ಏಳು ಹೆಡೆ ಸರ್ಪ ಅಪ್ಪಳಿಸಲು ತಯಾರಿ!

Update: 2019-03-06 08:40 GMT

ಭಾಗ-10

ಸುಮುಹೂರ್ತ ಸನ್ನಿಹಿತವಾಗುತ್ತಿತ್ತು. ಅಂದು ಬೆಳಗ್ಗೆ ಕೊಲೆಗಾರರ ನಿಜ ನಾಮಧೇಯಗಳಿಗೆ ಬದಲಾಗಿ ಗುಪ್ತ ಭಿನ್ನ ಹೆಸರುಗಳನ್ನು ಆಪ್ಟೆ ಇಟ್ಟ. ನಾಥೂರಾಮ್ ದೇಶಪಾಂಡೆಯಾದ; ಕರ್ಕರೆ ವ್ಯಾಸನಾದ; ಆಪ್ಟೆ ಕರಮರಕರ್ ಆದ; ಬಡ್ಗೆ ಬಂದೋಪಂಥ್ ಆದ; ಶಂಕರ ತುಕಾರಾಮನಾದ. ಹೆಸರುಗಳನ್ನು ಬದಲಾಯಿಸಿದಂತೆ ವೇಷವನ್ನೂ ಬದಲಾಯಿಸಿಕೊಂಡರು. ನಾಥೂರಾಮ್ ಮಿಲಿಟರಿ ಖಾಕಿ ಸಮವಸ್ತ್ರ ಧರಿಸಿದ. ಅವನ ಆಪ್ತ ಆಪ್ಟೆ ನೀಲಿ ಸೂಟ್ ಹಾಕಿಕೊಂಡ. ಕರ್ಕರೆ ಜವಾಹರಲಾಲ್ ನೆಹರೂ ನಿಲುವಂಗಿ ತೊಟ್ಟು ಗಾಂಧಿ ಟೋಪಿ ಇಟ್ಟುಕೊಂಡ. ಮದನಲಾಲ್ ಆಂಗ್ಲರಂತೆ ಕೋಟು ಟ್ರೌಜರ್ ಹಾಕಿಕೊಂಡ. ಗೋಪಾಲ ನಿಕ್ಕರ್, ಷರ್ಟ್, ಮೇಲೊಂದು ಜಾಕೆಟ್ ತೊಟ್ಟುಕೊಂಡ. ಮುಖ್ಯ ಪಾತ್ರಧಾರಿ ಬಡ್ಗೆ ಪಂಚೆ ಉಟ್ಟು ಜವಾಹರ್ ಕೋಟು ಧರಿಸಿದ...

ಜನವರಿ 17ರಂದು ಮುಂಬೈನಲ್ಲಿ ಸಾವರ್ಕರ್ ಸದನಕ್ಕೆ ನಾಥೂರಾಮ್ ಗೋಡ್ಸೆ, ನಾರಾಯಣ ಆಪ್ಟೆ, ದಿಗಂಬರ್ ಬಡ್ಗೆ ಹೋಗಿದ್ದಾಗ ಸಾವರ್ಕರ್‌ರು ಅವರಿಗೆ ‘‘ತಮ್ಮ ಕೆಲಸವನ್ನು ಯಶಸ್ವಿಯಾಗಿ ಈಡೇರಿಸಿ ಬನ್ನಿ’’ ಎಂದು ಆಶೀರ್ವಾದ ಮಾಡಿ, ಮಹಡಿಯಿಂದ ಕೆಳಗಿಳಿದು ಬಂದು: ‘‘ಗಾಂಧಿ ಚಿ ಶಂಭರ್ ವರ್ಷೆ ಬರ್ಲಿ’’ (ಗಾಂಧಿಗೆ ನೂರು ವರ್ಷ ತುಂಬಿದೆ) ಎಂಬ ಭವಿಷ್ಯವಾಣಿ ಅವರಿಗೆ ದೃಢವಾದ ವಿಶ್ವಾಸ ತುಂಬಿತ್ತು. ತಾವು ಕೈಗೊಂಡಿದ್ದ ‘ಪವಿತ್ರ ಕಾರ್ಯ’ ಈಡೇರುತ್ತದೆ ಎಂಬ ನಂಬುಗೆ ಬಲವಾಗಿ ಬೇರೂರಿತ್ತು. ಅವರ ಆಶೀರ್ವಾದವನ್ನು ತಲೆಯ ಮೇಲೆ ಹೊತ್ತು, ಭವಿಷ್ಯವಾಣಿಯನ್ನು ಹೃದಯದಲ್ಲಿ ತುಂಬಿಕೊಂಡು ಗೋಪಾಲ ಗೋಡ್ಸೆಯನ್ನು ಫ್ರಾಂಟಿಯರ್/ ಪಂಜಾಬ್ ಮೇಲೆ ಗಾಡಿಯಲ್ಲಿ ತೆರಳಲು ಏರ್ಪಾಟು ಮಾಡಿದರು. ಮುಂಬೈ ವಿಕ್ಟೋರಿಯಾ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಗೋಪಾಲ ಗೋಡ್ಸೆ ರೈಲು ಹತ್ತಲು ಸಿದ್ಧನಾಗಿದ್ದ. ತನ್ನೊಡನೆ ತಂದಿದ್ದ ಹಾಸಿಗೆ ಸುಳಿ(ಸುರುಳಿ)ಯಲ್ಲಿ 0.38 ವ್ಯಾಸದ ನಳಿಗೆಯುಳ್ಳ ಒಂದು ಪಿಸ್ತೂಲನ್ನು ಬಚ್ಚಿಟ್ಟುಕೊಂಡಿದ್ದ. ಪುಣೆಯ ಮಿಲಿಟರಿ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಅವನ ಸಹ ಕಾರ್ಯಕರ್ತನಿಂದ ಕೊಂಡು ತಂದಿದ್ದ. ಅದೇಕೆ ಬೇಕಿತ್ತೆಂಬುದನ್ನು ಅವನ ಹೆಂಡತಿಗೆ ಮಾತ್ರ ಹೇಳಿದ್ದ. ಗಂಡನನ್ನು ದಿಲ್ಲಿಗೆ ಕಳಿಸಲು ಭಾರತೀಯ ಸಾಧ್ವೀಮಣಿ ಮಗುವಿನೊಡನೆ ನಿಲ್ದಾಣಕ್ಕೆ ಬಂದಿದ್ದಳು. ಗಂಡ ಗಾಡಿ ಹತ್ತುವ ಮುಂಚೆ ‘‘ನೀವು ನಮಗಾಗಿ ಚಿಂತಿಸಬೇಡಿ. ನಾನು ಹೇಗಾದರೂ ಈ ಮಗುವನ್ನು ಸಾಕಿ ಬೆಳೆಸುತ್ತೇನೆ’’ ಎಂದು ಧೈರ್ಯ ತುಂಬಿದಳು. ಗೋಪಾಲ ಗೋಡ್ಸೆ ಗಾಡಿ ಹತ್ತಿ ಕುಳಿತ. ಗಾಡಿ ಕಣ್ಮರೆಯಾಗುವ ತನಕ ‘ವೀರ ನಾರಿ ಮಣಿ’ ನಿಲ್ದಾಣದಲ್ಲಿದ್ದು ನಿಧಾನವಾಗಿ ಹೊರ ನಡೆದಳು.
ಗೋಪಾಲ ದಿಲ್ಲಿ ತಲುಪುವುದಕ್ಕೆ ಮೊದಲೇ ಮದನಲಾಲ್ ಮತ್ತು ಅವನ ಒಡೆಯ ವಿಷ್ಣು ಕರ್ಕರೆ ದಿಲ್ಲಿಯಲ್ಲಿದ್ದರು. ದಿಗಂಬರ್ ಬಡ್ಗೆ ಕಪಟ ಸನ್ಯಾಸಿ ಒದಗಿಸಿದ್ದ ಕೈಬಾಂಬು, ನಾಡ ಪಿಸ್ತೂಲು, ಗನ್-ಕಾಟನ್-ಸ್ಲಾಬ್ ಸಹಿತ ಶಸ್ತ್ರಸಜ್ಜಿತರಾಗಿದ್ದರು. ಬಡ್ಗೆ ಸೇವಕ ಶಂಕರ ಕಿಷ್ಟಯ್ಯನೂ ಅವನೊಡನೆ ಇದ್ದ. ಅವನಲ್ಲಿ .32/.22 ವ್ಯಾಸದ ನಾಡ ಪಿಸ್ತೂಲು ಇತ್ತು. ಮರುದಿನ ವಿಮಾನದ ಮೂಲಕ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ದಿಲ್ಲಿಗೆ ಬಂದಿಳಿದರು. ಅವನ ಬಳಿಯೂ ಒಂದು ಪಿಸ್ತೂಲು ಇತ್ತು. ಒಟ್ಟು ಏಳು ಜನ - ಏಳು ಹೆಡೆ ಘಟಸರ್ಪ ಗಾಂಧಿ ದ್ವೇಷದ ವಿಷದಂತಗಳುಳ್ಳ ಕಾಳಿಂಗ ಸರ್ಪ ದಿಲ್ಲಿಯಲ್ಲಿ ಸೇರಿದರು.
 ದಿನಾಂಕ 20ರಂದು ಬೆಳಗ್ಗೆ ಎಂಟೂವರೆ ಗಂಟೆಗೆ ದಿಗಂಬರ ಬಡ್ಗೆ, ಶಂಕರ ಕಿಷ್ಟಯ್ಯ, ಗೋಪಾಲ ಗೋಡ್ಸೆ ತಂಗಿದ್ದ ಹಿಂದೂ ಮಹಾಸಭಾ ಭವನಕ್ಕೆ ಆಪ್ಟೆ ಬಂದು ಗಾಂಧೀಜಿ ವಾಸಿಸುತ್ತಿದ್ದ ಬಿರ್ಲಾ ಗೃಹಕ್ಕೆ ಒಂದು ಕಾರಿನಲ್ಲಿ ಕರೆದೊಯ್ದ. ಗೃಹದ ಹೆಬ್ಬಾಗಿಲಿನಲ್ಲಿ ಕಾರು ನಿಲ್ಲಿಸಿ ಆಪ್ಟೆ ಮತ್ತು ಬಡ್ಗೆ ಒಳಗೆ ಹೋಗಲು ಹೆಜ್ಜೆ ಹಾಕಿದರು. ಕಾವಲುಗಾರ ಅವರನ್ನು ತಡೆದು ‘‘ನೀವ್ಯಾರು? ಯಾಕೆ ಬಂದಿದ್ದೀರಿ?’’ ಎಂದು ಕೇಳಿದ ಅಷ್ಟೆ. ‘‘ನಾವು ನಿರಾಶ್ರಿತರು. ಗಾಂಧೀಜಿಯನ್ನು ಕಂಡು ನಮ್ಮ ಸಮಸ್ಯೆಯನ್ನು ನಿವೇದಿಸಿಕೊಳ್ಳಬೇಕಾಗಿದೆ’’ ಎಂದು ಒಂದು ಚೀಟಿಯಲ್ಲಿ ಏನೋ ಗೀಚಿ ಕಳುಹಿಸಿದ. ಸ್ವಲ್ಪ ಹೊತ್ತಿನ ಮೇಲೆ ಅವರು ಬಿರ್ಲಾ ಗೃಹದಲ್ಲಿ ಗಾಂಧೀಜಿ ಪ್ರತಿದಿನ ನಡೆಸುತ್ತಿದ್ದ ಪ್ರಾರ್ಥನಾ ವೇದಿಕೆಯತ್ತ ನಡೆದರು. ಆ ವೇದಿಕೆಯ ಎಡಬಲದಲ್ಲಿ ನಿಂತು ಗಾಂಧೀಜಿ, ಸುಹ್ರವರ್ದಿ ಕುಳಿತುಕೊಳ್ಳುವ ಜಾಗದ ದೂರವನ್ನು ಕಣ್ಣಳತೆಯಿಂದ ಅಂದಾಜು ಮಾಡಿದರು. ತರುವಾಯ ವೇದಿಕೆಯ ಹಿಂದಕ್ಕೆ ಹೋದರು. ಅಲ್ಲೊಂದು ಕೊಠಡಿ ನೋಡಿದರು. ಆ ಕೊಠಡಿಯ ಗೋಡೆಯಲ್ಲಿ ಒಂದು ವೆಂಟಿಲೇಟರ್ ಇತ್ತು. ಆ ವೆಂಟಿಲೇಟರ್‌ಗೆ ಬೆಸೆದಿದ್ದ ಉಕ್ಕು/ಕಬ್ಬಿಣದ ಜಾಲಂಧ್ರ ಇತ್ತು. ಆ ವೆಂಟಿಲೇಟರ್ ಜಾಲಂಧ್ರದಲ್ಲಿ ಕೈ ತೋರಿಸಿ, ಕೈ ಬಾಂಬು ಎಸೆಯಲು, ಪಿಸ್ತೂಲಿನಿಂದ ಗಾಂಧಿ ಕುತ್ತಿಗೆಯ ಹಿಂಭಾಗಕ್ಕೆ ಗುಂಡಿಕ್ಕಲು ಸಾಧ್ಯವೆಂಬುದನ್ನು ಅಂದಾಜಿನಿಂದ ಗ್ರಹಿಸಿದರು. ಬಡ್ಗೆಗೆ ಆಪ್ಟೆ ಹೇಳಿದ:
‘‘ಬಿರ್ಲಾ ಗೃಹದ ಹಿಂಬದಿ ಕಾಂಪೌಂಡ್ ಗೋಡೆಯ ಹತ್ತಿರ ಗನ್- ಕಾಟನ್-ಸ್ಲಾಬ್‌ಗೆ ಬತ್ತಿ ಹಚ್ಚಿ ಸ್ಫೋಟಿಸಿದರೆ ಪ್ರಾರ್ಥನಾ ಸಭೆಯಲ್ಲಿದ್ದ ಜನ ಶಬ್ದಕ್ಕಂಜಿ ಚೆಲ್ಲಾಪಿಲ್ಲಿ ದಿಕ್ಕಾಪಾಲಾಗಿ ಓಡುವರು. ಆಗ ಸಹಜವಾಗಿ ಗದ್ದಲವಾಗಿ ನೂಕುನುಗ್ಗಲಾಗುವುದು. ಗಾಂಧೀಜಿ ಮುಂದೆ ಸಭಿಕರ ಮಧ್ಯದಲ್ಲಿದ್ದು ಪಿಸ್ತೂಲಿನಿಂದ ಗುಂಡಿಕ್ಕಬಹುದು. ಅದೇ ಕಾಲಕ್ಕೆ ಕಾವಲುಗಾರನ ಕೊಠಡಿಯ ವೆಂಟಿಲೇಟರ್ ಜಾಲಂಧ್ರದಿಂದ ಕೈ ಬಾಂಬು ಹಾಕಬಹುದು.
ಕೃತ್ಯ ನಡೆಯ ಬೇಕಾಗಿದ್ದ ಆ ಸ್ಥಳದ ಆಯಕಟ್ಟಿನ ಸ್ಥಳಗಳನ್ನು ನೋಡಿ ಹಿಂದಿರುಗಿದರು. ಅದೇ ಮದ್ಯಾಹ್ನ ಆಪ್ಟೆ ಹಿಂದೂ ಮಹಾ ಸಭಾ ಭವನಕ್ಕೆ ಬಂದ. ಅಲ್ಲಿದ್ದ ಮದನಲಾಲ್, ಬಡ್ಗೆ, ಗೋಪಾಲ ಗೋಡ್ಸೆ, ಶಂಕರ ಕಿಷ್ಟಯ್ಯ ಇವರನ್ನು ಕರೆದು ಕೊಂಡು, ಭವನದ ಹಿಂದೆ ಸ್ವಲ್ಪ ದೂರದಲ್ಲಿದ್ದ ಕಾಡಿನೊಳಕ್ಕೆ ಹೋದರು. ಅಲ್ಲಿ ಗೋಪಾಲ ಗೋಡ್ಸೆ ತನ್ನಲ್ಲಿದ್ದ ಪಿಸ್ತೂಲಿನಿಂದ ಇಪ್ಪತ್ತು ಇಪ್ಪತ್ತೈದು ಅಡಿ ದೂರದಿಂದ ಒಂದು ಮರದ ಕಾಂಡಕ್ಕೆ ಗುರಿಯಿಟ್ಟು ಗುಂಡು ಹಾರಿಸಿದ. ಗುಂಡು ಹಾರಲೇ ಇಲ್ಲ. ಇನ್ನೊಮ್ಮೆ ಟ್ರಿಗ್ಗರ್ ಒತ್ತಿದ. ಗುಂಡು ಹಾರಲೇ ಇಲ್ಲ!! ಆಗ ಶಂಕರ ಕಿಷ್ಟಯ್ಯ ತನ್ನಲ್ಲಿದ್ದ ಪಿಸ್ತೂಲಿನಿಂದ ಸ್ವಲ್ಪ ಹತ್ತಿರಕ್ಕೆ ಹೋಗಿ ಮರದತ್ತ ಗುಂಡು ಹಾರಿಸಿದ. ಗುಂಡು ಹಾರಿತು ಆದರೆ ಮರಕ್ಕೆ ಬಡಿಯಲಿಲ್ಲ. ಇನ್ನೊಮ್ಮೆ ಹಾರಿಸಿದ. ಅದೂ ಗುರಿ ಮುಟ್ಟಲಿಲ್ಲ!! ಎರಡು ಪಿಸ್ತೂಲಿನಿಂದಲೂ ಗುರಿ ಸಾಧಿಸಲು ಸಾಧ್ಯವಾಗಲಿಲ್ಲ. ಆ ಅಡವಿ ಮಧ್ಯದಲ್ಲಿ ಕುಳಿತು ಆ ಪಿಸ್ತೂಲುಗಳನ್ನು ಶುಭ್ರಗೊಳಿಸಲು ಪ್ರಯತ್ನಿಸಿದರು. ಅಷ್ಟು ದೂರದಿಂದ ಅತ್ತ ಕಡೆಗೆ ಮೂವರು ಅರಣ್ಯ ರಕ್ಷಕರು ಬರುವುದು ಕಂಡು ಪಿಸ್ತೂಲುಗಳನ್ನು ಹಾಸಿದ್ದ ಜಮಾಖಾನೆ ಅಡಿಯಲ್ಲಿ ಅಡಗಿಸಿದರು. ಅರಣ್ಯ ರಕ್ಷಕರು:


‘‘ಏ ಇಲ್ಲಿಗೇಕೆ ಬಂದಿರಿ?’’
‘‘ದಿಲ್ಲಿ ನೋಡಲು ಬಂದಿದ್ದೇವೆ. ಇಲ್ಲಿ ಪ್ರೇಕ್ಷಣೀಯ ಸ್ಥಳಗಳು ಏನಾದರೂ ಇದ್ದರೆ ನೋಡಲೆಂದು ಬಂದೆವು.’’
‘‘ಅಂತಹ ಯಾವುದೂ ಇಲ್ಲಿಲ್ಲ. ಹೊರಡಿ’’
ಇಲ್ಲಿರುವುದು ಕ್ಷೇಮವಲ್ಲವೆಂದು ಅಲ್ಲಿಂದ ಎದ್ದು ಹಿಂದೂ ಮಹಾಸಭಾ ಭವನಕ್ಕೆ ಹೋದರು. ಆ ಸಂಜೆ ಮತ್ತೆ ಆಪ್ಟೆ ಬಂದು ಅವರನ್ನು ತಾವು ತಂಗಿದ್ದ ಮೆರೀನಾ ಹೊಟೇಲ್‌ಗೆ ಕರೆದೊಯ್ದ. ಅಲ್ಲಿ ಗೋಪಾಲ ತನ್ನ ಪಿಸ್ತೂಲನ್ನು ಎಣ್ಣೆಯಿಂದ ತಿಕ್ಕಿ ತೊಳೆದು ಶುಭ್ರಮಾಡಿದ. ಬಡ್ಗೆ ಕೊಠಡಿಯ ಟಾಯ್ಲೆಟ್ ಒಳಗೆ ಗನ್-ಕಾಟನ್ -ಸ್ಲಾಬನ್ನು ಸ್ಫೋಟಿಸಲು ತಂತಿ ಬತ್ತಿ ಜೋಡಿಸಿ ಅದನ್ನು ಪರೀಕ್ಷಿಸಿದ. ಗನ್-ಕಾಟನ್-ಸ್ಲಾಬ್ ಸಿಡಿದು ಸದ್ದು ಮಾಡಿತು. ಇನ್ನು ಆಯುಧಗಳು ಗುರಿತಪ್ಪದೆ ಕೆಲಸ ಮಾಡುವುದು ನಿಶ್ಚಿತವೆಂದು ನಿಶ್ಚಯಿಸಿ ಮರುದಿನ ಸಂಜೆ 5ಕ್ಕೆ ಗಾಂಧಿಯನ್ನು ಪ್ರಾರ್ಥನಾ ಸಭೆಯಲ್ಲಿ ಗುಂಡಿಕ್ಕಿ ಕೊಲೆ ಮಾಡಲು ಮುಹೂರ್ತ ಗೊತ್ತು ಮಾಡಿದರು.
 ಸುಮುಹೂರ್ತ ಸನ್ನಿಹಿತವಾಗುತ್ತಿತ್ತು. ಅಂದು ಬೆಳಗ್ಗೆ ಕೊಲೆಗಾರರ ನಿಜ ನಾಮಧೇಯಗಳಿಗೆ ಬದಲಾಗಿ ಗುಪ್ತ ಭಿನ್ನ ಹೆಸರುಗಳನ್ನು ಆಪ್ಟೆ ಇಟ್ಟ. ನಾಥೂರಾಮ್ ದೇಶಪಾಂಡೆಯಾದ; ಕರ್ಕರೆ ವ್ಯಾಸನಾದ; ಆಪ್ಟೆ ಕರಮರಕರ್ ಆದ; ಬಡ್ಗೆ ಬಂದೋಪಂಥ್ ಆದ; ಶಂಕರ ತುಕಾರಾಮನಾದ. ಹೆಸರುಗಳನ್ನು ಬದಲಾಯಿಸಿದಂತೆ ವೇಷವನ್ನೂ ಬದಲಾಯಿಸಿಕೊಂಡರು. ನಾಥೂರಾಮ್ ಮಿಲಿಟರಿ ಖಾಕಿ ಸಮವಸ್ತ್ರ ಧರಿಸಿದ. ಅವನ ಆಪ್ತ ಆಪ್ಟೆ ನೀಲಿ ಸೂಟ್ ಹಾಕಿಕೊಂಡ. ಕರ್ಕರೆ ಜವಾಹರಲಾಲ್ ನೆಹರೂ ನಿಲುವಂಗಿ ತೊಟ್ಟು ಗಾಂಧಿ ಟೋಪಿ ಇಟ್ಟುಕೊಂಡ. ಮದನಲಾಲ್ ಆಂಗ್ಲರಂತೆ ಕೋಟು ಟ್ರೌಜರ್ ಹಾಕಿಕೊಂಡ. ಗೋಪಾಲ ನಿಕ್ಕರ್, ಷರ್ಟ್, ಮೇಲೊಂದು ಜಾಕೆಟ್ ತೊಟ್ಟುಕೊಂಡ. ಮುಖ್ಯ ಪಾತ್ರಧಾರಿ ಬಡ್ಗೆ ಪಂಚೆ ಉಟ್ಟು ಜವಾಹರ್ ಕೋಟು ಧರಿಸಿದ... ಇನ್ನು ಯಾರ್ಯಾರಿಗೆ ಯಾವ ಆಯುಧ? ಮದನಲಾಲ್ ಮತ್ತು ಶಂಕರ್‌ಗೆ ತಲಾ ಒಂದು ಗನ್-ಕಾಟನ್-ಸ್ಲಾಬ್ ಮತ್ತು ಒಂದೊಂದು ಕೈಬಾಂಬು. ನಾಥೂರಾಮ್, ಗೋಪಾಲ್, ಕರ್ಕರೆಗೆ ಒಂದೊಂದು ಕೈಬಾಂಬು ಮತ್ತು ಬಡ್ಗೆ ಮತ್ತು ಆಪ್ಟೆ ಒಂದೊಂದು ರಿವಾಲ್ವರ್ ಹಿಡಿದಿರಬೇಕು. ಇನ್ನು ಯಾರ್ಯಾರು, ಎಲ್ಲೆಲ್ಲಿ ಇದ್ದು, ಏನೇನು ಕೆಲಸ ಮಾಡಬೇಕು? ನಾಥೂರಾಮ್ ಮತ್ತು ಆಪ್ಟೆ ಎಲ್ಲರಿಗೂ ಸಂಜ್ಞೆಯಿಂದ ಸೂಚನೆ ಕೊಡಬೇಕು. ಮದನಲಾಲ್ ಬಿರ್ಲಾ ಗೃಹದ ಹಿಂಬದಿಯ ಕಾಂಪೌಂಡಿನ ಬಳಿ ಗನ್-ಕಾಟನ್-ಸ್ಲಾಬ್‌ಗೆ ಬತ್ತಿ ಹಚ್ಚಿ ಹಾರಿಸಬೇಕು. ಅದು ಹಾರಿದೊಡನೆ ಬಡ್ಗೆ ಪ್ರಾರ್ಥನಾ ವೇದಿಕೆಯ ಹಿಂದಿರುವ ಸೇವಕನ ಕೊಠಡಿಯಿಂದ ಗಾಂಧೀಜಿಗೆ ಗುಂಡು ಹೊಡೆಯಬೇಕು. ಗಾಂಧೀಜಿಯ ಹಿಂಬದಿಯ ಛಾಯಾಚಿತ್ರ ಗ್ರಹಣ ಮಾಡುವವನಂತೆ ನಟಿಸಿ ಹಿಂದಕ್ಕೆ ಹೋಗಿ ಗುಂಡಿಕ್ಕಬೇಕು. ಮತ್ತೆ ಕೊಠಡಿಯ ಒಳಗೆ ನಿಂತು ವೆಂಟಿಲೇಟರ್ ಜಾಲರಿಯ ಸಂದಿನಿಂದ ಕೈಬಾಂಬ್ ಎಸೆಯಬೇಕು. ಉಳಿದವರು ಪ್ರಾರ್ಥನಾ ಸಭೆಯಲ್ಲಿ ಸೇರಿಕೊಳ್ಳಬೇಕು.
ಗಾಂಧೀಜಿ ಸರಿಯಾಗಿ ಸಂಜೆ 5 ಗಂಟೆಗೆ ಪ್ರಾರ್ಥನಾ ಸಭೆಗೆ ಬರುತ್ತಿದ್ದರು. ಅವರು ಬರುವುದಕ್ಕೆ ಮುನ್ನವೇ ಜನ ತಂಡೋಪತಂಡವಾಗಿ ಬಿರ್ಲಾ ಗೃಹದತ್ತ ಧಾವಿಸುತ್ತಿದ್ದರು. ಯಾರು ಬೇಕಾದರೂ ಬರಬಹುದಾಗಿತ್ತು. ಬರುವವರನ್ನು ಯಾರೂ ತಡೆಯುತ್ತಿರಲಿಲ್ಲ. ಪ್ರಶ್ನಿಸುತ್ತಿರಲಿಲ್ಲ. ಭದ್ರತಾ ಸಿಬ್ಬಂದಿಯೂ ಇರಲಿಲ್ಲ. ಸಮವಸ್ತ್ರ ಧರಿಸಿದ ಪೊಲೀಸರೂ ಅಲ್ಲಿರಲಿಲ್ಲ. ಪೊಲೀಸರಿದ್ದರೂ ಸಾಧಾರಣ ಸಾಮಾನ್ಯ ಉಡುಪು ಧರಿಸಿ ಜನರೊಡನೆ ಬೆರೆತು ನಿಗಾ ಇಟ್ಟಿದ್ದರು. ಎಷ್ಟೋ ಸಾರಿ ರಾಜಕೀಯ ಮುಖಂಡರನೇಕರು ಬರುತ್ತಿದ್ದರು. ಮಂತ್ರಿಗಳು ಬರುತ್ತಿದ್ದರು. ಆದರೆ ಅಂಗರಕ್ಷಕರು ಯಾರೂ ಇರುತ್ತಿರಲಿಲ್ಲ. ಆದ್ದರಿಂದ ಪುಣೆಯ ಹಂತಕ ಪಡೆ ಯಾವ ಅಡೆತಡೆ, ಅಡ್ಡಿ ಆತಂಕವಿಲ್ಲದೆ ಪ್ರಾರ್ಥನಾ ಸಭೆಯ ಸ್ಥಳಕ್ಕೆ ಬಂದಿತು. ಯಾರ್ಯಾರು ಎಲ್ಲೆಲ್ಲಿ ಇರಬೇಕೆಂದು ನಿರ್ಧಾರವಾಗಿತ್ತೋ ಅವರು ಅಲ್ಲಲ್ಲಿ ನಿಂತರು.
ಬಡ್ಗೆ ಮತ್ತು ಗೋಪಾಲ ಗೋಡ್ಸೆ ಗಾಂಧೀಜಿ ಕುಳಿತುಕೊಳ್ಳುವ ಪ್ರಾರ್ಥನಾ ವೇದಿಕೆಯ ಹಿಂಬದಿಗಿದ್ದ ಕಾವಲುಗಾರನ ಕೊಠಡಿಯ ಬಳಿ ಹೋದರು. ಅಲ್ಲಿದ್ದ ಮಾಲಿಯ ಕೈಯಲ್ಲಿ ಹತ್ತು ರೂಪಾಯಿಯ ನೋಟು ತುರುಕಿದ. ‘‘ಇಲ್ಲಿಗೇಕೆ ಬಂದೆ?’’ ಎಂದು ಕಾವಲುಗಾರ ಕೇಳಿದ ಪ್ರಶ್ನೆಗೆ ಬಡ್ಗೆ; ‘‘ಗಾಂಧೀಜಿಯ ಚಿತ್ರ ಛಾಯಾಗ್ರಹಣ ಮಾಡಬೇಕು’’ ಎಂದಷ್ಟೇ ಹೇಳಿದ. ಕೊಠಡಿಯ ಒಳಗೆ ಹೋಗಲೆಂದು ಹೆಜ್ಜೆ ಇಟ್ಟಾಗ ಕಾವಲುಗಾರ (ಮಾಲಿ) ಕಣ್ಣ್ಣಿಗೆ ಬಿದ್ದ. ಅವನಿಗೆ ಒಕ್ಕಣ್ಣು! ನೋಡಿದೊಡನೆಯೇ ಬಡ್ಗೆ ಕಣ್ಣು ಮುಚ್ಚಿದ. ಒಕ್ಕಣ್ಣನನ್ನು ನೋಡಿದ್ದು ಮಹಾ ಅಪಶಕುನವೆಂದು ಅಲ್ಲೇ ನಿಂತ. ಕೊಠಡಿಯೊಳಗೆ ಹೋಗುವ ಮನಸ್ಸಾಗದೆ ಆಪ್ಟೆಯ ಬಳಿ ಬಂದು ‘ಅವನಿಗೆ ಒಂದು ಕಣ್ಣಿಲ್ಲ. ಅಲ್ಲಿಗೆ ನಾ ಹೋಗಲಾರೆ’ ಎಂದ. ಹಾಗಾಗಿ ಗಾಂಧಿಯ ಮುಂದೆ ಪ್ರೇಕ್ಷಕರೊಡನೆ ಬೆರೆತುಕೊಳ್ಳುವುದಾಗಿ ಹೇಳಿದ.
ಗಾಂಧೀಜಿ ಉಪವಾಸ ನಿಲ್ಲಿಸಿ ಇಪ್ಪನ್ನಾಲ್ಕು ಗಂಟೆಗಳಾಗಿತ್ತು. ನಡೆದು ಬರುವಷ್ಟು ತ್ರಾಣವೂ ಇರಲಿಲ್ಲ. ಗಟ್ಟಿಯಾಗಿ ಮಾತನಾಡಲು ಶಕ್ತಿ ಇರಲಿಲ್ಲ. ಆದರೂ ಮುದುಕ ಪ್ರಾರ್ಥನಾ ಸಭೆಯನ್ನುದ್ದೇಶಿಸಿ ಮಾತನಾಡಲು ಇಚ್ಛಿಸಿದರು. ನಡೆಯಲಾರದ ಅವರನ್ನು ಗಾಲಿ ಕುರ್ಚಿಯಲ್ಲಿ ತಳ್ಳಿಕೊಂಡೇ ಬಂದರು. ಗಾಂಧೀಜಿ ಭಾಷಣ ಪ್ರಾರಂಭಿಸಿ ಪಿಸುಧನಿಯಲ್ಲಿ ಸುಶೀಲಾ ನಯ್ಯರ್ ಕಿವಿಯಲ್ಲಿ ‘‘ಯಾರು ಮುಸ್ಲಿಮರ ಶತ್ರುವೋ ಅವರು ಭಾರತದ ಶತ್ರು’’ ಎಂದು ಮೆಲ್ಲನೆ ಉಸುರಿದರು. ಸುಶೀಲ ಆ ಮಾತನ್ನು ಧ್ವನಿವರ್ಧಕ ಯಂತ್ರದ ಮೂಲಕ ಬಿತ್ತರಿಸಿದರು. ಹಿಂಬದಿಯ ಕೊಠಡಿಯಲ್ಲಿದ್ದ ಗೋಪಾಲ ಗೋಡ್ಸೆಗೆ ಆ ಮಾತು ಕೇಳಿಸಿತು. ಗಾಂಧೀಜಿ ಮುಂದುವರಿದು ‘‘ನಾವೆಲ್ಲ ಅನ್ಯೋನ್ಯವಾಗಿ ಬಾಳಬೇಕು. ನಾವು ಭಾರತೀಯರು. ಇಡೀ ಜಗತ್ತಿನ ಜನರೊಡನೆ ಸ್ನೇಹಿತರಾಗಲು ಬಯಸುವುದಾದರೆ ನಮ್ಮ ದೇಶದಲ್ಲಿಯೇ ಇರುವ ಮುಸ್ಲಿಮರನ್ನು ಶತ್ರುಗಳಂತೆ ಕಾಣಬೇಕೆಂಬುದಕ್ಕೆ ಕಾರಣವೇನೂ ಇಲ್ಲ. ನಾನು ಪ್ರವಾದಿಯಲ್ಲ. ಆದರೆ ಭಗವಂತ ನನಗೊಂದಿಷ್ಟು ವಿಚಾರ ಶಕ್ತಿಯನ್ನು, ಒಂದು ಹೃದಯವನ್ನು ಕೊಟ್ಟಿದ್ದಾನೆ. ನಮ್ಮ ದೇಶದಲ್ಲಿರುವ ಹಿಂದೂ ಮುಸ್ಲಿಮರಲ್ಲಿ ಯಾವುದೇ ಕಾರಣದಿಂದ ವೆುತ್ರಿಯನ್ನುಂಟು ಮಾಡಲು ನಾವು ಅಸಮರ್ಥರಾದರೆ, ಈ ದೇಶದಲ್ಲಿಯೇ ಮಾತ್ರವಲ್ಲ ಇಡೀ ಜಗತ್ತಿನಲ್ಲಿರುವವರೊಡನೆ ಮೈತ್ರಿಯನ್ನು ಸಾಧಿಸಲು ಅಸಮರ್ಥರಾದರೆ ನಮ್ಮ ಸ್ವಾತಂತ್ರವನ್ನು ನಾವು ಉಳಿಸಿಕೊಳ್ಳಲಾರೆವು. ಅದು ಇತರರ ಕೈಗೆ ಹೋಗುತ್ತದೆ. ನಾವು ಮತ್ತೆ ಪರರ ದಾಸರಾಗುತ್ತೇವೆ. ಪಾಕಿಸ್ತಾನವೂ ದಾಸ್ಯ ದೇಶವಾಗುತ್ತದೆ. ನಾವು ಗಳಿಸಿದ ಸ್ವಾತಂತ್ರ ನಷ್ಟವಾಗುತ್ತದೆ...’’ ಮುಂದುವರಿದು ಗಾಂಧೀಜಿ ‘‘ನಮ್ಮ ಈ ದೊಡ್ಡ ದೇಶದಲ್ಲಿ ಬಾಳಲು ಎಲ್ಲರಿಗೂ ಸ್ಥಳಾವಕಾಶವಿದೆ. ನಿಮ್ಮಾಡನೆ ಬದುಕಿರಬೇಕೆಂದು ಬಯಸಿದರೆ ಎಲ್ಲ ಕೋಮಿನವರೂ ಒಬ್ಬರಿಗೊಬ್ಬರು ಶಾಂತಿಯಿಂದ ಬದುಕಬೇಕು. ಆಯುಧಗಳ ಬಲದಿಂದಲ್ಲ. ಪ್ರೇಮದಿಂದ. ಪ್ರೇಮಕ್ಕಿಂತ ಉತ್ತಮವಾದ ಸಿಮೆಂಟ್ ಜಗತ್ತಿನಲ್ಲಿ ಇನ್ನೊಂದಿಲ್ಲ.’’ ಕೋಮುಸೌಹಾರ್ದ ಮಂತ್ರ ಜಪಿಸುತ್ತಿದ್ದರು.
ಹೀಗೆ ಮಾತು ಮೆಲುಧನಿಯಲ್ಲಿ ಮುಂದುವರಿಯುತ್ತಿರುವಾಗ ಕೊಲೆಗಾರರ ತಂಡ ನಿರ್ಧರಿಸಿದ್ದಂತೆ ಮದನಲಾಲನು ಗಾಂಧೀಜಿಗೆ ಎಪ್ಪತ್ತು ಅಡಿ ದೂರಲ್ಲಿ ಬಿರ್ಲಾ ಗೃಹದ ಹಿಂಬದಿ ಕಾಂಪೌಂಡ್ ಗೋಡೆಯ ಬಳಿ ಗನ್-ಕಾಟನ್-ಸ್ಲಾಬ್ ಹಾರಿಸಿದ.
(ಶನಿವಾರದ ಸಂಚಿಕೆಗೆ ಮುಂದುವರಿಯುವುದು)

Writer - ಕೋ. ಚೆನ್ನಬಸಪ್ಪ

contributor

Editor - ಕೋ. ಚೆನ್ನಬಸಪ್ಪ

contributor

Similar News

ಜಗದಗಲ
ಜಗ ದಗಲ