ಬಡವರ ರಾಜ ಶಿವಾಜಿ

Update: 2019-02-16 15:12 GMT

ಜಾತ್ಯತೀತ ಭಾವನೆ, ಸಮಾನತೆ, ಸಹೋದರತ್ವ ಮುಂತಾದವು ಶಿವಾಜಿಯ ಸದ್ಗುಣ ಗಳಾಗಿದ್ದವು. ಶಿವಾಜಿ ಸ್ಥಾಪಿಸಿದ್ದು ಹಿಂದವೀ ಸ್ವರಾಜ್ಯ. ಅವನ ಹಿಂದವೀ ಸ್ವರಾಜ್ಯದಲ್ಲಿ ದಲಿತರು, ಹಿಂದುಳಿದವರು, ಆದಿವಾಸಿಗಳು ಮತ್ತು ಮುಸ್ಲಿಮರು ಸಮಾನ ಗೌರವದೊಂದಿಗೆ ಬದುಕುತ್ತಿದ್ದರು. ಶಿವಾಜಿಯ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ಇವರೆಲ್ಲ ಶಿವಾಜಿಗಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗಿದ್ದರು.

ರಂಜಾನ್ ದರ್ಗಾ

ಭಾರತ ದೇಶದಲ್ಲಿ ಜನಸಾಮಾನ್ಯರ ಬಳಿಗೆ ನೇರವಾಗಿ ಹೋಗಿ ಅವರ ಸಮಸ್ಯೆಗಳನ್ನು ವಿಚಾರಿಸಿದ ಮೊದಲ ರಾಜ ಶಿವಾಜಿ ಮಹಾರಾಜ. ಹಿಂದವೀ ಸ್ವರಾಜ್ಯ ಎಂಬ ನವ ರಾಜ್ಯ ನಿರ್ಮಾಪಕನಾದ ಶಿವಾಜಿ, ಜಮೀನುದಾರಿ ಪದ್ಧತಿಯಿಂದ ರೈತಾಪಿ ಪದ್ಧತಿಯನ್ನು ತರಲು ಪ್ರಯತ್ನಿಸಿದ ಮೊದಲ ರಾಜನಾಗಿದ್ದಾನೆ.

ಜಹಗೀರದಾರ, ದೇಶಮುಖ, ವತನದಾರ (ಗೌಡ), ಕುಲಕರ್ಣಿ ಮುಂತಾದವರು ಜನರ ಮಾಲಕರಲ್ಲ ರಾಜ್ಯದ ನೌಕರರು ಎಂದು ಸಾರಿದ. ಈ ಗ್ರಾಮಾಧಿಕಾರಿಗಳು ಪ್ರಜೆಗಳನ್ನು ಪೀಡಿಸಿದರೆ ಶಿವಾಜಿಯ ಕಠಿಣ ಶಿಕ್ಷೆಗೆ ಗುರಿಯಾಗಬೇಕಿತ್ತು.

ಈ ಹೊಸ ವ್ಯವಸ್ಥೆಯಿಂದಾಗಿ ರಾಜ ಮತ್ತು ಪ್ರಜೆಗಳ ಮಧ್ಯೆ ಅನ್ಯೋನ್ಯ ಸಂಬಂಧ ಬೆಳೆಯಿತು. ಜನಸಾಮಾನ್ಯರು ಶಿವಾಜಿ ರಾಜ್ಯವನ್ನು ತಮ್ಮ ರಾಜ್ಯ ಎಂದು ತಿಳಿದುಕೊಳ್ಳುವಷ್ಟರ ಮಟ್ಟಿಗೆ ಈ ಸಂಬಂಧ ಬೆಳೆದಿತ್ತು.

ಪುಣೆಯು ಶಿವಾಜಿ ಮಹಾರಾಜರ ತಂದೆಯಾದ ಶಹಾಜಿಯ ಜಹಗೀರಾಗಿತ್ತು. ಮೊಗಲರು ಮತ್ತು ಆದಿಲ್ ಶಾಹಿಗಳ ಗಡಿ ಪ್ರದೇಶದಲ್ಲಿ ಪುಣೆ ಇದ್ದ ಕಾರಣ ಅನೇಕ ಸಲ ದಾಳಿಗಳಿಗೆ ತುತ್ತಾಗಿ ಗ್ರಾಮಗಳು ಧ್ವಂಸಗೊಂಡು ಹಾಳು ಬಿದ್ದಿದ್ದವು. ಶಿವಾಜಿ ಅವುಗಳ ಪುನರ್ ನಿರ್ಮಾಣ ಮಾಡಿದ. ಹೊಸದಾಗಿ ಹೊಲ ಮಾಡುವವನಿಗೆ ಬೀಜಕಾಳುಗಳನ್ನು ಮತ್ತು ಕೃಷಿ ಸಲಕರಣೆಗಳನ್ನು ನೀಡುವ ಮೂಲಕ ಒಕ್ಕಲುತನವನ್ನು ಪ್ರೋತ್ಸಾಹಿಸಿದ. ಹೊಸದಾಗಿ ಉಳುಮೆ ಮಾಡುವ ರೈತರಿಂದ ಅತೀ ಕಡಿಮೆ ಕಂದಾಯ ವಸೂಲಿ ಮಾಡುವ ವ್ಯವಸ್ಥೆ ಮಾಡಿದ. ಬೆಳೆ ಬರುವ ತನಕ ಆಹಾರ ಧಾನ್ಯ ಒದಗಿಸಿದ. ಸಾಲ ಕೊಡುವ ವ್ಯವಸ್ಥೆ ಮಾಡಿದ. ನಂತರ 4 ವರ್ಷಗಳಲ್ಲಿ ರೈತರಿಗೆ ಹೊರೆಯಾಗದಂತೆ ಸಾಲ ಮರುಪಾವತಿ ಮಾಡಲು ಅಧಿಕಾರಿಗಳಿಗೆ ತಿಳಿಸಿದ. ರೈತರಿಗೆ ಕಿರುಕುಳ ಕೊಡದಂತೆ ಅವರನ್ನು ಎಚ್ಚರಿಸಿದ. ಎಲ್ಲ ರೈತರ ಭೂಮಿಯನ್ನು ಅಳತೆ ಮಾಡಿ ಕಂದಾಯವನ್ನು ನಿಗದಿಪಡಿಸಲಾಯಿತು. ಬರಗಾಲದಲ್ಲಿ ಕಂದಾಯ ವಸೂಲಿಯನ್ನು ನಿಲ್ಲಿಸಲಾಯಿತು. ಬರಗಾಲದಿಂದ ತತ್ತರಿಸಿದ ರೈತರಿಗೆ ಶಿವಾಜಿ ಸಹಾಯ ಹಸ್ತ ಚಾಚಿದ.

‘‘ಯಾವ ಸೈನ್ಯವೂ ರೈತನ ಫಸಲನ್ನು ನಾಶ ಮಾಡಬಾರದು. ಪ್ರಜೆಗಳ ಹುಲ್ಲಿಗೂ ಸೈನಿಕರು ಕೈ ಹಚ್ಚಬಾರದು. ಕುದುರೆಗೆ ಬೇಕಾದ ಹುಲ್ಲನ್ನು ರೈತರಿಗೆ ಹಣ ಕೊಟ್ಟು ಕೊಳ್ಳಬೇಕು. ಆಹಾರ ಧಾನ್ಯ ಮತ್ತು ಹುಲ್ಲಿಗಾಗಿ ಹಣ ಕೊಡಲಾಗಿದೆ. ಪ್ರಜೆಗಳಿಗೆ ಯಾವುದೇ ರೀತಿಯಿಂದ ಕಿರುಕುಳ ಕೊಡಬಾರದು’’ ಎಂದು ಆದೇಶಿಸಿದ. ‘‘ನಾವೆ ನಿರ್ಮಿಸಲು ಬೇಕಾದ ಮಾವು ಮತ್ತು ಹಲಸಿನ ಮರಗಳನ್ನು ಕೂಡ ಕಡಿಯಬಾರದು. ಪ್ರಜೆಗಳು ಮಕ್ಕಳಂತೆ ಈ ಫಲ ಕೊಡುವ ಮರಗಳನ್ನು ಬೆಳೆಸಿರುತ್ತಾರೆ ಎಂಬುದನ್ನು ಮರೆಯಬಾರದು’’ ಎಂದು ಶಿವಾಜಿ ಹೇಳಿದ್ದು ಪ್ರಜೆಗಳ ಬಗ್ಗೆ ಅವರಿಗಿರುವ ಕಾಳಜಿಯ ಪ್ರತೀಕವಾಗಿದೆ.

ಶಿವಾಜಿಯ ಬಹಳಷ್ಟು ಸೈನಿಕರು ಯುದ್ಧ ಸಂದರ್ಭದಲ್ಲಿ ಮಾತ್ರ ಸೈನಿಕರಾಗಿರುತ್ತಿದ್ದರು. ಉಳಿದ ವೇಳೆ ತಮ್ಮ ಹಳ್ಳಿಗಳಲ್ಲಿ ಕುಟುಂಬ ದೊಡನೆ ವಾಸಿಸುತ್ತ ಹೊಲ ಗದ್ದೆಗಳನ್ನು ನೋಡಿಕೊಳ್ಳುತ್ತಿದ್ದರು. ಸೈನಿಕರಿಗೆ ಸಂಬಳದ ವ್ಯವಸ್ಥೆ ಮಾಡಿದ್ದು ಶಿವಾಜಿಯ ವೈಶಿಷ್ಟವಾಗಿದೆ.

ಗೌಡರ ಮತ್ತು ಜಮೀನುದಾರರ ಅವ್ಯವಸ್ಥೆಯನ್ನು ಸರಿಪಡಿಸಿದ. ಗೌಡರು ಮತ್ತು ಜಮೀನುದಾರರ ಬದಲಿಗೆ ಅಧಿಕಾರಿಗಳನ್ನು ನೇಮಿಸಿ ಕಂದಾಯ ವಸೂಲಿ ಮಾಡಿಸಿದ. ಇದರಿಂದಾಗಿ ಗೌಡರು, ಜಮೀನುದಾರರು ಮುಂತಾದ ಗ್ರಾಮೀಣ ಜನರ ಪೀಡಕರಾಗಿದ್ದವರ ಅಧಿಕಾರ ಕಿತ್ತುಕೊಂಡು ಅವರನ್ನು ಹದ್ದುಬಸ್ತಿನಲ್ಲಿಟ್ಟ. ಪ್ರಜೆಗಳನ್ನು ಗುಲಾಮರಾಗಿಸುವ ದೇಶಮುಖ, ದೇಶಪಾಂಡೆ ಅವರಂಥ ಗ್ರಾಮಾಧಿಕಾರಿಗಳ ವಾಡೆ ಮತ್ತು ಬುರುಜುಗಳನ್ನು ನೆಲಸಮ ಗೊಳಿಸಿದ. ಗ್ರಾಮೀಣ ಜನರ ಹಾಗೆ ಅವರೂ ಸಾಧಾ ಮನೆಯಲ್ಲಿ ಇರಬೇಕೆಂದು ಆಜ್ಞೆ ಹೊರಡಿಸಿದ. ಅಂತೆಯೆ ಜ್ಯೋತಿಭಾ ಪುಲೆ ಅವರು ಶಿವಾಜಿಯನ್ನು ಕೃಷಿಕ ಭೂಷಣ ಎಂದು ಕರೆದಿದ್ದಾರೆ.

ರಾಜರು, ಮಂತ್ರಿಗಳು, ಜಮೀನುದಾರರು, ದೇಶಮುಖರು, ಗೌಡರು ಮುಂತಾದ ಶ್ರೀಮಂತ ವರ್ಗದವರು ಹೆಣ್ಣನ್ನು ಭೋಗವಸ್ತು ಎಂದು ಪರಿಗಣಿಸಿದ್ದರು. ಯಾರ ಎದುರಿಗೆ ನ್ಯಾಯ ಬಯಸಿ ಹೋಗಬೇಕಾಗಿತ್ತೋ ಅವರೇ ಬಯಸಿದ ಹೆಣ್ಣನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡುತ್ತಿದ್ದರು.

ರಾಂರಝಾ ಪಾಟೀಲ ಎಂಬ ಗೌಡ ಒಬ್ಬ ರೈತನ ಮಗಳನ್ನು ಹಾಡ ಹಗಲೇ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ. ಆ ಯುವತಿ ಆತ್ಮಹತ್ಯೆ ಮಾಡಿಕೊಂಡಳು. ಈ ವಿಷಯ ಶಿವಾಜಿಯ ಗಮನಕ್ಕೆ ಬಂದಿತು. ಕೂಡಲೆ ಆತನನ್ನು ಬಂಧಿಸಿ ಕೈ ಕಾಲು ಕಡಿಯುವ ಆಜ್ಞೆಯನ್ನು ಶಿವಾಜಿ ಮಾಡಿದ.

1678ರಲ್ಲಿ ಸುಖಜಿ ಗಾಯಕವಾಡ ಎಂಬ ಸೇನಾಪತಿ ಮಲ್ಲಮ್ಮನ ಬೆಳವಡಿ ಕೋಟೆಗೆ ಮುತ್ತಿಗೆ ಹಾಕಿದ. ಸಾವಿತ್ರಿಬಾಯಿ ದೇಸಾಯಿ ಎಂಬ ಮಹಿಳೆ ಆ ಕೋಟೆಯ ರಕ್ಷಣಾಧಿಕಾರಿಯಾಗಿದ್ದಳು. ಆ ವೀರ ಮಹಿಳೆ ಕೋಟೆಯ ರಕ್ಷಣೆಗಾಗಿ 27 ದಿನಗಳವರೆಗೆ ಹೋರಾಡಿದಳು. ಕೊನೆಗೆ ಸುಖಜಿ ಆ ಕೋಟೆಯನ್ನು ಗೆದ್ದುಕೊಂಡ. ವಿಜಯೋನ್ಮಾದದಿಂದ ಸಾವಿತ್ರಿಬಾಯಿಯ ಮೇಲೆ ಅತ್ಯಾಚಾರ ಮಾಡಿದ. ಶಿವಾಜಿಗೆ ಈ ಸುದ್ದಿ ತಲುಪಿತು. ಆ ಸೇನಾಪತಿಯ ಕಣ್ಣು ಕೀಳಿಸಿ ಜೈಲಿಗಟ್ಟಿದ. ಕಲ್ಯಾಣದ ಮುಸ್ಲಿಂ ಸುಬೇದಾರನ ಸುಂದರ ಸೊಸೆಯನ್ನು ಶಿವಾಜಿಯ ಸೈನಿಕರು ಬಂಧಿಸಿ ಶಿವಾಜಿಯ ಬಳಿ ತಂದರು. ಶಿವಾಜಿ ಫಲ ತಾಂಬೂಲ ನೀಡಿ ಅವಳನ್ನು ಗೌರವಿಸಿದ ನಂತರ ಸುರಕ್ಷಿತವಾಗಿ ಮನೆ ತಲುಪುವಂತೆ ಮಾಡಿದ. ಯುದ್ಧದಲ್ಲಿ ಯಾವುದೇ ಮಹಿಳೆ ಸಿಕ್ಕರೂ ಅವಳನ್ನು ಸ್ಪರ್ಶಿಸಲು ಕೂಡ ಸಾಧ್ಯವಾಗದಂಥ ಆಜ್ಞೆಯನ್ನು ಹೊರಡಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ.

ತನ್ನ ಧರ್ಮದಂತೆ ಇತರರ ಧರ್ಮವೂ ಶ್ರೇಷ್ಠ. ದೇವರ ಆರಾಧನಾ ಪದ್ಧತಿ ಭಿನ್ನವಾಗಿದ್ದರೂ ಅದರ ಉದ್ದೇಶ ಒಂದೇ. ಅದು ದೇವರಿಗೆ ವಿಧೇಯನಾಗಿರುವುದು ಎಂಬ ಶಿವಾಜಿಯ ಮಾತು ಇಂದಿನ ಭಾರತದ ಸ್ಥಿತಿಗೆ ದಾರಿದೀಪವಾಗಿದೆ. 1669ನೇ ನವೆಂಬರ್ 2 ರಂದು ತನ್ನ ಒಂದು ಪತ್ರದಲ್ಲಿ ರಘು ನಾಥ ಪಂಡಿತರಾವ್ ಎಂಬ ಅಧಿಕಾರಿ ಶಿವಾಜಿ ಮಹಾರಾಜರ ಆಜ್ಞೆಯನ್ನು ಹೀಗೆ ಉಲ್ಲೇಖಿಸಿದ್ದಾನೆ. ‘‘ಜನ ತಮ್ಮ ತಮ್ಮ ಧರ್ಮ ಪಾಲಿಸಬೇಕು. ಅದರಲ್ಲಿ ಉಳಿದವರು ಹಸ್ತಕ್ಷೇಪ ಮಾಡಬಾರದು ’’ಎಂದು ಶ್ರೀಮಂತ ಮಹಾರಾಜ ರಾಜೇ (ಶಿವಾಜಿ ಮಹಾ ರಾಜರು) ಆದೇಶಿಸಿದ್ದಾರೆ.

ಸೂರತ್ ದಾಳಿಯ ಸಂದರ್ಭದಲ್ಲಿ ಅಲ್ಲಿನ ಹಝ್ರತ್ ಬಾಬಾ ದರ್ಗಾಕ್ಕೆ ಹಾನಿ ಮಾಡಬಾರದು ಎಂದು ಶಿವಾಜಿ ಸೈನಿಕರಿಗೆ ಎಚ್ಚರಿಸಿದ. ಆ ದರ್ಗಾಕ್ಕೆ ಅರ್ಪಿಸಲು ಕಾಣಿಕೆಗಳನ್ನು ಕಳಿಸಿದ್ದ. ಸೂರತ್ ನಗರದಲ್ಲಿನ ಫಾದರ್ ಅಂಬ್ರೋಸ್ ಪಿಂಟೋ ಅವರ ಆಶ್ರಮಕ್ಕೆ ಕೂಡ ಯಾವುದೇ ತೆರನಾದ ಹಾನಿ ಸಂಭವಿಸಬಾರದು ಎಂದು ಎಚ್ಚರಿಸಿದ್ದ.

ಖಾಫಿ ಖಾನ್ ಎಂಬ ಮುಸ್ಲಿಂ ಚರಿತ್ರೆಕಾರ ಶಿವಾಜಿ ಬಗ್ಗೆ ಹೀಗೆ ಬರೆದಿದ್ದಾನೆ: ಶಿವಾಜಿ ಸೈನಿಕರ ಬಗ್ಗೆ ಮಾಡಿದ ಕಟ್ಟುನಿಟ್ಟಿನ ನಿಯಮವೆಂದರೆ, ಸೈನಿಕರು ಯುದ್ಧಕ್ಕೆ ಹೋದ ಕಡೆ ಅಲ್ಲಿಯ ಮಸೀದಿಗಾಗಲಿ, ಕುರ್‌ಆನ್ ಗ್ರಂಥಕ್ಕಾಗಲಿ, ಮಹಿಳೆಗಾಗಲಿ ತೊಂದರೆ ಕೊಡುವಂತಿಲ್ಲ. ಒಂದು ವೇಳೆ ಕುರಾನ್ ಗ್ರಂಥ ಕೈಗೆ ಸಿಕ್ಕರೆ, ಅದಕ್ಕೆ ಪೂಜ್ಯ ಭಾವನೆ ಸಲ್ಲಿಸಿ, ಅದನ್ನು ತನ್ನ ಮುಸ್ಲಿಂ ಅಧಿಕಾರಿಗಳಿಗೆ ನೀಡುತ್ತಿದ್ದ. ಹಿಂದೂ ಇಲ್ಲವೆ ಮುಸ್ಲಿಂ ಸ್ತ್ರೀಯರು ಸಿಕ್ಕರೆ, ಅವರ ರಕ್ಷಣೆಗೆ ಯಾರೂ ಇರದಿದ್ದರೆ, ಅವರ ಸಂಬಂಧಿಕರು ಬಿಡುಗಡೆಗೊಳಿಸಲು ಬರುವವರೆಗೆ ಸ್ವತಃ ಶಿವಾಜಿ ಆ ಮಹಿಳೆಯರ ರಕ್ಷಣೆ ಮಾಡುತ್ತಿದ್ದ.

ಶಿವಾಜಿ ತನ್ನ ರಾಜಧಾನಿಯಾದ ರಾಯಗಡದಲ್ಲಿ ಜಗದೀಶ್ವರ ಮಂದಿರದ ಮಗ್ಗುಲಲ್ಲೇ ಮುಸ್ಲಿಮರಿಗಾಗಿ ಈದ್ಗಾ ಕಟ್ಟಿಸಿದ್ದ.

ಶಿವಾಜಿಯ 18 ದಂಡನಾಯಕರಲ್ಲಿ 12 ಮಂದಿ ದಂಡ ನಾಯಕರು ಮುಸ್ಲಿಮರಿದ್ದರು. ಶಿವಾಜಿ ಮರಾಠಾ ಸಾಮ್ರಾಜ್ಯವನ್ನು ಕಟ್ಟಿದ್ದು ದಲಿತರು, ಬುಡಕಟ್ಟು ಜನರು ಮತ್ತು ಮುಸ್ಲಿಮರ ನೆರವಿನಿಂದ. ಶಿವಾಜಿ ಸೇನೆಯಲ್ಲಿ 60 ಸಾವಿರಕ್ಕೂ ಹೆಚ್ಚು ಮುಸ್ಲಿಮರಿದ್ದರು. ಶಿವಾಜಿಯ ಅಂಗರಕ್ಷಕರಲ್ಲಿ ಮುಸ್ಲಿಮರು ಮತ್ತು ದಲಿತರು ಹೆಚ್ಚಾಗಿದ್ದರು.

ಶಿವಾಜಿಗಾಗಿ ತ್ಯಾಗಕ್ಕೆ ಸಿದ್ಧರಾಗಿದ್ದ ಜನ

ಶಿವಾಜಿ ಜಾತ್ಯತೀತವನ್ನು ಪಾಲಿಸುತ್ತಿದ್ದ. ಈ ಕಾರಣದಿಂದಲೇ ದಲಿತರು, ಮುಸ್ಲಿಮರು ಮತ್ತು ಬುಡಕಟ್ಟು ಜನರು ಅವನಿಗೆ ಅತಿಯಾದ ನಿಷ್ಠೆ ತೋರುತ್ತಿದ್ದರು. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಶಿವಾಜಿಯ ರಕ್ಷಣೆ ಮಾಡುತ್ತಿದ್ದರು.

ಔರಂಗಜೇಬನ ನಿಷ್ಠಾವಂತ ಸರ್ದಾರ ರಾಜೇ ಜಯಸಿಂಗನ ಎದುರು ಶಿವಾಜಿ ಮಹಾರಾಜ ಸೋಲು ಅನುಭವಿಸ ಬೇಕಾಯಿತು. ಅವರನ್ನು ಆಗ್ರಾದ ಸೆರೆಮನೆಯಲ್ಲಿಡಲಾಯಿತು. ಆ ಸಂದರ್ಭದಲ್ಲಿ ಹುಸಿ ಶಿವಾಜಿಯನ್ನು ಸಿದ್ಧಗೊಳಿಸಿ ಶಿವಾಜಿ ವಹಾರಾಜರನ್ನು ಪಾರುಮಾಡಲಾಯಿತು. ಆಗ ಸಾವು ಎದುರಿಸಲು ಕೊನೆಗೆ ಉಳಿದವರೆಂದರೆ ಮದಾರಿ ಮೆಹತರ್ ಮತ್ತು ಹಿರೋಜಿ ಪರ್ಜದ್. ಶಿವಾಜಿಗಾಗಿ ಅವರು ಹುತಾತ್ಮ ರಾದರು. ಜನರ ಸಹಭಾಗಿತ್ವ ಅನನ್ಯವಾದುದು ಎಂಬುದಕ್ಕೆ ಇದೊಂದು ಉದಾಹರಣೆ. (ಪನಾಳ ಗಡದ ಕಾಳಗದಲ್ಲಿ ಶಿವಾಜಿ ಸೈನ್ಯಕ್ಕೆ ಸೋಲುಂಟಾಗುವ ಪರಿಸ್ಥಿತಿ ಉಂಟಾಯಿತು. ಆಗ ಹಡಪದ ಸಮಾಜದ ಶಿವಾ ನಾವಿ ಎಂಬಾತ ಶಿವಾಜಿಯ ವೇಷ ಧರಿಸಿ ವೈರಿಗಳಿಗೆ ಸೆರೆ ಸಿಕ್ಕ. ಆ ಸಂದರ್ಭದಲ್ಲಿ ಶಿವಾಜಿ ವಿಶಾಲಗಡಕ್ಕೆ ಪಾರಾಗಲು ಸಾಧ್ಯವಾಯಿತು. ಶಿವಾ ನಾವಿ ನಗುನಗುತ್ತ ಮರಣ ದಂಡನೆಗೆ ಒಳಗಾದ. ಹೀಗೆ ಶಿವಾಜಿಗಾಗಿ ಜನಸಾಮಾನ್ಯರು ಪ್ರಾಣಾರ್ಪಣೆಗೂ ಸಿದ್ಧರಾಗಿದ್ದರು.)

ಶಿವಾಜಿ 1630ನೇ ಫೆಬ್ರವರಿ 19ರಂದು ಪುಣೆ ಬಳಿಯ ಶಿವನೇರಿದುರ್ಗದಲ್ಲಿ ಜನಿಸಿದ ತಂದೆ ಶಹಾಜಿ ಬೋಸ್ಲೆ ಪುಣೆಯ ಜಹಗೀರದಾರರಾಗಿದ್ದು ವಿಜಯಪುರದ ದೊರೆ ಮುಹಮ್ಮದ್ ಆದಿಲ್‌ಶಾಹಿಯ ಸೈನ್ಯಾಧಿಕಾರಿಯಾಗಿದ್ದರು. ತಾಯಿ ಜೀಜಾಬಾಯಿ, ಮಲತಾಯಿ ತುಕಾಬಾಯಿ ಮೋಹಿತೆ.

ಸಮರ್ಥ ರಾಮದಾಸರು ಇವರ ಗುರುಗಳಾಗಿದ್ದರು. ದಾದಾಜಿ ಕೋಂಡದೇವ ಇವರಿಗೆ ಆಡಳಿತ ವಿದ್ಯೆ ಕಲಿಸಿದರು. ಮಹಾರಾಜನಾಗಿ ಶಿವಾಜಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ವೈದಿಕರು ಅದಕ್ಕೆ ಅಡ್ಡಿಯಾದರು. ಎರಡು ಬಾರಿ ಆತ ಪಟ್ಟಾಭಿಷೇಕ ಮಾಡಿಕೊಳ್ಳಬೇಕಾಯಿತು. ಶೂದ್ರ ಎಂಬ ಕಾರಣಕ್ಕಾಗಿ ಶಿವಾಜಿ ಸವರ್ಣೀಯರಿಂದ ಅಡೆತಡೆಗಳನ್ನು ಎದುರಿಸಬೇಕಾಯಿತು.

ಶಿವಾಜಿಯ ಮೊದಲ ರಾಜ್ಯಾಭಿಷೇಕ ರಾಜಧಾನಿ ರಾಯಗಡದಲ್ಲಿ 1674ನೇ ಜೂನ್ 6 ರಂದು ಗಾಗಾ ಭಟ್ಟರ ನೇತೃತ್ವದಲ್ಲಿ ನಡೆಯಿತು. ಮುಂದೆ ಮೂರನೇ ತಿಂಗಳಿಗೆ ಮತ್ತೊಂದು ರಾಜ್ಯಾಭಿಷೇಕ ನಡೆಯಿತು. ಮೊದಲ ರಾಜ್ಯಾಭಿಷೇಕದ 13ನೇ ದಿನಕ್ಕೆ ತಾಯಿ ಜೀಜಾಬಾಯಿ ತೀರಿಕೊಂಡಳು. ಮುಂದೆ ಸ್ವಲ್ಪ ದಿನಕ್ಕೆ ಕಾಶೀಬಾಯಿ ಎಂಬ ಪತ್ನಿ ತೀರಿಕೊಂಡಳು. ಪಟ್ಟಾಭಿಷೇಕ ದೋಷಪೂರ್ಣವಾಗಿದೆ ಎಂದು ನಿಶ್ಚಲಪುರಿ ಗೋಸಾವಿ ಎಂಬ ಯಜುರ್ವೇದಿ ತಾಂತ್ರಿಕ ತಕರಾರು ತೆಗೆದ. ಹೀಗಾಗಿ ಮೊದಲ ರಾಜ್ಯಾಭಿಷೇಕ ನಡೆದ ಮೂರು ತಿಂಗಳೊಳಗಾಗಿ ಮತ್ತೊಂದು ಸಲ ಪಟ್ಟಾಭಿಷೇಕ ಮಾಡಲಾಯಿತು. ಈ ಎರಡೂ ಪಟ್ಟಾಭಿಷೇಕಗಳಿಂದಾಗಿ ಮತ್ತು ಬ್ರಾಹ್ಮಣರಿಗೆ ಕೊಟ್ಟ ದಾನ ಧರ್ಮಗಳಿಂದಾಗಿ ಭಾರೀ ಸಂಪತ್ತು ಹರಿದುಹೋಯಿತು. ಅಷ್ಟೊತ್ತಿಗಾಗಲೇ ರಾಜ್ಯದ ಖಜಾನೆ ಖಾಲಿಯಾಗಿತ್ತು. ಮರಾಠ ಸಾಮ್ರಾಜ್ಯವನ್ನು ಕಟ್ಟಲು ಇಡೀ ಬದುಕನ್ನು ಒತ್ತೆಯಿಟ್ಟ ಶಿವಾಜಿ, ಅದನ್ನು ರಾಜನಾಗಿ ಅನುಭವಿಸಿದ್ದು ಆರು ವರ್ಷ ಮಾತ್ರ. ಶಿವಾಜಿ 1680ನೇ ಎಪ್ರಿಲ್ 3ರಂದು ನಿಧನನಾದ.

ಜಾತ್ಯತೀತ ಭಾವನೆ, ಸಮಾನತೆ, ಸಹೋದರತ್ವ ಮುಂತಾದವು ಶಿವಾಜಿಯ ಸದ್ಗುಣಗಳಾಗಿದ್ದವು. ಶಿವಾಜಿ ಸ್ಥಾಪಿಸಿದ್ದು ಹಿಂದವೀ ಸ್ವರಾಜ್ಯ. ಅವನ ಹಿಂದವೀ ಸ್ವರಾಜ್ಯದಲ್ಲಿ ದಲಿತರು, ಹಿಂದುಳಿದವರು, ಆದಿವಾಸಿಗಳು ಮತ್ತು ಮುಸ್ಲಿಮರು ಸಮಾನ ಗೌರವದೊಂದಿಗೆ ಬದುಕುತ್ತಿದ್ದರು. ಶಿವಾಜಿಯ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ಇವರೆಲ್ಲ ಶಿವಾಜಿಗಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗಿದ್ದರು.

1671ನೇ ಡಿಸೆಂಬರ್ 6 ರಂದು ಕೊಂಕಣದ ಕುಡಾಳದಲ್ಲಿದ್ದ ಸುಬೇದಾರ್ ನರಹರಿ ಆನಂದರಾವ್ ಎಂಬಾತನಿಗೆ ಬರೆದ ಪತ್ರದ ವಿಚಾರ ಹೀಗಿದೆ: ‘‘ಸಂಗಮೇಶ್ವರದಿಂದ ಬರುವ ಉಪ್ಪಿನ ಮೇಲೆ ದುಬಾರಿ ಸುಂಕ ಹೇರಬೇಕು’’

1677 ಆಗಸ್ಟ್ 24 ರಂದು ಡಚ್ಚರು ವ್ಯಾಪಾರಕ್ಕೆ ಅನುಮತಿ ಕೇಳಿದಾಗ, ಜಿಂಜಿ ಪ್ರಾಂತದ ಪರಿಸರದಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಿದಾಗ ವಿವಿಧ ಷರತ್ತುಗಳನ್ನು ಒಡ್ಡಿದ. ಶೇಕಡಾ 2.5ರಷ್ಟು ಸುಂಕ ವಿಧಿಸಿದ. ಆದರೆ ಚಾಲ್ತಿಯಲ್ಲಿದ್ದ ಗುಲಾಮರ ಮಾರಾಟವನ್ನು ನಿಷೇಧಿಸಿದ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News