ಯಡಿಯೂರಪ್ಪ ಎಂಬ ಜನನಾಯಕನ ಯಡವಟ್ಟುಗಳು
ಆಡಿಕೊಳ್ಳುವವರ ಮಧ್ಯೆ ಎಡವಿ ಬಿದ್ದಂತೆ ಯಡಿಯೂರಪ್ಪಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ‘‘ಯುದ್ಧದಿಂದಾಗಿ ದೇಶದಲ್ಲಿ ಯುವಜನರೆಲ್ಲಾ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುತ್ತಿದ್ದಾರೆ. ಇದರಿಂದ ನಮಗೆ ಮುಂಬರುವ ಲೋಕಸಭೆಯಲ್ಲಿ 22 ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗಲಿದೆ.’’ ಎಂದು ಮಾಧ್ಯಮದವರ ಮುಂದೆ ಹೇಳಿದ್ದು ವಿವಾದಕ್ಕೆ ಗ್ರಾಸವಾಗಿದೆ.
ಯಡಿಯೂರಪ್ಪಒಳ್ಳೆಯ ಜನಪರ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ತಳಮಟ್ಟದ ರಾಜಕಾರಣದಿಂದ ಬೆಳೆದು ಬಂದ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದರು. ಆದರೆ ಅವರು ಆಗಲೇ ಮಾಡಿಕೊಂಡ ಒಂದಷ್ಟು ಭ್ರಷ್ಟಾಚಾರದ ಯಡವಟ್ಟುಗಳಿಂದಾಗಿ ಸ್ವಪಕ್ಷೀಯರಿಂದಲೇ ಜೈಲಿಗೂ ಹೋಗಿಬರಬೇಕಾದ ಸ್ಥಿತಿ ಉಂಟಾಯಿತು. ಅದರಾಚೆ ಅವರು ಪಕ್ಷದ ನಾಯಕರಾಗಿ ಮುಂದುವರಿದಿದ್ದರೆ ಅವರ ಹೋರಾಟಕ್ಕೊಂದು ಘನತೆಯಿರುತ್ತಿತ್ತು. ಆದರೆ ಪಕ್ಷದ ವಿರುದ್ದ ತಿರುಗಿ ಬಿದ್ದರು. ಅದನ್ನಾದರೂ ಖಡಕ್ಕಾಗಿ ಮಾಡಿದ್ದರೆ ಅವರು ಇನ್ನೂ ಎತ್ತರಕ್ಕೆ ಏರುತ್ತಿದ್ದರು. ಪಕ್ಷ ತ್ಯಜಿಸಿ ಹೊಸ ಪಕ್ಷ ಕಟ್ಟಿ ಅದರಲ್ಲಿ ಯಶಸ್ಸು ಗಳಿಸಿಯೂ ಮತ್ತೆ ತಮ್ಮ ಪಕ್ಷವನ್ನು ವಿಸರ್ಜಿಸಿ ಹಳೆಯ ಮನೆಗೆ ವಾಪಸಾದರು. ಅದೇ ಅವರು ಮಾಡಿದ ತಪ್ಪು. ಇವರ ದೃಷ್ಟಿಯಲ್ಲೇನೋ ಎಲ್ಲವನ್ನು ಕ್ಷಮಿಸಿ ಹಳೇ ಮನೆ ಸೇರಿಕೊಂಡರು. ಆದರೆ ಆ ಹಳೇಮನೆಯವರಿಗೆ ನಿಜಕ್ಕೂ ಇವರು ಬೇಕಿರಲಿಲ್ಲ. ಇವರು ಆಚೆ ಇದ್ದರೆ ತಮಗೆ ಅಪಾಯ ಎಂದರಿತು ನಯವಾಗಿ ಒಳಗೆಳೆದುಕೊಂಡರು. ಅಲ್ಲಿಗೆ ಅವರಿಗೆ ಆಗಬಹುದಾದ ಅಪಾಯದಿಂದ ತಪ್ಪಿಸಿಕೊಂಡರು. ಆದರೆ ಯಡಿಯೂರಪ್ಪನವರನ್ನು ಮಾತ್ರ ಮುಖ್ಯಮಂತ್ರಿಯ ಹುದ್ದೆಯ ಮೇಲೆ ಛೂ ಬಿಡುತ್ತಾ ಪದೇ ಪದೇ ಮೂರ್ಖರಾಗಿಸತೊಡಗಿದರು.
ರಾಜ್ಯದ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯದಿದ್ದರೂ ಅತಿಹೆಚ್ಚು ಸ್ಥಾನಗಳಿಸಿದ್ದನ್ನೇ ಮಾನದಂಡವಾಗಿಟ್ಟುಕೊಂಡು ಕೇಂದ್ರದ ನಾಯಕರು ರಾಜ್ಯಪಾಲರ ಮೂಲಕ ಯಡಿಯೂರಪ್ಪನವರನ್ನು ತರಾತುರಿಯಲ್ಲಿ ಮುಖ್ಯಮಂತ್ರಿಯಾಗುವಂತೆ ನೋಡಿಕೊಂಡರು. ಆದರೆ ಕೇಂದ್ರದ ನಾಯಕರಿಗೆ ಗೊತ್ತಿತ್ತು ಇದು ಊರ್ಜಿತವಾಗುವುದಿಲ್ಲ ಎಂದು. ಕಾಂಗ್ರೆಸ್ ಮತ್ತು ಜಾ.ದಳ ಸೇರಿದರೆ ಅವರ ಕೈ ಮೇಲಾಗುತ್ತದೆಂಬ ಅರಿವಿದ್ದೂ ಆಪರೇಶನ್ ಮೂಲಕ ಶಾಸಕರನ್ನು ಸೆಳೆಯಬಹುದೆಂಬ ಆತ್ಮವಿಶ್ವಾಸದಲ್ಲಿ ಯಡಿಯೂರಪ್ಪನವರನ್ನು ದಿಕ್ಕುತಪ್ಪಿಸಿದರು. ಸದನದಲ್ಲಿ ವಿಶ್ವಾಸಮತ ಯಾಚಿಸುವ ಮುನ್ನವೇ ಯಡಿಯೂರಪ್ಪತಲೆತಗ್ಗಿಸಿ ಅಧಿಕಾರ ತ್ಯಜಿಸಬೇಕಾದ ಪರಿಸ್ಥಿತಿ ಬಂತು.
ಇದಾದ ನಂತರವೂ ಕೇಂದ್ರದ ನಾಯಕರು ಆಪರೇಶನ್ ಕಮಲದ ಮೂಲಕ ಯಡಿಯೂರಪ್ಪನವರ ಮುಖ್ಯಮಂತ್ರಿ ಆಸೆಗೆ ನೀರೆರೆಯುತ್ತಲೇ ಹೋದರು ಮತ್ತೆ ಮತ್ತೆ ಮುಖಭಂಗಗೊಳಿಸಿದರು. ಇದರ ಅರಿವಿದ್ದೂ ಮೊನ್ನೆ ಯಡಿಯೂರಪ್ಪನವರು ಮತ್ತೆ ಆಪರೇಶನ್‌ಗೆ ಒಳಗಾಗಿ ಜಾ.ದಳದ ಶಾಸಕರೊಬ್ಬರ ಬಳಿ ಧ್ವನಿಮುದ್ರಿಕೆಯಲ್ಲಿ ತಗಲ್ಹಾಕಿಕೊಂಡರು. ಒಮ್ಮೆ ಆವೇಶದಲ್ಲಿ ‘‘ಅದು ನಾನಲ್ಲ’’ ಎಂದರು. ಮತ್ತೆ ‘‘ಅದು ನನ್ನದೇ’’ ಅಂದರು. ಅದೊಂದು ದೊಡ್ಡ ಯಡವಟ್ಟಿಗೆ ಕಾರಣವಾಗಿ ಸದನಕ್ಕೂ ಬ್ರೇಕಿಂಗ್ ನ್ಯೂಸ್ ಹುಚ್ಚು ಹತ್ತಿಸಿಕೊಂಡಿರುವ ಟಿಆರ್‌ಪಿ ಮಾಧ್ಯಮಗಳ ಬಾಯಿಗೆ ವಿನಾಕಾರಣ ತುತ್ತಾದರು. ರಾಜ್ಯದ ಜನರೆದುರು ನಗೆಪಾಟಲಿಗೀಡಾದರು. ಹೀಗೆ ಯಡಿಯೂರಪ್ಪನವರನ್ನು ಬೇಕೆಂದೇ ಅವರ ಪಕ್ಷದ ಒಳಗಿನ ನಾಯಕರೇ ನಗೆಪಾಟಲಿಗೀಡು ಮಾಡುತ್ತಿದ್ದಾರೆ ಎಂದು ಹಲವರು ಹೇಳುತ್ತಾರೆ. ಅದಕ್ಕೆ ಕಾರಣ ಅವರ ಪಕ್ಷದ ಅನೇಕರು ಯಡಿಯೂರಪ್ಪನವರ ನಾಯಕತ್ವವನ್ನು ನೇರವಾಗಿಯೇ ವಿರೋಧಿಸುತ್ತಾರೆ. ಇನ್ನು ಕೆಲವರು ಒಳಗೊಳಗೇ ತಂತ್ರಗಾರಿಕೆ ಮಾಡಿ ಅವರ ವ್ಯಕ್ತಿತ್ವವನ್ನು ಕುಬ್ಜಗೊಳಿಸಿದ್ದಾರೆ. ಅದೆಲ್ಲವೂ ಯಡಿಯೂರಪ್ಪನವರಿಗೆ ಗೊತ್ತಿಲ್ಲವೆಂದಲ್ಲ. ಆದರೆ ಗೊತ್ತಿದ್ದೂ ಅವರು ನಾನು ಕಟ್ಟಿದ ಮನೆಯಿಂದ ನಾನೇಕೆ ಹೊರಹೋಗಲಿ ಅಥವಾ ನನ್ನಿಂದಾಗಿ ಬೆಳೆದವರೆದುರು ನಾನೇಕೆ ತಲೆ ತಗ್ಗಿಸಲಿ ಎಂಬ ಕಾರಣಕ್ಕೆ ಅವರೂ ಒಂಥರ ಮೊಂಡುಹಠಕ್ಕೆ ಬಿದ್ದಿದ್ದಾರೆ. ನಿಜಹೇಳಬೇಕೆಂದರೆ ಬಿಜೆಪಿ ಅಂದರೆ ಯಡಿಯೂರಪ್ಪ, ಯಡಿಯೂರಪ್ಪಎಂದರೆ ಬಿಜೆಪಿ ಎಂಬುದು ಕರ್ನಾಟಕದ ಮಟ್ಟಿಗೆ ಅತಿಶಯದ ಮಾತಲ್ಲ. ಬಿಜೆಪಿ ಮೈನಸ್ ಯಡಿಯೂರಪ್ಪ ಏನು? ಎಂಬುದು ಕಳೆದ ಚುನಾವಣೆಯ ಫಲಿತಾಂಶದಲ್ಲಿ ಗೊತ್ತಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ಇಂತಹ ಶಕ್ತಿ ತಂದುಕೊಟ್ಟ ಕೀರ್ತಿ ಯಾವ ಹಿಂದೂ ಸಂಘಟನೆಗಳಿಗಾಗಲಿ, ಆರೆಸ್ಸೆಸ್‌ಗಾಗಲಿ ಸಲ್ಲದು. ಅದು ನಿಸ್ಸಂಶಯವಾಗಿ ಯಡಿಯೂರಪ್ಪನವರಿಗೇ ಸಲ್ಲಬೇಕು. ಅಂತಹ ಯಡಿಯೂರಪ್ಪನವರನ್ನು ಬಿಜೆಪಿಯ ಕೆಲ ನಾಯಕರು ಮೂರ್ಖರಾಗಿಸಹೊರಟಿದ್ದಾರೆ. ಕಾಲೆಳೆಯುತ್ತಿದ್ದಾರೆ. ಅದಕ್ಕೆ ತಕ್ಕ ಶಾಸ್ತಿಯನ್ನೂ ಬಿಜೆಪಿ ಮುಂದೆ ಅನುಭವಿಸಬೇಕಾದೀತು.
ಹೀಗೆ ಆಡಿಕೊಳ್ಳುವವರ ಮಧ್ಯೆ ಎಡವಿ ಬಿದ್ದಂತೆ ಯಡಿಯೂರಪ್ಪಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ‘‘ಯುದ್ಧದಿಂದಾಗಿ ದೇಶದಲ್ಲಿ ಯುವಜನರೆಲ್ಲಾ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುತ್ತಿದ್ದಾರೆ. ಇದರಿಂದ ನಮಗೆ ಮುಂಬರುವ ಲೋಕಸಭೆಯಲ್ಲಿ 22 ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗಲಿದೆ.’’ ಎಂದು ಮಾಧ್ಯಮದವರ ಮುಂದೆ ಹೇಳಿದ್ದು ವಿವಾದಕ್ಕೆ ಗ್ರಾಸವಾಗಿದೆ. ಅಂದರೆ ಮುಂಬರುವ ಲೋಕಸಭೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯುದ್ಧ ನಡೆಸಲಾಗುತ್ತಿದೆ ಎಂಬಂತಾಯಿತು ಅಥವಾ ಈ ಯುದ್ಧವನ್ನು ನಾವು ಹೆಚ್ಚು ಸ್ಥಾನಗಳಿಸಲು ಸಹಕಾರಿಯಾಗಿಸಿಕೊಳ್ಳುತ್ತೇವೆ ಎಂಬುದು ಅವರ ಮಾತಿನ ವರಸೆಯಾಗಿತ್ತು. ಇದೀಗ ಅವರು ಮಾತಾಡಿರುವ ಈ ವೀಡಿಯೋ ವೈರಲ್ ಆಗಿದ್ದು ಪಾಕಿಸ್ತಾನದಲ್ಲೂ ಚರ್ಚೆಯ ವಿಷಯವಾಗಿದೆ! ಪಾಕಿಸ್ತಾನದ ಸುದ್ದಿಮಾಧ್ಯಮಗಳಲ್ಲಿ ಯಡಿಯೂರಪ್ಪನವರ ಈ ಮಾತುಗಳು ಚಾಲ್ತಿಪಡೆದುಕೊಂಡಿವೆ. ಜಾಲತಾಣದಲ್ಲಿ ಹೆಚ್ಚೆಚ್ಚು ಟ್ರೋಲ್ ಆಗುತ್ತಿದೆ.
ಒಮ್ಮೆ ಪೂರ್ಣಕಾಲಿಕ ಮುಖ್ಯಮಂತ್ರಿ ಹುದ್ದೆ ಅನುಭವಿಸಿದ ಮೇಲೆ ಅದರ ಆಸೆಯನ್ನು ಯಾವುದೇ ಪಕ್ಷದ ನಾಯಕರು ತೊರೆದು ಬಿಡಬೇಕು. ಅವರ ಮುಂದಿನ ತಲೆಮಾರಿನ ನಾಯಕರನ್ನು ನೆರಳಾಗಿ ನಿಂತು ಬೆಳೆಸಬೇಕು. ಅವರು ಮುಂದಿನ ಸ್ಥಾನಕ್ಕೆ ಏರಬೇಕು. ಅದಾಗದಿದ್ದರೆ, ಪಕ್ಷದಲ್ಲಿ ಗೌರವಯುತ ಸ್ಥಾನಪಡೆದು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಾ ತಮ್ಮ ತಮ್ಮ ಶಕ್ತಿ ತೋರಿಸುತ್ತಾ ಘನತೆಯನ್ನು ಉಳಿಸಿಕೊಳ್ಳಬೇಕು. ಯಡಿಯೂರಪ್ಪನವರಿಗೆ ಹಿರಿತನ ಬಂದಿದೆ. ಅವರು ಮಾಡಿರುವ ಹೋರಾಟಗಳ ಮೂಲಕ ಜನ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಆದ್ದರಿಂದ ರಾಜಕಾರಣದಲ್ಲಿ ಮುತ್ಸದ್ದಿತನ ತೋರಿಸುತ್ತಾ ಉಳಿದವರಿಗೆ ಮಾರ್ಗದರ್ಶನ ಮಾಡುತ್ತಾ ಮಾದರಿಯಾದರೆ ಅವರ ವ್ಯಕ್ತಿತ್ವಕ್ಕೆ ಬೆಲೆಬರುತ್ತದೆ.
kmcparivarthana@gmail.com