ಮಾತೃಭಾಷೆ: ಕೇವಲ ಬಾಯಿಮಾತಿನಿಂದ ಉಳಿಯುತ್ತದೆಯೇ?

Update: 2019-02-20 18:30 GMT

ಭಾಷಾವಿಜ್ಞಾನಿ ಡೇವಿಡ್ ಕ್ರಿಸ್ಟಲ್ ಅವರ ‘ಲ್ಯಾಂಗ್ವೇಜ್ ಡೆತ್’ (‘ಭಾಷೆಯ ಸಾವು’) ಪುಸ್ತಕದ ಆರಂಭದಲ್ಲಿ ಭಾಷೆಯೊಂದಕ್ಕೆ ಸಲ್ಲಿಸಿದ ಶ್ರದ್ಧಾಂಜಲಿಯ ಮಾತುಗಳು ಈಗ ಜಗತ್ತಿನ ಎಲ್ಲೆಡೆ ಪರಿಚಿತವಾಗಿವೆ: 4ನೇ ನವೆೆಂಬರ್ 1995ರಂದು ‘ಕಸಬೆ’ ಬದುಕಿತ್ತು. ನವೆಂಬರ್ 5ರಂದು ಅದು ತೀರಿಕೊಂಡಿತ್ತು. ಲುವೋ ಎಂದು ಕರೆಯಲಾಗುತ್ತಿದ್ದ ಈ ಆಫ್ರಿಕನ್ ಭಾಷೆಯನ್ನು ಮಾತಾಡುವವರು ಆಫ್ರಿಕಾ ಖಂಡದ ಕ್ಯಾಮರೂನ್‌ನಲ್ಲಿದ್ದರು. ನವೆಂಬರ್ 5ರಂದು ಈ ಭಾಷೆಯನ್ನಾಡುತ್ತಿದ್ದ ಬೊಗೊನ್ ತೀರಿಕೊಂಡ; ಆ ಭಾಷೆಯನ್ನೂ ತನ್ನೊಡನೆ ಒಯ್ದ. ಇಂಡಿಯಾದಲ್ಲೂ ಗುಡ್ಡಗಾಡು ಪ್ರದೇಶಗಳ ಪುಟ್ಟಪುಟ್ಟ ಸಮುದಾಯಗಳು ಆಡುತ್ತಿದ್ದ ನೂರಾರು ಭಾಷೆಗಳು, ಆ ಭಾಷೆಗಳಲ್ಲಿ ವಿಕಾಸಗೊಂಡಿದ್ದ ಜ್ಞಾನ ಕೂಡ ಹೀಗೇ ಕಣ್ಮರೆಯಾಗಿರಬಹುದು.

2002ನೆಯ ಇಸವಿಯಲ್ಲಿ ಪ್ರಕಟಿಸಿದ ತನ್ನ ‘ಲ್ಯಾಂಗ್ವೇಜ್ ಡೆತ್’ ಪುಸ್ತಕದಲ್ಲಿ ಜಗತ್ತಿನಲ್ಲಿರುವ ಅರ್ಧದಷ್ಟು ಭಾಷೆಗಳು ತೀರಿಕೊಳ್ಳುವ ಅಪಾಯವಿದೆ ಎಂದು ಡೇವಿಡ್ ಕ್ರಿಸ್ಟಲ್ ಎಚ್ಚರಿಸಿದ ಮೇಲೆ ಜಗತ್ತಿನ ಎಲ್ಲೆಡೆ ಮಾತೃಭಾಷೆಗಳನ್ನು ಉಳಿಸಿಕೊಳ್ಳುವ ತುರ್ತಿನ ಚಿಂತನೆ ದೊಡ್ಡ ಮಟ್ಟದಲ್ಲಿ ಆರಂಭವಾಯಿತು. ಅಧಿಕಾರಸ್ಥ ಭಾಷೆಗಳ ಎದುರು ಬಲವಿಲ್ಲದ ಭಾಷೆಗಳು ಅಳಿಯುವ ಆತಂಕ ಕೂಡ ಎಲ್ಲೆಡೆ ಚರ್ಚೆಯಾಗತೊಡಗಿತು. ಆಫ್ರಿಕಾ ಖಂಡದ ದೇಶಿ ಭಾಷೆಗಳು ಬಹುತೇಕ ನಿರ್ನಾಮವಾಗ ತೊಡಗಿವೆ; ಕಳೆದ ನೂರು ವರ್ಷಗಳಲ್ಲಿ ಹೊಸ ಶಾಲೆಗೆ ಹೋದ ಆಫ್ರಿಕಾದ ಮಕ್ಕಳೆಲ್ಲ ಇಂಗ್ಲಿಷ್‌ನಲ್ಲಿಯೇ ಕಲಿತರು. ಆಫ್ರಿಕಾದ ಭಾಷೆಗಳಿಗೆ ಲಿಪಿಯಿಲ್ಲದಿದ್ದರಿಂದ ಆಧುನಿಕ ಶಿಕ್ಷಣದಲ್ಲಿ, ಬರವಣಿಗೆಯಲ್ಲಿ ಬಳಕೆಯಾಗದ ಆಫ್ರಿಕಾದ ಭಾಷೆಗಳು ಮನೆಯಲ್ಲಿ, ಆಡುಮಾತಿನಲ್ಲಿ ಮಾತ್ರ ಉಳಿದು ಮರೆಯಾಗತೊಡಗಿದವು. ಆಫ್ರಿಕನ್ ಇಂಗ್ಲಿಷ್ ರೂಪುಗೊಂಡಿತು.
ಆಫ್ರಿಕಾದ ಆಧುನಿಕ ಲೇಖಕರು ತಮ್ಮ ಭಾಷೆಗಳಲ್ಲಿ ಲಿಪಿಯಿಲ್ಲದಿದ್ದರಿಂದ ತಮ್ಮ ಆಡುಮಾತುಗಳ ಬನಿಯನ್ನು, ನುಡಿಗಟ್ಟುಗಳನ್ನು ಇಂಗ್ಲಿಷ್ ಸಾಹಿತ್ಯ ಕೃತಿಗಳಿಗೆ ತಂದು ಇಂಗ್ಲಿಷ್ ಭಾಷೆಯನ್ನು ಸಮೃದ್ಧವಾಗಿಸಿದರು. ಜಗತ್ತಿನ ಇಂಗ್ಲಿಷ್ ಸಾಹಿತ್ಯ ಆಫ್ರಿಕಾದ ಅನುಭವ ಹಾಗೂ ನುಡಿಗಟ್ಟುಗಳಿಂದ ಹೊಸ ರಕ್ತಮಾಂಸಗಳನ್ನು ಪಡೆಯತೊಡಗಿತು. ಈ ನಡುವೆ ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದಕೆನ್ಯಾದ ಲೇಖಕ ಗೂಗಿ ವಾಥಿಯಾಂಗೋ ಜೈಲಿನಲ್ಲಿದ್ದಾಗ ಒಂದು ಅನಿವಾರ್ಯ ಒತ್ತಡದಲ್ಲಿ ತನ್ನ ಮಾತೃಭಾಷೆ ಗಿಕುಯುವನ್ನು ಮತ್ತೆ ಹುಡುಕಿಕೊಂಡ. ಗೂಗಿ ಆಗ ಬರೆಯಹೊರಟಿದ್ದ ‘ಕೈತಾನಿ ಮುತರಾಬಾಯಿನಿ’ (ಡೆವಿಲ್ ಆನ್ ದಿ ಕ್ರಾಸ್) ಎಂಬ ಕ್ರಾಂತಿಕಾರಿ ಕಾದಂಬರಿಯನ್ನು ಇಂಗ್ಲಿಷ್‌ನಲ್ಲಿ ಬರೆದರೆ ಜೈಲಿನ ಅಧಿಕಾರಿಗಳು ಅದನ್ನು ಓದಿ ತಕರಾರು ತೆಗೆಯುವ ಸಾಧ್ಯತೆ ಇತ್ತು. ಆಗ ಗೂಗಿ ಇಂಗ್ಲಿಷ್ ಲಿಪಿಯನ್ನು ಬಳಸಿ ಗಿಕುಯು ಭಾಷೆಯಲ್ಲಿ ಕಾದಂಬರಿ ಬರೆದ. ಇದು ಜನಪದ ಕತೆಯಂತೆ ಎಲ್ಲೆಂದರಲ್ಲಿ ಓದಿ ಹೇಳಬಲ್ಲ ಅಥವಾ ಕಂಠಪಾಠ ಮಾಡಿ ಹೇಳಬಲ್ಲ ‘ಕೇಳು ಕಾದಂಬರಿ’ಯಾಗಿ ಪ್ರಖ್ಯಾತವಾಯಿತು. ಕನ್ನಡ ಲೇಖಕಿ ಬಿ.ಟಿ. ಲಲಿತಾ ನಾಯಕ್ ಕೂಡ ತಾವು ಕನ್ನಡ ಲಿಪಿ ಬಳಸಿ ಲಂಬಾಣಿ ಭಾಷೆಯಲ್ಲಿ ತಮ್ಮ ‘ಹಬ್ಬ ಮತ್ತು ಬಲಿ’ ಕತೆಯನ್ನು, ಇನ್ನಿತರ ಕವನಗಳನ್ನು ಬರೆದು ಓದಿದಾಗ ಲಂಬಾಣಿ ಕೇಳುಗರು ಆತ್ಮೀಯವಾಗಿ ಸ್ವೀಕರಿಸಿದ್ದನ್ನು ನೆನೆಯುತ್ತಾರೆ.
ಅಫ್ರಿಕಾದಲ್ಲಿ ಗೂಗಿಯ ಪ್ರಯೋಗವನ್ನು ಕೆಲವರು ಮಾಡಲೆತ್ನಿಸಿದರೂ ಆ ಪ್ರಯೋಗ ಜನಪ್ರಿಯವಾಗಲಿಲ್ಲ; ಆಫ್ರಿಕಾದ ದೇಶಿ ಭಾಷೆಗಳನ್ನು ಇಂಗ್ಲಿಷ್ ಲಿಪಿಯ ಮೂಲಕ ಉಳಿಸುವ ಈ ಕ್ರಮ ಯಶಸ್ವಿಯಾಗಲಿಲ್ಲ. ಕಾರಣ, ಆಫಿಕಾದ ಲೇಖಕ, ಲೇಖಕಿಯರು ಜಾಗತಿಕ ಇಂಗ್ಲಿಷ್ ಓದುಗರ ಮಾರುಕಟ್ಟೆಯ ಆಕರ್ಷಣೆಯಿಂದ ಹೊರಬರಲಾಗದೆ ಇಂಗ್ಲಿಷ್‌ನಲ್ಲೇ ಬರೆದರು. ಗೂಗಿ ತನ್ನ ಗಿಕುಯು ಭಾಷೆಯ ಕಾದಂಬರಿಗಳನ್ನು ತಾನೇ ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ. ಆದರೆ ಕಳೆದ ನೂರು ವರ್ಷಗಳಿಂದೀಚೆಗೆ ಅಮೆರಿಕಕ್ಕೆ ಹೋದ ಕೆಲವು ಆಫ್ರಿಕನ್ನರು ತಮ್ಮ ಬುಡಕಟ್ಟು ಭಾಷೆಗಳನ್ನು ಮನೆಭಾಷೆಯನ್ನಾಗಿ ಉಳಿಸಿಕೊಳ್ಳಲೆತ್ನಿಸಿದ್ದಾರೆ. ಈ ಮೂಲಕ ಅಮೆರಿಕದವರಿಗೆ ಅರ್ಥವಾಗದ ತಮ್ಮದೇ ಆದ ಭಾಷೆಯನ್ನು ಇರಿಸಿಕೊಳ್ಳುವುದರ ಜೊತೆಗೇ ಮಾತೃಭಾಷೆಯನ್ನು ಉಳಿಸಿಕೊಳ್ಳುವ ಒಂದು ಮಾದರಿಯನ್ನೂ ಈ ಆಫ್ರಿಕನ್ನರು ತೋರಿಸಿದ್ದಾರೆ. ಕರ್ನಾಟಕದಲ್ಲಿ ಆಡುಮಾತಿನ ಮಟ್ಟದಲ್ಲೇ ಉಳಿದಿರುವ ಲಂಬಾಣಿ ಭಾಷೆ ಇವತ್ತಿನ ಹೊಸ ತಲೆಮಾರಿನ ಪುಟ್ಟ ಮಕ್ಕಳಲ್ಲೂ ಜೀವಂತವಾಗಿ ಉಳಿದಿದೆ. ಅತ್ಯಂತ ಆಧುನಿಕರಾದ ಲಂಬಾಣಿ ಸುಶಿಕ್ಷಿತ ಜನರು ಕೂಡ ಮನೆಯಲ್ಲಿ, ತಮ್ಮವರ ನಡುವೆ ತಮ್ಮ ಆಡುಮಾತನ್ನೇ ಬಳಸುವುದು ಇದಕ್ಕೆ ಕಾರಣ.
ಹಾಗೆಯೇ ಬ್ಯಾರಿ, ತುಳು ಭಾಷೆ ಮಾತಾಡುವ ಸಮುದಾಯಗಳು ಕೂಡ ಬರವಣಿಗೆಯ ಜೊತೆಜೊತೆಗೇ ತಂತಮ್ಮ ಭಾಷೆಗಳನ್ನು ಆಡುಮಾತನ್ನಾಗಿ ಸದಾ ಬಳಸುವ ಮೂಲಕ ಉಳಿಸಿಕೊಂಡಿವೆ. ತುಳು ಭಾಷಿಕರಂತೂ ತುಳು ಭಾಷಿಕ ಪ್ರದೇಶಗಳಲ್ಲಿ ಬಂದು ವಾಸಿಸುವ ಎಲ್ಲರೂ ತುಳು ಕಲಿಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದಾರೆ. ತುಳು ಭಾಷಿಕರು ನಗರ, ಪಟ್ಟಣ ಪ್ರದೇಶಗಳಲ್ಲಿದ್ದರೂ ತಮ್ಮ ಮಾತೃಭಾಷೆಗೆ ಆತ್ಮೀಯವಾಗಿ ಬೆಸೆದುಕೊಂಡಿದ್ದಾರೆ. ಅದು ಅವರಿಗೆ ಪ್ರತ್ಯೇಕ ಐಡೆಂಟಿಟಿಯನ್ನೂ ತಂದುಕೊಟ್ಟಿದೆ; ತುಳು ಮನೆಮಾತಾಗಿರುವವರು ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದಾಗಲೂ ಅವರ ಮಾತೃಭಾಷೆ ಹಾಗೇ ಉಳಿದಿದೆ ಎಂಬ ವಿಶಿಷ್ಟ ವಿದ್ಯಮಾನವನ್ನು ಕನ್ನಡ ಭಾಷೆಯ ಉಳಿವಿನ ಬಗ್ಗೆ ಕಾಳಜಿ ತೋರುವವರು ಸರಿಯಾಗಿ ಗಮನಿಸಿದಂತಿಲ್ಲ; ಜೊತೆಗೆ ಇಂಥ ಭಾಷೆಗಳ ಸ್ಥಿತಿಗತಿ, ಸಾಹಿತ್ಯಗಳ ಬಗ್ಗೆ ಹೆಚ್ಚಿನ ಕುತೂಹಲವನ್ನೂ ಇಟ್ಟುಕೊಂಡಿಲ್ಲ.
ಉದಾಹರಣೆಗೆ, ಕರ್ನಾಟಕದಲ್ಲೇ ಇರುವ ಕೊಡವ, ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಸಾಹಿತ್ಯ ಕನ್ನಡ ಲಿಪಿಯನ್ನು ಅವಲಂಬಿಸಿದೆ. ಆದರೂ ಕನ್ನಡ ಲಿಪಿಯಲ್ಲಿರುವ ಈ ಭಾಷೆಗಳ ಸಾಹಿತ್ಯ ಕೃತಿಗಳಾಗಲೀ, ಅವುಗಳ ಅನುವಾದಗಳಾಗಲೀ ನಮ್ಮ ಪಠ್ಯಕ್ರಮಗಳಲ್ಲಿ ಇಲ್ಲ. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಂಥ ಕಡೆ ಹಾಗೂ ತುಳು ಅಧ್ಯಯನ ಸಂಸ್ಥೆಗಳಲ್ಲಿ ಮಾತ್ರ ತುಳು ಭಾಷೆಯ ಕೆಲವು ಪಠ್ಯಗಳು ಇವೆ. ಈ ಭಾಷೆಗಳನ್ನು ಹೆಚ್ಚು ಬಳಸುವ ಪ್ರದೇಶಗಳ ಪಠ್ಯಕ್ರಮಗಳಲ್ಲಿ ಈ ಸಾಹಿತ್ಯ ಕೃತಿಗಳು ಐಚ್ಛಿಕವಾಗಿಯಾದರೂ ಇಲ್ಲದೇ ಹೋದರೆ, ಇತರ ಪ್ರದೇಶಗಳಲ್ಲಿ ಇವುಗಳ ಅನುವಾದಗಳು ಇಲ್ಲದೇ ಹೋದರೆ ಆ ಭಾಷೆಗಳ ಸಾಹಿತ್ಯಗಳಿಗೆ ಅನ್ಯಾಯವಾಗುತ್ತದೆ. ಕನ್ನಡ ಮಾತೃಭಾಷಾ ಮಾಧ್ಯಮದ ಪರವಾಗಿ ಪ್ರಬಲವಾಗಿ ವಾದ ಮಾಡುವವರು ಈ ಅಂಶವನ್ನು ಮರೆಯುತ್ತಾರೆ. ‘ಕನ್ನಡವೆನೆ ಕುಣಿದಾಡುವುದೆನ್ನದೆ’ ಎಂದು ಕನ್ನಡ ಕವಿಗೆ ಅನ್ನಿಸುವಂತೆ ತುಳು, ಕೊಡವ ಭಾಷೆಯನ್ನಾಡುವವರಿಗೂ ಆಯಾ ಭಾಷೆಗಳ ಬಗ್ಗೆ ‘ಕುಣಿದಾಡುವುದೆನ್ನದೆ’ ಎನ್ನಿಸುತ್ತಲೇ ಇರುತ್ತದೆ,ಅಲ್ಲವೆ?
ಕನ್ನಡ ಭಾಷೆಗೆ ಸಂಬಂಧಿಸಿದಂತೆ ಕಳೆದ ಇಪ್ಪತೈದು ವರ್ಷಗಳಲ್ಲಿ ಒಂದು ವಿಚಿತ್ರ ವಿದ್ಯಮಾನ ಸಂಭವಿಸಿರುವುದು ಎಲ್ಲರಿಗೂ ಗೊತ್ತಿದೆ: ಅದೇನೆಂದರೆ, ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಕಳಿಸಿದ ನಗರಗಳ ಕನ್ನಡ ಪೋಷಕರ ಎದೆ ಕನ್ನಡವೆಂದರೆ ಕುಣಿದಾಡುವುದನ್ನು ಮರೆತಿದೆ. ಈ ಪೋಷಕರು ಇಂಗ್ಲಿಷನ್ನು ಒಂದು ಭಾಷೆಯನ್ನಾಗಿಯೋ, ಕೇವಲ ಕಲಿಕೆಯ ಮಾಧ್ಯಮವನ್ನಾಗಿಯೋ ಮಾತ್ರ ಪರಿಗಣಿಸದೆಅದನ್ನೇ ಸರ್ವಸ್ವವೆಂದು ತಿಳಿದಂತಿದೆ. ಈ ವರ್ಗ ಅರಿವಿದ್ದೋ ಅರಿವಿಲ್ಲದೆಯೋ, ಇಂಗ್ಲಿಷನ್ನು ಕನ್ನಡದ ವಿರುದ್ಧ ಹಾಗೂ ದೇಶಿ ಮಾತೃಭಾಷೆಗಳ ವಿರುದ್ಧ ಗುಪ್ತಯುದ್ಧ ಸಾರುವ ಅಸ್ತ್ರವನ್ನಾಗಿ ಮಾಡಿಬಿಟ್ಟಿದೆ. ಕನ್ನಡಿಗರೇ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಕೂಡ ಓದಿಸದೆ, ಸಂಸ್ಕೃತ ಭಾಷೆಯನ್ನು ಕೊಡಿಸುತ್ತಾ ಕನ್ನಡ ವಿರೋಧಿಗಳಾಗಿದ್ದಾರೆ. ಇಂಗ್ಲಿಷನ್ನು ತಮ್ಮ ಮಾತೃಭಾಷೆಯೆಂದು ಘೋಷಿಸಿರುವ ಹಸಿ ಸುಳ್ಳ ಪೋಷಕರೂಇದ್ದಾರೆ! ಮಾತೆತ್ತಿದರೆ ‘ದೇಶಪ್ರೇಮ’ ಎನ್ನುವ ಇಂಡಿಯಾದ ಸಿರಿವಂತರ ನಿಘಂಟಿನಲ್ಲಿ ‘ದೇಶಭಾಷೆ’ ಎಂಬ ಶಬ್ದ ಇಲ್ಲವೇಇಲ್ಲ! ಶಾಲೆಯಲ್ಲಿ ಕನ್ನಡ ಮಾತಾಡಕೂಡದೆಂದು ಅಬ್ಬರಿಸುವ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕ ಶಿಕ್ಷಕಿಯರು; ಮಕ್ಕಳ ಜೊತೆ ಇಂಗ್ಲಿಷ್‌ನಲ್ಲೇ ಮಾತಾಡುವ ತಂದೆ ತಾಯಿಯರು; ನಾಯಿ, ಬೆಕ್ಕುಗಳ ಜೊತೆ ಕೂಡ ಇಂಗ್ಲಿಷ್ ಪ್ರಾಕ್ಟೀಸ್ ಮಾಡುವವರು; ಕನ್ನಡಿಗರಾಗಿಯೂ ಮನೆಯಲ್ಲಿ ಹತ್ತು ಒಳ್ಳೆಯ ಕನ್ನಡ ಪುಸ್ತಕ ಇಲ್ಲದವರು, ಕನ್ನಡ ಪತ್ರಿಕೆಗಳನ್ನು ಕೊಳ್ಳದವರು, ಕನ್ನಡ ಓದದವರು... ಈ ಎಲ್ಲ ಬಗೆಯ ಅಕ್ಷರಸ್ಥ ಕನ್ನಡಿಗರೂ ಕನ್ನಡದ ಗುಪ್ತ ಹಾಗೂ ನಿಜವಾದ ಶತ್ರುಗಳು. ಈ ಕನ್ನಡ ವಿರೋಧಿ ಕನ್ನಡಿಗರು ಉರ್ದು, ತುಳು, ಲಂಬಾಣಿ ಭಾಷಿಕರಿಗೆ ಇರುವ ಸಹಜ ಭಾಷಾ ಪ್ರೀತಿಯ ಒಂದು ಭಾಗವನ್ನಾದರೂ ಬೆಳೆಸಿಕೊಂಡರೆ ಕನ್ನಡಕ್ಕೆ ಎದುರಾಗಿರುವ ಕುತ್ತು ಹಿಮ್ಮೆಟ್ಟಬಲ್ಲದು.


ಎಲ್ಲ ಇಂಗ್ಲಿಷ್ ಮಾಧ್ಯಮದ ಶಾಲಾ ಕಾಲೇಜುಗಳಲ್ಲಿ ಕನ್ನಡ ಅಥವಾ ಇನ್ನಾವುದೇ ಮಾತೃಭಾಷೆಯನ್ನು ಕಡ್ಡಾಯವಾಗಿಅಧ್ಯಯನ ಮಾಡಲೇಬೇಕೆಂಬ ಕಟ್ಟುನಿಟ್ಟಾದ ನಿಯಮ ಇನ್ನಾದರೂ ಬರದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ, ಕನ್ನಡ ಭಾಷೆಯನ್ನಾಡುವ ಅರ್ಧದಷ್ಟು ಮಕ್ಕಳು ‘ಕನ್ನಡ ಅನಕ್ಷರಸ್ಥ’ರಾಗುತ್ತಾರೆ; ಉಳಿದವರು ಒಟ್ಟಾರೆಯಾಗಿ ಮಾತೃಭಾಷಾ ಅನಕ್ಷರಸ್ಥರಾಗುತ್ತಾರೆ. ಈ ಭೀಕರ ಅಪಾಯ ಉಂಟಾಗಿರುವುದು ಶ್ರೀಮಂತ ಹಾಗೂ ಮಧ್ಯಮವರ್ಗದ ಕನ್ನಡಿಗ ಪೋಷಕರಿಂದ. ಇದೆಲ್ಲದರ ಜೊತೆಗೆ, ಹದಿನೈದು ವರ್ಷಗಳ ಕೆಳಗೆ, ಪಿಯುಸಿಯಲ್ಲಿ ವಿಜ್ಞಾನ ಓದಿದವರು ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಹಾಗೂ ಇನ್ನಿತರ ವೃತ್ತಿ ಶಿಕ್ಷಣಗಳಿಗೆ ಪ್ರವೇಶಿಸಲು ಕನ್ನಡ, ಉರ್ದು, ಹಿಂದಿ, ಇಂಗಿಷ್‌ನ ಅಂಕಗಳು ಲೆಕ್ಕಕ್ಕಿಲ್ಲ ಎಂಬ ನಿಯಮ ಇದ್ದಕ್ಕಿದ್ದಂತೆ ಜಾರಿಯಾಯಿತು. ಈ ನಿಯಮತಂದ ತಜ್ಞರು, ಅಧಿಕಾರಿಗಳು, ಸಚಿವರು ಕನ್ನಡ ಭಾಷೆಗೆ ಮಾರಕ ಹೊಡೆತಕೊಟ್ಟರು. ಆಗಿನಿಂದ ನಮ್ಮ ಅತ್ಯಂತ ಜಾಣರಾದ ಪಿಯುಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡ ಕನ್ನಡವನ್ನು ನಾಮಕೇವಾಸ್ತೆಯಾಗಿ, ಮೂವತ್ತೈದು ಅಂಕಗಳಿಗಾಗಿ ಮಾತ್ರ ಪರೀಕ್ಷೆಯ ಸಮಯದಲ್ಲಿ ಓದಿ ಮರೆಯತೊಡಗಿದರು. ಈ ಬೆಳವಣಿಗೆಯ ಮಾರಕ ಪರಿಣಾಮದ ಬಗ್ಗೆ ನಮ್ಮ ತಜ್ಞರು ಯೋಚಿಸಿದಂತಿಲ್ಲ. ಈಗಲೂ ಕಾಲ ಮಿಂಚಿಲ್ಲ. ಕನ್ನಡ ಹಾಗೂ ಇತರ ಭಾಷಾ ವಿಷಯಗಳಲ್ಲಿ ಗಳಿಸಿದ ಅಂಕಗಳನ್ನು ಮುಂದಿನ ಎಲ್ಲ ಘಟ್ಟಗಳಿಗೂ ಕಡ್ಡಾಯವಾಗಿ ಪರಿಗಣಿಸಲಾಗುತ್ತದೆ ಅಥವಾ ಈ ಅಂಕಗಳಿಗೆ ವಿಶೇಷ ಮಾನ್ಯತೆ ಇದೆ ಎಂಬ ನಿಯಮವನ್ನು ಜಾರಿಗೆ ತಂದರೆ ಕನ್ನಡ ಹಾಗೂ ಇತರ ದೇಶಭಾಷೆಗಳ ಸ್ಥಿತಿ ಕೆಲವೇ ವರ್ಷಗಳಲ್ಲಿ ಉತ್ತಮಗೊಳ್ಳುತ್ತದೆ.
ಅತ್ತ ಉರ್ದು ಭಾಷೆಯನ್ನಾಡುವ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಉರ್ದು ಭಾಷೆಯನ್ನು ಕೈಬಿಟ್ಟು ಹಿಂದಿ ಭಾಷೆಯನ್ನು ಆರಿಸಿಕೊಳ್ಳತೊಡಗಿರುವುದರ ಹಿಂದೆ ಅತ್ಯಂತ ಸಂಕೀರ್ಣವಾದ ಒತ್ತಡಗಳು ಹಾಗೂ ಕಾರಣಗಳಿವೆ. ಹೀಗಾಗಿ ದೇಶದ ಅತ್ಯಂತ ಸಮೃದ್ಧ ಭಾಷೆಗಳಲ್ಲೊಂದಾದ ಹಾಗೂ ಅದ್ಭುತ ಸಾಹಿತ್ಯ ಕೃತಿಗಳ ಗಣಿಯಾಗಿರುವ ಉರ್ದು ಭಾಷೆಗೆ ದೊಡ್ಡ ಅಪಾಯ ಎದುರಾಗಿದೆ. ಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಉರ್ದು ಭಾಷೆ ಹಾಗೂ ಉರ್ದು ಸಾಹಿತ್ಯ ಬೋಧಿಸುವ ಅಧ್ಯಾಪಕರುಗಳ ಹುದ್ದೆಗಳೇ ಇಲ್ಲವಾಗುತ್ತಿರುವ ಈ ಸಮಸ್ಯೆಗೆ ಅತ್ಯಂತ ಗಂಭೀರವಾದ ಆರ್ಥಿಕ ಆಯಾಮವೂ ಸೇರಿಕೊಂಡಿದೆ.
ಕನ್ನಡಕ್ಕೆ ಹಾಗೂ ಒಟ್ಟಾರೆಯಾಗಿ ಮಾತೃಭಾಷೆಗಳಿಗೆ ಎದುರಾಗಿರುವ ಅನೇಕ ಬಗೆಯ ಅಪಾಯಗಳನ್ನು ಸರಿಯಾಗಿ ಅರಿಯದೆ, ಬಡಮಕ್ಕಳು ಓದುವ ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕೂಡ ಕಲಿಸಬಾರದು ಎಂದು ಹತ್ತು ವರ್ಷಗಳ ಕೆಳಗೆ ವಾದ ಮಾಡುತ್ತಿದ್ದವರು ಈಗ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ತರಕೂಡದೆಂದು ವಾದಿಸುತ್ತಿದ್ದಾರೆ. ಬಡವರ ಮಕ್ಕಳು ಮಾತ್ರಕನ್ನಡವನ್ನು ಉಳಿಸಲು ಇರಲಿ ಎಂಬ ಈ ಬರಡು ವಾದ ಅಮಾನವೀಯವಾಗಿದೆ. ಅದರ ಬದಲಿಗೆ, ಪ್ರಾಥಮಿಕ ಹಾಗೂ ಉನ್ನತ ಪ್ರಾಥಮಿಕ ಹಂತದವರೆಗಾದರೂ ಕನ್ನಡ ಮಾಧ್ಯಮದಲ್ಲಿ ಹಾಗೂ ಮಾತೃಭಾಷಾ ಮಾಧ್ಯಮಗಳಲ್ಲಿ ಓದಿದವರಿಗೆ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ಎಲ್ಲ ಉನ್ನತ ಶಿಕ್ಷಣದಲ್ಲಿ ಸರಕಾರ ಹಾಗೂ ಖಾಸಗಿ ವಲಯಗಳ ಉದ್ಯೋಗಗಳಲ್ಲಿ ಐವತ್ತು ಭಾಗ ಸೀಟುಗಳನ್ನು ಮೀಸಲಾಗಿಟ್ಟರೆ ಕನ್ನಡ ಮಾಧ್ಯಮಕ್ಕೆ ಹೊಸ ಬೇಡಿಕೆ ಸೃಷ್ಟಿಯಾಗಬಹುದು. ಆ ಬಗ್ಗೆ ಸಾಹಿತಿಗಳು ಗಂಭೀರವಾಗಿಯೋಚಿಸುತ್ತಿಲ್ಲ. ಕೋರ್ಟುಗಳಾಗಲೀ ಸರಕಾರಗಳಾಗಲೀ ಮಾತೃಭಾಷೆಗಳ ಅಳಿವು ಉಳಿವಿನ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದಿರುವುದರಿಂದ ಸಮಾನ ಶಿಕ್ಷಣವಾಗಲೀ ಸಮಾನ ಶಿಕ್ಷಣ ಪರಿಸರವಾಗಲೀ ಸೃಷ್ಟಿಯಾಗುವ ಸಾಧ್ಯತೆ ಸದ್ಯಕ್ಕಂತೂ ಕಾಣುತ್ತಿಲ್ಲ.
ಇದೀಗ ರಾಜ್ಯದ ಸಾವಿರ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸಿರುವ ಕರ್ನಾಟಕ ಸರಕಾರ ಖಾಸಗಿ ಶಾಲೆಗಳ ರೀತಿ ಅಲ್ಲಿ ಇಂಗ್ಲಿಷ್‌ಮಯ ಬೋಧನೆಯನ್ನು ಮಾಡದೆ ಸ್ಥಳೀಯ ಭಾಷೆಗಳನ್ನು ಬೆರೆಸಿ ದ್ವಿಭಾಷಾಬೋಧನಾ ಪದ್ಧತಿಯ ಮೂಲಕ ಇಂಗ್ಲಿಷ್ ಮಾಧ್ಯಮವನ್ನು ಹೊಸ ರೀತಿಯಲ್ಲಿ ರೂಪಿಸಬೇಕು. ಬೋಧಕರು ಕನ್ನಡ, ಉರ್ದು, ತುಳು ಇತ್ಯಾದಿ ಮಾತೃಭಾಷೆಗಳನ್ನು ತರಗತಿಗಳಲ್ಲಿ ಮಾತಾಡುತ್ತಲೇ ಇಂಗ್ಲಿಷ್ ಸಂವಾದಿ ಪದಗಳು, ವಾಕ್ಯಗಳನ್ನು ಹೇಳಿಕೊಡಬೇಕು. ಸರಳವಾದ ಕನ್ನಡ ಅಥವಾ ಮಾತೃಭಾಷೆಬೆರೆಸಿ ಸರಳವಾದ ಇಂಗ್ಲಿಷ್‌ನ ಮೂಲಕ ವಿಷಯಗಳನ್ನು ಮನದಟ್ಟು ಮಾಡಬೇಕು. ಸಮಾಜಶಾಸ್ತ್ರ, ಚರಿತ್ರೆ ಮುಂತಾದ ಯಾವುದಾದರೂ ಒಂದೆರಡು ವಿಷಯಗಳನ್ನು ಮಾತೃಭಾಷೆಯಲ್ಲೇ ಕಲಿಸಬೇಕು. ಈ ದ್ವಿಭಾಷಾ ಬೋಧನಾಪದ್ಧತಿ ಖಾಸಗಿ ಶಾಲೆಗಳೂ ಅನುಸರಿಸುವಂಥ ಮಾದರಿಯಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವ ತಂದೆ ತಾಯಿಗಳು ಈ ದ್ವಿಭಾಷಾ ಬೋಧನಾಪದ್ಧತಿಯ ಬಗ್ಗೆ ಒತ್ತಾಯ ಮಾಡಬೇಕು. ಅಂಥ ಶಾಲೆಗಳಿಗೇ ತಮ್ಮ ಮಕ್ಕಳನ್ನು ಕಳಿಸಬೇಕು. ಪೋಷಕರ ಒತ್ತಾಯವಿಲ್ಲದಿದ್ದರೆ ಖಾಸಗಿ ಶಾಲೆಗಳ ಮಾತೃಭಾಷಾ ವಿರೋಧಿ ಧೋರಣೆ ಬದಲಾಗುವುದಿಲ್ಲ. ಯಾವಾಗ ತಮ್ಮ ಬೇಡಿಕೆ ಕುಸಿಯುತ್ತದೋ ಆಗ ಖಾಸಗಿ ಶಾಲೆಗಳೂ ಹಾದಿಗೆ ಬರಲೇಬೇಕಾಗುತ್ತದೆ.
ಸಾವಿರ ವರ್ಷಕ್ಕೂ ಹೆಚ್ಚಿನ ಲಿಖಿತ ಪರಂಪರೆಯಿರುವ ಹಾಗೂ ಲಕ್ಷಾಂತರ ಪುಸ್ತಕಗಳು ಪ್ರಕಟವಾಗಿರುವ ಕನ್ನಡ ಭಾಷೆಗೆ ಯಾವ ಕುತ್ತೂ ಬರಲಾರದು ಎಂಬ ವಿಶ್ವಾಸ ಕನ್ನಡಿಗರಿಗೆ ಇರಬಹುದು. ಆದರೆ ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ. 1971ರ ಜನಗಣತಿಯ ಪ್ರಕಾರ ಇಂಡಿಯಾದಲ್ಲಿ ಮೂರು ಸಾವಿರ ಮಾತೃಭಾಷೆಗಳಿವೆ. ಆದರೆ ನಮ್ಮ ಸಂವಿಧಾನದ 8ನೇ ಅನುಚ್ಛೇದದಲ್ಲಿ ಕನ್ನಡವೂ ಸೇರಿದಂತೆ ಇರುವ 22 ಭಾಷೆಗಳನ್ನು ಬಿಟ್ಟರೆ, ಉಳಿದ ಸಾವಿರಾರು ಭಾರತೀಯ ಭಾಷೆಗಳು ಸಂವಿಧಾನದ ಈ ಅನುಚ್ಛೇದದಲ್ಲಿಲ್ಲ. ಆದರೆ ಸಂವಿಧಾನದ ಮನ್ನಣೆ, ಆಡಳಿತ ಭಾಷೆಯ ಸ್ಥಾನ, ಸರಕಾರಗಳ ಪ್ರಬಲ ಪೋಷಣೆ, ಪ್ರತಿ ವರ್ಷದ ಬಜೆಟ್‌ನಲ್ಲಿ ಕೋಟಿಗಟ್ಟಲೆ ನಿಗದಿತ ಹಣ ಎಲ್ಲ ಇದ್ದರೂ ಕನ್ನಡ, ಮರಾಠಿ, ತೆಲುಗು ಥರದ ಅತ್ಯಂತ ಪುರಾತನ ಭಾಷೆಗಳು ಅಪಾಯ ಎದುರಿಸುತ್ತಿರುವುದಕ್ಕೆ ಈ ಭಾಷೆಗಳನ್ನಾಡುವ ಭಾಷಿಕರು, ಈ ಭಾಷಿಕ ಪ್ರದೇಶಗಳ ಸರಕಾರಗಳು, ಶಿಕ್ಷಣದ ಮಾರುಕಟ್ಟೆ, ತಮ್ಮ ನೀತಿಗಳನ್ನು ರಾಜ್ಯಗಳ ಮೇಲೆ ಹೇರುವ ಕೇಂದ್ರ ಸರಕಾರಗಳು, ದಿಕ್ಕೆಟ್ಟ ಭಾಷಾ ನೀತಿಗಳು ಹಾಗೂ ಕಾಲಕಾಲದ ಅಸಂಬದ್ಧ ಯೋಜನೆಗಳೇ ಕಾರಣ. ಮಾತೃಭಾಷೆಗಳನ್ನು ಉಳಿಸಿಕೊಳ್ಳಬಯಸುವವರು ಈ ಸವಾಲುಗಳನ್ನು ಕುರಿತು ಗಂಭೀರವಾಗಿ ಚಿಂತಿಸಲಿ.

Writer - ಡಾ.ನಟರಾಜ್ ಹುಳಿಯಾರ್

contributor

Editor - ಡಾ.ನಟರಾಜ್ ಹುಳಿಯಾರ್

contributor

Similar News

ಜಗದಗಲ
ಜಗ ದಗಲ