10 ದಿನಗಳಿಂದ ಶಿವಮೊಗ್ಗದಲ್ಲಿ ಸ್ಥಿರಾಸ್ತಿ ನೊಂದಣಿ ಪ್ರಕ್ರಿಯೆ ಸ್ಥಗಿತ !
ಶಿವಮೊಗ್ಗ, ಫೆ. 27: ಒಂದಲ್ಲ ಎರಡಲ್ಲ ಕಳೆದ ಸರಿಸುಮಾರು 10 ದಿನಗಳಿಂದ ಶಿವಮೊಗ್ಗ ನಗರ ವ್ಯಾಪ್ತಿಗೆ ಸಂಬಂಧಿಸಿದ ಸ್ಥಿರಾಸ್ತಿ ನೊಂದಣಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತವಾಗಿದೆ. ಇದರಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.
ಇಡೀ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ರಾಜ್ಯ ಸರ್ಕಾರವು ಉಪಗ್ರಹ ಆಧಾರಿತ ಸ್ಥಿರಾಸ್ತಿ ಮಾಲಕತ್ವ (ಯುಪಿಓಆರ್) ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ನೀಡಲಾಗುವ ಪ್ರಾಪರ್ಟಿ ಕಾರ್ಡ್ (ಪಿ.ಆರ್) ಹಾಜರುಪಡಿಸಿದರೆ ಮಾತ್ರ, ಆನ್‍ಲೈನ್ ಆಧಾರಿತವಾಗಿ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಸ್ಥಿರಾಸ್ತಿ ನೊಂದಣಿ ಪ್ರಕ್ರಿಯೆ ನಡೆಯುತ್ತದೆ. ಆದರೆ ಬೆಂಗಳೂರಿನಲ್ಲಿರುವ ಯುಪಿಓಆರ್ ಕೇಂದ್ರ ಕಚೇರಿಯಲ್ಲಿ ಸರ್ವರ್ ಡೌನ್ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದರಿಂದ ಶಿವಮೊಗ್ಗದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ, ಕಳೆದ 10 ದಿನಗಳಿಂದ ನಗರ ವ್ಯಾಪ್ತಿಗೆ ಸಂಬಂಧಿಸಿದ ಸ್ಥಿರಾಸ್ತಿಗಳ ನೊಂದಣಿ ಪ್ರಕ್ರಿಯೆ ನಡೆಯುತ್ತಿಲ್ಲ.
'ಆನ್‍ಲೈನ್‍ಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆಯಿರುವುದರಿಂದ ಕಚೇರಿಯ ಕಂಪ್ಯೂಟರ್ ಗಳಲ್ಲಿ ಯುಪಿಓಆರ್ ವೆಬ್ ತಾಣ ತೆರೆದುಕೊಳ್ಳುತ್ತಿಲ್ಲ. ಈ ವೆಬ್ ತಾಣ ತೆರೆದುಕೊಳ್ಳದಿದ್ದರೆ ಸ್ಥಿರಾಸ್ತಿಗಳ ನೊಂದಣಿ ಮಾಡಲು ಆಗುವುದಿಲ್ಲ. ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಶೀಘ್ರವಾಗಿ ಸಮಸ್ಯೆ ಪರಿಹಾರವಾಗಲಿದೆ' ಎಂದು ಶಿವಮೊಗ್ಗ ಸಬ್ ರಿಜಿಸ್ಟಾರ್ ಕಚೇರಿಯ ಹಿರಿಯ ಉಪ ನೊಂದಣಾಧಿಕಾರಿ ಪ್ರಸನ್ನರವರು ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ತೊಂದರೆ: ನೊಂದಣಿ ಪ್ರಕ್ರಿಯೆ ಸ್ಥಗಿತದಿಂದ, ನಗರ ವ್ಯಾಪ್ತಿಯ ನೂರಾರು ಸ್ಥಿರಾಸ್ತಿ ಮಾಲಕರು ತೊಂದರೆ ಅನುಭವಿಸುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಎದುರಿಸುವಂತಾಗಿದೆ. ತಮ್ಮೆಲ್ಲ ಕೆಲಸಕಾರ್ಯ ಬಿಟ್ಟು, ಪ್ರತಿದಿನ ಕಚೇರಿಗೆ ಎಡತಾಕುವಂತಾಗಿದೆ. ಇದರಿಂದ ಅಮೂಲ್ಯವಾದ ಸಮಯ, ಹಣ ವ್ಯರ್ಥವಾಗುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
'ಸೈಟ್‍ವೊಂದರ ನೊಂದಣಿ ಕಾರ್ಯಕ್ಕಾಗಿ ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದೆ. ಆದರೆ ಸರ್ವರ್ ಡೌನ್ ಸಮಸ್ಯೆಯಿರುವುದರಿಂದ, ನೊಂದಣಿ ಸಾಧ್ಯವಾಗುತ್ತಿಲ್ಲ. ಇದರಿಂದ ಬೆಂಗಳೂರಿನ ಎಲ್ಲ ಕೆಲಸ ಕಾರ್ಯ ಬಿಟ್ಟು ಇಲ್ಲಿಯೇ ಇದ್ದೆನೆ. ಯಾವಾಗ ಸಮಸ್ಯೆ ಪರಿಹಾರವಾಗುವುದೊ ಗೊತ್ತಿಲ್ಲ ಎಂದು ದಿನೇಶ್ ಎಂಬುವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ನಿರಂತರ ಗೋಳು: ಪ್ರಾಪರ್ಟಿ ಕಾರ್ಡ್ ವ್ಯವಸ್ಥೆ ಜಾರಿಗೊಂಡ ನಂತರ, ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳಿಂದ ಸ್ಥಿರಾಸ್ತಿ ನೊಂದಣಿ ಪ್ರಕ್ರಿಯೆಯಲ್ಲಿ ನಿರಂತರ ವ್ಯತ್ಯಯ ಕಂಡುಬರುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಗಮನಹರಿಸದಿರುವುದು ನಿಜಕ್ಕೂ ವಿಷಾದಕರ ಸಂಗತಿ. ಬೇಜವಾಬ್ದಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತತ್‍ಕ್ಷಣವೇ ಜಿಲ್ಲಾಡಳಿತ, ಸರ್ವೇ ಇಲಾಖೆ ಹಾಗೂ ನೊಂದಣಿ ಇಲಾಖೆಗಳು ಇತ್ತ ಗಮನಹರಿಸಬೇಕು. ಶಿವಮೊಗ್ಗ ನಗರ ವ್ಯಾಪ್ತಿಯ ಸ್ಥಿರಾಸ್ತಿ ನೊಂದಣಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಲಿವೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ತಾಂತ್ರಿಕ ಸಮಸ್ಯೆಯಿಂದ ಸ್ಥಗಿತ: ಸಬ್ ರಿಜಿಸ್ಟಾರ್ ಪ್ರಸನ್ನ
ಸರ್ವೇ ಇಲಾಖೆ ಅಧೀನದ ಯುಪಿಓಆರ್ ಗೆ ಸಂಬಂಧಿಸಿದ ತಂತ್ರಾಂಶದಲ್ಲಿ ಸಮಸ್ಯೆ ಎದುರಾಗಿದೆ. ಕಚೇರಿಯ ಕಂಪ್ಯೂಟರ್ ಗಳಲ್ಲಿ ಯುಪಿಓಆರ್ ವೆಬ್‍ಪುಟ ತೆರೆದುಕೊಳ್ಳುತ್ತಿಲ್ಲ. ಈ ಕಾರಣದಿಂದ ಕಳೆದ ಕೆಲ ದಿನಗಳಿಂದ ಶಿವಮೊಗ್ಗ ನಗರ ವ್ಯಾಪ್ತಿಯ ಸ್ಥಿರಾಸ್ತಿಗಳ ನೊಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಶೀಘ್ರವಾಗಿ ಸಮಸ್ಯೆ ಇತ್ಯರ್ಥವಾಗುವ ನಿರೀಕ್ಷೆಯಿದೆ ಎಂದು ಶಿವಮೊಗ್ಗ ನಗರದ ಸಬ್ ರಿಜಿಸ್ಟಾರ್ ಕಚೇರಿಯ ಹಿರಿಯ ಉಪ ನೊಂದಣಾಧಿಕಾರಿ ಪ್ರಸನ್ನರವರು ತಿಳಿಸಿದ್ದಾರೆ.