ಗಿರಿರಾಜ್ ಸಿಂಗ್ ಪ್ರಮಾದ
ಪಾಟ್ನಾ ಗಾಂಧಿ ಮೈದಾನದಲ್ಲಿ ಮಾರ್ಚ್ 3ರಂದು ನಡೆದ ಎನ್‌ಡಿಎ ಸಂಕಲ್ಪರ್ಯಾಲಿಯಲ್ಲಿ ಜನ ವಿರಳವಾಗಿದ್ದುದು ಮಾತ್ರವಲ್ಲದೆ, ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ನಡುವಿನ ಸಂಬಂಧ ಹಳಸಿರುವ ಬಗ್ಗೆ ಪುಕಾರುಗಳು ಹುಟ್ಟಿಕೊಳ್ಳಲೂ ಕಾರಣವಾಯಿತು. ಗಿರಿರಾಜ್ ರ್ಯಾಲಿಗೆ ಗೈರುಹಾಜರಾದದ್ದು ಈ ಅನುಮಾನಗಳಿಗೆ ಕಾರಣ. ಪ್ರಚೋದನಕಾರಿ ಹೇಳಿಕೆಗಳು ನೀಡುತ್ತಾರೆ ಎಂಬ ಕಾರಣಕ್ಕೆ ನಿತೀಶ್ ಕುಮಾರ್ ಅವರು, ಗಿರಿರಾಜ್ ಉಪಸ್ಥಿತಿಗೆ ವಿರೋಧ ವ್ಯಕ್ತಪಡಿಸಿದ್ದರು ಎಂಬ ವದಂತಿಯೂ ಇದೆ. ‘‘ಈ ರ್ಯಾಲಿಯಲ್ಲಿ ಪಾಲ್ಗೊಳ್ಳದವರು ತಮ್ಮನ್ನು ತಾವು ಪಾಕಿಸ್ತಾನಿಗಳೆಂದು ಪರಿಗಣಿಸಿಕೊಳ್ಳಬೇಕು’’ ಎಂದು ಕೇಂದ್ರ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ವಿರೋಧ ಪಕ್ಷಗಳು ಹಾಗೂ ರಾಜ್ಯದ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಗಿರಿರಾಜ್ ಸ್ವತಃ ಈ ರ್ಯಾಲಿಯಲ್ಲಿ ಪಾಲ್ಗೊಳ್ಳದ ಕಾರಣ, ‘‘ನಿಮ್ಮನ್ನು ನೀವು ಪಾಕಿಸ್ತಾನಿ ಎಂದು ಪರಿಗಣಿಸಿಕೊಂಡಿದ್ದೀರಾ’’ ಎಂದು ವಿರೋಧ ಪಕ್ಷಗಳು ಚುಚ್ಚಲು ಆರಂಭಿಸಿದ್ದವು. ಗಿರಿರಾಜ್ ಅವರ ಆರೋಗ್ಯ ಸರಿ ಇರಲಿಲ್ಲ ಎಂಬ ಸಬೂಬು ನೀಡಲಾಯಿತು. ತನ್ನ ಹೇಳಿಕೆಯನ್ನು ತಪ್ಪಾಗಿ ಬರೆಯಲಾಗಿದೆ ಎಂದು ಹೇಳುವ ಪ್ರಯತ್ನವನ್ನೂ ಗಿರಿರಾಜ್ ಮಾಡಿದರು. ಆದರೆ ಇದು ಗೊಂದಲ ತಿಳಿಗೊಳಿಸಲಿಲ್ಲ. ಒಂದರ್ಥದಲ್ಲಿ ಈ ರ್ಯಾಲಿ ಬಿಜೆಪಿಯ ಮುಜುಗರಕ್ಕೆ ಕಾರಣವಾಯಿತು. ಚುನಾವಣೆಯಲ್ಲಿ ಇದು ಏನಾನುತ್ತದೆ ಎಂದು ಕಾದುನೋಡಬೇಕಾಗಿದೆ.
►ರಾವುತ್ ಹಳೇ ಚಾಳಿ
ನಾಲ್ಕು ವರ್ಷಗಳಿಂದ ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದ ಶಿವಸೇನೆ, ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಯು-ಟರ್ನ್ ತೆಗೆದುಕೊಂಡಿದೆ. ಆದರೆ ಈ ಅವಧಿಯಲ್ಲಿ ಹಲವು ವಿಚಾರಗಳಲ್ಲಿ ಬಿಜೆಪಿಯನ್ನು ಆ ಪಕ್ಷ ಕಾಲೆಳೆದದ್ದರಿಂದ ನುಣುಚಿಕೊಳ್ಳುವಂತಿಲ್ಲ. ಬಿಜೆಪಿಯನ್ನು ವಿರೋಧಿಸುತ್ತಿದ್ದ ಶಿವಸೇನೆ ಕಾರ್ಯಕರ್ತರು, ಇದೀಗ ಬಿಜೆಪಿ ಜತೆ ಹೊಂದಾಣಿಕೆಗೆ ಹೆಣಗುತ್ತಿದ್ದಾರೆ. ಪಕ್ಷದ ಹಿರಿಯ ಮುಖಂಡರಿಗೆ ಕೂಡಾ ಮೋದಿ ಭಕ್ತರಾಗಿ ತೋರ್ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೋದಿ ಹಾಗೂ ಅವರ ಸರಕಾರದ ಕಟು ಟೀಕಾಕಾರರಾಗಿದ್ದ ಪಕ್ಷದ ವಕ್ತಾರ ಸಂಜಯ ರಾವುತ್, ಮತ್ತೆ ಮತ್ತೆ ಟ್ವೀಟ್ ಹಾಗೂ ಮರುಟ್ವೀಟ್‌ಗಳ ಮೂಲಕ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಪಾಕಿಸ್ತಾನದ ಸೂಕ್ಷ್ಮ ವಿಚಾರದಲ್ಲಿ ಕೂಡಾ ಸರಕಾರದ ವಿರುದ್ಧ ಪತ್ರಕರ್ತರು ನಡೆಸಿದ ತೀಕ್ಷ್ಣ ವಾಗ್ದಾಳಿಗಳನ್ನು ರಾವುತ್ ಮರುಟ್ವೀಟ್ ಮಾಡುತ್ತಲೇ ಇದ್ದರು. ರಾವುತ್ ಅವರ ಒಂದು ಇತ್ತೀಚಿನ ಮರುಟ್ವೀಟ್ ಹೀಗಿದೆ: ನಾವು ಭಾರತದಲ್ಲಿ ಇದನ್ನು ಇಷ್ಟಪಡದೇ ಇರಬಹುದು; ಆದರೆ ಶುದ್ಧ ಮಸೂರದಲ್ಲಿ ಇಮ್ರಾನ್‌ಖಾನ್ ನೈತಿಕವಾಗಿ ಮೇಲ್ಮಟ್ಟ ಕಾಯ್ದುಕೊಳ್ಳುವ ಮೂಲಕ ಸದ್ಯಕ್ಕೆ ಗೆದ್ದಿದ್ದಾರೆ. ಭಯೋತ್ಪಾದಕರ ವಿರುದ್ಧ ನಮಗೆ ಪ್ರಬಲವಾದ ಪ್ರಕರಣ ಇದಾಗಿತ್ತು. ಆದರೆ ನಮ್ಮ ನಾಯಕರು ಈ ಕ್ಷಣದಲ್ಲಿ ಓಟಿನ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಬಿಜೆಪಿ ಮುಖಂಡರೊಬ್ಬರನ್ನು ಈ ಟ್ವೀಟ್ ಬಗ್ಗೆ ಕೇಳಿದಾಗ, ಸ್ನೇಹಪರವಾಗಿರಲು ಶಿವಸೇನೆಗೆ ಇನ್ನಷ್ಟು ಸಮಯಾವಕಾಶ ಬೇಕಾಗಬಹುದು ಎಂದು ಹೇಳಿದರು. ರಾವುತ್‌ರಂಥವರನ್ನು ನಿರ್ಲಕ್ಷಿಸುವುದೇ ಒಳ್ಳೆಯದು ಎಂದು ಅವರು ಹೇಳಿದರು. ಉಭಯ ಪಕ್ಷಗಳ ನಡುವಿನ ಮೈತ್ರಿ ಇಂಥ ಕಾರಣಗಳಿಂದಷ್ಟೇ ಉಳಿಯಬಹುದು.
► ಯಡ್ಡಿ ನಾಲಿಗೆ ಸಡಿಲ
ನರೇಂದ್ರ ಮೋದಿ ಮತ್ತು ಅವರ ಪಕ್ಷ, ಬಾಲಕೋಟ್ ವಾಯುದಾಳಿ ವಿಚಾರದಲ್ಲಿ ವಿರೋಧ ಪಕ್ಷದ ಮುಖಂಡರನ್ನು ಟೀಕಿಸಿ ಅವರನ್ನು ರಾಷ್ಟ್ರವಿರೋಧಿಗಳು ಎಂದು ಕರೆದಿರಬಹುದು; ಆದರೆ ಪಕ್ಷದ ನಾಯಕತ್ವ ಮಾತ್ರ ಕರ್ನಾಟಕದ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪಅವರ ಬಗ್ಗೆ ಮುನಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ‘‘ಅವರು ಪಕ್ಷಕ್ಕೆ ದೊಡ್ಡ ತಲೆನೋವು’’ ಎಂದು ಪಕ್ಷದ ಮುಖಂಡರೊಬ್ಬರು ಪತ್ರಕರ್ತರ ಜತೆ ಆಫ್ ದ ರೆಕಾರ್ಡ್ ಸಂಭಾಷಣೆ ವೇಳೆ ಬಣ್ಣಿಸಿದರು. ಇದಕ್ಕೆ ಕಾರಣವೆಂದರೆ ಈ ದಾಳಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 22ನ್ನು ಗೆದ್ದುಕೊಡಲು ಸಹಕಾರಿಯಾಗುತ್ತದೆ ಎಂದು ಹೇಳಿಕೆ ನೀಡಿರುವುದು. ಬಿಜೆಪಿ ಮುಖಂಡರ ಮುನಿಸಿಗೆ ಕಾರಣವೆಂದರೆ, ಯಡ್ಡಿ ಪಾಕಿಸ್ತಾನದ ಮಾಧ್ಯಮಗಳಲ್ಲಿ ಹೀರೊ ಆಗಿರುವುದು. ‘‘ಮೋದಿ ನೇತೃತ್ವದ ಭಾರತ ಸರಕಾರ ವಾಯುದಾಳಿ ನಡೆಸಿರುವುದು ಚುನಾವಣೆಯ ಸಂದರ್ಭದಲ್ಲಿ ಲಾಭ ಪಡೆಯಲು ಎನ್ನುವುದಕ್ಕೆ ಈ ನಾಯಕನ ಹೇಳಿಕೆ ಸ್ಪಷ್ಟ ಪುರಾವೆ’’ ಎಂದು ಯಡಿಯೂರಪ್ಪಹೇಳಿಕೆಯನ್ನು ಅಲ್ಲಿನ ಸುದ್ದಿವಾಹಿನಿಗಳು ಪ್ರಸಾರ ಮಾಡಿದವು. ದಿಲ್ಲಿಯಲ್ಲಿರುವ ಕೆಲ ಬಿಜೆಪಿ ಮುಖಂಡರ ಪ್ರಕಾರ, ಯಡ್ಡಿ ಮನೆಗೆ ಹೋಗುವ ದಿನ ದೂರವಿಲ್ಲ. ಆದರೆ ಅವರು ಇದಕ್ಕಾಗಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶದವರೆಗೆ ಕಾಯಬೇಕಾಗಬಹುದು.
► ಅಜಿತ್ ಜೋಗಿ ತೊಡಕು
ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷ, ಮಿತ್ರಪಕ್ಷಗಳ ಬೇಟೆಯಲ್ಲಿದೆ. ಎಲ್ಲ ರಾಜ್ಯಗಳಲ್ಲೂ ಸಣ್ಣ ಪುಟ್ಟ ಪಕ್ಷಗಳು ಕಾಂಗ್ರೆಸ್‌ಗೆ ಸಿಗುತ್ತಿವೆ. ಆದರೆ ಆ ಅದೃಷ್ಟ ಅಜಿತ್ ಜೋಗಿಯವರಿಗೆ ಇಲ್ಲ. ಛತ್ತೀಸ್‌ಗಡದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜನತಾ ಕಾಂಗ್ರೆಸ್ ಪಕ್ಷವನ್ನು ಛತ್ತೀಸ್‌ಗಡದಲ್ಲಿ ಆರಂಭಿಸಿದ್ದರು. ಇವರು ಇದೀಗ ಮೈತ್ರಿ ಅಥವಾ ವಿಲೀನಕ್ಕೆ ಗೋಗರೆಯುತ್ತಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಜೋಗಿ ಬೇಷರತ್ ಆಗಿ ಮಾತೃಪಕ್ಷಕ್ಕೆ ವಾಪಸಾಗಲು ಅಥವಾ ಮೈತ್ರಿಗೆ ಸಿದ್ಧರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ವಿಭಜನೆ ಬಿಜೆಪಿಗೆ ಲಾಭ ತರುತ್ತದೆ ಎಂದು ಎಚ್ಚರಿಸುತ್ತಲೇ ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಜಿತ್ ಜೋಗಿ ಪಕ್ಷ ಶೇ. 7.6 ಮತ ಪಡೆದು ಗಮನ ಸೆಳೆದಿದ್ದರೆ, ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಜತೆ ಸೇರಿ ಜೋಗಿ ಮತಗಳಿಕೆ ಶೇ. 11ರಷ್ಟು ಇದೆ. ಇದು ಯಾವುದೇ ರಾಜ್ಯದಲ್ಲಿ ಚುನಾವಣಾ ಫಲಿತಾಂಶವನ್ನು ಬದಲಿಸಬಲ್ಲದು. ಆದರೆ ಛತ್ತೀಸ್‌ಗಡ ಸಿಎಂ ಭೂಪೇಶ್ ಬಘೇಲ್ ಅವರು ಮಾತ್ರ ಜೋಗಿಯನ್ನು ಇಷ್ಟಪಡುತ್ತಿಲ್ಲ. ಮತ್ತೊಂದು ಸಮಸ್ಯೆಯೆಂದರೆ ಜೋಗಿ, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಜತೆಗಿನ ಸಂಬಂಧವನ್ನೂ ಕಡಿದುಕೊಂಡಿದ್ದಾರೆ. ಆದ್ದರಿಂದ ಜೋಗಿ ಸದ್ಯಕ್ಕಂತೂ ಬೇರೆ ದಾರಿ ನೋಡಿಕೊಳ್ಳುವುದು ಅನಿವಾರ್ಯ.
► ಶರದ್ ಮಹತ್ವ ಕಡಿಮೆಯಾಗುತ್ತಿದೆಯೇ?
ಪಕ್ಷದಿಂದ ದೂರ ಸರಿದದ್ದಕ್ಕಾಗಿ ಶರದ್ ಯಾದವ್ ಇದೀಗ ಪಶ್ಚಾತ್ತಾಪ ಪಡುವಂತಾಗಿದೆ. ತಡವಾಗಿ ವಿರೋಧ ಪಕ್ಷಗಳ ಪಾಳಯವನ್ನು ಪ್ರವೇಶಿಸಿದರೂ ಇದೀಗ ವಿರೋಧಿ ಬಣದಲ್ಲಿ ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿಯಂಥ ಮುಖಂಡರ ಕೈ ಮೇಲಾಗುತ್ತಿದೆ. ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಆರಂಭಿಸಿದ್ದು ಶರದ್ ಯಾದವ್ ಎನ್ನುವುದು ನಿಸ್ಸಂದೇಹ. ನಿತೀಶ್ ಕುಮಾರ್ ಅವರ ವಿಶ್ವಾಸದ್ರೋಹದ ಬಳಿಕ ಬಂಡೆದ್ದ ಶರದ್ ಯಾದವ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಸಂಪರ್ಕ ಸಾಧಿಸಿದರು. ಮೋದಿಯನ್ನು ಸೋಲಿಸಬೇಕಾದರೆ, ಈ ಹಳೆಯ ಪಕ್ಷ ಒಂದಷ್ಟು ತ್ಯಾಗ ಮಾಡಲೇಬೇಕು ಎಂದು ಅವರಿಗೆ ಮನದಟ್ಟು ಮಾಡಿಕೊಟ್ಟರು. ಯಾದವ್ ಅವರ ಸನಿಹ ವಿರಾಸತ್ ಯೋಜನೆ ವಿರೋಧ ಪಕ್ಷಗಳ ಏಕತೆಗೆ ಅಡಿಗಲ್ಲು ಹಾಕಿತು. ಜತೆಗೆ ಎಡಪಕ್ಷಗಳನ್ನು ಕೂಡಾ ಒಂದೇ ವೇದಿಕೆಗೆ ಕರೆತಂದಿತು. ರಾಹುಲ್ ಕೂಡಾ ಶರದ್ ಯಾದವ್ ಅವರನ್ನು ವಿರೋಧ ಪಕ್ಷಗಳ ಒಗ್ಗಟ್ಟಿನ ಸೂತ್ರಧಾನ ಎಂದು ಗುಣಗಾನ ಮಾಡಿದರು. ಆದರೆ ನಾಯ್ಡು ರಂಗಪ್ರವೇಶದ ಬಳಿಕ ನಿಧಾನವಾಗಿ ಚಿತ್ರಣ ಬದಲಾಯಿತು. ವಿರೋಧ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ಹೊಣೆಯನ್ನು ನಾಯ್ಡು ಅವರಿಗೆ ವಹಿಸಲಾಯಿತು. ಇದು ಸಹಜವಾಗಿಯೇ ಶರದ್ ಯಾದವ್ ಅವರನ್ನು ಮೂಲೆಗುಂಪು ಮಾಡಿತು. ಯಾದವ್ ಅವರಿಗೆ ಸಾಕಷ್ಟು ಗೌರವ ಇದ್ದರೂ, ಅವರ ಇತಿಮಿತಿಯ ಅರಿವು ಇದೆ. ನಾಯ್ಡು ಅಥವಾ ದೀದಿಗಿಂತ ಭಿನ್ನವಾಗಿ, ಯಾದವ್ ಅವರಿಗೆ ಅಪಾರ ಬೆಂಬಲ ಅಥವಾ ರಾಜ್ಯ ಸರಕಾರದ ಸಂಪನ್ಮೂಲ ಇಲ್ಲ; ಜತೆಗೆ ಪಕ್ಷದ ಸಂಪನ್ಮೂಲವೂ ಇಲ್ಲ. ಆದ್ದರಿಂದ ಇದರ ಪರಿಣಾಮವನ್ನು ಕಾದು ನೋಡಬೇಕು. ಒಂದು ಸಣ್ಣ ಸಭೆ ನಡೆಸಲು ಕೂಡಾ, ಯಾದವ್ ಅವರು ಸಂಪನ್ಮೂಲ ಮತ್ತು ಜನಕ್ಕಾಗಿ ಬೇರೆಯವರನ್ನು ಅವಲಂಬಿಸಬೇಕು.