೆ ಸುತ್ತು ಬಂದು ಬಿದ್ದುಬಿಟ್ಟರು. ಸುಶೀಲಾ ನಯ್ಯರ್ ಕಳವಳಗೊಂಡರು. ಕಲ್ಕತ್ತಾದಲ್ಲಿ ಉಪವಾಸವ್ರತ ಕೈಗೊಂಡಿದ್ದಾಗಲೇ ಮೂತ್ರಪಿಂಡ ಹಾನಿಗೊಳಗಾಗಿತ್ತು. ಈಗ ಇನ್ನೂ ಹಾಳಾಗಿತ್ತು. ಉಪವಾಸ ಬಿಡದಿದ್ದರೆ ಆಗಬಹುದಾದ ಅಪಾಯವನ್ನು ಗಾಂಧೀಜಿಗೆ ವಿವರಿಸಿ:
‘‘ಬಾಪೂ ಉಪವಾಸ ನಿಲ್ಲಿಸಿ. ಮೂತ್ರದಲ್ಲಿ ಅಸಿಟೋನ್ ವಿಷ ಸಂಗ್ರಹವಾಗಿದೆ. ಜೀವಕ್ಕೆ ಅಪಾಯ...’’
‘‘ಅಂದರೆ ರಾಮನಲ್ಲಿ ನನಗೆ ಸಾಕಷ್ಟು ಭಕ್ತಿಯಿಲ್ಲ ಎಂದಾಯ್ತು!’’
ಗಾಂಧೀಜಿಯ ಈ ಉತ್ತರ ಕೇಳಿ ವೈದ್ಯೆಗೆ ತುಸು ಅಸಮಾಧಾನವೇ ಆಗಿರಬೇಕು. ಏನಿದು ಈ ಮುದುಕನ ವೌಢ್ಯ ಅನಿಸಿರಬೇಕು. ಒಂದಿಷ್ಟು ಅಸಮಾಧಾನದಿಂದಲೇ, ‘‘ನಿಮ್ಮ ಕಿಡ್ನಿ ಕೆಲಸ ಮಾಡುವುದಕ್ಕೂ ರಾಮನಿಗೂ ಸಂಬಂಧವಿಲ್ಲ’’ ಎಂದಳು.
ಗಾಂಧೀಜಿ ಕಣ್ಣು ಬಿಟ್ಟು, ಬೊಚ್ಚು ಬಾಯಿ ನಸು ನಗೆ ಸೂಸಿ:
‘‘ನಿಮ್ಮ ವಿಜ್ಞಾನ ಎಲ್ಲದನ್ನೂ ಬಲ್ಲುದೇ? ಗೀತೆಯ ಉಪದೇಶ ಮರೆತೆಯಾ. ನನ್ನಲ್ಲಿ ವಿಶ್ವವೇ ಅಡಗಿದೆ’’
ಇದಕ್ಕೆ ಯಾರು ಉತ್ತರ ಕೊಡಬಲ್ಲರು? ಸುಶೀಲಾ ಸುಮ್ಮನಾದರು. ಇದುವರೆಗೆ ದಿನಕ್ಕೊಮ್ಮೆ ಸಂಜೆ ಗಾಂಧೀಜಿಯ ಆರೋಗ್ಯ ವರದಿಯನ್ನು ಕೊಡುತ್ತಿದ್ದರು. ಸಂಜೆ ಆಕಾಶವಾಣಿ ಅದನ್ನು ಬಿತ್ತರಿಸುತ್ತಿತ್ತು. ಇನ್ನು ಮುಂದೆ ಗಂಟೆಗೊಮ್ಮೆ ಆರೋಗ್ಯ ತಪಾಸಣಾ ವರದಿ ಕೊಡಲು ಪ್ರಾರಂಭಿಸಿದರು.
‘‘ಬಾಪೂ! ಪ್ರಾಣಾಪಾಯ ಹೆಚ್ಚಾಯಿತು!’’ ಎಂದರು ಸುಶೀಲಾ ನಯ್ಯರ್.
‘‘ಭಗವಂತನಿಗೆ ನಾನು ಉಳಿಯಬೇಕೆಂಬ ಇಚ್ಛೆಯಿದ್ದರೆ ಬದುಕಿಸುತ್ತಾನೆ’’ ಎಂದರು ಗಾಂಧೀಜಿ.
ಜನವರಿ 17 ಸಂಜೆ ನೆಹರೂ ಕೆಂಪುಕೋಟೆ ಮೈದಾನದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಹತ್ತು ಸಾವಿರ ಜನ ಉಸಿರು ಬಿಗಿ ಹಿಡಿದು ಅವರ ಮಾತು ಕೇಳಿದರು:
‘‘ಗಾಂಧೀಜಿಯ ಜೀವನಷ್ಟ ಭಾರತದ ಆತ್ಮನಷ್ಟ ಎಂದೇ ಅರ್ಥ. ಅವರ ಪ್ರಾಣ ಉಳಿಸುವುದು ನಮ್ಮ ನಿಮ್ಮ ಕೈಯಲ್ಲಿದೆ. ಶಹರದಲ್ಲಿ ಕೋಮುಸೌಹಾರ್ದವನ್ನು ಕಾಪಾಡಿ ಗಾಂಧೀಜಿಯ ಪ್ರಾಣ ಉಳಿಸಿ...’’ ನೆಹರೂ ಕಳಕಳಿಯ ಮನವಿ ಮಾಡಿದರು.
‘‘ಗಾಂಧೀಜಿಯ ಇಚ್ಛೆಯಂತೆ ಪಾಕಿಸ್ತಾನಕ್ಕೆ 55 ಕೋಟಿ ಕೊಡಲು ಭಾರತ ಸರಕಾರ ಒಪ್ಪಿದೆ’’ ಎಂದು ಬಹಿರಂಗಪಡಿಸಿದರು.
(ಮುಂದುವರಿಯುವುದು)