ಫಾರಿನ್ ಪೆಟ್ಟಿಗೆ

Update: 2019-03-03 08:07 GMT

ವರ್ಷಪೂರ್ತಿ ನಮ್ಮನ್ನು ಖುಷಿಯಾಗಿಡುವಂತಹ ಅನೇಕ ವಿಷಯಗಳಲ್ಲಿ ಎಲ್ಲಕ್ಕಿಂತಲೂ ಮಿಗಿಲಾಗಿರುತ್ತಿದ್ದುದ್ದು ವಿದೇಶದಿಂದ ಅಪ್ಪ ಬರುವ ವಿಷಯ! ಆ ವಿಷಯ ಪಕ್ಕದ ಮನೆಯ ದೂರವಾಣಿಯಿಂದ ಅಜ್ಜಿಯ ಕಿವಿಗೆ ಬಿದ್ದು, ಅಲ್ಲಿಂದ ಅಮ್ಮನ ಕಿವಿಗೆ, ನಂತರ ನಮ್ಮ ಕಿವಿಗೆ ಬೀಳುತ್ತಿದ್ದರೂ ಹೇಳುವ ಭಾವ ಲಯಗಳಲ್ಲಿ ಯಾವುದೇ ವ್ಯತ್ಯಾಸ ಇರುತ್ತಿರಲಿಲ್ಲ. ಅಪ್ಪ ಎಂಬ ಕಲ್ಪನಾಮೂರ್ತಿ ನಮ್ಮ ಜೊತೆಗೂಡುತ್ತಿದ್ದಾರೆಂಬ ಸುದ್ದಿ ಸಿಕ್ಕಿದ ನಂತರ ಹಗ್ಗ ಬಿಚ್ಚಿದ ಕರುಗಳಂತೆ ನಮ್ಮ ಕುಣಿತವೋ ಕುಣಿತ!ಮನೆಯವರೂ ಇದೇ ಖುಷಿಯಲ್ಲಿರುತ್ತಿದ್ದರಾದ್ದರಿಂದ ನಮಗೆ ಅವರಿಂದ ಸಿಹಿ ಬೈಗುಳಗಳಷ್ಟೇ ಸಿಗುತ್ತಿದ್ದವು. ಹೀಗೆ ಅಪ್ಪ ಬರುವ ದಿನಗಳನ್ನು ನಿಮಿಷ ಗಂಟೆಗಳೊಂದಿಗೆ ಲೆಕ್ಕಹಾಕುತ್ತಿದ್ದ ನಾವು ಗಳಿಗೆಗೊಮ್ಮೆ ನೆನಪಿಸಿಕೊಳ್ಳುತ್ತಿದ್ದುದು ಅಪ್ಪ ಬರುವ ದೃಶ್ಯ ಮತ್ತು ಅಪ್ಪನ ಹಿಂದೆ ಡ್ರೈವರ್ ಮಾಮ ಹೊತ್ತುಕೊಂಡು ಬರುತ್ತಿದ್ದ ದೊಡ್ಡ ಪೆಟ್ಟಿಗೆ. ಆ ಪೆಟ್ಟಿಗೆಯೊಳಗಡಗಿದ್ದ ನಮ್ಮ ಕುತೂಹಲದ ಖಜಾನೆಗಳು. 

ವಿದೇಶದಿಂದ ಫೋನು ಮಾಡಿ ನಮ್ಮಿಂದಿಗೆ ಮಾತನಾಡುವಾಗೆಲ್ಲಾ ಕೊನೆಗೆ ಅಪ್ಪ ಕೇಳುತ್ತಿದ್ದ ಪ್ರಶ್ನೆ’ ಬರುವಾಗ ನಿಮಗೇನು ತರಬೇಕು?, ಈ ಪ್ರಶ್ನೆಗೆ ಫೋನು ಬರುವ ಮುಂಚೆಯೇ ಉತ್ತರ ತಯಾರಿಸಿಟ್ಟುಕೊಳ್ಳುತ್ತಿದ್ದಿದ್ದರಿಂದ ಒಂದೇ ಉಸಿರಿನಲ್ಲಿ ದೊಡ್ಡ ಪಟ್ಟಿಯನ್ನು ತಪ್ಪಿಲ್ಲದೆ ಉಸುರುತ್ತಿದ್ದೆವು. ಆದ್ದರಿಂದಲೇ ಅಪ್ಪನ ಜೊತೆಗೆ ಬರುತ್ತಿದ್ದ ಪೆಟ್ಟಿಗೆಯೆಂದರೆ ನಮಗೆಲ್ಲಾ ಆಕರ್ಷಣೆಯ ಕೇಂದ್ರಬಿಂದು. ಅಪ್ಪ ಅದರೊಳಗೆ ತುಂಬಿಸಿಕೊಂಡು ಬರುತ್ತಿದ್ದ ಸ್ವದೇಶದಿಂದ ವಿದೇಶಕ್ಕೆ ಹೋದ ಬಣ್ಣ ಬಣ್ಣದ ವಸ್ತುಗಳು, ಸೋಪು, ಶ್ಯಾಂಪು, ಸ್ಪ್ರೇಗಳು, ಕೀ ಕೊಡುವ, ರಿಮೋಟ್‌ನಿಂದ ಓಡುವ ಆಟಿಕೆಗಳು. ನಾನಾ ರುಚಿಯುಳ್ಳ ಚಾಕಲೇಟುಗಳು. ರಂಗುರಂಗಿನ ಬಟ್ಟೆಗಳು. ಒಂದೇ? ಎರಡೇ?. ಇನ್ನು ಅಪ್ಪ ಬರುವ ತನಕ ನಮ್ಮ ಕನಸು ಮನಸುಗಳಲ್ಲೆಲ್ಲಾ ಈ ವಸ್ತುಗಳೇ!. ನನಗ್ಯಾವ ವಸ್ತು? ನಿನಗ್ಯಾವ ವಸ್ತು? ಎಂದು ಅಪ್ಪ ಬರುವ ಮೊದಲೇ ನಮ್ಮ ನಮ್ಮಾಳಗೆ ಮೊದಲ ಸುತ್ತಿನ ಹಂಚಿಕೆಯ ಕಾರ್ಯವೂ ನಡೆಯುತ್ತಿತ್ತು.

ಇದಕ್ಕೆಲ್ಲಾ ಅಂತ್ಯ ಹಾಡಲು ಅಪ್ಪನೇ ಬರಬೇಕಾಗಿತ್ತು ಹಾಗೂ ಹೀಗೂ ದಿನಕಳೆದೇ ಹೋಗಿ ಅಪ್ಪ ಬಂದ ಮೊದಲ ದಿನವಂತೂ ನಮ್ಮ ಸಂತಸ ಹೇಳತೀರದು. ಅಪ್ಪನ ಕೈ ಹಿಡಿದೇ ಸುತ್ತುತ್ತಾ ಬಾಯಿ ಪಸೆ ಆರಿಹೋಗುವ ತನಕವೂ ಬರೀ ಮಾತೇ ಮಾತು. ಇದರ ನಡು ನಡುವೆ ಅಪ್ಪ ತಂದ ಇನ್ನೂ ಬಾಯ್ದೆರೆಯದ ಪೆಟ್ಟಿಗೆಯನ್ನು ಆಸೆ ಮತ್ತು ಆಶ್ಚರ್ಯ ತುಂಬಿದ ಕಣ್ಗಳಿಂದ ಇಣುಕುತ್ತಿದ್ದದ್ದು ಬೇರೆ. ಆದರೆ ಅಪ್ಪ ಮಾತ್ರ ಬಂದ ದಿನವೇ ಪೆಟ್ಟಿಗೆಯನ್ನು ತೆರೆಯದೇ ಅದನ್ನು ಮರುದಿನಕ್ಕೆ ಮುಂದೂಡಿ ನಮ್ಮ ಪ್ರೀತಿಗೆ ಪರೋಕ್ಷವಾಗಿ ಉರಿಯಾಗುತ್ತಿದ್ದರು. ಅಮ್ಮನಲ್ಲಿ ಶಿಫಾರಸು ಮಾಡಿದರೂ ಪ್ರಯೋಜನವಾಗುತ್ತಿರಲಿಲ್ಲವಾಗಿ ಅಪ್ಪ ಬಂದ ಮೇಲೆ ’ಅಮ್ಮ ಅಪ್ಪನ ಕಡೆಗೇ’ ಎಂಬ ತೀರ್ಮಾನಕ್ಕೆ ನಾವು ಬರುವಂತೆ ಮಾಡುತ್ತಿತ್ತು. ಆ ನಾಳೆಯನ್ನು ಕರೆತರುವ ರಾತ್ರಿಯ ಬೆನ್ನೇರಿ, ಕಣ್ಣು ಮುಚ್ಚುತ್ತಾ ಬಿಡುತ್ತಾ ಸೂರ್ಯೋದಯದ ಊರನ್ನು ತಲುಪಿ ನಿದ್ದೆತರಿಸದ ರಾತ್ರಿಯನ್ನು ಖುಷಿಯಿಂದ ಬೀಳ್ಕೊಟ್ಟು ನಮ್ಮ ಮಾನಸಿಕ ಜೀವವನ್ನೇ ತುಂಬಿಕೊಂಡಿದ್ದ ಪೆಟ್ಟಿಗೆಯ ಬಳಿ ಓಡಿ ಹೋಗಿ ಕುಳಿತುಕೊಂಡು ಬಿಡುತ್ತಿದ್ದೆವು. ಪೆಟ್ಟಿಗೆಯ ಮೇಲೆ ಕಟ್ಟಿದ್ದ ಹಗ್ಗ ಮತ್ತು ಅಂಟು ಟೇಪುಗಳನ್ನು ಕಷ್ಟಪಟ್ಟು ಕಿತ್ತು ಪೆಟ್ಟಿಗೆ ತೆರೆಯುವ ಕೆಲಸವನ್ನು ಇನ್ನಷ್ಟು ಸುಲಭವಾಗಿಸುತ್ತಿದ್ದೆವು.

ಒಮ್ಮೆ ಪೆಟ್ಟಿಗೆ ತೆರೆಯಿರಿ. ಆ ಮಕ್ಕಳು ಎಷ್ಟೊಂದು ಆಸೆ ಪಡ್ತವೆ ಅಮ್ಮ ಅಪ್ಪನಲ್ಲಿ ಹೀಗೆ ಹೇಳುತ್ತಿದ್ದರೆ ನಾವು ಆಸೆ ಕಣ್ಗಳಿಂದ ಪೆಟ್ಟಿಗೆಯ ಬಳಿಯೇ ಕುಳಿತು ಕೌಂಟ್ ಡೌನ್ ಶುರುಮಾಡುತ್ತಿದ್ದೆವು. ಅಪ್ಪ ಬಂದು ನಾವು ತೆರೆದ ಅರ್ಧ ಪೆಟ್ಟಿಗೆಯನ್ನು ಪೂರ್ಣವಾಗಿ ತೆರೆಯುತ್ತಿದ್ದಂತೆ ವಿಶ್ವದ ಎಲ್ಲಾ ಅದ್ಭುತಗಳನ್ನೂ ಒಟ್ಟಾಗಿ ನೋಡುವಂತೆ ನಾವು ಪೆಟ್ಟಿಗೆಯೊಳಗೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುತ್ತಿದ್ದೆವು. ಅಪ್ಪ ನಮಗಾಗಿ ತಂದ ನಾವು ಹಿಂದೆಂದೂ ಕಂಡಿಲ್ಲದ ವಸ್ತುಗಳನ್ನು ಕೈ, ಮೈ, ಬಾಯಿ ತುಂಬಾ ತುಂಬಿಸಿಕೊಂಡು ಕೋಣೆಗೆ ಓಡುತ್ತಿದ್ದೆವು. ಅದೊಂದು ಸಲ ಅಪ್ಪ ನನಗೆ ತಂದಿದ್ದ ಮೇಕಪ್ ಕಿಟ್‌ನಲ್ಲಿದ್ದ ಕಡ್ಡಿಯಂತಿದ್ದ ವಸ್ತುವನ್ನು ಏನು? ಏಕೆ? ಹೇಗೆ ? ಎಂದೆಲ್ಲಾ ಯೋಚಿಸದೆ ಕಣ್ಣಿಗೆ ಹಚ್ಚಿಕೊಂಡು ‘ಉರಿ’ ‘ಉರಿ’ ಎಂದು ಬೊಬ್ಬಿಡುತ್ತಾ ಅಲ್ಲೇ ಕೈಗೆ ಸಿಕ್ಕಿದ ಅಪ್ಪ ಮಡಚಿಟ್ಟಿದ್ದ ಪಂಚೆಯಲ್ಲಿ ಕಣ್ಣನ್ನು ಉಜ್ಜಿಕೊಂಡು ಪಂಚೆಯನ್ನು ಹಾಳುಮಾಡಿದ್ದೆ. ಅದೇ ದಿನ ನನ್ನ ತಮ್ಮ ಸ್ಪ್ರೇಯನ್ನು ಕಣ್ಣಿಗೆ ಹಾರಿಸಿಕೊಂಡು ಉರಿ ತಾಳಲಾರದೆ ಕಣ್ಮುಚ್ಚಿಕೊಂಡೇ ಮನೆ ಸುತ್ತಾ ಓಡಿದ್ದ. ‘ಇಂತದನ್ನೆಲ್ಲಾ ಇನ್ಮುಂದೆ ತರ್ಬೇಡಿ’ ಅಮ್ಮನ ಬೊಬ್ಬೆಗೆ ಅಪ್ಪ ಇದೆಂತ ಮಕ್ಕಳಪ್ಪ ಎಂದು ಅಂದುಕೊಳ್ಳದೇ ಇರಲಿಕ್ಕಿಲ್ಲ! ನೀವು ಮಾತ್ರ ಹೀಗೆ ಮಾಡುವುದು. ಬೇರೆ ಯಾವ ಮಕ್ಕಳೂ ಹೀಗೆಲ್ಲಾ ಮಾಡುವುದಿಲ್ಲ. ಅಪ್ಪ ಹೀಗೆ ನಮ್ಮನ್ನು ಜೋರು ಮಾಡುತ್ತಿದ್ದರೆ ನನಗೂ ಹೌದೇನೋ ಅಂತ ಅನ್ನಿಸ್ತಾ ಇತ್ತು. ಆದರೂ ನಮ್ಮ ದೂರದ ಸಂಬಂಧಿಯವರ ಮನೆ ಕಥೆ ಕೇಳಿದ ಮೇಲೆ ನಾವೇ ಪರವಾಗಿಲ್ಲ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೆ. ಅಲ್ಲಿ ಅವರು ವಿದೇಶದಿಂದ ಬಂದ ದಿನವೇ ಅವರ ಅಕ್ಕಂದಿರಿಬ್ಬರಿಗೆ ಪೆಟ್ಟಿಗೆ ತೆರೆದು ವಸ್ತುಗಳನ್ನು ಕೊಟ್ಟ ಮೇಲೆ ಒಬ್ಬರು ಇವರ ಮೇಲೆ ಅಸಮಾಧಾನಗೊಂಡಿದ್ದರಂತೆ. ಅವರು ತಂದಿದ್ದ ವಸ್ತುಗಳ ’ಮೌಲ್ಯ’ ವ್ಯತ್ಯಾಸವೇ ಇದಕ್ಕೆ ಕಾರಣವಾಗಿದ್ದಂತೆ.

ತೆರೆದ ನಂತರ ಪೆಟ್ಟಿಗೆ....

ಇಬ್ಬರೂ ನಿಂತರು ಪೆಟ್ಟಿಗೆ!

ಎಂದು ಹೇಳುತ್ತಾ ಅವರೂ ನಕ್ಕು ನಮ್ಮನ್ನೂ ನಗಿಸಿದ್ದು ಈಗಲೂ ನೆನಪಿದೆ. ಈ ಪೆಟ್ಟಿಗೆಯಿಂದಾಗಿ ಅದೆಷ್ಟೋ ಗೆಳೆತನ, ಸಂಬಂಧಗಳಲ್ಲಿ ಬಿರುಕು ಉಂಟಾಗಿ ಅದು ಸರಿಯಾಗಲು ಮುಂದಿನ ಸಲದ ಪೆಟ್ಟಿಗೆ ಬರಬೇಕಾಗಿತ್ತು. ಒಮ್ಮೆ ನನ್ನ ಅಪ್ಪನ ಗೆಳೆಯರೊಬ್ಬರು ಪೆಟ್ಟಿಗೆಯ ವಿಷಯವಾಗಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಜನಸಂಖ್ಯೆ ಜಾಸ್ತಿ ಇದ್ದು ಪೆಟ್ಟಿಗೆ ತೆರೆಯುವಾಗ ಒಬ್ಬರೂ ಗೈರಾಗುತ್ತಿರಲಿಲ್ಲವಂತೆ. ಅಷ್ಟೂ ಜನರಿಗೆ ವಸ್ತುಗಳನ್ನು ಹಂಚುವಾಗ ಸಾಕುಬೇಕಾಗಿ ಹೋಗುತ್ತಿತ್ತಂತೆ. ಪೆಟ್ಟಿಗೆ ಖಾಲಿ ಮಾಡಿ ಮುಚ್ಚುವಾಗ ಅಸಮಾಧಾನದ ಕುರುಹುಗಳು ಬಿಚ್ಚಿಕೊಳ್ಳುತ್ತಿತ್ತಂತೆ. ಅದಕ್ಕೇ ಅವರು ‘ಇನ್ನೊಮ್ಮೆ ಬರುವಾಗ ದೊಡ್ಡ ಗಾತ್ರದ ಪ್ಲಾಸ್ಟಿಕ್ ಹಾವೊಂದನ್ನು ಪೆಟ್ಟಿಗೆಯೊಳಗೆ ತುಂಬಿಸಿಕೊಂಡು ಬರಬೇಕು. ಪೆಟ್ಟಿಗೆ ತೆರೆದಾಗ ಅಲ್ಲಿನ ಸನ್ನಿವೇಶ ಹೇಗಿರಬಹುದು? ಯೋಚಿಸಿ ಎಂದು ಅಪ್ಪನಲ್ಲಿ ಹೇಳುತ್ತಾ ಜೋರಾಗಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಇಷ್ಟೆಲ್ಲಾ ಆದರೂ ಪೆಟ್ಟಿಗೆಯ ಮೇಲಿನ ಆಕರ್ಷಣೆ ಬಾಲ್ಯದಲ್ಲಿ ಸಹಜ ಎಂಬ ಕೆಲವರ ಮಾತಿಗೆ ನಾನು ತದ್ವಿರುದ್ಧ. ನನ್ನ ಈ ಸ್ವಭಾವ ನನ್ನ ತಮ್ಮನಿಗೆ ಚೆನ್ನಾಗಿ ಗೊತ್ತಿರುವುದರಿಂದ ಈಗಲೂ ಅವನು ವಿದೇಶದಿಂದ ಮನೆಗೆ ಬಂದಾಗ ನಾನು ಹೋಗದೆ ಪೆಟ್ಟಿಗೆ ತೆರೆಯುವುದಿಲ್ಲ!

ಮುಗಿಸುವ ಮುನ್ನ,

ಬರುವಾಗ ವಿದೇಶದಿಂದ

ಮನಸು ಹಗುರ ಪೆಟ್ಟಿಗೆ ಭಾರ

ಮರಳುವಾಗ ವಿದೇಶಕ್ಕೆ

ಪೆಟ್ಟಿಗೆ ಹಗುರ ಮನಸು ಭಾರ!

Writer - ಹಸೀನ ಮಲ್ನಾಡ್

contributor

Editor - ಹಸೀನ ಮಲ್ನಾಡ್

contributor

Similar News