ಪುಲ್ವಾಮ ದಾಳಿ: ಪ್ರಾಣ ಕಳಕೊಂಡವರಾರು? ಲಾಭ ಪಡೆಯುತ್ತಿರುವವರಾರು?

Update: 2019-02-19 03:06 GMT

ಸಾರ್ವತ್ರಿಕವಾಗಿ ಟೀಕೆಗೆ ಒಳಗಾಗಿದ್ದ ರಫೇಲ್ ಹಗರಣ, ನೋಟ್ ರದ್ದತಿ ಹಗರಣ ಸೇರಿದಂತೆ ಹಲವಾರು ಪ್ರಕರಣಗಳನ್ನು ಮೋದಿ ಸರಕಾರ ಬದಿಗೆ ಸರಿಸಲು ಈ ಪುಲ್ವಾಮ ದಾಳಿ ಅನುಕೂಲ ಕಲ್ಪಿಸಿರುವುದಂತೂ ನಿಜ. ಜೊತೆಗೆ ಈ ಚುನಾವಣಾ ವರ್ಷದಲ್ಲಿ ಕೋಮು ಧ್ರುವೀಕರಣ ತೀವ್ರಗೊಳಿಸಿ ಅದರ ಲಾಭವನ್ನು ಚುನಾವಣೆಯಲ್ಲಿ ಪಡೆಯಲು ಹೊರಟಿದೆ ಸಂಘ ಪರಿವಾರ. ಹಾಗಾಗಿ ಮೋದಿಯ ಹತ್ತು ಹಲವು ಹಗರಣಗಳಿಂದಾಗಿ ಒಂದು ಮಟ್ಟದ ಮಂಕು ಬಡಿದು ಕುಳಿತಂತೆ ಇದ್ದ ಈ ಶಕ್ತಿಗಳು ಈಗ ಮತ್ತೊಮ್ಮೆ ಮೋದಿಯೇ ಪ್ರಧಾನಿಯಾಗಬೇಕೆಂದು ಊಳಿಡಲು ಈ ದಾಳಿಯನ್ನು ಬಳಸಿಕೊಳ್ಳುತ್ತಿವೆ.

 ಪುಲ್ವಾಮ ದಾಳಿ-ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಕೇಂದ್ರೀಯ ಮೀಸಲು ಪೋಲೀಸ್ ಪಡೆಯ ಮೇಲೆ ದಾಳಿ ನಡೆದು ನಲವತ್ತಕ್ಕೂ ಹೆಚ್ಚು ಮೀಸಲು ಪೋಲೀಸರು ಸಾವಿಗೀಡಾಗಿರುವ ಘಟನೆ ಈಗ ದೇಶಾದ್ಯಂತ ಬಹು ದೊಡ್ಡ ಚರ್ಚೆಯ ವಿಚಾರವಾಗಿದೆ. 78 ಮಿಲಿಟರಿ ಟ್ರಕ್‌ಗಳಲ್ಲಿ ಸಂಚರಿಸುತ್ತಿದ್ದ ಸುಮಾರು 2,500ಕ್ಕೂ ಹೆಚ್ಚು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೇಲೆ ಭಾರೀ ಭದ್ರತೆಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ದಾಳಿ ನಡೆದಿದೆ. ಇದನ್ನು ಮೂರು ದಶಕಗಳಲ್ಲಿನ ಅತೀ ದೊಡ್ಡ ದಾಳಿಯೆಂದು ಹೇಳಲಾಗುತ್ತಿದೆ. ಪುಲ್ವಾಮದಲ್ಲಿ ಸುಮಾರು 350 ಕೆಜಿಯಷ್ಟು ಆರ್‌ಡಿ ಎಕ್ಸ್ ಸ್ಫೋಟಕ ಬಳಸಲಾಗಿದೆ ಎಂದು ಹೇಳಲಾಗಿದೆ. ಸುಮಾರು ಇಪ್ಪತ್ತು ವರ್ಷ ಪ್ರಾಯದ ಸ್ಥಳೀಯ ಯುವಕನೊಬ್ಬ ಕಾರಿನಲ್ಲಿ ಸ್ಫೋಟಕ ತುಂಬಿಕೊಂಡು ಬಂದು ಈ ಕೃತ್ಯ ಎಸಗಿದ್ದಾನೆ ಎಂಬ ಪ್ರಾಥಮಿಕ ವರದಿಯಿದೆ.

ಪುಲ್ವಾಮ ದಾಳಿ ನಡೆದು ಕೆಲವೇ ಕ್ಷಣದಿಂದಲೇ ಸಂಘ ಪರಿವಾರದ ಶಕ್ತಿಗಳು ಚುರುಕಾಗಿದ್ದು ಏಕಪಕ್ಷೀಯ ತೀರ್ಮಾನವನ್ನು ಜನಸಾಮಾನ್ಯರ ಮೇಲೆ ಹೇರುತ್ತಿವೆ. ಮಾಧ್ಯಮಗಳೂ ದೇಶಾದ್ಯಂತ ಕಾಶ್ಮೀರಿ ಜನಸಾಮಾನ್ಯರ ಮೇಲೆ, ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಪ್ರಗತಿಪರರು ಬುದ್ಧಿಜೀವಿಗಳ, ಮಾನವ ಹಕ್ಕು ಹೋರಾಟಗಾರರ ಮೇಲೆ ದಾಳಿಗಳನ್ನು ಸಂಘಟಿಸಲು ತೊಡಗಿವೆ. ಜೊತೆಗೆ ಪಾಕಿಸ್ತಾನವನ್ನು ಯುದ್ಧದಲ್ಲಿ ನಾಶ ಮಾಡಬೇಕೆಂಬ ಹುಸಿ ಯುದ್ಧೋನ್ಮಾದವನ್ನು ದೇಶಾದ್ಯಂತ ಸೃಷ್ಟಿಸಲು ಹೊರಟಿವೆೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾಮೂಹಿಕ ಸನ್ನಿ ಹರಡತೊಡಗಿವೆೆ.

ಪುಲ್ವಾಮದ ದಾಳಿಯ ಮಾರನೇ ದಿನವೇ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಾರ್ವಜನಿಕ ಭಾಷಣದಲ್ಲಿ ‘‘ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸಿದರೆ ದೇಶದಲ್ಲಿರುವ ಉಗ್ರವಾದವನ್ನು ಸಂಪೂರ್ಣ ಮಟ್ಟ ಹಾಕುತ್ತೇವೆ’’ ಎಂದು ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ‘‘ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಲು ಸೇನೆಗೆ ಎಲ್ಲಾ ಅಧಿಕಾರ ನೀಡಲಾಗಿದೆ’’ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ಗುಪ್ತಚರ ಮತ್ತು ಭದ್ರತಾ ವೈಫಲ್ಯಗಳಿಂದ ಈ ಘಟನೆ ನಡೆದಿದೆ ಎಂದಿದ್ದಾರೆ. ಅಲ್ಲದೆ ಭಾರತದ ಗೂಢಚಾರ ಸಂಸ್ಥೆ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ ನ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್ ‘‘ಆಂತರಿಕ ಭದ್ರತಾ ವೈಫಲ್ಯವೇ ಈ ಘಟನೆಗೆ ಕಾರಣ, ಇಲ್ಲದಿದ್ದರೆ ಇಂತಹ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ’’ ಎಂದ ವರದಿಯಿದೆ. ಜೊತೆಗೆ ಜಮ್ಮು ಕಾಶ್ಮೀರದ ರಾಜ್ಯಪಾಲರ ಭದ್ರತಾ ಸಲಹೆಗಾರ ವಿಜಯ್ ಕುಮಾರ್ ನಮಗೆ ಯಾವುದೇ ಗುಪ್ತಚರ ಮಾಹಿತಿ ಇರಲಿಲ್ಲ, ಇದ್ದಿದ್ದರೆ ನಾವು ಮುಂಜಾಗರೂಕತೆ ತೆಗೆದುಕೊಳ್ಳುತ್ತಿದ್ದೆವು ಎಂದಿದ್ದಾರೆ. ಜೊತೆಗೆ ಕೇಂದ್ರ ಸರಕಾರ ಜನರಲ್ಲಿ ಬಿಜೆಪಿ ಬಗ್ಗೆ ಈಗ ಮೂಡಿರುವ ಅಭಿಪ್ರಾಯದ ಬಗ್ಗೆ ಗುಪ್ತಚರ ವಿಭಾಗಗಳ ವರದಿ ಕೇಳಿದೆ. ಚುನಾವಣೆ ನಡೆದರೆ ಬಿಜೆಪಿಗೆ ಎಷ್ಟು ಬೆಂಬಲ ಸಿಗಬಹುದೆಂಬ ಮಾಹಿತಿ ಕಲೆಹಾಕಿ ವರದಿ ಮಾಡಲು ಆದೇಶಿರುವ ಸುದ್ದಿಯಿದೆ. ಹಾಗೆಯೇ ಮಾಹಿತಿ ಮತ್ತು ಪ್ರಸಾರ ಇಲಾಖೆ ಸುದ್ದಿ ಸಂಸ್ಥೆಗಳಿಗೆ ಸರಕಾರವನ್ನು ಟೀಕಿಸುವ ಇಲ್ಲವೇ ವಿರೋಧಿಸುವ ಸುದ್ದಿಗಳನ್ನು ಪ್ರಕಟಿಸಬಾರದೆಂದು ತಾಕೀತು ಮಾಡಿರುವ ಸುದ್ದಿಯೂ ಇದೆ. ಅಂತಹ ಸುದ್ದಿಗಳು ದೇಶವಿರೋಧಿ ಎಂದು ಹೇಳಿದೆ.

 ಈ ದಾಳಿಯ ನಂತರ ಪಾಕಿಸ್ತಾನಕ್ಕೆ ನೀಡಿದ್ದ ವ್ಯಾಪಾರ ವಹಿವಾಟಿಗೆ ಹೆಚ್ಚಾಗಿ ಅನ್ವಯವಾಗುವ ‘ಅತ್ಯಂತ ಅನುಕೂಲಕರ ರಾಷ್ಟ್ರ’ ಎಂಬ ಅನುಮೋದನೆಯನ್ನು ಭಾರತ ಹಿಂಪಡೆದುಕೊಂಡಿದೆ. ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ಇದುವರೆಗೂ ನೀಡಲಾಗಿದ್ದ ಭದ್ರತೆಯನ್ನು ಕೂಡ ಹಿಂದೆಗೆದುಕೊಂಡಿದೆ.

ಸಾರ್ವತ್ರಿಕವಾಗಿ ಟೀಕೆಗೆ ಒಳಗಾಗಿದ್ದ ರಫೇಲ್ ಹಗರಣ, ನೋಟ್ ರದ್ದತಿ ಹಗರಣ ಸೇರಿದಂತೆ ಹಲವಾರು ಪ್ರಕರಣಗಳನ್ನು ಮೋದಿ ಸರಕಾರ ಬದಿಗೆ ಸರಿಸಲು ಈ ಪುಲ್ವಾಮ ದಾಳಿ ಅನುಕೂಲ ಕಲ್ಪಿಸಿರುವುದಂತೂ ನಿಜ. ಜೊತೆಗೆ ಈ ಚುನಾವಣಾ ವರ್ಷದಲ್ಲಿ ಕೋಮು ಧ್ರುವೀಕರಣ ತೀವ್ರಗೊಳಿಸಿ ಅದರ ಲಾಭವನ್ನು ಚುನಾವಣೆಯಲ್ಲಿ ಪಡೆಯಲು ಹೊರಟಿದೆ ಸಂಘ ಪರಿವಾರ. ಹಾಗಾಗಿ ಮೋದಿಯ ಹತ್ತು ಹಲವು ಹಗರಣಗಳಿಂದಾಗಿ ಒಂದು ಮಟ್ಟದ ಮಂಕು ಬಡಿದು ಕುಳಿತಂತೆ ಇದ್ದ ಈ ಶಕ್ತಿಗಳು ಈಗ ಮತ್ತೊಮ್ಮೆ ಮೋದಿಯೇ ಪ್ರಧಾನಿಯಾಗಬೇಕೆಂದು ಊಳಿಡಲು ಈ ದಾಳಿಯನ್ನು ಬಳಸಿಕೊಳ್ಳುತ್ತಿವೆ. ಹಾಗೆ ಮಾಡುತ್ತಾ ಈ ದೇಶದ ಆಳುವ ಶಕ್ತಿಗಳಾದ ಭಾರೀ ಕಾರ್ಪೊರೇಟುಗಳು ಹಾಗೂ ಭಾರೀ ಆಸ್ತಿವಂತರ ಲೂಟಿ ಹಗಲುದರೋಡೆಗಳು ಜನಸಾಮಾನ್ಯರ ದೃಷ್ಟಿಯಿಂದ ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ. ಯಾಕೆಂದರೆ ನೋಟು ರದ್ದತಿ, ರಫೇಲ್ ಹಗರಣ, ಫಸಲ್ ಬಿಮಾ ಹಗರಣ, ಬಿಎಸ್ಸೆನ್ನೆಲ್ ನಷ್ಟ ಹಾಗೂ ಮುಚ್ಚುವ ಸ್ಥಿತಿ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಅವನತಿ ಮೊದಲಾದವುಗಳ ಹಿಂದೆ ಭಾರೀ ಕಾರ್ಪೊರೇಟುಗಳೇ ಇದ್ದಾರೆನ್ನುವುದು ಬಹಳ ಜನಕ್ಕೆ ಈಗ ಗೊತ್ತಿರುವ ವಿಚಾರ ತಾನೆ. ಹಾಗಾಗಿ ಜನರನ್ನು ಯಾಮಾರಿಸಲು ಸಂಘ ಪರಿವಾರಕ್ಕೆ ಕಷ್ಟವಾಗಿತ್ತು. ಈಗ ಪಾಕಿಸ್ತಾನ ಎಂಬ ಗುಮ್ಮನನ್ನು ಜನಸಾಮಾನ್ಯರಿಗೆ ದೊಡ್ಡದಾಗಿ ಬಿಂಬಿಸುತ್ತಾ ಯುದ್ಧ ಭೀತಿಯನ್ನು ಬಿತ್ತಿ ಅದರ ಫಸಲನ್ನು ತೆಗೆದುಕೊಳ್ಳುವ ಉತ್ಸಾಹದಲ್ಲಿ ಸಂಘ ಪರಿವಾರ ಚುರುಕಾಗಿ ಕಾರ್ಯಕ್ಷೇತ್ರಕ್ಕೆ ಇಳಿದಿದೆ. ಈ ಶಕ್ತಿಗಳ ಜೊತೆಗೆ ಮೇಲ್ಜಾತಿ ಮತ್ತು ನಗರ ಪ್ರದೇಶದ ಮಧ್ಯಮ ವರ್ಗ ಕೋರಸ್ ಹಾಡುತ್ತಿರುವುದು ಹೆಚ್ಚಾಗತೊಡಗಿದೆ. ಪುಲ್ವಾಮ ದಾಳಿಯಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಂಡವರಲ್ಲಿ ದಲಿತರೇ ಹೆಚ್ಚು. ನಂತರ ಹಿಂದುಳಿದವರು, ಮುಸ್ಲಿಂ ಬಿಟ್ಟರೆ ಮೇಲ್ಜಾತಿಯ ಮೇಲ್ವರ್ಗದ ಯಾರೊಬ್ಬರೂ ಇರಲಿಲ್ಲ. ಆದರೆ ಪಾಕಿಸ್ತಾನವನ್ನು ಯುದ್ಧದಲ್ಲಿ ನಾಶಮಾಡಬೇಕೆಂದು ಟ್ವೀಟುಗಳು, ಪೋಸ್ಟ್‌ಗಳನ್ನು ಹಾಕುತ್ತಿರುವವರಲ್ಲಿ ಹೆಚ್ಚಿನವರು ಮೇಲ್ಜಾತಿ ಮೇಲ್ವರ್ಗಕ್ಕೆ ಸೇರಿದ ನಗರ ಪ್ರದೇಶದ ಮಧ್ಯಮ ವರ್ಗದವರೇ ಹೆಚ್ಚಿನವರು. ಅವರು ಸೈನಿಕರಾಗಲು ಬಯಸುವವರು ಇಲ್ಲ ಎನ್ನುವಷ್ಟು ಕಡಿಮೆಯೆಂದೇ ಹೇಳಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹ ದಾಳಿಗಳು ಇಂದು ನಿನ್ನೆಯದಲ್ಲ. ಅಲ್ಲಿ ಭದ್ರತಾ ಪಡೆಗಳಿಗೂ ಮಿಲಿಟೆಂಟ್ ಸಂಘಟನೆಗಳಿಗೂ ನಿರಂತರ ಸಶಸ್ತ್ರ ಸಂಘರ್ಷವಿದೆ. ಜೊತೆಗೆ ಅಲ್ಲಿನ ನಾಗರಿಕರಿಗೂ ಭದ್ರತಾ ಪಡೆಗಳಿಗೂ ನಡುವೆ ಬೀದಿಕಾಳಗ ದಿನನಿತ್ಯದ ಕತೆಯಾಗಿದೆ. ಅಲ್ಲಿನ ಇಂತಹ ಪರಿಸ್ಥಿತಿಗೆ ಕಾರಣಗಳು ಹಲವಿವೆ.

 ಜನಮತಗಣನೆ ನಡೆಸುತ್ತೇವೆ ಎಂದು ಭಾರತ ನೀಡಿದ ವಾಗ್ದಾನವನ್ನು ಆಗಿನ ನೆಹರೂ, ಸರ್ದಾರ್ ಪಟೇಲ್ ಸರಕಾರ ನಂತರ ಪಾಲಿಸಲಿಲ್ಲ. ಇದು ಅಲ್ಲಿನ ಜನಸಾಮಾನ್ಯರಲ್ಲಿ ವ್ಯಾಪಕವಾಗಿ ಅಸಮಾಧಾನ ಭುಗಿಲೇಳಲು ಕಾರಣವಾಯಿತು. ಅಲ್ಲಿನ ಜನರ ಆಶೋತ್ತರಕ್ಕೆ ವಿರುದ್ಧವಾಗಿ ಭಾರತ ಅದನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಾಗಿನಿಂದಲೇ ಸಮಸ್ಯೆಗಳು ಉಲ್ಭಣಗೊಂಡವು ಎನ್ನುವುದೇ ಸರಿಯಾಗುತ್ತದೆ. ಸ್ವತಂತ್ರ ಕಾಶ್ಮೀರಕ್ಕಾಗಿನ ಹೋರಾಟ ಆಗಿನಿಂದಲೇ ಆರಂಭವಾಯಿತೆನ್ನಬಹುದು. ಅಲ್ಲಿ ಈಗ ಮೂಲಭೂತವಾದಿಯಾಗಿರುವ, ಪಾಕಿಸ್ತಾನದ ಪರವಾಗಿರುವ, ಆಝಾದ್ ಕಾಶ್ಮೀರದ ಪರವಾಗಿರುವ ಸಂಘಟನೆಗಳೂ ಸೇರಿದಂತೆ ಹಲವು ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಸಶಸ್ತ್ರ ಸಂಘರ್ಷ ನಡೆಸುತ್ತಿರುವ ಸಂಘಟನೆಗಳಿವೆ. ಹಾಗೆಯೇ ಬಹಿರಂಗ ಹೋರಾಟ ನಡೆಸುತ್ತಿರುವ ಸಂಘಟನೆಗಳಿವೆ. ಜೊತೆಗೆ ಮನುವಾದಿ ಬ್ರಾಹ್ಮಣಶಾಹಿ ಸಂಘಟನೆಗಳು ಕೆಲವು ಜಮ್ಮುವಿನಲ್ಲಿ ಸಕ್ರಿಯವಾಗಿವೆ. ಅಲ್ಲಿನ ಜನಸಾಮಾನ್ಯರಲ್ಲಿ ಭಾರತದ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳಲು ಬಯಸದಿರುವವರ ಸಂಖ್ಯೆ ದೊಡ್ಡದಿದೆ. ಭಾರತ ತಮ್ಮನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡಿದೆ ಎಂಬ ಭಾವನೆ ಅವರ ಮನಸ್ಸುಗಳಲ್ಲಿ ಆಳವಾಗಿ ಬೇರೂರಿದೆ. ಭಾರತದ ಭದ್ರತಾ ಪಡೆಗಳು ಅಲ್ಲಿನ ಜನಸಾಮಾನ್ಯರ ಜೊತೆಗೆ ವರ್ತಿಸುತ್ತಿರುವ ರೀತಿಗಳೂ ಕೂಡ ಇದಕ್ಕೆ ಕಾರಣವಾಗಿದೆ. ಎನ್‌ಕೌಂಟರ್ ಹೆಸರಿನಲ್ಲಿ ಅಲ್ಲಿನ ಅನೇಕ ಯುವಕರನ್ನು ಕೊಂದುಹಾಕಿರುವ ಘಟನೆಗಳಿವೆ. ಅಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಹಿಂಸಿಸಿರುವ ಘಟನೆಗಳಿವೆ. ಪ್ರತಿಭಟನಾ ನಿರತ ಜನಸಾಮಾನ್ಯರ ಮೇಲೆ ಗುಂಡಿನ ದಾಳಿ ಮಾಡಿರುವ ಪ್ರಕರಣಗಳಿವೆ. ಬೀದಿ ಪ್ರತಿಭಟನಾ ನಿರತರ ಮೇಲೆ ರಬ್ಬರ್ ಗುಂಡುಗಳನ್ನು ಹಾರಿಸಿ ದೇಹಗಳ ಅವಯವಗಳನ್ನು ನಜ್ಜುಗುಜ್ಜು ಮಾಡಿರುವ ಪ್ರಕರಣಗಳಿವೆ. ಇಂತಹವು ಅವ್ಯಾಹತವಾಗಿ ಅಲ್ಲಿ ನಡೆಯುತ್ತಲೇ ಬರುತ್ತಿವೆ. ಈ ಬಗ್ಗೆ ಹಲವು ವರದಿಗಳು ಆಗಾಗ್ಗೆ ಬರುತ್ತಲೇ ಇರುತ್ತವೆ. ಸೇನಾ ಪಡೆಗಳ ವಿಶೇಷಾಧಿಕಾರದಡಿ ಕಾಶ್ಮೀರವನ್ನು ಇರಿಸಿರುವುದರಿಂದಾಗಿ ಕೂಡ ಕಾಶ್ಮೀರ ಕುದಿಯುತ್ತಲೇ ಬಂದಿದೆ.

ನರೇಂದ್ರ ಮೋದಿಯ ಬಿಜೆಪಿ 2014ರ ತನ್ನ ಚುನಾವಣಾ ಭಾಷಣದಲ್ಲಿ ತಾನು ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿನ ಉಗ್ರವಾದವನ್ನು ಸದೆಬಡಿದು ಅಲ್ಲಿ ಶಾಂತಿ ಸ್ಥಾಪಿಸುತ್ತೇನೆ ಎಂದಿತ್ತು. ನಂತರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ಹದ್ದುಬಸ್ತಿನಲ್ಲಿಡುತ್ತೇವೆ ಎಂದಿತ್ತು. ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರಕ್ಕೇರಿ ಎರಡು ವರ್ಷಗಳೊಳಗೆ ನೋಟು ರದ್ದುಗೊಳಿಸುವ ಸಮಯದಲ್ಲಿ ಕಾಶ್ಮೀರದಲ್ಲಿ ಉಗ್ರವಾದವನ್ನು ಸದೆಬಡಿಯುವುದು ಕೂಡ ನೋಟು ರದ್ದತಿಯ ಒಂದು ಪ್ರಮುಖ ಉದ್ದೇಶವಾಗಿದೆ ಎಂದಿದ್ದರು ಪ್ರಧಾನಿ ಮೋದಿ. ಆದರೆ ನೋಟು ರದ್ದತಿಯಾಗಿ ಎರಡು ದಿನಗಳೊಳಗೆ ಭದ್ರತಾ ಪಡೆಗಳಿಗೂ ಮಿಲಿಟೆಂಟ್ ಸಂಘಟನೆಯೊಂದಕ್ಕೂ ಸಶಸ್ತ್ರ ಸಂಘರ್ಷ ನಡೆದು ಎರಡೂ ಕಡೆ ಕೆಲವು ಜೀವಗಳ ನಷ್ಟಗಳು ಸಂಭವಿಸಿ ಆಗ ತಾನೆ ಹೊರಬಂದ ಹೊಸ ನೋಟುಗಳು ಅಲ್ಲಿ ಲಭಿಸಿದ ಬಗ್ಗೆ ಸೇನೆಯೇ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ವಾಸ್ತವದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಕಾಶ್ಮೀರದ ಪರಿಸ್ಥಿತಿ ಮತ್ತೂ ವಿಕೋಪಕ್ಕೆ ಹೋಗಲಾರಂಭಿಸಿತು. ಭದ್ರತಾಪಡೆಗಳ ಮೇಲೆ ಕಲ್ಲು ತೂರಾಟಗಳು, ಬೀದಿ ಕಾಳಗಗಳು ಹೆಚ್ಚಾದವು. ಮಿಲಿಟೆಂಟ್‌ಗಳೊಂದಿಗಿನ ಸಶಸ್ತ್ರ ಸಂಘರ್ಷಗಳೂ ಹೆಚ್ಚಾಗಿ ಮಿಲಿಟೆಂಟ್‌ಗಳು ಹಾಗೂ ಭದ್ರತಾ ಪಡೆಗಳ ಸಾವುಗಳ ಸಂಖ್ಯೆಯೂ ಹೆಚ್ಚಾಗತೊಡಗಿತು. ಪಿಡಿಪಿಯ ಮೆಹಬೂಬ ಮಫ್ತಿಯೊಂದಿಗೆ ಸೇರಿಕೊಂಡು ಬಿಜೆಪಿ ಅಲ್ಲಿ ಸರಕಾರ ರಚಿಸಿದ ಮೇಲೆ ಸಂಘರ್ಷಗಳು ಮತ್ತೂ ತೀವ್ರವಾಯಿತು. ಜೊತೆಗೆ ಮಿಲಿಟೆಂಟ್ ಸಂಘಟನೆಗಳಲ್ಲಿ ಯುವಕರ ಸೇರುವಿಕೆಯೂ ಹೆಚ್ಚಳ ಕಾಣತೊಡಗಿತು. ಇದನ್ನು ಭದ್ರತಾ ಸಂಸ್ಥೆಗಳೂ ಕೂಡ ಹೇಳಿವೆ. ಜನಸಾಮಾನ್ಯರು, ಸೈನಿಕರು, ಅರೆ ಸೈನಿಕರು, ಮಿಲಿಟೆಂಟ್‌ಗಳು ಸೇರಿದಂತೆ ಸಾವಿರಾರು ಜನರ ಪ್ರಾಣ ಹರಣಗಳು ಈ ಐದು ವರ್ಷಗಳಲ್ಲಿ ಆಗಿವೆ.

ಇವೆಲ್ಲವನ್ನೂ ಅವಲೋಕಿಸಿದಾಗ ಮಾತ್ರ ಸತ್ಯ ಏನು ಎಂದು ತಿಳಿಯಲು ಸಾಧ್ಯವಾಗುವುದು. ಆಳುವ ಶಕ್ತಿಗಳು ತಮ್ಮ ಕೊಳ್ಳೆ ಲೂಟಿಗಳನ್ನು ಮುಂದುರಿಸಲು ಅನಗತ್ಯ ಯುದ್ಧಗಳಿಗೆ ದೇಶವನ್ನು ತಳ್ಳಬಹುದು. ಸರಕಾರಗಳು ತಮ್ಮ ಹೊಣೆಗೇಡಿತನ ಹಾಗೂ ವೈಫಲ್ಯಗಳನ್ನು ಮರೆಮಾಚಲು ಇಂತಹ ಯಾವುದಾದರೂ ಅನಗತ್ಯ ಕುತಂತ್ರಗಳಲ್ಲಿ ಜನರನ್ನು ಮುಳುಗಿಸಲು ಶ್ರಮಿಸಬಹುದು. ಆದರೆ ಜನಸಾಮಾನ್ಯರು ಹಾಗೂ ದೇಶ ಇಂತಹ ಯುದ್ಧಗಳಿಂದ ಅತೀವ ನಷ್ಟಕ್ಕೆ ಗುರಿಯಾಗ ಬೇಕಾಗುತ್ತದೆಯೇ ಹೊರತು ಏನನ್ನೂ ಪಡೆಯಲಾಗದು ಎನ್ನುವುದನ್ನು ಮರೆಯಬಾರದು. ವಾಜಪೇಯಿ ಸರಕಾರದ ಕಾಲದಲ್ಲಿ ನಡೆಸಿದ ಕಾರ್ಗಿಲ್ ಯುದ್ಧದಿಂದ ನೂರಾರು ಸೈನಿಕರನ್ನು ಕಳೆದುಕೊಂಡದ್ದು ಬಿಟ್ಟರೆ ಬೇರೇನೂ ದಕ್ಕಲಿಲ್ಲ. ತಾತ್ಕಾಲಿಕವಾಗಿ ಅತ್ಯಲ್ಪಅವಧಿಗೆ ನಿಲ್ಲಬಹುದಾದ ಸೇನಾ ಶಿಬಿರಗಳನ್ನು ತೆರವುಗೊಳಿಸಿದ್ದು ಬಿಟ್ಟರೆ ಸಾಧನೆಯೇನಿಲ್ಲ. ಆದರೆ ಅದು ಯುದ್ಧ ಮೇನಿಯಾವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿ ಆ ಮೂಲಕ ಸೇನೆಯಲ್ಲೇ ನಡೆದ ಆಗಿನ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಕೂಡ ಆರೋಪಿಯಾಗಿದ್ದ ಶವಪೆಟ್ಟಿಗೆ ಹಗರಣ, ಕಳಪೆ ಮದ್ದುಗುಂಡು ಹಗರಣಗಳನ್ನು ಬದಿಗೆ ಸರಿಸಿಟ್ಟಿದ್ದು ಮಾತ್ರ ಸುಳ್ಳಲ್ಲ ತಾನೆ?. ವಾಸ್ತವದಲ್ಲಿ ಯುದ್ಧವೆಂದಾಗ ಪಾಕಿಸ್ತಾನ ಮಾತ್ರ ನಾಶವಾಗುತ್ತದೆ ಎನ್ನುವುದು ಸುಳ್ಳು. ಭಾರತವೂ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ಎರಡೂ ಕೂಡ ವಿನಾಶಕಾರಿ ಅಣ್ವಸ್ತ್ರಗಳನ್ನು ಹೊಂದಿವೆ. ಆಳುವಶಕ್ತಿಗಳ ಹಿತಾಸಕ್ತಿ ಹಾಗೂ ಅನುಕೂಲಕ್ಕೆ ಹುಟ್ಟು ಹಾಕುವ ಇಂತಹ ವಿನಾಶಕಾರಿ ಸಮೂಹ ಸನ್ನಿಗಳ ಬಗ್ಗೆ ಜನಸಾಮಾನ್ಯರು ಹಾಗೂ ಯುವಜನರು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಇದು ಚುನಾವಣಾ ವರ್ಷವಾಗಿರುವುದರಿಂದ ಇಂತಹವುಗಳು ಮತ್ತಷ್ಟೂ ಹೆಚ್ಚಾಗಬಹುದು.

ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News

ಜಗದಗಲ
ಜಗ ದಗಲ