‘‘ಜನರ ಮನಸ್ಸಿಂದ ಅಳಿಸಲು ಗಾಂಧಿ ಅವಸಾನವಾಗಲೇಬೇಕು’’

Update: 2019-02-26 18:37 GMT

ಭಾಗ-8

ಭೀಕರ ದುರ್ಗತಿಗೆ ಜಗತ್ತನ್ನು ನೂಕಿದ್ದ ಹಿಟ್ಲರ್‌ನಿಂದ ಭಾರತ ಪಾಠ ಕಲಿತುಕೊಳ್ಳಬೇಕೆಂದು ಪ್ರತಿಪಾದಿಸುವ ಆರೆಸ್ಸೆಸ್ ನಾಯಕರನ್ನು ಈ ದೇಶ ಸಹಜವಾಗಿಯೇ ತಿರಸ್ಕರಿಸಿತು! ಇತರ ರಾಜಕೀಯ ಮುಖಂಡರೂ ಆ ಭೀಕರ ಸಿದ್ಧಾಂತಕ್ಕೆ ಕಿವಿಗೊಡಲಿಲ್ಲ. ಆ ನಿರ್ಲಕ್ಷಕ್ಕೆ ಮುಖ್ಯ ಕಾರಣ ಗಾಂಧೀಜಿಯ ಅದ್ವಿತೀಯ ರಾಜಕೀಯ ನಾಯಕತ್ವ. ಎಲ್ಲಿಯವರೆಗೆ ಈ ಗಾಂಧಿ ಬದುಕಿರುತ್ತಾನೆ ಅಲ್ಲಿಯವರೆಗೆ ಈ ದೇಶದಲ್ಲಿ ಬೇರೆಯ ಅದರಲ್ಲೂ ಪರಮತ ದ್ವೇಷ, ತತ್ರಾಪಿ ಮುಸ್ಲಿಮರ ದ್ವೇಷವೇ ಬುನಾದಿಯಾದ ಹಿಂದುತ್ವ ಸಿದ್ಧಾಂತಗಳಿಗೂ ರಾಜಕೀಯ ನಾಯಕರಿಗೂ ಯಾವ ಸ್ಥಾನವೂ ಇಲ್ಲ ಎಂಬುದು ದೃಢವಾಗಿಹೋಗಿತ್ತು! ಆದ್ದರಿಂದ ಗಾಂಧಿಯನ್ನು ರಾಜಕೀಯ ರಂಗದಿಂದ, ಜನರ ಮನಸ್ಸಿನಿಂದ ಅಳಿಸಲು ಅವರ ಅವಸಾನವೇ ಸರಿ! ಅವರನ್ನು ಸಾಯಿಸಲೇಬೇಕು!

ಕಾರ್ಲ್ ಮಾರ್ಕ್ಸ್-ಏಂಜೆಲ್ಸ್ ಡಯಲೆಕ್ಸಿಯಲ್ ಮೇಟಿರಿಯಲಿಸಂ (dialectial materialism) ನಿರೂಪಿಸಿದಾಗ ರಾಜಕೀಯ ಆರ್ಥಿಕ ಕ್ಷೇತ್ರದಲ್ಲಿ ಎಂಥ ಮಹಾಕ್ರಾಂತಿ ಸಾವರ್ಕರ್‌ರ ಸಾಂಸ್ಕೃತೀಯ ರಾಷ್ಟ್ರೀಯತೆ (cultural nationalism) ಯ ಸಿದ್ಧಾಂತವುಂಟು ಮಾಡುತ್ತದೆ ಎಂದು ಭಾವಿಸಿದ್ದರು. ಆದರೆ ಅಂಥ ಪವಾಡ ಏನೂ ಆಗಲಿಲ್ಲ. ಅವರ ಈ ಸಿದ್ಧಾಂತವನ್ನು ಮೂಸಿ ನೋಡುವ ಜನರು, ಜನನಾಯಕರು ಈ ದೇಶದಲ್ಲಿ ಹುಟ್ಟಲಿಲ್ಲ! ಪ್ರಥಮ ಜಾಗತಿಕ ಯುದ್ಧದಿಂದ ತಲ್ಲಣಿಸಿಹೋಗಿದ್ದ ಜಗತ್ತು, ‘ಏಕಜಗತ್ತು’ (one world), ಏಕಜಗತ್ ಸರಕಾರ ಈ ಜಗದ ಶಾಂತಿಗೆ ಅಗತ್ಯ ಎಂಬುದಕ್ಕಾಗಿ ಲೀಗ್ ಆಫ್ ನೇಷನ್ಸ್ (league of nations) ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಹಿಟ್ಲರ್‌ನ ನಾಝಿಸಂ ರಾಕ್ಷಸೀ ಸಿದ್ಧಾಂತದಿಂದ ದ್ವಿತೀಯ ಜಾಗತಿಕ ಯುದ್ಧದ ಅಗ್ನಿಕುಂಡದಲ್ಲಿ ಜಗತ್ತು ಬೇಯುತ್ತಿತ್ತು! ಇಂಥ ಭೀಕರ ದುರ್ಗತಿಗೆ ಜಗತ್ತನ್ನು ನೂಕಿದ್ದ ಹಿಟ್ಲರ್‌ನಿಂದ ಭಾರತ ಪಾಠ ಕಲಿತುಕೊಳ್ಳಬೇಕೆಂದು ಪ್ರತಿಪಾದಿಸುವ ಆರೆಸ್ಸೆಸ್ ನಾಯಕರನ್ನು ಈ ದೇಶ ಸಹಜವಾಗಿಯೇ ತಿರಸ್ಕರಿಸಿತು! ಇತರ ರಾಜಕೀಯ ಮುಖಂಡರೂ ಆ ಭೀಕರ ಸಿದ್ಧಾಂತಕ್ಕೆ ಕಿವಿಗೊಡಲಿಲ್ಲ. ಆ ನಿರ್ಲಕ್ಷಕ್ಕೆ ಮುಖ್ಯ ಕಾರಣ ಗಾಂಧೀಜಿಯ ಅದ್ವಿತೀಯ ರಾಜಕೀಯ ನಾಯಕತ್ವ. ಎಲ್ಲಿಯವರೆಗೆ ಈ ಗಾಂಧಿ ಬದುಕಿರುತ್ತಾನೆ ಅಲ್ಲಿಯವರೆಗೆ ಈ ದೇಶದಲ್ಲಿ ಬೇರೆಯ ಅದರಲ್ಲೂ ಪರಮತ ದ್ವೇಷ, ತತ್ರಾಪಿ ಮುಸ್ಲಿಮರ ದ್ವೇಷವೇ ಬುನಾದಿಯಾದ ಹಿಂದುತ್ವ ಸಿದ್ಧಾಂತಗಳಿಗೂ ರಾಜಕೀಯ ನಾಯಕರಿಗೂ ಯಾವ ಸ್ಥಾನವೂ ಇಲ್ಲ ಎಂಬುದು ದೃಢವಾಗಿಹೋಗಿತ್ತು! ಆದ್ದರಿಂದ ಗಾಂಧಿಯನ್ನು ರಾಜಕೀಯ ರಂಗದಿಂದ, ಜನರ ಮನಸ್ಸಿನಿಂದ ಅಳಿಸಲು ಅವರ ಅವಸಾನವೇ ಸರಿ! ಅವರನ್ನು ಸಾಯಿಸಲೇಬೇಕು! ಈ ರಾಜಕೀಯ ಸಿದ್ಧಾಂತವನ್ನು ಮನಸಾರೆ ನಂಬಿದ ನಂಬುಗೆಯ ಬಂಟರು ನಾಥೂರಾಮ್ ಗೋಡ್ಸೆ ಮತ್ತು ಅವನ ಆಪ್ತ ನಾರಾಯಣ ಆಪ್ಟೆ!
 ಭಾರತ ದೇಶ ಸ್ವತಂತ್ರವಾಗಿಯೇ ಆಗುತ್ತದೆ ಎಂಬುದು 1945ರಲ್ಲೇ ನಿರ್ಧಾರವಾಗಿತ್ತು. ದೇಶ ವಿಭಜನೆ ಆಗುವುದೂ ಬಹುಮಟ್ಟಿಗೆ ನಿಶ್ಚಿತವಾಗಿತ್ತು! 1948ರಲ್ಲಿ ಯೂನಿಯನ್ ಜಾಕ್ ಧ್ವಜ ಕೆಳಗಿಳಿದು ಭಾರತದ ತ್ರಿವರ್ಣ ಧ್ವಜ ಹಾರುತ್ತದೆ ಎಂಬುದೂ ನಿಶ್ಚಿತವಾಗಿತ್ತು. ಲಾರ್ಡ್ ವೌಂಟ್ ಬ್ಯಾಟನ್, ವೈಸರಾಯ್ ಅಂದಿನ ರಾಜಕೀಯ ಕ್ಷಿಪ್ರ ಬೆಳವಣಿಗೆಯಿಂದ, 1948ರಲ್ಲಿ ಭಾರತೀಯರಿಗೆ ಅಧಿಕಾರ ಹಸ್ತಾಂತರ ಮಾಡುವುದನ್ನು ತ್ವರೆಗೊಳಿಸಿ, 1947 ಆಗಸ್ಟ್ 15ರಂದೇ ಅಧಿಕಾರವನ್ನು ಹಸ್ತಾಂತರಿಸಲು ನಿರ್ಧರಿಸಿದರು. ಅದೇಕೆ ಹಾಗೇ ತ್ವರೆ ಮಾಡಿದರೋ ಸ್ಪಷ್ಟವಾಗಿ ಹೇಳುವುದು ಕಷ್ಟ. ಅವರನ್ನೇ ಪತ್ರಕರ್ತರು ಕೇಳಿದಾಗ, ‘‘ಯಾಕೋ, ಎಂದು ಹೇಳಲಾರೆ’’ ಎಂದು ಉತ್ತರಿಸಿದರು. ಹಿನ್ನೋಟ ಬೀರಿ ಅಂದಾಜು ಮಾಡುವುದಾದರೆ, ಅಧಿಕಾರ ಹಸ್ತಾಂತರ ಮಾಡುವುದು ವಿಳಂಬಮಾಡುವಷ್ಟು ಅಡಚಣೆೆಗಳು, ಅಪಾಯಗಳು, ದುಷ್ಪಾರಿಣಾಮಗಳು ಭೀಕರವಾಗುತ್ತಿತ್ತೆಂಬುದರಿಂದ ಅಧಿಕಾರದ ಹಸ್ತಾಂತರವನ್ನು ಎಂಟು ತಿಂಗಳ ಮೊದಲೇ ಮಾಡಲು ನಿರ್ಧರಿಸಿರಬೇಕು. ಅವಸರದಲ್ಲಿ ಭಾರತವನ್ನು ವಿಭಜಿಸಿದ ನಿರ್ಧಾರವನ್ನು ಪ್ರತಿಭಟಿಸಲು ಜುಲೈ 13, 1947ರಂದು ‘ಕರಾಳದಿನ’ ದಿನ ಆಚರಿಸಲು ಹಿಂದೂ ಮಹಾಸಭೆ ಮತ್ತು ಆರೆಸ್ಸೆಸ್ ದೇಶಕ್ಕೆ ಕರೆಕೊಟ್ಟಿದ್ದವು. ಆ ಕರೆಯನ್ನು ಸಮರ್ಥಿಸಿ ನಾಥೂರಾಮ್ ಗೋಡ್ಸೆ ಪ್ರಕಟಿಸುತ್ತಿದ್ದ ‘ಅಗ್ರಣಿ’ ಮರಾಠಿ ಪತ್ರಿಕೆ ಅಗ್ರಲೇಖನಗಳನ್ನು ಪ್ರಕಟಿಸಿತ್ತು. ಅದರ ಧೋರಣೆ ದೇಶದ ಶಾಂತಿ ಸುವ್ಯವಸ್ಥೆಗೆ ಭಂಗವನ್ನುಂಟುಮಾಡುವುದೆಂದು ಮುಂಬೈ ಸರಕಾರ ಅದರ ಪ್ರಕಟನೆಯನ್ನು ನಿಷೇಧಿಸಿತ್ತು. ಮುದ್ರಣಯಂತ್ರವನ್ನು ಮುಟ್ಟುಗೋಲು ಹಾಕುವ ಬೆದರಿಕೆ ಹಾಕಿತ್ತು. ಅದಕ್ಕೆ ಅಂಜಿ ‘ಅಗ್ರಣಿ’ ಪತ್ರಿಕೆ ಪ್ರಕಟನೆಯನ್ನು ನಿಲ್ಲಿಸಿ, ಸಾವರ್ಕರ್‌ರ ಉಪದೇಶದಂತೆ ‘ಹಿಂದೂ ರಾಷ್ಟ್ರ’ ಎಂಬ ಹೊಸ ಹೆಸರಿನಲ್ಲಿ ಹೊಸ ಮುದ್ರಣ ಯಂತ್ರದಿಂದ ಅಂದು ಪ್ರಕಾಶನ ಸಮಾರಂಭ ನಡೆದಿತ್ತು. ಆ ಸಭೆಯ ಕಾರ್ಯಕಲಾಪಗಳನ್ನು ಸಿಐಡಿ ಪೊಲೀಸರು ಗುಪ್ತವಾಗಿ ದಾಖಲಿಸುತ್ತಿದ್ದರು.


 ಆ ಸಮಾರಂಭಕ್ಕೆ ಅಹಮದ್ ನಗರದಿಂದ ವಿಷ್ಣು ಕರಕರೆ ಮತ್ತು ಅವನು ನಡೆಸುತ್ತಿದ್ದ ‘ಡೆಕ್ಕನ್ ಗೆಸ್ಟ್ ಹೌಸ್’ ಎಂಬ ವಾಣಿಜ್ಯ ಸಂಸ್ಥೆಯಲ್ಲಿ ಜೀತಕಿದ್ದ ಮದನಲಾಲ್ ಪಹ್ವಾ ಎಂಬ ಇಪ್ಪತ್ತು ವರ್ಷದ ಪಶ್ಚಿಮ ಪಂಜಾಬ್ ಪ್ರಾಂತದಿಂದ ಓಡಿ ಬಂದಿದ್ದ ನಿರಾಶ್ರಿತ ಯುವಕನೂ ಬಂದಿದ್ದರು! ಮದನಲಾಲ್ ಪಂಜಾಬ್‌ನಿಂದ ಅಹಮದ್ ನಗರಕ್ಕೆ ಏಕೆ ಬಂದಿದ್ದ? ಅದೊಂದು ದುರಂತ ಕತೆ. ಅಂದಿನ ಪಂಜಾಬಿನ ರಾಜಧಾನಿ ಲಾಹೋರ್ ಶಹರಕ್ಕೆ ಸ್ವಲ್ಪ ದೂರದಲ್ಲಿದ್ದ ಹಲ್ಲಿಯಲ್ಲಿ ಹುಟ್ಟಿದವನು. ಅವನ ಜಾತಕವನ್ನು ಪರೀಕ್ಷಿಸಿದ ಜ್ಯೋತಿಷಿ ಅವನ ಹೆಸರು ಇಡೀ ದೇಶದಲ್ಲಿ ಪ್ರಖ್ಯಾತವಾಗುವುದೆಂದು ಭವಿಷ್ಯ ನುಡಿದಿದ್ದನಂತೆ. ಆ ಜ್ಯೋತಿಷಿಯ ಮಾತಿನಲ್ಲಿ ಅವನ ತಂದೆಗೆ ಎಷ್ಟು ನಂಬಿಕೆ ಇತ್ತೆಂದರೆ, ದೇಶ ಇಬ್ಬಾಗವಾದಾಗ ಅವನ ಹಳ್ಳಿಯವರೆಲ್ಲ ಊರು ಬಿಟ್ಟು ಭಾರತಕ್ಕೆ ಓಡಿಬರುವಾಗ ಮಗ ಮದನಲಾಲ್: ‘‘ಅಪ್ಪಾ ಜೀವ ಉಳಿಸಿಕೊಳ್ಳಲು ಇಂದೇ ಇಲ್ಲಿಂದ ಹೊರಡಬೇಕು. ಸಿದ್ಧನಾಗು’’ ಎಂದಾಗ ಅಪ್ಪ ಹೇಳಿನಂತೆ: ‘‘ಇಂದು ಪ್ರಯಾಣಕ್ಕೆ ಪ್ರಶಸ್ತವಾಗಿಲ್ಲವಂತೆ. ನಾನು ಹೊರಡವುದಿಲ್ಲ’’ ಅನಾರೋಗ್ಯದಿಂದ ಅಸ್ಪತ್ರೆಯಲ್ಲಿದ್ದ ಅಪ್ಪನನ್ನು ಬಿಟ್ಟು ಮದನಲಾಲ್ ಓಡಿಬಂದಿದ್ದ! ಲಾಹೋರ್, ಕರಾಚಿ ದಾರಿಯ ಬಳಿ ಉಕ್ರಾನ್ ಎಂಬ ಹಳ್ಳಿಯಲ್ಲಿ ಅವನ ಸೋದರತ್ತೆಯ ಮನೆಗೆ ಓಡಿಬಂದು ಅವಿತುಕೊಂಡಿದ್ದ. ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿದ್ದ ಆ ಗ್ರಾಮದ ಮುಸ್ಲಿಮರು: ‘‘ನಗು ನಗುತ್ತಾ ಪಾಕಿಸ್ತಾನ ಪಡೆದೆವು! ಹೋರಾಡಿ ಹೋರಾಡಿ ಭಾರತ ಪಡೆದುಕೊಳ್ಳುತ್ತೇವೆ !!’’ ಎಂದು ಬೀದಿಯಲ್ಲಿ ಚೀತ್ಕರಿಸಿ ಖಡ್ಗ ಝಳಪಿಸುತ್ತಿದ್ದುದನ್ನು ಮದನಲಾಲ್ ಮನೆಯಲ್ಲಿ ಅಡಗಿ ಕುಳಿತು ಕೇಳಿದ್ದ! ಮದನಲಾಲ್ ಆಮೇಲೆ ಹೇಳಿದ ‘‘ನಾವೆಲ್ಲಾ ಕತ್ತು ಕುಯ್ಯಲು ಕೂಡಿಹಾಕಿದ್ದ ಕುರಿಗಳಂತೆ ಅವಿತುಕೊಂಡಿದ್ದೆವು. ಲಾಹೋರಿನ ಹತ್ತಿರದ ಶೇಕ್‌ಪುರ ಎಂಬ ನಗರದಲ್ಲಿದ್ದ ಹಿಂದೂ ಮತ್ತು ಸಿಖ್ ಜನರನ್ನೆಲ್ಲ ಒಂದು ಗೋದಾಮಿನಲ್ಲಿ ಕೂಡಿಹಾಕಿದರು. ಒಳಗಿದ್ದ ಅಸಹಾಯಕ ಹಿಂದೂ ಸಿಖ್ ಜನರನ್ನೆಲ್ಲ ಮುಸ್ಲಿಂ ಪೊಲೀಸರು ಮಷಿನ್‌ಗನ್‌ನಿಂದ ಗುಂಡಿಕ್ಕಿ ಕೊಂದರು.ಒಳಗಿದ್ದ ಯಾರೊಬ್ಬರೂ ಬದುಕಿ ಉಳಿಯಲಿಲ್ಲ.’’
      ಮದನಲಾಲ್ ಹೇಳಿದ್ದು ನಿಜವಾಗಿ ನಡೆದ ಘಟನೆಗಳಲ್ಲಿ ಕೇವಲ ಒಂದೆರಡು ಮಾತ್ರ. ನ್ಯೂಯಾರ್ಕ್ ಟೈಮ್ಸ್ ಪತ್ರಿಕಾ ವರದಿಗಾರ ರಾಬರ್ಟ್ ಟ್ರುಂಬುಲ್: ‘‘ಇಂದು ಭಾರತದಲ್ಲಿ ರಕ್ತ, ಸುರಿಯುವ ಮಳೆ ನೀರಿಗಿಂತ ಹೆಚ್ಚಾಗಿ ಹರಿಯುತ್ತಿದೆ. ನಾನು ಸತ್ತ ನೂರಾರು ಹೆಣಗಳನ್ನು ನೋಡಿದೆ, ಅದಕ್ಕಿಂತ ಘೋರವಾದ, ಕಣ್ಣು, ಕೈಕಾಲು ಕಳೆದುಕೊಂಡ ಸಹಸ್ರಾರು ಭಾರತೀಯರನ್ನು ನೋಡಿದೆ. ಗುಂಡಿಕ್ಕಿ ಕೊಂದರೆ ಅದು ಬಹು ದಯಾಮರಣ! ಮಕ್ಕಳು ಮಹಿಳೆಯರನ್ನು ಬಡಿಗೆಯಿಂದ ಹೊಡೆದು ಕಲ್ಲಿನಿಂದ ಜಜ್ಜಿ ಕೊರೆಜೀವ ಉಳಿಸಿ ಸಾಯಲು ಬಿಟ್ಟು ಹೋದರು. ಅವರು ಬಿಸಿಲಿನ ತಾಪದಿಂದ ಮುತ್ತುವ ಕ್ರಿಮಿಕೀಟ ನೊಣಗಳಿಂದ ನರಳಿ ನರಳಿ ಸತ್ತರು.’’


ಮದನಲಾಲ್ ಪಂಜಾಬಿನಲ್ಲಿ ತಾನು ಕೇಳಿದ್ದ ಹಿಂದೂ ಸಿಖ್ ಜನರ ದಾರುಣ ಸ್ಥಿತಿಯನ್ನು ತನ್ನೊಡೆಯ ವಿಷ್ಣು ಕರಕರೆಯ ಮುಂದೆ ಹೇಳಿದ್ದ. ‘‘ಲೈಲಾಪೂರ್ ಪಶ್ಚಿಮಕಿದ್ದ ಹಳ್ಳಿಯಲ್ಲಿದ್ದ ಬಾಗ್‌ದಾಸ್ ಎಂಬ ಓರ್ವ ಹಿಂದೂ ಕೃಷಿಕನನ್ನು ಮತ್ತು ಮುನ್ನೂರು ಹಿಂದೂ ಸಿಖ್ ಜನರನ್ನು ಒಂದು ಮಸೀದಿಗೆ ಕರೆದೊಯ್ದರು. ಮಸೀದಿಯ ಮುಂದಿದ್ದ ಒಂದು ಕೊಳದಲ್ಲಿ ಅವರಿಗೆ ತಮ್ಮ ಕೈಕಾಲು ತೊಳೆದುಕೊಳ್ಳಲು ಹೇಳಿದರು. ಮಸೀದಿಯ ಒಳಗೆ ಕರೆದೊಯ್ದರು. ನೆಲದ ಮೇಲೆ ಕುಳ್ಳಿರಿಸಿದರು. ಅಲ್ಲಿದ್ದ ಕುರ್‌ಆನ್‌ನಿಂದ ನಾಲ್ಕು ಸೂರಾ ಪಠಿಸಿದ. ಆಮೇಲೆ ಹೇಳಿದ: ‘‘ನೀವು ಮುಸ್ಲಿಮರಾಗಿ ಮತಾಂತರಗೊಂಡು ಸುಖವಾಗಿ ಬಾಳಬಹುದು. ಇಲ್ಲವಾದರೆ ನಿಮ್ಮನ್ನೆಲ್ಲಾ ಕೊಲ್ಲಲಾಗುವುದು. ಯಾವುದು ಬೇಕೋ ಆಯ್ದುಕೊಳ್ಳಿ’’ ಬಾಗ್‌ದಾಸ್ ಹೇಳಿದ: ‘‘ಮುಸ್ಲಿಮರಾಗುತ್ತೇವೆ.’’ ಮತಾಂತರಗೊಂಡವರಿಗೆ ಮುಸ್ಲಿಂ ಹೆಸರಿಟ್ಟರು. ಕುರ್‌ಆನ್‌ನ ಒಂದು ಅಧ್ಯಾಯ ಪಠಿಸಿದರು. ಅಲ್ಲಿಂದ ಮಸೀದಿಯ ಮುಂದೆ ಹೊರಗೆ ಕರೆತಂದರು. ಅಲ್ಲೊಂದು ಹಸುವನ್ನು ಕೊಯ್ದು ಅದರ ಮಾಂಸ ಬೇಯಿಸಿದರು. ಮತಾಂತರ ಹೊಂದಿದವರು ಒಬ್ಬೊಬ್ಬರಾಗಿ ಬಂದು ಗೋಮಾಂಸದ ಒಂದೊಂದು ಚೂರು ತಿಂದರು. ‘ಈ ಘಟನೆಯನ್ನು ನೆನೆಸಿಕೊಂಡ ದಾಸ್ ಹೇಳಿದನಂತೆ: ‘‘ನಾನು ಶಾಕಾಹಾರಿ ಮಾಂಸ ನೋಡಿ ವಾಂತಿ ಬರುವಂತಾಯಿತು.ಅವರ ಆಜ್ಞೆಯಂತೆ ಮಾಂಸ ತಿನ್ನದಿದ್ದರೆ ಕೊಲ್ಲುತ್ತಿದ್ದರು. ವಾಂತಿಯ ಉಬ್ಬಳಿಕೆ ತಡೆದುಕೊಂಡು ಒಂದು ಚೂರು ತಿಂದೆ! ಪ್ರಾಣ ಉಳಿಸಿಕೊಂಡೆ.’’
ದಾಸ್ ಮತ್ತೆ ಹೇಳಿದನಂತೆ: ‘‘ನನ್ನ ನೆರೆಮನೆಯ ಬ್ರಾಹ್ಮಣನೊಬ್ಬ ಕೇಳಿದ್ದ: ‘ನಮ್ಮ ಮನೆಯಲ್ಲಿ ನಮ್ಮ ತಟ್ಟೆಯಿದೆ. ಅದನ್ನು ತಂದು ಅದರಲ್ಲಿ ಬಡಿಸಿಕೊಂಡು ಮಾಂಸ ತಿನ್ನುತ್ತೇನೆ. ಮನೆಗೆ ಹೋಗಲು ಅಪ್ಪಣೆ ಕೊಡಿ.ಸೆರೆ ಹಿಡಿದಿದ್ದ ಮುಸ್ಲಿಮರು ಒಪ್ಪಿಗೆ ಕೊಟ್ಟರು.ಮನೆಯೊಳಗೆ ಹೋದವನು ಒಂದು ಚೂರಿಯನ್ನು ತೆಗೆದುಕೊಂಡು ಹೆಂಡತಿಯ ಕತ್ತು ಕತ್ತರಿಸಿದ.ಮೂವರು ಮಕ್ಕಳ ಕತ್ತು ಕುಯ್ದ. ಕೊನೆಗೆ ತನ್ನೆದೆಗೇ ಚೂರಿ ಇರಿದುಕೊಂಡು ಸತ್ತುಬಿದ್ದ.’
(ಶನಿವಾರದ ಸಂಚಿಕೆಗೆ ಮುಂದುವರಿಯುವುದು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ