ರಂಜದ ಘಮಲು ಜಾತ್ರೆ ಬಯಲು ಜಯಾಳ ನೆನಪು

Update: 2019-02-16 15:31 GMT

ಚೇತನಾ ತೀರ್ಥಹಳ್ಳಿ

ಸೂತಕದ ಮನೆ ಹೊಸ್ತಿಲು ಹೊಕ್ಕುವ ಮುನ್ನ ಗಂಧವೊಂದು ಶೋಕವನ್ನೂ ನೂಕಿ ಬಂತು. ಅಂಗಳದಲ್ಲಿ ಬಿದ್ದಿದ್ದ ಘಮಲಿನ ಚಿಕ್ಕೆಗಳಂತೆ ತೋರುತ್ತಿದ್ದ ರಂಜದ ಹೂಗಳನ್ನ ಹೆಕ್ಕಿ, ಕರ್ಚೀಫಿನಲ್ಲಿ ಕಟ್ಟಿ ವ್ಯಾನಿಟಿಯೊಳಗೆ ಇಳಿಬಿಟ್ಟೆ. ಆ ಘಮಲಿನೊಟ್ಟಿಗೇ ಬಂದು ಮುತ್ತಿದ ನೆನಪುಗಳನ್ನೂ.

***

ಅದು, ಜಾತ್ರೆ ಬಯಲಿನ ವಿಶಾಲ ದಾರಿ. ಇಕ್ಕೆಲಗಳಲ್ಲಿ ಲಕ್ಕಿಸೊಪ್ಪು - ಕಾಂಗ್ರೆಸ್ ಗಿಡಗಳು, ಶತಮಾನ ಹಿಂದಿನ ಒರಳುಕಲ್ಲಿಗೆ ಆತುಕೊಂಡು ನಿಂತ ಹಲಸಿನ ಮರ.... ಆ ದಾರಿ ಮುಗಿಯುವಲ್ಲೊಂದು ಚಿಕ್ಕ ಚೌಕಾಕಾರದ ವೆಂಕಟರಮಣ ಗುಡಿ. ಎಡ ಪಕ್ಕದಲ್ಲಿ, ವಿಶಾಲಮ್ಮನ ಹಿತ್ತಲಿಗೆ ಹೊಂದಿಕೊಂಡಂತೆ ಇತ್ತು ರಂಜದ ಮರ. ಆ ಜಾತ್ರೆ ಬಯಲೇ ಒಂದು ನಿಗೂಢ ಪ್ರದೇಶ. ಅಲ್ಲಿ, ಆ ರಂಜದ ಮರದಡಿಯಲ್ಲಿ ಬಿದ್ದ ಹೂಗಳನ್ನಾಯ್ದು, ಪಕ್ಕದ ದೇವಕಣಗಿಲೆ ಟೊಂಗೆಯಲ್ಲಿ ಕೂತು ಪೋಣಿಸುತ್ತಾ ದಿನದ ಬಹುಪಾಲು ಕಳೀತಿದ್ದಳು ಜಯಾ. ಆ ಮಬ್ಬುಗತ್ತಲಿನಲ್ಲಿ, ಕತ್ತಲಬಣ್ಣವೇ ಇದ್ದ ಜಯಾ ಬಹಳ ಸಲ ಕಾಣಿಸುತ್ತಲೇ ಇರಲಿಲ್ಲ. ಆಗಾಗ ಅವಳ ಕೈಲಿದ್ದ, ಒತ್ತೊತ್ತಾಗಿ ಕಟ್ಟಲ್ಪಟ್ಟಿದ್ದ ರಂಜದ ದಂಡೆ ಬಿಸಿಲಿಗೆ ಎದ್ದುಕಂಡು ನಾವು ಗಾಬರಿ ಬಿದ್ದಿದ್ದೂ ಉಂಟು. ಜಾತ್ರೆ ಬಯಲಿನ ಆಚೆ ಮಗ್ಗುಲಲ್ಲಿ ಹರೀತಿದ್ದ ತುಂಗೆಯಲ್ಲಿ ಈಜಲು ಕದ್ದುಮುಚ್ಚಿ ಹೋಗ್ತಿದ್ದ ನಾವು ಜಯಾಳನ್ನು ರೇಗಿಸಲು ಯತ್ನಿಸುತ್ತಿದ್ದೆವು. ಕೆಲವರಂತೂ ಹೆಚ್ಚು ಸ್ವಾತಂತ್ರ ವಹಿಸಿ ಮಣ್ಣಹೆಂಟೆಯನ್ನು ಅವಳತ್ತ ಬೀಸುತ್ತಿದ್ದುದೂ ಉಂಟು. ಈ ಧೈರ್ಯಕ್ಕೆ ಕಾರಣವಿತ್ತು. ಜಯಾ ಯಾವತ್ತೂ ನಮ್ಮ ಕೇರಿಗಳಲ್ಲಿ ಓಡಾಡಿದ್ದಾಗಲೀ ನಮ್ಮ ಅಮ್ಮಂದಿರ ಜೊತೆ ಮಾತಾಡಿದ್ದಾಗಲೀ ಯಾರೂ ನೋಡಿರಲಿಲ್ಲ. ಈ ಅಂಶ ನಮ್ಮನ್ನು ಹೆಚ್ಚು ಹೆಚ್ಚು ಅಧಿಕಪ್ರಸಂಗಕ್ಕೆ ಪ್ರೇರೇಪಿಸುತ್ತಿತ್ತು. ಅಷ್ಟೇ ಅಲ್ಲ, ಯಾರೂ ಜಯಾ ಆ ಮರದಿಂದ ಕೆಳಗಿಳಿದಿದ್ದೇ ಕಂಡಿರಲಿಲ್ಲ. ಹೂಗಳನ್ನ ಹೆಕ್ಕಲಾದರೂ ಅವಳು ಕೆಳಗಿಳಿಯುತ್ತಾಳೇನೋ, ಆಗವಳ ಕಾಲು ನೋಡಬೇಕು ಅಂತೆಲ್ಲ ನಾವು ಮಾತಾಡಿಕೊಳ್ತಿದ್ದೆವು. ನಾನು ಬಹಳ ಸಲ ಸ್ಕೂಲಿಂದ ಬರುವಾಗ ಜಯಾ ಕೆಳಗೆ ಬಗ್ಗಿ ದಾವಣಿಯಲ್ಲಿ ಹೂ ತುಂಬಿಕೊಳ್ತಿದ್ದನ್ನೂ, ಕಲ್ಲು ಬೀಸಿ ಅಮಟೆಕಾಯಿ ಉದುರಿಸ್ತಿದ್ದುದನ್ನೂ ನೋಡಿದ್ದೆ. ಆದರೆ ನನಗೂ ಅವಳೊಂದು ಅತಿಮಾನುಷ ಜೀವಿಯಾಗಿದ್ದು, ಅವಳ ಕಾಲು ಉಲ್ಟಾ ಸೀದಾ ಇದೆಯೆಂದು ನಂಬುವುದೇ ಬಹಳ ಪ್ರಿಯವಾಗಿತ್ತು. ನಮ್ಮ ಮನೆಗಳಲ್ಲಿ ಜಯಾಳ ಹೆಸರೆತ್ತಿದರೆ ಸಾಕು ಸಹಸ್ರನಾಮ ಹೊರಡುತ್ತಿತ್ತು. ಇದ್ದುದರಲ್ಲಿ ಸ್ವಲ್ಪ ಸಮಾಜಸುಧಾರಕಿಯಾಗಿದ್ದ ನನ್ನಮ್ಮ ಚೂರುಪಾರು ವಹಿಸ್ಕೊಂಡು ಅವರೆಲ್ಲರ ಬಾಯಿ ಮುಚ್ಚಿಸ್ತಿದ್ದಳು. ಇಷ್ಟಾದರೂ ಅವಳ ಸಂಪೂರ್ಣ ವಿವರ ಹೇಳುವ ಸಾಹಸ ಯಾವ ಅಮ್ಮಂದಿರೂ ಮಾಡಿರಲಿಲ್ಲ.

***

ಸಾವಿನ ಮನೆಯಲ್ಲಿ ಅಳುವೇ ಬರದೆ ನಿಂತಿದ್ದ ನಾನು, ರಂಜದ ಹೂವಿನ ಆಕರ್ಷಣೆಗೆ ಸಿಲುಕಿ ಹೆಕ್ಕಿಕೊಳ್ಳುವಾಗ ಸಂಗೀತಾ ನನ್ನನ್ನು ತಿನ್ನುವ ಹಾಗೆ ನೋಡಿದ್ದಳು. ನಾವು ಯಾರ ಕಳೇಬರ ನೋಡಲು ಬಂದಿದ್ದೀವೋ ಅವರ ಪರಿಚಯ ನನಗೆ ಸುತಾರಾಂ ಇರಲಿಲ್ಲ. ಜೊತೆಯಿದ್ದವರೆಲ್ಲ ಸಪ್ಪೆ ಮುಖ ಮಾಡಿಕೊಂಡೋ, ನಾಲ್ಕು ಹನಿ ಉದುರಿಸುತ್ತಲೋ ಇದ್ದರು. ಸಂಗೀತಾ ನನ್ನ ಕೈ ಜಗ್ಗಿ ‘ದಮ್ಮಯ್ಯ ತೆಪ್ಪಗಿರು’ ಅಂತ ಎಚ್ಚರಿಸಿ, ‘‘ಪರಿಚಯ ಇಲ್ಲದಿದ್ದರೇನಂತೆ, ಸಾವು ಕಾಡೋದಿಲ್ವಾ ನಿಂಗೆ?’’ ಅಂತ ಆಕ್ಷೇಪ ತೆಗೆದಳು.

***

ರಂಜದ ಹೂಗಳಿಟ್ಟ ಬ್ಯಾಗು ಭಾರವಾಗುತ್ತ ಸಾಗಿತು. ಹೂಗಂಧ ಕರ್ಚೀಫಿನ ತೆರೆ ಹಾದು ವ್ಯಾನಿಟಿಯ ವಸ್ತುಗಳನ್ನೆಲ್ಲ ತಬ್ಬಿಕೊಳ್ಳತೊಡಗಿತು. ಜಯಾಳ ಕೈ ಅವೆಲ್ಲವನ್ನೂ ಸವರಿ ಸವರಿ ನೋಡ್ತಿರುವಂತೆ ಭಾಸವಾಗಿ ಬೆಚ್ಚಿದೆ. ಈ ಕ್ಷಣವೇ ಕರ್ಚೀಫಿನ ಸಮೇತ ಹೂಗಳನ್ನೆಲ್ಲ ವರ್ಗಾಯಿಸಿಬಿಡಬೇಕು ಅನ್ನಿಸುತ್ತಿದೆ. ಶವಕ್ಕೆ ನಮಸ್ಕಾರ ಮಾಡುವಾಗ ಅವನ್ನು ಪಾದದಡಿಯಲ್ಲಿ ಹಾಕಿಬಿಡಲೇ ಅನ್ನುವ ಯೋಚನೆಯೂ ಬರುತ್ತಿದೆ. ಇಲ್ಲ... ಜಯಾಳನ್ನು ಹಾಗೆ ಯಾರದೋ ಕಾಲಡಿಯಲ್ಲಿ ಹಾಕುವುದೇ?

ತಲೆಯೊಳಗೆ ಗಿರಕಿ ಹೊಡೆಯುತ್ತಿರುವ ಆಲೋಚನೆಗಳು ಗಲಿಬಿಲಿಗೆ ನೂಕುತ್ತಿವೆ. ಉಮ್ಮಳಿಕೆ ಬಂದಂತಾಗಿ ಶವದ ಕಾಲ್ತೊಡರಿ ಮುಗ್ಗರಿಸುತ್ತಿದ್ದೇನೆ... ಸಂಗೀತಾ ನನ್ನ ತೋಳುಗಳನ್ನೆಳೆದು ಗೋಡೆ ಬದಿಗೆ ಕುಕ್ಕಿ ತಲೆಗೆ ನೀರು ಚಟ್ಟುತ್ತಿದ್ದಾಳೆ. ಎರಡು ನಿಮಿಷ ಎಚ್ಚರ ತಪ್ಪಿದ್ದೆನೆಂದು ಅಲ್ಲಿದ್ದವರೆಲ್ಲ ಗಾಬರಿಯಾಗಿದ್ದಾರೆ. ಘಮಲು ನನ್ನ ವ್ಯಾನಿಟಿ ಬ್ಯಾಗನ್ನೂ ಮೀರಿ ಬರುತ್ತಿದೆ. ಅದರೊಳಗೆ ಜಯಾ ಬಚ್ಚಿಟ್ಟುಕೊಂಡಿರೋದು ಇವರಿಗೆಲ್ಲ ಗೊತ್ತಾಗಿಬಿಟ್ಟರೇನು ಗತಿ ಅನ್ನಿಸಿ ಬೆವರುತ್ತೇನೆ.

***

ಅದೊಂದು ಆಷಾಢದ ಸಂಜೆ ಬಡಿದ ಸಿಡಿಲು ಮಳೆಯಲ್ಲಿ ಜಯಾ ದೇವಕಣಗಿಲೆ ಮರದ ಟೊಂಗೆಯಲ್ಲೇ ಸುಟ್ಟುಹೋಗಿದ್ದಳು. ಅವಳ ಜತೆ ಆ ಮರವೂ ಸುಟ್ಟು ಸೀದುಹೋಗಿತ್ತು. ಕರಗಟ್ಟಿ ಅಕರಾಳವಾಗಿ ಕಾಣುತ್ತಿದ್ದ ಅದರತ್ತ ಎರಡು ತಿಂಗಳು ಯಾರೂ ಸುಳಿದಿರಲಿಲ್ಲ. ಕ್ರಮೇಣ ನಾವೆಲ್ಲ ಚಿಕ್ಕ ತಲೆಹರಟೆಗಳು ಚಿಗಿತುಕೊಂಡೆವು. ಜಾತ್ರೆ ಬಯಲ ತುಂಬ ಹರಡಿಕೊಂಡೆವು. ಆಗಾಗ ಜತೆಯವರನ್ನು ಗಾಬರಿಪಡಿಸಲು ‘ಅಲ್ನೋಡ್ರೋ ಜಯಾ! ಅಂದು ನಗಾಡುತ್ತಿದ್ದುದೂ ಉಂಟು.’ ಹೀಗೇ ಒಂದು ಆಟದ ಸಂಜೆ, ನಾನೂ ರೇಣುಕಾಳೂ ರಾಶಿ ಸುರಿದಿದ್ದ ರಂಜದ ಹೂಗಳನ್ನಾಯಲು ಹೋದೆವು. ಫ್ರಾಕಿನ ಎರಡೂ ಜೇಬು ತುಂಬಿಸಿಕೊಂಡೆವು. ಮನೆಗೆ ಹೋಗಿ ಹೊರತೆಗೆಯದೆ ಹಾಗೇ ಮಲಗಿಬಿಟ್ಟೆವು. ನನಗೆ ಆ ರಾತ್ರಿಯಿಡೀ ತಲೆ ಹಿಂಡಿದಂತಹ ನೋವು, ಮೈಭಾರ. ಬೆಳಗ್ಗೆ ಹೊತ್ತಿಗೆ ಚೂರು ಜ್ವರ ಬಂದಿತ್ತು. ಮೂಗು ಕೆಂಪೇರಿಸಿಕೊಂಡು ಶಾಲೆಗೆ ರಜೆ ಹಾಕಬೇಕಾಯಿತು. ಅತ್ತ ರೇಣುಕಾಳ ಪರಿಸ್ಥಿತಿ ಗಂಭೀರವಾಗಿಹೋಗಿತ್ತು. ಅವಳಿಗೆ ಜೋರು ಜ್ವರ, ರಾತ್ರಿಯಿಡೀ ಕುಮಟಿ ಬೀಳ್ತಿದ್ದಳಂತೆ. ಸಾಲದ್ದಕ್ಕೆ ಅರ್ಧರಾತ್ರಿಯಲ್ಲಿ ರಕ್ತ ಸ್ರವಿಸಿ ಮೊದಲ ಮುಟ್ಟು ಬೇರೆ ಆದಳಂತೆ. ಅವಳ ಫ್ರಾಕ್ ಜೇಬಿನಲ್ಲಿ ರಂಜದ ಹೂ ನೋಡಿದವರೇ ಅವಳಮ್ಮ ಗಾಬರಿ ಬಿದ್ದು ಮಗಳಿಗೆ ನಾಲ್ಕು ಬಾರಿಸಿಯೂ ಬಿಟ್ಟರು. ಇವೆಲ್ಲ ಜಯಾಳ ಆಟ ಅಂತ ಕೂಗಾಡಿದರು. ಕೋಳಿ ಕೂಗುವುದನ್ನೇ ಕಾದಿದ್ದು ನಮ್ಮನೆಗೆ ಚಾಡಿ ತಂದ ಸುನಂದಕ್ಕ, ನಾನೂ ಜ್ವರದಿಂದ ಮಲಗಿದ್ದು ನೋಡಿ, ನೀವು ಬ್ರಾಮ್ರು. ಸಾಲಿಗ್ರಾಮ ಇಟ್ಕಂಡಿದೀರ. ಜನಿವಾರ ಇದ್ದಲ್ಲಿ ಯಾವ್ ಸೂಳೇನೂ ಸುಳಿಯಲ್ಲ. ಅಂತಾದ್ರಲ್ಲೂ ಸಣ್ಣಕ್ಕಂಗೆ ಗಾಳಿ ತಗಲ್ಕಂಡಿದೆ. ನಮ್ ರೇಣುಕಾ... ಅಂತೆಲ್ಲ ಅತ್ತು ಅಮ್ಮನ್ನ ಹೆದರಿಸಲು ನೋಡಿದರು. ಅದ್ಯಾವುದಕ್ಕೂ ಸೊಪ್ಪು ಹಾಕದ ನನ್ನಮ್ಮ ರೇಣುಕಾಳನ್ನ ಡಾಕ್ಟರ್ ಬಳಿ ಕರೆದ್ಕೊಂಡು ಹೋಗಿ ಅಂತ ಬುದ್ಧಿ ಹೇಳಿ, ದುಡ್ಡನ್ನೂ ಮೆತ್ತಗಿನ ಕಾಟನ್ ಸೀರೆಯನ್ನೂ ಕೊಟ್ಟು ಕಳಿಸಿದಳು. ನನಗೆ ಸೈನಸ್ ಇದೆಯೆಂದೂ ರಂಜದ ಘಮಲೇ ಅಲರ್ಜಿಯಾಗಿ ತಲೆನೋವು ಬಂದಿರಬೇಕೆಂದೂ ತರ್ಕಿಸಿದಳು. ಪೊದೆ ಸಂದಿಯೆಲ್ಲ ಆಡಲು ಹೋಗುವ ನನ್ನನ್ನು ಸಮಾ ಬೈದು, ಕಸ್ತೂರಿ ಅರಿಶಿನದ ಕಷಾಯ ಮಾಡಲು ಒಳಹೋದಳು. ನಾನು ಮಾತ್ರ ಸುನಂದಕ್ಕನ ಮಾತುಗಳನ್ನು ಸೀರಿಯಸ್ಸಾಗಿ ತೆಗೆದುಕೊಂಡು ಹೆದರಿ, ವಾರ ಪೂರ್ತಿ ಜ್ವರದಲ್ಲಿ ಮಲಗಿಬಿಟ್ಟೆ.

***

ಸಂಗೀತಾ ನನ್ನನ್ನು ಪಿಜಿಯಲ್ಲಿ ಹಾಕಿ ಹೋಗಿದ್ದಾಳೆ. ಒಬ್ಬಳೇ ಕವುಚಿ ಮಲಗಿದ್ದೇನೆ. ಬಿಸಿಗಾಳಿ ಜೀಕಿಬಂದ ಘಮಲಿನಲ್ಲಿ ಜಯಾ ಎದೆಹೊಕ್ಕು ಉಸಿರು ಕಟ್ಟಿದಂತಾಗುತ್ತಿದೆ. ತಲೆ ಭಾರವಾಗಿ ಹಿಂಡುತ್ತಿದೆ. ಮೂಗು ಸೋರತೊಡಗಿದೆ.

ಕರ್ಚೀಫಿಗಾಗಿ ವ್ಯಾನಿಟಿ ಬ್ಯಾಗ್ ಎಳೆದು ತಡಕುತ್ತೇನೆ. ಒಳಗಿಂದ ಜಯಾಳ ಕೈ ಹೂಗಳನ್ನೆಲ್ಲ ಅಲ್ಲೇ ಕೊಡವಿ ಎತ್ತಿ ಕೊಡುತ್ತಿದೆ.

Writer - ಚೇತನಾ ತೀರ್ಥಹಳ್ಳಿ

contributor

Editor - ಚೇತನಾ ತೀರ್ಥಹಳ್ಳಿ

contributor

Similar News