'ಮ್ಯಾನ್‍ ಪವರ್' ಏಜೆನ್ಸಿಗಳ ವಿರುದ್ಧ ಸಮರ ಸಾರಿದ ಶಿವಮೊಗ್ಗ ಜಿಲ್ಲಾಧಿಕಾರಿ !

Update: 2019-02-25 18:46 GMT

ಶಿವಮೊಗ್ಗ, ಫೆ. 25: ಸರ್ಕಾರದ ಆದೇಶಗಳ ಹೊರತಾಗಿಯೂ ಕಳೆದ ಹಲವು ವರ್ಷಗಳಿಂದ ಹೊರಗುತ್ತಿಗೆ ನೌಕರರಿಗೆ ನಿಯಮಾನುಸಾರ ಸೌಲಭ್ಯ, ವೇತನ ಕಲ್ಪಿಸದೆ ನಿರಂತರವಾಗಿ ವಂಚಿಸಿಕೊಂಡು ಬರುತ್ತಿರುವ 'ಮ್ಯಾನ್ ಪವರ್ ಏಜೆನ್ಸಿ'ಗಳ ವಿರುದ್ಧ ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಎ. ದಯಾನಂದ್‍ರವರು ಸಮರ ಸಾರಿದ್ದಾರೆ.

ಈಗಾಗಲೇ ಕೆಲ ವಂಚಕ ಏಜೆನ್ಸಿಗಳ ಬೆನ್ನುಬಿದ್ದಿರುವ ಡಿಸಿ ಕೆ.ಎ ದಯಾನಂದ್‍ರವರು, ವಿವಿಧ ಇಲಾಖೆಗಳ ಮೂಲಕ ತನಿಖೆಗೆ ಆದೇಶಿಸಿದ್ದಾರೆ. ಕೆಲ ಏಜೆನ್ಸಿಗಳ ಅಕ್ರಮ ಬಯಲಿಗೆಳೆದಿದ್ದಾರೆ ಎನ್ನಲಾಗಿದೆ. ಇದು ಪ್ರಭಾವಿಗಳ ನೆರಳಲ್ಲಿ, ಎಲ್ಲ ನಿಯಮ ಗಾಳಿಗೆ ತೂರಿ ಮನಸೋಇಚ್ಚೆ ನಡೆದುಕೊಳ್ಳುತ್ತಿದ್ದ 'ದೋಖಾ' ಏಜೆನ್ಸಿಗಳ ನಿದ್ದೆಗೆಡಿಸಿದೆ.

ಮತ್ತೊಂದೆಡೆ ಡಿಸಿ ಯವರ ಈ ಕ್ರಮವು, ಜಿಲ್ಲೆಯ ಹಲವು ಇಲಾಖೆಗಳಡಿ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೂರಾರು ಸಿಬ್ಬಂದಿಗಳಲ್ಲಿ ಸಂತಸ ಉಂಟು ಮಾಡಿದೆ. ಡಿಸಿ ಯವರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಕಠಿಣ ಕ್ರಮ: ಏಜೆನ್ಸಿಗಳ ವಿರುದ್ಧ ತನಿಖೆಗೆ ಆದೇಶಿಸಿರುವ ವಿಷಯವನ್ನು ಡಿಸಿ ಒಪ್ಪಿಕೊಂಡಿದ್ದಾರೆ. 'ಕೆಲ ಏಜೆನ್ಸಿಗಳು ಹೊರಗುತ್ತಿಗೆ ನೌಕರರಿಗೆ ಪಿಎಫ್, ಇಎಸ್‍ಐ ಸೌಲಭ್ಯ ಸಮರ್ಪಕವಾಗಿ ಕಲ್ಪಿಸದಿರುವ ಹತ್ತುಹಲವು ಆರೋಪಗಳು ಕೇಳಿಬಂದಿದ್ದವು. ಹಾಗೆಯೇ ನಿಗದಿಪಡಿಸಿದ ವೇತನ ನೀಡದಿರುವುದು, ಕಾಲಮಿತಿಯಲ್ಲಿ ಸಂಬಳ ಬಿಡುಗಡೆ ಮಾಡದಿರುವುದು ಸೇರಿದಂತೆ ಗಂಭೀರ ಸ್ವರೂಪದ, ಗುರುತರ ಆಪಾದನೆಗಳಿದ್ದವು. ಈ ಕುರಿತಂತೆ ಕಾರ್ಮಿಕ ಇಲಾಖೆ, ಇಎಸ್‍ಐ ಸೇರಿದಂತೆ ವಿವಿಧ ಇಲಾಖೆಗಳಿಗೆ ಪತ್ರ ಬರೆದು ಪರಿಶೀಲಿಸಿ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದೇನೆ. ಹಾಗೆಯೇ ತನಿಖೆಗೂ ಆದೇಶಿಸಿದ್ದೇನೆ. ನ್ಯಾಯಬದ್ದ ಸೌಲಭ್ಯ ಕಲ್ಪಿಸದ ಏಜೆನ್ಸಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವುದು ನಿಶ್ಚಿತ. ಈ ವಿಷಯದಲ್ಲಿ ತಾನು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಕೆ.ಎ.ದಯಾನಂದ್ ಸ್ಪಷ್ಟಪಡಿಸಿದ್ದಾರೆ. 

ಅಧಿಕಾರಿಗಳ ಸಭೆ ನಡೆಸಲಾಗಿದೆ. ಏಜೆನ್ಸಿಗಳು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿವೆಯೇ? ಇಲ್ಲವೇ? ಎಂಬುವುದರ ಬಗ್ಗೆ ತಪಾಸಣೆ ನಡೆಸುವಂತೆ ಸಲಹೆ ನೀಡಿದ್ದೇನೆ. ಏಜೆನ್ಸಿಗಳ ಅಕ್ರಮಕ್ಕೆ ಕುಮ್ಮಕ್ಕು ನೀಡುವ ಇಲಾಖಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ಕೊಡಲಾಗಿದೆ. ಏಜೆನ್ಸಿಗಳ ಮೂಲಕ ನೇಮಕವಾಗಿರುವ ನೌಕರರಿಗೆ ನ್ಯಾಯಬದ್ದ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ. 

ಹಲವು ಆರೋಪ: ಕೆಲ ಏಜೆನ್ಸಿಗಳ ಕಾರ್ಯವೈಖರಿ ಕುರಿತಂತೆ ಕಳೆದ ಹಲವು ವರ್ಷಗಳಿಂದ ಹತ್ತು ಹಲವು ರೀತಿಯ ಆರೋಪಗಳು ಕೇಳಿಬರುತ್ತಿವೆ. ತಮ್ಮ ಏಜೆನ್ಸಿಗಳ ಮೂಲಕ ನೇಮಕಗೊಂಡ ನೌಕರರಿಗೆ ನ್ಯಾಯಬದ್ದ ಸೌಲಭ್ಯ ಕಲ್ಪಿಸದೆ ವಂಚಿಸುತ್ತಿವೆ. ಹಲವು ನೌಕರರಿಗೆ ಪಿಎಫ್, ಇಎಸ್‍ಐ ಸೌಲಭ್ಯ ಕಲ್ಪಿಸುತ್ತಿಲ್ಲ. ಇಲಾಖೆಗಳು ನಿಗದಿಪಡಿಸಿದ ವೇತನವನ್ನು ನೌಕರರಿಗೆ ನೀಡುತ್ತಿಲ್ಲ. ಅನ್ಯಾಯ ಪ್ರಶ್ನಿಸುವ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕುವ ಕೃತ್ಯಗಳನ್ನು ನಡೆಸಿಕೊಂಡು ಬರುತ್ತಿವೆ. ಇದರಿಂದ ಏಜೆನ್ಸಿಗಳ ವಂಚನೆಯ ಕುರಿತಂತೆ ಬಹುತೇಕ ನೌಕರರು ದೂರು ನೀಡಲು ಹಿಂದೇಟು ಹಾಕುತ್ತಾರೆ. 
ಇದನ್ನೇ ಬಂಡವಾಳ ಮಾಡಿಕೊಳ್ಳುವ ಏಜೆನ್ಸಿಗಳು ಎಲ್ಲ ನಿಯಮ ಗಾಳಿಗೆ ತೂರಿ, ಮನಸೋಇಚ್ಚೆ ನಡೆದುಕೊಳ್ಳುತ್ತಿವೆ. ಮತ್ತೊಂದೆಡೆ ಈ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ ಸಂಬಂಧಿಸಿದ ಕೆಲ ಇಲಾಖಾಧಿಕಾರಿಗಳು, ಪ್ರಭಾವ-ಆಮಿಷಗಳಿಗೆ ಒಳಗಾಗಿ ಮೌನಕ್ಕೆ ಶರಣಾಗಿದ್ದಾರೆ. ಅಕ್ರಮಗಳಿಗೆ ಪ್ರೋತ್ಸಾಹಿಸಿಕೊಂಡು ಬರುತ್ತಿದ್ದಾರೆ. ಹಾಗೆಯೇ ಕೆಲ ಜನಪ್ರತಿನಿಧಿಗಳು ಕೂಡ ಏಜೆನ್ಸಿಗಳಿಗೆ ಬೆಂಗಾವಲಾಗಿದ್ದಾರೆ ಎಂಬ ಆರೋಪವಿದೆ. 

ಸಮರ: ಜನಪರ ಕಾರ್ಯವೈಖರಿ ಮೂಲಕ ಗಮನ ಸೆಳೆದಿರುವ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರು, ಏಜೆನ್ಸಿಗಳ ದಂಧೆಗೆ ಕಡಿವಾಣ ಹಾಕುವತ್ತ ಗಂಭೀರ ಚಿತ್ತ ಹರಿಸಿದ್ದಾರೆ. ನಿಯಮಿತವಾಗಿ ನೌಕರರ ಖಾತೆಗಳಿಗೆ ಪಿಎಫ್, ಇಎಸ್‍ಐ ಮೊತ್ತ ಪಾವತಿಸುತ್ತಿವೆಯೇ ಎಂಬುವುದರ ವಿವರಗಳನ್ನು ಪ್ರತಿಯೊಂದು ಇಲಾಖೆಯಿಂದ ತರಿಸಿಕೊಳ್ಳಲಾರಂಭಿಸಿದ್ದಾರೆ. ಜೊತೆಗೆ ನಾಲ್ಕೈದು ತಿಂಗಳ ಕಾಲ ನೌಕರರಿಗೆ ವೇತನ ಪಾವತಿಸದ ಏಜೆನ್ಸಿಗಳ ವಿವರ, ನಿಗದಿಪಡಿಸಿದ ವೇತನ ನೀಡದಿರುವ ಏಜೆನ್ಸಿಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. 

ಒಟ್ಟಾರೆ ಈ ಹಿಂದೆ ಏಜೆನ್ಸಿಗಳ ಅಕ್ರಮದ ದೂರು ಕೇಳಿಬಂದಾಗ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸುವ ಎಚ್ಚರಿಕೆ ನೀಡುತ್ತಿದ್ದರು. ಆದರೆ ನಂತರ ಯಾವುದೇ ಕ್ರಮ ಜರುಗಿಸದಿದ್ದ ಹಲವು ಊದಾಹರಣೆಗಳಿವೆ. ಆದರೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರು ವಂಚಕ ಏಜೆನ್ಸಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿ. 

ಅಧಿಕಾರಿಗಳ ವಿರುದ್ಧವೂ ಕ್ರಮ: ಡಿಸಿ ದಯಾನಂದ್
ಕೆಲ ಮ್ಯಾನ್ ಪವರ್ ಏಜೆನ್ಸಿಗಳು ನಿಯಮಾನುಸಾರ ನೌಕರರಿಗೆ ವೇತನ-ಸೌಲಭ್ಯ ಕಲ್ಪಿಸದಿರುವ ದೂರುಗಳಿದ್ದು, ತನಿಖೆ ನಡೆಸಲಾಗುತ್ತಿದೆ. ಕಾರ್ಮಿಕ ಇಲಾಖೆ, ಇಎಸ್‍ಐ ಸಂಸ್ಥೆಯಿಂದಲೂ ಪ್ರತ್ಯೇಕವಾಗಿ ತನಿಖೆ ನಡೆಸಿ ವಿವರ ಕಲೆ ಹಾಕಲಾಗುತ್ತಿದೆ. ನೌಕರರಿಗೆ ನಿಯಮಬದ್ಧ ಸೌಲಭ್ಯ ಕಲ್ಪಿಸದೆ ವಂಚಿಸುವ ಏಜೆನ್ಸಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು. ಹಾಗೆಯೇ ಏಜೆನ್ಸಿಗಳ ಅಕ್ರಮಕ್ಕೆ ಬೆಂಬಲಿಸುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಈ ವಿಷಯದಲ್ಲಿ ತಾನು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರು ಖಡಕ್ ಸಂದೇಶ ರವಾನಿಸಿದ್ದಾರೆ. 

ಸೌಲಭ್ಯ ಕಲ್ಪಿಸದೆ ವಂಚನೆ: ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ಎ.ರಮೇಶ್ ಹೆಗ್ಡೆ
ಕೆಲ ಮ್ಯಾನ್ ಪವರ್ ಏಜೆನ್ಸಿಗಳು ಹೊರಗುತ್ತಿಗೆ ನೌಕರರಿಗೆ ನಿಯಮಬದ್ಧ ಸೌಲಭ್ಯ ಕಲ್ಪಿಸದೆ ವಂಚಿಸಿಕೊಂಡು ಬರುತ್ತಿರುವುದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಹಮಾಲಿ ಕಾರ್ಮಿಕರ ವಿಷಯದಲ್ಲಿ ತಾನೇ ಹಲವು ಬಾರಿ ಬೀದಿಗಿಳಿದು ಹೋರಾಟ ಕೂಡ ನಡೆಸಿದ್ದೇನೆ. ಇಂತಹ ವಂಚಕ ಏಜೆನ್ಸಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕಠಿಣ ಕ್ರಮಕೈಗೊಂಡು, ನೂರಾರು ನೌಕರರಿಗೆ ನ್ಯಾಯ ಕಲ್ಪಿಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ಎ.ರಮೇಶ್‍ಹೆಗ್ಡೆಯವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News