ಮಕ್ಕಳಿಗೆ ಕಾರ್ಯಾಗಾರಗಳು
ಅಧ್ಯಯನ ಮತ್ತು ಅರಿವು
ಕಲಿಕೆಯೆಂಬ ಪ್ರಕ್ರಿಯೆ: ಭಾಗ 11
ಶಿಬಿರದ ವಿಷಯಗಳು
ಮಕ್ಕಳಿಗೆ ಶಾಲೆಗಳಲ್ಲಿ ಹಲವು ಬಗೆಯ ವಿಷಯಗಳ ಕುರಿತಾಗಿ ತರಗತಿಗಳು ಮತ್ತು ತರಬೇತಿಗಳು ನಡೆಯುತ್ತಿದ್ದರೂ ಕೆಲವು ವಿಷಯಗಳ ಬಗ್ಗೆ ಕಾರ್ಯಾಗಾರಗಳು ಅಥವಾ ಶಿಬಿರಗಳು ನಡೆಯಬೇಕು. ಅದು ಕೂಡಾ ಮಕ್ಕಳ ವಯೋಮಾನಕ್ಕೆ ತಕ್ಕಂತೆ ಮತ್ತು ಅವರ ತರಗತಿಗಳ ವರ್ಗೀಕರಣಕ್ಕೆ ತಕ್ಕಂತೆ ವಿಷಯಗಳನ್ನು ವಿಂಗಡಿಸಿಕೊಂಡು ತಜ್ಞರಿಂದ ಸೂಕ್ತವಾದ ಸೂಚನೆಗಳನ್ನು ಕೊಡಿಸಬೇಕು. ಅದನ್ನು ಶಿಕ್ಷಕರೂ ಕೂಡಾ ಸಾಕ್ಷೀಕರಿಸಬೇಕು ಮತ್ತು ಭಾಗವಹಿಸಬೇಕು.
ಕೆಲವು ವಿಷಯಗಳನ್ನು ಗಮನಿಸೋಣ.
1.ಗಣಿತ, ವಿಜ್ಞಾನ, ಭಾಷೆಯೇ ಮೊದಲಾದ ಮಕ್ಕಳ ಕಲಿಕೆಯ ವಿಷಯಗಳಲ್ಲೇ ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಗ್ರಹಿಸುವ ಬಗೆ, ಕಲೆ, ಸಾಹಿತ್ಯ ಇತ್ಯಾದಿಗಳ ಕುರಿತಾದಂತಹ ವಿಶೇಷ ಶಿಬಿರಗಳು. ನೈತಿಕ ಶಿಕ್ಷಣ, ವೈಚಾರಿಕವಾಗಿ ವಿಷಯ ಗಳನ್ನು ಗ್ರಹಿಸುವ ರೀತಿ ಇತ್ಯಾದಿಗಳ ಕುರಿತಾದ ಶಿಬಿರಗಳು.
2.ಸಣ್ಣ ವಯಸ್ಸಿನ ಮಕ್ಕಳಲ್ಲಿ ಗುಡ್ ಟಚ್ ಮತ್ತು ಬ್ಯಾಡ್ ಟಚ್‌ಗಳ ಕುರಿತು ತಿಳುವಳಿಕೆ ನೀಡಬೇಕು. ಜೊತೆಗೆ ತಮ್ಮ ವೈಯಕ್ತಿಕತೆಯಲ್ಲಿ ಯಾರೇ ಅತಿಕ್ರಮ ಪ್ರವೇಶ ಮಾಡಿದರೂ ಅದರ ಬಗ್ಗೆ ಹಿರಿಯರ ಹತ್ತಿರ, ಶಿಕ್ಷಕರ ಹತ್ತಿರ ಅಥವಾ ಪೋಷಕರ ಹತ್ತಿರ ಮಾಹಿತಿ ನೀಡುವಂತಹ ಅಭ್ಯಾಸ ಬೆಳೆಸಬೇಕು. ಮುಖ್ಯವಾಗಿ ತೊಂದರೆಗೊಳಗಾದಾಗ ಎಚ್ಚರಿಕೆಯಿಂದ ಇರುವುದೂ ಹಾಗೂ ಇತರರ ಗಮನ ಸೆಳೆದು ತಾವು ಅಪಾಯದಿಂದ ಪಾರಾಗುವುದು ಇತ್ಯಾದಿಗಳ ಬಗ್ಗೆ ತಿಳುವಳಿಕೆ ನೀಡುವಂತಹ ಕಾರ್ಯಾಗಾರಗಳಾಗಬೇಕು. ಇದು ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಅನ್ವಯಿಸುತ್ತದೆ. ಗುಡ್ ಟಚ್ ಮತ್ತು ಬ್ಯಾಡ್ ಟಚ್ ಎಂಬುದು ಬರಿಯ ಹೆಣ್ಣು ಮಕ್ಕಳಿಗೆ ಮಾತ್ರ ಮುಡಿಪಾಗಿಲ್ಲ.
3.ಮಕ್ಕಳಿಗೆ ಪರೀಕ್ಷೆಗಳಿಗೆ ತಯಾರಾಗುವ ಬಗ್ಗೆ ಮತ್ತು ಅಧ್ಯಯನದ ಕೌಶಲ್ಯಗಳ ಬಗ್ಗೆ ತರಬೇತಿ ನೀಡಬೇಕು.
4.ಸಮಯ ಪಾಲನೆಯ ಮಹತ್ವ ಮತ್ತು ಸಮಯ ಪಾಲನೆಯನ್ನು ಪರಿಣಾಮಕಾರಿಯಾಗಿ ತಮ್ಮ ಕೆಲಸದಲ್ಲಿ ಬಳಸಿಕೊಳ್ಳುವ ತಂತ್ರಗಳ ಬಗ್ಗೆ ಶಿಬಿರ.
5.ಕೋಪ, ಬೇಸರ, ನಿರಾಸೆ, ಅಪಮಾನ ಇತ್ಯಾದಿಗಳನ್ನು ಶಮನ ಮಾಡಿಕೊಳ್ಳುವ ಅಥವಾ ಅವುಗಳನ್ನು ಗೆಲ್ಲುವುದರ ಬಗ್ಗೆ, ತಮ್ಮ ಅಭಿಪ್ರಾಯ ಮತ್ತು ತೀರ್ಮಾನಗಳನ್ನು ಸಮಚಿತ್ತದಿಂದ ಪ್ರಕಟಿಸುವುದರ ಬಗ್ಗೆ ಶಿಬಿರಗಳು.
6.ತಮ್ಮ ಸಹಪಾಠಿಗಳಲ್ಲಿ ಸೂಕ್ಷ್ಮ ಮನಸ್ಕರು, ಅಸೂಕ್ಷ್ಮ ಮನಸ್ಕರು, ಭಿನ್ನ ನೆಲೆಗಳಿಂದ ಬಂದಿರುವಂತಹವರು ಇರುತ್ತಾರೆ. ಅವರ ಜೊತೆಯಲ್ಲಿ ಸಾಮಾನ್ಯವಾಗಿ ಹಲವು ಬಗೆಯ ಸಂಘರ್ಷಗಳು ಆಗುವ ಸಾಧ್ಯತೆಗಳಿರುತ್ತವೆ. ಅವುಗಳನ್ನು ನಿಭಾಯಿಸುವ ಬಗ್ಗೆ ಶಿಬಿರಗಳು.
7.ಪರಿಣಾಮಕಾರಿಯಾಗಿರುವ ಸಂವಹನೆ ಮತ್ತು ಸಂಭಾಷಣೆಯ ತಂತ್ರಗಳು.
8.ಜೀವನ ಕೌಶಲ್ಯದ ಕುರಿತಾದಂತಹ ಶಿಬಿರಗಳು.
9.ಹದಿಹರೆಯದ ಮಕ್ಕಳಿಗೆ ಲೈಂಗಿಕ ಶಿಕ್ಷಣ ಮತ್ತು ಹದಿಹರೆಯದ ಒತ್ತಡಗಳ ನಿರ್ವಹಣೆಯ ಕುರಿತಾದ ಶಿಬಿರಗಳು.
10.ಮಕ್ಕಳಿಗೆ ಮನೆಗಳಲ್ಲೂ ಮತ್ತು ಶಾಲೆಗಳಲ್ಲೂ ಅವರದೇ ಆದಂತಹ ಒತ್ತಡಗಳಿರುತ್ತವೆ. ತಂದೆ, ತಾಯಿ ಮತ್ತು ಕುಟುಂಬದ ಇತರ ಸದಸ್ಯರಿಂದ, ಶಾಲೆಯಲ್ಲಿ ಶಿಕ್ಷಕರಿಂದ ಅವರ ಸಾಮರ್ಥ್ಯ ಅಥವಾ ಮನೋಬಲಕ್ಕೆ ಮೀರಿದ ಕೆಲವು ಬಗೆಯ ಒತ್ತಡಗಳಿರುತ್ತವೆ. ಅಂತಹ ಒತ್ತಡದಿಂದ ಪಾರಾಗುವ ಅಥವಾ ನಿರ್ವಹಿಸುವ ಬಗ್ಗೆ ಶಿಬಿರಗಳು.
11.ಮಾಧ್ಯಮಗಳ ಬಗ್ಗೆ ತಿಳುವಳಿಕೆ. ಸಾಮಾಜಿಕ ಜಾಲತಾಣಗಳಾಗಲಿ, ಸಮೂಹ ಮಾಧ್ಯಮಗಳಾಗಲಿ ಬಹಳ ಆಕರ್ಷಕವಾಗಿದ್ದು ಮಕ್ಕಳನ್ನು ದಾರಿತಪ್ಪಿಸುವ ಅಥವಾ ಅವರ ಕೆಲಸದ ಸಮಯವನ್ನು ವ್ಯರ್ಥ ಮಾಡುವ ಸಾಕಷ್ಟು ಸಾಧ್ಯತೆಗಳಿದ್ದು, ಇದರ ಕುರಿತಾದ ಎಚ್ಚರಿಕೆಯನ್ನು ಮತ್ತು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದನ್ನು ಹೇಳಿಕೊಡುವಂತಹ ಶಿಬಿರಗಳು ಆಗಬೇಕು.
12.ಪ್ರೌಢಾವಸ್ಥೆಗೆ ಬಂದಿರುವ ಮಕ್ಕಳಿಗೆ ಸಂಬಂಧಗಳ ಕುರಿತು ಮತ್ತು ಆತುರದ ಆಕರ್ಷಣೆಗಳ ಕುರಿತು ಸ್ಪಷ್ಟತೆ ನೀಡುವಂತಹ ಕಾರ್ಯಾಗಾರಗಳು, ಜೊತೆಗೆ ತಮ್ಮ ಅವಕರ್ಷಣೆಗಳ ತುಲನೆ ಮಾಡುವಂತಹ ಕೌಶಲ್ಯವನ್ನು ನೀಡುವಂತಹ ಶಿಬಿರಗಳು.
13.ಪ್ರೌಢಾವಸ್ಥೆಗೆ ಬರುವಂತಹ ಮಕ್ಕಳಲ್ಲಿ ಅನೇಕಾನೇಕ ಅಪಾಯಕಾರಿ ಸಾಹಸಗಳನ್ನು ಮಾಡುವಂತಹ ಮತ್ತು ಅದರಲ್ಲಿ ಥ್ರಿಲ್ ಪಡೆಯುವಂತಹ ಉದ್ವೇಗವಿರುತ್ತದೆ. ಜೊತೆಗೆ ಮಾದಕ ವಸ್ತುಗಳ ಕಡೆಗೆ ಸೆಳೆತವೂ ಕೂಡ ಇರಬಹುದು. ಇಂತಹ ವಿಷಯಗಳನ್ನು ಗಮನಿಸಿದ್ದಲ್ಲಿ ಅದಕ್ಕೆ ಜಾಗೃತಿಯನ್ನು ಉಂಟುಮಾಡುವಂತಹ ಶಿಬಿರಗಳನ್ನು ಮಾಡಬೇಕು.
14.ಭಾವನೆಗಳ ತಾಕಲಾಟ, ಭಾವೋದ್ವಿಗ್ನತೆಗೆ ಒಳಗಾಗದಂತಹ ಮತ್ತು ಸಮೂಹ ಸನ್ನಿಗೆ ಒಳಗಾಗುವಂತಹ ಅಪಾಯಗಳ ಕುರಿತಾದ ಶಿಬಿರಗಳು.
15.ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೇ ಆಗುವ ಕಿರುಕುಳಗಳ ಬಗ್ಗೆ ಶಿಬಿರಗಳು.
16.ಸೆಲ್ಫ್ ಇಮೇಜ್ - ಎನ್ನುವುದು ಕೆಲವರಲ್ಲಿ ಕೀಳರಿಮೆಯಿಂದ ಕೂಡಿದ್ದರೆ, ಮತ್ತೆ ಕೆಲವರಲ್ಲಿ ಮೇಲರಿಮೆ (ಸುಪಿರಿಯಾರಿಟಿ ಕಾಂಪ್ಲೆಕ್ಸ್)ನಲ್ಲಿ ಇರುತ್ತದೆ. ಎರಡೂ ಕೂಡಾ ತಪ್ಪೇ. ಇದರ ಬಗ್ಗೆ ಕೂಲಂಕಶವಾಗಿ ಶಿಬಿರಗಳನ್ನು ನಡೆಸಿದರೆ ವ್ಯಕ್ತಿತ್ವ ವಿಕಸನಕ್ಕೆ ತುಂಬಾ ಸಹಕಾರಿಯಾಗುತ್ತದೆ.
17.ಸಮಾಜದಲ್ಲಿ ಎಷ್ಟೆಷ್ಟೋ ವಿಷಯಗಳು ಸಮರ್ಪಕವಾಗಿ ಬಳಸಿಕೊಂಡರೆ ಒಳೆಯದಾಗಿಯೂ, ದುರ್ಬಳಕೆ ಮಾಡಿಕೊಂಡರೆ ವ್ಯತಿರಿಕ್ತ ಪರಿಣಾಮಗಳೂ ಆಗುತ್ತವೆ. ಇಂತಹ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಶಿಬಿರಗಳು.
18.ಸೃಜನಾತ್ಮಕ ಮತ್ತು ಕ್ರಿಯಾಶೀಲ ಚಿಂತನೆಗಳು ಮತ್ತು ಚಟುವಟಿಕೆಗಳನ್ನು ಹೆಚ್ಚಿಸುವಂತಹ ಕಾರ್ಯಾಗಾರಗಳು.
19.ವ್ಯಕ್ತಿತ್ವ ವಿಕಾಸದ ತರಬೇತಿಗಳು.
20.ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ಶಿಬಿರಗಳು.
ಶಿಬಿರದ ತರುವಾಯ ಏನು?
ದಿನವೂ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವಾಗ ಅವರಿಗೆ ಪ್ರತ್ಯೇಕವಾದ ಶಿಬಿರಗಳಾಗಲಿ, ಕಾರ್ಯಾಗಾರಗಳಾಗಲಿ ಏಕೆ ಬೇಕು? ಶಿಬಿರದಲ್ಲಿ ಅಥವಾ ಕಾರ್ಯಾಗಾರದಲ್ಲಿ ಉದ್ದೇಶಿಸುವಂತಹ ವಿಷಯಗಳನ್ನು ಶಿಕ್ಷಕರು ತಾವೇ ದಿನನಿತ್ಯದ ಬೋಧನೆಗಳಲ್ಲಿ ಆಂಶಿಕವಾಗಿ ಅಳವಡಿಸಿಕೊಳ್ಳಬಾರದೇಕೆ? ಹೌದು, ಶಿಕ್ಷಕರು ಅದನ್ನು ಮಾಡಬೇಕು. ಆದರೆ, ತಜ್ಞರು ಬಂದು ಹೇಳುವುದರಿಂದ ಮತ್ತು ಅದಕ್ಕೆಂದೇ ವಿಶೇಷ ಸಮಯವನ್ನು ಮುಡಿಪಾಗಿಡುವುದರಿಂದ ವಿಷಯಗಳ ಬಗ್ಗೆ ಗಂಭೀರವಾದ ಗಮನವೂ ಮತ್ತು ವಿಶೇಷವಾದ ಆಸಕ್ತಿಯೂ ಕೂಡ ಉಂಟಾಗುವುದು. ಇದರಿಂದ ಮಕ್ಕಳಿಗೆ ಆ ವಿಷಯಗಳ ಬಗ್ಗೆ ಶಾಲೆ ಮತ್ತು ಕುಟುಂಬದಲ್ಲಿಯೂ ಮತ್ತು ಹೊರಗಿನ ಪರಿಸರದಲ್ಲಿಯೂ ಕೂಡ ಗಮನಿಸುವಂತಹ ರೂಢಿಯಾಗುವುದು. ಒಮ್ಮೆ ಕಾರ್ಯಾಗಾರವಾದ ಮೇಲೆ ಮಕ್ಕಳೊಂದಿಗೆ ಬಾಗವಹಿಸಿರುವ ಶಿಕ್ಷಕರು ತಾವೂ ಕೂಡಾ ಅವುಗಳನ್ನು ಆಗ್ಗಿಂದಾಗ್ಗೆ ಮಕ್ಕಳಿಗೆ ನೆನಪಿಸುವಂತಹ ಅಥವಾ ತಮ್ಮ ಶಾಲಾ ದಿನಗಳ ಹಾಗೂ ಬೋಧನೆ ಅಥವಾ ತರಬೇತಿಗಳ ಸಮಯದಲ್ಲಿ ರೂಢಿಸುವಂತಹ ಕೆಲಸವನ್ನು ಮಾಡಬೇಕು. ಆಗಲೇ ಶಿಬಿರಗಳಾಗಲಿ, ಕಾರ್ಯಾಗಾರಗಳಾಗಲಿ ಸಾರ್ಥಕವಾಗುವುದು.