ಜಾಗತಿಕ ಬಂಡವಾಳ ಮತ್ತು ಯುದ್ಧ ಪರಂಪರೆ

Update: 2019-03-06 18:37 GMT

ಇತ್ತ ಇತಿಹಾಸವನ್ನೂ ಅರಿಯದ, ಅತ್ತ ವಾಸ್ತವ ಸನ್ನಿವೇಶದ ಸತ್ಯಾಸತ್ಯತೆಗಳನ್ನಾಗಲೀ, ಪೂರ್ವಾಪರಗಳನ್ನಾಗಲೀ ಅರಿಯದ ಜನಸಾಮಾನ್ಯರಿಗೆ ಮಡಿಯುವ ಯೋಧರಲ್ಲಿ ಹುತಾತ್ಮರೂ, ಹತ್ಯೆಗೊಳಗಾಗುವವರಲ್ಲಿ ಜಿಹಾದಿಗಳೂ ಕಾಣುತ್ತಾರೆಯೇ ಹೊರತು ಇವೆರಡರ ನಡುವೆ ಸಾವು ಸೃಷ್ಟಿಸುವ ಮಸಣಸದೃಶ ಸಮಾಜದ ಕಲ್ಪನೆಯೂ ಸುಳಿಯುವುದಿಲ್ಲ. ವೇದನೆಯೂ ಅರ್ಥವಾಗುವುದಿಲ್ಲ. ಇಂತಹ ಸನ್ನಿವೇಶವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಜನ ನಾಯಕರಿಗೆ ಯೋಧರು ಪಗಡೆಯ ದಾಳಗಳಂತೆ, ಹರಕೆಯ ಕುರಿಗಳಂತೆ, ಚುನಾವಣೆಯ ಬಂಡವಾಳದಂತೆ ಕಾಣುತ್ತಾರೆ

ಮನುಕುಲ ತನ್ನ ಅಭ್ಯುದಯದ ಹಾದಿಯಲ್ಲಿ ಯಾವುದೇ ಕಾಲಘಟ್ಟದಲ್ಲೂ ಯುದ್ಧ ಪರಂಪರೆಯನ್ನು ಬಯಸಿಲ್ಲ. ಆದರೆ ತನಗೇ ಅರಿವಿಲ್ಲದೆ ಈ ಅಮಾ ನುಷ ಪರಂಪರೆಯನ್ನು ಪೋಷಿಸುತ್ತಲೇ ಬಂದಿದೆ. ಇದು ದ್ವಂದ್ವ ಅಲ್ಲ. ದ್ವಂದ್ವದಂತೆ ಕಾಣುವ ವಾಸ್ತವ ಮತ್ತು ಇತಿಹಾಸ ಕಂಡಿರುವ ಸತ್ಯ. ಮನುಕುಲ ಎಂದಾಕ್ಷಣ ಆಳುವ ವರ್ಗಗಳ ಮಸೂರವನ್ನು ಬಳಸಿ ಸುತ್ತ ನೋಡಿದಾಗ ನಮಗೆ ಕಾಣುವ ದೃಶ್ಯಾವಳಿಗಳಿಗೂ, ಜನಸಾಮಾನ್ಯರ ಮಸೂರ ಬಳಸಿ ನೋಡುವಾಗ ಕಾಣುವ ವಾಸ್ತವಗಳಿಗೂ ಇರುವ ವ್ಯತ್ಯಾಸವನ್ನು ಈಗಲಾದರೂ ಪ್ರಜ್ಞಾವಂತ ಸಮಾಜ ಗ್ರಹಿಸಲು ಪ್ರಯತ್ನಿಸಬೇಕಿದೆ. ಪ್ರಾಚೀನ ಸಮಾಜದಿಂದ ಆಧುನಿಕ ತಂತ್ರಜ್ಞಾನ ಯುಗದವರೆಗೆ, ಗುಲಾಮಗಿರಿ ಪದ್ಧತಿಯಿಂದ ಪ್ರಜಾತಂತ್ರ ವ್ಯವಸ್ಥೆಯವರೆಗೆ ಇತಿಹಾಸವನ್ನು ಅವಲೋಕನ ಮಾಡಿದಾಗ ಅರಿವಾಗುವ ಒಂದು ಅಂಶವೆಂದರೆ ಎಲ್ಲ ಕಾಲಘಟ್ಟಗಳಲ್ಲೂ ಸಮಾಜ, ಸಂಸ್ಕೃತಿ, ಆರ್ಥಿಕತೆ, ರಾಜಕಾರಣ ಮತ್ತು ಸಂಪ್ರದಾಯಗಳನ್ನು ನಿಯಂತ್ರಿಸುವ ಒಂದು ಶಕ್ತಿ ಆಯಾ ಕಾಲಘಟ್ಟದ ಇತಿಹಾಸವನ್ನು ತನ್ನಿಚ್ಛೆಯಂತೆ ರಚಿಸುತ್ತಾ ಹೋಗುತ್ತದೆ. ಭಾರತದ ಸಂದರ್ಭದಲ್ಲಿ ಪುರಾಣ ಕಥನಗಳಲ್ಲೂ ಇದೇ ಪರಂಪರೆಯನ್ನು ಗುರುತಿಸಬಹುದು. ಈ ಪರಂಪರೆಯನ್ನು ಪ್ರಶ್ನಿಸುವ ಯಾವುದೇ ಆಧುನಿಕ ಮನಸ್ಸುಗಳು, ಎಲ್ಲ ಕಾಲಘಟ್ಟಗಳಲ್ಲೂ, ದ್ರೋಹಿ ಎಂದೇ ಪರಿಗಣಿಸಲ್ಪಟ್ಟಿವೆ.
 ಜನಸಾಮಾನ್ಯರ ದೃಷ್ಟಿಯಿಂದ ಇತಿಹಾಸವನ್ನು ನೋಡುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಬಹುದು. ಸಮಕಾಲೀನ ಸಮಾಜ, ರಾಜಕಾರಣ, ಸಾಂಸ್ಕೃತಿಕ ಸ್ಥಿತ್ಯಂತರಗಳು ಮತ್ತು ಸಾಂಸ್ಥಿಕ ಆಧಿಪತ್ಯವನ್ನು ನಮ್ಮ ಸುತ್ತಲಿನ ಜನಸಮುದಾಯಗಳ ದೃಷ್ಟಿಯಿಂದ ನೋಡುವುದನ್ನು ಕಲಿತರೆ, ಇತಿಹಾಸವನ್ನು ನೋಡುವುದು ಹೇಗೆ ಎಂದು ಅರಿವಾಗುತ್ತದೆ. ಈ ರೀತಿಯಲ್ಲಿ ಯೋಚಿಸುವ ಮುನ್ನ ಸಮಾಜ ಎಂದರೇನು? ದೇಶ ಎಂದರೇನು? ಭೌಗೋಳಿಕ ದೇಶಕ್ಕೂ, ಬೌದ್ಧಿಕ ದೇಶಕ್ಕೂ ಇರುವ ವ್ಯತ್ಯಾಸವೇನು? ಆಳುವ ವರ್ಗಗಳು ಯಾರು ? ಸಮಾಜದ ಮುನ್ನಡೆಗೆ ಶ್ರಮಿಸುವ ಜನಸಾಮಾನ್ಯರ ಬದುಕಿಗೂ ಒಂದು ಭೌಗೋಳಿಕ ರಾಷ್ಟ್ರದ ಅಭಿವೃದ್ಧಿಗೂ ಇರುವ ಸಂಬಂಧಗಳು ಏನು? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಆದರೆ ಪ್ರಸ್ತುತ ಆಡಳಿತ ವ್ಯವಸ್ಥೆಯಲ್ಲಿನ ಶೈಕ್ಷಣಿಕ ಪದ್ಧತಿಯಲ್ಲಾಗಲೀ, ಸಾರ್ವಜನಿಕ ಸಂಕಥನದ ಚೌಕಟ್ಟಿನಲ್ಲಾಗಲೀ ಈ ಪ್ರಶ್ನೆಗಳು ಅಪ್ರಸ್ತುತವಾಗಿಯೇ ಉಳಿಯುತ್ತವೆ. ಇತಿಹಾಸ ನಿರ್ಮಿಸಿ ರೂಪಿಸುವವರು ಶ್ರಮಜೀವಿಗಳು ಮತ್ತು ಸಮಾಜದ ಮುನ್ನಡೆಗೆ ಶ್ರಮಿಸುವ ಜನಸಾಮಾನ್ಯರು. ಆದರೆ ಇತಿಹಾಸ ರಚಿಸಿ ದಾಖಲಾಗಿಸುವವರು ಆಳುವ ವರ್ಗಗಳು ಮತ್ತು ಅವರ ಪೋಷಣೆಯಲ್ಲೇ ಇರುವ ಬೌದ್ಧಿಕ ಹಿತಾಸಕ್ತಿಗಳು. ಇಡೀ ವಿಶ್ವದ ಇತಿಹಾಸವನ್ನು ಅವಲೋಕನ ಮಾಡಿದರೂ ಇದು ಸತ್ಯ ಎನಿಸುತ್ತದೆ. ಹಾಗಾಗಿಯೇ ನಮಗೆ ಗುಪ್ತರ ಕಾಲದ ಸುವರ್ಣ ಯುಗ, ವಿಜಯನಗರದ ವೈಭವ, ಮೊಗಲರ ಕಾಲದ ದಕ್ಷ ಆಡಳಿತ, ಅಶೋಕ ಚಕ್ರವರ್ತಿಯ ಅದ್ಭುತ ಆಡಳಿತ ಇವೆಲ್ಲವೂ ಚಿರಪರಿಚಿತ ಎನಿಸುತ್ತವೆ. ಆದರೆ ಇದೇ ಸಾಮ್ರಾಜ್ಯಗಳಲ್ಲಿನ ಶ್ರಮಜೀವಿಗಳ ಚರಿತ್ರೆಯನ್ನು ತಿಳಿದುಕೊಳ್ಳುವ ಕುತೂಹಲವೂ ನಮ್ಮಲ್ಲಿ ಉಳಿದಿರುವುದಿಲ್ಲ.
ಈ ಕುತೂಹಲ ಕೆಲವರಲ್ಲೇ ಇರುತ್ತದೆ. ಆದರೆ ಸ್ಥಾಪಿತ ಹಿತಾಸಕ್ತಿಗಳನ್ನು, ಸ್ಥಾಪಿತ ವ್ಯವಸ್ಥೆಯನ್ನು ಹಾಗೂ ಸ್ವೀಕೃತ ಇತಿಹಾಸವನ್ನು ಪ್ರಶ್ನಿಸುವ ಮೂಲಕ ಈ ಕೆಲವೇ ಧ್ವನಿಗಳು ಪ್ರತಿರೋಧದ ನೆಲೆಯಲ್ಲಿ ಅನ್ಯ ಗ್ರಹ ಜೀವಿಗಳಂತೆ ಕಾಣತೊಡಗುತ್ತವೆ. ‘‘ಶತಮಾನಗಳಿಂದ ನಂಬಿಕೊಂಡು ಬಂದಿರುವ ಇತಿಹಾಸವನ್ನು ಪ್ರಶ್ನಿಸಲು ಇವನಾರು?’’ ಎನ್ನುವ ವಿಕೃತ ಪ್ರಶ್ನೆ ಸಾರ್ವಜನಿಕ ಸಂಕಥನದ ಒಂದು ಭಾಗವಾಗಿಬಿಡುತ್ತದೆ. ಡಾ. ಬಿ. ಆರ್ ಅಂಬೇಡ್ಕರ್ ಭಾರತದ ಅಸ್ಪಶ್ಯ ಸಮುದಾಯದ ಇತಿಹಾಸವನ್ನು ಕೆದಕಿ ಸತ್ಯವನ್ನು ಹೊರಗೆಡಹಿದಾಗ ಇದೇ ಪ್ರತಿಕ್ರಿಯೆ ವ್ಯಕ್ತವಾಗಿದ್ದುದನ್ನು ಗಮನಿಸಬಹುದು. ರಾಮಾಯಣ ಮಹಾಭಾರತದಂತಹ ಕಾಲ್ಪನಿಕ ಕಾವ್ಯಗಳನ್ನು ಶೋಧಿಸಿದರೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿಯೇ ಸಮಕಾಲೀನ ಇತಿಹಾಸವನ್ನು ಜನಸಾಮಾನ್ಯರಿಂದ ಮುಚ್ಚಿಟ್ಟರೂ ಈ ಕುತೂಹಲ ಹಾಗೆಯೇ ಸುಪ್ತವಾಗಿ ಉಳಿಯುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕ ಇತಿಹಾಸ ಬೋಧನೆಯ ಸಂದರ್ಭದಲ್ಲಿ ಲ್ಯಾಟಿನ್ ಅಮೆರಿಕದ ಶ್ರಮಜೀವಿಗಳ ಕ್ರಾಂತಿಕಾರಿ ಹೋರಾಟಗಳನ್ನು ಉದ್ದೇಶಪೂರ್ವಕವಾಗಿಯೇ ಹುದುಗಿ ಹಾಕಿರುವಂತೆಯೇ ಭಾರತದ ಶಿಕ್ಷಣ ವ್ಯವಸ್ಥೆಯಲ್ಲೂ ಸಹ ನಮ್ಮ ದೇಶದ ಇತಿಹಾಸದ ಹಲವಾರು ಸಂಗತಿಗಳನ್ನು ಹುದುಗಿ ಹಾಕಲಾಗಿದೆ ಅಥವಾ ವ್ಯವಸ್ಥಿತವಾಗಿ ಪುನರ್ ವ್ಯಾಖ್ಯಾನಕ್ಕೊಳಪಡಿಸಿ ಪ್ರಸ್ತುತಪಡಿಸಲಾಗಿದೆ.
ಸ್ವಂತ ಅಧ್ಯಯನಶೀಲತೆ ಮತ್ತು ಸಂಶೋಧನೆಯ ಆಸಕ್ತಿ ಇಲ್ಲದೆ ಹೋದರೆ ಬಹುಶಃ ಭಾರತದ ಹಲವಾರು ಚಾರಿತ್ರಿಕ ಸಂದರ್ಭಗಳು ನೇಪಥ್ಯದಲ್ಲೇ ಉಳಿದುಬಿಡುತ್ತವೆ. ಪ್ರಸ್ತುತ ಸಂದರ್ಭದಲ್ಲಿ ಕಾಶ್ಮೀರ ಇಲ್ಲಿ ಮುನ್ನೆಲೆಗೆ ಬರುತ್ತದೆ. ಕಾಶ್ಮೀರ ಎಂದರೆ ಕೇವಲ ಒಂದು ಭೂಪ್ರದೇಶವಲ್ಲ ಅಥವಾ ಹಿಮಪರ್ವತಗಳ, ವಿಸ್ಮಯಗೊಳಿಸುವ ಸುಂದರ ನಿಸರ್ಗದ ತಾಣವಲ್ಲ ಅಥವಾ ನಿರ್ದಿಷ್ಟ ಚೌಕಟ್ಟಿನ ಭೌಗೋಳಿಕ ಅಸ್ಮಿತೆಯಲ್ಲ. ಕಾಶ್ಮೀರ ಎಂದರೆ ಅಲ್ಲಿ ಕಾಶ್ಮೀರಿ ಸಂಸ್ಕೃತಿ, ಇತಿಹಾಸ, ಅಲ್ಲಿನ ಮೂಲ ನಿವಾಸಿಗಳ ಚರಿತ್ರೆ, ಅಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿರುವವರ ಇತಿಹಾಸ ಹೀಗೆ ಇತರ ಯಾವುದೇ ಪ್ರದೇಶದಲ್ಲಿರಬಹುದಾದ ವೈಶಿಷ್ಟ್ಯಗಳು, ವೈವಿಧ್ಯಗಳು ಕಾಶ್ಮೀರದಲ್ಲಿ ಕಾಣಸಿಗುತ್ತವೆ. ಆದರೆ ಭಾರತದ ಯಾವುದೇ ಶೈಕ್ಷಣಿಕ ಪಠ್ಯದಲ್ಲಿ ಕಾಶ್ಮೀರದ ಇತಿಹಾಸ ವಸ್ತುನಿಷ್ಠವಾಗಿ ದಾಖಲಾಗಿಲ್ಲ. ಧರೆಯ ಮೇಲಿನ ಸ್ವರ್ಗ, ಸುಂದರ ನಿಸರ್ಗ ತಾಣ ಎಂಬ ಉಪಮೆಗಳ ಮೆರವಣಿಗೆಯಲ್ಲಿ ಅಲ್ಲಿನ ಜನತೆಯ ಕರಾಳ ಇತಿಹಾಸ ಭಾರತದ ಇತರ ಜನತೆಯ ಪಾಲಿಗೆ ಅಂಕದ ಪರದೆಯ ಹಿಂದಿನ ಕೌತುಕವೇ ಆಗಿದೆ. ಇದನ್ನು ಸ್ಥಾಪಿತ ವ್ಯವಸ್ಥೆಯ ವ್ಯವಸ್ಥಿತ ಜಾಲದ ಪರಿಣಾಮ ಎನ್ನಲೂಬಹುದು ಹಾಗೆಯೇ ಇತಿಹಾಸವನ್ನು ಜನಸಾಮಾನ್ಯರಿಗೆ ಪರಿಚಯಿಸುವಲ್ಲಿರುವ ಹೆಕ್ಕಿ ತೆಗೆಯುವ ವಿಕೃತ ಪರಂಪರೆಯ ಪರಿಣಾಮ ಎನ್ನಲೂಬಹುದು.


 ಇಂದಿನ ಪೀಳಿಗೆಗೆ, ಅಷ್ಟೇಕೆ ಒಂದು ಅರ್ಥದಲ್ಲಿ ಒಂದು ಹಂತದ ಹಿಂದಿನ ಪೀಳಿಗೆಗೂ ಸಹ ಕಾಶ್ಮೀರ ಎಂದ ಕೂಡಲೇ ಭಯೋತ್ಪಾದನೆ, ಮುಸ್ಲಿಂ ಉಗ್ರಗಾಮಿಗಳು, ಭಯೋತ್ಪಾದಕ ಸಂಘಟನೆಗಳು, ಪ್ರತ್ಯೇಕತಾವಾದ, ಭಾರತೀಯ ಸೇನೆ, ಪಾಕಿಸ್ತಾನದ ಕರಾಮತ್ತು ಇವಿಷ್ಟೇ ಕಾಣಿಸುತ್ತವೆ. ವಿಶೇಷವಾಗಿ 1990ರ ದಶಕದಲ್ಲಿ ಕಾಶ್ಮೀರದ ಕಣಿವೆಗಳಿಂದ ಒಕ್ಕಲೆಬ್ಬಿಸಲ್ಪಟ್ಟ ಕಾಶ್ಮೀರಿ ಪಂಡಿತರ ಬವಣೆ ಕಾಣುತ್ತದೆ. ಕಾಶ್ಮೀರದಲ್ಲಿ ದಿನನಿತ್ಯ ನಡೆಯುವ ಕೊಲೆಗಳು, ಭಾರತೀಯ ಯೋಧರ ಹತ್ಯೆ, ಉಗ್ರಗಾಮಿಗಳ ಹತ್ಯೆ, ಅಮಾಯಕ ನಾಗರಿಕರ ಹತ್ಯೆ, ಪೊಲೀಸ್ ಅಧಿಕಾರಿಗಳ ಹತ್ಯೆ, ಮಹಿಳೆಯರ ಮೇಲಿನ ಅತ್ಯಾಚಾರ, ಉಗ್ರಗಾಮಿಗಳ ಉಪಟಳ, ಗುಂಡಿನ ಕಾಳಗ ಇವೆಲ್ಲವೂ ಕಾಣುತ್ತವೆ. ಇವೆಲ್ಲವನ್ನೂ ಕುರಿತು ಅರೆ-ರಜತ ಪರದೆಯ ಮೇಲೆ ಪುಂಖಾನುಪುಂಖವಾಗಿ ಚರ್ಚೆ ಮಾಡಲಾಗುತ್ತದೆ. ಆದರೆ ಕಾಶ್ಮೀರದಲ್ಲಿ ಶತಮಾನಗಳಿಂದ ತನ್ನ ಅಸ್ತಿತ್ವ, ಅಸ್ಮಿತೆಯನ್ನು ಉಳಿಸಿಕೊಂಡುಬಂದಿರುವ ಕಾಶ್ಮೀರಿಯತ್ ಕುರಿತು, ಅಲ್ಲಿನ ಜನಸಾಮಾನ್ಯರ ಬದುಕನ್ನು ಕುರಿತು, ಅಲ್ಲಿನ ಬಹುಮುಖೀ ಸಂಸ್ಕೃತಿಯನ್ನು ಕುರಿತು ಚರ್ಚೆ ನಡೆಯುವುದೇ ಇಲ್ಲ. ಅಲ್ಲಿ ತಮ್ಮದೇ ಆದ ಸ್ವಾರ್ಥ ರಾಜಕಾರಣಕ್ಕಾಗಿ, ಕೋಮುವಾದಿ ಕಾರ್ಯಸೂಚಿಗಳಿಗಾಗಿ, ಮತಾಂಧತೆಯ ಧರ್ಮಕಾರಣಕ್ಕಾಗಿ ನೆಲೆ ಕಂಡುಕೊಂಡಿರುವ ಪ್ರತ್ಯೇಕತಾವಾದಿಗಳು, ಮತೀಯವಾದಿಗಳು ಮತ್ತು ಉಗ್ರವಾದಿಗಳೊಡನೆ ಸಂವಾದ ನಡೆಸುವ ಹೊರ ಜಗತ್ತಿನ ಪ್ರಜ್ಞಾವಂತ ಸಮಾಜ ಮತ್ತು ಅಧಿಕಾರ ಪೀಠಗಳು ಕಾಶ್ಮೀರಿಯತ್‌ನೊಡನೆ, ಕಾಶ್ಮೀರದ ಅಸ್ಮಿತೆಯೊಡನೆ ಮುಖಾಮುಖಿಯಾಗಲು ಬಯಸುವುದೇ ಇಲ್ಲ. ನೈಜ ಇತಿಹಾಸವನ್ನು ವ್ಯವಸ್ಥಿತವಾಗಿ ಜನಸಾಮಾನ್ಯರಿಂದ ದೂರ ಇರಿಸುವ ವಿಕೃತ ಪರಂಪರೆಯ ಪರಿಣಾಮ ಇದು.
ಈ ಪರಂಪರೆಯ ಒಂದು ಆಯಾಮವನ್ನು ಪುಲ್ವಾಮ ಘಟನೆಯ ನಂತರದ ಭಾರತದಲ್ಲಿ ಕಾಣುತ್ತಿದ್ದೇವೆ. ಕಾಶ್ಮೀರ ಎಂದರೆ ಭಾರತ ಮತ್ತು ಪಾಕಿಸ್ತಾನದ ಆಳುವ ವರ್ಗಗಳಿಗೆ ಸಂಬಂಧಿಸಿದ ಒಂದು ಭೂ ಪ್ರದೇಶ ಮಾತ್ರ ಎಂದು ಪರಿಗಣಿಸುವ ಧೋರಣೆಯನ್ನು ಕಳೆದ ಹಲವು ದಶಕಗಳಿಂದಲೂ ಕಾಣುತ್ತಿದ್ದೇವೆ. ಒಂದು ರೀತಿಯಲ್ಲಿ ಕಾಶ್ಮೀರ ಭಾರತ ಮತ್ತು ಪಾಕಿಸ್ತಾನ ಸರಕಾರಗಳ ಜಿದ್ದಿಗೆ ಬಲಿಯಾಗಿರುವ ರಿಯಲ್ ಎಸ್ಟೇಟ್ ಆಸ್ತಿಯಂತಾಗಿರುವುದು ಸ್ಪಷ್ಟ. ಪುಲ್ವಾಮ ದುರಂತದಲ್ಲಿ ಮಡಿದ 50ಕ್ಕೂ ಹೆಚ್ಚು ಯೋಧರು ದೇಶಕ್ಕಾಗಿ ಜೀವ ತ್ಯಾಗ ಮಾಡಲೆಂದೇ ಸೇನೆ ಸೇರಿದ್ದರೂ ಸಾಯಲೆಂದೇ ಬಾಳುವವರಲ್ಲ ಎನ್ನುವುದನ್ನು ಯೋಧರ ನೆನಪಿನಲ್ಲಿ ಯುದ್ಧೋನ್ಮಾದ ಸೃಷ್ಟಿಸುವವರು ಅರಿತುಕೊಳ್ಳಬೇಕಿದೆ. ಈ 50 ಯೋಧರು ಬಲಿಯಾಗಲು ಕಾರಣ ಜೈಶೆ ಮುಹಮ್ಮದ್ ಎಂಬ ಭಯೋತ್ಪಾದಕ ಸಂಘಟನೆಯೇ ಹೌದು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆದಿದ್ದೇವೆ ಎಂದು ಬೀಗುತ್ತಿದ್ದ ಸರಕಾರಕ್ಕೆ ಸೇನೆಯ ವಾಹನ ತೆರಳುತ್ತಿದ್ದ ಹೆದ್ದಾರಿಯಲ್ಲಿ ಒಬ್ಬ ಭಯೋತ್ಪಾದಕ ಸ್ಫೋಟಕ ವಸ್ತುಗಳನ್ನು ಹೊತ್ತ ವಾಹನವನ್ನು ಹೇಗೆ ಕೊಂಡೊಯ್ಯಲು ಸಾಧ್ಯವಾಯಿತು ಎಂಬ ಪ್ರಶ್ನೆ ಕಾಡಲೇಬೇಕು.
ಮತ್ತೊಂದೆಡೆ ಈ ಬಾರಿ ಆತ್ಮಾಹುತಿ ದಾಳಿ ನಡೆಸಿದ ವ್ಯಕ್ತಿ ಸ್ಥಳೀಯ ಎನ್ನುವುದೂ ಸಾಬೀತಾಗಿದೆ. ಅಂದರೆ ಕಾಶ್ಮೀರದ ಯುವ ಜನತೆ ಭಯೋತ್ಪಾದನೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಏಕೆ ಹೀಗಾಗುತ್ತಿದೆ? ಕಾಶ್ಮೀರ ನಮ್ಮದು ಎನ್ನುವ ಘೋಷಣೆ ಈ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿನ ಸಮಸ್ಯೆ ಏನು ಎಂದು ಕೂಲಂಕಷವಾಗಿ ಯೋಚಿಸಿ ಕಾರ್ಯೋನ್ಮುಖವಾದಾಗ ಮುಖಾಮುಖಿಯಾಗುವ ಸತ್ಯಾಸತ್ಯತೆಗಳು ಉತ್ತರ ನೀಡಲು ಸಾಧ್ಯ. ಆದರೆ ಈ ರೀತಿ ಯೋಚಿಸಿದ ಕೂಡಲೇ ದೇಶದ್ರೋಹ ಎನ್ನುವ ಹಣೆಪಟ್ಟಿ ಅಂಟಿಕೊಳ್ಳುತ್ತದೆ. ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಿ ಅಥವಾ ನಿಯಂತ್ರಣದಲ್ಲಿಡಿ ಎಂಬ ಆಗ್ರಹವೇ ಭಯೋತ್ಪಾದಕ ಪರ ನಿಲುವು ಎನಿಸಿಬಿಡುತ್ತದೆ. ಇದಕ್ಕೆ ಕಾರಣ ಸಮಕಾಲೀನ ಇತಿಹಾಸವನ್ನು ಗ್ರಹಿಸದೆ ಇರುವುದು ಮತ್ತು ಇತಿಹಾಸದ ಪುಟಗಳನ್ನು ಕೆಲವೇ ಹಿತಾಸಕ್ತಿಗಳಿಗೆ ಅನುಗುಣವಾಗಿ ರಚಿಸಿರುವುದು. ಅಣ್ವಸ್ತ್ರ ಪ್ರಯೋಗಿಸಿಯಾದರೂ ಸರಿ ಪಾಕಿಸ್ತಾನವನ್ನು ಸಂಪೂರ್ಣ ನಾಶ ಮಾಡಿದರೆ ಕಾಶ್ಮೀರ ನಮ್ಮದಾಗುತ್ತದೆ ಎನ್ನುವ ಭ್ರಮೆಯಲ್ಲಿ ಒಂದು ಇಡೀ ಪೀಳಿಗೆ ಮುಳುಗಿದೆ. ಪಾಕಿಸ್ತಾನ ಇಲ್ಲದೆಯೂ ಕಾಶ್ಮೀರ ಸಮಸ್ಯೆ ಇದ್ದೇ ಇರುತ್ತದೆ ಎಂಬ ವಾಸ್ತವವನ್ನು ಈ ಪೀಳಿಗೆಗೆ ತಿಳಿಸುವುದಾದರೂ ಹೇಗೆ ? ಸಮಸ್ಯೆ ಇರುವುದು ಇಲ್ಲಿಯೇ. ನಮಗೆ ಸಮಸ್ಯೆ ಬಗೆಹರಿಯುವುದಕ್ಕಿಂತಲೂ ಹೊತ್ತಿ ಉರಿಯುವುದೇ ಹೆಚ್ಚು ಉಪಯುಕ್ತ ಎನಿಸುತ್ತಿದೆ. ಯುದ್ಧವನ್ನು ಸಂಭ್ರಮಿಸುವ ಯುವ ಮನಸ್ಸುಗಳಿಗೆ ಯುದ್ಧ ಎಂದರೆ ಕೇವಲ ವಾಯು ಸೇನೆಯ ದಾಳಿ, ಬಾಂಬ್‌ಗಳ ಸುರಿಮಳೆ, ಶತ್ರುಗಳ ಸಾವು, ಸೇನೆಯ ತ್ಯಾಗ ಬಲಿದಾನಗಳಷ್ಟೇ ಅಲ್ಲ ಎಂದು ತಿಳಿಸುವುದಾದರೂ ಹೇಗೆ? ಪ್ರತಿ ಹತ್ತು ವರ್ಷಕ್ಕೊಮ್ಮೆ ಜಗತ್ತಿನ ಯಾವುದೋ ಒಂದು ಭಾಗದಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಯಾಗುವಂತೆ ಅಥವಾ ಯುದ್ಧ ನಡೆಯುವಂತೆ ವ್ಯವಸ್ಥಿತ ಸಂಚು ನಡೆಯುತ್ತಿರುವುದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಕಳೆದ ಒಂದು ಶತಮಾನದಲ್ಲಿ ಜಪಾನ್‌ನಿಂದ ಸಿರಿಯಾವರೆಗೆ ಅನೇಕ ದೇಶಗಳು ಈ ಯುದ್ಧ ಪಿಪಾಸುಗಳ ಪೈಶಾಚಿಕ ಕೃತ್ಯಗಳಿಗೆ ಬಳಲಿ ಬೆಂಡಾಗಿರುವುದನ್ನೂ ಕಾಣಬಹುದು.
ಭಾರತ-ಪಾಕಿಸ್ತಾನ ನಡುವಿನ ಸಂಘರ್ಷಮಯ ವಾತಾವರಣ ಕೊಂಚ ತಿಳಿಯಾಗಿದೆ. ಯುದ್ಧದ ಸಂಭವ ಇಲ್ಲದಿದ್ದರೂ ಯುದ್ಧೋನ್ಮಾದವನ್ನು ಕಾಪಾಡಿಕೊಂಡುಬರಲಾಗಿದೆ. ಸದಾ ಯುದ್ಧಕ್ಕೆ ಸಿದ್ಧವಾಗಿಯೇ ಇರುವ ದೊಡ್ಡಣ್ಣ ಅಮೆರಿಕ ಎರಡೂ ದೇಶಗಳ ಸಮರೋತ್ಸಾಹವನ್ನು ಕೊಂಚ ನಿಯಂತ್ರಿಸಿದೆ. ಏಕೆಂದರೆ 20ನೆಯ ಶತಮಾನದ ಔದ್ಯಮಿಕ ಬಂಡವಾಳದಂತೆ ನವ ಉದಾರವಾದದ ಹಣಕಾಸು ಬಂಡವಾಳ ಏಕಾಏಕಿ ಯುದ್ಧ ಬಯಸುವುದಿಲ್ಲ. ಬಂಡವಾಳದ ಆಧಿಪತ್ಯ ಸಾಧಿಸಲು, ಅನ್ಯದೇಶಗಳ ಮಾರುಕಟ್ಟೆಯನ್ನು ನಿಯಂತ್ರಿಸಲು ಔದ್ಯಮಿಕ ಬಂಡವಾಳಕ್ಕೆ ಯುದ್ಧ ಒಂದು ಪ್ರಬಲ ಅಸ್ತ್ರವಾಗಿತ್ತು. ಹಣಕಾಸು ಬಂಡವಾಳ ಸ್ವತಃ ಒಂದು ಅಸ್ತ್ರವಾಗಿದ್ದು ಯಾವುದೇ ಮಾರುಕಟ್ಟೆಯನ್ನು ಕ್ಷಣಮಾತ್ರದಲ್ಲಿ ವಶಪಡಿಸಿಕೊಳ್ಳುತ್ತದೆ. ಯುದ್ಧೋನ್ಮಾದದ ನಡುವೆಯೇ ಭಾರತದ ಆರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಗಳು ಕಾರ್ಪೊರೇಟ್ ವಶವಾಗಿದ್ದು ಒಂದು ಉತ್ತಮ ನಿದರ್ಶನ. ಆದರೂ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಧನಪಿಶಾಚಿ ಪ್ರವೃತ್ತಿಯಿಂದ ಬೃಹತ್ ಗಾತ್ರದಲ್ಲಿ ಬೆಳೆದಿರುವ ಶಸ್ತ್ರಾಸ್ತ್ರ ಉದ್ಯಮಗಳಿಗೆ ಸಣ್ಣ ಪುಟ್ಟ ಸಂಘರ್ಷಗಳು, ಯುದ್ಧ ಸನ್ನಿವೇಶಗಳು ಅನಿವಾರ್ಯ.
ಈ ಸಂಘರ್ಷಗಳು ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಿಗೆ ಯಾವುದೇ ಕಷ್ಟ ನಷ್ಟ ಉಂಟುಮಾಡುವುದಿಲ್ಲ. ಆದರೆ ಲಾಭವನ್ನು ಮಾತ್ರ ತಂದುಕೊಡುತ್ತದೆ. ಉದಾಹರಣೆಗೆ ಫ್ರಾನ್ಸ್‌ನ ರಫೇಲ್ ಯುದ್ಧವಿಮಾನಗಳಿಗೆ ಭಾರತದ ಬೇಡಿಕೆ ಹೆಚ್ಚಾಗುತ್ತದೆ. ಅಮೆರಿಕದ ಪೆಂಟಗಾನ್ ಪಾಕಿಸ್ತಾನಕ್ಕೆ ಹೆಚ್ಚಿನ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತದೆ. ಸೌದಿ ಅರೇಬಿಯ ಮೂಲಕ ಕೆಲವು ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರ ಪೂರೈಸುತ್ತದೆ. ಪಾಕಿಸ್ತಾನ ಅಮೆರಿಕದಿಂದ ಪಡೆದ ಶಸ್ತ್ರಾಸ್ತ್ರಗಳನ್ನೇ ಭಯೋತ್ಪಾದಕರಿಗೆ ಒದಗಿಸಿ ಕಾಶ್ಮೀರದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸುತ್ತದೆ. ಸೌದಿ ಅರೇಬಿಯ ಇತ್ತ ಭಾರತದೊಡನೆ ಸಂಧಾನ ನಡೆಸಿ, ಭಾರತದ ಪ್ರಧಾನಿಯನ್ನು ಅಪ್ಪಿಕೊಳ್ಳುತ್ತಲೇ ಹಿಂಬದಿಯಲ್ಲಿ ಭಾರತದ ಮೇಲೆ ಹಲವು ಬಾರಿ ದಾಳಿ ನಡೆಸಿರುವ ಭಯೋತ್ಪಾದಕ ಸಂಘಟನೆಗಳಿಗೆ ನೆಲೆ ನೀಡುತ್ತದೆ. ಪೆಂಟಗಾನ್ ಮೂಲಕ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತದೆ. ಇದೇ ಭಯೋತ್ಪಾದಕರು ಭಾರತದಲ್ಲೋ, ಪಾಕಿಸ್ತಾನದಲ್ಲೋ, ಅಫ್ಘಾನಿಸ್ತಾನ, ಸಿರಿಯದಲ್ಲೋ ಪೈಶಾಚಿಕ ದಾಳಿ ನಡೆಸುತ್ತಾರೆ. ಅವರ ಉದ್ದೇಶ ಜನರನ್ನು ಸಾಯಿಸುವುದು, ಮುಸ್ಲಿಮರೇ ಆಗಿದ್ದರೂ ಅಡ್ಡಿಯಿಲ್ಲ. ಪೇಶಾವರದಲ್ಲಿ ಸತ್ತ 40 ಹಸುಳೆಗಳು ಮುಸ್ಲಿಮರೇ ಅಲ್ಲವೇ? ಇಲ್ಲಿ ಭಯೋತ್ಪಾದಕರ ಶಸ್ತ್ರಾಸ್ತ್ರ ದಾಸ್ತಾನು ಕಡಿಮೆಯಾಗುತ್ತದೆ. ಭಾರತ, ಪಾಕಿಸ್ತಾನ ಮತ್ತಿತರ ದೇಶಗಳು ಭಯೋತ್ಪಾದಕರನ್ನು ಹತ್ತಿಕ್ಕಲು ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಖರ್ಚು ಮಾಡುತ್ತವೆ. ಕೆಲವು ದಿನಗಳ ಬಳಿಕ ಪೆಂಟಗಾನ್‌ಗೆ ಬೇಡಿಕೆ ಹೆಚ್ಚಾಗುತ್ತದೆ. ಅಮೆರಿಕದ ಆರ್ಥಿಕತೆ ವೃದ್ಧಿಸುತ್ತದೆ. ಫ್ರಾನ್ಸ್ ಮತ್ತಷ್ಟು ಆಧುನಿಕ ಯುದ್ಧ ವಿಮಾನ ತಯಾರಿಸುತ್ತದೆ. ಒಂದು ರೀತಿಯಲ್ಲಿ ಇದು ವಿನಾಶಕಾರಿ ಋತುಚಕ್ರ. ಈ ಚಕ್ರವನ್ನು ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ದೇಶಗಳು ಸದಾ ಚಲನೆಯಲ್ಲೇ ಇಟ್ಟಿರುತ್ತವೆ.
ಆದರೆ ಈ ಚಕ್ರದಡಿಯಲ್ಲಿ ಸಿಲುಕಿ, ಜೀವ ತೆತ್ತು, ವಿನಾಶದತ್ತ ಸಾಗುವವರು ಯಾರು? ಮತಾಂಧರ ಜಿಹಾದ್ ಕಲ್ಪನೆಗೆ ಸಿಲುಕಿ ಸ್ವರ್ಗದ ಕನಸು ಕಾಣುತ್ತಾ ತಮ್ಮ ಪ್ರಾಣ ತ್ಯಾಗ ಮಾಡುವ ಅಮಾಯಕ ಯುವಕರು, ದೇಶದ ಗಡಿ ರಕ್ಷಣೆಗಾಗಿ ಜೀವ ಒತ್ತೆ ಇಟ್ಟು ಹಗಲಿರುಳು ಶ್ರಮಿಸುವ ಯೋಧರು, ಗುಂಡಿನ ದಾಳಿಗೆ, ಬಾಂಬ್ ದಾಳಿಗೆ ಆತ್ಮಾಹುತಿ ದಾಳಿಗೆ ಬಲಿಯಾಗುವ ಜನಸಾಮಾನ್ಯರು. ಕೊಲ್ಲುವವರ ಧರ್ಮ ಕಣ್ಣಿಗೆ ರಾಚುತ್ತದೆ ಸಾಯುವವರ ಧರ್ಮ ನಗಣ್ಯವಾಗುತ್ತದೆ. ಏಕೆಂದರೆ ಯುದ್ಧೋನ್ಮಾದ, ದ್ವೇಷ ರಾಜಕಾರಣ ಮತ್ತು ಮತಾಂಧತೆ ನಮ್ಮ ದೃಷ್ಟಿಯನ್ನು ಮಬ್ಬಾಗಿಸಿರುತ್ತದೆ. ಯುದ್ಧೋನ್ಮಾದದ ಸಮೂಹ ಸನ್ನಿಗೆ ಸಿಲುಕಿರುವ ಸಮಾಜದಲ್ಲಿ ವಾಸ್ತವಗಳು ಗೋಚರಿಸುವುದಿಲ್ಲ. ಹಾಗಾಗಿಯೇ ಯುದ್ಧ ವಿರೋಧಿ ಎಂದ ಕೂಡಲೇ ದೇಶದ್ರೋಹಿ ಎನ್ನಲಾಗುತ್ತದೆ. ಯುದ್ಧ ಬೇಡ ಎಂದರೆ ಭಯೋತ್ಪಾದನೆ ಬೇಕೇ ಎಂಬ ಪ್ರಶ್ನೆ ಧುತ್ತೆಂದು ಎದುರಾಗುತ್ತದೆ. ಇತ್ತ ಇತಿಹಾಸವನ್ನೂ ಅರಿಯದ, ಅತ್ತ ವಾಸ್ತವ ಸನ್ನಿವೇಶದ ಸತ್ಯಾಸತ್ಯತೆಗಳನ್ನಾಗಲೀ, ಪೂರ್ವಾಪರಗಳನ್ನಾಗಲೀ ಅರಿಯದ ಜನಸಾಮಾನ್ಯರಿಗೆ ಮಡಿಯುವ ಯೋಧರಲ್ಲಿ ಹುತಾತ್ಮರೂ, ಹತ್ಯೆಗೊಳಗಾಗುವವರಲ್ಲಿ ಜಿಹಾದಿಗಳೂ ಕಾಣುತ್ತಾರೆಯೇ ಹೊರತು ಇವೆರಡರ ನಡುವೆ ಸಾವು ಸೃಷ್ಟಿಸುವ ಮಸಣಸದೃಶ ಸಮಾಜದ ಕಲ್ಪನೆಯೂ ಸುಳಿಯುವುದಿಲ್ಲ. ವೇದನೆಯೂ ಅರ್ಥವಾಗುವುದಿಲ್ಲ. ಇಂತಹ ಸನ್ನಿವೇಶವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಜನ ನಾಯಕರಿಗೆ ಯೋಧರು ಪಗಡೆಯ ದಾಳಗಳಂತೆ, ಹರಕೆಯ ಕುರಿಗಳಂತೆ, ಚುನಾವಣೆಯ ಬಂಡವಾಳದಂತೆ ಕಾಣುತ್ತಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೇನೆ ಮತ್ತು ಯೋಧರು ಯಾವುದೇ ಒಂದು ಪಕ್ಷದ ಅಥವಾ ಸಿದ್ಧಾಂತದ ಅನುಯಾಯಿಗಳಲ್ಲ ಅಥವಾ ನಿರ್ದಿಷ್ಟ ಪಕ್ಷವನ್ನು ಪ್ರತಿನಿಧಿಸುವ ಗುಂಪೂ ಅಲ್ಲ. ಸಾರ್ವಭೌಮ ಭಾರತದ ಸಾಂವಿಧಾನಿಕ ಪ್ರಾತಿನಿಧಿತ್ವವನ್ನು ಸೇನೆಯಲ್ಲಿ ಕಾಣುವಂತಾದರೆ ಮಾತ್ರ ಪ್ರಜಾತಂತ್ರ ಉಳಿಯಲು ಸಾಧ್ಯ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News

ಜಗದಗಲ
ಜಗ ದಗಲ