ಚಿತ್ರ ಜೀವತಳೆದ ಕ್ಷಣ...
ಭಾಗ 10
ಪಕ್ಷಿಲೋಕದ ಅನೇಕ ಪ್ರಭೇದಗಳು ವಲಸೆ ಹಕ್ಕಿಗಳಾಗಿವೆ. ಜಗತ್ತಿನ ಒಂದೊಂದು ಮೂಲೆಯಿಂದ ತಮ್ಮ ಸಂತಾನೋತ್ಪತಿ ಹಾಗೂ ಹವಾಗುಣದ ಬದಲಾವಣೆಗಾಗಿ ಅವು ನಾಲ್ಕಾರು ತಿಂಗಳು ವಲಸೆ ಮಾಡುತ್ತವೆ. ಮೈಸೂರಿನ ಸಮೀಪದ ರಂಗನತಿಟ್ಟು ಪಕ್ಷಿಧಾಮಕ್ಕೆ ಹತ್ತು ಹಲವು ರೀತಿಯ ಪಕ್ಷಿಗಳು ವರ್ಷದುದ್ದಕ್ಕೂ ವಲಸೆ ಬರುವ ಮತ್ತು ಮರಳಿ ತಮ್ಮ ತಾಯ್ನಿಡಿಗೆ ಹೊರಟು ಹೋಗುವ ಕಾಯಕದಲ್ಲಿ ನಿರತವಾಗಿರುತ್ತವೆ. ಸದ್ಯಕ್ಕೆ ಅಲ್ಲಿನ ಪಕ್ಷಿಗಳ ಬದುಕಿನ ಚಿತ್ರಗಳನ್ನು ಕುರಿತು ಅವಲೋಕಿಸೋಣ. ರಂಗನತಿಟ್ಟು ನಿಸರ್ಗಪ್ರಿಯರ, ಪಕ್ಷಿವೀಕ್ಷಕರ, ಛಾಯಾಗ್ರಾಹಕರ, ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಇಂಥ ರಸಿಕರ ಸ್ವರ್ಗವಾಗಿರುವ ಈ ತಾಣಕ್ಕೂ ಇಲ್ಲಿನ ಪಕ್ಷಿಗಳಿಗೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೂ ಒಂದಕ್ಕೊಂದು ಹೇಗೆ ಬೆಸುಗೆ ಬೆಳೆದಿದೆ ಎಂಬುದನ್ನು ತೋರಿಸಬೇಕಾದುದು ಒಬ್ಬ ಸೃಜನಶೀಲ ಚಿತ್ರಕಾರನ ಕರ್ತವ್ಯವಾಗಿದೆ. ಜೊತೆಗೆ ಪಕ್ಷಿಗಳ ಮತ್ತು ಪ್ರವಾಸಿಗರ ನಡುವಿನ ಒಡನಾಟ ಹೇಗಿರುತ್ತದೆ ಎಂಬುದನ್ನು ಚಿತ್ರಿಸಬಹುದಾಗಿದೆ.
ಇಂಥ ಸಂದರ್ಭದಲ್ಲಿ ಪಕ್ಷಿಗಳ ಬದುಕಿಗೆ ಸಂಬಂಧಿಸಿದಂತೆ ಪೂರಕ ಅಂಶಗಳಿವೆಯೇ, ಮಾರಕ ಅಂಶಗಳಿವೆಯೇ ಅಥವಾ ಪ್ರೇರಕ ಅಂತಃಸತ್ವವಿದೆಯೋ ಎಂಬುದನ್ನು ಸೂಕ್ಷ್ಮವಾಗಿ ಚಿತ್ರಗಳ ಮೂಲಕ ಸೆರೆಹಿಡಿಯಬಹುದಾಗಿದೆ. ಇಂಥ ವಿಚಾರಗಳನ್ನು ಹಿನ್ನೆಲೆಯಾಗಿ ಗ್ರಹಿಸುತ್ತಾ ಪ್ರವಾಸಿಗರಿಗೂ, ಪಕ್ಷಿಗಳಿಗೂ ನಡುವಿನ ಅಂತರ ಮತ್ತು ಒಡನಾಟವನ್ನು ಬಿಂಬಿಸುವುದು ಒಳಿತು. ಚಿತ್ರದ ಚೌಕಟ್ಟಿನೊಳಗೆ ಪ್ರವಾಸಿಗರನ್ನೂ, ಪಕ್ಷಿಗಳನ್ನೂ ಒಟ್ಟೊಟ್ಟಿಗೆ ಚಿತ್ರಿಸಿದರೆ ಅದೊಂದು ಅತ್ಯುತ್ತಮ ಪತ್ರಿಕಾ ಛಾಯಾಚಿತ್ರ (Photo journalism images) ಅಥವಾ ಮಾನವಾಸಕ್ತ ಛಾಯಾಚಿತ್ರ (Human interest images) ಎಂದು ಕರೆಸಿಕೊಳ್ಳುತ್ತದೆ. ಅದೇ ರೀತಿ ಪಕ್ಷಿಯ ಜೊತೆ ಅಲ್ಲಿನ ಪರಿಸರ ಹಿನ್ನ್ನೆಲೆ ಸೇರಿಸಿಕೊಂಡಂತೆ ಚಿತ್ರಿಸಿದ್ದರೆ ಅದು ಪರಿಸರ ಚಿತ್ರವಾಗಿ (Environmental images) ಹೊರ ಹೊಮ್ಮುತ್ತದೆ.
ಹೀಗೆ ಒಂದೇ ಸ್ಥಳದ ಅನೇಕ ಚಿತ್ರಿಕೆಗಳನ್ನು ಭಿನ್ನ ಭಿನ್ನ ನೆಲೆಯಲ್ಲಿ ಚಿತ್ರಿಸಬೇಕೆಂದರೆ ಮೊದಲು ನಮ್ಮಿಳಗೆ ಅಗಾಧವಾದ ತಾಳ್ಮೆ, ತಿಳುವಳಿಕೆ, ಬೌದ್ಧಿಕ ಕಸರತ್ತು ಮತ್ತು ಸೃಜನಶೀಲತೆಯ ಆವಶ್ಯಕತೆ ಇರುತ್ತದೆ.ಇಂತಹ ಆಲೋಚನೆ ಮತ್ತು ಚಿಂತನೆ ಮೂಡುವಂತಾಗಬೇಕೆಂದರೆ ನಮಗೆ ನಿಸರ್ಗದ ಬಗ್ಗೆ ಅತೀವ ಕಾಳಜಿ, ಉತ್ಕಟ ಪ್ರೀತಿ ಇರಬೇಕು.ಆಗ ಮಾತ್ರ ಅಪರೂಪದ ಚಿತ್ರವೊಂದು ರೂಪುಗೊಳ್ಳಲು ಸಾಧ್ಯ. ಅದನ್ನು ಬಿಟ್ಟು ರಂಗನತಿಟ್ಟು ಪಕ್ಷಿಧಾಮಕ್ಕೆ ಹೋಗಿ ಕೇವಲ ರೆಂಬೆ ಕೊಂಬೆಗಳ ಮೇಲೆ ಕುಳಿತ ಪಕ್ಷಿಗಳ ಚಿತ್ರಗಳನ್ನಷ್ಟೇ ಕ್ಲಿಕ್ಕಿಸಿದರೆ ಬರಿಯ ಭಾವ ಚಿತ್ರವಷ್ಟೇ (Portrait images) ಆಗಬಲ್ಲದು.
ಒಂದು ಚಿತ್ರದ ಮೂಲಕ ಸಾವಿರ ಪದಗಳಷ್ಟು ವಿಚಾರವನ್ನು ಹೇಳಬಹುದು ಎಂಬುದು ಪತ್ರಿಕೋದ್ಯಮದಲ್ಲಿ ಹಳೆಯ ಮಾತು. ಆದರೆ ಚಿತ್ರವೊಂದು ಸಾವಿರ ಪದಗಳಿಗೆ ಸಮನಾಗುವುದು ಅಷ್ಟು ಸುಲಭವಲ್ಲ. ಚಿತ್ರದೊಳಗೆ ಜೀವಂತಿಕೆಯ ಅಂಶಗಳು ಭರಪೂರ ಸೇರಿದ್ದರೆ ಮಾತ್ರ ಅದು ಸಾಧ್ಯವಾಗುವುದು. ಇಲ್ಲದಿದ್ದರೆ ಹತ್ತರಲ್ಲಿ ಹನ್ನೊಂದನೆಯ ಸವಕಲು ಚಿತ್ರವಾಗಿಯೋ ಅಥವಾ ನೀರಸ ಭಾವಚಿತ್ರವಾಗಿಯೋ ಉಳಿದುಬಿಡುವ ಅಪಾಯ ಇರುತ್ತದೆ. ಇಲ್ಲಿ ನೀಡಿರುವ ಎರಡೂ ಚಿತ್ರಗಳನ್ನೂ ಗಮನಿಸಿ ನೋಡಿ. ಅವುಗಳಲ್ಲಿ ಸೇರಿಕೊಂಡ ಅಂಶಗಳಾವುವು, ಏನೆಲ್ಲ ವಿಚಾರಗಳು ಅಲ್ಲಿ ಗೋಚರಿಸುತ್ತಿವೆ ಎಂಬುದು ನಿಮಗೇ ಗೊತ್ತಾಗುತ್ತದೆ.