ಮುಖ್ಯವಾಹಿನಿ ಮಾಧ್ಯಮಗಳಿಂದ ಮುಕ್ತಿ ಸಿಕ್ಕಿದರೆ ಜನರಿಗೆ ಅದೇ ದೊಡ್ಡ ಭಾಗ್ಯ -ರವೀಶ್ ಕುಮಾರ್
ಈ ಹಿಂದೆ ಪ್ರತಿಯೊಬ್ಬರು ತಮ್ಮ ಸಂದೇಹ, ಭೀತಿಯನ್ನು ವ್ಯಕ್ತಪಡಿಸುವಂತಹ ಭಾರತವನ್ನು ಕಂಡಿದ್ದೆ. ನಾಗರಿಕರಾಗಿ ನಮ್ಮ ಆತ್ಮಸಾಕ್ಷಿಯನ್ನು ಮರಳಿ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದೆ ಹೋದಲ್ಲಿ ಶತಮಾನದ ಹೋರಾಟದ ಬಳಿಕ ಪಡೆದುಕೊಂಡಂತಹ ಭಾರತವನ್ನು ನಾವು ಕಳೆದುಕೊಳ್ಳಬೇಕಾದೀತು. ಹಿಂದೂಗಳು ಹಾಗೂ ಮುಸ್ಲಿಮರಿಬ್ಬರೂ ತಾವಾಗಿಯೇ ಭೀತಿಯಿಂದ ಹೊರಬರಬೇಕಾದ ಅಗತ್ಯವಿದೆ. ಇದಕ್ಕಾಗಿ ಅವರು ಮುಖ್ಯವಾಹಿನಿಯ ಮಾಧ್ಯಮಗಳಿಂದ ತಾವಾಗಿಯೇ ಮುಕ್ತಗೊಳ್ಳಬೇಕಾಗಿದೆ.
ಸಾರ್ವಜನಿಕ ಮಾಧ್ಯಮಗಳಲ್ಲಿ ಒಂದೊಮ್ಮೆ ಅಸ್ವೀಕಾರಾರ್ಹ ಹಾಗೂ ಅನೈತಿಕವೆಂದು ಪರಿಗಣಿಸಲ್ಪಟ್ಟಿದ್ದನ್ನು ಕಳೆದ ಐದು ವರ್ಷಗಳಲ್ಲಿ ಕೆಲವು ಮುಖ್ಯವಾಹಿನಿಯ ಮಾಧ್ಯಮಗಳು ಸಂಪೂರ್ಣವಾಗಿ ಸ್ವೀಕಾರಾರ್ಹ ಹಾಗೂ ನೈತಿಕವಾಗಿಸಿಬಿಟ್ಟಿವೆ. ಮಾಧ್ಯಮಗಳು ಅಸ್ತಿತ್ವದಲ್ಲಿರುವ ಅನೈತಿಕತೆಯ ನಡೆಗಳನ್ನು ಸಂಭ್ರಮಿಸುತ್ತಿವೆಯಲ್ಲದೆ, ಅಸಭ್ಯತೆಯ ಹೊಸ ಮಜಲುಗಳನ್ನು ತಲುಪುತ್ತಿವೆ. ಮುಖ್ಯವಾಹಿನಿಯ ಮಾಧ್ಯಮಗಳ ಅಸಭ್ಯ ನಡವಳಿಕೆಯು ಸಾರ್ವಜನಿಕ ಜಾಲತಾಣಗಳಲ್ಲಿ ಅಸ್ತಿತ್ವದಲಿರುವ್ಲ ಭಾರತೀಯ ಪ್ರಜಾಪ್ರಭುತ್ವದ ವೌಲ್ಯಗಳನ್ನು ನಾಶಪಡಿಸಿದೆ.
ರಸ್ತೆಯಲ್ಲಾಗಲಿ ಅಥವಾ ಟಿವಿ ಸ್ಟುಡಿಯೋಗಳ ಲ್ಲಾಗಲಿ ಅಶ್ಲೀಲವಾಗಿರುವುದು ಹಾಗೂ ಸೌಮ್ಯವಾದಿ ಯಾಗದಿರುವುದು ಈಗ ತಪ್ಪಾಗಿ ಉಳಿದಿಲ್ಲ. ಇದು ಒಂದು ವಿಭಿನ್ನ ಚಾನೆಲ್ ಅಥವಾ ನಿರೂಪಕನ ಕೆಲಸವಲ್ಲ. ನೂರಾರು ಟಿವಿ ವಾಹಿನಿಗಳು ಈಗ ಇದೇ ಕೆಲಸವನ್ನು ಮಾಡುತ್ತಿವೆ. ಈ ಗುಂಪಿನ ನಾಯಕ ಯಾರೆಂಬುದನ್ನು ಗುರುತಿಸುವುದು ಸುಲಭ. ನಾನು ಏನನ್ನು ಹೇಳಬಯಸಿದ್ದೇನೆಂದರೆ, ಇವರೆಲ್ಲರೂ ಅವನತಿಯ ಹಾಗೂ ಕುಸಿಯುತ್ತಿರುವ ವೌಲ್ಯಗಳ ಹರಿಕಾರರಾಗಿದ್ದಾರೆ.
ಮುಖ್ಯವಾಹಿನಿಯ ಮಾಧ್ಯಮ ಹಾಗೂ ರಾಜಕಾರಣದ ಸಂಪೂರ್ಣ ಸಮ್ಮಿಲನದಿಂದಾಗಿ ಈ ಪರಿವರ್ತನೆಯು ಸಾಧ್ಯವಾಗಿದೆ. ಈ ಪ್ರಕ್ರಿಯೆಯಲ್ಲಿ ಮಾಧ್ಯಮವು, ತನ್ನ ರಾಜಕೀಯ ಬೆಂಬಲಿಗನು ಮಾತ್ರವೇ ಏಕೈಕ ವೀಕ್ಷಕನೆಂದು ಪರಿಗಣಿಸಿದೆ. ಈ ಮಾಧ್ಯಮದ ಗ್ರಾಹಕರು ಹಾಗೂ ಬೆಂಬಲಿಗರು ನಿರ್ದಿಷ್ಟ ಸಿದ್ಧಾಂತ ಹಾಗೂ ರಾಜಕೀಯ ಪಕ್ಷಕ್ಕೆ ನಿಷ್ಠಾವಂತರಾಗಿದ್ದಲ್ಲಿ, ವೀಕ್ಷಕ ಹಾಗೂ ಪಕ್ಷದ ಬೆಂಬಲಿಗನ ನಡುವೆ ಇರುವ ವಿಭಾಜಕ ಗೆರೆ ಅಳಿಸಿ ಹೋಗುತ್ತದೆ.
ಸುದ್ದಿಯಲ್ಲಿನ ಮಾಹಿತಿಯ ವೈವಿಧ್ಯವನ್ನು ತೊಡೆದುಹಾಕುವ ಮೂಲಕ ನಿರ್ದಿಷ್ಟ ರಾಜಕೀಯ ಬೆಂಬಲಿಗರ ಬಣವನ್ನು ವೀಕ್ಷಕರನ್ನಾಗಿ ಪರಿಗಣಿಸಲಾಗುತ್ತದೆ. ಅವರನ್ನು ಮಾಹಿತಿ ರಹಿತ ತಂಡವೆಂದು ನಾನು ಭಾವಿಸಿದ್ದು, ಅವರದು ಸಂಖ್ಯೆಯಲ್ಲಿ ದೊಡ್ಡದಾಗಿ ಬೆಳೆಯುತ್ತಿದೆ. ಈ ಕಾರಣದಿಂದಾಗಿ ನಾನು ಅವರ ಮೂರ್ಖತನವನ್ನು ಅಣಕಿಸುವ ಬದಲು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇನೆ. ಅಮಾಯಕತನವು, ಕಲಿಕೆಯ ಸ್ಥಾನವನ್ನು ಆಕ್ರಮಿಸಿಕೊಂಡಾಗ ಅದು ನಗೆಪಾಟಲಿನ ವಿಷಯವಾಗಿ ಉಳಿಯುವುದಿಲ್ಲ.
ಕಾಲಕಾಲಕ್ಕೆ, ಈ ಗುಂಪು ಅದರ ಮಾಹಿತಿಯ ಕೊರತೆಗಾಗಿ ದೂಷಿಸಲ್ಪಟ್ಟಿದೆ. ಉದಾಹರಣೆಗೆ, ಪುಲ್ವಾಮ ಘಟನೆಯ ಬಳಿಕ ಚರ್ಚೆ ನಡೆದಿರುವುದು ಪ್ರಧಾನಿಯವರ ವೌನದ ಕುರಿತಾಗಿ ಅಲ್ಲ. ಆದರೆ, ತೆಂಡುಲ್ಕರ್ ಅವರು ಈ ಬಗ್ಗೆ ಯಾಕೆ ಮಾತನಾಡಿಲ್ಲವೆಂಬುದಕ್ಕಾಗಿ!.
2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೇರುತ್ತಿದ್ದಂತೆಯೇ, ಮುಖ್ಯವಾಹಿನಿಯ ಮಾಧ್ಯಮವೊಂದು ತನ್ನ ‘ರಾಷ್ಟ್ರೀಯ ಪಠ್ಯಕ್ರಮ’ವನ್ನು ಆರಂಭಿಸಿತು. ಹಿಂದೂ-ಮುಸ್ಲಿಮರನ್ನು ವಿಭಜಿಸುವುದೇ ಅದರ ಪ್ರಧಾನ ಚಿಂತನೆಯಾಗಿತ್ತು. ಇದಕ್ಕಾಗಿ ಅದಕ್ಕೆ ಪೌರರ ನಡುವೆ ವಿಭಜನೆಯ ಭಾವನೆಯನ್ನು ಬೆಳೆಸುವುದು ಅಗತ್ಯವಾಗಿತ್ತು. ಹೀಗಾಗಿ, ಆ ಮಾಧ್ಯಮವು ಪೌರತ್ವದ ಕುರಿತಾದ ಜನತೆಯಲ್ಲಿ ಮೂಡಿದ್ದ ಜಾಗೃತಿಯನ್ನು ಮುರಿದು ಹಾಕಲು ಯತ್ನಿಸುತ್ತಿದೆ. ಮಾಹಿತಿ ಹಾಗೂ ಪ್ರಶ್ನಿಸುವ ಮನೋಭಾವ, ಪೌರತ್ವದ ಮೂಲಭೂತ ತತ್ವಗಳಾಗಿವೆ. ನಮ್ಮ ಈ ಮುಖ್ಯವಾಹಿನಿಯ ಮಾಧ್ಯಮವು ಸರಕಾರವನ್ನು ಪ್ರಶ್ನಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಅದು ಸರಕಾರದ ಪರವಾಗಿ ಜನರನ್ನು ವಿಚಾರಣೆಗೊಳಪಡಿಸುತ್ತದೆ. ಪುಲ್ವಾಮ ದಾಳಿಯ ಹಿನ್ನೆಲೆಯಲ್ಲಿ ಈ ವಾಹಿನಿಗಳಿಂದ ಹೊರಹೊಮ್ಮುತ್ತಿರುವ ರಾಜಕೀಯ ನಿಲುವುಗಳು ಅದನ್ನು ಸ್ಪಷ್ಟವಾಗಿ ತೋರಿಸುತ್ತವೆ.
ಪೌರರ ಸಮೂಹದೊಳಗೆಯೇ ಶತ್ರುಗಳನ್ನು ಈಗ ಸೃಷ್ಟಿಸಲಾಗುತ್ತಿದೆ. ‘ಹಿಂದೂ ಹತಾಶವಾದ’ ಹಾಗೂ ‘ಮುಸ್ಲಿಂ ಹತಾಶವಾದ’ವನ್ನು ಅರೆಬೆಂದ ಮಾಹಿತಿಗಳೊಂದಿಗೆ ನಮ್ಮಿಳಗೆ ಸೃಷ್ಟಿಸಲಾಗುತ್ತದೆ. ಈ ಹತಾಶತನವು ಈ ಹಿಂದೆಯೂ ಇತ್ತು. ಆದರೆ ಅದನ್ನು ಈಗ ಹಲವಾರು ಪಟ್ಟು ಅಧಿಕವಾಗಿ ಬಿಂಬಿಸಲಾಗುತ್ತಿದೆ ಹಾಗೂ ಅವುಗಳನ್ನು ಮಾಧ್ಯಮಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಆ ಕಾರಣಕ್ಕಾಗಿ ಇಂದು ಮುಖ್ಯವಾಹಿನಿಯ ಮಾಧ್ಯಮವು ಜನತೆಯ ಮಾಧ್ಯಮವಾಗಿ ಉಳಿದಿಲ್ಲ. ಇದು ಹಿಂದೂಗಳ ಮಾಧ್ಯಮವಾಗಿ ಬಿಟ್ಟಿದೆ. ನಿಖರವಾಗಿ ಹೇಳುವುದಾದರೆ, ಅದು ಹಿಂದೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರ, ಹಿಂದುತ್ವವನ್ನು ಪ್ರತಿಪಾದಿಸುವವರ ಪರವಾಗಿ ಮಾತನಾಡುತ್ತಿದೆ. ಈ ಹಿಂದುತ್ವವಾದಿ ಮಾಧ್ಯಮವು ಮುಖ್ಯವಾಹಿನಿ ಮಾಧ್ಯಮದ ಶೇ.90ರಷ್ಟು ಜಾಗವನ್ನು ಆಕ್ರಮಿಸಿಕೊಳ್ಳುತ್ತವೆಯೆಂಬುನ್ನು ಐದು ವರ್ಷಗಳ ಹಿಂದೆ ಯಾರು ತಾನೇ ಯೋಚಿಸಿದ್ದರು!. ಆದಾಗ್ಯೂ, ಈಗ ಅದು ಹಾಗಾಗಿಬಿಟ್ಟಿದೆ.
ತನ್ನ ನವ ಹಿಂದುತ್ವವಾದಿ ಸೋಗಿನಲ್ಲಿ ಮುಖ್ಯವಾಹಿನಿಯ ಮಾಧ್ಯಮವು, ನಿಶ್ಚಿತವಾಗಿಯೂ ಆಡಳಿತ ಹಾಗೂ ಸ್ಥಾಪಿತ ಶಕ್ತಿಗಳ ವಿರುದ್ಧ ಸಂಘರ್ಷ ನಡೆಸಲಾರದು. ಇದಕ್ಕೆ ವ್ಯತಿರಿಕ್ತವಾಗಿ ಅದು ಅವರ ಸಂರಕ್ಷಕನೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುತ್ತವೆ.
ಇದಕ್ಕೂ ಮೊದಲು ಭಾರತದ ಪೌರರು ತಮ್ಮನ್ನು ಹಿಂದೂಗಳೆಂದು ಭಾವಿಸಿಯೇ ಇರಲಿಲ್ಲವೆಂದು ಹೇಳಲಾಗದು. ಆದರೆ ಆ ಗ್ರಹಿಕೆಯನ್ನು ಹಿಂದುತ್ವದ ಬಗೆಗಿನ ನೂತನ ತಿಳುವಳಿಕೆಯು ಸ್ಥಳಾಂತರಿಸಿದೆ.
ಇದೇ ಮೊದಲ ಬಾರಿಗೆ, ಇತರರ ಬಗ್ಗೆ ಭಯಪಡುವ ಹಿಂದೂವನ್ನು ಕಾಣುತ್ತಿದ್ದೇನೆ. ಇದಕ್ಕೆ ಹಾಲಿ ಮುಖ್ಯವಾಹಿನಿ ಮಾಧ್ಯಮಗಳ ಕೊಡುಗೆಯೂ ಅಪಾರ. ಅವುಗಳ ನಿಲುವುಗಳು ಶ್ರೇಷ್ಠವಾದ ಹಾಗೂ ಸದಾ ಕಾಲವೂ ಪ್ರಶಂಶನೀಯವಾದ ಹಿಂದೂ ವಿಚಾರಧಾರೆಗಳಿಗೆ ಸಂಪೂರ್ಣವಾಗಿ ವಿರುದ್ಧವಾದುದಾಗಿವೆ. ಕ್ರೋಧವು ನಮ್ಮ ವಿವೇಚನೆಯನ್ನು ನಾಶಪಡಿಸುತ್ತದೆಯೆಂದು ಭಗವದ್ಗೀತೆ ಹೇಳುತ್ತದೆ. ಆದರೆ, ಅದೇ ಭಗವದ್ಗೀತೆಯ ಹೆಸರನ್ನು ಹೇಳಿಕೊಂಡು, ಬಡಬಡಿಸುವ ಹಾಗೂ ಭಾವಾತಿರೇಕವನ್ನು ಪ್ರದರ್ಶಿಸುವ ನಿರೂಪಕನೊಬ್ಬನು, ಯಾವಾಗ ನೋಡಿದರೂ ಕೇವಲ ಕ್ರೋಧದಿಂದಲೇ ಮಾತನಾಡುತ್ತಿರುತ್ತಾನೆ.
ಮುಖ್ಯವಾಹಿನಿಯ ಸುದ್ದಿಮಾಧ್ಯಮಗಳು ನೂತನ ಬಗೆಯ ಭಕ್ತನೊಬ್ಬನನ್ನು ಸೃಷ್ಟಿಸಿವೆೆ. ಆದರೆ ಈ ಹೊಸ ಬಗೆಯ ಭಕ್ತನು ಆ ಮಾಧ್ಯಮವು ಇಂದು ಏನಾಗಿದೆಯೇ ಹಾಗೆ ಆಗಲು ನೆರವಾಗಿದ್ದಾನೆ. ಪ್ರತಿಯೊಬ್ಬ ನಾಗರಿಕನು ಕಬೀರ್ ಅಥವಾ ರವಿದಾಸ್ ಆಗಬೇಕಾಗಿದ್ದು, ಆತ ಧರ್ಮ ಹಾಗೂ ಸರಕಾರದ ಆಚರಣೆ, ಪದ್ಧತಿಗಳಿಗೆ ಸವಾಲೆಸೆಯುತ್ತಲೇ ಇರ ಬೇಕೆಂದು ನಾನು ಆಶಿಸುತ್ತೇನೆ. ಗುರು ರವಿದಾಸ್ ಅವರ ನಿದರ್ಶನವನ್ನು ನೀಡದೆ, ನಾವು ಮನಸ್ಸು ಹಾಗೂ ಹೃದಯದ ಪರಿಶುದ್ಧತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಾರದು. ಗಂಗಾ ನದಿಯಲ್ಲಿ ಮುಳುಗಿದರೆ ಮಾತ್ರವೇ ಒಬ್ಬನ ಧರ್ಮವನ್ನು ಸಾಬೀತುಪಡಿಸಲು ಸಾಧ್ಯವಾಗುತ್ತದೆ. ತನ್ನ ದೇಶಭಕ್ತಿಯನ್ನು ಸಾಬೀತುಪಡಿಸಲು ತೆಂಡುಲ್ಕರ್ ಯಾವುದೋ ಒಂದು ಸುದ್ದಿವಾಹಿನಿಯೆಡೆಗೆ ತೆರಳಬೇಕಾಗುತ್ತದೆ. ಇಂದಿನ ಮುಖ್ಯ ವಾಹಿನಿ ಮಾಧ್ಯಮವು ಎಲ್ಲಾ ಭಾರತೀಯ ಪರಂಪರೆಗಳಿಗೆ ವಿರುದ್ಧವಾದುದಾಗಿದೆ.
ಇಂದು ನೀವು ಪ್ರಶ್ನೆಯೊಂದನ್ನು ಕೇಳಿದಲ್ಲಿ, ನಿಮ್ಮನ್ನು ಕಾಂಗ್ರೆಸ್ ಏಜೆಂಟ್ ಎಂಬುದಾಗಿಯೋ, ನಕ್ಸಲನೆಂದೋ, ನಗರ ನಕ್ಸಲ್ ಎಂದೋ, ಹಿಂದೂ ಏಕತೆಯ ವಿರೋಧಿಯೆಂದೋ ಮುಸ್ಲಿಮರ ಬೆಂಬಲಿಗನೆಂದೋ ಹಾಗೂ ಅಂತಿಮವಾಗಿ ಮೋದಿ ವಿರೋಧಿಯೋ ಎಂಬಂತೆ ಆರೋಪಗಳನ್ನು ಹೊರಿಸಲಾಗುತ್ತದೆ. ವಾಸ್ತವಿಕವಾಗಿ ನೀವು ಮೋದಿಯನ್ನು ಯಾಕೆ ವಿರೋಧಿಸುತ್ತೀರಿ ಎಂಬ ಪ್ರಶ್ನೆಯೇ, ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯ ಅಂತ್ಯಗೊಳ್ಳುವಿಕೆಯ ಆರಂಭದ ಬಿಂದುವಾಗಿಬಿಡುತ್ತದೆ.
ಹಿಂದೂಗಳಲ್ಲಿ ಹತಾಶೆಯ ಭಾವನೆಯನ್ನು ಬಿತ್ತಲು, ಮಾಧ್ಯಮವು ಮುಸ್ಲಿಮರ ಬಗ್ಗೆ ಭೀತಿಯನ್ನು ಹುಟ್ಟುಹಾಕಿತು. ವಾಸ್ತವಿಕವಾಗಿ ಹಿಂದೂ ಆಕ್ರೋಶವನ್ನು ಎತ್ತಿಕಟ್ಟುವ ಇಡೀ ಪ್ರೊಜೆಕ್ಟ್, ಈ ಚಿಂತನೆಯ ಮಧ್ಯೆ ಕೇಂದ್ರೀಕೃತವಾಗಿದೆ. ಹಿಂದೂಗಳ ಮೇಲಾದಂತೆ ಮುಸ್ಲಿಮರ ಮೇಲೆಯೂ ಒಂದೇ ರೀತಿಯ ಪರಿಣಾಮವನ್ನು ಈ ಪ್ರಾಜೆಕ್ಟ್ ಉಂಟು ಮಾಡಿದೆ. ಸರಕಾರದ ಬಗ್ಗೆ ಪ್ರಶ್ನೆಗಳನ್ನು ಕೇಳುವುದನ್ನು ಹಿಂದೂಗಳು ನಿಲ್ಲಿಸಿರುವಂತೆಯೇ, ಮುಸ್ಲಿಮರು ಕೂಡಾ ಭೀತಿಯ ಭಾವನೆಯಿಂದ ಅದೇ ದಾರಿ ಹಿಡಿದಿದ್ದಾರೆ.
ವಾಸ್ತವಿಕವಾಗಿ ಮುಸ್ಲಿಮರು ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿಲ್ಲ. ಆದರೆ ಅವರು ಸಮಾಜವು ಇನ್ನಷ್ಟು ಕೋಮುಧ್ರುವೀಕರಣವಾಗುವುದನ್ನು ತಡೆಯುವ ಉದ್ದೇಶದಿಂದ ರಾಜಕೀಯ ಪ್ರಾತಿನಿಧ್ಯದ ಹಕ್ಕನ್ನು ಅವರು ತಾವಾಗಿಯೇ ತ್ಯಜಿಸುತ್ತಿದ್ದಾರೆ. ಅವರು ತಮ್ಮ ಸಾರ್ವಜನಿಕ ಹಾಗೂ ರಾಜಕೀಯ ಅವಕಾಶಗಳಿಂದ ದೂರ ಸರಿಯುತ್ತಿದ್ದಾರೆ. ಬಿಜೆಪಿಯನ್ನು ಹೊರತುಪಡಿಸಿದ ರಾಜಕೀಯ ಪಕ್ಷಗಳು ಕೂಡಾ ಈ ಭೀತಿಯನ್ನು ಬೆಳೆಸಿಕೊಂಡಿವೆ. ಸೋಲಿನ ಭೀತಿಯಿಂದ ಅವು ಕೂಡಾ ಪ್ರಚಲಿತ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವುದರಿಂದ ದೂರವುಳಿದಿವೆ.
ಈ ಹಿಂದೆ ಪ್ರತಿಯೊಬ್ಬರು ತಮ್ಮ ಸಂದೇಹ, ಭೀತಿಯನ್ನು ವ್ಯಕ್ತಪಡಿಸುವಂತಹ ಭಾರತವನ್ನು ಕಂಡಿದ್ದೆ. ನಾಗರಿಕರಾಗಿ ನಮ್ಮ ಆತ್ಮಸಾಕ್ಷಿಯನ್ನು ಮರಳಿ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದೆ ಹೋದಲ್ಲಿ ಶತಮಾನದ ಹೋರಾಟದ ಬಳಿಕ ನಾವು ಪಡೆದುಕೊಂಡಂತಹ ಭಾರತವನ್ನು ನಾವು ಕಳೆದುಕೊಳ್ಳಬೇಕಾದೀತು. ಹಿಂದೂಗಳು ಹಾಗೂ ಮುಸ್ಲಿಮರಿಬ್ಬರೂ ತಾವಾಗಿಯೇ ಭೀತಿಯಿಂದ ಹೊರಬರಬೇಕಾದ ಅಗತ್ಯವಿದೆ. ಇದಕ್ಕಾಗಿ ಅವರು ಮುಖ್ಯವಾಹಿನಿಯ ಮಾಧ್ಯಮಗಳಿಂದ ತಾವಾಗಿಯೇ ಮುಕ್ತಗೊಳ್ಳಬೇಕಾಗಿದೆ.
ಒಂದು ವೇಳೆ ಯಾರಾದರೂ, ರಾಜಕಾರಣಿಗಳ ಭಾಷಣಗಳನ್ನು ಹಾಗೂ ಸುದ್ದಿ ನಿರೂಪಕರ ಉದ್ರಿಕ್ತ ಹಾವಭಾವಗಳನ್ನು ಮತ್ತು ಟಿವಿ ಪರದೆಗಳಲ್ಲಿ ಮೂಡಿಬರುವ ಘೋಷಣೆಗಳನ್ನು ಹಾಗೂ ವಾಟ್ಸ್‌ಆ್ಯಪ್ ಸಂದೇಶಗಳ ಭಾಷೆಗಳನ್ನು ಅಧ್ಯಯನ ಮಾಡಿದರೆ, ಇಲ್ಲಿ ನಿರ್ದಿಷ್ವವಾದ ಮಾನಸಿಕ ಸಂಕೀರ್ಣತೆಯು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಸಾರ್ವಜನಿಕರಂಗದ ವ್ಯಕ್ತಿಗಳು ಯೂಟ್ಯೂಬ್ ಮೂಲಕ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳತೊಡಗಿದ್ದಾರೆ. ಹೊಸಬಗೆಯ ಮಾಧ್ಯಮವೊಂದು ಹೊರಹೊಮ್ಮತೊಡಗಿದೆ. ‘ದಿ ವೈರ್’, ‘ಸ್ಕ್ರೋಲ್’, ‘ದಿ ಕಾರಾವಾನ್’ನಂತಹ ಪತ್ರಿಕೆಗಳು ಈ ನಿಟ್ಟಿನಲ್ಲಿ ದಾಪುಗಾಲಿಡುತ್ತಿವೆ. ದಿ ಟೆಲಿಗ್ರಾಫ್‌ನಂತಹ ಪತ್ರಿಕೆಗಳು ಕೂಡಾ ಇಂತಹ ಪ್ರಯತ್ನ ಮಾಡುತ್ತಿವೆ. ಮಾಧ್ಯಮಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಅರಿತುಕೊಂಡಿರುವವರ ಸಂಖ್ಯೆಯೂ ಹೆಚ್ಚತೊಡಗಿದೆ. ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಮಹಿಳಾ ಪತ್ರಕರ್ತರು ಕೂಡಾ ಈ ನಿಟ್ಟಿನಲ್ಲಿ ಭರವಸೆಯನ್ನು ಮೂಡಿಸಿದ್ದಾರೆ. ಆದರೆ ಅವರು ಎದುರು ಹಾಕಿಕೊಂಡಿರುವ ವ್ಯವಸ್ಥೆಯ ಮುಂದೆ ಈ ಪ್ರಯತ್ನಗಳು ತುಂಬಾ ಸಣ್ಣದು. ಆದರೆ, ಈ ಸಂಕೇತಗಳ ಬಗ್ಗೆ ನನಗೆ ವಿಶ್ವಾಸವಿದೆ.
ಈಗ, ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೆ ಆಧಾರಸ್ತಂಭವಾಗಿ ಉಳಿದಿಲ್ಲ. ಅವು ರಾಜಕೀಯ ಪಕ್ಷವೊಂದರ ಮೊದಲ ಆಧಾರಸ್ತಂಭವಾಗಿ ಬಿಟ್ಟಿದೆ. ಭಾರತದಲ್ಲಿ ಇಂತಹದ್ದೊಂದು ಬೆನ್ನೆಲುಬುರಹಿತ ಮುಖ್ಯವಾಹಿನಿ ಮಾಧ್ಯಮಗಳನ್ನು ಸೃಷ್ಟಿಸಿದ್ದಕ್ಕಾಗಿ ಮೋದಿಜೀ ಹಾಗೂ ಬಿಜೆಪಿಗೆ ಧನ್ಯವಾದಗಳನ್ನು ಹೇಳಬೇಕಾಗಿದೆ. ಸುದ್ದಿವಾಹಿನಿಗಳು 24x7 ಸಮಯವಿಡೀ ತನ್ನ ಬಗ್ಗೆ ಅಪಾರಶ್ರದ್ಧಾಭಕ್ತಿ ಯೊಂದಿಗೆ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ನೋಡಿದಾಗ ಪ್ರಧಾನಿ ಯವರಿಗೆ ಏನೆನಿಸಬಹುದೆಂಬುದು ಎಂಬ ಬಗ್ಗೆ ನನಗೆ ಅಚ್ಚರಿಯಾಗುತ್ತದೆ. ಅವರೇ ಹೇಳಿಕೊಳ್ಳುವ ಹಾಗೆ ಅವರೊಬ್ಬ ಫಕೀರ. ಇಷ್ಟಕ್ಕೂ ಇವೆಲ್ಲದರ ಬಗ್ಗೆ ಫಕೀರ ಯಾಕೆ ತಲೆಕೆಡಿಸಿಕೊಳ್ಳಬೇಕು?
ಕೃಪೆ: thewire