‘ಬೆರಕೆ ಸರಕಾರ’ದ ಆವಶ್ಯಕತೆ ಏಕಿದೆಯೆಂದರೆ...

Update: 2019-02-19 03:08 GMT

ಕೃಪೆ: Economic and Political Weekly

ವಿರೋಧ ಪಕ್ಷಗಳ ಐಕ್ಯತೆಯ ಸಾಧ್ಯತೆಗಳು ಹೆಚ್ಚಾಗುತ್ತಿರುವಂತೆ ಬಿಜೆಪಿ ಪಾಳಯದಲ್ಲಿ ತಳಮಳಗಳು ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಬಿಜೆಪಿಯ ಉನ್ನತ ನಾಯಕರು ವಿರೋಧಪಕ್ಷಗಳ ಬಗ್ಗೆ ಪದೇಪದೇ ಕೊಡುವ ನಿಂದನಾತ್ಮಕ ಹೇಳಿಕೆಗಳೇ ಅದಕ್ಕೆ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿಯವರು ವಿರೋಧಪಕ್ಷಗಳ ಏಕತೆಯನ್ನೂ ಮತ್ತು ಅವರು ಒಟ್ಟುಗೂಡಿ ರಚಿಸಬೇಕೆಂದಿರುವ ಸರಕಾರವನ್ನು ‘ಬೆರಕೆ ಸರಕಾರ’ವೆಂದು ಅವಹೇಳನ ಮಾಡಿದ್ದಾರೆ. ‘‘ವಿರೋಧ ಪಕ್ಷಗಳು ಒಟ್ಟುಗೂಡಿ ರಚಿಸಬಹುದಾದ ಮೈತ್ರಿಕೂಟದ ಸರಕಾರದಲ್ಲಿ ದಿನಕ್ಕೊಬ್ಬರು ಪ್ರಧಾನಮಂತ್ರಿಗಳಾಗುತ್ತಾರೆ.’’ ಎಂದು ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಸಹ ಲೇವಡಿ ಮಾಡಿದ್ದಾರೆ. ಹಾಲಿ ಲೋಕಸಭೆಯ ಅಂತಿಮ ಅಧಿವೇಶನದ ಅಂತಿಮ ದಿನದಂದು ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯವರು ‘‘ಒಂದು ಸ್ಥಿರ ಸರಕಾರ ನೀಡಬೇಕೆಂದರೆ ಭಾರತಕ್ಕೆ ಬಹುಮತವಿರುವ ಸರಕಾರವು ಅತ್ಯಗತ್ಯವೆಂದೂ, ಅಂಥ ಒಂದು ಸರಕಾರವಿದ್ದುದರಿಂದಲೇ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾಯಿ ಹೆಚ್ಚಾಗಿದೆ’’ ಎಂತಲೂ ಪ್ರತಿಪಾದಿಸಿದರು. ತಮ್ಮ ಪಕ್ಷಕ್ಕೆ ರಾಷ್ಟ್ರೀಯ ನಾಯಕತ್ವ ಒದಗಿಸುವ ಸಾಮರ್ಥ್ಯವಿದೆಯೆನ್ನುವುದನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ಮತ್ತು ಅದರ ಬೆಂಬಲಿಗರು, ಪ್ರತಿಯಾಗಿ ವಿರೋಧಪಕ್ಷಗಳ ಕೂಟದ ನಾಯಕರು ಯಾರು ಎಂಬುದನ್ನು ಸದಾ ಪ್ರಶ್ನಿಸುತ್ತಾರೆ. ಸ್ಥಿರ ಸರಕಾರ ಕೊಡುವ ಸಾಧ್ಯತೆ ಇರುವುದು ಧೃಢ ನಾಯಕತ್ವ ಹೊಂದಿರುವ ಬಿಜೆಪಿಗೆ ಮಾತ್ರ ಎಂಬ ಅಭಿಪ್ರಾಯವನ್ನು ಮತದಾರರ ಮನಸ್ಸಿನಲ್ಲಿ ಮೂಡಿಸುವ ಬಿಜೆಪಿಯ ಚುನಾವಣಾ ತಂತ್ರಕ್ಕೆ ಇವೆಲ್ಲವೂ ಪೂರಕವಾಗಿಯೇ ಇದೆ. ಮತದಾರರು ‘ಬೆರಕೆ’ ಸರಕಾರದ ಬಗ್ಗೆ ಎಚ್ಚರಿಕೆಯಿಂದಿರಬೇಕೆಂಬ ಬಿಜೆಪಿಯ ಹೇಳಿಕೆಗಳು ತನ್ನ ಸ್ವಂತ ಸಾಧನೆಯ ಮೇಲೆ ಮತ ಕೇಳಲು ಸಾಧ್ಯವಾಗದಿರುವ ಆ ಪಕ್ಷದ ಪರಿಸ್ಥಿತಿಯನ್ನು ಸೂಚಿಸುತ್ತಿದ್ದರೂ, ಸ್ಥಿರತೆ ಮತ್ತು ಏಕರೂಪತೆಯ ಬಗೆಗಿನ ಅದರ ಗೀಳಂತೂ ಅತ್ಯಂತ ಪ್ರಜಾತಂತ್ರ ವಿರೋಧಿಯಾಗಿದೆ. ವಿರೋಧಪಕ್ಷಗಳೆಲ್ಲವೂ ಒಂದಾಗಿ ಒಂದು ಪರ್ಯಾಯ ಸರಕಾರ ರಚನೆ ಮಾಡಲು ನಡೆಸುತ್ತಿರುವ ರಾಜಕೀಯ ಪ್ರಯತ್ನಗಳನ್ನು ಚುನಾವಣಾ ಪ್ರಕ್ರಿಯೆಗಳಲ್ಲಿ ವಿವಿಧ ಹಿನ್ನೆಲೆಯ ಹಲವಾರು ಪಕ್ಷಗಳು ಒಟ್ಟಾಗಿ ಕೆಲಸ ಮಾಡಲೇಬೇಕಾದ ರಾಜಕೀಯ ಪ್ರಜಾತಂತ್ರದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಇದು ವಿಭಿನ್ನ ಸಾಮಾಜಿಕ ಹಿನ್ನೆಲೆಯುಳ್ಳ ಗುಂಪುಗಳ ಸುಸಂಬದ್ಧ ರಾಜಕೀಯ ಆಶೋತ್ತರಗಳ ಸಂಕೇತವೂ ಸಹ ಆಗಿದೆ. ಆದರೆ ಒಂದು ಸರ್ವಾಧಿಕಾರಿ ಪಕ್ಷದೆದುರು ಇಂತಹ ಪ್ರಜಾತಾಂತ್ರಿಕ ಆಶೋತ್ತರಗಳ ಪ್ರತಿಪಾದನೆ ಮಾಡುವುದನ್ನು ಬಿಜೆಪಿಯು ‘ಬೆರಕೆ’ ಅಥವಾ ಕಲುಷಿತ ರಾಜಕೀಯ ಎಂದು ಬಣ್ಣಿಸುತ್ತದೆ. ಆದರೆ ಯಾವುದನ್ನು ಬಿಜೆಪಿಯ ಏಕರೂಪಿ ಧೋರಣೆಯು ಬೆರಕೆ ಅಥವಾ ಕಲುಷಿತ ಎಂದು ಕರೆಯುತ್ತದೆಯೋ ಅದುವೇ ಭಾರತದ ವಿಭಿನ್ನ ಮತ್ತು ಅಸಮಾನ ಸಾಮಾಜಿಕ ಅಸಮಾನತೆಗಳನ್ನು ನಿರ್ವಹಿಸಲು ಇರುವ ದಾರಿಯೂ ಆಗಿದೆ. ವಿವಿಧ ಬಗೆಯ ರಾಜಕೀಯ ಪಕ್ಷಗಳು ಒಟ್ಟಾಗಿ ಬರುತ್ತಿರುವುದು ರಾಜಕಾರಣದ ಒಕ್ಕೂಟ ಸ್ವರೂಪದ ಸಂಕೇತ ಮಾತ್ರವಲ್ಲದೆ ಹಾಲಿ ಸರಕಾರದ ಕೇಂದ್ರೀಕರಿಸುವ ಮತ್ತು ಏಕರೂಪಿಗೊಳಿಸುವ ಧೋರಣೆಯ ವೈಫಲ್ಯದ ಸಂಕೇತವೂ ಆಗಿದೆ. ಬಿಜೆಪಿ ಮತ್ತು ಎನ್‌ಡಿಎ ವಿರುದ್ಧ ಒಂದುಗೂಡುತ್ತಿರುವ ವಿರೋಧಪಕ್ಷಗಳು ವಿವಿಧ ಸಾಮಾಜಿಕ ಶಕ್ತಿಗಳನ್ನೂ, ಪ್ರದೇಶಗಳನ್ನೂ ಮತ್ತು ಅನನ್ಯತೆಗಳನ್ನೂ ಪ್ರತಿನಿಧಿಸುತ್ತಿದ್ದು ಅವೆಲ್ಲವನ್ನೂ ಯಾವುದಾದರೂ ಒಂದೇ ಪಕ್ಷವು ಪ್ರತಿನಿಧಿಸಲು ಸಾಧ್ಯವಿಲ್ಲ. ಹೀಗಾಗಿ ವಿವಿಧ ಬಗೆಯ ಹಾಗೂ ಕೆಲವೊಮ್ಮೆ ಪರಸ್ಪರ ವಿರುದ್ಧವಾದ ದೃಷ್ಟಿಕೋನಗಳನ್ನು ಮತ್ತು ಆಸಕ್ತಿಗಳನ್ನು ಒಳಗೊಳ್ಳಲು ಹಲವು ಪಕ್ಷಗಳು ಒಟ್ಟುಗೂಡಿ ರಚಿಸುವ ಮೈತ್ರಿಕೂಟ ಸರಕಾರದ ಅಗತ್ಯವಿದೆ. ಈ ಒಳಗೊಳ್ಳುವ ಪ್ರಕ್ರಿಯೆಯನ್ನು ಖಾತರಿಗೊಳಿಸಿಕೊಳ್ಳಲು ಮಾಡಿಕೊಳ್ಳುವ ರಾಜಿಗಳು ಕೇಂದ್ರದಲ್ಲಿ ಸ್ಥಿರ ಸರಕಾರ ರಚನೆಗೆ ಖಾತರಿಯನ್ನೊದಗಿಸುತ್ತದೆ. ಅದಿಲ್ಲದೆ ಹಾಲಿ ಸರಕಾರದಂತೆ ಅಕಲುಷಿತ ಮತ್ತು ಏಕಪಕ್ಷೀಯ ಧೋರಣೆಗಳನ್ನು ಅನುಸರಿಸುವುದರಿಂದ ಸಾಮಾಜಿಕ ಬಿರುಕುಗಳು ಇನ್ನಷ್ಟು ಹೆಚ್ಚಾಗುತ್ತವೆ. ಸರಕಾರವು ಸಚಿವ ಸಂಪುಟ ವ್ಯವಸ್ಥೆಯನುಗುಣವಾಗಿ ಕಾರ್ಯನಿರ್ವಹಿಸದೆ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲೇ ಅತಿ ಹೆಚ್ಚು ಅಧಿಕಾರವು ಕೇಂದ್ರೀಕೃತವಾಗಿರುವುದು ಹಾಲಿ ಸರಕಾರವು ಪಾಲಿಸುತ್ತಿರುವ ಏಕಪಕ್ಷೀಯ ಧೋರಣೆಗಳಿಗೆ ಒಂದು ಉದಾಹರಣೆಯಾಗಿದೆ. ಒಂದು ಮೈತ್ರಿಕೂಟ ಸರಕಾರದಲ್ಲಿ ಯಾವ ಒಂದು ಪಕ್ಷವೂ ಇನ್ನಿತರ ಪಕ್ಷಗಳಿಗಿಂತ ನಿರ್ಣಯಾತ್ಮಕವಾದ ಹೆಚ್ಚಿನ ಅಧಿಕಾರ ಹೊಂದಿರುವುದಿಲ್ಲ ಹಾಗೂ ಪ್ರಧಾನಮಂತ್ರಿಯೂ ಸಹ ಸಮಾನರಲ್ಲಿ ಮೊದಲಿಗರಷ್ಟೇ ಆಗಿರುತ್ತಾರೆ ಮತ್ತು ಒಟ್ಟಾರೆ ಸಂಪುಟವು ಸಾಮೂಹಿಕವಾಗಿ ಸಂಸತ್ತಿಗೆ ಉತ್ತರದಾಯಿಯಾಗಿರುವ ಪ್ರಜಾತಾಂತ್ರಿಕ ಪದ್ಧತಿ ಮರಳುತ್ತದೆ. ಕಳೆದ ಐದು ವರ್ಷಗಳಲ್ಲಿ ನಾವು ಕಾಣುತ್ತಿರುವಂತೆ ಪ್ರಧಾನಿ ಕಾರ್ಯಾಲಯದಲ್ಲಿ ಅತಿ ಹೆಚ್ಚು ಅಧಿಕಾರವು ಕೇಂದ್ರೀಕರಣಗೊಂಡಿರುವುದು ಸಂಸತ್ತಿನ ಸಾಂಸ್ಥಿಕ ಮಹತ್ವವನ್ನೂ ಕುಗ್ಗಿಸುತ್ತದೆ ಮತ್ತು ಆ ಮೂಲಕ ಜನರ ಪ್ರಾತಿನಿಧಿತ್ವದ ಪ್ರಜಾತಂತ್ರಿಕ ತತ್ವವನ್ನೂ ಮೂಲೆಗುಂಪುಮಾಡುತ್ತದೆ. ಒಂದು ಸಂಸದೀಯ ಪ್ರಜಾತಂತ್ರವನ್ನು ಹೀಗೆ ರಹಸ್ಯವಾಗಿ ಅಧ್ಯಕ್ಷೀಯ ಮಾದರಿ ಪ್ರಜಾತಂತ್ರವನ್ನಾಗಿಸುವ ಪ್ರಕ್ರಿಯೆಯಲ್ಲಿ ಸರ್ವಾಧಿಕಾರಿ ಧೋರಣೆಗಳು ಮನೆಮಾಡಿವೆ. ಹೀಗಾಗಿ ಸಂಸತ್ತಿನ ಪಾತ್ರವನ್ನು ಮರಳಿ ಸ್ಥಾಪಿಸಲು ಮತ್ತು ಜನರ ರಾಜಕೀಯ ಇಚ್ಛೆಯನ್ನು ರಾಜಕೀಯ ಪ್ರಕ್ರಿಯೆಯೊಳಗೆ ಮರಳಿಸುವ ಸಾಧ್ಯತೆಯನ್ನು ಹೆಚ್ಚು ಮಾಡಲು ಇಂದಿನ ಪರಿಸ್ಥಿತಿಯಲ್ಲಿ ಒಂದು ಮೈತ್ರಿಕೂಟದ ಸರಕಾರದ ಅಗತ್ಯವಿದೆ. ಮೂಲಭೂತವಾಗಿ ನೋಡಿದರೆ ಪ್ರಜಾತಂತ್ರವೆಂಬುದು ನಿರಂತರವಾದ ಸವಾಲು ಮತ್ತು ಸ್ಪರ್ಧೆಗಳಿಗೆ ಮತ್ತು ರಾಜಕೀಯ ಶಕ್ತಿಗಳ ಹೊಂದಾಣಿಕೆಗಳ ಸ್ಥಿತ್ಯಂತರಗಳಿಗೆ ಅವಕಾಶ ಮಾಡಿಕೊಡುವ ಹಾಗೂ ಯಾವುದೇ ಒಂದು ರಾಜಕೀಯ ಶಕ್ತಿಗೆ ಅಥವಾ ಪಾತ್ರಧಾರಿಗೆ ನಿರಂತರತೆ ಅಥವಾ ಶಾಶ್ವತತೆಗೆ ಅವಕಾಶ ಮಾಡಿಕೊಡದ ಒಂದು ಅಸ್ಥಿರವಾದ/ಅಸ್ಥಿರಗೊಳಿಸುವ ವ್ಯವಸ್ಥೆಯಾ ಗಿದೆ. ಹೀಗಾಗಿ ಮುಂದಿನ ಐವತ್ತು ವರ್ಷಗಳ ಕಾಲ ತಮ್ಮ ಪಕ್ಷವೇ ಅಧಿಕಾರ ದಲ್ಲಿರುತ್ತದೆಂಬ ಅಥವಾ ವಿರೋಧ ಪಕ್ಷಗಳು ಈ ಬಾರಿಯ ಚುನಾವಣೆಯ ಆಸೆಯನ್ನು ಕೈಬಿಟ್ಟು ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದೆಂಬ ಲೇವಡಿಗಳಿಗೆ ಪ್ರಜಾತಂತ್ರದಲ್ಲಿ ಸ್ಥಾನವಿಲ್ಲ. ಪ್ರಜಾತಂತ್ರದ ಈ ಕ್ರಾಂತಿಕಾರಕ ಅಸ್ಥಿರತೆಯೆಂದರೆ ಕೇಂದ್ರದಲ್ಲಿ ಸರಕಾರಗಳನ್ನು ಪದೇಪದೇ ಉರುಳಿಸುವುದು ಅಥವಾ ಬದಲಿಸುವುದೆಂದಲ್ಲ. ಈ ಹಿಂದೆ ಕೇಂದ್ರದಲ್ಲಿ ರಚಿಸಲಾಗಿದ್ದ ಕಾಂಗ್ರೆಸೇತರ ಮತ್ತು ಬಿಜೆಪಿಯೇತರ ಸರಕಾರಗಳು ತಥಾಕಥಿತ ರಾಷ್ಟ್ರೀಯ ಪಕ್ಷಗಳು ತೋರಿದ ದೊಡ್ಡಣ್ಣನ ಧೋರಣೆಯಿಂದಾಗಿ ಅಸ್ಥಿರತೆಗೆ ಗುರಿಯಾದವು ಎಂಬುದನ್ನು ನಾವಿಲ್ಲಿ ನೆನಪಿಡಬೇಕು. ಆದರೆ ಒಂದು ವೇಳೆ ಅಂತಹ ಅಸ್ಥಿರತೆ ಮತ್ತು ಬದಲಾವಣೆಗಳು ಸಾಮಾಜಿಕ ತಳಮಳ ಮತ್ತು ಕೋಲಾಹಲಗಳ ಪರಿಣಾಮವಾಗಿ ಸಂಭವಿಸಿದ್ದಾದಲ್ಲಿ ಸ್ಥಿರತೆಯ ಹೆಸರಲ್ಲಿ ಆ ಪ್ರಕ್ರಿಯೆಯನ್ನು ತಡೆಗಟ್ಟುವ ಪ್ರಯತ್ನಗಳಿಂದ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೆ ಅಡ್ಡಗಾಲು ಹಾಕಿದಂತೆಯೇ ಆಗುತ್ತದೆ. ಇಂತಹ ರಾಜಕೀಯ ಅಸ್ಥಿರತೆಗಳೇ ಬಹುಸಂಖ್ಯಾತ ಜನರಿಗೆ ರಾಜಕೀಯದಲ್ಲಿ ಸಕ್ರಿಯ ಪಾತ್ರವಹಿಸಲು ಅವಕಾಶ ಮಾಡಿಕೊಡುವುದಲ್ಲದೆ ಬಹುಸಂಖ್ಯಾತರ ಸಂಕ್ಷೇಮ ಮತ್ತು ಆಸಕ್ತಿಗಳ ಪರವಾಗಿರುವಂತೆ ವ್ಯವಸ್ಥೆಯ ಕ್ಷಿತಿಜಗಳನ್ನು ವಿಸ್ತರಿಸುತ್ತದೆ. ಒಂದು ಏಕಶಿಲಾರೂಪಿ ಏಕಪಕ್ಷದ ಸರಕಾರಗಳಿಗಿಂತ ಮಿತ್ರಕೂಟದ ಸರಕಾರದಲ್ಲಿರುವ ವೈರುಧ್ಯಗಳನ್ನು ಜನಪರವಾದ ನೀತಿಗಳನ್ನು ಜಾರಿ ಮಾಡುವತ್ತ ಬಳಸಿಕೊಳ್ಳಬಹುದಾದ ಸಾಧ್ಯತೆ ಹೆಚ್ಚು. ‘‘ವಿರೋಧಪಕ್ಷಗಳ ಏಕತೆಯು ಒಂದು ಮಜ್‌ಬೂರ್ (ದುರ್ಬಲ) ಸರಕಾರವನ್ನು ನೀಡಿದರೆ ಬಿಜೆಪಿಯು ಒಂದು ಮಜಬೂತ್ (ಬಲಿಷ್ಠ) ಸರಕಾರವನ್ನು ನೀಡುತ್ತದೆ’’ ಎಂಬ ಅಮಿತ್ ಶಾ ಅವರ ಹೇಳಿಕೆಯನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಒಂದು ಪ್ರಜಾತಂತ್ರದಲ್ಲಿ ಆಳುವ ಸರಕಾರಗಳು ಬಹುಸಂಖ್ಯಾತ ಜನತೆಯ ಆಶೋತ್ತರಗಳು ಮತ್ತು ಒತ್ತಡಗಳೆದುರು ‘ಮಜ್‌ಬೂರ್’ ಆಗಿರಬೇಕೆ ವಿನಃ ಜನರ ಧ್ವನಿಗಳಿಗೆ ಕಲ್ಲಾಗುವ ‘ಮಜ್‌ಬೂತ್’ ಸರಕಾರವಾಗಿರಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ