ಪ್ರಸಕ್ತ ಭಾರತದಲ್ಲಿ ಮಹಿಳೆ ಸ್ವತಂತ್ರಳೇ?
ಸರಕಾರಗಳು ಕಾರ್ಮಿಕರ ಕಾನೂನುಗಳಿಗೆ ವ್ಯಾಪಕವಾದ ತಿದ್ದುಪಡಿಗಳನ್ನು ಮಾಡಿವೆ ಮತ್ತು ಮಾಡುತ್ತಿವೆ. ಆದರೂ ಮಹಿಳಾ ಕಾರ್ಮಿಕರ ಪಾಡು ಸುಧಾರಿಸಿದೆಯೇ?. ಸಮಾನ ಕೆಲಸಕ್ಕೆ ಸಮಾನ ವೇತನ, ಕನಿಷ್ಠ ಕೂಲಿ, ಕೆಲಸದ ಭದ್ರತೆ, ಪ್ರಸವ ಕಾಲದ ರಜೆ ಮುಂತಾದವುಗಳು ಹೆಚ್ಚಿನ ಮಹಿಳೆಯರ ಪಾಲಿಗೆ ಮರೀಚಿಕೆಯಾಗಿದೆ.
ಪ್ರಪಂಚದ ಎಲ್ಲೆಡೆಯಂತೆ ಭಾರತದಲ್ಲಿಯೂ ಪ್ರತಿ ವರ್ಷ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ. ಭಾರತೀಯ ನಾರಿ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಶಾಸ್ತ್ರ, ಇಂಜಿನಿಯರಿಂಗ್, ಬಾಹ್ಯಾಕಾಶ ಸಂಶೋಧನೆ, ಆಡಳಿತ, ವಿದ್ಯಾಭ್ಯಾಸ, ನ್ಯಾಯಾಲಯ, ಸಾರಿಗೆ, ಲಲಿತ ಕಲೆಗಳು, ಸಾಹಿತ್ಯ, ಕ್ರೀಡೆ ಮತ್ತು ಸಾಹಸ, ಸೈನ್ಯ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಸರಿ ಪ್ರಮಾಣದಲ್ಲಿ ರಾರಾಜಿಸುತ್ತಿದ್ದಾಳೆ. ಭಾರತದ ಮಹಿಳೆಯರು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ಮಾಡಿರುವ ಸಾಧನೆಗಳನ್ನು ದೇಶ ಕೊಂಡಾಡುತ್ತದೆ.
ಹೊಸ ಆರ್ಥಿಕ ನೀತಿಗಳು ಜಾರಿಗೆ ಬಂದು 25ಕ್ಕಿಂತ ಹೆಚ್ಚಿನ ವರ್ಷಗಳು ಉರುಳಿಹೋದವು. ದೇಶದಲ್ಲಿ ಇಂದು ಎರಡು ಬಗೆಯ ಮಹಿಳಾ ದಿನಾಚರಣೆಯನ್ನು ವೀಕ್ಷಿಸುತ್ತೇವೆ. ಮೊದಲನೆಯದು, ಬೂರ್ಷ್ವಾ ರೀತಿಯ ಆಚರಣೆ. ಇಲ್ಲಿ ಹೆಣ್ಣಿನ ಬಾಹ್ಯ ಸೌಂದರ್ಯಕ್ಕಷ್ಟೇ ಪ್ರಾಧಾನ್ಯ. ಇಂದು ಇಡೀ ವಿಶ್ವವೇ ಒಂದು ಮಾರುಕಟ್ಟೆ. ಆದ್ದರಿಂದ ಮಾರುಕಟ್ಟೆಗೆ ಒಂದು ಹೊಸ ವಸ್ತು ಬಂದರೆ ಹೇಗೆ ಮಾರಾಟವೋ ಅದೇ ರೀತಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರಾಟ ಮಾಡಲಾಗುತ್ತೆ. ಅದು ವಾರ್ಷಿಕ ಘಟನೆಯಷ್ಟೇ. ಆದರೆ ರಂಗು ರಂಗಾಗಿ, ಮೋಹ ಲಾವಣ್ಯದಿಂದ ಕೂಡಿದ್ದು! ಹೆಣ್ಣು ಒಂದು ಭೋಗದ ವಸ್ತು ಎಂದು ಪರಿಗಣಿಸಲಾಗಿದೆ. ಹೆಣ್ಣಿನ ರೂಪವನ್ನು ಒಂದು ಮಾರಾಟದ ಸಾಧನವಾಗಿ, ಒಂದು ಮಾಧ್ಯಮವಾಗಿ ಬಳಸಿಕೊಳ್ಳಲಾಗುತ್ತಿದೆ. ಹೆಣ್ಣು, ಅವಳ ರೂಪ ಸೌಂದರ್ಯದ ಒಂದು ಮಾರಾಟದ ವಸ್ತು, ಕಮಾಡಿಟಿ ಅಂದ ಮೇಲೆ ಈ ಪ್ರಕ್ರಿಯೆಯನ್ನು ಕಮಾಡಿಫಿಕೇಷನ್ ಆಫ್ ಫೆಮಿನೈನ್ ಫಾರಂ ಎಂದು ಹೇಳಬಹುದು. ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಬ್ಯೂಟಿ ಪಾರ್ಲರ್‌ಗಳು, ಮಸಾಜ್ ಕ್ಲಬ್‌ಗಳು, ಹೆಣ್ಣಿನ ಒಳ ಉಡುಪುಗಳ ಶೋ ರೂಂಗಳು, ಬಟ್ಟೆ ಅಂಗಡಿಗಳು, ಸೌಂದರ್ಯ ಸಾಧನಗಳನ್ನು ಮಾರಾಟ ಮಾಡುವ ಸಂಸ್ಥೆಗಳು ಭಾರಿ ರಿಯಾಯಿತಿಗಳನ್ನು ಘೋಷಿಸುತ್ತವೆ. ಪಬ್‌ಗಳಲ್ಲಿ, ಬಾರ್‌ಗಳಲ್ಲಿ, ಡಾನ್ಸ್ ಕ್ಲಬ್‌ಗಳಲ್ಲಿಯೂ ಕೆಲವಾರು ಆಕರ್ಷಣೀಯ ಡಿಸ್ಕೌಂಟ್‌ಗಳು. ಕಾರ್ಪೊರೇಟ್ ಬಾಸ್‌ಗಳು ತಮ್ಮ ಮಹಿಳಾ ಸಿಬ್ಬಂದಿಯನ್ನು ಲಂಚ್ ಅಥವಾ ಡಿನ್ನರ್‌ಗೆ ಕರೆದೊಯ್ಯುವರು ಮತ್ತು ಬಳುವಳಿಗಳನ್ನು ನೀಡುವರು. ಇನ್ನು 5-ಸ್ಟಾರ್ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ವೆಲ್ ವುಮನ್ ಕ್ಲಿನಿಕ್‌ಗಳಲ್ಲಿ ಡಿಸ್ಕೌಂಟ್ ಪ್ರಕಟನೆ. ಎಲ್ಲವೂ ವ್ಯಾಪಾರ. ಬೇಡವಾದ ಸಿಸೇರಿಯನ್ ಸೆಕ್ಷನ್ ಮತ್ತು ಹಿಸ್ಟರೆಕ್ಟಮಿ (ಗರ್ಭಕೋಶ ತೆಗೆಸುವುದು) ಸರ್ಜರಿಗಳನ್ನು ಮಹಿಳೆಯರ ತಲೆಗೆ ಕಟ್ಟುವುದು, ಎಲ್ಲವೂ ವ್ಯಾಪಾರ ತಂತ್ರಗಳು. ಇನ್ನು ಏರ್-ಇಂಡಿಯಾ, ಭಾರತೀಯ ರೈಲ್ವೆ, ಬೆಂಗಳೂರು ನಮ್ಮ ಮೆಟ್ರೋ ಮುಂತಾದ ಸಂಸ್ಥೆಗಳು ತಮ್ಮದೇ ರೀತಿ ಅದೊಂದು ದಿನ ಮಾತ್ರ ಎಲ್ಲ ಸರ್ವಿಸ್‌ಗಳನ್ನು ಮಹಿಳಾ ತಂಡದಿಂದಲೇ ನಡೆಸುತ್ತವೆ. ಇದು ಸಂತೋಷದಾಯಕವಾದರೂ ಸಾಂಪ್ರದಾಯಿಕವಷ್ಟೇ. ವರ್ಷದ ಒಂದು ದಿನ ಮಹಿಳೆ ಶೋಕೇಸ್‌ನಲ್ಲಿ ಪ್ರದಶರ್ನದ ಮಾಡೆಲ್, ಮರುದಿನ ಮಾಮೂಲಿಯಾಗಿ ಮೂಲೆಗುಂಪು. ಇದು ಬೂರ್ಷ್ವಾ ಮಾದರಿಯ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ.
ದೇಶದಲ್ಲಿ ಪ್ರತಿ ನಿತ್ಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಜೀವಂತ ಸುಡುವುದು ಇತ್ಯಾದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. 4-5 ವರ್ಷಗಳ ಎಳೆ ಕಂದಮ್ಮಗಳನ್ನೂ ಕ್ರಿಮಿನಲ್‌ಗಳು ಬಿಡುವ ಪರಿಸ್ಥಿತಿ ಇಲ್ಲ.
ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರೇ ಟ್ರೋಲ್ ಮೂಲಕ ಹೆಚ್ಚಿನ ಬಲಿಪಶುಗಳಾಗುತ್ತಾರೆ. ಬ್ಲಾಕ್‌ಮೇಲ್‌ಗಳಿಗೆ ಒಳಗಾಗುತ್ತಾರೆ. ಇನ್ನೂ ಮುಂದುವರಿದು, ಭೀಕರ ಅಹಿತಕರ ಘಟನೆಗಳೂ ನಡೆದು ಹೋಗುತ್ತವೆ. ಮಹಿಳೆಯರ ಮೇಲಿನ ಸೈಬರ್ ಕ್ರೈಂಗಳು ಅಪಾಯದ ಅಂಚನ್ನು ಮುಟ್ಟುತ್ತಿವೆ.
ಬೇರೆ ಬೇರೆ ಜಾತಿಗೋ ಅಥವಾ ಧರ್ಮಕ್ಕೋ ಸೇರಿದ ಯುಕ್ತ ವಯಸ್ಸಿನ ಒಂದು ಗಂಡು, ಒಂದು ಹೆಣ್ಣು, ಸ್ವಯಂ ಇಚ್ಛೆಯಿಂದ ಮದುವೆಯಾಗಲು ಇವತ್ತಿನ ಸಮಾಜದಲ್ಲಿ ಸಾಧ್ಯವೇ? ಕಾನೂನು ಅದಕ್ಕೆ ಒಪ್ಪಿಗೆ ನೀಡಿದ್ದರೂ, ಖಾಪ್ ಪಂಚಾಯತ್‌ನಂತಹ ವ್ಯವಸ್ಥೆಗಳು ಅವನ್ನು ಮಾನ್ಯ ಮಾಡದೆ ಮರ್ಯಾದೆಯ ಹೆಸರಿನಲ್ಲಿ ಇಬ್ಬರನ್ನೂ ಬರ್ಬರ ರೀತಿ ಕೊಂದು ಹಾಕುತ್ತಾರೆ. ಇದೆಂತಹ ಮರ್ಯಾದೆ? ಪಾಳೇಗಾರಿಕೆಶಾಹಿ ಇನ್ನೂ ನಮ್ಮ ಸಮಾಜದಲ್ಲಿ ಬೇರೂರಿದೆ. ಅದಕ್ಕೆ ರಾಜಕಾರಣಿಗಳೂ ಪಕ್ಕೆಲುಬಾಗಿದ್ದಾರೆ ಅನ್ನುವುದು ವಾಸ್ತವ. ಮಿಥ್ಯೆ, ಕಂದಾಚಾರಗಳು, ಮೂಢನಂಬಿಕೆಗಳು, ಪರಂಪರಾಗತವಾಗಿ ಬಂದಿರುವ ಆಚರಣೆಗಳು-ಇವುಗಳೆಲ್ಲವೂ ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿ ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಹೇರಿವೆ. ‘‘ಮನುಸ್ಮತಿಯೇ ನಮ್ಮಲ್ಲಿರಬೇಕಾದರೆ ದೇಶಕ್ಕೆ ಸಂವಿಧಾನ ಏಕೆ ಬೇಕು?’’ ಎಂದು ಪ್ರಶ್ನಿಸುವ ಶಕ್ತಿಗಳೂ ದೇಶದಲ್ಲಿವೆ. ಶಬರಿಮಲೆಯ ಸ್ವಾಮಿ ಅಯ್ಯಪ್ಪನ ಸನ್ನಿಧಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶ ಉಂಟು ಎಂದು ದೇಶದ ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗಲೂ, ಕೋಮುವಾದಿ ಶಕ್ತಿಗಳು ರಾಜಕೀಯ ದುರುದ್ದೇಶದಿಂದ ಕಾನೂನಿನ ಆದೇಶವನ್ನು ಜಾರಿಗೊಳಿಸಲು ಬಿಡುತ್ತಿಲ್ಲ. ಇದೇ ಕೇರಳದಲ್ಲಿ ಒಂದು ಶತಮಾನಕ್ಕೂ ಹಿಂದೆ ಕೀಳು ಜಾತಿಯ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳಲು ಅವಕಾಶವಿರಲಿಲ್ಲ. ಹಾಗೆ ಮುಚ್ಚಿಕೊಳ್ಳುವುದಾದರೆ ಅವರು ಸ್ತನ ತೆರಿಗೆಯನ್ನು ಪಾವತಿಸಬೇಕಾಗಿತ್ತು.
ದೇಶದ ಯಾವ ಊರಿನಲ್ಲಿ ಇಂದು ಮಹಿಳೆ ನಿರ್ಭಯಳಾಗಿ ರಾತ್ರಿ ವೇಳೆ ಸಂಚರಿಸಲು ಅರ್ಹಳು? ಅದು ಸಾಧ್ಯವೇ? ಮಹಿಳೆಗೆ ಅಂತಹ ಒಂದು ದಿನ ಯಾವತ್ತು ಬರುವುದೋ ಅಂದೇ ನಮ್ಮ ದೇಶಕ್ಕೆ, ಜನತೆಗೆ, ನಿಜವಾದ ಸ್ವಾತಂತ್ರ್ಯದ ದಿನ ಎಂದು ಮಹಾತ್ಮಾ ಗಾಂಧಿಯವರು ನುಡಿದಿದ್ದರು.
ಕೆಲಸ ಮಾಡುವ ಜಾಗಗಳಲ್ಲಿ ಮಹಿಳೆಯರಿಗೆ ಆಗುವ ಲೈಂಗಿಕ ಅತ್ಯಾಚಾರಗಳ ಬಗ್ಗೆ ಎಷ್ಟೊಂದು ದೂರುಗಳು ದಾಖಲಾಗುತ್ತಿವೆ. ಆದರೆ ದಾಖಲಾಗಿರುವ ದೂರುಗಳ ಬಗ್ಗೆ ಆಡಳಿತ ವ್ಯವಸ್ಥೆ ಸರಿಯಾಗಿ ಕಾನೂನಿನ ಕ್ರಮ ತೆಗೆದುಕೊಳ್ಳುತ್ತಿದೆಯೇ? ಇತ್ತೀಚಿನ ‘ಮೀಟೂ ಪ್ರಚಾರ’ ಕೌತುಕಕಾರಿ ವರದಿಗಳಾಯಿತೇ ವಿನಃ ಯಾವ ಪ್ರತ್ಯಕ್ಷವಾದ ಪರಿಣಾಮವನ್ನೂ ಜನ ಕಂಡಿಲ್ಲ. ನೊಂದ ಮಹಿಳೆಯರಿಗೆ ಯಾವ ಪರಿಹಾರವೂ ಸಿಕ್ಕಿಲ್ಲ. ಇಂದಿಗೂ ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಮಡೆ ಸ್ನಾನ ಮುಂತಾದವುಗಳನ್ನು ಸರಿ ಎಂದು ವಾದಿಸುವ ನ್ಯಾಯಮೂರ್ತಿಗಳು, ಅವುಗಳನ್ನು ವಿಜ್ಞಾನ ಎಂದು ಬಣ್ಣಿಸುವ ಅಥವಾ ವೈಭವೀಕರಿಸುವ ವಿಜ್ಞಾನಿಗಳೂ ಇದ್ದಾರೆ! ಸಮಾಜ ಸುಧಾರಣೆಗೆ ಶ್ರಮಿಸಿದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌ನಂತಹ ವಿಚಾರವಾದಿಗಳನ್ನು ಮುಗಿಸಿಯೇ ಬಿಟ್ಟರು. ಮಾನವ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಗಳಿಗೆ ಜಾಗವಿಲ್ಲ.
ಇನ್ನು ಮಹಿಳೆಯ ಸಬಲೀಕರಣದ ಬಗ್ಗೆ ಹೇಳುವುದಾದರೆ, ನಮ್ಮ ದೇಶದ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರು ಎಷ್ಟು ಮಂದಿ ಇದ್ದಾರೆ? ಜನಸಂಖ್ಯೆಯ ಶೇ. 33 ಭಾಗ ಮಹಿಳೆಯರಿಗೆ ಶಾಸಕಾಂಗದಲ್ಲಿ ಸ್ಥಾನದ ಅವಕಾಶವಿದ್ದರೂ ಇರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ.
ಸರಕಾರಗಳು ಕಾರ್ಮಿಕರ ಕಾನೂನುಗಳಿಗೆ ವ್ಯಾಪಕವಾದ ತಿದ್ದುಪಡಿಗಳನ್ನು ಮಾಡಿವೆ ಮತ್ತು ಮಾಡುತ್ತಿವೆ. ಆದರೂ ಮಹಿಳಾ ಕಾರ್ಮಿಕರ ಪಾಡು ಸುಧಾರಿಸಿ ದೆಯೇ?. ಸಮಾನ ಕೆಲಸಕ್ಕೆ ಸಮಾನ ವೇತನ, ಕನಿಷ್ಠ ಕೂಲಿ, ಕೆಲಸದ ಭದ್ರತೆ, ಪ್ರಸವ ಕಾಲದ ರಜೆ ಮುಂತಾದವುಗಳು ಹೆಚ್ಚಿನ ಮಹಿಳೆಯರ ಪಾಲಿಗೆ ಮರೀಚಿಕೆಯಾಗಿದೆ. ಹೀಗಾಗಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ವಸ್ತು ಮತ್ತು ಗುರಿ ಕೇವಲ ಒಂದು ದಿನದ ಕಾರ್ಯವಲ್ಲ. ಅದು ನಿರಂತರವಾಗಿ ನಡೆಯಬೇಕಾದ ಚಳುವಳಿಯಾಗಿದೆ.
ಕಾರ್ಪೊರೇಟ್ ಪರವಾದ ಆರ್ಥಿಕ ನೀತಿಗಳು ನಿಲ್ಲಬೇಕು. ಮೂಢನಂಬಿಕೆ, ಮತ ಧರ್ಮದ ಹೆಸರಿನಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯಗಳು ಕೊನೆಗಾಣಬೇಕು, ಮಹಿಳೆಯರ ಸಬಲೀಕರಣವಾಗಬೇಕು ಮತ್ತು ಒಟ್ಟು ಸಮಾಜದ ಸಾಮೂಹಿಕ ತೀರ್ಮಾನಗಳಲ್ಲಿ ಮಹಿಳೆಯರ ಧ್ವನಿ ಕೇಳಿಸಬೇಕು. ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಯಾಗಬೇಕು. ಇದುವೇ ನಿಜವಾದ ಮಹಿಳಾ ದಿನಾಚರಣೆ. ಬೂರ್ಷ್ವಾ ಮಾದರಿಯ ಪ್ಯಾಶನ್ ಶೋ ಅಲ್ಲ.