ಅರಳಿ ಮರ

Update: 2019-02-23 19:29 GMT

ಟ್ರೀಂ... ಟ್ರೀಂ

‘‘ಹಲೋ...ಇನ್‌ಸ್ಪೆಕ್ಟರಲ್ವಾ?’’

‘‘ಎಸ್, ಇನ್‌ಸ್ಪೆಕ್ಟರ್ ಗಣೇಶ್ ಸ್ಪೀಕಿಂಗ್ ಹಿಯರ್’’

‘‘ ಅಬ್ಬು ಸಿಂಧನೂರು ಮುಳುಗುತ್ತಿದೆ. ಗುಡ್ಡ ಜರೀತಾ ಇದೆ. ಯಾರನ್ನಾದ್ರೂ ರಕ್ಷಣೆಗೆ ಕಳಿಸಿ ಸರ್’’

‘‘ಹಲೋ... ಹಲೋ’’

ಇನ್‌ಸ್ಪೆಕ್ಟರ್ ಎರಡನೇ ಬಾರಿ ಹಲೋ ಹೇಳುವಷ್ಟರಲ್ಲಿ ಫೋನ್ ಡಿಸ್‌ಕನೆಕ್ಟಾಯಿತು. ಇನ್‌ಸ್ಪೆಕ್ಟರ್ ತರಾತುರಿಯಿಂದ ಜೀಪು ಹತ್ತಿ ಚಾಲಕನಲ್ಲಿ ಅಬ್ಬು ಸಿಂಧನೂರಿಗೆ ತಿರುಗಿಸಲು ಹೇಳಿದ. ಮಳೆ ರಭಸವಾಗಿ ಸುರಿಯುತ್ತಿತ್ತು. ಟಿ.ವಿ ವಾಹಿನಿಗಳೆಲ್ಲಾ ವಿಭ್ರಾಂತಿಯಿಂದ ಒದರಿಕೊಳ್ಳುತ್ತಿದ್ದವು. ಅಲ್ಲಲ್ಲಿ ಮನೆ ಕುಸಿತ, ಕೊಚ್ಚಿ ಹೋದವರ ಸುದ್ದಿ.

ಜೀಪಿನಲ್ಲಿ ಡೋರು ಹಾಕಿದ್ದರೂ ನೀರು ಎಲ್ಲೆಂದರಲ್ಲಿ ದಾರಿ ಮಾಡಿಕೊಂಡು ಒಳ ನಸುಳಲು ಹವಣಿಸುತ್ತಿತ್ತು. ಎರೆಡೆರಡು ಬಾರಿ ಸ್ಟಾರ್ಟಾಗದೆ ಮೂರನೇ ಬಾರಿಗೆ ಜೀವ ಬಂದಂತೆ ಹೊಗೆಯುಗುಳಿ ಸ್ಟಾರ್ಟಾಯಿತು. ಗಾಡಿ ಸ್ಟೇಶನ್ ದಾಟಿ ರಸ್ತೆಗಿಳಿಯಿತು. ರಸ್ತೆ ತುಂಬಾ ನೀರು. ಗಾಡಿ ಮೆಲ್ಲನೆ ಚಲಿಸುತ್ತಿತ್ತು. ಜೀಪಿನೊಳಗೆ ಕುಳಿತವರ ಕಾಲು ಮುಳುಗುವಷ್ಟು ನೀರು ಒಳಗೆ ಬರುತ್ತಿತ್ತು. ಸುರ್ರನೆ ನೀರು ಹಾರಿಸುತ್ತಾ ಜೀಪು ಸಾಗಿತು. ಜೀಪಿನ ಗಾಜಿನ ಮೇಲೆ ಮಬ್ಬು ಕವಿದು ದಾರಿ ಕಾಣುತ್ತಿರಲಿಲ್ಲ. ಮಳೆ ಹನಿಗಳು ರಪ ರಪನೆ ಬೀಳುತ್ತಿವೆೆ. ಅದು ವರೆಗೂ ಮೆಲ್ಲನೆ ಚಲಾಯಿಸುತ್ತಿದ್ದ ಚಾಲಕ ಗಾಡಿ ಸಂಪೂರ್ಣ ನಿಲ್ಲಿಸಿದ.

 ‘‘ಇಲ್ಲ ಸರ್, ರಸ್ತೆಯೇ ಕಾಣಿಸುತ್ತಿಲ್ಲ...’’ ಹೇಳಿ ಮುಗಿಸುವುದರೊಳಗಾಗಿ ಅವರ ಜೀಪಿನ ಮುಂದೆಯೇ ತೆಂಗಿನ ಮರವೊಂದು ದೊಪ್ಪನೆ ಉರುಳಿತು. ನೀರು ರಾಚಿ ಜೀಪನ್ನೊಮ್ಮೆ ತೊಳೆಯಿತು. ಇಬ್ಬರೂ ಸಣ್ಣಗೆ ನಿಟ್ಟುಸಿರು ಬಿಟ್ಟರು.

ಇದುವರೆಗೂ ಅಬ್ಬು ಸಿಂಧನೂರೆಂಬ ಊರಿನ ಹೆಸರು ಕೇಳಿದ್ದೆ ಅಷ್ಟೆ. ಊರು ನಮ್ಮದೇ ಸ್ಟೇಷನ್ ವ್ಯಾಪ್ತಿಯಲ್ಲಿ ಬರುತ್ತದೆ. ಬಂದು ಐದು ವರ್ಷ ಕಳೆದರೂ ಯಾವೊಬ್ಬನೂ ಆ ಊರಿಗೆ ಕೇಸಿಗಾಗಿಯೋ ಯಾವುದಕ್ಕೂ ಹೋಗಿ ಬಂದ ಚರಿತ್ರೆ ಇಲ್ಲ. ಎಲ್ಲ ಚಿಂತಿಸುತ್ತಾ ಇನ್‌ಸ್ಪೆಕ್ಟರ್ ತಲೆ ಕೊಡವಿಕೊಂಡ. ಜೀಪು ನೇತ್ರಾವದಿ ನದಿ ತೀರದಲ್ಲಿ ನಿಂತಿತ್ತು. ಇನ್‌ಸ್ಪೆಕ್ಟರ್ ಕೈಯಲ್ಲಿದ್ದ ವಾಕಿಟಾಕಿ ತಾರು ಮಾರು ಒದರಿಕೊಳ್ಳುತ್ತಿತ್ತು. ‘‘ಸರ್.... ರಸ್ತೆ ಕುಸೀತಾ ಇದೆ... ಹೈವೇ ಮಾರ್ಗವಾಗಿ ಬರಬೇಡಿ... ಓವರ್... ಓವರ್’’

‘‘ಮನೆಯೊಂದು ಕುಸಿದು ಬಿದ್ದು ಜಖಂ ಆಗಿದೆ. ಅದೊರಳಗೆ ಇಬ್ಬರ ಕೂಗು ಕೇಳಿಸುತ್ತಿದೆ. ರಕ್ಷಣೆ ಮಾಡುವುದು ಕಷ್ಟವಾಗುತ್ತಿದೆ. ಓವರ್... ಓವರ್’’

ಇನ್‌ಸ್ಪೆಕ್ಟರ್ ಮತ್ತೆ ಚಿಂತೆಗಿಳಿದ. ಅಷ್ಟರಲ್ಲೇ ಆ್ಯಂಬುಲೆನ್ಸ್ ‘‘ಕೂಂ ಕೂಂ’’ ಎಂದು ಜಡಿ ಮಳೆಯ ಮಧ್ಯೆ ಮಾಯವಾಯಿತು. ಮಬ್ಬಿನಲ್ಲಿ ಸಣ್ಣಗೆ ಲೈಟು ಉರಿಯುವುದು ಕಾಣುತ್ತಿದ್ದರೂ ಶಬ್ದ ಮಳೆಯ ರಭಸಕ್ಕೆ ನಿಮಿಷದಲ್ಲೇ ಕೇಳಿಸದಾಯಿತು. ಒಮ್ಮೆಲೆ ಮಿಂಚು ಪಳ್ಳನೆ ಕತ್ತಲಾಗಿಸಿದ್ದ ಮೋಡದ ನೆರಳನ್ನು ಬೆಳಕು ಮಾಡಿತು. ದೂರದಲ್ಲಿ ಅಬ್ಬು ಸಿಂಧನೂರು ಮಣ್ಣಿನ ಗುಡ್ಡೆ ಜರಿ ಜರಿದು ಬೀಳುತ್ತಿದ್ದುದ್ದು ಕಾಣುತ್ತಲೇ ಇತ್ತು. ವಾಕಿ ಟಾಕಿ ಮತ್ತೊಮ್ಮೆ ‘ಕ್ರೂ ಕ್ರೂ’ ಎಂದು ಅಸಹ್ಯವಾಗಿ ಕೂಗಿ ಕೊಂಡಿತು. ಅಬ್ಬು ಸಿಂಧುನೂರು ಸಂಪೂರ್ಣ ಜಲಾವೃತವಾಗುತ್ತಿದೆ. ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿಲ್ಲ, ಓವರ್... ಓವರ್..... ಇನ್‌ಸ್ಪೆಕ್ಟರ್ ಸೀಟಿಗೊರಗಿದ, ಚಾಲಕ ಮೆಲ್ಲನೆ ಮತ್ತೆ ಸ್ಟೇಶನ್‌ಗೆ ಗಾಡಿ ತಿರುಗಿಸಿದ.

ಮಹಾ ಮಳೆ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ಮಳೆ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹವಾಮಾನ ವರದಿಗಳು ಇನ್ನೆರಡು ದಿನದಲ್ಲಿ ಭೀಕರ ಮಳೆಯಿದೆಯೆಂದು ಹೇಳತೊಡಗಿತ್ತು. ಊರೆಲ್ಲಾ ಗಾಬರಿಯಿಂದ ಮುಂದೆ ನಡೆಯುವ ಅನಾಹುತವನ್ನೇ ಎದುರು ನೋಡುತ್ತಿತ್ತು. ಗಾಡಿ ಪೊಲೀಸ್ ಸ್ಟೇಶನ್ ತಲುಪಿತು.

ಕಾನ್‌ಸ್ಟೇಬಲೊಬ್ಬ ಛತ್ರಿ ಹಿಡಿದು ಇನ್‌ಸ್ಪೆಕ್ಟರನ್ನು ಜೀಪಿನ ಬಾಗಿಲು ತೆರೆಯುವುದರೊಳಗೆ ಹತ್ತಿರ ಬಂದ. ಬಿರುಸಿನ ಮಳೆಗೆ ಸ್ಟೇಶನಿನ ಮಹಡಿಗೆ ಕಲ್ಲು ಬಿದ್ದಷ್ಟು ಜೋರಾಗಿ ಶಬ್ದವೇಳುತ್ತಿತ್ತು. ಒದ್ದೆ ಯಾದ ಸಮವಸ್ತ್ರವನ್ನು ಕೊಡವಿಕೊಳ್ಳುತ್ತಾ ಇನ್‌ಸ್ಪೆಕ್ಟರ್ ಬಂದು ಸೀಟಿನಲ್ಲಿ ಕುಳಿತು ಟಿ.ವಿ. ಆನ್ ಮಾಡಿದ. ವಿದ್ಯುತ್ ಕೈಕೊಟ್ಟಿತ್ತು. ಜನರೇಟರ್ ಚಾಲ್ತಿಯಲ್ಲಿದ್ದರೂ ಅದರ ಗುಡುಗುವ ಸದ್ದು ಹೊರಗಿನ ಮಳೆಯ ಸದ್ದಿಗೆ ಕೇಳಿಸುತ್ತಿರಲಿಲ್ಲ. ಟಿ.ವಿ ಚಾನೆಲೊಂದು ಅಬ್ಬು ಸಿಂಧನೂರಿನ ಕಥೆ ಹೇಳುತ್ತಿತ್ತು.

ಇವತ್ತು ನಿಮಗೆಲ್ಲಾ ನಾಮಾವಶೇಷಗೊಂಡ ಅಬ್ಬು ಸಿಂಧನೂರಿನ ಕಥೆ ಹೇಳಬೇಕು.

ನೇತ್ರಾವತಿ ನದಿಯ ತಟದಲ್ಲಿ ಅಬ್ಬು ಸಿಂಧನೂರು ಎಂಬೂರು. ಊರೆಂದು ಕರೆಯುವುದಕ್ಕಿಂತ ದ್ವೀಪವೆಂದರೆ ಸರಿಯಾಗಬಹುದು. ಕಥೆ ಹೇಳಬೇಕಾದರೆ, ನೀವು ನನ್ನೊಂದಿಗೆ ನೇತ್ರಾವತಿ ನದಿ ದಾಟಲು ದೋಣಿಯಲ್ಲೊಮ್ಮೆ ಕೂರಬೇಕು. ಆ ದೂರದಲ್ಲಿ ಜರಿದು ಬಿದ್ದ ಮಣ್ಣಿನ ರಾಶಿ ಕಾಣುತ್ತಿದೆಯಲ್ವಾ? ಅದು ಹಲವಾರು ವರ್ಷಗಳ ಹಿಂದೆ ಬರೀ ಬೋಳು ಗುಡ್ಡೆಯಾಗಿತ್ತು. ಬಿತ್ತಿದರೂ ಬೆಳೆ ಬಾರದ ದ್ವೀಪ. ಹಾಗಂತ ಈ ಊರಿನವರು ಕೆಲಸ ಮಾಡದ ಸೋಮಾರಿಗಳಲ್ಲ. ಬೆಳಗ್ಗೆ ಬೇಗನೆದ್ದು ಹೊಳೆ ದಾಟಿ ಸಾಗಿದರೆ ಮೊಯ್ದೀನ್ ಬ್ಯಾರಿಯ ಹೊಲದಲ್ಲಿ ಎಲ್ಲರಿಗೂ ಕೆಲಸ. ಮಳೆಗಾಲವಾದರೆ ಸಾಕು ಎಲ್ಲಾ ವರ್ಷವೂ ನೀರಿನ ಪ್ರವಾಹಕ್ಕೆ ಊರು ಭಾಗಶಃ ಮುಳುಗಿ ಹೋಗುತ್ತಿತ್ತು. ಮನೆ ಮಠಗಳೆಲ್ಲಾ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ಏಕಾ ಏಕಿ ಬರುವ ಪ್ರವಾಹಕ್ಕೆ ಯಾವ ಮುನ್ಸೂಚನೆಯೂ ಇರದೆ ಹಲವರನ್ನು ಬಲಿ ಪಡೆಯುತ್ತಿತ್ತು. ಹೀಗಿರುವಾಗ ಸುಮಾರು 40 ವರ್ಷಗಳ ಹಿಂದೆ ಅಲ್ಲೊಂದು ಅದ್ಭುತ ನಡೆಯಿತು. ಅಬ್ಬು ಮತ್ತು ಸಿಂಧ ಎಂಬಿಬ್ಬರು ಪ್ರಾಣ ಸ್ನೇಹಿತರಿದ್ದರು. ಪರಸ್ಪರ ಯಾವತ್ತೂ ಬಿಟ್ಟಿರಲಾಗದ ನಂಟು ಅವರಿಬ್ಬರಿಗೆ. ಬೇಸಿಗೆ ಕಾಲದ ದಿನಗಳವು. ಎಲ್ಲರೂ ಕೆಲಸಕ್ಕೆ ಹೊರಟರು. ಅಬ್ಬು ಮತ್ತು ಸಿಂಧ ಹಾರೆ ಗುದ್ದಲಿ ಬೆನ್ನಿಗೆ ಹಾಕಿಕೊಂಡು ನದಿ ತಟದ ಬಳಿ ನಡೆಯತೊಡಗಿದರು. ಇಬ್ಬರದ್ದು ಜಾತಿ ಬೇರೆ ಮನಸ್ಸು ಒಂದೇ. ಇಬ್ಬರೂ ಸತತವಾಗಿ ಗುಂಡಿ ಅಗೆಯಲಾರಂಭಿಸಿದರು. ಮೊದ ಮೊದಲಲ್ಲಿ ಯಾರಿಗೂ ಅರ್ಥವಾಗಲಿಲ್ಲ. ಇಬ್ಬರೂ ಒಂದೊಂದು ಸಸಿಗಳನ್ನು ತಂದು ನೆಡಲಾರಂಭಿಸಿದರು.

‘ಈ ಬೇಸಿಗೆಯಲ್ಲಿ ಗಿಡ ನೆಡುವುದು, ಅದು ಬೋರು ಗುಡ್ಡೆಯ ಮೇಲೆ ಹುಚ್ಚಲ್ಲವೆ?’ ಜನರು ಆಡಿಕೊಳ್ಳುತ್ತಿದ್ದರು. ಸುಡು ಬಿಸಿಲಲ್ಲೂ ಅವರು ಗಿಡಗಳಿಗೆಲ್ಲಾ ನೀರು ಹುಯ್ಯತೊಡಗಿದರು. ಎರಡು ತಿಂಗಳಲ್ಲೇ ಸಸಿಗಳು ಬೆಳೆಯುತ್ತಾ ದ್ವೀಪದ ಸುತ್ತ ವ್ಯಾಪಿಸತೊಡಗಿದವು. ಮೂರನೇ ತಿಂಗಳಿಗೆ ಬೋರುಗುಡ್ಡೆ ಹಸಿರಾಗತೊಡಗಿತು. ಅಂದ ಹಾಗೇ ಆ ವರ್ಷದ ಮಳೆಗಾಲ ಬಂತು. ಎಂದಿನ ಹಾಗೇ ಪ್ರವಾಹವೂ ಬಂತು. ಆದರೆ ಎಂದಿನಷ್ಟು ತೀವ್ರವಾಗಿರಲಿಲ್ಲ, ಹಾನಿ ಕಡಿಮೆಯಾಗಿತ್ತು. ಜನರಿಗೆ ಆಶ್ಚರ್ಯ!

ಇದನ್ನು ಮನಗಂಡ ಊರವರೆಲ್ಲಾ ಅವರೊಡನೊಡಗೂಡಿ ತಾವೂ ಸಸಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಪ್ರವಾಹದಿಂದ ಪಾರು ಮಾಡಿದ ಕೀರ್ತಿ ಸಸಿ ನೆಟ್ಟ ಅಬ್ಬು ಸಿಂಧರಿಬ್ಬರಿಗೂ ಬಂತು. ಇದೇ ನೆನಪಿಗಾಗಿ ಊರಿನವರೆಲ್ಲಾ ಸೇರಿ ಆ ಊರಿಗೆ ಅವರದೇ ಹೆಸರನ್ನಿಟ್ಟು ನಾಮಕರಣ ಮಾಡಿದರು. ಆ ಮಳೆಗಾಲ ಮುಗಿಯುವುದರೊಳಗಾಗಿ ಬೋರು ಗುಡ್ಡೆ ತುಂಬಾ ಹಸಿರಿನ ಸಾಮ್ರಾಜ್ಯವಾಯಿತು. ವರ್ಷಗಳು ಉರುಳಿದಂತೆ ಗಿಡಗಳು ಬೆಳೆದು ಮರವಾದವು. ದ್ವೀಪದ ಸುತ್ತ ಕಾಡಾಯಿತು. ಜಾತಿ, ಬೇಧ ಮರೆತ ಅಬ್ಬು ಸಿಂಧನೂರಿನ ಜನರೆಲ್ಲಾ ಸೌಹಾರ್ದತೆಯಿಂದ ಬಾಳ ತೊಡಗಿದ್ದರು. ಇಷ್ಟೆಲ್ಲಾ ಬದಲಾವಣೆಗೆ ಐದು ವರ್ಷಗಳೇ ಬೇಕಾದವು. ಆಗ ಊರಿನಲ್ಲಿದ್ದ ಧನಿಕರೆಂದರೆ ಹಸನ್ ಸಾಹೇಬರು. ಊರಿಗೆ ಬಹುದೊಡ್ಡ ಸಾಹುಕಾರ. ಹೊರ ಊರಿನ ಸಂಪರ್ಕ ಇಲ್ಲದಿದ್ದ ಆ ಊರಿಗೆ ಅತಿದೊಡ್ಡ ನ್ಯಾಯಾಧೀಶ. ಎಲ್ಲರಿಗೂ ಅವರೆಂದರೆ ಗೌರವ ಭಾವ. ಅಬ್ಬು ಸಿಂಧರು ನೆಟ್ಟಿದ್ದ ಅರಳಿ ಮರವೊಂದು ಅವರಿಗೆಲ್ಲಾ ಊರಿನ ಪಂಚಾಯ್ತಿ. ಹಿಂದೂಗಳು ಅದನ್ನು ಪೂಜಿಸುತ್ತಿದ್ದರು. ಮುಸ್ಲಿಮರಿಗೂ ಪಂಚಾಯ್ತಿ ನಡೆಸುವ ಸ್ಥಳವಾದ್ದರಿಂದ ಗೌರವ ಭಾವ.

ವರ್ಷಗಳುರುಳಿದವು. ಆ ಊರಿನಲ್ಲಿ ಯಾರೇ ಒಣಗಿದ ಮರವನ್ನು ಕಟ್ಟಿಗೆಗೆ ಬಳಸುತ್ತಿದ್ದರೂ ಅದರ ಬದಲಾಗಿ ಹಸಿರು ಗಿಡವನ್ನು ನೆಡುವುದು ಕಟ್ಟಾಜ್ಞೆ. ತಪ್ಪಿದರೆ ಅರಳಿ ಕಟ್ಟೆಯಲ್ಲಿ ಪಂಚಾಯ್ತಿ ದಿನ ದಂಡ ವಿಧಿಸುತ್ತಿದ್ದುದು ರೂಢಿ. ಧರ್ಮ ಭೇದವಿಲ್ಲದೆ ಅರಳಿ ಕಟ್ಟೆಯಲ್ಲಿ ವಿಧಿ ಬರುತ್ತಿದ್ದವು. ಅಬ್ಬು ಸಿಂಧನೂರಿಗೆ ಪೊಲೀಸ್, ಕೋರ್ಟು ಪೂರ್ತಿ ಆ ಅರಳಿ ಕಟ್ಟೆಯೇ ಆಗಿತ್ತು. ಅಷ್ಟರಲ್ಲೇ ಜೋರಾಗಿ ಸಿಡಿಲು ಬಂತು. ಟಿ.ವಿ ಪರದೆಯಲ್ಲಿ ಕಪ್ಪು ಮಿಶ್ರಿತ ಬಿಳಿಯ ಗೆರೆಗಳು ಮೂಡುತ್ತಲೇ ಟಿ.ವಿ. ಕತ್ತಲಾಯಿತು. ಅದರ ಬೆನ್ನಿಗೆ ಫ್ಯಾನುಗಳು ಜೀವ ಕಳೆದುಕೊಂಡಂತೆ ಮೆಲ್ಲಗಾದವು. ಜನರೇಟರ್ ರೂಮಿನ ಕಡೆಯಿಂದ ಸುಟ್ಟ ವಾಸನೆ ಬರಲಾರಂಭಿಸಿತು.

ಇನ್‌ಸ್ಪೆಕ್ಟರ್ ಮತ್ತೆ ಒದರಿಕೊಳ್ಳುತ್ತಿದ್ದ ವಾಕಿ ಟಾಕಿ ವೋಲ್ಯೂಂ ಬಟನ್ ತಿರುಗಿಸಿದ. ಮಳೆ ಬಿಟ್ಟು ನಿಶ್ಯಬ್ದವಾಗಿದ್ದ ಸ್ಟೇಶನ್ ಸಶಬ್ದವಾಗತೊಡಗಿತು. ‘‘ಸೇತುವೆಯೊಂದು ಕುಸೀತಾ ಇದೆ.. ಆದಷ್ಟು ಬೇಗ ಪೇದೆಗಳು ರಿಪೋರ್ಟ್ ಮಾಡಿ... ಓವರ್ ಓವರ್.’’

ಮೂರು ದಿನಗಳಿಂದ ಬರೀ ಅದೇ ಚರ್ವಿತ ಚರ್ವಣಗಳು ಕೇಳಿ ಸಾಕಾಗಿ ಹೋಗಿತ್ತು.

ಟೇಬಲ್ ಮೇಲೆ ತಲೆಯಾಣಿಸಿ ಇನ್‌ಸ್ಪೆಕ್ಟರ್ ಹಾಗೇ ಸುಮ್ಮನೆ ಕೆಸರಾದ ಶೂಗಳನ್ನೇ ದಿಟ್ಟಿಸಿತ್ತಾ ಏನೋ ಚಿಂತಿಸುತ್ತಾ ಕುಳಿತ. ಸ್ವಲ್ಪ ಹೊತ್ತು ಕಳೆಯಿತು.

‘‘ಸರ್.... ನಿಮ್ಮನ್ನು ನೋಡಲು ನಿಮ್ಮ ಹಳೆಯ ಗೆಳೆಯರೊಬ್ಬ ಬಂದಿದ್ದಾರೆ’’

‘‘ಹೂಂ, ಯಾರಪ್ಪಾ ಈ ಹೊತ್ತಿನಲ್ಲಿ ಹಳೆಯ ಗೆಳೆಯರು. ಸರಿ ಒಳಗೆ ಕಳಿಸು’’ ಉದಾಸೀನದಿಂದ ತಲೆ ಎತ್ತಿ ಆಗ ತಾನೇ ತಿರುಗಿ ನಿಂತ ಫ್ಯಾನು ನೋಡುತ್ತಾ ಕುಳಿತ. ಮಹಡಿಯ ಮೇಲಿನ ಹೆಂಚು ಸ್ವಲ್ಪ ಜಾರಿದ್ದರಿಂದ ಮಳೆಯ ರಭಸಕ್ಕೆ ಸಣ್ಣಗೆ ಹನಿಯುದಿರಿ ಇನ್‌ಸ್ಪೆಕ್ಟರ್ ಕಣ್ಣಗೆ ನೇರ ಬಿತ್ತು. ಸಾವರಿಸಿಕೊಂಡು ಕಣ್ಣುಜ್ಜಿ ಕೊಳ್ಳಲು ಸರಿಯಾಗಿ ಕುಳಿತು ಸ್ಪ್ರಿಂಗ್ ಬಾಗಿಲಿನೆಡೆಗೆ ನೋಡಿದ. ಬಾಗಿಲು ತೆರೆಯುತ್ತಲೇ ತೆಳ್ಳಗಿನ ವ್ಯಕ್ತಿಯೊಬ್ಬ ಮ್ಲಾನ ಮುಖದೊಂದಿಗೆ ಕತ್ತಲಲ್ಲಿ ಅಸ್ಪಷ್ಟವಾಗಿ ಕೋಣೆಗೆ ಬಂದ. ಮೈಯೆಲ್ಲಾ ಒದ್ದೆಯಾಗಿ ನಡುಗುತ್ತಿದ್ದಾನೆ. ಕೈಯಲ್ಲಿ ಪ್ಲಾಸ್ಟಿಕ್ ಲಕೋಟೆಯೊಂದಿದೆ. ಗದ್ಗದಿತ ಧ್ವನಿಯಲ್ಲಿ ‘‘ಗಣೇಶ.... ಎಲ್ಲಾ ಹೋಯ್ತಲ್ವೋ... ಊರಿಗೆ ಊರೇ ನಿರ್ನಾಮವಾಯ್ತಲ್ವೋ... ಎನ್ನುತ್ತಾ ಗೋಳೋ’’ ಎಂದು ಅಳತೊಡಗಿದ. ಮಳೆಯ ರಭಸಕ್ಕೆ ಆತನ ಅಳು ಧ್ವನಿ ಅಸ್ಪಷ್ಟವಾಗಿ ಇನ್‌ಸ್ಪೆಕ್ಟರ್ ಕೇಳಿಸಿಕೊಂಡ. ಕತ್ತಲಾವರಿಸಿದ ಕೋಣೆಯಲ್ಲಿ ಆತನನ್ನು ಗುರುತಿಸಲಾಗದೆ ಟೇಬಲ್ ಮೇಲಿಟ್ಟ ಕನ್ನಡಕ ತೆಗೆದು ಹಾಕಿಕೊಂಡು. ಮಳೆಯ ತೇವಕ್ಕೆ ಅದು ಮಬ್ಬು ಮಬ್ಬಾಗಿತ್ತು.

‘‘ಯಾರಿದು, ಗುರ್ತು ಸಿಗಲಿಲ್ಲವಲ್ಲಾ’’ ಇನ್‌ಸ್ಪೆಕ್ಟರ್ ತಗ್ಗಿದ ಸ್ವರದಲ್ಲಿ ಪ್ರಶ್ನಿಸಿದ. ಬಹುಶಃ ಅದೇ ಸ್ಟೇಶನಿನಲ್ಲಿ ಗಣೇಶ ಇನ್‌ಸ್ಪೆಕ್ಟರಾಗಿದ್ದುದು ಗೊತ್ತಾಗದಿದ್ದರೆ ಬಂದವನಿಗೂ ಗುರುತು ಸಿಗಲಾರದಷ್ಟು ಕತ್ತಲೆಯಾಗಿತ್ತು.

‘‘ನಾನು ಕಣೋ... ರಮೇಶ ಅಬ್ಬು ಸಿಂಧನೂರಿನವನು’’ ಅಳು ಧ್ವನಿಯಲ್ಲಿ ಆಗಂತುಕ.

 ‘‘ಓಹ್... ನೀನಾ... ಕತ್ತಲೆಯಲ್ಲಿ ತಿಳಿಯಲಿಲ್ಲ, ಕೂತ್ಕೋ... ಕೂತ್ಕೋ’’ ಇನ್‌ಸ್ಪೆಕ್ಟರ್ ಆತನನ್ನು ಕುಳ್ಳಿರಿಸಿದ. ಕಾನ್‌ಸ್ಟೇಬಲ್ ಒಬ್ಬನಲ್ಲಿ ಟವೆಲೊಂದು ತರಲು ಹೇಳಿ ತೋಯ್ದಿದ್ದವನ ಒರೆಸಿಕೊಳ್ಳಲು ಹೇಳಿದ. ಎರಡು ಕಾಫಿ ತಾರೋ ಆಜ್ಞೆ ಮಾಡಿದ.

 ‘‘ಇಲ್ಲ ಸರ್, ಟೀ ಪುಡಿ ಸಕ್ಕರೆ ಮುಗಿದು 2 ದಿನವಾಯಿತು’’ ಹೊರಗಿಂದ ಉತ್ತರ ಬಂತು. ಸ್ವಲ್ಪ ಹೊತ್ತು ಮೌನ ನೆಲೆಸಿತು.

ರಮೇಶ ಗಣೇಶ ಒಟ್ಟಿಗೆ ಸರಕಾರಿ ಹಾಸ್ಟೆಲ್‌ನಲ್ಲಿ ಕಲಿತವರು. ಗಣೇಶ ತಂದೆಯವರ ಅಕಾಲ ಮರಣದಿಂದಾಗಿ ಅವರ ಪಿತ್ರಾರ್ಜಿತವಾದ ಗಾರ್ಮೆಂಟು ಕೆಲಸದಲ್ಲಿ ಇನ್‌ಸ್ಪೆಕ್ಟರಾದ. ರಮೇಶ ಬೆಂಗಳೂರಿನ ಯಾವುದೋ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.

ರಮೇಶ ಆಗಾಗ್ಗೆ ಒತ್ತರಿಸಿ ಬರುವ ದುಃಖವನ್ನು ತಡೆದಿಡುತ್ತಾ, ವಿಭ್ರಾಂತಿಯಿಂದ ಏನೇನೋ ಒದರಿಕೊಳ್ಳುತ್ತಿದ್ದ. ‘‘ನಮ್ಮೂರಿನ ಯಾರೂ ಉಳೀಲಿಲ್ವೋ?... ನಾನೊಬ್ಬನೇ ಮಾತ್ರ ಆ ಊರಿದೆ ಅನ್ನುವುದಕ್ಕೆ ಸಾಕ್ಷಿ. ಹಸನಬ್ಬ ಸಾಹುಕಾರ ತೀರಿದ ಮೇಲೆ ಸುಬ್ಬಪ್ಪ ನಾಯ್ಕರು ಅಲ್ಲಿ ಪಂಚಾಯ್ತಿಗೆ ನಡೆಸುತ್ತಿದ್ದರು. ನಮ್ಮೂರ ಕಾಡೆಲ್ಲಾ ಸ್ವಾರ್ಥಕ್ಕೆ ಬಳಕೆಯಾಯ್ತು. ಮರಗಳನ್ನು ಎಗ್ಗಿಲ್ಲದೆ ಕಡಿದು ದೋಣಿಯಲ್ಲಿ ಸಾಗಾಟ ಮಾಡಲಾರಂಭಿಸಿದರು. ಥೂ... ನನ್ನ ದುರ್ದೈವವೇ ಆ ಸಂತನ ಮಾತು ಕೇಳಬೇಕಿತ್ತು’’

‘‘ಸಮಾಧಾನ ಮಾಡ್ಕೋಳೋ, ಎಲ್ಲಾ ಆ ದೇವನಿಚ್ಛೆ’’ ಗಣೇಶ ಆತನ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ.

‘‘ಇಲ್ಲ ಕಣೋ... ಮರ ಕಡಿಯದಿದ್ದರೆ ನಮ್ಮೂರಿಗೇನೂ ಆಗ್ತಿರ್ಲಿಲ್ಲ, ಆ ಸಂತ ಮೊದಲ ಮರ ಕಡಿಯುವಾಗ ಅರಳಿ ಮರದ ಕಡೆ ಬಂದು ಜ್ಯೋತಿಷಿ ಹೇಳಿದ್ದ. ನಾನು ಕಲಿತವನು, ನಮಗೆ ಮೌಢ್ಯಕ್ಕೆಲ್ಲಾ ಜೊತೆಯಾಗಿ ನಿಲ್ಲಲಾಗುವುದೇ? ಒಂದು ದಿನ ಅರಳಿ ಮರದಡಿಯಲ್ಲಿ ಎಲ್ಲರೆದುರಲ್ಲಿ ಸರಿಯಾಗಿ ಅವನಿಗೆ ಮಂಗಳಾರತಿ ಮಾಡಿ ಕಳಿಸಿದೆ, ಆತ ನಗುತ್ತ ಹೊರಟು ಹೋಗಿದ್ದ’’ ಮತ್ತೆ ರಮೇಶ ಬಿಕ್ಕತೊಡಗಿದ.

ಗಣೇಶನಿಗೆ ಆತನ ಮಾತುಗಳೆಲ್ಲಾ ಶುದ್ಧ ಅಸಂಬದ್ಧಂತೆ ತೋರುತ್ತಿತ್ತು.

 ‘‘ಗಣೇಶ ... ನಿನ್ಗಿದು ಗೊತ್ತಾ, ನಮ್ಮೂರಲ್ಲಿ ಎಲ್ಲಾ ಮರಗಳನ್ನು ಕಡಿದು ಹಾಕಿದ್ರು. ಕೊನೆಗೆ ಉಳಿದಿದ್ದು ಅರಳಿ ಮರ ಮಾತ್ರ. ಅದು ಪಂಚಾಯ್ತಿ ನಡೆಯುವ ಸ್ಥಳ. ಹಿಂದೂಗಳು ಪೂಜಿಸುವ ಕೇಂದ್ರವಾಗಿತ್ತು. ಆ ರಾತ್ರಿ ಹಸನಬ್ಬ ಸಾಹೇಬರ ಮಗ ಆ ಮರವನ್ನು ಕಡಿಸಲು ಪ್ಲಾನು ಮಾಡಿದನಂತೆ. ಸುಮಾರು ವರ್ಷಗಳ ಹಿಂದಿನ ಮರ ಅದು. ನನ್ನ ಅಜ್ಜರ ಕಾಲದಲ್ಲೇ ಇತ್ತೆಂದು ಹೇಳ್ತಾರೆ’’

ರಮೇಶ ದುಃಖದಿಂದ ಸೋರಿ ಬರುವ ಸಿಂಬಳವನ್ನು ಟವೆಲಿಗೆ ಉಜ್ಜಿಕೊಂಡ.

‘‘ಸಮಾಧಾನ ಕಣೋ... ಇನ್ನು ಬದುಕಿ ತೋರಿಸಬೇಕಾದುದು ನಮ್ಮ ಕರ್ತವ್ಯ. ಸರಕಾರದಿಂದ ದೇಣಿಗೆ ಬರಬಹುದು. ನಾನು ಸಹಕರಿಸುತ್ತೇನೆ’’ ಗಣೇಶ ಆತನ ಹತ್ತಿರಕ್ಕೆದ್ದು ಬಂದು ಬೆನ್ನು ನೇವರಿಸಿದ. ‘‘ಇಲ್ಲ ಕಣೋ... ಆ ಅರಳಿ ಮರ ಕಡಿದಾಗಲೇ ನಮ್ಮೂರಲ್ಲಿ ಹಿಂದೂ ಮುಸ್ಲಿಂ ಗಲಭೆಯಾ ದದ್ದು. ನನಗೆಲ್ಲೋ ಆ ಸಂತನು ಹೇಳಿದ್ದು ಮನದೊಳಗೆ ಕೊರೆಯುತ್ತಿತ್ತು. ಕಡಿಯುತ್ತಿದ್ದಾಗ ಮರದ ಬಳಿಯೇ ನಿಂತಿದ್ದ ಅಬ್ಬು ಬ್ಯಾರಿಯ ಮೇಲೆ ಮರ ಬಿತ್ತು. ಬೃಹತ್ ಮರ ಬಿದ್ದು ಆತನೇನೋ ತೀರಿ ಹೋದ. ಹಿಂದೂಗಳ ಗುಂಪೊಂದು ‘ಹಿಂದೂಗಳು ಆರಾಧಿಸುವುದರಿಂದಲೇ ಆತ ಮರವನ್ನು ಉರುಳಿಸಿದ್ದು’ ಅಪಾದನೆ ಹಾಕಿತು. ಊರಲ್ಲಿ ಗಲಭೆ ಗದ್ದಲವಾಯಿತು. ಯಾರೋ ಒಬ್ಬರು ಮರ ಕಡಿಯಲು ಬಂದು ಸುಬ್ಬನೇ ಬೇಕೆಂದೇ ಮರ ಉರುಳಿಸಿದನೆಂದೂ ಕಥೆ ಕಟ್ಟಿದ್ದರು. ಮರ ಹೇಗೂ ಉರುಳಿತು, ನೋಡು. ಈ ಮಳೆಗಾಲದಲ್ಲಿ ಎಲ್ಲರನ್ನೂ ಭೂಮಿ ನುಂಗಿತು, ನೋಡು ಛೇ... ಆ ಸಂತನನ್ನು ಹಳಿಯಬಾರದಿತ್ತು’’ ರಮೇಶ ಒಂದೇ ಸಮನೆ ಗೋಳೋ ಎಂದು ಅಳಲಾರಂಭಿಸಿದ.

ಮಳೆ ಸ್ವಲ್ಪ ಕಡಿಮೆಯಾಗತೊಡಗಿತ್ತು. ಪ್ರವಾಹ ಇಳಿಯುವ ಮುನ್ಸೂಚನೆಗಳು ಬರುತ್ತಿದ್ದವು. ರಮೇಶ ಭವಿಷ್ಯವಾಣಿ ನುಡಿದವನಿಗೆ ಬೈಯ್ದದ್ದನ್ನೇ ನೆನೆದು ಪಶ್ಚಾತ್ತಾಪ ಪಡುತ್ತಾ ಅಳುತ್ತಿದ್ದ. ಮಳೆ ಸ್ವಲ್ಪ ಕಡಿಮೆಯಾದರೂ ಎಲ್ಲರೂ ಆ ರಾತ್ರಿ ಪೊಲೀಸ್ ಸ್ಟೇಶನ್‌ನಲ್ಲಿ ಮಲಗಿಕೊಂಡರು.

ಬೆಳಗ್ಗೆ ಮೋಡಗಳು ಸ್ವಲ್ಪ ಕಡಿಮೆಯಿತ್ತು. ಮಳೆ ಕಡಿಮೆಯಾಗಿತ್ತು. ನದಿ ನೀರು ಇಳಿ ಮುಖವಾಗಿತ್ತು. ರಮೇಶ ಮತ್ತು ಗಣೇಶ ಪೊಲೀಸ್ ಜೀಪಿನಲ್ಲಿ ಹೊರಟರು. ನದಿಯ ದಡದಲ್ಲಿ ಗಾಡಿ ನಿಲ್ಲಿಸಿ ರಕ್ಷಣೆ ಬಂದಿದ್ದ ಬೋಟೊಂದನ್ನೇರಿದರು. ಉಕ್ಕಿ ಹರಿಯುವ ನದಿಯು ಕೆಂಬಣ್ಣಕ್ಕೆ ತಿರುಗಿತ್ತು. ಅಬ್ಬು ಸಿಂಧನೂರು ಸಂಪೂರ್ಣ ಕುಸಿದು ಹೋಗಿತ್ತು. ಅಲ್ಲಲ್ಲಿ ತೇಲುವ ಹೆಣಗಳ ರಾಶಿ, ಬೇರು ಸಮೇತ ಕಿತ್ತು ಬಂದು ಅಡ್ಡಾದಿಡ್ಡಿ ಬಿದ್ದಿದ್ದ ಮರಗಳು, ಜೀವನ್ಮರಣ ಹೋರಾಟದಲ್ಲಿ ಈಜುತ್ತಿದ್ದ ದನ ಕರುಗಳು, ಸಾಕು ನಾಯಿಗಳು. ವಿಕ್ಷಿಪ್ತಗೊಂಡ ಊರು. ಬೋಟು ಅಬ್ಬು ಸಿಂಧನೂರು ತಲುಪಿತು. ಇಬ್ಬರೂ ಮೌನವಾಗಿಯೇ ಮುಂದುವರಿದರು. ಊರೆಲ್ಲವೂ ಹೇಳ ಹೆಸರಿಲ್ಲದೆ ಮಾಯವಾಗಿತ್ತು. ಬೆಟ್ಟವೆಲ್ಲಾ ಸಮತಟ್ಟಾಗಿತ್ತು. ಕೆಸರು ಹೂತು ಹೋಗುವಷ್ಟು ಮಣ್ಣು ಹಸಿಯಾಗಿತ್ತು. ಮನೆಗಳೆಲ್ಲವೂ ಹೂತು ಹೋಗಿದ್ದವು. ಹತ್ತಾರು ಬೋಟುಗಳು ದ್ವೀಪದತ್ತ ಬರುತ್ತಿದ್ದವು. ಮುರಿದು ಬಿದ್ದ ಮನೆಗಳನ್ನು ರಕ್ಷಣಾ ಸಿಬ್ಬಂದಿ ಸರಿಸುತ್ತಿದ್ದರು. ಸಂಪೂರ್ಣ ಕುಸಿದು ಬಿದ್ದ ಮನೆಯ ಮಹಡಿಯ ಮೇಲೆ ನಾಯಿಯೊಂದು ಕರುಣಾಜನಕವಾಗಿ ಕೂಗಿಕೊಳ್ಳುತ್ತಿತ್ತು. ರಕ್ಷಣಾ ಸಿಬ್ಬಂದಿಗುಂಪು ಗುಂಪಾಗಿ ಕಾರ್ಯಾಚರಿಸುತ್ತಲೇ ಇದ್ದರು. ವಿವಿಧ ಧರ್ಮಗಳನ್ನು ಪ್ರತಿನಿಧಿಸುವ ಹಲವಾರು ಸಂಘಟನೆಗಳ ಕಾರ್ಯ ಕರ್ತರು ಪರಸ್ಪರ ಸಹಾಯ ಮಾಡುತ್ತಿದ್ದರು. ಮುರಿದು ಬಿದ್ದ ಮನೆಗಳನ್ನು ತೆರವುಗೊಳಿಸಿ ಗಾಯಗೊಂಡವರನ್ನು ಹುಡುಕಲು ಶ್ರಮಿಸುತ್ತಿದ್ದರು. ಹೆಣಗಳನ್ನು ರಾಶಿ ಹಾಕಿ ಬೋಟಿನಲ್ಲಿ ಸಾಗಿಸಲಾಗುತ್ತಿತ್ತು. ಆಗಾಗ್ಗೆ ಮೇಲ್ಮಣ್ಣುಗಳು ಕುಸಿಯುತ್ತಿದ್ದವು. ಟಿ.ವಿ ವಾಹಿನಿಗಳು ನಿರಂತರ ಕವರೇಜ್ ಕೊಡುತ್ತಿದ್ದವು. ರಮೇಶ ಯಾವುದೋ ಲೋಕದಲ್ಲಿರುವಂತೆ ವಿಹರಿಸುತ್ತಿದ್ದ. ವಿಚಿತ್ರವಾಗಿ ಓಡುವುದು. ಗಕ್ಕನೆ ನಿಲ್ಲುವುದು ಮಾಡುತ್ತಲೇ ಇದ್ದ. ಇಬ್ಬರೂ ಅರ್ಧ ಉರುಳಿದ್ದ ಮನೆಯೊಂದರ ಬಳಿ ಬಂದರು. ಕೊಳೆಯಾದ ಮಣ್ಣು ಮೆತ್ತಿದ್ದ ಪಂಚೆ ಉಟ್ಟ ವ್ಯಕ್ತಿಯೊಬ್ಬ ಮನೆಯ ಅವಶೇಷಗಳಲ್ಲಿ ಏನೋ ಹುಡುಕುತ್ತಿದ್ದ. ಅವನನ್ನು ಕಂಡ ಕ್ಷಣದಲ್ಲೇ ರಮೇಶ ಹೌಹಾರಿ ‘‘ಶಂಕರಾ.... ಶಂಕರಾ’’ ಎಂದು ಕರೆಯುತ್ತ ಆತನ ಬಳಿಗೋಡಿದ. ಇಬ್ಬರ ಕಣ್ಣುಗಳು ಪರಸ್ಪರ ಗುರ್ತಿಸಿದವು. ತಬ್ಬಿಕೊಂಡು, ಗೋಳೋ ಎಂದು ಅಳತೊಡಗಿದರು. ರಮೇಶನ ಬಿಳಿ ವಸ್ತ್ರಕ್ಕೂ ಶಂಕರನ ಕೆಸರು ಅಂಟಿಕೊಂಡಿತು. ‘‘ಲೋ ಶಂಕರ ಎಲ್ಲಾ ಹೋಯ್ತಲ್ವೋ... ಏನೂ ಬಾಕಿ ಇರದೆ ಹೋಯ್ತಲ್ವೋ.... ಅವತ್ತು ಆ ಸಂತನನ್ನು ನಾವು ಹೀಯಾಳಿಸದೆ ಆತನ ಮಾತು ಕೇಳಿದ್ದರೆ?’’ ‘‘ಹೌದು ಕಣೋ...’’ ಗದ್ಗದಿತ ಕಂಟ ದಿಂದಲೇ ಶಂಕರಿನಿಂದಲೂ ಸಮ್ಮತಿ ಬಂತು. ಮತ್ತಿಬ್ಬರ ಕಣ್ಣುಗಳೂ ಹನಿಗೂಡಿದ್ದವು. ಸುಮಾರು ಹೊತ್ತು ತಬ್ಬಿಕೊಂಡು ಅತ್ತರು. ಇನ್‌ಸ್ಪೆಕ್ಟರ್ ಇಬ್ಬರನ್ನೂ ದಿಙ್ಮೂಢನಾಗಿ ನೋಡುತ್ತಲೇ ಇದ್ದ.

ಸ್ಚಲ್ಪ ಹೊತ್ತಿನ ತರುವಾಯ ಇನ್‌ಸ್ಪೆಕ್ಟರ್ ‘‘ಅಲ್ವೋ ರಮೇಶ, ಸಂತನ ಬಗ್ಗೆ ಬೆಳಗ್ಗಿನಿಂದ ಹೇಳಿತಿದ್ಯಲ್ವಾ?, ಅವನೀಗ ಎಲ್ಲಿದ್ದಾನೆ?’’. ಇಬ್ಬರೂ ತಬ್ಬಿಕೊಂಡಂತೆ ಕೈಗಳನ್ನು ಸಡಿಲಿಸಿ ಇನ್‌ಸ್ಪೆಕ್ಟರ್‌ಗೆ ಅಭಿಮುಖವಾದರು. ‘‘ಸರ್ ಇಲ್ಲೇ ಇದ್ದ ಸರ್... ಅವನೇ ನಮ್ಮೂರನ್ನು ಭವಿಷ್ಯ ಹೇಳಿ ಹಾಳ್ಮಾಡಿದ್ದು, ಆ ದೂರದ ಪಾಳು ಬಿದ್ದ ಅರ್ಧ ಮುರಿದ ಕಟ್ಟಡ ಕಾಣ್ತಿದೆಯಲ್ವಾ, ಅದ್ರ ಪಕ್ಕದಲ್ಲಿ ಆತ ಇದ್ದಿದ್ದು’’ ಶಂಕರ ಮಾತು ಮುಗಿಸಿದ. ‘‘ಅಲ್ವೋ, ಶಂಕರ ಈಗವನು ಎಲ್ಲಿ ಹೋದ?’’ ರಮೇಶ ಕುತೂಹಲಿಗನಿಗಾಗಿ ಕೇಳಿದ.

‘‘ಅವ್ನ ನಾವು ಹೀಯಾಳಿಸಿದ ಮರುದಿನವೇ ನಮ್ಮೂರು ಬಿಟ್ಟು ಹೊರಟ ಕಣೋ’’ ಶಂಕರ ಹೇಳುತ್ತಾ ಮತ್ತೆ ಹನಿಗಣ್ಣಾದ. ಸೂರ್ಯ ಮೋಡದ ಮರೆಯಲ್ಲಿ ಇಣುಕುತ್ತಿದ್ದ. ಬೋರೆಂದು ತಣ್ಣಗಿನ ಗಾಳಿ ಬೀಸುತ್ತಲೇ ಇತ್ತ

Writer - ಮುನವ್ವರ್, ಜೋಗಿಬೆಟ್ಟು

contributor

Editor - ಮುನವ್ವರ್, ಜೋಗಿಬೆಟ್ಟು

contributor

Similar News