ನಮ್ಮ ಜಮೀನನ್ನು ನಮಗೆ ಮರಳಿ ಕೊಡಿ...
ಭಾಗ-1
ಯೋಜನೆಯಿಂದ ಸಂಕಷ್ಟಕ್ಕೀಡಾಗುವ ಜನರ ಸಂಖ್ಯೆಯನ್ನು ನಿಜವಾದ ಸಂಖ್ಯೆಗಿಂತ ಕಡಿಮೆ ಮಾಡಿ ತೋರಿಸಲಾಗಿದೆ. ಜನರ ಸ್ಥಳಾಂತರ ಮಾಡಲಾಗುವುದಿಲ್ಲ ಎಂದು ಹೇಳಲಾಗಿದೆ. ಹಳ್ಳಿಗರಿಗೆ ಆಗುವ ನಷ್ಟದ ಮೊತ್ತವನ್ನು ವಿಶ್ಲೇಷಿಸಲಾಗಿಲ್ಲ. ರೈತರ ಅಭಿಪ್ರಾಯಗಳನ್ನು ಅಧ್ಯಯನದಲ್ಲಿ ಸೇರಿಸಲಾಗಿಲ್ಲ. ಸ್ವತಂತ್ರವಾದ ಸಂಸ್ಥೆಯೊಂದು ನಡೆಸಬೇಕಾಗಿದ್ದ ಅಧ್ಯಯನದ ಹೊಣೆಯನ್ನು ಮುಂಬೈಯ ಎಎಫ್‌ಸಿ ಇಂಡಿಯಾ ಲಿಮಿಟೆಡ್ ಎಂಬ ಒಂದು ಸಮಾಲೋಚನಾ ಕಂಪೆನಿಗೆ ನೀಡಲಾಗಿದ್ದು, ಅದು ವಿವರವಾದ ನಿವೇಶನ ಭೇಟಿಗಳನ್ನು ನಡೆಸಿಲ್ಲ ಮತ್ತು ಸಂತ್ರಸ್ತ ಜನರ ಜೊತೆ ಸಭೆಗಳನ್ನು ನಡೆಸಿಲ್ಲ. ಅದಾನಿ ಕಂಪೆನಿಗೆ ನೆರವಾಗುವ ರೀತಿಯಲ್ಲಿ ಅದು ನಡೆದುಕೊಂಡಿದೆ.
ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ನಾಲ್ಕು ಹಳ್ಳಿಗಳ ಹದಿನಾರು ಮಂದಿ ನಿವಾಸಿಗಳು ಫೆಬ್ರವರಿ 4ರಂದು ಜಾರ್ಖಂಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸರಕಾರವು ಅದಾನಿ ಗ್ರೂಪ್‌ಗಾಗಿ ವಶಪಡಿಸಿಕೊಂಡಿರುವ 1,032 ಫುಟ್‌ಬಾಲ್ ಮೈದಾನಗಳಷ್ಟು ವಿಸ್ತಾರವಾದ ಜಮೀನನ್ನು ತಮಗೆ ಮರಳಿಸುವಂತೆ ವಿನಂತಿಸಿಕೊಂಡರು.
ಹದಿನಾರು ಹಳ್ಳಿಗಳ ನಿವಾಸಿಗಳು ಸಲ್ಲಿಸಿರುವ ಅರ್ಜಿಯ ಪ್ರಕಾರ ಸರಕಾರ ಜಮೀನನ್ನು ವಶಪಡಿಸಿಕೊಳ್ಳುವ ಇಡೀ ಪ್ರಕ್ರಿಯೆ ‘‘ಕಾನೂನು ಬಾಹಿರ ಹಾಗೂ ಅಕ್ರಮಗಳಿಂದ ಕೂಡಿದೆ’’. ಈ ಪ್ರಕರಣವು ಜಾರ್ಖಂಡ್‌ಗಷ್ಟೇ ಅಲ್ಲ, ಭಾರತದ ಇತರ ರಾಜ್ಯಗಳಿಗೂ ಮುಖ್ಯವಾಗಿದೆ. ಯಾಕೆಂದರೆ ಖಾಸಗಿ ಉದ್ಯಮಕ್ಕಾಗಿ ಸರಕಾರವೊಂದು 2013ರ ಜಮೀನು ವಶಪಡಿಸುವಿಕೆ ಕಾನೂನನ್ನು ಇದೇ ಮೊದಲ ಬಾರಿಗೆ ಬಳಸಿಕೊಂಡಿದೆ.
ಇದೇ ವೇಳೆ ಪರಿಸರ ವಿಜ್ಞಾನಿ ರಾಮ ಮೂರ್ತಿ ಶ್ರೀಧರ್ ಈ ಜಮೀನಿನಲ್ಲಿ ನಿರ್ಮಾಣವಾಗಲಿರುವ ಅದಾನಿ ಗ್ರೂಪ್‌ನ ಉಷ್ಣ ವಿದ್ಯುತ್ ಸ್ಥಾವರಕ್ಕೆ ಪರಿಸರ ಪರವಾನಿಗೆ ನೀಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್‌ನಲ್ಲಿ ಹೂಡಲಾದ ದಾವೆಗೆ ಸಂಬಂಧಿಸಿ ಸರಕಾರದ ಪ್ರತಿಕ್ರಿಯೆ ನೀಡಲು ಗೊಡ್ಡಾ ಜಿಲ್ಲಾಧಿಕಾರಿ ನಿರಾಕರಿಸಿದ್ದಾರೆ.
ವಿವಾದಾಸ್ಪದ ಯೋಜನೆ
2016ರ ಮೇ ತಿಂಗಳಲ್ಲಿ, ಭಾರತದ ಅತ್ಯಂತ ಶ್ರೀಮಂತ ಹಾಗೂ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಗೌತಮ್ ಅದಾನಿ, ಅದಾನಿ ಗ್ರೂಪ್‌ಗಾಗಿ ಸುಮಾರು 2,000 ಎಕರೆಯಷ್ಟು ಜಮೀನನ್ನು ವಶಪಡಿಸಿಕೊಳ್ಳುವಂತೆ ಜಾರ್ಖಂಡ್ ಸರಕಾರಕ್ಕೆ ಹೇಳಿದರು. ಅಮದು ಮಾಡಿಕೊಳ್ಳುವ ಕಲ್ಲಿದ್ದಲು ಬಳಸಿ 1,600 ಮೆಗಾವ್ಯಾಟ್ ವಿದ್ಯುತ್ ಸ್ಥಾವರವನ್ನು ಗೊಡ್ಡಾ ಜಿಲ್ಲೆಯ ಹತ್ತು ಹಳ್ಳಿಗಳಲ್ಲಿ ಸ್ಥಾಪಿಸಲಾಗುತ್ತದೆ. ಅದಾನಿ ಗ್ರೂಪ್ ಅಲ್ಲಿ ಉತ್ಪಾದಿಸುವ ವಿದ್ಯುತ್ತನ್ನು ಬಾಂಗ್ಲಾದೇಶಕ್ಕೆ ಮಾರಾಟ ಮಾಡಲಿದೆ.
ಕಾನೂನಿನಲ್ಲಿ ಜಾರ್ಖಂಡ್ ಸರಕಾರವು ಹಲವು ಸುರಕ್ಷತಾ ನಿಯಮಗಳನ್ನು ಕೈಬಿಟ್ಟಿದೆ. ಭೂ ವಶಪಡಿಸುವಿಕೆ, ಪುನರ್ವಸತಿ ಮತ್ತು ಮರುನೆಲೆ ಕಾನೂನಿನಲ್ಲಿ (ನ್ಯಾಯಯುತ ವಾದ ಪರಿಹಾರ ಪಡೆಯುವ ಹಕ್ಕು ಹಾಗೂ ಪಾರದರ್ಶಕತೆ ಅಥವಾ 2013ರ ಭೂ ವಶಪಡಿಸಿಕೊಳ್ಳುವಿಕೆ ಕಾನೂನು ಪ್ರಕಾರ)ಸರಕಾರವು ಅದಾನಿ ಗ್ರೂಪ್‌ಗೆ ಜಮೀನು ಕೊಡಲು ಇಷ್ಟವಿಲ್ಲದ ಹಳ್ಳಿಗರಿಂದ ಬಲವಂತವಾಗಿ ಜಮೀನು ವಶಪಡಿಸಿಕೊಂಡಿದೆ. ‘ಸಾರ್ವಜನಿಕ ಉದ್ದೇಶ’, ಸಾಮಾಜಿಕ ಪರಿಣಾಮದ ಅಧ್ಯಯನ, ಒಪ್ಪಿಗೆ ಮತ್ತು ಪರಿಹಾರಕ್ಕೆ ಸಂಬಂಧಿಸಿ ಹಳ್ಳಿಗರಿಗೆ ಇದ್ದ ರಕ್ಷಣಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹಿಂಸಾತ್ಮಕವಾಗಿ, ಬಲವಂತದಿಂದ ಜಮೀನು ವಶಪಡಿಸಿಕೊಳ್ಳುವ ಭಾರತದ ಒಂದು ಶತಮಾನದಷ್ಟು ಹಳೆಯದಾದ ಕಾನೂನಿನ ಪರಂಪರೆಗೆ ಅಂತ್ಯ ಹಾಡುವುದಕ್ಕಾಗಿ ಈ ಸುರಕ್ಷತಾ ಕ್ರಮಗಳನ್ನು ಕಾನೂನಿನಲ್ಲಿ ಅಳವಡಿಸಲಾಗಿತ್ತು. ಆದರೆ 2016ರಿಂದ ಗೊಡ್ಡಾ ಜಿಲ್ಲೆಯಲ್ಲಿ ಜನರ ಪ್ರತಿಭಟನೆಗಳನ್ನೂ ಲೆಕ್ಕಿಸದೆ ಈ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಲಾಗಿದೆ.
2018ರ ಆಗಸ್ಟ್ 31ರಂದು, ಸ್ಥಳೀಯ ಪೊಲೀಸರು ನೋಡುತ್ತಿದ್ದಂತೆಯೇ ಸಂತಾಲ್ ಆದಿವಾಸಿ ಸಮುದಾಯದ ರೈತ ಮಹಿಳೆಯರು ಅದಾನಿ ಕಂಪೆನಿಯ ಅಧಿಕಾರಿಗಳ ಕಾಲಿಗೆ ಬಿದ್ದು ತಮ್ಮ ಜಮೀನನ್ನು ವಶಪಡಿಸಿಕೊಳ್ಳದಂತೆ ಅಂಗಲಾಚಿ ಬೇಡಿಕೊಂಡರು. ಇದಕ್ಕೆ ಪ್ರತಿಯಾಗಿ, ತಮ್ಮ ಪೂರ್ವಿಕರ ಜಮೀನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಪ್ರತಿಭಟಿಸಿದ ಕೆಲವು ಆದಿವಾಸಿ ಹಾಗೂ ದಲಿತ ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಯಿತು.
ಹಳ್ಳಿಗರು ಜಮೀನು ವಶಪಡಿಸಿಕೊಳ್ಳುವುದನ್ನು ಪ್ರಶ್ನಿಸಿದ್ದಾರೆ
ಈಗ ಹೈಕೋರ್ಟ್‌ಗೆ ಹೋಗಿರುವ ಹದಿನಾರು ಮಂದಿ ಹಳ್ಳಿಗರು ಸಂತಾಲ್ ಆದಿವಾಸಿ, ದಲಿತ ಮತ್ತು ಇತರ ಹಿಂದುಳಿದ ಸಮುದಾಯಗಳಿಗೆ ಸೇರಿದವರು. ಇದರಲ್ಲಿ ನಿವೃತ ಶಿಕ್ಷಕರು, ರೈತರು ಮತ್ತು ಕೃಷಿ ಕಾರ್ಮಿಕರೂ ಸೇರಿದ್ದಾರೆ. ಗಾಂಗ್ಟಾದ ಓರ್ವ ಸಂತಾಲ್ ರೈತ ಸೂರ್ಯನಾರಾಯಣ ಹೆಮ್ಬ್ರಾಮ್ ಮತ್ತು ಇತರ ಹಳ್ಳಿಗರು ಜುಲೈ 2018ರಲ್ಲಿ, ಬಲವಂತವಾಗಿ ಅವರ ಜಮೀನನ್ನು ವಶಪಡಿಸಿಕೊಂಡ ವಿರುದ್ಧ ಪ್ರತಿಭಟಿಸಿದ್ದರು. ಪರಿಣಾಮವಾಗಿ ಈಗ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಹೆಮ್ಬ್ರಾಮ್ ಇಂಡಿಯಾ ಸ್ಪೆಂಡ್‌ಗೆ ಹೇಳುತ್ತಾರೆ: ‘‘ರಾಜ್ಯ ಸರಕಾರ ಅದಾನಿಯ ಸರಕಾರ. ಪ್ರಧಾನಿಯವರು ಅದಾನಿಯ ಪ್ರಧಾನಿ. (ಮುಖ್ಯಮಂತ್ರಿ) ರಘುಬರ್ ದಾಸ್, ಅದಾನಿಯ ಜನ. ನಮ್ಮ ಮಾತನ್ನು ಯಾರು ಕೇಳುತ್ತಾರೆ? ನ್ಯಾಯಾಲಯದ ಮೊರೆ ಹೋಗುವುದಲ್ಲದೆ ನಮಗೆ ಬೇರೆ ದಾರಿಯೇ ಇರಲಿಲ್ಲ’’.
ಹಳ್ಳಿಗರು ತಮ್ಮ ಅರ್ಜಿಯಲ್ಲಿ ನ್ಯಾಯಾಲಯವು ಸರಕಾರದ ಜಮೀನು ವಶಪಡಿಸುವಿಕೆ ಕಾನೂನನ್ನು ಯಾಕೆ ರದ್ದುಪಡಿಸಬೇಕೆಂಬುದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ.
ಸರಕಾರವು ಅದಾನಿ ಗ್ರೂಪ್‌ಗೋಸ್ಕರ ‘‘ಒಂದು ಸಾರ್ವಜನಿಕ ಉದ್ದೇಶಕ್ಕಾಗಿ’’ ಎಂದು ಹೇಳಿ ರೈತರ ಜಮೀನನ್ನು ವಶಪಡಿಸಿಕೊಳ್ಳುತ್ತಿದೆ. ಆದರೆ ಇದು ಸತ್ಯವಲ್ಲ. ಉತ್ಪಾದಿಸಿದ ಸಂಪೂರ್ಣ ವಿದ್ಯುತ್ತನ್ನು ಅದಾನಿ ಗ್ರೂಪ್ ಬಾಂಗ್ಲಾದೇಶಕ್ಕೆ ಮಾರಾಟ ಮಾಡಲಿರುವುದರಿಂದ, ಜಮೀನು ಸ್ವಾಧೀನಪಡಿಸಿಕೊಳ್ಳುವಿಕೆಯು ಅದಾನಿ ಗುಂಪಿನ ಖಾಸಗಿ ಲಾಭಕ್ಕಾಗಿ ನಡೆಯುತ್ತಿದೆ.
ಜಮೀನು ಸ್ವಾಧೀನಪಡಿಸಿಕೊಳ್ಳುವಿಕೆಯಿಂದ ಆಗುವ ಸಾಮಾಜಿಕ ಆರ್ಥಿಕ ಪರಿಣಾಮಗಳ ಸಾಮಾಜಿಕ ಪರಿಣಾಮ ಅಧ್ಯಯನ ದೋಪೂರಿತವಾಗಿದೆ: ಯೋಜನೆಯಿಂದ ಸಂಕಷ್ಟಕ್ಕೀಡಾಗುವ ಜನರ ಸಂಖ್ಯೆಯನ್ನು ನಿಜವಾದ ಸಂಖ್ಯೆಗಿಂತ ಕಡಿಮೆ ಮಾಡಿ ತೋರಿಸಲಾಗಿದೆ. ಜನರ ಸ್ಥಳಾಂತರ ಮಾಡಲಾಗುವುದಿಲ್ಲ ಎಂದು ಹೇಳಲಾಗಿದೆ. ಹಳ್ಳಿಗರಿಗೆ ಆಗುವ ನಷ್ಟದ ಮೊತ್ತವನ್ನು ವಿಶ್ಲೇಷಿಸಲಾಗಿಲ್ಲ. ರೈತರ ಅಭಿಪ್ರಾಯಗಳನ್ನು ಅಧ್ಯಯನದಲ್ಲಿ ಸೇರಿಸಲಾಗಿಲ್ಲ. ಸ್ವತಂತ್ರವಾದ ಸಂಸ್ಥೆಯೊಂದು ನಡೆಸಬೇಕಾಗಿದ್ದ ಅಧ್ಯಯನದ ಹೊಣೆಯನ್ನು ಮುಂಬೈಯ ಎಎಫ್‌ಸಿ ಇಂಡಿಯಾ ಲಿಮಿಟೆಡ್ ಎಂಬ ಒಂದು ಸಮಾಲೋಚನಾ ಕಂಪೆನಿಗೆ ನೀಡಲಾಗಿದ್ದು, ಅದು ವಿವರವಾದ ನಿವೇಶನ ಭೇಟಿಗಳನ್ನು ನಡೆಸಿಲ್ಲ ಮತ್ತು ಸಂತ್ರಸ್ತ ಜನರ ಜೊತೆ ಸಭೆಗಳನ್ನು ನಡೆಸಿಲ್ಲ. ಅದಾನಿ ಕಂಪೆನಿಗೆ ನೆರವಾಗುವ ರೀತಿಯಲ್ಲಿ ಅದು ನಡೆದುಕೊಂಡಿದೆ.
ಯೋಜನೆಗಾಗಿ 2016ರಲ್ಲಿ ನಡೆದ ಸಾರ್ವಜನಿಕ ಅಹವಾಲು ಆಲಿಸುವಿಕೆಗಳು ‘‘ಮುಕ್ತ ಹಾಗೂ ನ್ಯಾಯಾಯುತ’’ವಾಗಿರಲಿಲ್ಲ. ಕೆಲವು ಹಳ್ಳಿಗರಿಗೆ ಅಲ್ಲಿ ಪ್ರವೇಶ ನಿರಾಕರಿಸಲಾಗಿತ್ತು ಮತ್ತು ಅವರ ಮೇಲೆ ಪೊಲೀಸರು ಲಾಠಿ ಬೀಸಿದ್ದರು.
ಭೂ ಸ್ವಾಧೀನ ಕಾಯ್ದೆಯ ಪ್ರಕಾರ, ಪಡೆಯಬೇಕಾಗಿದ್ದ ಶೇ.80ರಷ್ಟು ಹಿಡುವಳಿದಾರರ ಒಪ್ಪಿಗೆಯನ್ನು ಪಡೆದಿರಲಿಲ್ಲ. ಗ್ರಾಮ ಸಭೆಯ ‘ಅನುಮತಿ ಪಡೆಯದೆ’ ಸರಕಾರವು ರೈತ ಸಮುದಾಯದ ಜಮೀನನ್ನು ವಶಪಡಿಸಿಕೊಂಡಿದೆ.
ಕೃಪೆ: ಇಂಡಿಯಾಸ್ಪೆಂಡ್.ಕಾಮ್