ಬಾಯಿ ಬಿಗಿಯುವ ರೋಗ (ಒ.ಎಸ್.ಎಮ್.ಎಫ್)

Update: 2019-02-20 18:30 GMT

ಇತ್ತೀಚಿನ ದಿನಗಳಲ್ಲಿ ತಂಬಾಕು ಉತ್ಪನ್ನಗಳಾದ ಪಾನ್‌ಪರಾಗ್, ಗುಟ್ಕಾ, ಮಾಣಿಕ್ ಚಂದ್ ಮುಂತಾದವುಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಇವುಗಳ ಬಳಕೆಯಿಂದ ಬಾಯಿ ಕ್ಯಾನ್ಸರ್ ಬರುತ್ತಿದೆ ಎಂದು ತಿಳಿದಿದ್ದರೂ ಯುವ ಜನತೆ ರಾತ್ರಿ ಕಂಡ ಬಾವಿಗೆ ಹಗಲು ಬೀಳುವಂತೆ, ದುಶ್ಚಟಗಳಿಗೆ ಬಲಿಯಾಗುವುದು ಘೋರ ದುರಂತ ಎಂದರೂ ತಪ್ಪಾಗಲಾರದು. ಇಂತಹ ತಂಬಾಕು ಉತ್ಪನ್ನಗಳನ್ನು ನಿರಂತರವಾಗಿ ಬಳಸುವ ವ್ಯಕ್ತಿಗಳಿಗೆ ಬರುವ ರೋಗವನ್ನು ಬಾಯಿ ಬಿಗಿಯುವ ರೋಗ ಎಂದು ಕರೆಯಲಾಗುತ್ತದೆ. ಆರಂಭಿಕ ಹಂತದಲ್ಲಿಂದ ಗುರುತಿಸಿ, ಚಟ ಬಿಡಿಸಿ, ಚಿಕಿತ್ಸೆ ನೀಡದಿದ್ದಲ್ಲಿ ಮುಂದೆ ಇದೇ ರೋಗ ಬಾಯಿ ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಎಲ್ಲಾ ಸಾಧ್ಯತೆ ಇರುತ್ತದೆ.
ಏನಿದು ರೋಗ?
ಆಂಗ್ಲಭಾಷೆಯಲ್ಲಿ ಈ ರೋಗವನ್ನು ಓರಲ್ ಸಬ್ ಮ್ಯುಖಸ್ ಫೈಬ್ರೋಸಿಸ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಒಬ್ಬ ಆರೋಗ್ಯವಂತ ಪುರುಷನಿಗೆ ಸುಮಾರು 50 ಮಿ.ಮೀ.ನಿಂದ 55ಮಿ.ಮೀ.ನಷ್ಟು ಬಾಯಿ ತೆರೆಯಲು ಸಾಧ್ಯವಿದೆ ಮತ್ತು ಮಹಿಳೆಗೆ 45ಮಿ.ಮೀ.ನಿಂದ 50ಮಿ.ಮೀ.ನಷ್ಟು ಬಾಯಿ ತೆರೆಯಲು ಸಾಧ್ಯವಿರುತ್ತದೆ. ಆದರೆ ನಿರಂತರವಾಗಿ ತಂಬಾಕು ಉತ್ಪನ್ನಗಳನ್ನು ಸೇವಿಸುವಾಗ ಬಾಯಿಯ ಒಳಭಾಗದ ತೆಳುವಾದ ಪದರಕ್ಕೆ ಹಾನಿಯಾಗಿ, ಅದು ಪೆಡಸುಗೊಂಡು ಬಾಯಿ ತೆರೆಯಲು ಕಷ್ಟವಾಗುತ್ತದೆ. ಚಟಗಳನ್ನು ಈ ಹಂತದಲ್ಲಿ ನಿಲ್ಲಿಸಿದಲ್ಲಿ ಮತ್ತು ಸಕಾಲದಲ್ಲಿ ಚಿಕಿತ್ಸೆ ಪಡೆದಲ್ಲಿ ಮೊದಲಿನಂತೆ ಸರಿಯಾಗಬಹುದು. ಆದರೆ ನಿರ್ಲಕ್ಷ್ಯ ವಹಿಸಿ ಚಟ ಮುಂದುವರಿಸಿದಲ್ಲಿ, ಸಂಪೂರ್ಣವಾಗಿ ಬಾಯಿ ಮುಚ್ಚಿ ಹೋಗುವ ಸಾಧ್ಯತೆ ಇರುತ್ತದೆ.
ಕಾರಣಗಳು ಏನು?
♦ ಅತಿಯಾದ ತಂಬಾಕು ಉತ್ಪನ್ನಗಳ ಸೇವನೆ. ಮಾರುತಿ ಗುಟ್ಕಾ, ಮಾಣಕ್‌ಚಂದ್, ಪಾನ್‌ಪರಾಗ್ ಮುಂತಾದವುಗಳು ಅತೀ ಅಪಾಯಕಾರಿ.
♦ ಅತಿಯಾದ ಹೊಗೆಸೊಪ್ಪುಸೇವನೆ, ಎಲೆ ಅಡಿಕೆ ಜೊತೆಗೆ ತಂಬಾಕು ಸೇರಿದಾಗ ಮತ್ತಷ್ಟು ಅಪಾಯಕಾರಿ.
♦ ಕೆಲವರಿಗೆ ಬರೀ ಅಡಿಕೆ ಜಗಿಯುವ ಹವ್ಯಾಸ ಇರುತ್ತದೆ. ಇದು ಕೂಡಾ ಅಪಾಯಕಾರಿ.
♦ ದೇಹದ ರಕ್ಷಣಾ ಪ್ರಕ್ರಿಯೆಗೆ ವಿರುದ್ಧವಾಗಿ ದೇಹವೇ ಕಾರ್ಯ ನಿರ್ವಹಿಸುವಾಗ ಬಾಯಿ ಬಿಗಿಯುವಿಕೆ ಉಂಟಾಗಬಹುದು.
♦ ಬಹಳ ಕಾಲದಿಂದ ಆಹಾರದಲ್ಲಿ ಕಬ್ಬಿಣ ಅಂಶ ಮತ್ತು ವಿಟಮಿನ್‌ಗಳ ಕೊರತೆ ಉಂಟಾದಾಗಲೂ ಈ ರೋಗ ಬರಬಹುದು.
ಚಿಕಿತ್ಸೆ ಹೇಗೆ?
ಆರಂಭಿಕ ಹಂತದಲ್ಲಿ ಈ ರೋಗವನ್ನು ಔಷಧಿಯ ಮುಖಾಂತರ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಮೊದಲು ಚಟಗಳಿಂದ ದೂರವಿರಬೇಕು. ಚಟಗಳನ್ನು ಬಿಡದೆ ಔಷಧಿ ಸೇವನೆ ಮಾಡಿದರೆ ನೀರಲ್ಲಿ ಹೋಮ ಮಾಡಿದಂತಾಗಬಹುದು. ರೋಗದ ತೀವ್ರತೆಯನ್ನು 4 ಹಂತಗಳಲ್ಲಿ ವಿಂಗಡಿಸಲಾಗಿದ್ದು ಮೊದಲ ಎರಡು ಹಂತಗಳಿಗೆ ಔಷಧಿ ಚಿಕಿತ್ಸೆ ಮತ್ತು ಕೊನೆಯ ಎರಡು ಹಂತಗಳಲ್ಲಿ ಸರ್ಜರಿ ಮಾಡಿ ಈ ಬಾಯಿ ಬಿಗಿಯುವ ರೋಗವನ್ನು ಗುಣ ಪಡಿಸಬಹುದು. ಮೊದಲ ಹಂತದಲ್ಲಿ ಕೇವಲ ಬಾಯಿಯ ಉರಿಯುವಿಕೆ ಇರುತ್ತದೆ. ಬಾಯಿ ತೆರೆಯುವಿಕೆ 35 ಮಿ.ಮೀ.ಗಿಂತ ಜಾಸ್ತಿ ಇರುತ್ತದೆ. ಎರಡನೇ ಹಂತದಲ್ಲಿ ಬಾಯಿ ಉರಿಯುವಿಕೆಯ ಜೊತೆಗೆ ಬಾಯಿಯ ಒಳಪದರಗಳು ಪೆಡಸಾಗಿ ಬಿಳಿಚಿಕೊಂಡಿರುತ್ತದೆ. ಬಾಯಿ ತೆರೆಯುವಿಕೆ 25ರಿಂದ 35ಮಿ.ಮೀ. ಇರುತ್ತದೆ. ಮೊದಲು ಮತ್ತು ಎರಡನೇ ಹಂತದಲ್ಲಿ ರೋಗಿಗಳಿಗೆ ಸ್ಟಿರಾಯ್ಡಿ ಇಂಜೆಕ್ಷನ್ ಅನ್ನು ಈ ಪೆಡಸಾದ ಬಾಯಿಯ ಒಳಭಾಗಕ್ಕೆ ನೀಡಲಾಗುತ್ತದೆ. ಇದರ ಜೊತೆಗೆ ಕಿಣ್ವಗಳು ಮತ್ತು ಪ್ಲಾಸೆಂಟ್ರಿಕ್ಸ್ ಎಂಬ ಔಷಧಿ ನೀಡಿ ರೋಗ ಗುಣಪಡಿಸಲಾಗುತ್ತದೆ. ಆಂಟಾಕ್ಸಿಡ್ ಎಂಬ ಔಷಧಿಯನ್ನು ನೀಡುತ್ತಾರೆ.
ಮೂರನೇ ಹಂತದಲ್ಲಿ ಬಾಯಿ ತೆರೆಯುವಿಕೆ 15ರಿಂದ 26ಮಿ.ಮೀ. ಒಳಗೆ ಇರುತ್ತದೆ. ಬಾಯಿಯ ಒಳಪದರದಲ್ಲಿ, ನಾಲಿಗೆಯ ಮೇಲ್ಭಾಗದಲ್ಲಿ, ಮೇಲಂಗಳದಲ್ಲಿ ಮತ್ತು ತುಟಿಯ ಒಳಭಾಗದಲ್ಲಿ ಪೆಡಸಾದ ದಪ್ಪದಪ್ಪಫೈಬ್ರಸ್ ಬ್ಯಾಂಡ್‌ಗಳು ಕಂಡು ಬರುತ್ತದೆ. ಬಾಯಿ ಉರಿತ, ಬಿಸಿ ಮತ್ತು ಖಾರ ಪದಾರ್ಥ ತಿಂದಾಗ ಉರಿಯುವಿಕೆ ಮತ್ತು ಬಾಯಿ ಹುಣ್ಣು ಕಂಡು ಬರುತ್ತದೆ. ಆಹಾರ ಸೇವನೆ ಮತ್ತು ಮಾತನಾಡಲು ಕಷ್ಟವಾಗುತ್ತದೆ.
ನಾಲ್ಕನೇ ಹಂತದಲ್ಲಿ ಬಾಯಿ ತೆರೆಯುವಿಕೆ ಸ್ನೊನೆಯಿಂದ 15ಮಿ.ಮೀ. ತನಕ ಮಾತ್ರ ಇರುತ್ತದೆ. ಬಾಯಿ ಸಂಪೂರ್ಣವಾಗಿ ಮುಚ್ಚಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಬಾಯಿ ಹುಣ್ಣು ಕೂಡಾ ಇರುತ್ತದೆ. ಈ ಹಂತದಲ್ಲಿ ನೇರವಾಗಿ ಬಾಯಿ ಕ್ಯಾನ್ಸರ್ ಆಗುವ ಸಾಧ್ಯತೆ ಶೇ. 5ರಷ್ಟು ಇರುತ್ತದೆ. ಮೂರು ಮತ್ತು ನಾಲ್ಕನೇ ಹಂತದಲ್ಲಿ ರೋಗವನ್ನು ಸರ್ಜರಿ ಮುಖಾಂತರವೇ ಸರಿಪಡಿಸಬೇಕಾಗುತ್ತದೆ. ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು ಬಾಯಿೂಳಗಿನ ಫೈಬ್ರಸ್ ಬ್ಯಾಂಡ್‌ಗಳನ್ನು ಕಿತ್ತು ಹಾಕಿ ಬಾಯಿ ತೆರೆಯುವಂತೆ ಮಾಡುತ್ತಾರೆ. ಈ ಮೂರು ಮತ್ತು ನಾಲ್ಕನೇ ಹಂತದಲ್ಲಿ ಯಾವುದೇ ಔಷಧಿ ಚಿಕಿತ್ಸೆ ಮಾಡಿದರೂ ಪ್ರಯೋಜನವಾಗದು.
ಕೊನೆ ಮಾತು:
ಬಾಯಿ ಬಿಗಿಯುವಿಕೆ ರೋಗ ಎನ್ನುವುದು ಮಾರಣಾಂತಿಕವಲ್ಲದ ತಡೆಗಟ್ಟಬಹುದಾದ ಮತ್ತು ಸರಿ ಪಡಿಸಬಹುದಾದ ರೋಗವಾಗಿದ್ದು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತದೆ. ಆದರೆ ನಿರ್ಲಕ್ಷ ವಹಿಸಿ ತಂಬಾಕು ಚಟವನ್ನು ಮುಂದುವರಿಸಿದಲ್ಲಿ ಬಾಯಿ ಕ್ಯಾನ್ಸರ್ ಆಗಿ, ಮಾರಣಾಂತಿಕವಾಗಿ ಕಾಡುವ ಎಲ್ಲಾ ಸಾಧ್ಯತೆ ಇದೆ. ಈ ಕಾರಣದಿಂದಲೇ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ಪಡೆಯುವುದರಲ್ಲಿಯೇ ಜಾಣತನ ಅಡಗಿದೆ. ತಂಬಾಕು ಉತ್ಪನ್ನಗಳನ್ನು ಕೆಲವರು ನಿರಂತರವಾಗಿ ಬಾಯಿಯೊಳಗೆ ಗಂಟೆಗಟ್ಟಲೆ ತುಟಿಯ ಒಳಭಾಗದಲ್ಲಿ, ನಾಲಗೆಯ ಕೆಳಗೆ ಮತ್ತು ಕೆನ್ನೆಯ ಒಳಭಾಗದಲ್ಲಿ ಇಡುತ್ತಾರೆ. ಇದರಿಂದ ಬಾಯಿಯ ಒಳಭಾಗದಲ್ಲಿರುವ ತೆಳುವಾದ ಪದರಕ್ಕೆ ಹಾನಿಯಾಗಿ ಪದರವು ತೆಳ್ಳಗಾಗುತ್ತದೆ ಮತ್ತು ಒಳಪದರದ ಕೆಳಭಾಗದಲ್ಲಿ ದೇಹದ ರಕ್ಷಣಾ ವ್ಯವಸ್ಥೆಯ ಸೈನಿಕರಾದ ಬಿಳಿ ರಕ್ತಕಣಗಳು ಶೇಖರಣೆಯಾಗುತ್ತದೆ. ಇದರಿಂದ ಉಂಟಾಗುವ ಉರಿಯೂತದಿಂದಾಗಿ ಬಾಯಿ ತೆರೆಯುವಿಕೆ ಅಡ್ಡಿಯಾಗುತ್ತದೆ. ಇನ್ನು ಕೆಲವರು ತಂಬಾಕು ಉತ್ಪನ್ನಗಳನ್ನು ಬಾಯಿಯೊಳಗೆ ಇಟ್ಟುಕೊಂಡು ನಿರಂತರವಾಗಿ ಜಗಿಯುತ್ತಲೇ ಇರುತ್ತಾರೆೆ. ಹೀಗೆ ನಿರಂತರವಾಗಿ ಜಗಿಯುವಿಕೆಯಿಂದ ಬಾಯಿ ಬಿಗಿಯುವ ರೋಗ ಉಂಟಾಗುತ್ತದೆ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ. ನಿರಂತರವಾದ ಜಗಿಯುವಿಕೆಯಿಂದ ಬಾಯಿ ತೆರೆಯಲು ಮತ್ತು ಮುಚ್ಚಲು ಸಾಧ್ಯವಾಗದೆ ಉರಿಯೂತ ಉಂಟಾಗುತ್ತದೆ ಮತ್ತು ದವಡೆ ಕೀಲುಗಳ ಮೇಲೆಯೂ ಅನವಶ್ಯಕ ಒತ್ತಡ ಉಂಟಾಗಿ ಬಾಯಿ ಕೀಲು ರೋಗ ಬರುವ ಸಾಧ್ಯತೆಯೂ ಇರುತ್ತದೆ. ಒಟ್ಟಿನಲ್ಲಿ ನಿರಂತರವಾಗಿ ತಂಬಾಕು ಜಗಿಯುವವರಿಂದಲೇ ಬಾಯಿ ಬಿಗಿಯುವ ರೋಗ ಎಂದು ಸಾಬೀತಾಗಿದೆ. ಈ ಎಲ್ಲಾ ಕಾರಣಗಳಿಂದ ತಂಬಾಕು ಉತ್ಪನ್ನಗಳಿಗೆ ಇತಿಶ್ರೀ ಹಾಡಿ, ಆರೋಗ್ಯಪೂರ್ಣ ಜೀವನ ನಡೆಸುವುದರಲ್ಲಿಯೇ ಜಾಣತನ ಅಡಗಿದೆ.

ಲಕ್ಷಣಗಳು ಏನು?
♦ ಬಾಯಿ ತೆರೆಯಲು ಕಷ್ಟವಾಗುವುದು.
♦ ಬಾಯಿಯ ಒಳಭಾಗದಲ್ಲಿ ಪದರಗಳು ಪೆಡಸುಗೊಂಡು ದೊರಗಾಗುವುದು ಅಥವಾ ಒರಟಾಗುವುದು. ಪದರದ ಮೇಲೆ ಕೈಯಾಡಿಸಿದಾಗ ಗಟ್ಟಿಯಾದ ಫೈಬ್ರಸ್ ಬ್ಯಾಂಡ್‌ಗಳು ಸಿಗುತ್ತದೆ.
♦ ಖಾರ ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವಾಗ ಬಾಯಿ ಉರಿಯುತ್ತದೆ. ಬಿಸಿ ಪದಾರ್ಥಗಳನ್ನು ಸೇವಿಸುವಾಗಲೂ ಬಾಯಿ ಉರಿಯುತ್ತದೆ ಮತ್ತು ವಿಪರೀತ ಯಾತನೆ ಉಂಟಾಗುತ್ತದೆ.
♦ ಬಾಯಿ ಬಿಗಿಯಾಗಿ ಹಿಡಿದಂತೆ ಭಾಸವಾಗುವುದು.
♦ ಮಾತನಾಡಲು ಕಷ್ಟವಾಗುತ್ತದೆ ಮತ್ತು ಆಹಾರ ಸೇವನೆ ಮಾಡಲು ಕಷ್ಟವಾಗುತ್ತದೆ. ಆಹಾರ ಪದಾರ್ಥ ಜಗಿಯಲು ಮತ್ತು ನುಂಗಲು ಕಷ್ಟವಾಗುತ್ತದೆ.
♦ ಬಾಯಿಯಲ್ಲಿ ಜೊಲ್ಲು ರಸದ ಸ್ರವಿಸುವಿಕೆ ಕಡಿಮೆಯಾಗಿ ಬಾಯಿ ಒಣಗಿದಂತೆ ಭಾಸವಾಗುತ್ತದೆ.
♦ ಬಾಯಿಯಲ್ಲಿ ಹುಣ್ಣು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಅಂತಿಮ ಹಂತದಲ್ಲಿ ಬಾಯಿ ಸಂಪೂರ್ಣವಾಗಿ ಮುಚ್ಚಿ ಹೋಗುವ ಸಾಧ್ಯತೆ ಇರುತ್ತದೆ.
♦ ನಾಲಗೆಯ ಚಲನೆಯಲ್ಲಿ ವ್ಯತ್ಯಯವಾಗುತ್ತದೆ. ತುಟಿಯ ಒಳಭಾಗದ ಪದರವು ಸಂಪೂರ್ಣವಾಗಿ ಬಿಳಿಚಿಕೊಳ್ಳುತ್ತದೆ. ನಾಲಗೆಯನ್ನು ಹೊರ ಚಾಚಲು ಕಷ್ಟವಾಗುತ್ತದೆ. ಬಾಯಿಯ ಒಳಭಾಗದ ಮೇಲಂಗಳದಲ್ಲಿ ಒರಟಾದಂತೆ ಅನಿಸುತ್ತದೆ.
♦ ಮಾತನಾಡುವಾಗ ಮೂಗಿನಲ್ಲಿ ಮಾತನಾಡಿದಂತೆ ಭಾಸವಾಗುತ್ತದೆ.
♦ ಕೆಲವೊಮ್ಮೆ ಕಿವಿಯಲ್ಲಿ ಮತ್ತು ದವಡೆಯಲ್ಲಿ ನೋವು ಬಂದಂತೆ ಭಾಸವಾಗುತ್ತದೆ.

Writer - ಡಾ. ಮುರಲಿ ಮೋಹನ್, ಚೂಂತಾರು

contributor

Editor - ಡಾ. ಮುರಲಿ ಮೋಹನ್, ಚೂಂತಾರು

contributor

Similar News

ಜಗದಗಲ
ಜಗ ದಗಲ