ಸಾವಿತ್ರಿ-ಯುದ್ಧ ಭೂಮಿಯಲ್ಲಿ ಪ್ರೀತಿಯನ್ನು ಗೆದ್ದವಳು

Update: 2019-03-10 18:35 GMT

ಪು. ಶಿ. ರೇಗೆ ಎಂದೇ ಖ್ಯಾತರಾಗಿರುವ ಮರಾಠಿ ಲೇಖಕ ಪುರುಷೋತ್ತಮ್ ಶಿವರಾಮ್ ರೇಗೆ ಅವರ ‘ಸಾವಿತ್ರಿ’ ಕಾದಂಬರಿಯನ್ನು ಲೇಖಕಿ, ಕವಯಿತ್ರಿ ಗಿರಿಜಾ ಶಾಸ್ತ್ರಿಯವರು ಅದೇ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ರೇಗೆ ಅವರು ಸ್ವಾತಂತ್ರ ಪೂರ್ವ ಕಾಲದಲ್ಲಿ ಲೇಖಕರಾಗಿ ಮೂಡಿ ಬಂದವರು. ‘ಸಾವಿತ್ರಿ’ ಕಾದಂಬರಿಯ ಘಟನೆಗಳೂ ಇದಕ್ಕೆ ಪೂರಕವಾಗಿ 1939-42ರ ಕಾಲಘಟ್ಟದಲ್ಲಿ ನಡೆಯುತ್ತವೆ.
 ಸಾವಿತ್ರಿ ಎನ್ನುವ ಪದಕ್ಕೆ ಪೌರಾಣಿಕ ಹಿನ್ನೆಲೆಯಿದೆ. ಸಾವಿನ ಬೆನ್ನು ಹತ್ತಿ ತನ್ನ ಪ್ರೀತಿ ಪಾತ್ರನನ್ನು ಮರಳಿ ತರುವ ಸಾವಿತ್ರಿಯನ್ನು ಆಧುನಿಕ ಕಾಲಕ್ಕೆ ಬೇರೆಯೇ ರೂಪಕವಾಗಿ ಕಾದಂಬರಿಕಾರರು ಕಟ್ಟಿಕೊಟ್ಟಿದ್ದಾರೆ. ಇದನ್ನು ವಿಶಿಷ್ಟವಾಗಿ, ಪತ್ರ ರೂಪದಲ್ಲಿ ನಿರೂಪಿಸಲಾಗಿದೆ. ಯಮನ ಜಾಗದಲ್ಲಿ ಯುದ್ಧವಿದೆ. ಸಾವಿತ್ರಿ ತನ್ನ ಭಾವನೆಗಳನ್ನು, ಪ್ರೀತಿಯನ್ನು ಪತ್ರಗಳ ಮೂಲಕ ಏಕ ಮುಖವಾಗಿ ತೋಡಿಕೊಳ್ಳುತ್ತಾಳೆ. ಯುದ್ಧಕ್ಕೆ ಪರ್ಯಾಯವಾಗಿ ಪ್ರೀತಿಯನ್ನು ತೋಡಿಕೊಳ್ಳುವ ಕಾದಂಬರಿಯಿದು. ವಿಶೇಷವೆಂದರೆ, ಈ ಕಾದಂಬರಿ ಜರುಗುವುದೇ ಕರ್ನಾಟಕದಲ್ಲಿ. ಇದರ ನಾಯಕಿ ಸಾವಿತ್ರಿ ಬೆಂಗಳೂರಿನ ಕಾಲೇಜಿನಲ್ಲಿ ಕಲಿಯುತ್ತಿರುವ ಕೊಡಗಿನ ತಿರುಪೇಟೆಯ ಹುಡುಗಿ. ತಿರುಪೇಟೆಯಿಂದ ತೆರೆದುಕೊಳ್ಳುವ ಸಾವಿತ್ರಿ ಒಂದು ಯುದ್ಧಭೂಮಿಯನ್ನು ದಾಟಿ ತನ್ನ ಪ್ರೀತಿಯ ಸೆಲೆಯ ಜೊತೆಗೆ ಮತ್ತ್ತೆ ತಿರುಪೇಟೆಯನ್ನು ಸೇರಿಕೊಳ್ಳುವ ಬಗೆ ಹೃದಯಸ್ಪರ್ಶಿಯಾಗಿದೆ. ಇಲ್ಲಿ ಪ್ರತಿ ಪತ್ರವನ್ನು ಸಾವಿತ್ರಿಯೇ ಬರೆಯುತ್ತಾಳೆ. ಆದರೆ ಆ ಪತ್ರ ಇನ್ನೊಂದು ಪತ್ರಕ್ಕೆ ನೀಡುವ ಪ್ರತಿಕ್ರಿಯೆಯಾಗಿರುವುದರಿಂದ ಎಲ್ಲ ಪಾತ್ರಗಳನ್ನು ಘಟನೆಗಳನ್ನು ಪತ್ರಗಳೊಳಗೆ ನಾಯಕಿ ಜೋಡಿಸುತ್ತಾ ಹೋಗುತ್ತಾಳೆ. ಒಬ್ಬ ಹೆಣ್ಣಿನ ಏಕಾಂತ, ನೋವು, ಕಾತರ ಎಲ್ಲವನ್ನೂ ಈ ಪತ್ರಗಳು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ. ಹೆಣ್ಣು -ಗಂಡು ಸಂಬಂಧ ಈ ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಂಡಿದೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈ ಕಾದಂಬರಿಯನ್ನು ಹೊರತಂದಿದೆ. ಒಟ್ಟು ಪುಟಗಳು 90. ಮುಖಬೆಲೆ 75 ರೂ.

 

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News