ಸರ್ವ ಧರ್ಮಗಳ ಸಮನ್ವಯದ ಪ್ರತೀಕ ಇಬ್ರಾಹೀಂ ಸುತಾರ

Update: 2019-02-17 05:00 GMT

ಕಳೆದ 38 ವರ್ಷಗಳಿಂದ ಸರ್ವ ಧರ್ಮಗಳ ಸಮನ್ವಯದ ಪ್ರತೀಕವಾಗಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರವಚನ ನೀಡುತ್ತಾ ಬಂದಿರುವ ಇಬ್ರಾಹೀಂ ಸುತಾರರ ಕಾರ್ಯ ಬಣ್ಣಿಸಲು ಅಸಾಧ್ಯ. ಇವರ ಭಾವೈಕ್ಯತಾ ಕಾರ್ಯ ನಿಜಕ್ಕೂ ಶ್ಲಾಘನೀಯ. ಕೋಮುವಾದ, ಮತೀಯವಾದದ ಗುಂಗಿನಲ್ಲಿರುವ ಇಂದಿನ ಯುವ ಸಮೂಹಕ್ಕೆ ಇಬ್ರಾಹೀಂ ಸುತಾರ ಇವರ ಭಾವೈಕ್ಯತಾ ಚಿಂತನೆ ಪ್ರಸ್ತುತ.

ಭಾರತ ಹಲವು ಧರ್ಮಗಳನ್ನು ಹೊಂದಿರುವ ನಾಡು, ಸಾಮರಸ್ಯದ ಬೀಡು, ಈ ಪುಣ್ಯಭೂಮಿಯಲ್ಲಿ ಜಗತ್ತಿನ ಎಲ್ಲಾ ಧರ್ಮದ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಏಕತೆ ಇದೆ. ಭಾವೈಕ್ಯತೆ ಇದೆ.ವಿಶಿಷ್ಟ ಸಂಪ್ರದಾಯ, ಸಂಸ್ಕೃತಿಯಿದೆ.ಇಲ್ಲಿ ಧರ್ಮಗಳ ಆಚಾರ ವಿಚಾರ ಬೇರೆಯಾದರು ಮೂಲ ಧ್ಯೇಯೋದ್ದೇಶ ಒಂದೇ. ಬೋಧಿಸುವ ಉಪದೇಶ ಒಂದೇ. ಹೀಗಿದ್ದರೂ ಕೂಡಾ ಈ ಮನುಜರು ಮಾತ್ರ ದಿನ ನಿತ್ಯ ನನ್ನದು ಆ ಧರ್ಮ ನಿನ್ನದು ಈ ಧರ್ಮ ಎಂದು ನಿತ್ಯ ಬಡಿದಾಡಿಕೊಂಡು ಸತ್ಯ ಧರ್ಮದ ದಾರಿಯಲ್ಲಿ ಸಾಗುವುದನ್ನು ಮರೆತಿದ್ದಾರೆ. ಪ್ರೀತಿ, ವಿಶ್ವಾಸ, ನಂಬಿಕೆ, ತ್ಯಾಗ, ಮಮತೆ, ಕರುಣೆ, ಅಹಿಂಸೆ, ದಯೆ ಒಳಗೊಂಡಿರುವುದೇ ನಿಜ ಧರ್ಮ ಎಂಬ ಸತ್ಯವನ್ನು ಅರಿಯದ ಜನರು ಧರ್ಮದ ಹೆಸರಿನಲ್ಲಿ ಪರಸ್ಪರ ದ್ವೇಷ, ಅಸೂಯೆ, ಹಿಂಸೆಯಂತಹ ಅಮಾನವೀಯ ಕೃತ್ಯಗಳನ್ನು ಎಸಗುವ ಮೂಲಕ ಶಾಂತಿಯುತವಾದ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಭಯದ ವಾತಾವರಣದಲ್ಲಿ ಜೀವನ ಸಾಗಿಸುವ ಸ್ಥಿತಿಗೆ ಬಂದು ತಲುಪಿದ್ದಾರೆ.ಅಧರ್ಮದ ಅಮಲಿನಲ್ಲಿ ಇದ್ದ ಜನರನ್ನು ಧರ್ಮದ ದಾರಿಗೆ ಕರೆತರಲು 12 ನೆಯ ಶತಮಾನದಲ್ಲಿ ಅಂದು ಬಸವಣ್ಣ, ಕನಕದಾಸರು, ಅಂಬಿಗರ ಚೌಡಯ್ಯ, ಶಿಶುನಾಳ ಶರೀಫರು ಹೀಗೆ ಸಾಕಷ್ಟು ಶರಣು ಸಂತರು ಶ್ರಮಿಸಿದ್ದಾರೆ.ಇಂತಹ ಶ್ರೇಷ್ಠ ಸಂತರ, ಶರಣರ ವಚನ, ತತ್ವಪದ, ದಾಸ ಸಾಹಿತ್ಯ, ಕುರ್‌ಆನ್, ಬೈಬಲ್, ಭಗವದ್ಗೀತೆ ಅಧ್ಯಯನಗಳನ್ನು ಪಠಿಸುತ್ತ, ಸನ್ಮಾರ್ಗದ ದಾರಿಯಲ್ಲಿ ಸಾಗುತ್ತಾ ಧಾರ್ಮಿಕ ಸಾಮರಸ್ಯದ ಸಂಕೇತವಾಗಿ ಸಮಾಜದಲ್ಲಿ ಜನರು ಸಹಬಾಳ್ವೆಯಿಂದ ಬದುಕಲು ಕಾರಣರಾಗಿದ್ದಾರೆ. ಅವರೇ ನಮ್ಮ 78 ವಯಸ್ಸಿನ ಅಜ್ಜ ಇಬ್ರಾಹೀಂ ಸುತಾರ. ಇವರು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದಲ್ಲಿ ಕಡು ಬಡತನದಲ್ಲಿ ಹುಟ್ಟಿ (10 ಮೇ 1940 ರಲ್ಲಿ) ಬೆಳೆದವರು. ಇಸ್ಲಾಂ ಧರ್ಮದವರಾದರು ಕೂಡ ಎಲ್ಲಾ ಧರ್ಮದ ಆಚಾರ ವಿಚಾರ ಅರಿತವರು, ತನ್ನ ಧರ್ಮ ಪ್ರೀತಿಸಿ ಇತರ ಧರ್ಮವನ್ನು ಗೌರವಿಸುತ್ತ ಸಾಗಿದವರು. ಚಿಕ್ಕ ವಯಸ್ಸಿನಲ್ಲೇ ಆಧ್ಯಾತ್ಮಿಕ ಜೀವನದೆಡೆಗೆ ವಾಲಿದ ಇವರು ಮೊದಮೊದಲು ತಮ್ಮ ಊರಿನಲ್ಲಿ ಭಜನೆ, ತತ್ವ ಹೇಳುತ್ತಿದ್ದರು. ದಿನ ಕಳೆದಂತೆ ಧಾರ್ಮಿಕ ಮತ್ತು ಆಧ್ಯಾತ್ಮಿಕದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಮೂಲಕ ಅಪಾರವಾದ ಆಧ್ಯಾತ್ಮಿಕ ಜ್ಞಾನ ಭಂಡಾರ ಹೊತ್ತು ಆತ್ಮ ಪರಮಾತ್ಮ ಒಂದೇ, ದೇವನೊಬ್ಬ ನಾಮ ಹಲವು ಎಂದು ಜನತೆಗೆ ತಮ್ಮ ಮಧುರ ಕಂಠದಿಂದ ತಿಳಿ ಹೇಳುತ್ತಿದ್ದಾರೆ. ಯಾವಾಗ ನಾವುಗಳು ಕೋಮು ಭಾವನೆಗೆ ಒಳಗಾಗದೆ ಪ್ರಾಮಾಣಿಕವಾಗಿ ಸರ್ವ ಧರ್ಮಗಳ ಗ್ರಂಥಗಳನ್ನು ಅಧ್ಯಯನ ಮಾಡುತ್ತೇವೋ ಆವಾಗ ಮಾತ್ರ ಸರ್ವ ಜನತೆಗೂ ಒಬ್ಬನೇ ಪರಮಾತ್ಮ ಎಂದು ಅರಿಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಪ್ರಸ್ತುತ ಜನತೆಗೆ ಅನುಭಾವಿಗಳ ಸಮ್ಮುಖದಲ್ಲಿ ಆಗಾಗ್ಗೆ ಭಗವದ್ಗೀತೆ, ಕುರ್‌ಆನ್, ಬೈಬಲ್ ಹೀಗೆ ಜಗತ್ತಿನ ಎಲ್ಲಾ ಧರ್ಮಗಳ ಗ್ರಂಥಗಳು ಅಧ್ಯಯನ ಮಾಡಿದಾಗ ಮಾತ್ರ ನಮ್ಮಲ್ಲಿ ಸಂಕುಚಿತ ಮನೋಭಾವ ಅಳಿದು ವಿಶಾಲವಾದ ಭಾವನೆ ನಮ್ಮಲ್ಲಿ ಚಿಗುರುತ್ತದೆ ಎನ್ನುತಾರೆ ಇಬ್ರಾಹೀಂ ಸುತಾರ ಸಾಹೇಬರು. ಇವರ ಪ್ರವಚನ, ಇದೆ ಎಂದರೆ ಸಾಕು ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಾರೆ.ಇಬ್ರಾಹೀಂ ಸುತಾರರು ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಪ್ರವಚನ ನೀಡುತ್ತಾ ಬಂದಿದ್ದಾರೆ. ಉತ್ತಮ ವಾಗ್ಮಿಗಳಾಗಿರುವ ಸುತಾರ ಸಾಹೇಬರು ಸಮಾಜದಲ್ಲಿನ ಅಂಧಕಾರ, ಅಸಮಾನತೆ, ದೇವದಾಸಿ ಪದ್ಧತಿಯಂತಹ ಮೌಢ್ಯಾಚರಣೆ ವಿರೋಧಿಸಿ ಮೂರು ವರ್ಷಗಳ ಕಾಲ ಆಂದೋಲನ ಮಾಡಿದ್ದಾರೆ. ಅಲ್ಲದೇ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಲವು ಪಾದಯಾತ್ರೆಗಳನ್ನು ಕೈಗೊಂಡಿದ್ದಾರೆ.

ಬಡ ಮಕ್ಕಳ ಶಿಕ್ಷಣಕ್ಕಾಗಿ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿದ್ದಾರೆ.ಕಲ್ಯಾಣ ಮಂಟಪ ಹಾಗೂ ಯಾತ್ರಾ ನಿವಾಸಗಳನ್ನು ನಿರ್ಮಿಸಿದ್ದಾರೆ. ಕಳೆದ 38 ವರ್ಷಗಳಿಂದ ಸರ್ವ ಧರ್ಮಗಳ ಸಮನ್ವಯದ ಪ್ರತೀಕವಾಗಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರವಚನ ನೀಡುತ್ತಾ ಬಂದಿರುವ ಇಬ್ರಾಹೀಂ ಸುತಾರರ ಕಾರ್ಯ ಬಣ್ಣಿಸಲು ಅಸಾಧ್ಯ. ಇವರ ಭಾವೈಕ್ಯತಾ ಕಾರ್ಯ ನಿಜಕ್ಕೂ ಶ್ಲಾಘನೀಯ. ಕೋಮುವಾದ, ಮತೀಯವಾದದ ಗುಂಗಿನಲ್ಲಿರುವ ಇಂದಿನ ಯುವ ಸಮೂಹಕ್ಕೆ ಇಬ್ರಾಹೀಂ ಸುತಾರ ಇವರ ಭಾವೈಕ್ಯತಾ ಚಿಂತನೆ ಪ್ರಸ್ತುತ ಮತ್ತು ಅಷ್ಟೇ ಅಗತ್ಯವಾಗಿದೆ. ಇವರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಮರಸ್ಯವನ್ನು ಕಂಡು ಇವರನ್ನು ಆಧುನಿಕ ಸಂತ ಶಿಶುನಾಳ ಶರೀಫ, ಕರ್ನಾಟಕ ಕಬೀರ್ ಎಂದು ಬಣ್ಣಿಸಲಾಗುತ್ತಿದೆ. ಅಲ್ಲದೇ ಇವರಿಗೆ ಹಲವು ಸಂಘ ಸಂಸ್ಥೆಗಳಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಮತ್ತು ಗೌರವಗಳು ಸಂದಿವೆ. 1995 ರಲ್ಲಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರೆ ಕಳೆದ ವರ್ಷ ಭಾರತ ಸರಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಭಾವೈಕ್ಯತಾ ಭಾವನೆಯ ಶ್ರೇಷ್ಠ ಸಂತನನ್ನು ಪಡೆದ ಈ ನಾಡು ಇಲ್ಲಿನ ಜನರು ಧನ್ಯ.ಇವರ ಪ್ರವಚನಗಳು ಇನ್ನೂ ಹೆಚ್ಚೆಚ್ಚಾಗಿ ಜಗತ್ತಿನ ಮೂಲೆಯ ಉದ್ದಗಲಕ್ಕೂ ತಲುಪಲಿ ಈ ಧರೆಯ ಮೇಲೆ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯಲ್ಲಿ ನಾವೆಲ್ಲರು ಒಂದೇ ಎಂಬ ಭಾವನೆ ಮೂಡಲಿ ಎಂಬ ಸದಾಶಯದೊಂದಿಗೆ...

Writer - ಮೌಲಾಲಿ ಕೆ. ಆಲಗೂರ

contributor

Editor - ಮೌಲಾಲಿ ಕೆ. ಆಲಗೂರ

contributor

Similar News