ಇಂದಿನ ಭಾರತವೂ ಅಂದಿನ ಇಟಲಿ, ಜರ್ಮನಿಗಳೂ

Update: 2019-02-25 02:59 GMT

ಭಾಗ 2

ಅಖಂಡ ರಾಷ್ಟ್ರ ಮತ್ತು ಏಕನಾಯಕನ ಪರಿಕಲ್ಪನೆ, ಏಕರೂಪತೆಯ ಹೇರುವಿಕೆ, ಜನಾಂಗೀಯವಾದ ಅಥವಾ ಜಾತಿವಾದ, ಬಿಗಿ ಕವಚದೊಳಗಿನ ರಾಷ್ಟ್ರೀಯತೆ ಹಾಗೂ ತೀವ್ರ ಸೈನಿಕಪ್ರವೃತ್ತಿಗಳೇ ಆ ಸಮಾನಾಂಶಗಳು. ಇದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡರೆ ಪ್ರಸಕ್ತವಾಗಿ ಭಾರತ ಎದುರಿಸುತ್ತಿರುವ ಆಂತರಿಕ ಅಪಾಯಗಳನ್ನು ಅರಿತು ಅವುಗಳ ವಿರುದ್ಧ ಕಟ್ಟೆಚ್ಚರ ವಹಿಸಲು ಸಾಧ್ಯವಾಗಬಹುದು. ಮುಂದೆ ಬರಬಹುದಾದ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗಬಹುದು.

ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳಲ್ಲಿದ್ದ ಆತಂಕದ ವಾತಾವರಣವನ್ನು ಬಳಸಿಕೊಂಡ ಮುಸಲೋನಿ ಐಶ್ವರ್ಯವಂತರ ಬೆಂಬಲದಿಂದ ಜನಸೈನ್ಯಗಳನ್ನು (ಎಂವಿಎಸ್‌ಎನ್ ಅಥವಾ ಕರಿಷರಟುಗಳು) ಕಟ್ಟಿದ. ಈ ಕಾಲಾಳುಪಡೆಗಳ ಮೂಲಕ 1920ರಿಂದ 1922ರ ತನಕ ಎಲ್ಲಾ ಸಮಾಜವಾದಿ ಮತ್ತು ಪ್ರಗತಿಪರ ರಾಜಕೀಯ ಪಕ್ಷಗಳನ್ನು ಹಿಂಸಾತ್ಮಕವಾಗಿ ಬಗ್ಗುಬಡಿಯಲಾಯಿತು. 1921ರಲ್ಲಿ ಫ್ಯಾಶಿಸ್ಟ್ ಪಕ್ಷ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಸಮಾಜವಾದಿಗಳನ್ನು, ಅರಾಜಕತಾವಾದಿಗಳನ್ನು ಮತ್ತು ಕಮ್ಯೂನಿಸ್ಟರನ್ನು ಬೆದರಿಸುವುದಕ್ಕಾಗಿ ನುರಿತ ಯೋಧರ ಸ್ಕ್ವಾಡ್ರಿಸ್ಟಿ ಪಡೆಗಳನ್ನೂ ಸ್ಥಾಪಿಸಲಾಯಿತು. ಆನಂತರದ ಚುನಾವಣೆಗಳಲ್ಲಿ ಜಯ ಗಳಿಸಿದ ಮುಸಲೋನಿ ಸಂಸತ್ತಿಗೆ ಆಯ್ಕೆಯಾದ. ಮುಸಲೋನಿಯ ನೇತೃತ್ವದಲ್ಲಿ ಫ್ಯಾಶಿಸ್ಟ್ ಪಕ್ಷ ಅಕ್ಟೋಬರ್ 31, 1922ರಂದು ರೋಮ್ ಮೇಲೆ ಪಥಸಂಚಲನ ಹಮ್ಮಿಕೊಂಡಾಕ್ಷಣ ಗಾಬರಿಯಾದ ಮಹಾರಾಜ ಮುಮ್ಮಡಿ ವಿಟ್ಟೊರಿಯೊ ಇಮ್ಯಾನುವೆಲ್, ಸರಕಾರ ರಚಿಸುವಂತೆ ಮುಸಲೋನಿಯಲ್ಲಿ ಕೇಳಿಕೊಂಡ. ಅಷ್ಟರಲ್ಲಾಗಲೇ ಇಟಲಿಯಾದ್ಯಂತದಿಂದ ಕಾರ್ಯಕರ್ತರು ಆಗಮಿಸಿದ್ದರಿಂದ ಪಥಸಂಚಲನ ಒಂದು ವಿಜಯೋತ್ಸವವಾಗಿ ಮಾರ್ಪಟ್ಟಿತು. ಮುಸಲೋನಿ ಸಮ್ಮಿಶ್ರ ಸರಕಾರದ ಪ್ರಧಾನಿಯಾದ. ಬಳಿಕ ವಿರೋಧಿಗಳ ಹತ್ಯೆಗೈದು ಜನವರಿ 3, 1925ರಂದು ನಿರಂಕುಶ ಸರ್ವಾಧಿಕಾರಿಯಾದ. ಸರಕಾರದ ಅಧಿಕೃತ ಬೆಂಬಲದೊಂದಿಗೆ ರಚಿಸಿಕೊಂಡ ಒವಿಆರ್‌ಎ ಎಂಬ ಇನ್ನೊಂದು ಜನಸೈನ್ಯವನ್ನು ಮತ್ತು ರಹಸ್ಯ ಪೊಲೀಸರನ್ನು ಬಳಸಿಕೊಂಡು ವಿರೋಧಿಗಳನ್ನೆಲ್ಲ ದಮನಿಸಿ ಅಧಿಕಾರವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡ. ತಾನೇ ಸ್ವತಃ ಸಂಪಾದಕರನ್ನು ಆಯ್ಕೆ ಮಾಡುವ ಮೂಲಕ ಮಾಧ್ಯಮಗಳ ಮೇಲೆ ಸಂಪೂರ್ಣ ಹತೋಟಿ ಸಾಧಿಸಿದ. ಇಟಲಿಯ ಮುದ್ರಣ, ರೇಡಿಯೊ, ಶಿಕ್ಷಣ, ಸಿನೆಮಾ ರಂಗಗಳಲ್ಲಿ ಫ್ಯಾಶಿಸಂ ಪರವಾಗಿ ವ್ಯವಸ್ಥಿತ ಪ್ರಚಾರ ನಡೆಸಲಾಯಿತು. ಸರ್ವಾಧಿಕಾರಿ ಮುಸಲೋನಿಯ ಆಡಳಿತದಲ್ಲಿ ಇಟಲಿ ಒಂದು ಪೊಲೀಸ್ ರಾಜ್ಯವಾಯಿತು.

ಎರಡನೆ ಮಹಾಯುದ್ಧದ ಕಾಲದಲ್ಲಿ ಅಡಾಲ್ಫ್ ಹಿಟ್ಲರ್‌ನ ನೇತೃತ್ವದ ಜರ್ಮನಿಯ ಪಕ್ಷ ವಹಿಸಿದ ಮುಸಲೋನಿ ಯುದ್ಧದಲ್ಲಿ ಹೀನಾಯ ಸೋಲುಣ್ಣಬೇಕಾಯಿತು. ಬಳಿಕ ಇಟಲಿಯಲ್ಲಿ ಪ್ರತಿರೋಧ ಚಳವಳಿಗಾರರು ಮತ್ತು ಫ್ಯಾಶಿಸ್ಟರ ನಡುವೆ ಅಂತರ್ಯುದ್ಧ ಪ್ರಾರಂಭವಾದಾಗ ಸ್ವಿಟ್ಸರ್‌ಲ್ಯಾಂಡ್‌ಗೆಪರಾರಿಯಾಗಲೆತ್ನಿಸಿದ ಮುಸಲೋನಿ ಮತ್ತಾತನ ಉಪಪತ್ನಿಯನ್ನು ಹಿಡಿದು 1945ರ ಎಪ್ರಿಲ್ 27ರಂದು ಗುಂಡಿಟ್ಟು ಕೊಲ್ಲಲಾಯಿತು. ಅವರಿಬ್ಬರ ಶವಗಳನ್ನು ಮಿಲಾನ್ ನಗರದಲ್ಲಿ ಸಾರ್ವಜನಿಕವಾಗಿ ತಲೆಕೆಳಗಾಗಿ ನೇತು ಹಾಕಿದ ಬಳಿಕ ಜನ ಅವೆರಡು ಶವಗಳಿಗೆ ಹೊಡೆದು, ಬಡಿದು, ಗುಂಡು ಹಾರಿಸಿ, ಸುತ್ತಿಗೆಗಳಿಂದ ಕುಟ್ಟಿದರು.

ಜರ್ಮನಿಯ ವಿದ್ಯಮಾನಗಳು

ತಮ್ಮದು ಒಂದು ಪರಿಶುದ್ಧ ಆರ್ಯ ಜನಾಂಗ ಎಂದು ಹೇಳಿಕೊಂಡ ಜರ್ಮನರ ಉಪಪಂಗಡವೊಂದು 1919ರಲ್ಲಿ ಜರ್ಮನ್ ಕಾರ್ಮಿಕರ ಪಕ್ಷವನ್ನು (Deutsche Arbeiterpartei) ಪ್ರಾಯೋಜಿಸಿತು. 1920ರ ಫೆಬ್ರವರಿ 24ರಂದು ಅದರ ಹೆಸರನ್ನು ರಾಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಕ್ಷ (Nationalsozialistische Deutsche Arbeiter partei) ಎಂಬುದಾಗಿ ಬದಲಾಯಿಸಿದ ನಂತರ ನಾಝಿ ಎಂಬ ಸಂಕ್ಷಿಪ್ತ ಹೆಸರೇ ಖಾಯಂ ಆಗಿ ಉಳಿಯಿತು. ಜರ್ಮನ್ ಕಾರ್ಮಿಕರ ಪಕ್ಷವನ್ನು ಹಾಳುಗೆಡವಲೆಂದು ಪೊಲೀಸ್ ಬೇಹುಗಾರನಾಗಿ ಅದರೊಳಕ್ಕೆ ನುಸುಳಿದ್ದ ಅಡಾಲ್ಫ್ ಹಿಟ್ಲರ್ 1921ರಲ್ಲಿ ನಾಝಿ ಪಕ್ಷದ ನಾಯಕನಾಗಿ ಹೊರಹೊಮ್ಮಿದ.

ಪ್ರಥಮ ಮಹಾಯುದ್ಧಾನಂತರ ಜರ್ಮನಿ ಎದುರಿಸಿದ ತೀವ್ರ ಆರ್ಥಿಕ ಹಿಂಜರಿತ ಹಿಟ್ಲರ್‌ನ ಪಾಲಿಗೆ ರಾಜಕೀಯವಾಗಿ ಲಾಭದಾಯಕವಾಯಿತು. ಅಸ್ಥಿರವಾಗಿದ್ದ ದೇಶವನ್ನು ಆರ್ಥಿಕ ಹಿಂಜರಿತದಿಂದ, ಕಮ್ಯೂನಿಸ್ಟರಿಂದ, ಯಹೂದ್ಯರು ಮತ್ತಿತರ ಅಲ್ಪಸಂಖ್ಯಾತರಿಂದ ರಕ್ಷಿಸಬಲ್ಲ ಏಕೈಕ ವ್ಯಕ್ತಿ ತಾನೆಂದು ಬಹುತೇಕ ಜರ್ಮನರನ್ನು ನಂಬಿಸುವಲ್ಲಿ ಹಿಟ್ಲರ್ ಯಶಸ್ವಿಯಾದ. ಕೇವಲ ನಾಝಿ ಪಕ್ಷವೊಂದೇ ಸ್ಥಿರತೆ ತರಬಲ್ಲ ಹಾಗೂ ವಾಣಿಜ್ಯಪರ ಪಕ್ಷ ಎಂಬುದಾಗಿ ಬಿಂಬಿಸಿದ್ದು ಮಧ್ಯಮವರ್ಗಕ್ಕೆ ಆಪ್ಯಾಯಮಾನವಾಯಿತು. ಅತ್ತ ಜರ್ಮನಿಯ ಕೆಳ ಮತ್ತು ಮಧ್ಯಮವರ್ಗಗಳ ಆರ್ಥಿಕ ಆವಶ್ಯಕತೆಗಳನ್ನು ಮನಗಂಡು ಅವರಿಗಿಷ್ಟವಾಗುವಂತೆ ನಡೆದುಕೊಳ್ಳಲಾಯಿತು. ಅವರಲ್ಲಿ ರಾಷ್ಟ್ರೀಯತೆಯನ್ನೂ ಯಹೂದ್ಯ ಮತ್ತು ಕಮ್ಯೂನಿಸ್ಟ್ ವಿರೋಧಿ ಭಾವನೆಗಳನ್ನೂ ಉದ್ದೀಪಿಸುವ ಮೂಲಕ ನಾಝಿ ಸಿದ್ಧಾಂತವನ್ನು ಅನಾಯಾಸವಾಗಿ ಬೇರೂರಿಸಲಾಯಿತು. ಆದಾಗ್ಯೂ ಕಾರ್ಮಿಕ ವರ್ಗಗಳಿಂದ ಹೇಳಿಕೊಳ್ಳುವಂತಹ ಬೆಂಬಲವೇನೂ ದೊರೆತಿರಲಿಲ್ಲ.

1932ರ ಚುನಾವಣೆಗಳಲ್ಲಿ ನಾಝಿ ಪಕ್ಷ ಬಹುಮತ ಸಾಧಿಸಿತು. ಹಿಟ್ಲರ್ ಜನವರಿ 30, 1933ರಂದು ಜರ್ಮನಿಯ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ. ಪ್ರಧಾನಮಂತ್ರಿಯಾದ ನಾಲ್ಕು ವಾರಗಳಲ್ಲಿ, ಫೆಬ್ರವರಿ 27, 1933ರಂದು ಸಂಸತ್ ಭವನದಲ್ಲಿ ಸಂಭವಿಸಿದ ಅಗ್ನಿ ದುರಂತ ನಾಝಿ ಜರ್ಮನಿಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಆ ಅಗ್ನಿ ದುರಂತಕ್ಕೆ ಕಮ್ಯೂನಿಸ್ಟರನ್ನು ಹೊಣೆಮಾಡಲಾಯಿತಾದರೂ ವಾಸ್ತವವಾಗಿ ಅದರ ಹಿಂದೆ ಹಿಟ್ಲರ್‌ನ ಕೈವಾಡವಿತ್ತೆಂದು ನಂಬಲಾಗಿದೆ. ತನ್ನ ರಾಜಕೀಯ ಎದುರಾಳಿಗಳನ್ನು ದಮನಿಸಿ, ಸರ್ವಾಧಿಕಾರಿಯಾಗಲು ಹಿಟ್ಲರ್ ಹೂಡಿದ ಕುತಂತ್ರವದು ಎನ್ನಲಾಗುತ್ತದೆ. ಅದೇನೇ ಇರಲಿ, ಫೆಬ್ರವರಿ 28ರಂದು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಯಿತು, ನಾಗರಿಕ ಹಕ್ಕುಗಳನ್ನು ರದ್ದುಗೊಳಿಸಲಾಯಿತು, ರಾಜ್ಯ ಸರಕಾರಗಳನ್ನು ಬರ್ಖಾಸ್ತುಗೊಳಿಸಲಾಯಿತು.

ಸಂಸತ್ತನ್ನೂ ಬರ್ಖಾಸ್ತುಗೊಳಿಸಿ ಚುನಾವಣೆ ನಡೆಸುವಂತೆ ಹಿಟ್ಲರ್ ಹೇಳಿದಾಗ ಅಧ್ಯಕ್ಷ ಹಿಂಡನ್‌ಬರ್ಗ್ ಅದಕ್ಕೊಪ್ಪಿದ. 1933ರ ಮಾರ್ಚ್ 5ರಂದು ಚುನಾವಣೆ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು. ನಾಝಿ ಪಕ್ಷಕ್ಕೆ ಬಹುಮತ ಸಿಕ್ಕರೆ ಪ್ರಜಾಸತ್ತೆಯನ್ನು ಕಾನೂನಾತ್ಮಕವಾಗಿಯೇ ಕೊನೆಗಾಣಿಸುವ ಸ್ವಾಡಳಿತ ಕಾಯ್ದೆಯನ್ನು (Enabling Act) ಜಾರಿಗೊಳಿಸುವುದು ಹಿಟ್ಲರ್‌ನ ಪ್ಲಾನ್ ಆಗಿತ್ತು. 4 ವರ್ಷಗಳ ಕಾಲ ಜಾರಿಯಲ್ಲಿರುವ ಆ ಕಾಯ್ದೆಯನ್ವಯ ಪ್ರಧಾನಮಂತ್ರಿ ಸಂಸತ್ತಿನ ಅನುಮತಿ ಪಡೆಯದೆ ಕಾನೂನುಗಳನ್ನು ಮಾಡಬಹುದಾಗಿತ್ತಲ್ಲದೆ ತುರ್ತುಪರಿಸ್ಥಿತಿಗಳಲ್ಲಿ ಸರ್ವಾಧಿಕಾರ ವಹಿಸಿಕೊಳ್ಳಲೂಬಹುದಿತ್ತು. ಆದರೆ ಈ ಸ್ವಾಡಳಿತ ಕಾಯ್ದೆಗೆ ಸಂಸತ್ತಿನ ಅಂಗೀಕಾರ ಪಡೆಯಲು ಬೇಕಿದ್ದ ಮೂರನೆ ಎರಡರಷ್ಟು ಬಹುಮತ ದೊರೆಯುವ ಸಾಧ್ಯತೆ ಇಲ್ಲದುದನ್ನು ಮನಗಂಡ ನಾಝಿಗಳು ಪ್ರಮುಖ ಪ್ರತಿಪಕ್ಷವಾಗಿದ್ದ ಕಮ್ಯೂನಿಸ್ಟ್ ಪಕ್ಷವನ್ನು ಹೇಗಾದರೂ ಮಾಡಿ ಸೋಲಿಸಲು ನಿರ್ಧರಿಸಿದರು. ಒಂದು ವೇಳೆ ಚುನಾವಣೆಗಳಲ್ಲಿ ಕಮ್ಯೂನಿಸ್ಟರಿಗೆ ಅಧಿಕ ಮತಗಳು ಸಿಕ್ಕಿದರೆ ಪಕ್ಷವನ್ನೇ ನಿಷೇಧಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು. ಚುನಾವಣೆಗಳ ಫಲಿತಾಂಶ ಬಂದಾಗ ನಾಝಿ ಪಕ್ಷ ಮತ್ತದರ ಮಿತ್ರಪಕ್ಷವಾಗಿದ್ದ ಜರ್ಮನ್ ರಾಷ್ಟ್ರೀಯ ಜನತಾ ಪಕ್ಷಗಳು ಜಯಗಳಿಸಿದವಾದರೂ ಮೂರನೆ ಎರಡರಷ್ಟು ಬಹುಮತ ಮತ್ತೂ ಸಿಗಲಿಲ್ಲ. ಆ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರನ್ನು ಒಂದೋ ಬಂಧಿಸುವ ಮೂಲಕ ಅಥವಾ ಬೆದರಿಸುವ ಮೂಲಕ ಅವರು ಸಂಸತ್ತಿಗೆ ಗೈರುಹಾಜರಾಗುವಂತೆ ನೋಡಿಕೊಳ್ಳಲಾಯಿತು. ಈ ಕಾರ್ಯತಂತ್ರ ನಿರೀಕ್ಷಿತ ಫಲವನ್ನು ನೀಡಿತು. 1933ರ ಮಾರ್ಚ್ 23ರಂದು ಸ್ವಾಡಳಿತ ಕಾಯ್ದೆಗೆ ಅಂಗೀಕಾರ ಪಡೆದುಕೊಳ್ಳುವಲ್ಲಿ ಹಿಟ್ಲರ್ ಯಶಸ್ವಿಯಾದ. ಮಾರ್ಚ್ 27ರಿಂದ ಜಾರಿಗೆ ಬಂದ ಆ ಕಾಯ್ದೆ ಹಿಟ್ಲರ್‌ನನ್ನು ರಾಷ್ಟ್ರಾಧ್ಯಕ್ಷನನ್ನಾಗಿಸಿ ವಸ್ತುತಃ ಜರ್ಮನಿಯ ಸರ್ವಾಧಿಕಾರಿಯನ್ನಾಗಿ ಮಾಡಿತು.

ನಿರುದ್ಯೋಗಿಗಳಿಗೆ, ನಿರಾಶ್ರಿತರಿಗೆ ಊಟ ವಸತಿ ಕೊಟ್ಟ ನಾಝಿಗಳು ಅವರನ್ನು ತಮ್ಮ ಕಂದುಷರಟಿನ ಪಡೆಗೆ (Brownshirt Sturmabteilung SA) ಸೇರಿಸಿ ದಾಳಿಗಳಿಗಾಗಿ ಬಳಸಿಕೊಂಡರು. ನಿರಂಕುಶ ಪ್ರಭುತ್ವವನ್ನು ಸಾಧಿಸಿ ಸಂಸತ್ತನ್ನು, ಕಾರ್ಮಿಕ ಸಂಘಗಳನ್ನು, ರಾಜಕೀಯ ಪಕ್ಷಗಳನ್ನು ರದ್ದುಗೊಳಿಸಿದರು, ವಿರೋಧಿಗಳನ್ನು ಜೈಲಿಗಟ್ಟಿದರು. ಮಾಧ್ಯಮವನ್ನು ಸಂಪೂರ್ಣವಾಗಿ ತಮ್ಮ ಹತೋಟಿಗೆ ತೆಗೆದುಕೊಂಡರು. ಸುಮಾರು ಒಂದು ಕೋಟಿಗೂ ಅಧಿಕ ಯಹೂದ್ಯರನ್ನು, ಪೋಲೆಂಡ್‌ನ ಜನರನ್ನು, ಸಲಿಂಗಿಗಳನ್ನು, ಅಂಗವಿಕಲರನ್ನು, ಬುದ್ಧಿಮಾಂದ್ಯರನ್ನು, ರೋಮಾ ಎಂಬ ಜಿಪ್ಸಿಗಳನ್ನು, ಸೋವಿಯತ್ ಯುದ್ಧಕೈದಿಗಳನ್ನು, ರೋಮನ್ ಕೆಥೊಲಿಕರನ್ನು, ಪ್ರೊಟೆಸ್ಟ್ಟೆಂಟರನ್ನೆಲ್ಲ ಆಷ್‌ವಿ್, ಟ್ರೆಬ್ಲಿಂಕಾ ಮುಂತಾದ ಕುಖ್ಯಾತ ಗ್ಯಾಸ್ ಛೇಂಬರ್‌ಗಳಲ್ಲಿ ಸಾಮೂಹಿಕವಾಗಿ ವಧಿಸಲಾಯಿತು. ಹೀಗೆ ಕೆಲವು ವರ್ಷಗಳ ಕಾಲ ಜರ್ಮನಿಯ ಅನಭಿಷಿಕ್ತ ದೊರೆಯಾಗಿ ಮರೆದ ಹಿಟ್ಲರ್, ದ್ವಿತೀಯ ಮಹಾಯುದ್ಧದ ಸೋಲಿನ ಬಳಿಕ ಮುಸಲೋನಿಯ ಹತ್ಯೆಯಾದ ಎರಡೇ ದಿನಗಳಲ್ಲಿ ತನ್ನ ಉಪಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡ.

19ನೆ ಶತಮಾನದ ಇಟಲಿ ಮತ್ತು ಜರ್ಮನಿಗಳಲ್ಲಿ ಸಂಭವಿಸಿದ ಈ ದುರಂತಮಯ ಘಟನೆಗಳನ್ನು ಇಂದಿನ ಭಾರತದ ವಿದ್ಯಮಾನಗಳೊಂದಿಗೆ ಹೋಲಿಸಿ ನೋಡುವುದೇ ಚರಿತ್ರೆಯಿಂದ ನಾವು ಕಲಿಯಬಹುದಾದ ಮೊದಲ ಮುಖ್ಯ ಪಾಠ. ಅದು ನಮಗೆ ಜನಾಂಗ ಅಥವಾ ಜಾತಿಶ್ರೇಷ್ಠತೆಯ ಪ್ರತಿಪಾದಕರಲ್ಲಿ ಸಮಾನ ಅಂಶಗಳಿರುವುದನ್ನು ಎತ್ತಿ ತೋರಿಸುತ್ತದೆ. ಅಖಂಡ ರಾಷ್ಟ್ರ ಮತ್ತು ಏಕನಾಯಕನ ಪರಿಕಲ್ಪನೆ, ಏಕರೂಪತೆಯ ಹೇರುವಿಕೆ, ಜನಾಂಗೀಯವಾದ ಅಥವಾ ಜಾತಿವಾದ, ಬಿಗಿ ಕವಚದೊಳಗಿನ ರಾಷ್ಟ್ರೀಯತೆ ಹಾಗೂ ತೀವ್ರ ಸೈನಿಕಪ್ರವೃತ್ತಿಗಳೇ ಆ ಸಮಾನಾಂಶಗಳು. ಇದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡರೆ ಪ್ರಸಕ್ತವಾಗಿ ಭಾರತ ಎದುರಿಸುತ್ತಿರುವ ಆಂತರಿಕ ಅಪಾಯಗಳನ್ನು ಅರಿತು ಅವುಗಳ ವಿರುದ್ಧ ಕಟ್ಟೆಚ್ಚರ ವಹಿಸಲು ಸಾಧ್ಯವಾಗಬಹುದು. ಮುಂದೆ ಬರಬಹುದಾದ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗಬಹುದು. ಅಂತಿಮವಾಗಿ ದೇಶದ ಪ್ರಮುಖ ಪ್ರತಿಪಕ್ಷಗಳನ್ನು ನಿರ್ನಾಮಗೊಳಿಸಿ ಭಾರತವನ್ನು ಪುರೋಹಿತಶಾಹಿ ರಾಷ್ಟ್ರವಾಗಿ ಪರಿವರ್ತಿಸಲು ಹೊರಟಿರುವವರ ಹುನ್ನಾರಗಳನ್ನು ವಿಫಲಗೊಳಿಸಲು ಸಾಧ್ಯವಾಗಬಹುದು.

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ