ಈ ದೇಶಕ್ಕೆ ಪ್ರಾಣ ಕೊಡಲು ಸಿದ್ಧರಿರುವವರು ಬಡವರ ಮಕ್ಕಳು ಮಾತ್ರವೆಂದು ನೀವು ಮತ್ತೊಮ್ಮೆ ಸಾಬೀತು ಪಡಿಸಿಬಿಟ್ಟಿರಿ...
ನಿಮ್ಮ ಈ ದುರಂತ ನಡೆದ ಮೇಲೆ, ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಚರ್ಚೆ-ವಾದ-ವಿವಾದ ನಡೆಯುತ್ತಿದೆ. ಇಲ್ಲಿ ಸಂತಾಪಕ್ಕಿಂತ ಸಂಘರ್ಷವೇ ಹೆಚ್ಚಾಗಿರುವಂತೆ ಕಾಣುತ್ತಿದೆ. ಪರಸ್ಪರ ಪಕ್ಷ-ವ್ಯಕ್ತಿಗಳನ್ನು ಪರಾಮರ್ಶಿಸಲಾಗುತ್ತಿದೆ. ಇದು ಮುಂದಿನ ಚುನಾವಣೆಯ ಪ್ರಣಾಳಿಕೆ ಎಂದು ಕೆಲವರಿಂದ ಶಂಕಿಸಲಾಗುತ್ತಿದೆ. ನೀವು ಮಡಿದ ಜಾಗದಲ್ಲಿ ರಕ್ತದ ಕಲೆ ಇನ್ನೂ ಮಾಸಿಯೇ ಇಲ್ಲ. ಆದರೆ ಅದನ್ನೇ ಬಳಸಿಕೊಂಡು ಮತ ಕೇಳುವ ವಾಸನೆ ಕೂಡ ಅಡರುತ್ತಿದೆ.
ಫೆಬ್ರವರಿ 14
ಕೆಲವರಿಗೆ LOVE LETTER DAY..
ಆದರೆ ನಿಜವಾಗಿಯೂ ಇದು RED LETTER DAY ಆಯಿತು.
ನಿಮ್ಮ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯ ಶಬ್ದಕ್ಕಿಂತ ರಾಜಕೀಯ ಗದ್ದಲವೇ ಇಲ್ಲಿ ಜಾಸ್ತಿ ಕೇಳಿಸುತ್ತಿದೆ. ಇಲ್ಲಿ ಮೌನವೆಂದರೆ ನಿಮ್ಮ ಮಡದಿಯ ಗರ್ಭದಲ್ಲಿರುವ ಆ ನಿಮ್ಮ ಮಗುವಿನ ಉಸಿರು ಮಾತ್ರ.ನಿಮ್ಮ ರಕ್ತ ಚೆಲ್ಲಿದ ಜಾಗದಲ್ಲಿ ನಿಮ್ಮ ರಕ್ತದ ಒಂದೊಂದು ಹನಿಯೂ ಕೂಡ, ಮತ್ತೆ ಭಾರತದ ಚಿತ್ರವನ್ನೇ ರಚಿಸಿತು. ನಿಮ್ಮ ಪ್ರತಿ ರಕ್ತ ಕಣದ ಮೇಲೆ ನೂರ ಐವತ್ತು ಕೋಟಿಯ ಹೃದಯಗಳು ಮಿಡಿದು, ಮುನೂರು ಕೋಟಿಯ ಕಣ್ಣುಗಳು ತುಂಬಿಬಂದವು. ಮುನ್ನೂರು ಕೋಟಿಯ ಕೈಗಳು ವಂದಿಸಿದವು. ನಿಮ್ಮ ಪ್ರತಿ ರಕ್ತ ಬಿಂದುವಿಗೆ ಪ್ರತಿಯಾಗಿ ಕೋಟಿ ಕಂಬನಿಗಳು ನೆಲಕ್ಕುರುಳಿದವು.ಇದು ಈ ನೆಲದ ಜಾತಿ-ಧರ್ಮ- ಕುಲ -ರಾಜಕಾರಣ- ವೈಷಮ್ಯಗಳನ್ನು ಮರೆತ ಒಟ್ಟಿಗೆ ಮಿಡಿದ ದೇಶಪ್ರೇಮ. ಈಗ ನೀವು ಈ ನೆಲದಲ್ಲಿಲ್ಲ. ಆದರೆ ಈ ನೆಲದಲ್ಲಿರುವ ಪ್ರತಿಯೊಬ್ಬನ ಎದೆಯೊಳಗೆ ಇದ್ದೀರಿ. ನಿಮ್ಮ ಮಡದಿಯ ಗರ್ಭದಲ್ಲಿ, ತಾಯಿಯ ಎದೆ ಬಡಿತದಲ್ಲಿ, ತಂದೆಯ ವೇದನೆಯಲ್ಲಿ, ಮಕ್ಕಳ ಕಂಗಳಲ್ಲಿ, ಅಣ್ಣ ತಮ್ಮಂದಿರ ನಿಟ್ಟುಸಿರಲ್ಲಿ, ಅಕ್ಕ-ತಂಗಿಯರ ರೋದನೆಯಲ್ಲಿ ಮತ್ತು ಪ್ರತೀ ಭಾರತೀಯನ ಕಂಬನಿಯಲ್ಲಿ ನೀವು ಇಂದು ನೆಲೆಸಿದ್ದೀರಿ.
ನೀವೇ ನಮ್ಮ ಮಕ್ಕಳ ನಾಳಿನ ಹೀರೋಗಳು. ನೀವು ಮತ್ತೊಮ್ಮೆ ಸಾಬೀತು ಮಾಡಿಬಿಟ್ಟಿರಿ, ಈ ದೇಶಕ್ಕೆ ಪ್ರಾಣ ಕೊಡಲು ಸಿದ್ಧರಿರುವವರು ಬಡವರ ಮಕ್ಕಳು ಮಾತ್ರ ಎಂದು. ಹೌದು! ಈ ದೇಶವನ್ನು ಕಾಯಲು ಬಡವರ ಮಕ್ಕಳೇ ಬೇಕು, ‘ಐ ಲವ್ ಯೂ ಮೈ ಕಂಟ್ರಿ’ ಎಂದು ಹೇಳುತ್ತಾ ತಮ್ಮ ಜ್ಞಾನ, ಶ್ರಮವನ್ನು ವಿದೇಶಕ್ಕೆ ಮುಡುಪಿಟ್ಟು ಹಣ ಗಳಿಸುವ ಲಕ್ಷಾಂತರ ಯುವಕರಿಗೆ ನೀವು ಮಾದರಿಯಾದಿರಿ, ತಮ್ಮ ಮಕ್ಕಳು ಡಾಕ್ಟರ್-ಇಂಜಿನಿಯರ್-ಐಎಎಸ್-ಐಪಿಎಸ್‌ಗಳೇ ಆಗಬೇಕೆಂದು ಶ್ರಮಿಸುವ ತಂದೆ ತಾಯಿಯರಿಗೆ ನಿಮ್ಮ ಹೆತ್ತವರು ಮಾದರಿಯಾದರು. ಗಂಡಂದಿರನ್ನು ಬಿಟ್ಟು ಕೊಡಲಾರೆ ಎನ್ನುವ ಹೆಣ್ಣು ಮಕ್ಕಳಿಗೆ ನಿಮ್ಮ ಶ್ರೀಮತಿಯವರು ಮಾದರಿಯಾದರು. ಅಪ್ಪಾ... ಎಂದು ಎದೆಯ ಮೇಲೆ ಆಡಬೇಕಿದ್ದ ಮಕ್ಕಳು ನಿಮ್ಮನ್ನು ಮಿಸ್ ಮಾಡಿಕೊಂಡರು. ಆ ದು:ಖವನ್ನು ನುಂಗಿಕೊಂಡು ಸಮಾಜಕ್ಕೆ ಮಾದರಿಯಾಗುವಂತೆ ಮಾಡಿದಿರಿ.
ನಿಮ್ಮ ಅಂತ್ಯಕ್ರಿಯೆಯ ದೃಶ್ಯಗಳು ನನ್ನನ್ನು ಅತ್ಯಂತ ಭಾವುಕನನ್ನಾಗಿ ಮಾಡಿದವು. ನನ್ನ ಬದುಕಿನ ಪಯಣದಲ್ಲಿ ಇಂತಹ ದೃಶ್ಯಗಳನ್ನು ಯಾವ ಸಿನೆಮಾದಲ್ಲಿಯೂ ಕೂಡ ನಾನು ನೋಡಿರಲಿಲ್ಲ. ಜಗತ್ತಿನ ಅದ್ಯಾವ ನಿರ್ದೇಶಕರಿಂದಲೂ ಸೆರೆಹಿಡಿಯಲು ಅಸಾಧ್ಯವಾದ ದೃಶ್ಯಗಳವು. ನಿಮ್ಮ ಅಂಗಾಂಗಗಳು ಬೀದಿಯಲ್ಲಿ ಛಿದ್ರ- ಛಿದ್ರಗೊಂಡು ಬಿದ್ದಿದ್ದವು. ದ್ವೇಷದ ಕ್ರೂರತೆ ನಿಮ್ಮನ್ನು ನಿಮ್ಮ ಅಂಗಾಗಗಳನ್ನು ತಿಂದಿತ್ತು. ನಿಮ್ಮ ಮನೆಯಲ್ಲಿ ಬಡತನ ನಿಮ್ಮ ಕುಟುಂಬದ ಅಂಗಾಂಗಗಳನ್ನು ತಿಂದು ಹಾಕಿದ ದೃಶ್ಯಗಳು ಭಾರತೀಯ ಸೈನಿಕನ ಬದುಕಿನ ಅನಾವರಣದಂತೆ ಬಿತ್ತರಗೊಂಡವು.
ಮೊನ್ನೆ ಹುತಾತ್ಮರಾದ ನಿಮ್ಮಲ್ಲಿ ಒಬ್ಬರೂ ಕೂಡ ಆಗರ್ಭ ಶ್ರೀಮಂತರ ಮಕ್ಕಳು ಇರಲಿಲ್ಲ. ರಾಜಕಾರಣಿಗಳ ಮಕ್ಕಳಿರಲಿಲ್ಲ, ಕವಿ -ಪುಂಗವ -ಮೀಡಿಯಾ -ವ್ಯಾಪಾರ ರಾಷ್ಟ್ರ ಸಂಘಟಕರ ಮಕ್ಕಳಿರಲಿಲ್ಲ. ನೀವು ಬಂಗಲೆಗಳಲ್ಲಿ ವಾಸ ಮಾಡಿದವರಲ್ಲ, ಗುಡಿಸಿಲಿನಲ್ಲಿ, ಸೋರುವ ಮನೆಯಲ್ಲಿ ವಾಸ ಮಾಡಿದವರು. ನೀವು ಬಡತನದ ಜೊತೆಗೆ ದೇಶವನ್ನು ಕಾದವರು. ನೀವು ಬಡತನಕ್ಕಾಗಿ ಪ್ರಾಣ ಬಿಟ್ಟವರಲ್ಲ. ದೇಶಕ್ಕಾಗಿ ಪ್ರಾಣ ಬಿಟ್ಟವರು. ಇಲ್ಲಿ ಬಡತನಕ್ಕಿಂತ ದೇಶ ದೊಡ್ಡದು ಎನ್ನುವ ನಿಮ್ಮ ಪರಿಜ್ಞಾನವೇ ದೊಡ್ಡದು.
ದೇಶ ಮೌನವಾಗಿದೆ, ಮೌನವೇ ಕುದಿಯುತ್ತಿದೆ. ನಿಮಗಾಗಿ ಕಾದು ಕುಳಿತ ನಿಮ್ಮ ಕಂದಮ್ಮಗಳ ನಿರಾಸೆಗಾಗಿ, ನಿಮ್ಮನ್ನು ಅಗಲಿದವರ ನೋವು-ಸಂಕಟ-ಆಕ್ರಂದನ -ವೇದನೆ-ಕಂಬನಿಗಾಗಿ. ಅದಾವ ತಾಯಿ-ತಂದೆ ತಾನೇ, ತಮ್ಮ ಮಕ್ಕಳು ಶವದ ಪೆಟ್ಟಿಗೆಯೊಳಗೆ ಬರುವುದನ್ನು ಸಹಿಸುತ್ತಾರೆ? ಅದ್ಯಾವ ಮಡದಿ ತಾನೇ ಅಂಗಾಂಗ ಗಳಿಲ್ಲದ ಪತಿಯ ದೇಹವನ್ನು ನೋಡಲು ಬಯಸುತ್ತಾಳೆ? ಅದ್ಯಾವ ಮಕ್ಕಳು ತನ್ನ ತಂದೆಯು ಮಾಂಸದ ಮುದ್ದೆ ಆಗುವುದನ್ನು ನಿರೀಕ್ಷಿಸುತ್ತಾರೆ? ಅದ್ಯಾವ ದೇಶ ತಾನೇ ತನ್ನ ವೀರ ಪುತ್ರರನ್ನು ಕಳೆದುಕೊಳ್ಳಲು ಸಿದ್ಧವಿರುತ್ತದೆ?. ಆದರೆ ಇವೆಲ್ಲವೂ ನಡೆದು ಹೋಗಿವೆ. ನಾವು ಅದನ್ನು ಸಹಿಸಿಕೊಂಡು ಜೀವಿಸುತ್ತಿದ್ದೇವೆ, ಬದುಕುತ್ತಿದ್ದೇವೆ. ಆದರೆ ಒಂದಂತೂ ಸತ್ಯ ನಿಮ್ಮ ಶೌರ್ಯ ನಾಳಿನ ಬದುಕಿಗೆ ಮಾದರಿ. ನಿಮ್ಮ ಬದುಕೇ ಒಂದು ಅರ್ಥಪೂರ್ಣ. ಸಾವು ಕೂಡ. ಒಬ್ಬ ಸೈನಿಕ ಬದುಕಿರುವವರೆಗೂ ಒಂದೇ ಗುಂಡಿಗೆಯಲ್ಲಿ ಮಾತ್ರ ಜೀವಿಸುತ್ತಾನೆ. ತಾನು ಹುತಾತ್ಮನಾದರೆ ಸಾವಿರ ಗುಂಡಿಗೆ ಗಳಿಗೆ ಜೀವ ನೀಡುತ್ತಾನೆ. ಈ ಮಾತು ಇಂದು ಸತ್ಯವಾಗಿ ಬೇಕು. ಹಾಗಂತ ಅಲ್ಲಲ್ಲಿ ಮಾತುಗಳು ಕೇಳಿಬರುತ್ತಿವೆ.
ತಮ್ಮ ಶವಪೆಟ್ಟಿಗೆಗೆ ಹೊಡೆದ ಮೊಳೆಯ ಶಬ್ದಕ್ಕಿಂತ ರಾಜಕಾರಣದ ಗದ್ದಲವೇ ಇಂದು ಜಾಸ್ತಿ ಆದಂತಿದೆ. ಪಕ್ಷಗಳ ವರ್ಚಸ್ಸು ಜಾಸ್ತಿಯಾಗದಂತೆ ಪರಸ್ಪರ ವಾಗ್ವಾದ ಮುಂದುವರಿಯುತ್ತಿದೆ. ನಿಮ್ಮ ಶವಪೆಟ್ಟಿಗೆಯನ್ನು ಮುಂದಿಟ್ಟುಕೊಂಡು ರಾಜಕಾರಣ-ಧರ್ಮ-ವರ್ಚಸ್ಸುಗಳು ತಾಂಡವವಾಡಿದಂತೆ ಭಾಸವಾಗುತ್ತಿದೆ. ಇದು ಮತ್ತಷ್ಟು ಶವಪೆಟ್ಟಿಗೆಗಳನ್ನು ಹೊತ್ತು ಸಾಗುವ ದೌರ್ಭಾಗ್ಯವನ್ನು ನಮ್ಮ ಹೆಗಲಿಗೆ ನೀಡಿಬಿಡಬಹುದು. ನಾಳಿನ ಹತ್ತಾರು ಕುಟುಂಬಗಳ ತಬ್ಬಲಿತನಕ್ಕೆ ನಾವು ಕಾರಣರಾದರೆ ನಾವೇ ನಿಜವಾದ ದೇಶದ್ರೋಹಿಗಳಾಗಿ ಬಿಡಬಹುದೇನೋ ಎನಿಸುತ್ತಿದೆ. ಮತ್ತೊಮ್ಮೆ ಈ ನೆಲ ರಕ್ತವನ್ನು ಬಯಸಬಾದು ಹಾಗೆಯೇ ಕಂಬನಿಯನ್ನು ಕೂಡ.
ನಿಮ್ಮ ಈ ದುರಂತ ನಡೆದ ಮೇಲೆ, ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಚರ್ಚೆ-ವಾದ-ವಿವಾದ ನಡೆಯುತ್ತಿದೆ. ಇಲ್ಲಿ ಸಂತಾಪಕ್ಕಿಂತ ಸಂಘರ್ಷವೇ ಹೆಚ್ಚಾಗಿರುವಂತೆ ಕಾಣುತ್ತಿದೆ. ಪರಸ್ಪರ ಪಕ್ಷ-ವ್ಯಕ್ತಿಗಳನ್ನು ಪರಾಮರ್ಶಿಸಲಾಗುತ್ತಿದೆ. ಇದು ಮುಂದಿನ ಚುನಾವಣೆಯ ಪ್ರಣಾಳಿಕೆ ಎಂದು ಕೆಲವರಿಂದ ಶಂಕಿಸಲಾಗುತ್ತಿದೆ. ನೀವು ಮಡಿದ ಜಾಗದಲ್ಲಿ ರಕ್ತದ ಕಲೆ ಇನ್ನೂ ಮಾಸಿಯೇ ಇಲ್ಲ. ಆದರೆ ಅದನ್ನೇ ಬಳಸಿಕೊಂಡು ಮತ ಕೇಳುವ ವಾಸನೆ ಕೂಡ ಅಡರುತ್ತಿದೆ.
ಹುತಾತ್ಮರಾದವರ ಕುಟುಂಬಕ್ಕೆ ಸಹಾಯ ಮಾಡಿ ಎನ್ನುವ ಸ್ಥಿತಿಯಲ್ಲಿಯೇ ಈ ವ್ಯವಸ್ಥೆ ನಿಮ್ಮ ಕುಟುಂಬಗಳನ್ನು ಇಟ್ಟಿದೆ. ಇದಕ್ಕೆ ನೀವು ಕಾರಣರಲ್ಲ ಎಂಬುದು ಸತ್ಯ. ಈ ದೇಶ ನಿಮಗೆ ಭದ್ರತೆ, ಸುರಕ್ಷತೆಯನ್ನು ಇನ್ನೂ ಉತ್ತಮವಾಗಿ ನೀಡಬಹುದಿತ್ತು. ದೇಶಕ್ಕಾಗಿ ಜೀವ ಕೊಟ್ಟ ಕುಟುಂಬದವರನ್ನು ಬೇಡುವ ಕೈಗಳಾಗಿ ಸೃಷ್ಟಿಸಿದ್ದೇವೆ. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸೇವೆ ಎಂದರೆ ಅದು ಸೈನಿಕ ಸೇವೆ ಇರಬಹುದು. ಆದರೆ ನಿಮ್ಮ ಬದುಕಿನ ವೇತನದ ಬಗ್ಗೆ ದೊಡ್ಡವರು ಚಿಂತಿಸಬೇಕಿದೆ. ಇದರ ಬಗ್ಗೆಯೂ ಕೂಡ ನಾವು ಇಂದು ಯೋಚಿಸಬೇಕಿದೆ.
ಮೊನ್ನೆ ನಿಮ್ಮ ಸಾವನ್ನು ನೋಡಿದ ಮೇಲೆ ಸಾಯುವುದಾದರೆ ಹೀಗೆ ಸಾಯಬೇಕೆಂದು, ಹಾಗೆಯೆ ಮಕ್ಕಳಿಗೆ ಜನ್ಮ ನೀಡುವುದಾದರೆ ನಿಮ್ಮಂತಹ ಮಕ್ಕಳಿಗೆ ಜನ್ನ ನೀಡಬೇಕೆಂದು ಪ್ರತಿಯೊಬ್ಬ ಬಡ ಭಾರತೀಯ ತಂದೆ ತಾಯಿಗೂ ಅನಿಸಿರಬಹುದು. ಏಕೆಂದರೆ ದೇಶಕ್ಕೆ ಸೈನಿಕರನ್ನು ಕೊಡುವವರು ಅವರೇ ತಾನೇ?
ನೀವು ಅಮರ ಅಜರಾಮರ...ಇಲ್ಲಿನ ಪ್ರತಿ ಎದೆಯೊಳಗೆ
ಈ ನೆಲದೊಳಗೆ....