ಸ್ತ್ರೀವಾದ: ಇತಿಹಾಸ ಮತ್ತು ಸ್ವರೂಪ-ವಿಶ್ಲೇಷಣೆ
ಸ್ತ್ರೀವಾದ ಎಂದರೇನು? ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಈ ಪ್ರಶ್ನೆ ಮತ್ತೆ ಜಿಜ್ಞಾಸೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಪ್ರಕಟವಾದ ಅಪರೂಪದ ಪುಸ್ತಕವೊಂದು ಸ್ತ್ರೀವಾದ ನಡೆದು ಬಂದ ದಾರಿಯ ಮೇಲೆ ಹೊಸ ಬೆಳಕು ಚೆಲ್ಲಿದೆ. ಡಾ. ಸುಶಿ ಕಾಡನಕುಪ್ಪೆ ಅವರು 64 ಪುಟಗಳ ಈ ಪುಟ್ಟ ಪುಸ್ತಕದಲ್ಲಿ ಸ್ತ್ರೀವಾದದ ಇತಿಹಾಸ ಮತ್ತು ಸ್ವರೂಪದ ಬಗ್ಗೆ ಸಂಕ್ಷಿಪ್ತ ಮತ್ತು ಅರ್ಥಪೂರ್ಣವಾಗಿ ವಿಶ್ಲೇಷಣೆ ಮಾಡಿದ್ದಾರೆ. ಕನ್ನಡದಲ್ಲಿ ಸ್ತ್ರೀವಾದದ ಬಗ್ಗೆ ಅನೇಕ ಪುಸ್ತಕಗಳು ಬಂದಿವೆ. ಆದರೆ, ಈ ಪುಸ್ತಕ ಯಾರೂ ಕಣ್ಣೆತ್ತಿ ನೋಡದ ಅಂಶಗಳ ಮೇಲೆ ಬೆಳಕು ಚೆಲ್ಲಿದೆ.
ಈಗ ಮಹಿಳೆ ಶಿಕ್ಷಣ, ಉದ್ಯೋಗ ಮತ್ತು ಆದಾಯ ಗಳಿಕೆ ಎಲ್ಲದರಲ್ಲೂ ಮುನ್ನಡೆ ಸಾಧಿಸಿದ್ದಾಳೆ. ಎಲ್ಲಾ ಕ್ಷೇತ್ರದಲ್ಲೂ ಪುರುಷನಿಗೆ ಸರಿಸಾಟಿಯಾಗಿ ನಿಂತಿದ್ದಾಳೆ. ಆದರೂ ಹೆಣ್ಣಿಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ ಎಂಬ ನೋವು ವ್ಯಕ್ತವಾಗುತ್ತಲೇ ಇದೆ. ಈ ನೋವಿನಲ್ಲಿ ಸತ್ಯಾಂಶವು ಅಡಕವಾಗಿದೆ. ಈ ಸತ್ಯಾಂಶದ ಹಲವಾರು ಆಯಾಮಗಳ ಬಗ್ಗೆ ಡಾ. ಸುಶಿ ಕಾಡನಕುಪ್ಪೆ ವಿಶ್ಲೇಷಣೆ ಮಾಡಿದ್ದಾರೆ. ದಂತ ಮಹಾವಿದ್ಯಾಲಯದಲ್ಲಿ ರೀಡರ್ ಆಗಿ ಕೆಲಸ ಮಾಡುತ್ತಿರುವ ಅವರು ಬರೆದ ಈ ಪುಸ್ತಕ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಮಹಿಳಾ ಹೋರಾಟದ ಮೊದಲ ಹೆಜ್ಜೆ ಗುರುತುಗಳು, ಭಾರತದಲ್ಲಿ ಮಹಿಳಾವಾದ, ಪಾಶ್ಚಾತ್ಯ ದೃಷ್ಟಿಕೋನದಲ್ಲಿ ಮಹಿಳಾ ಚಳವಳಿ, ಮಹಿಳಾವಾದ ಮತ್ತು ಜೈವಿಕ ಲಿಂಗ ವ್ಯತ್ಯಾಸಗಳು, ಮಹಿಳಾವಾದ ಮತ್ತು ಪುರುಷ, ಮಹಿಳಾವಾದದ ಮುಂದಿರುವ ಸವಾಲುಗಳು ಹೀಗೆ ಏಳು ಅಧ್ಯಾಯಗಳಲ್ಲಿ ಸ್ತ್ರೀವಾದದ ಇತಿಹಾಸವನ್ನು ಇವರು ಕಟ್ಟಿಕೊಟ್ಟಿದ್ದಾರೆ. ಮುಖ್ಯವಾಗಿ ಎರಡು ಅಂಶಗಳ ಬಗ್ಗೆ ಈ ಪುಸ್ತಕ ಓದುಗರ ಗಮನ ಸೆಳೆಯುತ್ತದೆ. ಮಹಿಳಾ ಚಳವಳಿಯಲ್ಲಿ ಜಾತಿ ಮತ್ತು ವರ್ಣ ಸಮಸ್ಯೆ ಹಾಗೂ ಮಹಿಳಾ ಆಂದೋಲನ ಪುರುಷ ವಿರೋಧಿಯಾಗಿರಬೇಕೇ ಎಂಬ ಪ್ರಶ್ನೆಗಳ ಮೇಲೆ ಡಾ. ಸುಶಿ ಹೊಸ ಬೆಳಕು ಚೆಲ್ಲಿದ್ದಾರೆ. ಕಳೆದ ವರ್ಷ ಜಿನೇವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಅಖಿಲ ಭಾರತ ದಲಿತ ಮಹಿಳೆಯರ ವೇದಿಕೆ, ಭಾರತದ ದಲಿತ ಮಹಿಳೆಯರ ಸ್ಥಿತಿಗತಿ ಕುರಿತು ಒಂದು ಪ್ರಸ್ತಾವನೆ ಮಂಡಿಸಿತು. ದಲಿತ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ಸಾಕ್ಷ ಚಿತ್ರಗಳ ಮೂಲಕ ಮನದಟ್ಟು ಮಾಡುವ ಪ್ರಯತ್ನ ಮಾಡಿತು. ಜಾಗತಿಕ ಮಟ್ಟದಲ್ಲಿ ಜಾತಿಯಾಧಾರದ ಮೇಲೆ ನಡೆಯುವ ದೌರ್ಜನ್ಯಗಳನ್ನು ಮಾನವ ಹಕ್ಕುಗಳ ಉಲ್ಲಂಘನೆಯೆಂದು ಪರಿಗಣಿಸುವಂತೆ ಒತ್ತಾಯಿಸಿತು.
ಸ್ತ್ರೀವಾದವು ಭಾರತದಲ್ಲಿ ಇಂದು ವಿಶಿಷ್ಟವಾದ ಹಂತದಲ್ಲಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಹಂದರದಲ್ಲಿ ಸ್ತ್ರೀವಾದವು ತನ್ನ ಹೋರಾಟವನ್ನು ಪೋಣಿಸಬೇಕಿದೆ. ಇದು ಸ್ತ್ರೀವಾದಕ್ಕೆ ಇರುವ ಮುಖ್ಯ ಸವಾಲು. ಮಹಿಳೆಯಾಗಿ ಅನುಭವಿಸುವ ಲಿಂಗ ತಾರತಮ್ಯ, ಅದರ ಜೊತೆಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಅನುಭವಿಸುವ ತಾರತಮ್ಯ ಈ ರೀತಿ ಭಾರತೀಯ ದಲಿತ ಮಹಿಳೆ ಎರಡು ವಿಧದ ಶೋಷಣೆಗೆ ಒಳಗಾಗಿದ್ದಾರೆ. ಜಾತಿ ಪದ್ಧತಿಯ ಶ್ರೇಣೀಕೃತ ರಚನೆಯಲ್ಲಿ ಮೇಲ್ಜಾತಿಯ ಮಹಿಳೆಯರಿಂದಲೇ ದಬ್ಬಾಳಿಕೆಗೆ ಒಳಗಾಗುವ ಕೆಳಜಾತಿಯ ದಲಿತ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಬೇಕಾದ ಅಂಶದ ಬಗ್ಗೆ ಡಾ. ಸುಶಿ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.
ಭಾರತೀಯ ಸ್ತ್ರೀವಾದ ಸೇರಿದಂತೆ ಒಟ್ಟಾರೆಯಾಗಿ ಜಾಗತಿಕ ಸ್ತ್ರೀವಾದ ಮೇಲ್ಜಾತಿಯ ಮಧ್ಯಮ ವರ್ಗದ ಮಹಿಳೆಯರ ಸಮಸ್ಯೆಗಳಿಗೆ ಮಾತ್ರ ಸ್ಪಂದಿಸುವ ಚಿಂತನೆಯಾಗಿ ಉಳಿದಿದೆ ಎಂಬ ಆರೋಪದ ಬಗ್ಗೆ ಈ ಪುಸ್ತಕದಲ್ಲಿ ಗಮನ ಸೆಳೆಯಲಾಗಿದೆ. ಮೇಲ್ಜಾತಿಯ ಮಧ್ಯಮ ವರ್ಗದ ಮಹಿಳೆಯರು ಅಸಮಾನತೆಗೆ ದನಿಗೂಡಿಸಬೇಕಾದರೂ ಇದು ಕೇವಲ ಅಕಾಡಮಿಕ್ ವಲಯದ ಚರ್ಚೆ, ವಾದ-ಪ್ರತಿವಾದಕ್ಕೆ ಸೀಮಿತವಾಗಿದೆ. ಇಂದು ಮಹಿಳಾ ಪರ ಧ್ವನಿಯಾಗಬೇಕು ಎಂಬ ಧಾವಂತದಲ್ಲಿ ಸ್ತ್ರೀವಾದವನ್ನು ಕುರುಡಾಗಿ ಪ್ರತಿಪಾದಿಸುವುದು ಡಿಜಿಟಲ್ ಲೋಕದಲ್ಲಿ ಹೆಚ್ಚಾಗುತ್ತಿದೆ. ವಸ್ತುನಿಷ್ಠವಾಗಿ ಕೆಲ ಸನ್ನಿವೇಶಗಳನ್ನು ಪರಿಶೀಲನೆಗೆ ಒಳಪಡಿಸುವವರು ಸೋಶಿಯಲ್ ಮೀಡಿಯಾದಲ್ಲಿ ಟ್ರಾಲ್‌ಗೆ ಒಳಗಾಗುತ್ತಿದ್ದಾರೆ. ಸ್ತ್ರೀವಾದಿಗಳ ಇಂಥ ನಡಿಗೆಯಿಂದ ಸ್ತ್ರೀವಾದವೆಂದರೆ ಪುರುಷ ವಿರೋಧಿ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿದೆ ಎಂಬ ಅಂಶದತ್ತ ಡಾ. ಸುಶಿ ಗಮನ ಸೆಳೆದಿದ್ದಾರೆ. ಸಬಿತಾ ಬನ್ನಾಡಿಯವರು ಹೇಳಿದಂತೆ, ಸ್ತ್ರೀವಾದ ಎಂದರೆ ಪುರುಷ ವಿರೋಧಿಯಲ್ಲ. ಅದು ಈಗ ಹಲವು ಹಂತಗಳನ್ನು ದಾಟಿ, ಸಮಾನತೆಯನ್ನು ಸಾಕಾರಗೊಳಿಸುವ, ಹೊಸ ಲೋಕ ಕಟ್ಟುವ ದಿಕ್ಕಿನತ್ತ ಸಾಗಬೇಕಿದೆ. ಈ ಪಯಣದಲ್ಲಿ ಗಂಡಸರು ಸಹ ಯಾತ್ರಿಗಳು ಆಗಿದ್ದಾರೆ. ಡಾ. ಸುಶಿ ಕಾಡನಕುಪ್ಪೆ ಕೂಡ ಇದೇ ಅಂಶವನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಭಾರತದಲ್ಲಿ ಸ್ತ್ರೀವಾದವನ್ನು ಅಸ್ತಿತ್ವಕ್ಕೆ ತಂದವರು ಮಹಿಳೆಯರಲ್ಲ, ಪುರುಷರು ಎಂಬುದು ಇವರ ಪ್ರತಿಪಾದನೆ. ಸತಿ ಪದ್ಧತಿ, ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹದ ವಿರುದ್ಧ ಹೋರಾಡಿದ ರಾಜಾರಾಮ ಮೋಹನ್ ರಾಯ್, ವಿಧವಾ ವಿವಾಹದ ಬಗ್ಗೆ ಅರಿವು ಮೂಡಿಸಲು ಶ್ರಮಿಸಿದ ಈಶ್ವರಚಂದ್ರ ವಿದ್ಯಾಸಾಗರ, ವಿಧವೆಯರ ಬಗ್ಗೆ ಸಮಾಜದಲ್ಲಿ ಇದ್ದ ಮೂಢನಂಬಿಕೆಯನ್ನು ನಿವಾರಿಸಲು ಪ್ರಯತ್ನಿಸಿದ ಡಿ.ಡಿ.ಕರ್ವೆ ಇವರೆಲ್ಲ ನಮ್ಮ ದೇಶದಲ್ಲಿ ಸ್ತ್ರೀವಾದಿ ಚಿಂತನೆಗಳನ್ನು ಬಿತ್ತಲು ಕಾರಣರಾದವರು. ಈ ದೇಶದಲ್ಲಿ ಮಹಿಳೆಯರಿಗೆ ಮೊದಲು ಅಕ್ಷರ ಕಲಿಸಿದ ಸಾವಿತ್ರಿಬಾಯಿ ಫುಲೆಯವರಿಗೆ ಬೆನ್ನೆಲುಬಾಗಿ ನಿಂತಿದ್ದು ಅವರ ಪತಿ ಜ್ಯೋತಿಬಾ ಫುಲೆ. 1851ರಲ್ಲಿ ಮಹಾದೇವ ಗೋವಿಂದ ರಾನಡೆ ಅವರು ಪುಣೆಯಲ್ಲಿ ಮೊದಲ ವಿಧವಾ ವಿವಾಹ ಮಂಡಳಿ ಸ್ಥಾಪಿಸಿದರು. ಬಾಲ್ಯ ವಿವಾಹ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲು ಬೇಹರಾಮ್ ಮಲ್ಬರಿ ಅವರು ಹೋರಾಟಕ್ಕೆ ಇಳಿದರು. ಹೀಗೆ ಬೆನ್ನೆಲುಬಾಗಿ ನಿಂತ ಪುರುಷರು ಭಾರತದಲ್ಲಿ ಸ್ತ್ರೀವಾದ ಜನನಕ್ಕೆ ಕಾರಣರಾಗಿದ್ದಾರೆ ಎಂದು ಡಾ. ಸುಶಿ ವಿಶ್ಲೇಷಿಸಿದ್ದಾರೆ. ಭಾರತೀಯ ಮಹಿಳೆಯರು ಕೂಡ ಅಸಾಮಾನ್ಯ ಸಾಧಕಿಯರು. ವೇದ ಕಾಲದಲ್ಲಿ ಮಹಿಳಾ ವಿದ್ವಾಂಸರಾದ ಲೋಪಮುದ್ರ, ಮೈತ್ರೇಯಿ ಮತ್ತು ಗಾರ್ಗಿ ಪುರುಷರಿಗೆ ಸರಿಸಾಟಿಯಾದ ತತ್ವಶಾಸ್ತ್ರಜ್ಞರೆಂದು ಗುರುತಿಸಲ್ಪಟ್ಟಿದ್ದರು. ಮೇಧಾವಿ ತತ್ವಜ್ಞಾನಿಯಾಗಿದ್ದ ಯಾಜ್ಞವಲ್ಕನಿಗೆ ಗಾರ್ಗಿ ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಳಿದ್ದಳು. ಆಧುನಿಕ ಭಾರತದಲ್ಲಿ ಆನಂದಿಬಾಯಿ ಜೋಶಿ ಹೊರದೇಶದಲ್ಲಿ ಶಿಕ್ಷಣ ಪಡೆದ ಮೊದಲ ಭಾರತೀಯ ಮಹಿಳೆ. ಮೇಲೆ ನಮೂದಿಸಿರುವ ಸಾಧಕಿಯರು ಮೇಲ್ವರ್ಗದ ಭಾರತೀಯ ಮಹಿಳೆಯರಾಗಿದ್ದರೂ ಶೋಷಿತ ಸಮಾಜದ ಮಹಿಳೆಯರಿಗಾಗಿ ಶ್ರಮಿಸಿದರು. ಸಮಕಾಲೀನ ಭಾರತ ಸ್ತ್ರೀವಾದವು ಮೇಲ್ಮಧ್ಯಮ ವರ್ಗದ ಸಮಾಜದಲ್ಲಿ ವೈಯಕ್ತಿಕ ಮತ್ತು ಕೌಟಂಬಿಕ ನೆಲೆಗಟ್ಟಿನಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಚ್ಚು ಮೀಸಲಾಗಿದೆ. ಆದರೆ, ತಳ ಸಮುದಾಯದ ಮಹಿಳೆಯರಲ್ಲಿ ಈಗಲೂ ಉಳಿದಿರುವ ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ಮುಟ್ಟಿನ ವೇಳೆ ಮಹಿಳೆಯ ಅಸ್ಪಶ್ಯತೆ, ಗರ್ಭಿಣಿಯರ ಅಮಾನವೀಯ ಉಪಚಾರ, ಆದಿವಾಸಿ ಮತ್ತು ದಲಿತ ಮಹಿಳೆಯರ ಸಾಮಾಜಿಕ ಪರಿಸ್ಥಿತಿ. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಎನ್ನದೇ ನಮ್ಮ ದೇಶದ ಜಾತಿ ವ್ಯವಸ್ಥೆಯು ಸೃಷ್ಟಿಸಿರುವ ಕ್ಲಿಷ್ಟ ಸಾಮಾಜಿಕ ರಚನೆ ಇವೆಲ್ಲವುಗಳ ಬಗ್ಗೆ ಮುಂಚೂಣಿಯ ಸ್ತ್ರೀವಾದ ಇನ್ನೂ ಸ್ಪಂದಿಸಬೇಕಿದೆ ಎಂಬ ಅಂಶಗಳತ್ತ ಡಾ. ಸುಶಿ ಗಮನ ಸೆಳೆದಿದ್ದಾರೆ. ನಮ್ಮ ಸಮಾಜದ ಅದೆಷ್ಟೋ ಹಿಂಸೆಗಳು ಪುರುಷರಿಂದ ಮಾತ್ರವಲ್ಲ, ಮಹಿಳೆಯರಿಂದಲೇ ಪ್ರೇರೇಪಣೆ ಆಗಿವೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕಿದೆ. ಮಹಿಳೆಯ ಈ ಗುಣ ಪಿತೃಪ್ರಧಾನ ಮನಸ್ಥಿತಿಯ ಪರಿಣಾಮವೋ ಅಥವಾ ಅಸೂಯೆಯೋ ಈ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ನಡೆಸಬೇಕಿದೆ. ಹೆಣ್ಣಿನಿಂದ ಆಗುವ ಕೆಲ ಮನುಷ್ಯ ಸಹಜ ತಪ್ಪುಗಳನ್ನು ಸ್ತ್ರೀ ಎಂಬ ಕಾರಣಕ್ಕೆ ವಿನಾಯಿತಿ ಕೊಡುವುದು ತಪ್ಪಾಗುತ್ತದೆ ಎಂಬ ಅಭಿಪ್ರಾಯ ಗಮನಾರ್ಹವಾಗಿದೆ. ವರದಕ್ಷಿಣೆ ಕಾಯ್ದೆ ಮಹಿಳೆಯರನ್ನು ಶೋಷಣೆಯಿಂದ ಮುಕ್ತಗೊಳಿಸಿದ್ದರೂ 498 (ಎ) ವಿಧಿ ದುರುಪಯೋಗ ಆಗುತ್ತಿರುವ ಬಗ್ಗೆ ದಿಲ್ಲಿಯ ಮಹಿಳಾ ಆಯೋಗದ ವರದಿಯತ್ತ ಡಾ. ಸುಶಿ ಗಮನ ಸೆಳೆದಿದ್ದಾರೆ. ವರದಕ್ಷಿಣೆ ಕಾಯ್ದೆಯಿಂದ ಬೇಸತ್ತ ಗಂಡಸರು ಆತ್ಮಹತ್ಯೆಗೆ ಮೊರೆ ಹೋಗಿರುವ ಪ್ರಕರಣಗಳು ದಾಖಲಾಗಿವೆ. ಇವುಗಳ ಪ್ರಮಾಣ ಅತ್ಯಲ್ಪವಾಗಿದ್ದರೂ ಈ ವಿದ್ಯಮಾನದ ಅಸ್ತಿತ್ವ ನಿರ್ಲಕ್ಷವಹಿಸುವಂತಿಲ್ಲ.
ಸ್ತ್ರೀವಾದ ಪರಿಪೂರ್ಣವಾಗಬೇಕಾದರೆ, ಪುರುಷರ ವಿಮೋಚನೆಯೂ ಆಗಬೇಕು ಎಂಬುದು ಅಮೆರಿಕದ ಸ್ತ್ರೀವಾದಿ ಲೇಖಕಿ ಬೆಲ್ ಹುಕ್ಸ್ ಅಭಿಪ್ರಾಯಪಡುತ್ತಾರೆ. ಪುರುಷರ ಹಕ್ಕುಗಳ ಪ್ರತಿಪಾದನೆಗಿಂತ ಪುರುಷರ ವಿಮೋಚನೆ ಎಂಬ ಪದ ಬಳಕೆ ಸ್ತ್ರೀವಾದಕ್ಕೆ ಹೆಚ್ಚು ಸೂಕ್ತ ಎನ್ನಿಸಿಕೊಳ್ಳುತ್ತದೆ. ಗಂಡಸುತನವನ್ನು ಪುರುಷರಿಗೆ ಹೇರುವ ಸಾಮಾಜಿಕ ವ್ಯವಸ್ಥೆ ಪುರುಷನ ಮನುಷ್ಯ ಸಹಜ ಗುಣವನ್ನು ಗೌಣವಾಗಿಸಲು ತರಬೇತಿ ಕೊಡುತ್ತದೆ. ಹೇಗೆ ಸ್ತ್ರೀಯು ಹೆಣ್ಣಾಗಿ ನಡೆದುಕೊಳ್ಳಬೇಕು ಎಂದು ಹೆಣ್ತನದ ವ್ಯಕ್ತಿತ್ವವನ್ನು ಆಕೆಯ ಮೇಲೆ ಹೇರಿ ಆಕೆಯ ಸಹಜ ಗುಣಗಳನ್ನು ಹೇಗೆ ಗೌಣಗೊಳಿಸಲಾಗುವುದೋ ಅದೇ ರೀತಿ ಗಂಡಸರಿಗೆ ಗಂಡಸುತನದ ವ್ಯಕ್ತಿತ್ವವನ್ನು ಹೇರಿ ಆತನ ಸಹಜ ಮಾನವೀಯ ಗುಣಗಳನ್ನು ಕಡೆಗಣಿಸಲಾಗಿದೆ. ಅಂತಲೇ ಸ್ತ್ರೀವಾದವು ಪುರುಷರ ವಿಮೋಚನೆಗೆ ಬೆನ್ನೆಲುಬು ಆಗಬೇಕು ಎಂದು ಈ ಪುಸ್ತಕದಲ್ಲಿ ಅವರು ಪ್ರತಿಪಾದಿಸಿದ್ದಾರೆ. ಇಂದು ಭಾರತದಲ್ಲಿ ಜಾತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ದಲಿತ ಮತ್ತು ಹಿಂದುಳಿದ ಮಹಿಳೆಯರ ಸಮಸ್ಯೆಗಳು ವಿಭಿನ್ನವಾಗಿವೆ. ಮುಂಚೂಣಿಯ ಮಹಿಳಾ ಚಳವಳಿ ಇದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಅಂತಲೇ ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿ ಪ್ರಶ್ನೆ ಬಂದಾಗ, ಈ ಮೀಸಲಾತಿಯಲ್ಲಿ ದಲಿತ ಮತ್ತು ಹಿಂದುಳಿದ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಒದಗಿಸಬೇಕು ಎಂದು ಲಾಲು ಪ್ರಸಾದ್ ಯಾದವ್ ಒತ್ತಾಯಿಸಿದ್ದರು. ಹೀಗೆ ಸ್ತ್ರೀವಾದ ಚಳವಳಿಯ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲಿರುವ ಸುಶಿ ಕಾಡನಕುಪ್ಪೆ ಅವರು ಸ್ತ್ರೀವಾದ ಇನ್ನೂ ಕ್ರಮಿಸಬೇಕಾದ ಹಾದಿ ಸುದೀರ್ಘವಾಗಿದೆ. ಈ ಹಾದಿಯಲ್ಲಿ ನಡೆಯುವಾಗ, ಪುರುಷರನ್ನು ನಮ್ಮ ಹೋರಾಟದ ಸಹಪಾಲುದಾರರನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಾರೆ. ಅನಗತ್ಯವಾಗಿ ಪುರುಷರನ್ನು ಶತ್ರುವನ್ನಾಗಿಸುವುದು ಸ್ತ್ರೀವಾದದ ಮೂಲಭೂತ ಸಿದ್ಧಾಂತಕ್ಕೆ ವಿರೋಧವಾಗಿದೆ. ಶೋಷಣೆ ವಿರುದ್ಧ ಹೋರಾಟ ಮಾಡುವ ಸ್ತ್ರೀವಾದವು ಇನ್ನೊಂದು ಲಿಂಗದ ಶೋಷಣೆಯಲ್ಲಿ ಕೊನೆಯಾಗಬಾರದು ಎಂದು ಅವರು ಹೇಳುತ್ತಾರೆ. ಸ್ತ್ರೀವಾದದ ಇತಿಹಾಸ ಮತ್ತು ಸ್ವರೂಪದ ಹಲವಾರು ಮಗ್ಗಲುಗಳನ್ನು ಡಾ. ಸುಶಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಈ ಪುಟ್ಟ ಪುಸ್ತಕ ಓದಿಸಿಕೊಂಡು ಹೋದರೂ ಕೂಡ ಅಲ್ಲಲ್ಲಿ ವಾಕ್ಯ ರಚನೆ ತಡೆದು ನಿಲ್ಲಿಸುತ್ತದೆ. ಭಾಷೆ ಇನ್ನಷ್ಟು ಸರಳವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನ್ನಿಸುತ್ತದೆ. ಅದೇನಿದ್ದರೂ ಕನ್ನಡದ ಸ್ತ್ರೀವಾದಿ ಚಳವಳಿಗಳಲ್ಲಿ ಇದೊಂದು ಅಪರೂಪದ ದಾಖಲೆಯಾಗಿದೆ.
ಮಹಿಳೆಯಾಗಿ ಅನುಭವಿಸುವ ಲಿಂಗ ತಾರತಮ್ಯ, ಅದರ ಜೊತೆಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಅನುಭವಿಸುವ ತಾರತಮ್ಯ ಈ ರೀತಿ ಭಾರತೀಯ ದಲಿತ ಮಹಿಳೆ ಎರಡು ವಿಧದ ಶೋಷಣೆಗೆ ಒಳಗಾಗಿದ್ದಾಳೆ. ಜಾತಿ ಪದ್ಧತಿಯ ಶ್ರೇಣೀಕೃತ ರಚನೆಯಲ್ಲಿ ಮೇಲ್ಜಾತಿಯ ಮಹಿಳೆಯರಿಂದಲೇ ದಬ್ಬಾಳಿಕೆಗೆ ಒಳಗಾಗುವ ಕೆಳಜಾತಿಯ ದಲಿತ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಬೇಕಾದ ಅಂಶದ ಬಗ್ಗೆ ಡಾ. ಸುಶಿ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.