ಶಹೀದ್ ಭಗತ್ ಸಿಂಗ್‌ರ ಕೊನೆಯ ಬೇಡಿಕೆ
ಲಾಹೋರ್ ಜೈಲ್ 1931.
ಗೆ: ಪಂಜಾಬ್ ರಾಜ್ಯಪಾಲರಿಗೆ.
ಸರ್, ಗೌರವಾದರಗಳೊಂದಿಗೆ ನಿಮ್ಮ ಗಮನಕ್ಕೆ ಈ ಕೆಳಗಿನ ವಿಷಯಗಳನ್ನು ತರಲು ಬಯಸುತ್ತೇನೆ: ಭಾರತದ ಬ್ರಿಟಿಷ್ ಸರಕಾರದ ಮುಖ್ಯಸ್ಥ ಮಾನ್ಯ ವೈಸ್‌ರಾಯ್ ಘೋಷಿಸಿದ ವಿಶೇಷ ಲಾಹೋರ್ ಒಳಸಂಚು ಪ್ರಕರಣ ಅಧ್ಯಾದೇಶದಡಿ 1930ರ ಅಕ್ಟೋಬರ್ 7ರಂದು ಎಲ್‌ಸಿಸಿ ಟ್ರಿಬ್ಯುನಲ್ ಬ್ರಿಟಿಷ್ ನ್ಯಾಯಾಲಯವು ನಮಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಇಂಗ್ಲೆಂಡಿನ ಆದರಣೀಯ ದೊರೆ ಜಾರ್ಜ್ ವಿರುದ್ಧ ಯುದ್ಧ ಸಾರಿರುವುದು ನಮ್ಮ ಮೇಲಿರುವ ಮುಖ್ಯ ಆರೋಪವಾಗಿದೆ. ನ್ಯಾಯಾಲಯದ ಈ ಘೋಷಣೆ ಎರಡು ಪೂರ್ವ ಕಲ್ಪನೆಯನ್ನು ಸೂಚಿಸುತ್ತದೆ: ಮೊದಲನೆಯದಾಗಿ , ಇಲ್ಲಿ ಭಾರತ ರಾಷ್ಟ್ರ ಹಾಗೂ ಬ್ರಿಟಿಷ್ ರಾಷ್ಟ್ರದ ನಡುವೆ ಯುದ್ಧ ನಡೆಯುತ್ತಿತ್ತು ಮತ್ತು, ಎರಡನೆಯದಾಗಿ ನಾವು ಈ ಯುದ್ಧದಲ್ಲಿ ಪಾಲ್ಗೊಂಡಿರುವ ಕಾರಣ ಯುದ್ಧ ಕೈದಿಗಳಾಗಿದ್ದೇವೆ. ಎರಡನೆಯ ಕಾರಣ ತುಸು ಮಟ್ಟಿಗೆ ಮುಖಸ್ತುತಿಯಂತಿದೆ. ಮೊದಲನೆಯ ವಿಷಯವನ್ನು ಹೆಚ್ಚು ವಿವರವಾಗಿ ಹೇಳಲು ನಮಗೆ ನಿರ್ಬಂಧವಿದೆ. ವಾಕ್ಯಗಳಲ್ಲಿರುವ ಪದಗಳೇ ತಿಳಿಸುವಂತೆ ಅಲ್ಲಿ ಯುದ್ಧ ನಡೆಯುತ್ತಿರಲಿಲ್ಲ ಎಂಬುದು ಸ್ಪಷ್ಟ. ಅದೇನಿದ್ದರೂ ಪೂರ್ವಕಲ್ಪನೆಯ ಪರಿಮಿತಿಯನ್ನು ಒಪ್ಪಿಕೊಂಡು ಈ ಬಗ್ಗೆ ಹೆಚ್ಚಿನ ವಿವರಣೆ ನೀಡಬೇಕಿದೆ.
ಎಲ್ಲಿಯವರೆಗೆ ಭಾರತದ ಶ್ರಮಿಕ ಜನಸಾಮಾನ್ಯರನ್ನು ಹಾಗೂ ಪಾಕ್ರತಿಕ ಸಂಪನ್ಮೂಲಗಳನ್ನು ಬೆರಳೆಣಿಕೆಯಷ್ಟು ಪರಾವಲಂಬಿ ಜೀವಿಗಳು ಶೋಷಣೆ ಮಾಡುತ್ತಿರುತ್ತಾರೋ ಅದುವರೆಗೂ ಈ ಯುದ್ಧದ ಪರಿಸ್ಥಿತಿ ಇರುತ್ತದೆ. ಇವರು ಅಸಲಿ ಬ್ರಿಟಿಷ್ ಬಂಡವಾಳಶಾಹಿಗಳು ಆಗಿರಬಹುದು ಅಥವಾ ಬ್ರಿಟಿಷ್ ಮತ್ತು ಭಾರತೀಯ ಬಂಡವಾಳಶಾಹಿಗಳ ಮಿಶ್ರಣವಾಗಿರಬಹುದು. ಬ್ರಿಟಿಷರು ಅಥವಾ ಬ್ರಿಟಿಷರು ಭಾರತೀಯ ಅಧಿಕಾರಶಾಹಿಗಳೊಂದಿಗೆ ಸೇರಿ ಪ್ರಯೋಗಮಾರ್ಗದ ಮೂಲಕ ತಮ್ಮ ವಂಚನೆಯ ಶೋಷಣೆಯನ್ನು ನಡೆಸುತ್ತಿರಬಹುದು. ಈ ಎಲ್ಲಾ ವಿಷಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಸಣ್ಣಪುಟ್ಟ ರಿಯಾಯಿತಿ , ಕೆಲವು ಹೊಂದಾಣಿಕೆಯ ಮೂಲಕ ಭಾರತೀಯ ಸಮಾಜದ ಮೇಲಿನ ಸ್ತರದ ಮುಖಂಡರ ವಿಶ್ವಾಸ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ನಿಮ್ಮ ಸರಕಾರ ಮತ್ತು ನೀವು ಯಶಸ್ವಿಯಾಗಬಹುದು. ಮತ್ತು ಈ ಮೂಲಕ ತಾತ್ಕಾಲಿಕವಾಗಿ ಸೇನಾಪಡೆಯ ಪ್ರಮುಖ ಅಂಗದ ಸ್ಥೈರ್ಯನಾಶಗೊಳಿಸಲು ನೀವು ಸಫಲವಾಗಬಹುದು.
ಭಾರತದ ಸ್ವಾತಂತ್ರ ಚಳವಳಿಯ ಅಗ್ರಪಂಕ್ತಿಯಲ್ಲಿರುವ ‘ದಿ ರೆವೊಲ್ಯೂಷನರಿ ಪಾರ್ಟಿ’ ಯುದ್ಧದ ತೀವ್ರತೆಯಲ್ಲಿ ತಾನು ಅಸಹಾಯಕನೆಂದು ಭಾವಿಸಿದರೂ ಅದೇನೂ ಮಹತ್ವದ ವಿಷಯವಲ್ಲ. ನಮ್ಮ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿರುವ ನಾಯಕರ ಬಗ್ಗೆ ನಾವು ವೈಯಕ್ತಿಕವಾಗಿ ಋಣಿಯಾಗಿದ್ದರೂ, ಅವರು ಶಾಂತಿ ಮಾತುಕತೆಯಲ್ಲಿ ನಮ್ಮನ್ನು ಕಡೆಗಣಿಸಿರುವುವಷ್ಟೇ ಅಲ್ಲ, ನಮ್ಮ ಬಗ್ಗೆ ಉಲ್ಲೇಖ ಕೂಡ ಮಾಡದೆ ನಮ್ಮನ್ನು ನಿರ್ಲಕ್ಷಿಸಿರುವುದನ್ನು ನಾವು ಕಡೆಗಣಿಸುವಂತಿಲ್ಲ. ನಾಯಕ ವರ್ಗದವರಿಗೆ ಸೇರಿದವರು ಎನ್ನಲಾಗಿರುವ ನಿರಾಶ್ರಿತರು, ಅನಾಥರು ಹಾಗೂ ಬಡವರಾದ ಮಹಿಳಾ ಕಾರ್ಮಿಕರು , ಗತಕಾಲದ ವಿಷಯವಾಗಿರುವ ಆದರ್ಶವಾದಿ ಅಹಿಂಸಾತ್ಮಕ ಅನುಯಾಯಿಗಳ ಶತೃಗಳು , ತಮ್ಮನ್ನೂ ಒಳಗೊಂಡಂತೆ ತಮ್ಮ ಪತಿ, ಸಹೋದರರು, ಸಮೀಪ ಬಂಧುಗಳನ್ನು ತ್ಯಾಗ ಮಾಡಿದ ನಾಯಕಿಯರನ್ನು ದೇಶಭ್ರಷ್ಟರು ಎಂದು ನಿಮ್ಮ ಸರಕಾರ ಘೋಷಿಸಿದರೆ ಅದೇನೂ ಮಹತ್ವದ ವಿಷಯವಲ್ಲ. ನಿಮ್ಮ ಕೆಲವು ಏಜೆಂಟರು ಅವರ ಮತ್ತು ಪಕ್ಷದ ನಿಷ್ಕಳಂಕ ಚಾರಿತ್ರವನ್ನು ಕೆಡಿಸುವ ಉದ್ದೇಶದಿಂದ ಆಧಾರರಹಿತ ಮಿಥ್ಯಾಪವಾದ ರೂಪಿಸಲು ಎಷ್ಟು ಕೀಳುಮಟ್ಟಕ್ಕೆ ಇಳಿದರೂ ಅದೇನೂ ಮಹತ್ವದ ವಿಷಯವಲ್ಲ.
ಯುದ್ಧವು ಮುಂದುವರಿಯುತ್ತದೆ. ಕೆಲವೊಮ್ಮೆ ಮುಕ್ತವಾಗಿ, ಕೆಲವೊಮ್ಮೆ ಗುಪ್ತವಾಗಿ, ಈಗ ಸಂಪೂರ್ಣವಾಗಿ ಆಂದೋಲನದ ರೂಪದಲ್ಲಿ , ಈಗ ತೀವ್ರ ಜೀವನ್ಮರಣದ ಹೋರಾಟದ ರೂಪದಲ್ಲಿ-ಹೀಗೆ ಇದನ್ನು ವಿಭಿನ್ನ ಸಮಯಗಳಲ್ಲಿ ವಿಭಿನ್ನವಾಗಿ ಊಹಿಸಬಹುದು. ಆದರೆ ಯುದ್ಧ ಮುಂದುವರಿಯುತ್ತದೆ. ರಕ್ತಪಾತದ ದಾರಿ ಅಥವಾ ತುಲನಾತ್ಮಕವಾಗಿ ಶಾಂತ ರೀತಿಯ ದಾರಿ- ಇವುಗಳಲ್ಲಿ ಆಯ್ಕೆ ನಿಮ್ಮದಾಗಿದೆ. ಯಾವುದನ್ನು ಇಚ್ಛಿಸುತ್ತೀರೋ ಅದನ್ನು ಆರಿಸಿರಿ. ಆದರೆ ಆ ಯುದ್ಧವು ಅಸ್ಫುಟ (ಅಸ್ಪಷ್ಟ) ಮತ್ತು ಅನರ್ಥಕರ ನೈತಿಕ ಸಿದ್ಧಾಂತಗಳನ್ನು ಪರಿಗಣಿಸಿ ನಿರಂತರವಾಗಿ ನಡೆಯುತ್ತಿರಬೇಕು . ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಯುದ್ಧ ನಡೆಯಲಿದೆ ಮತ್ತು ಅಂತಿಮ ನಿರ್ಣಯ ಹೊರಬೀಳಲಿದೆ. ಬಂಡವಾಳಶಾಹಿಗಳ ಮತ್ತು ಸಾಮ್ರಾಜ್ಯಶಾಹಿಗಳ ಶೋಷಣೆಯ ದಿನಗಳು ಮುಕ್ತಾಯದ ಹಂತದಲ್ಲಿವೆ. ಈ ಯುದ್ಧ ನಮ್ಮಿಂದ ಆರಂಭವಾಗಿಲ್ಲ ಮತ್ತು ನಮ್ಮ ಪ್ರಾಣದೊಂದಿಗೆ ಕೊನೆಯಾಗದು. ಇದು ಚಾರಿತ್ರಿಕ ಸನ್ನಿವೇಶ ಮತ್ತು ವಾಸ್ತವಿಕ ಪರಿಸ್ಥಿತಿಯ ಅನಿವಾರ್ಯ ಪರಿಣಾಮವಾಗಿದೆ.
ನಮ್ಮ ವಿನೀತ ಬಲಿದಾನವು ಜತಿನ್ ದಾಸ್ ಅವರ ಹೋಲಿಕೆಯಿಲ್ಲದ ಬಲಿದಾನ ಹಾಗೂ ಕಾಮ್ರೇಡ್ ಭಗವತಿ ಚರಣ್ ಅವರ ದುರಂತಮಯ, ಆದರೆ ಉದಾತ್ತ ಬಲಿದಾನ ಮತ್ತು ನಮ್ಮ ಸೇನಾನಿ ಚಂದ್ರಶೇಖರ ಆಝಾದ್ ಅವರ ಖ್ಯಾತಿವೆತ್ತ ಮರಣದ ಸಂಕೋಲೆಯಲ್ಲಿರುವ ಒಂದು ಕೊಂಡಿ ಮಾತ್ರವಾಗಿದೆ. ಅಲ್ಲದೆ ನಮ್ಮ ವಿಧಿಯ ಬಗ್ಗೆ ಹೇಳುವುದಾದರೆ, ನೀವು ಇಚ್ಛಿಸಿದ ದಿನ ಮತ್ತು ಸಮಯದಲ್ಲಿ ನಮ್ಮನ್ನು ಮರಣದ ಬಾಯಿಗೆ ನೂಕಬಹುದು. ಹೀಗೆ ಮಾಡಲು ನಿಮಗೆ ಅಧಿಕಾರವಿದೆ. ‘ಬಲಿಷ್ಠರು ಮಾಡಿದ್ದೆಲ್ಲಾ ಸರಿ’ ಎಂಬ ನುಡಿ ನಿಮ್ಮ ಪ್ರೇರಣೆಯಾಗಿದೆ ಎಂಬುದು ನಮಗೆ ತಿಳಿದಿದೆ. ನಮ್ಮ ವಿಚಾರಣೆಯ ಪ್ರಕ್ರಿಯೆ ಇದಕ್ಕೊಂದು ಪುರಾವೆಯಾಗಿದೆ ಅಷ್ಟೇ. ನಿಮ್ಮ ನ್ಯಾಯಾಲಯದ ತೀರ್ಪಿನಂತೆ, ನಾವು ಯುದ್ಧ ಆರಂಭಿಸಿದ್ದೇವೆ ಮತ್ತು ಆ ಕಾರಣದಿಂದ ಕೈದಿಗಳಾಗಿದ್ದೇವೆ. ನಮ್ಮನ್ನು ಅದೇ ರೀತಿ ಕಾಣಬೇಕೆಂಬುದು ನಮ್ಮ ಹಕ್ಕು ಸಾಧನೆಯಾಗಿದೆ. ಅಂದರೆ, ನೇಣು ಹಾಕುವ ಬದಲು ನಮ್ಮನ್ನು ಗುಂಡಿಕ್ಕಿ ಸಾಯಿಸಬೇಕೆಂದು ಹಕ್ಕಿನಿಂದ ಕೇಳುತ್ತಿದ್ದೇವೆ.
ನಿಮ್ಮ ನ್ಯಾಯಾಲಯ ತಿಳಿಸಿದ್ದನ್ನು ನೀವು ನಿಜವಾಗಿಯೂ ಅರ್ಥೈಸಿದ್ದೀರಿ ಎಂಬುದನ್ನು ದೃಢೀಕರಿಸುವುದು ನಿಮಗೆ ಬಿಟ್ಟ ವಿಷಯವಾಗಿದೆ. ನಮ್ಮ ಮರಣದಂಡನೆ ಪ್ರಕ್ರಿಯೆ ಜಾರಿಗೊಳಿಸಲು ನಿಮ್ಮ ಸೇನಾ ವಿಭಾಗಕ್ಕೆ ನೀವು ದಯವಿಟ್ಟು ಆದೇಶಿಸಬೇಕೆಂದು ನಾವು ನಿರೀಕ್ಷಿಸುತ್ತಾ ನಿಮ್ಮಲ್ಲಿ ವಿನಂತಿಸುತ್ತಿದ್ದೇವೆ. ನಿಮ್ಮ,
ಭಗತ್ ಸಿಂಗ್