‘ಪವಿತ್ರ’ ಕರ್ತವ್ಯ ಈಡೇರಲಾಗದ ನಿರಾಸೆ
ಭಾಗ-11
ಅಷ್ಟೊಂದು ಸಿದ್ಧತೆ ಮಾಡಿಕೊಂಡು ಬಂದ ಅವರ ಶ್ರಮ ವ್ಯರ್ಥವಾದದ್ದು, ಬಂದೊದಗಿದ್ದ ಸದವಕಾಶ ವಿಫಲವಾದದ್ದು ಅವರಿಗೆ ವ್ಯಥೆಯನ್ನುಂಟು ಮಾಡಿತ್ತು. ಜೊತೆಗೆ ಒಂದಿಷ್ಟು ಭಯವೂ ಆಯ್ತು. ಮದನ್‌ಲಾಲ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅವನು ಬಾಯಿಬಿಟ್ಟರೆ ಎಲ್ಲರೂ ಪೊಲೀಸರ ಕೈಗೆ ಬೀಳಬೇಕಾಗುತ್ತದೆ. ಈ ಭಯಕ್ಕಿಂತ ಹೆಚ್ಚಾಗಿ ತಮ್ಮ ‘ಪವಿತ್ರ’ ಕರ್ತವ್ಯವನ್ನು ಈಡೇರಿಸಲಾಗುವುದೇ ಇಲ್ಲ ಎಂಬ ನಿರಾಸೆ. ಆದ್ದರಿಂದ ಪೊಲೀಸರ ಕೈಗೆ ಬೀಳದಂತೆ ಕೂಡಲೇ ಅಲ್ಲಿಂದ-ದಿಲ್ಲಿಯಿಂದ ಕಣ್ಣರೆಯಾಗಿ ‘ಮರಳಿ ಯತ್ನವ ಮಾಡಲು’ ಪ್ರಯತ್ನಿಸಬೇಕೆಂಬ ತವಕ ಈ ಭಯ ಮತ್ತು ನಿರಾಶೆಗಿಂತ ಹೆಚ್ಚಾಗಿ ಉದ್ದೇಶಿತ ಗುರಿ ಸಾಧಿಸಲು ಸೋತ ಅಪಮಾನ ಅವರನ್ನು ಆವರಿಸಿತ್ತು.
ಭಯಂಕರ ಸದ್ದಾಯಿತು. ಜನರು ದಿಗ್ಭ್ರಾಂತರಾದರು ! ವೇದಿಕೆಯ ಮೇಲಿದ್ದ ಮನುಗಾಂಧಿ ಗಡಗಡ ನಡುಗುತ್ತ ಮಹಾತ್ಮನ ಬಳಿ ಸರಿದಳು. ಗಾಂಧೀಜಿ ‘‘ಅಷ್ಟೇಕೆ ದಿಗ್ಭ್ರಾಂತಳಾದೆ? ಯಾರೋ ಮಿಲಿಟರಿ ಜನ ಗುಂಡು ಹಾರಿಸುವ ವಿದ್ಯೆ ಕಲಿಯಲು ಪ್ರಾಕ್ಟೀಸ್ ಮಾಡುತ್ತಿರಬಹುದು. ಯಾರಾದರೂ ನನ್ನನ್ನು ನಿಜವಾಗಿಯೂ ಕೊಂದರೆ ಏನು ಮಾಡುತ್ತಿ?’’ ಸಭಿಕರನ್ನು ಉದ್ದೇಶಿಸಿ ‘‘ಶಾಂತರಾಗಿ ನಿಮ್ಮ ನಿಮ್ಮ ಸ್ಥಳದಲ್ಲಿ ಕುಳಿತುಕೊಳ್ಳಿ’’ ಎಂದು ಮೆಲುದನಿಯಲ್ಲಿ ವಿನಂತಿ ಮಾಡಿದರು.
ಬಾಂಬ್ ಹಾರಿಸಿದೊಡನೆಯೇ ಗೋಪಾಲ ಗೋಡ್ಸೆ ಕೊಠಡಿಯ ವೆಂಟಿಲೇಟರ್ ಜಾಲಂಧ್ರದ ಮೂಲಕ ಕೈಬಾಂಬು ಹಾರಿಸಿ, ಪಿಸ್ತೂಲಿನಿಂದ ಗಾಂಧೀಜಿಯ ಕತ್ತಿಗೆ ಗುಂಡು ಹಾರಿಸಬೇಕೆಂದು ವೆಂಟಿಲೇಟರ್ ಕಡೆ ಕೈ ಚಾಚಿದ. ಅದು ನಿಲುಕಲಿಲ್ಲ. ನೆಲದಿಂದ ಬಹು ಮೇಲಿತ್ತು ವೆಂಟಿಲೇಟರ್. ಕೋಣೆಯಲ್ಲಿದ್ದ ಒಂದು ಹೊರಸನ್ನು(ಚಾರ್‌ಪಾಯಿ) ಹತ್ತಿ ಕೈ ತೂರಿಸಲು ಪ್ರಯತ್ನಿಸಿದ. ಆದರೂ ಸಾಧ್ಯವಾಗಲಿಲ್ಲ. !
ಮದನ್ ಲಾಲ್ ಗನ್-ಕಾಟನ್-ಸ್ಲಾಬ್ ಹಾರಿಸಿದೊಡನೆಯೇ ಅಲ್ಲಿದ್ದ ಕಾವಲುಗಾರ ರಘುಮಾಲಿ ಅವನನ್ನು ಹಿಡಿದುಕೊಂಡ. ತಕ್ಷಣವೇ ಅಲ್ಲಿದ್ದ ಇಬ್ಬರು ಪೊಲೀಸ್ ಪೇದೆಗಳು ಮದನ್ ಲಾಲ್‌ನನ್ನು ವಶಕ್ಕೆ ತೆಗೆದುಕೊಂಡು ಕರೆದುಕೊಂಡು ಹೋದರು.
‘ಬಾಂಬ್’ ಶಬ್ದ ಕೇಳಿದ ಜನ ದಿಗ್ಭ್ರಾಂತರಾಗಿ ಕಕ್ಕಾಬಿಕ್ಕಿಯಾದರು. ಕರ್ಕರೆ ಗಾಂಧೀಜಿಯ ಹಿಂದಿದ್ದ ಕೊಠಡಿಯ ವೆಂಟಿಲೇಟರ್ ಕಡೆ ನೋಡಿದ. ಗೋಪಾಲನ ಕೈ ಆಗಲಿ, ಪಿಸ್ತೂಲಿನ ನಳಿಗೆಯಾಗಲಿ ಕಾಣಿಸಲಿಲ್ಲ. ಕೈ ಬಾಂಬ್ ಸದ್ದೂ ಬರಲಿಲ್ಲ. ಕರ್ಕರೆ ಕಕ್ಕಾಬಿಕ್ಕಿ ಆದ. ಹತ್ತಿರವೇ ಇದ್ದ ಬಡ್ಗೆ ತನ್ನಲ್ಲಿದ್ದ ಕೈ ಬಾಂಬ್‌ನ್ನಾಗಲೀ, ಪಿಸ್ತೂಲನ್ನಾಗಲೀ ಪ್ರಯೋಗಿಸಲಿಲ್ಲ. ಒಕ್ಕಣ್ಣನನ್ನು ಕಂಡ ಅಪಶಕುನ ಅವನನ್ನು ನಿಸ್ತೇಜ ಮಾಡಿತ್ತೋ ಏನೋ? ಅವನೂ ಕಕ್ಕಾಬಿಕ್ಕಿಯಾಗಿ ಹೋದ. ಕೇವಲ ಕೆಲವೇ ಅಡಿಗಳ ದೂರದಲ್ಲಿ ಮುಂದಿದ್ದ ಗಾಂಧಿಯ ತೆೆರೆದೆದೆಗೆ ಗುಂಡಿಕ್ಕಲು ಇಬ್ಬರಿಗೂ ಧೈರ್ಯವಾಗಲಿಲ್ಲ. ಜನ ಚದುರಲು ಪ್ರಾರಂಭವಾಯಿತು. ಗೋಪಾಲ ಅಣ್ಣ ನಾಥೂರಾಮನ ಬಳಿ ಬಂದ. ಆಪ್ಟೆಯೊಡನೆ ತಾವು ಬಂದಿದ್ದ ಬಾಡಿಗೆ ಕಾರಿನಲ್ಲಿ ಕುಳಿತು ಮೆರಿನಾ ಹೊಟೇಲ್‌ಗೆ ಹೋದರು. ಅಷ್ಟೊಂದು ಸಿದ್ಧತೆ ಮಾಡಿಕೊಂಡು ಬಂದ ಅವರ ಶ್ರಮ ವ್ಯರ್ಥವಾದದ್ದು ಬಂದೊದಗಿದ್ದ ಸದಾವಕಾಶ ವಿಫಲವಾದದ್ದು ಅವರಿಗೆ ವ್ಯಥೆಯನ್ನುಂಟು ಮಾಡಿತ್ತು. ಜೊತೆಗೆ ಒಂದಿಷ್ಟು ಭಯವೂ ಆಯ್ತು. ಮದನ್‌ಲಾಲ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅವನು ಬಾಯಿಬಿಟ್ಟರೆ ಎಲ್ಲರೂ ಪೊಲೀಸರ ಕೈಗೆ ಬೀಳಬೇಕಾಗುತ್ತದೆ. ಈ ಭಯಕ್ಕಿಂತ ಹೆಚ್ಚಾಗಿ ತಮ್ಮ ‘ಪವಿತ್ರ’ ಕರ್ತವ್ಯವನ್ನು ಈಡೇರಿಸಲಾಗುವುದೇ ಇಲ್ಲ ಎಂಬ ನಿರಾಸೆ. ಆದ್ದರಿಂದ ಪೊಲೀಸರ ಕೈಗೆ ಬೀಳದಂತೆ ಕೂಡಲೇ ಅಲ್ಲಿಂದ-ದಿಲ್ಲಿಯಿಂದ ಕಣ್ಣರೆಯಾಗಿ ‘ಮರಳಿ ಯತ್ನವ ಮಾಡಲು’ ಪ್ರಯತ್ನಿಸಬೇಕೆಂಬ ತವಕ ಈ ಭಯ ಮತ್ತು ನಿರಾಶೆಗಿಂತ ಹೆಚ್ಚಾಗಿ ಉದ್ದೇಶಿತ ಗುರಿ ಸಾಧಿಸಲು ಸೋತ ಅಪಮಾನ ಅವರನ್ನು ಆವರಿಸಿತ್ತು.
ನಾಥೂರಾಮ್ ತನ್ನ ತಮ್ಮ ಗೋಡ್ಸೆಗೆ: ‘‘ನೀನು ಮೊದಲು ಪುಣೆಗೆ ಹೋಗು. ನೀನು ಇಲ್ಲಿರಲೇ ಇಲ್ಲ ಎಂದ ಸಾಕ್ಷ ಸೃಷ್ಟಿಸು’’ ಎಂದು ಸೂಚಿಸಿದ. ಗೋಪಾಲ ಕಾರಿನಿಂದ ಇಳಿದು ಹಳೇ ದಿಲ್ಲಿಯಲ್ಲಿ ತಾವು ತಂಗಿದ್ದ ಹೊಟೇಲ್ ಖಾಲಿ ಮಾಡಿ ಅಂದು ರಾತ್ರಿಯೇ ಕರ್ಕರೆ ಸಹಿತ ಮುಂಬೈಗೆ ಪ್ರಯಾಣ ಬೆಳಿಸಿದ. ಪೊಲೀಸರು ಸಂದೇಹದ ಮೇಲೆ ಹಿಂದೂ ಮಹಾಸಭಾ ಭವನಕ್ಕೆ ಹೋದರು. ಅಲ್ಲಿ ಯಾರೂ ಇರಲಿಲ್ಲ. ಬಡ್ಗೆ, ಶಂಕರ ಕಿಸ್ಟಯ್ಯ, ಆಗಲೇ ಪಲಾಯನ ಮಾಡಿದ್ದರು. ಉಳಿದಿದ್ದ ಮುಖ್ಯ ಪಿತೂರಿಗಾರರು, ನಾಥೂರಾಮ್ ಮತ್ತು ಆಪ್ಟೆ ಮೆರಿನಾ ಹೊಟೇಲ್‌ನಿಂದ ಕಣ್ಮರೆಯಾಗಿದ್ದರು. ಕೈಗೆ ಸಿಕ್ಕಿದ್ದ ಮದನ್‌ಲಾಲ್‌ನನ್ನು ದಿಲ್ಲಿ ತುಘಲಕ್ ರೋಡ್ ಪೊಲೀಸ್ ಠಾಣೆಗೆ ಕರೆದೊಯ್ದರು. ಎರಡು ಗಂಟೆಗಳ ಕಾಲ ಸತತ ಅವನನ್ನು ಪೊಲೀಸರು ಪ್ರಶ್ನಿಸಿದರು. ಆದರೆ ಆ ‘ಭಂಡ’ ಬಾಯಿ ಬಿಡಲಿಲ್ಲ. ದಿಲ್ಲಿ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಿ.ಡಬ್ಲು ಮೆಹ್ರಾಗೆ ತಿಳಿಸಿದರು. ಆತ ಅಂದು 101 ಡಿಗ್ರಿ ಜ್ವರದಿಂದ ಹಾಸಿಗೆ ಹಿಡಿದಿದ್ದ. ಮೆಹ್ರಾ ಪೊಲೀಸರಿಗೆ ತಾಕೀತು ಮಾಡಿದ. ಪೊಲೀಸರಿಗೆ ಚಿರಪರಿಚಿತವಾದ ಚಿತ್ರಹಿಂಸಾ ‘ದಂಡ ಪ್ರಯೋಗ’ (third degree methods) ಮಾಡಲು ಪೊಲೀಸರು ತಮ್ಮ ಪ್ರಯತ್ನವನ್ನು ‘ದಂಡ ಪ್ರಯೋಗ’ದಿಂದ ಮುಂದುವರಿಸಿದರು. ಆದರೆ ಅವನು ಬಾಯ್ಬಿಡಬಾರದೆಂದು ದೃಢನಿಶ್ಚಯ ಮಾಡಿದ್ದ. ಅವನ ಉದ್ದೇಶ ದಿಲ್ಲಿಗೆ ಬಂದಿದ್ದ ಏಳು ಹೆಡೆಯ ಘಟಸರ್ಪ ಅಲ್ಲಿಂದ ಮರೆಯಾಗುವವರೆಗೆ ಆದಷ್ಟು ದೀರ್ಘಕಾಲ ಗುಟ್ಟು ಬಿಟ್ಟುಕೊಡಬಾರದೆಂದು. ಆದರೆ ಪೊಲೀಸರ ನಿರಂತರ ವೈವಿಧ್ಯಮಯ ‘ಚಿತ್ರಹಿಂಸಾ’ ಉಪಾಯದಿಂದ ರಾತ್ರಿ ಬಹಳ ಹೊತ್ತಿನ ಮೇಲೆ ಬಾಯಿಬಿಟ್ಟ. ‘‘ತಲೆ ಕೆಟ್ಟ ಪಂಜಾಬಿ ನಿರಾಶ್ರಿತನೊಬ್ಬನೇ ಅಲ್ಲ, ನಾವು ಏಳು ಜನ ಗಾಂಧಿಯನ್ನು ಕೊಲ್ಲಲು ಸಂಚು ಹೂಡಿ ಬಂದಿದ್ದೆವು. ಯಾಕೆಂದರೆ ನಿರಾಶ್ರಿತರು ದಿಲ್ಲಿಯಲ್ಲಿ ಬಲಾತ್ಕಾರದಿಂದ ಆಕ್ರಮಿಸಿಕೊಂಡಿದ್ದ ಮುಸ್ಲಿಮರ ಮನೆಗಳನ್ನು ಮಸೀದಿಗಳನ್ನು ತರವು ಮಾಡುವಂತೆ ಮಾಡಿದ್ದಾರೆ. ಗಾಂಧಿ ಪಾಕಿಸ್ತಾನಕ್ಕೆ 55 ಕೋಟಿ ರೂ. ಕೊಡುವಂತೆ ಸರಕಾರದ ಮೇಲೆ ಒತ್ತಾಯ ತಂದಿದ್ದಾರೆ.’’
ಇದಕ್ಕಿಂತ ಮುಖ್ಯವಾದ ಮತ್ತೊಂದು ಸಂಚಿನ ಪತ್ತೆಗೆ ಸೂಚನೆ ಕೊಡುವ ಸಂಗತಿಯನ್ನು ಬಾಯಿಬಿಟ್ಟ. ತಾನು ಮತ್ತು ಸಂಚುಗಾರರು ಮುಂಬೈಯಲ್ಲಿ ವೀರ ಸಾವರ್ಕರ್‌ರನ್ನು ಪ್ರತ್ಯಕ್ಷ ಕಂಡುಬಂದಿದ್ದೇವೆಂದು ಹೆಮ್ಮೆಯಿಂದಲೇ ಹೇಳಿಬಿಟ್ಟ. ಸಂಚುಕಾರರಲ್ಲಿ ಒಬ್ಬನು ಒಂದು ಮರಾಠಿ ಪತ್ರಿಕೆ ‘ರಾಷ್ಟ್ರೀಯ’ ಇಲ್ಲವೇ ‘ಅಗ್ರಣಿ ಮರಾಠಾ’ ಪತ್ರಿಕೆಯ ಸಂಪಾದಕನೆಂದೂ ಹೇಳಿದ. ಒಬ್ಬನ ಹೆಸರು ಕಿರ್ಕ್ರಿ ( ಕಿರ್‌ಕ್ರೀ-ಕರ್ಕರೆ ಎಂಬ ಹೆಸರನ್ನು ಸರಿಯಾಗಿ ಉಚ್ಚರಿಸಲು ಬಾರದೆ) ಎಂದೂ ಅವನು ಹಿಂದೂ ಮಹಾಸಭಾ ಭವನದಲ್ಲಿರುವನೆಂದು ಇನ್ನಿಬ್ಬರು ಮೆರಿನಾ ಹೊಟೇಲಿನಲ್ಲಿರುವರೆಂದೂ ಬಾಯಿಬಿಟ್ಟ. ಈ ಸುದ್ದಿಯನ್ನು ಹಿಡಿದು ಮಹಾಸಭಾ ಭವನಕ್ಕೆ ಹೋದರೆ ಅಲ್ಲಿ ಅವರ್ಯಾರು ಇರಲಿಲ್ಲ. ಅಲ್ಲಿದ್ದವರು ಪುಣೆಯ ದಾರಿಯಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಪುಣೆಯ ಮರಾಠಿ ಪತ್ರಿಕೆಯ ಸಂಪಾದಕನನ್ನು ಪತ್ತೆಹಚ್ಚುವುದೇನೂ ಕಷ್ಟವಾಗಿರಲಿಲ್ಲ. ಮುಂಬೈ ರಾಜ್ಯದ ಪತ್ರಿಕಾ ನೋಂದಣಿ ಕಚೆೇರಿಯಲ್ಲಿ ವಿಚಾರಿಸಿದ್ದರೆ ‘ಅಗ್ರಣಿ’ ಅಥವಾ ‘ಹಿಂದೂರಾಷ್ಟ್ರ’ ಪತ್ರಿಕೆಯ ಸಂಪಾದಕರ ‘ಜಾತಕ’ ಸಿಗುತ್ತಿತ್ತು. ಪೊಲೀಸರು ಅದನ್ನೇಕೆ ಪರಿಶೀಲಿಸಲಿಲ್ಲವೋ ತಿಳಿಯದು.
ಇತ್ತ ಬಿರ್ಲಾ ಗೃಹಕ್ಕೆ ನೆಹರೂ, ಪಟೇಲ್ ಮುಂತಾದ ಮುಖಂಡರು ಧಾವಿಸಿದರು. ಮರಣದ ದವಡೆಯಿಂದ ಪಾರಾದುದಕ್ಕಾಗಿ ಅಪಾರ ಹರ್ಷವನ್ನು ವ್ಯಕ್ತಪಡಿಸಿದರು. ವೈಸ್‌ರಾಯರ ಪತ್ನಿ ಎಡ್ವಿನಾ ವೌಂಟ್ ಬ್ಯಾಟನ್ ಗಾಂಧೀಜಿಯನ್ನು ಅಭಿನಂದಿಸಿ ತನ್ನ ಹರ್ಷವನ್ನು ವ್ಯಕ್ತಪಡಿಸಿದಾಗ ಆ ಬಚ್ಚುಬಾಯಿ ಮುದುಕ ತನ್ನ ಹುಟ್ಟು ಹಾಸ್ಯಗುಣದಿಂದ ನಸುನಕ್ಕು: ‘‘ನಾನೇನೂ ಅಂಥ ಧೈರ್ಯ ಸಾಹಸ ತೋರಿಲ್ಲ. ಯಾರೋ ಮಿಲಿಟರಿ ಜನ ಬಂದೂಕು/ ಗುಂಡು ಹಾರಿಸುವ ತರಬೇತಿ ಪಡೆಯುತ್ತಿದ್ದಾರೆಂದು ಭಾವಿಸಿದೆ. ಒಂದು ವೇಳೆ ಯಾರಾದರೂ ನನ್ನೆದೆಗೆ ಗುಂಡಿಕ್ಕಿ ಕೊಲ್ಲಲು ಬಂದರೆ, ಅವನ ಗುಂಡಿನ ಹೊಡೆತವನ್ನು ನಾನು ನಗುನಗುತ್ತ ಎದುರಿಸಿ, ಬಾಯಲ್ಲಿ ರಾಮನಾಮ ಜಪಿಸುತ್ತಿದ್ದರೆ ನಾನು ಶೂರನೆನ್ನಬಹುದು! ಆಗ ನಾನು ಅಭಿನಂದನೆಗಳಿಗೆ ಅರ್ಹನೆನ್ನಬಹುದು!’’ ಎಂದು ಉತ್ತರಿಸುವುದೆ ಆ ಮುದುಕ !
ಮರುದಿನ ಮಧ್ಯಾಹ್ನ ದಿಲ್ಲಿ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಮೆಹ್ರಾ ಗಾಂಧಿ ದರ್ಶನಕ್ಕೆ ಬಂದು, ಗಾಂಧೀಜಿಗೆ ಕೈ ಮುಗಿದು:
‘‘ತಮಗೆ ಡಬಲ್ ಮುಬಾರಕ್’’ ಎಂದರು.
ಗಾಂಧಿ: ‘‘ಡಬಲ್ ಯಾಕೆ?’’
ಮೆಹ್ರಾ: ‘‘ಉಪವಾಸ ಯಶಸ್ವಿಯಾಗಿ ಮುಗಿಸಿ, ನಮ್ಮ ಪೊಲೀಸರಿಂದ ಸಾಧ್ಯವಾಗದಿದ್ದ ಕೆಲಸ- ದಿಲ್ಲಿಯಲ್ಲಿ ಶಾಂತಿನೆಲೆಸಿದ್ದಕ್ಕೆ ಒಂದು ಇನ್ನೊಂದು ಕೊಲೆಗಾರರಿಂದ ಪಾರಾಗಿ ಪ್ರಾಣ ಉಳಿದದ್ದಕ್ಕೆ.’’
ಗಾಂಧಿ ನಸುನಗುತ್ತ: ‘‘ಭಾಯ್. ನನ್ನ ಪ್ರಾಣ ಭಗವಂತ ಕೈಯಲ್ಲಿದೆ.’’ ಮೆಹ್ರಾ ಅಲ್ಲಿಗೆ ಬಂದದ್ದು ಗಾಂಧಿ ಪ್ರಾಣರಕ್ಷಣೆಯನ್ನು ತನ್ನ ಕೈಗೆ ತೆಗೆದುಕೊಳ್ಳುವ ಉದ್ದೇಶದಿಂದ. ‘‘ತಮ್ಮನ್ನು ಕೊಲ್ಲಲು ಬಂದವನು ಒಬ್ಬನೇ ಮಾತ್ರವಲ್ಲ. ಒಂದು ಪಿತೂರಿಯೇ ಇದೆ. ಆ ಪಿತೂರಿಯಲ್ಲಿ ಏಳು ಜನರಿದ್ದಾರೆ. ಅವರು ಮತ್ತೆ ಬರಬಹುದು. ಆದ್ದರಿಂದ ಬಿರ್ಲಾ ಗೃಹದ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಿ, ಪ್ರಾರ್ಥನಾ ಸಭೆಗೆ ಬರುವವರನ್ನು ತಪಾಸಣೆ ಮಾಡಲು ಅಪ್ಪಣೆ ಕೊಡಬೇಕು’’ಎಂದು ಮೆಹ್ರಾ ಪ್ರಾರ್ಥಿಸಿದರು. ಅದಕ್ಕೆ ಗಾಂಧೀಜಿ:
‘‘ಇಲ್ಲ ಸರ್. ದೇವಸ್ಥಾನಕ್ಕೆ ಹೋಗುವವರಾರೂ ಕೊಲೆ ಮಾಡಲು ಬರುವುದಿಲ್ಲ.’’
‘‘ರಾಮನೊಬ್ಬನೇ ನನ್ನ ರಕ್ಷಕ. ಅವನು ನನ್ನ ಜೀವ ಮುಗಿಸಬೇಕೆಂದು ಇಚ್ಛಿಸಿದರೆ, ನನ್ನನ್ನು ಉಳಿಸಲು ನಿಮ್ಮ ಹತ್ತು ಲಕ್ಷ ಪೊಲೀಸರನ್ನು ನನ್ನ ರಕ್ಷಣೆಗಾಗಿ ಹಾಕಿದರೂ ಯಾರೂ ಉಳಿಸಲಾರರು. ಈ ದೇಶವನ್ನು ಆಳುವವರಿಗೆ ನನ್ನ ಅಹಿಂಸಾ ನೀತಿಯಲ್ಲಿ ನಂಬಿಕೆಯಿಲ್ಲ. ನನ್ನ ಪ್ರಾಣವನ್ನು ನಿಮ್ಮ ಪೊಲೀಸರು ರಕ್ಷಿಸುವರೆಂದು ಭಾವಿಸಿದ್ದಾರೆ. ಸರಿ. ನನ್ನ ಜೀವರಕ್ಷಕ ರಾಮ. ನನ್ನ ಪ್ರಾರ್ಥನಾ ಸಭೆಗೆ ಬರುವವರನ್ನು ತಡೆದು ನಿಮ್ಮ ಪೊಲೀಸರು ಸಭೆಯನ್ನು ಅಪವಿತ್ರಗೊಳಿಸದಿರಲಿ. ಹಾಗೇನಾದರೂ ನೀವು ಮಾಡಿದರೆ ನಾನು ದಿಲ್ಲಿ ತೊರೆಯುತ್ತೇನೆ. ಹಾಗೆ ತೊರೆದು ಹೋಗಲು ನೀವೇ ಕಾರಣವೆಂದೂ ಸಾರುತ್ತೇನೆ!’’
ಮೆಹ್ರಾ ಅವರಿಗೆ ಖೇದವಾಯಿತು. ಮುಖ ಸಣ್ಣದು ಮಾಡಿಕೊಂಡರು. ಗಾಂಧಿ ತಮ್ಮ ನಿರ್ಧಾರವನ್ನೆಂದಿಗೂ ಬದಲಿಸರೆಂಬುದು ಅವರಿಗೆ ಗೊತ್ತಿತ್ತು. ಮಹಾತ್ಮರ ಪ್ರಾಣ ಉಳಿಸುವ ತಮ್ಮ ಸಂಕಲ್ಪವನ್ನು ಬಿಡಲೂ ಸಿದ್ಧರಿರಲಿಲ್ಲ.
‘‘ಹಾಗಾದರೆ ನಾನು ಪ್ರತಿನಿತ್ಯ ನಿಮ್ಮ ಪ್ರಾರ್ಥನಾ ಸಭೆಗೆ ಬರಬಹುದೇ?’’
‘‘ಅಗತ್ಯವಾಗಿ. ಪೊಲೀಸ್ ಅಧಿಕಾರಿಯಾಗಿ ಅಲ್ಲ. ಎಲ್ಲರಂತೆ ಒಬ್ಬ ಸಾಧಾರಣ (ಪ್ರೇಕ್ಷಕ) ವ್ಯಕ್ತಿಯಾಗಿ.’’
ಆ ದಿನ ಸಂಜೆ 5 ಗಂಟೆಗೆ ಐದು ನಿಮಿಷ ಮುಂಚೆ ಜ್ವರದಿಂದ ಬಳಲುತ್ತಿದ್ದರೂ ಮೆಹ್ರಾ ಪ್ರಾರ್ಥನಾ ಸಭೆಗೆ ಸಾಧಾರಣ ಉಡುಪಿನಲ್ಲಿ ಗಾಂಧೀಜಿಯ ಬಲಭಾಗದಲ್ಲಿ ಸ್ವಲ್ಪದೂರ ಕುಳಿತಿದ್ದರು. ಬಿರ್ಲಾ ಗೃಹದ ಸುತ್ತ ರಕ್ಷಣಾ ಸಿಬ್ಬಂದಿಯನ್ನು ಐದರಿಂದ ಮೂವತ್ತಾರಕ್ಕೆ ಹೆಚ್ಚಿಸಿದ್ದರು. ಅವರು ಸಾಧಾರಣ ಉಡುಪು ಧರಿಸಿ ಪ್ರೇಕ್ಷಕರ ಮಧ್ಯೆ ಬೆರೆತು ಬಂದವರ ಮೇಲೆ ನಿಗಾಯಿಟ್ಟು ಗುಮಾನಿ ಬರುವವರ ಮೇಲೆ ಕಣ್ಣಿಟ್ಟು ಕಾಯಬೇಕೆಂದು ತಾಕೀತು ಮಾಡಿದ್ದರು. ಮೆಹ್ರಾ ಸ್ವತಃ ತಮ್ಮ ಟ್ರೌಜರಿನ ಹಿಂಬದಿ ಜೇಬಿನಲ್ಲಿ ವೆಬ್ಬರ್ ಆ್ಯಂಡ್ ಸ್ಕಾಟ್ .38 ರಿವಾಲ್ವರ್ ಇಟ್ಟುಕೊಂಡಿರುತ್ತಿದ್ದರು. ಅವರು ಎಂಥ ಗುರಿಕಾರರೆಂದರೆ ಐದೇ ಐದು ಸೆಕೆಂಡುಗಳಲ್ಲಿ ಆ ರಿವಾಲ್ವರ್ ಹೊರತೆಗೆದು ಇಪ್ಪತ್ತು ಅಡಿ ದೂರದ ಕಣ್ಣಿನ ಪಾಪೆಗೆ ಗುರಿ ತಪ್ಪದೆ ಹೊಡೆಯಬಲ್ಲ ಚಾಣಾಕ್ಷರು! ತಾವು ಇರುವಾಗ ಗಾಂಧೀಜಿ ಪ್ರಾಣಕ್ಕೆ ಅಪಾಯವಿಲ್ಲ ಎಂಬ ವಿಶ್ವಾಸ ಅವರಿಗೆ!!
ಗಾಂಧೀಜಿಗೆ ಗೊತ್ತಿಲ್ಲದೆ ಸರ್ದಾರ್ ಪಟೇಲರು ಬಿರ್ಲಾ ಗೃಹದ ಸುತ್ತಮುತ್ತ ವಿಶೇಷ ಭದ್ರತಾ ವ್ಯವಸ್ಥೆ ಮಾಡಿದ್ದರು. ಹತ್ತೊಂಬತ್ತು ಸಮವಸ್ತ್ರ ಧರಿಸಿದ್ದ ಪೊಲೀಸರನ್ನು ಅಲ್ಲಲ್ಲಿ ಕಾವಲು ಹಾಕಿದ್ದರು. ಏಳು ಜನ ಪೊಲೀಸರು ಸಾಧಾರಣ ಉಡುಪು ಧರಿಸಿ ರಿವಾಲ್ವರ್ ಶಸ್ತ್ರಸಜ್ಜಿತರಾಗಿ ಜನರ ಮಧ್ಯದಲ್ಲಿ ಕಣ್ಗಾವಲು ಮಾಡುತ್ತಿದ್ದರು. ಇದನ್ನು ಕಂಡ ಘನಶಾಮದಾಸ್ ಬಿರ್ಲಾ ಸರ್ದಾರ್‌ರಿಗೆ ದೂರು ಮಾಡಿದರು. ಅದಕ್ಕೆ ಪಟೇಲರು:
‘‘ನಿಮಗೇಕೆ ಆ ಚಿಂತೆ? ಇದು ನಿಮ್ಮ ಗೊಡವೆಯಲ್ಲ. ಅದು ನನ್ನ ಜವಾಬ್ದಾರಿ. ನನಗಿಷ್ಟ ಬಂದಂತೆ ಮಾಡಬೇಕೆಂದರೆ ಬಿರ್ಲಾ ಗೃಹಕ್ಕೆ ಬರುವವರನ್ನೆಲ್ಲ ತಪಾಸಣೆ (ಶೋಧ) ಮಾಡುವ ಇಚ್ಛೆ. ಆದರೆ ಬಾಪು ಹಾಗೆ ಮಾಡಗೊಡುವುದಿಲ್ಲ....’’ ಎಂದು ಕಟುವಾಗಿ ಉತ್ತರಿಸಿದ್ದರು.
ಬಿರ್ಲಾ ಗೃಹದ ಸುತ್ತ ಈ ರಕ್ಷಣಾ ಏರ್ಪಾಟು ಮಾಡಿದ್ದು ಗಾಂಧೀಜಿಯ ಗಮನಕ್ಕೆ ಬಂದು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಅವರ ಆಕ್ಷೇಪಣೆ ಸರ್ದಾರರ ಕಿವಿಗೆ ಬಿದ್ದಿತ್ತು. ಬಾಪೂಜಿಗೆ ಇಷ್ಟವಿಲ್ಲದ ಈ ಕ್ರಮ ಕೈಗೊಂಡದ್ದು ಅವರಿಗೆ ಬಗೆಯುವ ‘ದ್ರೋಹ’ವೆಂದೇ ಗೃಹಶಾಖೆ ಭಾವಿಸಿರಬೇಕು.