ಆದಿವಾಸಿ ಹಕ್ಕುಗಳು: ಮನಸ್ಸು ಬದಲಿಸಿದ ಸರ್ವೋಚ್ಚ ನ್ಯಾಯಾಲಯ

Update: 2019-03-01 08:10 GMT

ಅರಣ್ಯಗಳನ್ನು ಅದರ ಮೂಲನಿವಾಸಿಗಳಿಂದ ಮುಕ್ತಗೊಳಿಸಿ ಅವುಗಳನ್ನು ಕಾರ್ಪೊರೇಟ್ ಗಣಿ ಕಂಪೆನಿಗಳಿಗೆ ಒಪ್ಪಿಸುವ ಹುನ್ನಾರ ಇದಾಗಿದೆಯೇ? ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವುದು ಅರಣ್ಯ ಹಕ್ಕುಗಳ ಕಾಯ್ದೆಯ ಉದ್ದೇಶವಾಗಿದೆ. ಆದರೆ ಅಧಿಕಾರಶಾಹಿಗಳಿಂದ ಕಾನೂನಿನ ದುರುಪಯೋಗ ಮತ್ತು ಈಗ ಸುಪ್ರೀಂ ಕೋರ್ಟ್ ಈ ದುರುಪಯೋಗವನ್ನು ಅಂಗೀಕರಿಸಿರುವುದು ಆದಿವಾಸಿಗಳ ಮೇಲಿನ ಐತಿಹಾಸಿಕ ಅನ್ಯಾಯವನ್ನು ಶಾಶ್ವತಗೊಳಿಸಿರುವುದಕ್ಕೆ ಸಮವಾಗಿದೆ.

ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ದೇಶೀಯ ಜನರಿಗೆ ತಮ್ಮ ಜಮೀನಿನ ಮೇಲಿರುವ ಹಕ್ಕನ್ನು ದೃಢಪಡಿಸಿದ್ದರೆ, 2019ರಲ್ಲಿ ಮೋದಿ ಸರಕಾರದ ಅಡಿಯಲ್ಲಿ ಈಗ ನ್ಯಾಯಾಲಯ ಏಕಪಕ್ಷೀಯವಾಗಿ ತೆರವಿಗೆ ಆದೇಶ ನೀಡಿದೆ. ಶ್ರೇಷ್ಠ ನ್ಯಾಯಾಲಯದ ಆದೇಶ ಸ್ಥಾಪಿತ ಸಾಂವಿಧಾನಿಕ ನ್ಯಾಯಶಾಸ್ತ್ರವನ್ನು ಗಿರಕಿ ಹೊಡೆಯುವಂತೆ ಮಾಡಿದೆ.

ದೇಶೀಯ ಆದಿವಾಸಿ ಜನರಿಗೆ ತಮ್ಮ ಜಮೀನು ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಮೇಲಿರುವ ಹಕ್ಕುಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಪ್ರಮುಖ ಮೂರು ಆದೇಶಗಳಿವೆ:

1. 2011ರಲ್ಲಿ ಮಹಾರಾಷ್ಟ್ರದ ಗ್ರಾಮದಲ್ಲಿ ಮೇಲ್ವರ್ಗದ ಜನರಿಂದ ಅತ್ಯಾಚಾರಕ್ಕೊಳಗಾಗಿ ನಗ್ನವಾಗಿ ಮೆರವಣಿಗೆ ಮಾಡಲ್ಪಟ್ಟ ಆದಿವಾಸಿ ಮಹಿಳೆಯ ದೂರನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯ ಈ ರೀತಿ ಹೇಳಿಕೆ ನೀಡಿತ್ತು;

ಪ್ರಸ್ತುತ ಬುಡಕಟ್ಟು ಅಥವಾ ಆದಿವಾಸಿಗಳ (ಪರಿಶಿಷ್ಟ ಪಂಗಡಗಳು) ಪೂರ್ವಜರು ಇಲ್ಲಿನ ನಿಜವಾದ ನಿವಾಸಿಗಳಾಗಿದ್ದಾರೆ. ಬುಡಕಟ್ಟು ಜನರಿಗೆ ಅನ್ಯಾಯವೆಸಗುವುದು ನಮ್ಮ ದೇಶದ ಇತಿಹಾಸದ ನಾಚಿಕೆಯ ವಿಷಯವಾಗಿದೆ. ಬುಡಕಟ್ಟು ಜನರನ್ನು ರಾಕ್ಷಸರು, ಅಸುರರು ಎಂದೆಲ್ಲಾ ಕರೆಯಲಾಗುತ್ತದೆ. ಶತಮಾನಗಳಿಂದ ಅವರನ್ನು ಹತ್ಯೆಗೈಯಲಾಗುತ್ತಿದ್ದು ಬದುಕುಳಿದವರು ಮತ್ತು ಅವರ ವಂಶಸ್ಥರನ್ನು ಹಿಂಸಿಸಿ ಶೋಷಣೆ ಮಾಡಲಾಗುತ್ತಿದೆ ಮತ್ತು ಎಲ್ಲ ರೀತಿಯ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಅವರ ಜಮೀನುಗಳನ್ನು ಕಸಿದು ಅರಣ್ಯಕ್ಕೆ ಅಟ್ಟಲಾಗಿದೆ ಮತ್ತು ಅಲ್ಲಿ ಅವರು ಬಡತನ, ಅನಕ್ಷರತೆ ಮತ್ತು ರೋಗಗಳ ಮಧ್ಯೆ ಹೀನಾಯ ಜೀವನ ಸಾಗಿಸುತ್ತಿದ್ದಾರೆ.

ಈಗ ಕೆಲವರು ಅವರನ್ನು ಅವರ ಅರಣ್ಯ ಮತ್ತು ಗುಡ್ಡಗಳಿಂದಲೂ ಓಡಿಸಲು ಪ್ರಯತ್ನಿಸುತ್ತಿದ್ದು ಅವರ ಜೀವನಾಧಾರವಾಗಿರುವ ಅರಣ್ಯ ಉತ್ಪನ್ನಗಳಿಂದಲೂ ವಂಚಿಸುವ ಹುನ್ನಾರ ನಡೆಸುತ್ತಿದ್ದಾರೆ. ಈ ಎಲ್ಲ ಶೋಷಣೆ ತುಳಿತಗಳ ಹೊರತಾಗಿಯೂ ಭಾರತದ ಬುಡಕಟ್ಟು ಸಮುದಾಯಗಳು ಬುಡಕಟ್ಟೇತರ ಸಮುದಾಯಗಳಿಗಿಂತ ಉನ್ನತ ಮಟ್ಟದ ಆದರ್ಶಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಅವರು ಸಾಮಾನ್ಯವಾಗಿ ಬುಡಕಟ್ಟೇತರ ಸಮುದಾಯಗಳ ಜನರು ಮಾಡುವಂಥ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ, ಸುಳ್ಳು ಹೇಳುವುದಿಲ್ಲ ಮತ್ತು ಮೋಸ ಮಾಡುವುದಿಲ್ಲ. ಅವರು ಸಾಮಾನ್ಯವಾಗಿ ಬುಡಕಟ್ಟೇತರ ಸಮುದಾಯಗಳಿಗಿಂತ ಶ್ರೇಷ್ಠರಾಗಿದ್ದಾರೆ. ಅವರಿಗೆ ಮಾಡಲಾಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಇದು ಸಕಾಲ.

2. 2013ರಲ್ಲಿ ಒಡಿಶಾದ ನಿಯಮಗಿರಿಯಲ್ಲಿ ವೇದಾಂತ ಕಂಪೆನಿ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಆದಿವಾಸಿ ಜನರು ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ರೀತಿ ಆದೇಶ ನೀಡಿತ್ತು;

ಆದಿವಾಸಿ ಸಮುದಾಯಗಳ ನಿರ್ಧಾರಗಳನ್ನು ಗೌರವಿಸಬೇಕು ಮತ್ತು ಈ ಸಮುದಾಯಗಳು ತಮ್ಮ ಅನುಕೂಲದಂತೆ ಒಪ್ಪಿಗೆ ಸೂಚಿಸದೆ ಯೋಜನೆಗಳನ್ನು ಜಾರಿ ಮಾಡಬಾರದು. ನಿಯಮಗಿರಿ ಗ್ರಾಮ ಪಂಚಾಯತ್ ಪ್ರಕ್ರಿಯೆಗಳು ಸ್ವತಂತ್ರವಾಗಿ ಮತ್ತು ಯಾವುದೇ ಪ್ರಭಾವಕ್ಕೊಳಗಾಗದೆ ನಡೆಯುತ್ತವೆ. ಕೇವಲ ಆಸ್ತಿಯ ಹಕ್ಕು ಅಥವಾ ನೆಲೆಸುವ ಹಕ್ಕಿಗಷ್ಟೇ ಸೀಮಿತಗೊಳ್ಳದೆ, ಅರಣ್ಯ ಭೂಮಿಯನ್ನು ಸಮುದಾಯ ಅರಣ್ಯ ಸಂಪನ್ಮೂಲವಾಗಿ ಬಳಸುವ ಹಕ್ಕು ಸೇರಿದಂತೆ ಅರಣ್ಯವಾಸಿಗಳು ಮತ್ತು ಪರಿಶಿಷ್ಟ ಪಂಗಡಗಳ ಅನೇಕ ಹಕ್ಕುಗಳನ್ನು ಅರಣ್ಯ ಹಕ್ಕುಗಳ ಕಾಯ್ದೆ ರಕ್ಷಿಸುತ್ತದೆ.

3. ಸದ್ಯ ಮೋದಿ ಸರಕಾರದ ಅಡಿಯಲ್ಲಿ ತಮ್ಮದೇ ಸ್ಥಾಪಿತ ನ್ಯಾಯಶಾಸ್ತ್ರವನ್ನು ಬದಲಾಯಿಸಿರುವ ಸರ್ವೋಚ್ಚ ನ್ಯಾಯಾಲಯ ಆದಿವಾಸಿಗಳ ಮೇಲೆ ನಡೆಯುವ ಅನ್ಯಾಯವನ್ನು ಶಾಶ್ವತಗೊಳಿಸಿದೆ. ನ್ಯಾಯಾಧೀಶರಾದ ಅರುಣ್ ಮಿಶ್ರಾ, ನವೀನ್ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ಅವರ ತ್ರಿಸದಸ್ಯ ಪೀಠ ಕೆಲವು ದಿನಗಳ ಹಿಂದೆ ಈ ತೀರ್ಪನ್ನು ನೀಡಿತ್ತು. ಇತರ ಎಲ್ಲ (ತ್ರಿವಳಿ ತಲಾಖ್ ಅಥವಾ ಇತರ ಯಾವುದೇ) ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಂದೆ ಅತಿಆಸಕ್ತಿಯಿಂದ ವರ್ತಿಸುವ ಕೇಂದ್ರ ಸರಕಾರ ಘನ ನ್ಯಾಯಾಲಯದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ರಕ್ಷಿಸುವ ಹೊಣೆಯಿಂದ ನುಣುಚಿಕೊಂಡಿತ್ತು.

ಸರ್ವೋಚ್ಚ ನ್ಯಾಯಾಲಯದ ಈ ಕ್ರೂರ ಆದೇಶದಿಂದ ತಮ್ಮ ಪ್ರಾಣ ಮತ್ತು ಜೀವನವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಲಕ್ಷಾಂತರ ಆದಿವಾಸಿಗಳ ಬೆಂಬಲಕ್ಕೆ ಸಿಜೆಪಿ ನಿಂತಿದೆ. ಉತ್ತರ ಪ್ರದೇಶದ ಸೋನಭದ್ರದಲ್ಲಿ ಆದಿವಾಸಿಗಳ ಅರಣ್ಯಹಕ್ಕುಗಳಿಗಾಗಿ ನಾವು ಕಾರ್ಯಮಗ್ನರಾಗಿದ್ದು ದೇಶಾದ್ಯಂತ ಆದಿವಾಸಿಗಳ ಹೋರಾಟವನ್ನು ಬೆಂಬಲಿಸಲು ಮತ್ತು ಅರಣ್ಯ ಹಕ್ಕುಗಳ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ.

ವನ್ಯಜೀವಿ ರಕ್ಷಣಾ ಗುಂಪಿನ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ 21 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದ ಸೂಚನೆ ಈ ರೀತಿಯಿದೆ;

1. ಅರಣ್ಯ ಹಕ್ಕುಗಳ ಕಾಯ್ದೆ, 2016ರ ಅಡಿಯಲ್ಲಿ ಎಷ್ಟು ಪರಿಶಿಷ್ಟ ಪಂಗಡ ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಹಕ್ಕುಸ್ಥಾಪನೆಯ ಮನವಿಯನ್ನು ನಿರ್ಣಯಿಸಲಾಗಿದೆ ಎಂದು ತಿಳಿಸಿ.

2. ಕಾಯ್ದೆಯ ಅಡಿಯಲ್ಲಿ ಮನವಿಗಳು ತಿರಸ್ಕೃತಗೊಂಡ ಕಾರಣ ನಡೆಯುತ್ತಿರುವ ತೆರವು ಕಾರ್ಯಾಚರಣೆಯ ಸ್ಥಿತಿಗತಿಯ ಬಗ್ಗೆ ತಿಳಿಸಿ.

3. ಅಂತ್ಯವನ್ನು ತಲುಪಿದ್ದರೂ ಯಾಕೆ ತೆರವುಗೊಳಿಸಲಾಗಿಲ್ಲ ಎಂಬುದನ್ನು ಅಫಿದಾವಿತ್‌ನಲ್ಲಿ ವಿವರಿಸಿ.

4. ತಿರಸ್ಕೃತ ಅರ್ಜಿದಾರರನ್ನು ತೆರವುಗೊಳಿಸಲಾಗುವ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ದೃಢಪಡಿಸಬೇಕು. ಮುಂದಿನ ವಿಚಾರಣೆಗೆ ಮೊದಲು ಅಂದರೆ ಜುಲೈ 24, 2019ರಂದು ಅಥವಾ ಮೊದಲು ಅನುಸರಣಾ ವರದಿಯನ್ನು ದಾಖಲಿಸಬೇಕು.

ಇಲ್ಲಿ ಕೆಲವೊಂದು ಪ್ರಶ್ನೆಗಳು ಮೂಡುತ್ತವೆ:

ಹಕ್ಕುಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಕೀಳಾಗಿ ಅನುಷ್ಠಾನಗೊಳಿಸಲಾಗಿದೆ. ಸಲ್ಲಿಸಲಾಗಿರುವ 41 ಲಕ್ಷ ಹಕ್ಕುಸ್ವಾಧೀನ ಮನವಿಗಳಲ್ಲಿ 18 ಲಕ್ಷವನ್ನು ಅಂಗೀಕರಿಸಲಾಗಿದೆ, 3 ಲಕ್ಷ ಇನ್ನೂ ಪ್ರಕ್ರಿಯೆಯಲ್ಲಿದೆ ಮತ್ತು ಉಳಿದ 20 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಜಮೀನು ಹಕ್ಕು ಪತ್ರಗಳನ್ನು ನೀಡಿರುವಲ್ಲಿಯೂ ವಂಚಿಸಲಾಗಿದೆ. ಪ್ರತಿಯೊಂದು ಅರಣ್ಯವಾಸಿ ಕುಟುಂಬಕ್ಕೆ ಕನಿಷ್ಠ ಎರಡು ಹೆಕ್ಟೇರ್ (ಐದು ಎಕರೆ) ಜಮೀನಿನ ಹಕ್ಕನ್ನು ಫ್ರಾ (ಅರಣ್ಯ ಹಕ್ಕುಗಳ ಕಾಯ್ದೆ) ನೀಡುತ್ತದೆ. ಆದರೆ ವಾಸ್ತವದಲ್ಲಿ ಒಂದು ಕುಟುಂಬ ನಾಲ್ಕು ಎಕರೆ ಕೇಳಿದರೆ ಅದಕ್ಕೆ ಕೇವಲ 40 ದಶಮಾಂಶ ಅಥವಾ ಅದಕ್ಕೂ ಕಡಿಮೆ ನೀಡಲಾಗುತ್ತದೆ! ನಾಲ್ಕೈದು ಎಕರೆಯ ಹಕ್ಕೆಲ್ಲಿ ಮತ್ತು 40 ದಶಮಾಂಶವೆಲ್ಲಿ? ಸ್ಪಷ್ಟ ರೀತಿಯಲ್ಲಿ ಅನ್ಯಾಯ.

ಈ ಅರ್ಜಿದಾರರ ಸಾಚಾತನವನ್ನು ತಿಳಿಯಲು ಗ್ರಾಮಸಭೆ ಅತ್ಯಂತ ವಿಶ್ವಾಸಾರ್ಹ ಸಾಧನವಲ್ಲವೇ? ಯಾವ ಜಮೀನಿನಲ್ಲಿ ಯಾರು ನೆಲೆಸಿದ್ದಾರೆ ಮತ್ತು ಯಾವ ಭೂಮಿಯನ್ನು ಯಾರು ಎಷ್ಟು ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ ಎನ್ನುವುದು ಗ್ರಾಮ ಸಭೆ ಸದಸ್ಯರಿಗೆ ತಿಳಿದಿರುತ್ತದೆ.

ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಗಳು ಈ ಕ್ಲೇಮುಗಳು ನಿಜವೇ ಅಥವಾ ಸುಳ್ಳೇ ಎನ್ನುವುದನ್ನು ಹೇಳಲು ಹೇಗೆ ಸಾಧ್ಯ? ಈ ಸಮಿತಿಗಳ ಸದಸ್ಯರಲ್ಲಿ ಬಹುತೇಕರು ಹೊರಗಿನವರಾಗಿದ್ದು ಆದಿವಾಸಿಯೇತರರಾಗಿರುತ್ತಾರೆ. ಇವರಿಗೆ ಅರ್ಜಿದಾರರ ಬಗ್ಗೆ ಯಾವುದೇ ಸಹಾನುಭೂತಿ ಇರುವುದಿಲ್ಲ.

ಪರಿಶಿಷ್ಟ ಪ್ರದೇಶಗಳಿಂದ ಪರಿಶಿಷ್ಟ ಪಂಗಡಗಳ ಜನರನ್ನು ತೆರವುಗೊಳಿಸುವ ಅಧಿಕಾರ ನ್ಯಾಯಾಂಗಕ್ಕಿದೆಯೇ?

ಅರಣ್ಯಗಳನ್ನು ಅದರ ಮೂಲನಿವಾಸಿಗಳಿಂದ ಮುಕ್ತಗೊಳಿಸಿ ಅವುಗಳನ್ನು ಕಾರ್ಪೊರೇಟ್ ಗಣಿ ಕಂಪೆನಿಗಳಿಗೆ ಒಪ್ಪಿಸುವ ಹುನ್ನಾರ ಇದಾಗಿದೆಯೇ?

ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವುದು ಅರಣ್ಯ ಹಕ್ಕುಗಳ ಕಾಯ್ದೆಯ ಉದ್ದೇಶವಾಗಿದೆ. ಆದರೆ ಅಧಿಕಾರಶಾಹಿಗಳಿಂದ ಕಾನೂನಿನ ದುರುಪಯೋಗ ಮತ್ತು ಈಗ ಸುಪ್ರೀಂ ಕೋರ್ಟ್ ಈ ದುರುಪಯೋಗವನ್ನು ಅಂಗೀಕರಿಸಿರುವುದು ಆದಿವಾಸಿಗಳ ಮೇಲಿನ ಐತಿಹಾಸಿಕ ಅನ್ಯಾಯವನ್ನು ಶಾಶ್ವತಗೊಳಿಸಿರುವುದಕ್ಕೆ ಸಮವಾಗಿದೆ.

ಕೃಪೆ: sabrangindia.in

Writer - ಸ್ಟಾನ್ ಸ್ವಾಮಿ

contributor

Editor - ಸ್ಟಾನ್ ಸ್ವಾಮಿ

contributor

Similar News

ಜಗದಗಲ
ಜಗ ದಗಲ